ಕಳೆದ ಆ ದಿನಗಳು ಎಷ್ಟು ಮಧುರ

ಕಳೆದ ಆ ದಿನಗಳು ಎಷ್ಟು ಮಧುರ
ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು
ಯಾವ ಬೇಲಿಯೂ ಇಲ್ಲದ,
ಯಾವ ಹಂಗೂ ಇಲ್ಲದ
ಅಂದಿನ ದಿನಗಳೇ ಚಂದ
ಅನುಭವಿಸಿದೆವು ಮುಕ್ತ ಗೆಳೆತನವ
ತಂಟೆ,ತರಲೆ,ನೋವು,ನಲಿವು
ಇಂದು ನೆನೆದರೆ ಮನ ನರಳುವುದು
ಮನದಲ್ಲಿ ಮೂಡುವುದು ಹತಾಶಭಾವ
ಅನಿಸುತ್ತೆ ಕಳೆದ ಆ ದಿನಗಳು ಎಷ್ಟು ಮಧುರ||

ಯಾರಿವಳು? ಯಾರಿವಳು?

ಯಾರಿವಳು? ಯಾರಿವಳು?
ಮನವ ಗೆದ್ದ ಮುಗ್ದೆ ಯಾರಿವಳು?

ಯಾರ ನೋವಿನ ಸ್ವರವೋ?
ಯಾರ ಬಾಳಿನ ಚೈತನ್ಯವೋ?
ಮನೆಯ ಬೆಳಕಾಗಿ ಬಂದವಳು||

ಯಾವ ಜನ್ಮದ ಗೆಳತನವೋ?
ಯಾರ ಬದುಕಿನ ಪಥವೋ?
ಇಂದು ಜೊತೆಯಾಗಿ ನಡೆದಿಹಳು||

ಪ್ರಕೃತಿಯ ಸಂಕೇತವಾಗಿ
ಬಾಳ ಬದುಕಿನ ನಲಿವಾಗಿ
ಇಂದು ನನ್ನ ಜೊತೆಯಾದವಳು||

ಬಿಟ್ಟುಹೋಗದಿರು ದೂರ

ಬಿಟ್ಟುಹೋಗದಿರು ದೂರ
ಓ ನನ್ನ ನಲ್ಲೆ
ನೀ ನಿಲ್ಲದೆ ಜೀವನ ಬಲು ಭಾರ
ನೀ ನನ್ನ ಶಕ್ತಿ ನಾ ಬಲ್ಲೆ||

ಏಕೋ ಭಯ ಆವರಿಸಿದೆ
ನೀನಿದ್ದರೆ ಏನೋ ನೆಮ್ಮದಿ
ಮನಬೆದರಿದೆ,ಮಂಕಾಗಿದೆ
ನಿನ್ನಾಸರೆ ಬೇಕು ಕಳೆಯಲು ಬೇಗುದಿ||

ನಿನ್ನ ತೆರವು ತಾತ್ಕಾಲಿಕ
ತಿಳಿದಿದೆ ಈ ಮನಕೆ
ಮತ್ತೆ ಬರುವೀ ಈ ಮನಕೆ
ಸುತ್ತ ಓಡಾಡುತಿರೆ ನೀ ಮನಕೆ ಪುಳಕ||

ಬಂದು ಬಿಡು ಗೆಳತಿ
ತಾಳಲಾರೆ ಈ ವಿರಹ
ಈ ವಿರಹದ ನೋವಿಗೆ ನೀನೇ ಒಡತಿ
ನರಳಲಾರೆ ಮತ್ತೆ ಈ ತರಹ||

ಎಲ್ಲಾ ನೋವಿಗೆ ನೀನೇ ಮುಲಾಮು
ನಿನ್ನ ನಗುವಿಗೆ ಚೈತನ್ಯವಿದೆ
ಕತ್ತಲ ಬದುಕಿಗೆ ನೀನೇ ಮುಂಜಾವು
ನಿನ್ನ ಸನಿಹಕೆ ಜೀವನ ಪ್ರೀತಿಯಿದೆ||

ನೀ ಬರುವಿಯೆಂದರೆ ಏನೋ ಪುಳಕ
ಆಲಸ್ಯವೆಲ್ಲಾ ಕೊಡವಿ ನಿಲ್ಲುವುದೀ ಮನ
ನೀನೆಂದರೆ ಹಾಗೆ ಪ್ರೀತಿಯ ಚುಂಬಕ
ಚೈತನ್ಯದ ಚಿಲುಮೆಯಾಗುವುದೀ ಮನ||

ಸರತಿ ಸಾಲು

ಸಿದ್ಧರಾಗೇ ಇದ್ದಾರೆ ತಮ್ಮ ತಮ್ಮ ಸರತಿಗಾಗಿ
ಹುಟ್ಟಿನಿಂದಲೇ ಆರಂಭವಾಗಿದೆ ನಿಂತು ನಿಲ್ಲದಂತೆ
ಯಾರ ವಶಕ್ಕೂ ಸಿಗದೆ ಚಲಿಸುತ್ತಿದೆ
ನಿರಂತರ ಚಲನಶೀಲತೆಯ ಆಶಯದಂತೆ
ಹಗಲು-ರಾತ್ರಿ ಹೇಗೋ ಹಾಗೆ;
ವರುಷಗಳು ಉರುಳುತ್ತಿದೆ ಗೊತ್ತೇ ಆಗದೆ;
ಅದೆಷ್ಟು ಕ್ಯಾಲೆಂಡರ್ ಗಳ ಬದಲಿಸಿದೆಯೋ
ಈ ಕೈಗಳು,ಲೆಕ್ಕ ಇಡಬಹುದಾದಷ್ಟು;
ಬದುಕು ಸಹಜ-ಅಸಹಜಗಳ ರಸಾಯನ;
ಆರಂಭವಾಗುವುದು ನಿಜವಾದರೂ,
ಎಂದು? ಹೇಗೆ?ಎಲ್ಲಿ? ಕೊನೆಗೊಳ್ಳುವುದೋ
ಯಾರಿಗೂ ಗೊತ್ತಿಲ್ಲ.ತಿಳಿದಿಲ್ಲ,ರಹಸ್ಯವಾಗೇ ಉಳಿದಿದೆ;
ಅನಿಶ್ಚತತೆ ಸದಾ ನಮ್ಮನ್ನು ಕಾಡುತ್ತದೆ;
ಎಲ್ಲರೂ ಸರತಿಯಲ್ಲಿ ಇರುವವರೇ!
ಅದು ಹೀಗೆ ಎಂದು ಹೇಳಲು ಬಾರದು,
ನನ್ನ ಸರತಿ ಈಗಲ್ಲವೆನ್ನಲೂ ಆಗದು;
ಭರವಸೆ,ನಂಬಿಕೆಯಲ್ಲೇ ಉಸಿರಾಡುತ್ತೇವೆ
ನಾಳೆ ನಾಳೆಗಳ ಸವೆಸಲು
ಎಲ್ಲವೂ ನಮಗೇ ಇರಲಿ ಎಂಬ ಸ್ವಾರ್ಥವೂ
ಜೊತೆಗೆ ಅಮಿತವಾಗಿ ಬೆರೆತಿದೆ;
ಕಾಯುತ್ತಿದ್ದೇವೆ ನಮ್ಮ ಸರತಿಗಾಗಿ
ಹೋಗುವವರಿಗೆ ದಾರಿ,ಹಾದಿ ಬಿಟ್ಟುಕೊಡುತ್ತಾ.....

ಚಲುವು ಚಲುವೇ!

ಒಳಗೊಂದು ಚಲುವು;
ಹೊರಗೊಂದು ಚಲುವು;
ಎಲ್ಲಿಯಾದರೂ ಇರಲಿ
ಚಲುವು ಚಲುವೇ!
ಆಸ್ವಾದಿಸುವ ಮನದಲ್ಲಿ ಎಲ್ಲವೂ
ನೋಡುವ ಕಂಗಳಲ್ಲೇನಿದೆ?
ಅದೊಂದು ಕಿಟಕಿಯಷ್ಟೇ!

ಇಷ್ಟದ ಬೀಜವೋ?
ಕಷ್ಟದ ಬೀಜವೋ?
ಬಿತ್ತಿ,ಬೆಳೆದು ಹೆಮ್ಮರವಾಗುವುದು
ಮನದ ಈ ಬಯಲಲ್ಲೇ!

ಇಲ್ಲಿ ಎಲ್ಲವೂ ಚಲುವೇ;
ಕುರೂಪವೂ ಚಲುವೇ;
ಅಸಹ್ಯ ಮನೋವಿಕಾರವಷ್ಟೆ.
ಮನದಲ್ಲಿ ಬಿತ್ತಿಹ ಬೀಜ
ಸಿಹಿಯಾದೊಡೆ ಚಲುವು;
ಮನದಲ್ಲಿ ಬಿತ್ತಿಹ ಬೀಜ
ಕಹಿಯಾದೊಡೆ ಕುರೂಪವು;
ಮನದ ಭಾವನೆಯಲ್ಲಡಗಿದೆ ಎಲ್ಲವೂ||

ಕಾರಿರುಳ ರಾತ್ರಿಗಳ ನಿದ್ದೆ

ಕಾರಿರುಳ ರಾತ್ರಿಯಲ್ಲಿ ಏಕಾಂತದಲ್ಲಿ ಕುಳಿತಿರಲು
ಮನದ ಚಿತ್ರದಲೆಲ್ಲಾ ಕಳೆದು ಹೋದ ಆ ದಿನಗಳ
ನೆನಪಿನ ಕಪ್ಪು-ಬಿಳುಪಿನ ಚಲನಚಿತ್ರ;
ಕಳೆದುಹೋಯಿತೆನ್ನಲೋ?
ಇಲ್ಲ,
ಕಳೆದುಕೊಂಡೆನೆನ್ನಲೋ?
ಎರಡೂ ಒಂದೇ ಅರ್ಥ ನೀಡುವುದೆನಗೆ;
ಇದ್ದದ್ದಾದರೂ ಏನು ಎಂಬ ಪ್ರಶ್ನೆಗೆ
ಇದ್ದರೆ ತಾನೆ ಕಳೆದುಕೊಳ್ಳಲು ಎಂಬ ಉತ್ತರ,
ದರ್ಶಿನಿಯ ಊಟದಂತೆ ಸಿದ್ಧವಾಗಿದೆ;
ಏನೇ ಆಗಲಿ,
ಕಳೆದುಕೊಂಡಾಗಿನ ಸುಖ,
ಪಡೆಯುವುದರಲ್ಲಿ ಇಲ್ಲ
ಎಂಬ ಸತ್ಯದ ದರ್ಶನವಾಗಿದ್ದು
ಅದೇ ಕಾರಿರುಳ ರಾತ್ರಿಗಳ ನಿದ್ದೆಯಿಲ್ಲದ
ಪಿಶಾಚಿಯಂತೆ ನರಳುವಾಗ......

ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ

ದೇಶದ ಶಕ್ತಿಯ ಪ್ರತಿರೂಪವೇ
ಮಿಂಚಿನಂತ ಮಾತಿನ ಗಣಿಯೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಮಾತಿನ ಲಯದಲ್ಲೇ ಮೋಡಿಮಾಡುವ ಮಾಂತ್ರಿಕನೇ
ಜಗದ ಕಣ್ಣನ್ನೆಲ್ಲಾ ಸೂರೆಗೊಂಡ ಮೋಡಿಗಾರನೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಭಾರತದ ಆತ್ಮಸ್ಥೈರ್ಯದ ಸಂಕೇತವೇ
ಶತೃಗಳ ಸಿಂಹಸ್ವಪ್ನವಾದ ಕಾರ್ಗಿಲ್ಲಿನ ವೀರಾವೇಶವೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಪೋಖ್ರಾನಿನ ಅಣುಶಕ್ತಿಯ ಶಕ್ತಿಯೇ
ಭಾರತೀಯತೆಯ ಬೆಳಗಿದ ಪ್ರದೀಪವೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಎಷ್ಟು ಹಾಡಿ ಹೊಗಳಿದರೂ ಸಾಲದು ದೊರೆಯೇ
ನೂರು ವರುಷ ಬಾಳೆಂದು ಪ್ರಾರ್ಥಿಸುವೆವು ಓ ದೇವರೇ
ಭಾರತಮಾತೆಯ ಹೆಮ್ಮೆಯ ಪುತ್ರ ನೀ ಅಟಲ್
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

(ನಮ್ಮ ನೆಚ್ಚಿನ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬದ
ದಿನಕ್ಕಾಗಿ ಈ ಕವನ ರಚಿಸಿದ್ದು.)

ಏಕೆ ಹುಟ್ಟಿದೆ ಜೀವವೇ?

ಏಕೆ ಹುಟ್ಟಿದೆ ಜೀವವೇ?
ಏಕೆ ಈ ನೆಲಕ್ಕೆ ಬಂದೆ?
ಕಾರಣವಿಲ್ಲದೆ ಈ ಜನ್ಮವೇತಕ್ಕೆ ಜೀವವೇ?

ಬಂದ ಕಾರಣವೇ ಬೇರೆ
ಮೋಹ ಮಾಯೆಗಳ ಬಂಧಿಯಾಗಿ
ಕಾರಣವನೇ ಮರೆತು ಬದುಕುವುದ್ಯಾತಕೋ?

ಬಂಧು ಬಳಗದ ನಿಮಿತ್ತ ಪ್ರೇಮ ಬಂಧನವೋ
ಹೆಂಡತಿ ಮಕ್ಕಳ ತೀರದ ವ್ಯಾಮೋಹವೋ
ಕೊನೆಯಿಲ್ಲದ ಮೋಹಕ್ಕೆ ಬೇಯುತಿರುವೆ ಏಕೆ ಜೀವವೇ?

ಬಿಡಿಸಿಕೊಳ್ಳಲಾರದ ಬಂಧನವೋ
ಕ್ಷಣಮಾತ್ರದಲ್ಲೇ ಕಳಚುವ ನಿನ್ನ ಪರಿಯೋ
ಯಾವುದು ಸತ್ಯವೋ? ಯಾವುದು ಮಿಥ್ಯವೋ?

ಬಂದ ಕಾರಣವನೇ ಮರೆಯುವ ನಾವು
ಎಷ್ಟು ವರುಷ ಜೀವ ಸವೆಸಿದರೆ ಏನು
ನಿನ್ನ ಅಣತಿಯಂತೆ ನಡೆವ ನಾವು ನಿನ್ನ ಕೈಗೊಂಬೆಗಳೇ!

ಸಲಹೆಂದು ಬೇಡಿಕೊಂಬೆವು
ಬೆಳಕನಿತ್ತು ದಡವ ಸೇರಿಸೋ
ಎಂಬ ಅರಿಕೆ ನಿನ್ನಲ್ಲಿ ಓ ಜೀವದ ಒಡೆಯನೇ!

ಮತ್ತೆ ಬಾರದ ದಿನಗಳೇ......

ಮತ್ತೆ ಬಾರದ ದಿನಗಳೇ
ಎತ್ತ ಹೋದಿರಿ ಬಾರದೇ
ನೆನೆಯುತ ಕಾದಿಹೆನು
ಕಣ್ಣೀರ ಹರಿಸಿ ಬೇಡಿಹೆನು||

ಮತ್ತೆ ಮತ್ತೆ ನೆನೆಯುತ
ನಿದ್ದೆ ಜಾರಿತು ಬೆದರುತಾ
ಹೋದರೆಲ್ಲಿಗೆ ಮತ್ತೆ ಬಾರದೆ
ಯೋಚನೆ ಹತ್ತಿದೆ ಈ ಬಾಳಿಗೆ||

ಕಳೆದು ಹೋಯಿತು,ಕಳೆದು ಹೋಯಿತು
ಎಷ್ಟು ಹುಡುಕಿದರೂ ಸಿಗದೆ ಹೊರಳಿತು
ಮನದ ಕತ್ತಲಲ್ಲಿ ಪ್ರಶ್ನೆತೋರಿ
ಮಿಂಚಿನಂತೆ ಬೆಳಕತೋರಿ ಮಾಯವಾಯಿತು||

ಗೆಳೆತನ

ಕೆಲವು ಸಲ ನಾವು ಶಕ್ತಿ ಮೀರಿ ಹೊಡೆದಾಡುತ್ತೇವೆ
ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತೇವೆ
ಏನೇ ಆದರೂ ಕೊನೆಗೆ ನಾವು ಗೆಳೆಯರೇ.....
ಅದೇ ಕೊನೆಯವರೆಗೂ ಬೆಲೆ ಇರುವಂತಹುದು
ಅದಕ್ಕೆ ಬೆಲೆ ಕಟ್ಟಲಾಗದೆಂದು
ಲೋಕದಲ್ಲಿ ಅದಕ್ಕೆ ಗೆಳೆತನವೆನ್ನುವರು ಗೆಳೆಯ;

ಹಲವು ಸಲ ನಮ್ಮ ಗೆಳೆತನವ
ಪರೀಕ್ಷಿಸುವ ಪರೀಕ್ಷೆಗಳು ನಡೆದುಹೋಗುತ್ತವೆ
ಆ ಪರೀಕ್ಷೆಗಳಿಗೆ ಕೊನೆಯಿದೆ
ಆದರೆ ನಮ್ಮ ಗೆಳೆತನಕ್ಕೆ ಕೊನೆಯಿಲ್ಲ ಗೆಳೆಯ;

ನಾವು ದೊಡ್ಡವರಾಗುತ್ತೇವೆ;
ನಾವು ಹಳಬರಾಗುತ್ತೇವೆ;
ನಾವು ಮುದುಕರಾಗುತ್ತೇವೆ;
ಮಾಂತ್ರಿಕತೆ ಏನು ಗೊತ್ತಾ ಗೆಳೆಯ
ಈ ನಮ್ಮ ಗೆಳೆತನಕ್ಕೆ ಮುಪ್ಪೆಂಬುದಿಲ್ಲ ಗೆಳೆಯ;

ಪ್ರಾರ್ಥನೆ

ಒಮ್ಮೆ ಆ ದೇವರ ಪ್ರಾರ್ಥಿಸಿದೆ
ಓ ದೇವರೇ ಹೂವೊಂದನ್ನು ನೀಡೆಂದು
ಆತ ಕರುಣಿಸಿದ ಹೂವಿನ ಬೊಕ್ಕೆಯನ್ನೇ ನೀಡಿದ
ಮತ್ತೆ ಕೇಳಿದೆ ಒಂದು ನಿಮಿಷ ಕಾಲ ನೀಡು
ನಿನ್ನ ಕಣ್ಣುತುಂಬ ತುಂಬಿಕೊಳ್ಳಬೇಕೆಂದೆ
ಆತ ಕರುಣಿಸಿದ ಒಂದು ದಿನವನ್ನೇ ನೀಡಿದ
ಅವನ ಕರುಣೆ ಅಪಾರ
ನಾನೋ ದುರಾಸೆಯ ಮುದ್ದೆ
ಮತ್ತೆ ಬೇಡಿಕೆಯಿಟ್ಟೆ, ಪ್ರೀತಿಯ ಬೇಡಿದೆ
ಅದನ್ನೂ ಮುಗುಳ್ನಗುತ್ತಾ ನೀಡಿದ
ಮತ್ತೆ ಅತಿಶಯದಿ ಬೇಡಿದೆ
ದೇವ ಪ್ರೀತಿಯ ದೇವತೆಯ ಕರುಣಿಸೆಂದೆ
ಕರುಣಾಳು ಕನಿಕರಿಸಿ ನಿನ್ನನ್ನೇ ನನಗೆ ನೀಡಿದ.

ಹೊಸಭಾವ-ಹೊಸಬಗೆ

ಮೋಡಗಳಿಲ್ಲದ ದಿನ,ಬರಡಾದ ಆಕಾಶ
ಕಣ್ಣು ಹಾಯಿಸಿದಷ್ಟೂ ತಿಳಿನೀಲಿ ಆಕಾಶ
ಸುಪ್ರಭಾತದ ದಿನಕರನು ಕಣ್ತೆರೆಯಲು
ಹೊಸತನ ಹೊಮ್ಮುತ್ತಿದೆ ಇದು ಹೊಸಭಾವ||

ತುಟಿಯಂಚಲಿ ನಗುವ ಹೊತ್ತು ನಡೆಯುತಿರಲು
ಸುತ್ತ ಎದುರು ಬರುವವರೆಲ್ಲರಲ್ಲೂ ನಗುವ ಹೊನಲೇ
ಎಲ್ಲರೂ ಈಗ ತಾನೆ ಅರಳಿರುವ ಕುಸುಮದಂತೆ
ಎಲ್ಲರಲ್ಲೂ ಜೀವನ ಪ್ರೀತಿಯಿದೆ ಇದು ಹೊಸಬಗೆ||

ಜೀವನದ ಗುರಿ

ಪ್ರತಿದಿನವೂ ಜೀವಿಸೋಣ
ನಮ್ಮ ಪಾಲಿನ ಕರ್ತವ್ಯವನ್ನು ತಪ್ಪದೇ ಮಾಡೋಣ
ಹೊಸತನ ತುಂಬೋಣ
ನೋವುಂಡವರ ಸಂತೈಸೋಣ
ತುಟಿಯಂಚಲಿ ನಗುವ ತರಿಸೋಣ
ಧನ್ಯತೆಯ ಭಾವ ಹೃದಯದಲ್ಲಿ ಬಿತ್ತೋಣ
ಇದನ್ನೇ ನಮ್ಮ ಜೀವನದ ಗುರಿಯಾಗಿಸೋಣ 

ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?

ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?
ನೀನು ನನಗೇನಾಗಬೇಕೆಂದು.....
ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?
ನೀ ತರುವ ಸಂತೋಷದ ಹೊನಲ ಬಗೆಯನ್ನು...
ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?
ನೀ ನನಗೆ ಈ ಪ್ರಪಂಚವೆಂದು...
ಹೀಗೆ ಏನೂ ಹೇಳಿಲ್ಲವಾದರೆ
ನನ್ನಂತರಂಗದ ಭಾವನೆಯನ್ನು ಹೇಳಬಯಸುತ್ತೇನೆ
ನೀನೇ ನನ್ನ ಸರ್ವಸ್ವವೆಂದು
ಈ ಜೀವದ ಜೀವವೆಂದು
ನನ್ನ ಬದುಕಿನ ದೀಪವೆಂದು
ಈ ದೇಹದ ಚೈತನ್ಯವೆಂದು
ನನ್ನ ಹೃದಯದ ಮಿಡಿತವೆಂದು.....

ನೆಂಟಸ್ತಿಕೆ

ನಿನ್ನ ಪ್ರೀತಿಯ ನೆಂಟಸ್ತಿಕೆ
ನನ್ನ ಹೃದಯವ ಬೆಸೆದಿದೆ
ಹಿಡಿದಿದೆ ಭದ್ರವಾಗಿ ಕರಗಳಲ್ಲಿ
ಬಂಗಾರ,ಬೆಳ್ಳಿಯ ದಾರಗಳಿಂದ ಕಟ್ಟಿದೆ ಗೂಡು
ನನ್ನೆದೆಯ ಪ್ರೀತಿಯ ತಂತಿಗಳನ್ನು ಜೋಡಿಸಿದೆ
ಬಿಡಲು ನಿರಾಕರಿಸಿ,
ಹೃದಯವ ಬೆಸೆದಿದೆ ಪ್ರೀತಿಯ ನೆಂಟಸ್ತಿಕೆ.

ಪ್ರೇರಣೆ:  'Your Love knot' by Heather Burns

ಪ್ರೀತಿ

ಓ ಪ್ರೀತಿಯೇ ನಾನಿನ್ನ ಪ್ರೀತಿಸುವೆ
ಪ್ರೀತಿಯೇ ಪ್ರೀತಿಯನ್ನು ಪ್ರೀತಿಸು
ನೀನು ಎಂದೂ ಪ್ರೀತಿಯನ್ನು ಪ್ರೀತಿಸಲಿಲ್ಲವೇಕೆ?
ನನ್ನ ಪ್ರೀತಿ ನನ್ನ ಪ್ರೀತಿಸಬೇಕು||

ನಿನಗಿದೆ ಬಣ್ಣದ ರೆಕ್ಕೆಗಳು
ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಲು
ನೀನೆಂದೂ ನನ್ನ ಸ್ವಾಗತಿಸಲಿಲ್ಲವೇಕೆ?
ಬಿಟ್ಟು ಹೋದೆ ಈ ಹೂವನ್ನು ಚಿಟ್ಟೆಯಂತೆ||

ನೀನು ಭರವಸೆ;
ನೀನು ಬಯಕೆ;
ಎಲ್ಲರೂ ಬಯಸುವರು ನಿನ್ನ ತುಂಬಿಕೊಳ್ಳಲು
ನನ್ನ ಹೃದಯವೂ ಮಿಡಿಯುತಿದೆ ಬೆಸುಗೆಗೆ||

ನನ್ನ ಕಣ್ಣು ಮುಚ್ಚಿದರೂ,ಹೃದಯ ನಿಂತರೂ
ಈ ಹೃದಯಕ್ಕೆ ತಿಳಿದಿದೆ ನೀ ಮಳೆಯಂತೆ ಬರುವೆಯೆಂದು
ಜನರ ಹೃದಯದಲ್ಲಿ ನೀ ನೆಲೆಸಿರುವೆ
ನೋವಿನ ಮರಳುಗಾಡಿನ ಬಿಸಿಗಾಳಿಯಂತೆ||

ಪ್ರೇರಣೆ:  'Love' by Abdul Wahab

ಸ್ತಬ್ದ

ಕಾಗೆ ಹಾರಿತು,
ಜನರು ಸತ್ತರು,
ಆತ್ಮಗಳು ಕಣ್ಮರೆಯಾದವು.
ಕಣ್ಣೀರು ಬತ್ತಿತು,
ಪ್ರೀತಿ ಬಾಡಿತು,
ರಕ್ತ ತೊಟ್ಟಿಕ್ಕುವುದು ನಿಂತಿತು,
ಸೂರ್ಯ ಮುಳುಗಿತು,
ಹೂಗಳು ಭೂದಿಯಾದವು,
ಜನರು ಕಲ್ಲುಗಳಾದರು,
ಕಾಗೆಗಳು ಹೆಪ್ಪುಗಟ್ಟಿದವು,
ಜೀವನ ಸ್ತಬ್ದವಾಯಿತು.

ಪ್ರೇರಣೆ:'Still' by Amber

ಬದುಕೇ ಯುದ್ಧ

ಕದನ ಬೇಡವೇ?
ಆದರೂ ನೀನೇ ಆರಂಭಿಸಿರುವೆ ಈ ಯುದ್ಧ.
ನೀನು ಕೊಡುವ ಪ್ರತಿಯೊಂದು
ಆಘಾತಕ್ಕೆ ನಾನು ಎಂದಿಗಿಂತ ಬಲಶಾಲಿಯಾಗುತ್ತಿರುವೆ
ನಾನು ಬಿಡುವುದಿಲ್ಲ,
ನಾನು ತೊರೆಯುವುದಿಲ್ಲ,
ನೀನು ನನ್ನನ್ನು ಬೀಳಿಸಲಾರೆ,
ನಾನು ನಿನ್ನ ಗೆಲ್ಲಲು ಬಿಡುವುದಿಲ್ಲ.

ಪ್ರೇರಣೆ: 'Life's own battle' by Emma Jackson

ನೀನೇ ಭರವಸೆ

ನೀ ಬೆಳಗಿದೆ ನನ್ನ ಪ್ರಪಂಚವನ್ನು
ನಿನ್ನಿಂದಲೇ ನನ್ನ ದುಗುಡಗಳನ್ನೆಲ್ಲಾ ಮರೆತೆ
ನಿನ್ನ ನಗುವು ನನ್ನ ದಿನಗಳನ್ನು ಬೆಳಗಿದವು
ನನ್ನ ಕಣ್ಣಿರನ್ನೆಲ್ಲ ಓಡಿಸಿದವು ಚೆನ್ನ ಚೆಲುವ||

ನೀನೇ ನನ್ನೆಲ್ಲಾ ಕನಸುಗಳು
ನಿನ್ನಿಂದಲೇ ಅವೆಲ್ಲಾ ನನಸಾದವು ಗೆಳೆಯ
ಮತ್ಯಾರು ಮಾಡ ಮಾಂತ್ರಿಕತೆ ನೀ ಮಾಡಿದೆ
ಅದರಿಂದಲ್ಲೇ ನಾನು ಪೂರ್ಣಳಾದೆ ಚೆನ್ನ ಚೆಲುವ||

ನನ್ನ ಹೃದಯ ಮಿಡಿಯುತ್ತಿದೆ ನಿನಗಾಗಿ ಅವಿರತ
ನೀ ಮನದೊಳಗೆ ಮಿಡಿಯುತಿಹೆ ಪ್ರೇಮ ಒರೆತ
ನಿನ್ನ ಕರುಣೆಗೆ ಏನೆನ್ನಲಿ?
ನಿನ್ನ ಮಮತೆ ಹೀಗೇ ಇರಲಿ ಚೆನ್ನ ಚೆಲುವ||

ಕಪ್ಪು ಚೈತನ್ಯ

ಅವನೆಂದರೆ ಆಕರ್ಷಣೆ;
ಅವನ ಮಾತೆಂದರೆ ಕೊಳಲ ಗಾನ;
ಅವನ ವ್ಯಕ್ತಿತ್ವ ಒಂದು ಸುಂದರ ಕಾವ್ಯ;
ಕಣ್ಣನೋಟದಲ್ಲೇ ಮೋಡಿಮಾಡುವ ಚತುರ;
ಪ್ರೀತಿಯ ಉಪಮಾನವೆಂದರೆ ಅವನೇ;
ಎಲ್ಲವನ್ನೂ ಬಲ್ಲ ಬಲ್ಲಿದ;
ಅವನೊಂದು ಸೋಜಿಗವೆಂದರೆ ತಪ್ಪಲ್ಲ;
ಚೈತನ್ಯವೆಂದರೆ ಒಪ್ಪಲೇಬೇಕಲ್ಲ;

ಚಿಕ್ಕ ಪ್ರೀತಿಯ ಪದ್ಯಗಳು ೬

ನಾನೆಂದೂ ಯೋಚಿಸಿರಲಿಲ್ಲ ಹೀಗೆ ಭಾಸವಾಗುವುದೆಂದು,
ನನ್ನೆಲ್ಲಾ ಚಿಂತೆಗಳನ್ನು ಬಿಟ್ಟು,
ಜೀವನ ಗಾನ ಸೆಳೆವುದೆಂದು,
ನೀನು ಕಲಿಸಿದೆ ಜೀವಿಸುವುದನ್ನು,
ನನ್ನ ಜೀವನಗಾನಕ್ಕೆ ಹೊಸ ಅರ್ಥ ನೀಡಿದೆ,
ನೀನು ಪ್ರಚೋದಿಸಿದೆ ನನ್ನತನವ ತೋರಿ,
ಕತ್ತಲಕೋಣೆಯಲ್ಲಿ ಅವಿತ್ತಿದ್ದ ನನ್ನನ್ನು ಹೊರಗೆಳೆದೆ,
ರೆಕ್ಕೆಬಿಚ್ಚಿ ವಿಶಾಲ ಪ್ರಪಂಚವ ತೋರಿದೆ,
ನೀನು ನನ್ನನ್ನು ಹೊಸ ಮನುಷ್ಯನನ್ನಾಗಿಸಿದೆ,
ಅದೇ ಎಂದೋ ನಾನಾಗಬಯಸಿದ್ದೆ,
ಓ ಒಲವೇ!, ನೀನೇ ನನ್ನ ನಾಯಕ,
ನಾ ಬಯಸುವೆ ನೀನು ಯಾವಾಗಲೂ ನನ್ನ ಬಳಿಯೇ ಇರಲೆಂದು.

ಪ್ರೇರಣೆ:~Roger Inquisitor.

ನಮಗೆ ತಿಳಿದಿಲ್ಲ ನಾವು ಎಲ್ಲಿಂದ ಈ ಭೂಮಿಗೆ ಬಂದವೆಂದು,
ಏಕೆ ನಮ್ಮೀ ಹೃದಯಗಳು ಮಿಡಿಯುತ್ತಿವೆ ಎಂದೂ ತಿಳಿದಿಲ್ಲ,
ಈ ಜೀವನ ಯಾಕಾಗಿ ಎಂದೂ ತಿಳಿದಿಲ್ಲ,
ನೀ ಯಾರೋ? ನಾ ಯಾರೋ? ಅರಿಯದೇ ಬಂದೆವಿಲ್ಲಿ,
ಪ್ರೀತಿಯ ತಂಗಾಳಿಗೆ ಸೋತವರು ನಾವು,
ಏಕೆ ನಾವು ಜೊತೆಯಾದೆವೋ ಇಬ್ಬರಿಗೂ ತಿಳಿದಿಲ್ಲ,
ಆದರೆ ನಾವಿಬ್ಬರೂ ಪ್ರೀತಿಯಿಂದ ಜೊತೆಗೂಡಿ ಜೀವನ ನಡೆಸಬೇಕು,
ಆಗ ಮಾತ್ರ ನಮ್ಮ ಗುರಿ,ನಮ್ಮ ಜೀವನ ಪರಿಪೂರ್ಣವಾಗುತ್ತದೆ ಎಂದು ತಿಳಿದುಕೊಂಡಿದ್ದೇವೆ.

ಚಿಕ್ಕ ಪ್ರೀತಿಯ ಪದ್ಯಗಳು ೫

ನಿನ್ನ ಸ್ಪರ್ಶವನ್ನು ಪ್ರೀತಿಸುತ್ತೇನೆ,
ನಿನ್ನ ಇರುವಿಕೆಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ
ನೀನು ಬಹುದೂರವಿರುವುದರಿಂದ,
ನಾನು ಸುರಕ್ಷಿತವಾಗಿಯೂ,ಪ್ರೀತಿಸಲ್ಪಡುವಳಾಗಿಯೂ
ಇರುವೆ ಎಲ್ಲಾ ಆತಂಕಗಳಿಂದ,
ನಿನ್ನ ತೋಳುಗಳಿಂದ ಚುಂಬಿಸಲ್ಪಟ್ಟಾಗ,
ನನ್ನ ಮನೆಯ ತಲುಪಿದೆ ಎನ್ನುವ ಭಾವ ಬರುತ್ತದೆ,
ನಾನು ಬಯಸುತ್ತೇನೆ ನೀನು ಇಲ್ಲೇ ಇರಬೇಕೆಂದು,
ನಿನ್ನನು ಎಂದೂ ಬಿಡಲಾರೆನೆಂದೂ,
ನನ್ನ ಹೃದಯದ ಮಿಡಿತ ಜಾಸ್ತಿಯಾಗುತ್ತಿದೆ,
ನಾನು ಶಾಂತಚಿತ್ತನಾಗಿದ್ದರೂ....

ಪ್ರೇರಣೆ: ~Garmin Jacobs

ನಿನ್ನ ಭೇಟಿಯಾದ ಮೇಲೆ ಭಾಸವಾಗುತ್ತಿದೆ ಪರಿಪೂರ್ಣತೆ,
ನಾನು ಪ್ರೀತಿಯಲ್ಲಿದ್ದೇನೆ, ಈ ಭಾವನೆಯಿಂದ ಹೊರಬರಲಾಗುತ್ತಿಲ್ಲ,
ನಿನ್ನ ಮುಗುಳ್ನಗೆ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ,
ಆ ಮುಗುಳ್ನಗೆಯನ್ನು ನೋಡಲು ಎಷ್ಟು ದೂರ ಬೇಕಾದರೂ ಕ್ರಮಿಸಬಲ್ಲೆ,
ನಾನು ಬಯಸುತ್ತೇನೆ ನಿನಗೆ ಅನಾಯಾಸವಾಗಿ ಎಲ್ಲಾ ಸಂತೋಷ ಸಿಗಲಿ ಎಂದು,
ನನ್ನ ಉಳಿದ ಜೀವನವನ್ನು ನಿನ್ನ ಹಿತವಾಗಿರಿಸಲು ವಿನಿಯೋಗಿಸುವೆ.

ಪ್ರೇರಣೆ:~Ronny Bills.

ಚಿಕ್ಕ ಪ್ರೀತಿಯ ಪದ್ಯಗಳು ೪

ನಾ ನಿನ್ನ ಗೆಳೆಯನಾಗಿ ಭೇಟಿಯಾದೆ,
ಈಗ ಇಬ್ಬರೂ ಪ್ರೀತಿಸುತ್ತಿದ್ದೇವೆ,
ನೀನು ಎಷ್ಟು ಮೃದುವೆಂದರೆ ವಿಮಲ ಕಪೋಲದಂತೆ,
ನನಗೆ ಗೊತ್ತಿಲ್ಲದೆ ನಿನ್ನ ಪ್ರೀತಿಯಲ್ಲಿ ಬಿದ್ದೆ,
ನಿರ್ಮಲ ಅಥವಾ ಚಂಡಮಾರುತದ ಹವಾಮಾನದಲ್ಲೂ,
ನನಗೆ ತಿಳಿದಿದೆ ನೀನು ನನ್ನೊಂದಿಗೇ ಇರುವಿಯೆಂದು,
ನಮ್ಮ ಜೀವನದ ಹಾದಿಯ ಹಾಡು,ಪ್ರಾಸ ತಪ್ಪಿದರೂ,
ನಮ್ಮ ಪ್ರೀತಿ ಗಟ್ಟಿಯಾಗಿ ನಿಲ್ಲುವುದು ಇತಿಹಾಸದಲ್ಲಿ.

ಪ್ರೇರಣೆ:~Bean Startship.

ಹಿಂದೆ ಹೀಗೆ ಎಂದೂ ಭಾಸವಾಗಿರಲಿಲ್ಲ ನನಗೆ,
ನೀನು ತಂದೆ ಸಂತೋಷ ನನ್ನ ಬಾಳಿಗೆ,
ನೋವ ಕಳೆದು ತುಟಿಯಂಚಲ್ಲಿ ನಗುವ ತಂದೆ,
ಓ ಒಲವೇ ನಿನ್ನಿಂದ ನನ್ನ ಜೀವನ ಸಾರ್ಥಕವಾಗಿದೆ.

ಪ್ರೇರಣೆ: ~Jordan Mice.

ಚಿಕ್ಕ ಪ್ರೀತಿಯ ಪದ್ಯಗಳು-೩

ಓ ನನ್ನ ಒಲವೇ ನೋಯಿಸಬೇಡ,
ನಾನು ತುಂಬಾ ಪ್ರೀತಿಸುತ್ತೇನೆ ನಿನ್ನಿಂದಾಗುವ ನೋವನ್ನು ಸಹಿಸಲು,
ನನಗಾಗಿ ಆಕಾಶದಿಂದಿಳಿದ ದೇವತೆ ನೀನು,
ಯಾವಾಗಲೂ ನನ್ನಂತರಂಗವನ್ನು ಅರಿತವಳಾಗು,
ನೀನೇ ನನ್ನ ಅತ್ಯುತ್ತಮ ಪ್ರಿಯತಮೆ ಎಂದೆಂದಿಗೂ,
ಓ ನನ್ನ ಪ್ರಿಯತಮೇ ನೀನೇ ನನಗೆಲ್ಲಾ ಈ ಜಗದಲ್ಲಿ.

ಪ್ರೇರಣೆ: ~Aston Affable

ನಾವು ಜೊತೆಯಾಗಿ ಕಳೆದ ಆ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ,
ಒಬ್ಬರಿಗೊಬ್ಬರು ಪರಿಚಯವಿರದ ದಿನಗಳಲ್ಲಿ ಎಲ್ಲರನ್ನೂ ಕಡೆಗಣಿಸಿದ್ದೆವು,
ನೀನು ಮುತ್ತಿಟ್ಟ ಆ ಗಳಿಗೆಯಿಂದಲೇ ಮಾಂತ್ರಿಕತೆ ನನ್ನಾವರಿಸಿತು,
ಹೊಸತನ ಮೊದಲುಗೊಂಡಿತು,
ನಮ್ಮ ಸುತ್ತಲೂ ಪ್ರೀತಿಯೆಂಬ ಗೂಡು ನೇಯಲ್ಪಟ್ಟಿತು,
ಈ ನಮ್ಮ ಸಂಬಂದ ಅವಿನಾಭಾವ, ಯಾವ ಶಕ್ತಿಯೂ ಬೇರ್ಪಡಿಸದು,
ನಮ್ಮ ಹೃದಯದಲ್ಲಿರುವ  ಭಾವನೆಗಳನ್ನು ಯಾವುದೂ ಅಲ್ಲಾಡಿಸಲಾರದು.

ಪ್ರೇರಣೆ:~Moragan Tarts

ಚಿಕ್ಕ ಪ್ರೀತಿಯ ಪದ್ಯಗಳು-೨

ನಾನು ಬಯಸುತ್ತೇನೆ ಈ ಕ್ಷಣದಲ್ಲೇ ನಿನ್ನೊಂದಿಗಿರಲು,
ನಿನ್ನ ಪ್ರೀತಿಯ ಬಲೆಗೆ ನಾ ಬಿದ್ದೆ,
ಆದರೆ ಅದು ಹೇಗೆ ನನ್ನ ಅರಿವಿಗೆ ಬರಲೇಯಿಲ್ಲ,
ನೀನು ನನ್ನ ಹೃದಯದ ಭಾಗವಾಗಿಹೆ,
ನಾನು ಬಯಸುತ್ತೇನೆ ನೀನು ಸದಾ ನನ್ನೊಡೆನೆಯೇ ಇರು ಎಂದು.
ನೀನು ನನ್ನನ್ನು ಬಿಟ್ಟುಹೋಗುವುದಕ್ಕೆ ನಾನು ಬಿಡುವುದಿಲ್ಲ,
ನನ್ನ ಪ್ರೀತಿ ನಿನಗಾಗಿಯೇ ಎಂದೆಂದಿಗೂ,
ನಾನು ನಿನ್ನ ಬಿಟ್ಟಿರಲಾರೆನೆ? ನನ್ನ ಉತ್ತರ ಅಸಾಧ್ಯವೆಂದು....

ಪ್ರೇರಣೆ:~Bob cash

ನಮ್ಮ ಮೊದಲ ಮುತ್ತು, ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ,
ಹೃದಯ ಮಿಡಿತ ಹಾದಿ ತಪ್ಪಿದ್ದು ಈಗಲೂ ನೆನಪಿದೆ,
ಬೆಚ್ಚಗಿನ ನಿನ್ನ ತೋಳುಗಳ ಆ ಸಿಹಿ ಚುಂಬನ
ಅದೊಂದು ಸ್ವರ್ಗಾನುಭವ ನನಗೆ ಅಂದು ನೀಡಿತ್ತು.
ನನ್ನ ಹೃದಯವನ್ನು ಸೂರೆಗೊಂಡೆ,ಬೇರೆ ಯಾರೂ ಮಾಡದ ಹಾಗೆ
ನೀನು ದೃಡಪಡಿಸಿದೆ ನೀನೆ ನನ್ನ ಪ್ರೀತಿಯ ದೇವತೆಯೆಂದು
ನನಗೆ ತಿಳಿದಿದೆ ನೀನು ನನ್ನ ಜೀವನ ಪ್ರವೇಶಿಸಿದ ವಿಶೇಷ ಅತಿಥಿ ಎಂದು
ನಾನೆಂದೂ ಯೋಚಿಸಿರಲಿಲ್ಲ ನೀನು ನನ್ನ ಹೃದಯ ಗೆಲ್ಲುವಿಯೆಂದು.

ಪ್ರೇರಣೆ:~Farrell Jenkins.

ಚಿಕ್ಕ ಪ್ರೀತಿಯ ಪದ್ಯಗಳು-೧

೧. ನಾನು ಪ್ರೀತಿಯ ಬಗ್ಗೆ ಯೋಚಿಸುತ್ತೇನೆ
    ನೀನೇ ನೆನಪಾಗುವೆ ಪ್ರೀತಿಯೆಂದರೆ ಗೆಳೆತಿ
    ಪದಗಳಲ್ಲಿ ಬಣ್ಣಿಸಲಾರೆ ಪ್ರೀತಿಯೇನೆಂದು
    ನೀನೇ ಕಲಿಸಿದೆ ಹುಚ್ಚನಂತೆ ಪ್ರೀತಿಸುವುದ
    ನೀನೇ ನನ್ನ ಈ ಜೀವನದ ಬಹುದೊಡ್ಡ ಉಡುಗೊರೆ ಗೆಳತಿ

ಪ್ರೇರಣೆ:~ Shiraz Milton

೨. ನಿನ್ನನ್ನು ಕಂಡಾಗ,ನನಗನಿಸಿತು ನೀನೆ ನನ್ನ ಆತ್ಮಸಾಕ್ಷಾತ್ಕಾರ
    ನಿನ್ನ ಆ ಜಾಗವನ್ನು ಮತ್ತಾರೂ ತುಂಬಲಾರರು
    ಏಕೆಂದರೆ ನನ್ನ ಹೃದಯದಲ್ಲಿ ಪ್ರೀತಿಯೆಂಬ ಅಮೃತವ ಮಥಿಸಿದವಳು ನೀನು
     ಪ್ರಪಂಚದ ಎಲ್ಲಾ ವಸ್ತುಗಳಿಗಿಂತ ಮೌಲ್ಯವಾದವಳು ನೀನು
     ನನ್ನೊಳ ಪ್ರೀತಿ ಆಪ್ಯಾಯಮಾನವಾದುದು,
     ನನಗೆ ತಿಳಿದಿದೆ ನೀನು ಎಂದೆಂದೂ ನನ್ನವಳೆಂದು.

ಪ್ರೇರಣೆ:~ Shenzhen Roll

ನನ್ನತನದ ತೊಳಲಾಟ

ಕಳೆದು ಹೋಗುತ್ತೇನೆ ಬೆಳಗಾದರೆ
ಚಿಂತೆಗಳ ನಡುವೆ;
ಕೆಲಸಗಳ ನಡುವೆ;
ಮಾತುಗಳ ನಡುವೆ;
ಮಾಡುವುದ ಬಿಟ್ಟು,
ಬೇಡದೇ ಇರುವುದೆಲ್ಲವನ್ನೂ ಮಾಡಿ
ಕಳೆದು ಹೋಗಿರುತ್ತೇನೆ ಕಾಣದ ಕತ್ತಲಲ್ಲಿ;
ದಿನದ ಕೊನೆಯಲ್ಲಿ ಚಿಂತಿಸುತ್ತೇನೆ,
ಇಂದೇನು ಮಾಡಿದೆ?
ಏನು ಓಳ್ಳೆಯದು ಮಾಡಿದೆ?
ಓಳ್ಳೆಯದು!,ಕೆಟ್ಟದ್ದು!
ಚಿಂತನೆಗೆ ಜಾಗ ಎಲ್ಲಿದೆ ಹೇಳಿ?
ಓಳ್ಳೆಯದನ್ನೇ ಯೋಚಿಸಿದರೂ
ಓಳ್ಳೇಯದನ್ನೇ ಮಾಡಿದರೂ
ಅನುಕೂಲವಾಗುವವರಿಗೆ ಮಾತ್ರ ಓಳ್ಳೆಯದು
ಅನುಕೂಲವಾಗದವರಿಗೆ ಅದು ಕೆಟ್ಟದ್ದೇ......
ಸ್ವಾರ್ಥದ ಪೊರೆ ಯಾರೂ ಕಳಚರು ಇಲ್ಲಿ
ಸ್ವಾರ್ಥದ ಹೊಳೆಯಲ್ಲಿ ಎಲ್ಲರೂ ಕೊಚ್ಚಿಹೋಗಿದ್ದಾರೆ
ಸತ್ಯ-ಮಿಥ್ಯಗಳ ದ್ವಂದ್ವಗಳ ನಡುವೆ ನಾನು ಕಳೆದುಹೋಗುತ್ತೇನೆ
ಕತ್ತಲಾದರೂ ಕಷ್ಟ;
ಬೆಳಕಾದರೂ ಕಷ್ಟ;
ನನ್ನತನ ಕಂಡುಕೊಳ್ಳಲಾರದೆ ಮಿಥ್ಯೆಯಲ್ಲಿ ಕಳೆದುಹೋಗಿದ್ದೇನೆ
ಈ ಬೇಗೆ ಸಾಗುತ್ತಲೇ ಇದೆ ಕೊನೆಯಿಲ್ಲದೆ
ದಿನವೂ ಕಳೆದುಹೋಗುತ್ತಲೇ ಇದ್ದೇನೆ
ದಿನವೂ ಸಾಯುತ್ತಲೇ ಹೋಗುತ್ತಿದೆ ಕೊನೆಯಿಲ್ಲದೆ......

ಮನದೊಳ ಅಂಕಣದಲ್ಲಿ

ಹಣತೆ ಹಚ್ಚಬೇಕೆಂದು ಕೊಂಡೆ
ಹುಡುಕಾಡಿದೆ ಮನೆಯ ತುಂಬೆಲ್ಲಾ
ಪರಿಕರಗಳು ಬೇಕಾದವು ಒಂದೇ? ಎರಡೇ?
ಮನಸ್ಸಿಲ್ಲದೆ ಮಾರ್ಗವಿಲ್ಲ;
ಪ್ರೇರಣೆಯಿಲ್ಲದೆ ಕಾಯಕವಿಲ್ಲ;
ಇಂಧನವಿಲ್ಲದೆ ಚೈತನ್ಯವಿಲ್ಲ;
ಕತ್ತಲಿಲ್ಲದೆ ಬೆಳಕಿಗೆ ಮಹತ್ವವಿಲ್ಲ;
ಬೆಳಕಿಡಿಯಿಲ್ಲದೆ ಬೆಳಕಿಲ್ಲ;
ಮನದೊಳ ಅಂಕಣದಲ್ಲಿ
ನೂರು ದೀಪಗಳ ಬೆಳಕಿದೆ;
ನಮ್ಮ ನಾವು ಅರಿತರೆ
ನೂರು ಜನಕ್ಕೆ ನಾವೇ ದಾರಿದೀಪ;

ನೀ ನನ್ನ ಹೃದಯದೊಳು ನೆಲೆಸಿರುವೆ

ನನ್ನ ಹೃದಯದೊಳು ನೀನಿರುವೆ
ನಾ ಎಲ್ಲೇ ಹೋದರೂ ನೀ ಜೊತೆಗಿರುವೆ
ನಿನ್ನ ಇರುವಿಕೆ ಒಂದು ರೀತಿಯ ಸಂತೋಷ ಮನದಲ್ಲಿ ತಂದಿದೆ
ಮನದಲ್ಲಿ ಸಮಾಧಾನ,ಚೈತನ್ಯ,ಉತ್ಸಾಹ ಆವರಿಸಿದೆ
ನಾನು ಏಕಾಂಗಿಯಲ್ಲ;
ನನಗಾರು ಇಲ್ಲ;
ಇತ್ಯಾದಿ.ಇತ್ಯಾದಿ ಹುಸಿ ನಂಬಿಕೆಗಳನ್ನು ಕಿತ್ತೆಸೆದಿದ್ದೇನೆ
ಕಾರಣ ನೀ ನನ್ನ ಹೃದಯದೊಳು ನೆಲೆಸಿರುವೆ
ನಾನು ನಿನ್ನ ಏನೆನ್ನಲ್ಲಿ?
ಬಂಧುವೆನ್ನಲೋ?
ಗೆಳೆಯನೆನ್ನಲೋ?
ಪ್ರಿಯತಮನೆನ್ನಲೋ?
ದ್ವಂದ್ವಕ್ಕೆ ಸಿಲುಕಿಸಿರುವೆ...
ನೀ ಏನೇ ಆಗಿರು ನನಗೆ
ನನ್ನ ಮನದ ಚೈತನ್ಯವೆನ್ನುವುದು ಸತ್ಯ
ನನ್ನ ಮನದ ಛಲವೆನ್ನುವುದು ಸತ್ಯ
ನನ್ನ ಮನದ ನಂಬಿಕೆಯೆನ್ನುವುದು ಸತ್ಯ.

ನಾನು ನಿನ್ನವಳಲ್ಲ.....

ನಾನು ನಿನ್ನವಳಲ್ಲ
ನಾ ನಿನ್ನ ವಶವಾಗಿಲ್ಲ
ಪ್ರೀತಿಯ ಭ್ರಮೆಯಲ್ಲಿ ತೇಲಿದ್ದು ನಿಜ
ನಿನ್ನ ಪ್ರೀತಿಯ ಬಲೆಗೆ ಸಿಕ್ಕಿದ್ದು ನಿಜ
ನಿನ್ನಿಂದ ವಂಚನೆಗೆ ಒಳಗಾಗಿದ್ದೂ ಅಷ್ಟೇ ಸತ್ಯ
ಒಮ್ಮೆ ಮಾಡಿದ ತಪ್ಪು
ಮತ್ತೆ ಮತ್ತೆ ಹೇಗೆ ಮಾಡಲಿ ಹೇಳು?
ಪ್ರೀತಿ ಅಮೃತವೆನ್ನುವರು ಈ ಜನರು
ಆದರೆ ನಿನ್ನ ಪ್ರೀತಿ ನನಗೆ ಬಲು ಕಹಿ,ಒಗರು
ಮತ್ತೆ ಬಾರದಿರು ಎದುರಿಗೆ
ಎಲ್ಲವನ್ನೂ ಮರೆತಿರುವಾಗ
ಹಳೆಯ ನೆನಪ ತಾರದಿರು
ನೀ ಎದುರು ಬಂದರೂ
ನಾನು ನಿನ್ನವಳಲ್ಲ
ನಾ ನಿನ್ನ ವಶವಾಗಲ್ಲ

ಕಣ್ಣೀರಾಗುವ ಆಸೆ-ಭ್ರಮೆ

ಓಹ್! ಸುಂದರ ಮನೋಹರ ಬೆಳಗು
ಹರಿದು ಬರುತಿದೆ ಸಂತೋಷದ ಹೊನಲು
ಕಣ್ತೆರೆದು ಆಸ್ವಾದಿಸುತಿಹೆ ಪ್ರತಿ ನಿಮಿಷ||

ಅಲ್ಲಿ ಇಲ್ಲಿ ಅಂಗಡಿ ಮುಗ್ಗಟ್ಟು ತೆರೆದಿಹವು ನೋಡು
ಕಾಣದ ಭ್ರಮೆಯಲ್ಲಿ ತೇಲಿಹೋಗುತ ವಶವಾದೆ
ಕಣ್ಣಿದ್ದು ಕುರುಡನಾದೆ ಹಗಲುಗನಸು ಕಂಡು||

ಮುಸ್ಸಂಜೆಯ ಬೆಳಗು ಜಾರುವ ಹೊತ್ತಲ್ಲಿ ನೆನಪಾಯಿತು
ಅಂಗಡಿಯಲ್ಲಿ ವ್ಯಾಪಾರ ಮಾಡುವುದು ಬಹಳಿತ್ತು
ಸಮಯ ಹೋದ ಮೇಲೆ ಕಣ್ಣೀರಿಡುವುದು ಗೊತ್ತು||

ಈ ಜೀವನವೇ ಹೀಗೆ ನೋಡಿ
ಇಲ್ಲದಿದ್ದಾಗ ಆಸೆಪಡುತ್ತೇವೆ
ಇದ್ದಾಗ ಭ್ರಮೆಯಲ್ಲಿರುತ್ತೇವೆ
ಆಸೆ-ಭ್ರಮೆ ಕಳಚಿದಾಗ ಕಣ್ಣೀರಾಗುತ್ತೇವೆ||

ಯಾರ ಪ್ರೀತಿಯ ವಶವಾಗಿಹೆ?

ನೀ ಬರುವೆಯೆಂದು ಕಾದಿಹೆನು ಕಾತರದಿ
ಕಾಣದೆ ಬಲುದಿನಗಳಾದವು ಬಳಿಬಾರಾ
ಕಾಡಿದೆ ಮನ ನಿನ್ನ ಕಾಣದೆ,ನೊಂದಿದೆ ಮನ
ವಿರಹದಿ ನೊಂದು ಬಳಲಿಹೆನು ಬಾರಾ ಮಧುರ ಬಾಲಾ||

ಎಲ್ಲಿರುವೆ ಚಂದ್ರನೆ? ಮದನ ಮೋಹನನೇ?
ಎಲ್ಲಿರುವೆ ಮುಕುಂದನೆ? ಹೃದಯ ಗಾನ ಮುರುಳಿಯೇ?
ಪರೀಕ್ಷಿಸುವ ಈ ಪರಿ ಸರಿಯೇ? ನ್ಯಾಯವೆ?
ಮುಖತೋರಿ ಸಲಹಬಾರದೇ ಗೋಕುಲ ಬಾಲಾ||

ಯಾರ ಪ್ರೀತಿಯ ವಶವಾಗಿಹೆ?
ನಿನ್ನ ಕಾಣದ ಈ ಕಂಗಳು ಕುರುಡಾಗಿವೆ
ಬಂದು ದಾರಿ ತೋರಬಾರದೇ?
ನಿನ್ನೊಲವ ಮಾತುಗಳಿಗೆ ಕಿವಿಗಳು ಹಂಬಲಿಸಿವೆ
ಕರುಣೆ ನಿನಗೆ ಬಾರದೇ?
ಎಲ್ಲಿ ಮರೆಯಾದೆ ಎನ್ನ ಹೃದಯದರಸನೇ?
ಎದುರು ಬಂದು ನಿಲ್ಲಬಾರದೇ ಗೋಪಾಲ ಬಾಲಾ||

ಯಶಸ್ಸು

ಯಶಸ್ಸಿನ ರಸ್ತೆ ನೇರವಾಗಿಲ್ಲ ಗೆಳೆಯ
ವಕ್ರವಾಗಿದೆ ಹಾಗು ಸೋಲೆನ್ನುವರು ಗೆಳೆಯ
ಸುರುಳಿಯಂತಿರುವ ಅದನ್ನು ಭ್ರಾಂತಿಯೆನ್ನುವರು ಗೆಳೆಯ
ವೇಗ ನಿಯಂತ್ರಣ ಉಬ್ಬುಗಳನ್ನು ಗೆಳೆಯರೆನ್ನುವರು
ಕೆಂಪು ದೀಪಗಳನ್ನು ವೈರಿಯೆಂದು,
ಎಚ್ಚರಿಕೆ ದೀಪಗಳನ್ನು ಕುಟುಂಬವೆನ್ನುವರು ಗೆಳೆಯ;

ನಿನ್ನೊಳು ಒಂದಿನಿತು ದೃಡತೆಯಿದ್ದರೆ
ಚೈತನ್ಯದ ಮೂಲ ತಾಳ್ಮೆ,ಛಲ,
ವಿಮೆಯೆನ್ನುವ ನಂಬಿಕೆ ಮತ್ತು
ಶ್ರೀಕೃಷ್ಣ ಚಾಲಕನಾಗಿರೆ.....
ನೀ ಹೊರಟಿರುವ ಆ ಸ್ಥಳ ಯಶಸ್ಸೇ ಆಗಿರುವುದು ಗೆಳೆಯ;

ಪ್ರೇರಣೆ: " Success" by Niderah

ಅದುವೇ ಜೀವನ

ಈ ಜೀವನವೊಂದು ಉಡುಗೊರೆ ಅದನ್ನು ಒಪ್ಪಿಕೋ,ಅಪ್ಪಿಕೋ.
ಆರಂಭವಾಗುವುದು ಹೊಸದಿನದಂತೆ... ಎದ್ದೇಳು ಹಾಗು ಅಭಿನಂದಿಸು.
ಜೀವನವೊಂದು ಸಾಹಸ.. ಧೈರ್ಯವಾಗಿ ತಲೆ ಎತ್ತು ಹಾಗು ಭೇಟಿಮಾಡು.
ಜೀವನವೊಂದು ಅವಕಾಶ.. ಬಳಸಿಕೋ?, ವ್ಯರ್ಥಮಾಡದೆ.

ಜೀವನವೊಂದು ರಹಸ್ಯ...ಬಿಚ್ಚು,ಆ ಒಗಟನ್ನು ಬಿಡಿಸು.
ಅದು ಆರಂಭವಾಗುವುದು ಒಳಾರ್ಥದಿಂದ... ಜಾಗೃತನಾಗು ಹಾಗು ಅರ್ಥಮಾಡಿಕೋ.
ಜೀವನವೊಂದು ಗುರಿ..ಸೆಣಸು ಅದರೊಡನೆ ಹಾಗು ಯಶಸ್ಸು ನಿನ್ನದಾಗಿಸಿಕೋ.
ಜೀವನವೊಂದು ಪರಿಪೂರ್ಣ ನಂಬಿಕೆ... ಪೂರೈಸು?,ಬಿಡದೆ ಉಳಿಸಿಕೋ.

ಜೀವನವೊಂದು ದುಃಖದ ನಾಟಕ.. ಎದುರುಗೊಳ್ಳು,ಮನಃಪೂರ್ವಕವಾಗಿ ಒಪ್ಪಿಕೋ..
ನೋವಿನಿಂದ ಆರಂಭವಾಗುವುದದು... ಎದ್ದೇಳು ಹಾಗು ಸಹಾಯ ಮಾಡು.
ಜೀವನವೊಂದು ಸೆಣಸಾಟ.. ಧೈರ್ಯದಿಂದ ಎದುರಿಸು
ನೋವಿನ ನದಿಯೇ... ಕ್ಷಮಿಸು? ನಿರ್ಲಿಪ್ತನಾಗಿ ದಾಟು.

ಜೀವನವೊಂದು ಬೆಲೆಬಾಳುವಂತಹುದು... ಹಿಡಿ,ಆ ಸಂಪತ್ತು ನಿನ್ನದಾಗಿಸಿಕೋ
ಅದು ಭರವಸೆಯಿಂದ ಆರಂಭವಾಗುವುದು... ಎದ್ದೇಳು ಹಾಗು ಅನುಭವಿಸು.
ಜೀವನವೊಂದು ಆಯ್ಕೆ... ಅದನ್ನು ಆರಿಸಿಕೋ ಹಾಗು ಸಾಧಿಸು
ಅದು ಜ್ಯಾನದ ಹೊಳೆ... ಬಳಸಿಕೋ ,ಅಪವ್ಯಯ ಮಾಡಬೇಡ.

ಜೀವನವೊಂದು ಸಾಹಸ...ಅನುಭವಿಸು ಹಾಗು ಪರಿಶೋಧಿಸು
ಅದು ಕರ್ತವ್ಯದೊಡನೆ ಆರಂಭವಾಗುವುದು... ಎದ್ದೇಳು ಹಾಗು ನಿರ್ವಹಿಸು
ಜೀವನವೊಂದು ಪ್ರೀತಿ...ಪರಿಪೂರ್ಣವಾಗಿ ಪ್ರೀತಿಸು
ಸೌಂದರ್ಯದ ಗಣಿ.... ಹೊಗಳು?, ಹಾಗು ವೀಕ್ಷಿಸು.

ಇದೇ ಜೀವನ.... ಬಾಳು, ಕಲಿ ಹಾಗು ಬೆಳೆ
ಜೀವನ ಸುಂದರ....ನೀ ತಿಳಿದಿರುವುದಕ್ಕೆಲ್ಲಾ ನ್ಯಾಯ ಒದಗಿಸು.

ಪ್ರೇರಣೆ:"That's Life" by © Danny Joyce

ಕರಗುವ ಮೋಡದಿಂದಲೇ

ಕರಗುವ ಮೋಡದಿಂದಲೇ
ಮಳೆಯ ಹನಿಗಳನ್ನಲ್ಲದೆ ಬೇರೇನನ್ನೋ ನಿರೀಕ್ಷಿಸಬಹುದೇ?

ಕರಗುವ ಹೃದಯದಿಂದಲೇ
ಕಣ್ಣೀರ ಹನಿಗಳನ್ನಲ್ಲದೆ ಬೇರೇನನ್ನೋ ನಿರೀಕ್ಷಿಸಬಹುದೇ?

ಕರಗುವ ಹಿಮದಿಂದಲೇ
ಹರಿಯುವ ನದಿಯನ್ನಲ್ಲದೆ ಬೇರೇನನ್ನೋ ನಿರೀಕ್ಷಿಸಬಹುದೇ?

ಬಯಸುವ ಹೃದಯದಿಂದಲೇ
ಪ್ರೀತಿಯ ಮಳೆಯನ್ನಲ್ಲದೆ ಬೇರೇನನ್ನೋ ಬಯಸಬಹುದೇ?

ಕಾಡುವ ಕನಸಿನಿಂದಲೇ
ಜೀವನದ ಗುರಿಯನ್ನಲ್ಲದೆ ಬೇರೇನನ್ನೋ ಹಾತೊರೆಯಬಹುದೇ?

ಸೆಳೆಯುವ ಮೋಹದಿಂದಲೇ
ಈ ಜೀವನ ಚಲಿಸುವುದಲ್ಲದೆ ನಿಂತ ನೀರಾಗಬಹುದೇ?

ನಾನೊಬ್ಬಳು ಹುಡುಗಿ

ನಗುವ ಹಿಂದೆ ನನ್ನೊಳಗಿನ ನೋವುಗಳನ್ನೆಲ್ಲ ಬಚ್ಚಿಡುವವಳು
ಹೊರಗೆ ನೋಡಲು ಬಲು ಬಜಾರಿಯಾಗಿ ಕಾಣವವಳು
ನೂರೆಂಟು ಸಮಸ್ಯೆಗಳ ಹೊತ್ತು ಹೆಣಗುವವಳು
ಏನನ್ನೂ ಹೇಳಿಕೊಳ್ಳಲಾರದ ಸಂಕೋಚವ ಹೊತ್ತವಳು
ನನ್ನೆಲ್ಲವನ್ನೂ ಸೀಸೆಯೊಳಗೆ ಬಂಧಿಸಿರುವಳು ನಾನೊಬ್ಬಳು ಹುಡುಗಿ

ಕೆಲವು ವೇಳೆಯಲ್ಲಿ ನನ್ನ ಮಾತು ಕೇಳಿಸಿಕೊಳ್ಳುವವರ ಅಗತ್ಯವಿರುವವಳು
ನನ್ನನ್ನು ಸಂತೈಸಲು ಹೃದಯವಂತರು ಇರಲಿ ಎಂದು ಹಂಬಲಿಸುವವಳು
ನನ್ನ ಸಮಸ್ಯೆಗಳಿಗೆ ಕರಗುವ ತಾಯ ಕರುಳು ಇರಲಿ ಎಂದು ಕರುಬುವವಳು
ನಾನು ಅಳುವಾಗ ನನ್ನ ಕಣ್ಣಾಲಿಗಳಲ್ಲಿ ಜಾರುವ ನೀರನ್ನು ಒರೆಸುವವರು ಬೇಕೆಂದು ಮರುಗುವವಳು
ನನ್ನನ್ನು ಪ್ರೀತಿಸುವ ಹೃದಯ ಬೇಕೆಂದು ದೇವರಲ್ಲಿ ಪ್ರಾರ್ಥಿಸುವವಳು ನಾನೊಬ್ಬಳು ಹುಡುಗಿ

ಯಾರಿಗೂ ತಿಳಿದಿಲ್ಲ ನನ್ನ ನೈಜ ಆಂತರ್ಯ
ಯಾರಿಗೂ ತಿಳಿದಿಲ್ಲ ನನ್ನ ದಿನನಿತ್ಯದ ಬವಣೆಗಳು
ಯಾರಿಗೂ ತಿಳಿದಿಲ್ಲ ದಿನವೂ ತೆವಳಿ ಸವೆಸುವ ಹಾದಿಯ
ಯಾರಿಗೂ ತಿಳಿದಿಲ್ಲ ನಾನೊಬ್ಬಳು ಹುಡುಗಿ
ತನ್ನನ್ನು ತಾನೇ ಮರೆತವಳು ಹಾಗು
ನಾನೊಬ್ಬಳು ಹುಡುಗಿ ದಿನವೂ ಅಳುತ್ತಾ,
ಕೊರಗುತ್ತಾ ರಾತ್ರಿ ನಿದ್ದೆಯ  ಕರೆವವಳು ನಾನೊಬ್ಬಳು ಹುಡುಗಿ

ಪ್ರೇರಣೆ: "And I'm the Girl by Jillian Baker

ನನ್ನ ಕೋಣೆ,ಕತ್ತಲ ಓಣಿ

ನನ್ನ ಕೋಣೆ, ಕತ್ತಲ ಓಣಿ
ನನ್ನ ದುಃಸ್ವಪ್ನಗಳೇ ಮತ್ತೆ ಬನ್ನಿ
ನನ್ನ ಭೂತಗಳು ಬಿಡಲಾರವು
ನನ್ನ ಕಾಪಾಡಲು ಯಾರೂ ಇಲ್ಲ
ನನ್ನ ಮನಸ್ಸಿಗೆ ತುಂಬಾ ನೋವಾಗಿದೆ
ನನ್ನ ನೋವುಗಳು ನನ್ನನ್ನೇ ತಿನ್ನುತ್ತಿವೆ;
ನನ್ನ ಕಂಗಳು ತೇವವಾಗಿವೆ
ಕಾರಣಗಳ ನಾನೆಂದೂ ಮರೆಯಲಾರೆ
ನನ್ನ ಉಸಿರುಗಟ್ಟುತ್ತಿದೆ;
ನನ್ನ ಮಾತುಗಳು ತೊದಲುತ್ತಿದೆ;
ನನ್ನ ಹೃದಯ ಚೀರುತ್ತಿದೆ;
ನನ್ನ ಜೀವ ಸಾವಿನ ಮನೆಯ ಬಾಗಿಲ ತಟ್ಟುತ್ತಿದೆ;

ಪ್ರೇರಣೆ:  "My Room, Dark black"  By Anonymous

ಹೇಳಲಾರದ ಸತ್ಯ

ನನ್ನ ನೋವು,ಈ ನರಳಾಟ ಎಲ್ಲವೂ ನನ್ನ ಹಣೆಬರಹ;
ಬಲವಂತವಾಗಿ ಮನಮಾಡಿ ಎಲ್ಲವನ್ನೂ ನಿರ್ಲಕ್ಷಿಸಿದರೂ
ಹಳೆಯ ನೆನಪು,ಸುತ್ತಮುತ್ತಲ ಪರಿಸರ ನನ್ನನ್ನು ಕಟ್ಟಿಹಾಕಿದೆ;
ದ್ವೇಷ ನನ್ನ ಚರ್ಮದ ಕೆಳಗೆ ಬುಗಿಲೇಳುವ ಹುನ್ನಾರ ನಡೆಸಿದೆ;
ರಕ್ತ ದಮನಿಗಳಲ್ಲಿ ಕೋಪ-ತಾಪ ಸಿಡಿದೇಳುವ ಹವಣಿಕೆ ಕಾಣುತ್ತಿದೆ;
ನೋವಿನ ಗಾಯಗಳು ಜ್ವಾಲಾಮುಖಿಯಂತೆ ಸ್ಪೋಟಗೊಳ್ಳಲು ಕಾಲ ಎಣಿಸುತ್ತಿದೆ;
ಕಣ್ಣುಗಳನ್ನು ಕತ್ತಲು ಬಂಧಿಸಿದೆ ಆದರೂ ತುಟಿಯ ಮೇಲೆ ನಗುವ ತೋರುವ ಹವಣಿಕೆ;
ಜನರ ನಡುವೆ ಮಾತನಾಡುವಾಗ ನಗುವ ಮುಖವಾಡ ಧರಿಸುತ್ತೇನೆ;
ಒಳಒಳಗೆ ನಾನು ಸಾಯುತ್ತಿದ್ದೇನೆ;
ಜನ ನನ್ನ ನೋಡುವ ದೃಷ್ಟಿಕೋನ ಬದಲಾಯಿಸುವರೇನೋ?
ಒಳಗಿನ ನಾನು ಬೇರೆಯವನೇ ಆಗಿಹನೇನೋ? ಇಲ್ಲ
ಎರಡೂ ಒಂದೇ ಆಗಿಹನೇನೋ?
ಸತ್ಯವೆಲ್ಲವನ್ನೂ ನಾನು ಬಲ್ಲೆನೆಂದು ಅವರು ನನ್ನ ಹೀಗೆಳೆಯದಿರಲಿ;
ಆ ಸತ್ಯ ನನ್ನ ಹೃದಯದಲ್ಲಿ ಬಂಧಿಯಾಗಿದೆ;
ಅದಕ್ಕೆ ತೆಗೆಯಲಾರದ ಬೀಗ ಜಡಿದಿದ್ದೇನೆ;
ಅದು ತನ್ನ ಕಣ್ಣೀರಿನಿಂದ ನನ್ನನ್ನು ಬೇರೆಯವನನ್ನಾಗಿಸಿದೆ.

ಪ್ರೇರಣೆ: "Truth Untold" by Shianne.

ಸಾವು

ಕಾಲ ನಿಂತಿದೆ
ಏನೂ ಚಲಿಸದೆ
ಪ್ರತಿ ದಿನವೂ......
ಪ್ರತಿ ಕ್ಷಣ
ಪ್ರತಿ ದಿನ
ವರುಷಗಳಂತೆ ತೋರುತಿದೆ
ಎಲ್ಲೋ ಕಳೆದು ಹೋಗುತ್ತಿದ್ದೇನೆ
ಯಾರಿಗೂ ಸಿಗದ ಕತ್ತಲಲ್ಲಿ
ಅನಿಸುತ್ತಿದೆ ಸಾಯುತ್ತಿದ್ದೇನೆಂದು

ಚಳಿ,
ಶೂನ್ಯತೆ ಹಾಗು
ಒಂಟಿತನ
ನನ್ನನ್ನು ಹಿಂಸಿಸುತ್ತಿದೆ
ಕಟ್ಟಿಹಾಕಿದೆ ಬಿಡಿಸಿಕೊಳ್ಳಲಾರದಂತೆ
ಪ್ರತಿ ಕ್ಷಣ ನನ್ನನ್ನು ತಿನ್ನುತ್ತಿದೆ
ನನ್ನೆಲ್ಲಾ ಚೈತನ್ಯ ಬರಿದಾಗುವವರೆಗೆ
ಮೇಲುನೋಟಕ್ಕೆ ನಾನು ಚೆನ್ನಾಗಿಯೇ ಇದ್ದೇನೆ
ಆದರೆ ನಾನು ಜೀವಂತ ಶವವಾಗಿದ್ದೇನೆ

ಪ್ರೇರಣೆ:  Death by Evan

ಕೀಳರಿಮೆ

ನನ್ನೊಳಗೆ ಒಂದು ಕತ್ತಲಿದೆ;
ಹೃದಯದ ಬೆಳಕಿನ ದೀಪದ ಕೆಳಗಿದೆ ಆ ಕತ್ತಲ ದ್ವೀಪ;
ಅಲ್ಲಿ ತುಂಬಾ ಕತ್ತಲಿದೆ;
ಅಲ್ಲಿ ತುಂಬಾ ಚಳಿಯಿದೆ;
ಅದು ನೋಡಲು ಬಲು ಭಯಂಕರವಾಗಿದೆ;
ನನ್ನಲ್ಲಿ ಭಯ ಹುಟ್ಟಿಸುತ್ತೆ;
ನನ್ನಲ್ಲಿ ಜಿಗುಪ್ಸೆ ಹುಟ್ಟಿಸುತ್ತೆ;

ಕಣ್ಣು ಮುಚ್ಚಿ ಮಲಗಿ
ಭರವಸೆಯ ಕನದ ಕಂಡೆ;
ಶುಭಹಾರೈಕೆ,
ಶುಭ ಆಕಾಂಕ್ಷೆಗಳ ಬಯಸಿದೆ ನನ್ನವರಿಂದ;
ಕನಸ ಕೈಗೂಡುವ ಆ ದಿನಕ್ಕೆ
ಹಂಬಲಿಸಿದೆ ತವಕದಿಂದ;
ನನ್ನೊಳ ಕೀಳರಿಮೆ ಜಾರುವುದೆಂಬ ಬಯಕೆಯಿಂದ;

ಆ ಕತ್ತಲು,
ಕಾರ್ಗತ್ತಲು ಹೆದರಿಸುತ್ತಲ್ಲೇ ಇತ್ತು ನನ್ನನ್ನು;
ನನ್ನ ಆವರಿಸುತ್ತಿತ್ತು
ತನ್ನ ಭೀಭಿತ್ಸ ರೂಪ ತೋರಿ
ನನ್ನಲ್ಲಿ ಅಳುವಲ್ಲದೆ,
ಏನನ್ನೂ ಮಾಡಲಾರದವನಾದೆ;
ಅದರ ಹೃದಯ ಕರಗಲಿಲ್ಲ;
ನನ್ನನ್ನು ಆವರಿಸಿತು
ನನ್ನ ದೇಹವನ್ನು ಸುಡತೊಡಗಿತು
ನನ್ನ ಆತ್ಮ ಜರ್ಜರಿತವಾಯಿತು
ನಾನು ಶವವಾದೆ;
ನನ್ನ ಅಸ್ಥಿಪಂಜರ ಭೂದಿಯಾಯಿತು
ನಾನು ಇತಿಹಾಸವಾದೆ.

ಪ್ರೇರಣೆ: "Cold Dark Corner" by Blake Duffy.

ಮೂದಲಿಕೆ

ರಾತ್ರಿಯ ಕತ್ತಲಲ್ಲಿ ಮಲಗಿದ್ದೆ
ಕಣ್ಣಲ್ಲಿ ನೀರು ಹನಿಯುತ್ತಿತ್ತು
ಮನದಲ್ಲಿ ನೂರು ನೋವು ಕಥೆ ಹೇಳುತ್ತಿತ್ತು
ಆಗಸದಲ್ಲಿ ನೂರು ಹಕ್ಕಿಗಳು ಹಾರುತ್ತಿತ್ತು
ಮೋಡಗಳು ತಂಗಾಳಿಯ ಹೊತ್ತು ಎತ್ತಲೋ ತೇಲಿ ಹೋಗುತ್ತಿತ್ತು
ರಾತ್ರಿ ಕತ್ತಲಲ್ಲಿ ನಕ್ಷತ್ರಗಳಿ ಪಿಳಿಪಿಳಿ ನಗುತ್ತಿತ್ತು
ನಾನು ಎಲ್ಲೋ ಕಳೆದುಹೋಗಿದ್ದೆ
ಕಾಣದ ಕೈಯಾಟಕ್ಕೆ ಜೀವನ ಸೋತಿತ್ತು
ಬಯಸಿದ ಯಾವುದೂ ಫಲಿಸದೆ
ಮನದಲ್ಲಿ ಯಾತನೆ ನರಳುತ್ತಿತ್ತು
ಕಣ್ಣಿಗೆ ನಿದ್ದೆ ಹತ್ತಿತ್ತು
ಆಗಸದಲ್ಲಿ ನಗುಮುಖದ ಚಂದ್ರ ಮೂಡುತ್ತಿದ್ದ
ನೋವು ಮಾತ್ರ ಮೂದಲಿಸುತ್ತಿತ್ತು

ಕಂದ ನೀನಿಲ್ಲದ ಮನೆಯಲ್ಲಿ....

ಕಂದ ನೀನಿಲ್ಲದೆ ಮನೆಯಲ್ಲಿ ಬೇಸರವಾಗಿದೆ ನನಗೆ
ಮನೆಯಲ್ಲಿ ಸ್ಮಶಾನ ಮೌನ ತುಂಬಿ ತುಳುಕಿದೆ ನೀನಿಲ್ಲದೆ
ದಿನವೂ ನಿನ್ನ ಚೈತನ್ಯದ ಚೇಷ್ಟೆ ಕಂಡ ನನಗೆ
ಇಂದು ಮನೆಗೆ ಬಂದೊಡನೆ ವಿಷಾದ ಆವರಿಸಿದೆ ನೀನಿಲ್ಲದೆ||

ಸದಾ ಚಟ-ಪಟ ಮಾತನಾಡುತ್ತಾ ಅಮ್ಮನನ್ನು ಗೋಳು ಹೊಯ್ಕೊಳ್ಳುವ ನಿನ್ನ ಪರಿ
ಇಂದೇಕೆ ಕಾಣದಾಗಿದೆ, ಬಲು ಯೋಚಿಸುತ್ತೇನೆ ನಿನ್ನ ಬಗ್ಗೆ
ರಜೆ ಬಂದಿದೆ ನಿಜವ ಅರಿವಿದೆ, ಆದರೂ ಈ ರೀತಿಯ ಯೋಚನೆ ಸರಿ!
ನಿನ್ನ ಮೇಲಿನ ವ್ಯಾಮೋಹವಿದಲ್ಲ, ಇದು ವಾತ್ಸಲ್ಯದ ಬುಗ್ಗೆ||

ಸದಾ ಯಂತ್ರಗಳ ಯೋಚನೆ ನಿನಗೆ, ನನಗಂತೂ ಆಶ್ಚರ್ಯ!
ಎಲ್ಲಿಂದ ಬಂತು ಈ ಪರಿಯ ಯಂತ್ರಗಳ ಆಸೆ?
ಕಳ್ಳ ಕೃಷ್ಣನಂತೆ ಬಂದು ಮೊಸರು ಕುಡಿಯುವೆ
ಬೇಸರಿಸದೆ ಎಷ್ಟೊಂದು ಆಟ ಆಡುವೆ ನಿರಂತರವಾಗಿ||

ನಿಂತ ಟ್ರೈನ್ ಇಂಜಿನ್,ನಿಂತ ಗಡಿಯಾರ,ದಿಕ್ಸೂಚಿ
ಸೈಕಲ್ ಡೈನಮೋ, ನಿನ್ನ ಸ್ಪರ್ಶಕ್ಕೆ ಕಾಯುತ್ತಿರುವ ಜೈಲೋಪೋನ್
ಕಾರ್ಟೂನ್ ನೆಟ್ ವರ್ಕ್, ಪೋಗೋ ಗಳ ಹಾವಳಿಯಿಲ್ಲ
ನಿನ್ನ ಕೈತಾಕದೆ ರಿಮೋಟ್ ಧೂಳು ಹಿಡಿಯುತ್ತಿವೆ
ಬಂದು ಬಿಡು ಕಂದ ರಜಾ ಮುಗಿಸಿಕೊಂಡು ಬೇಗ||

ಬೇಡ ಬೇಡ ಈ ಆವೇಗ

ನಾಗ ನಾಗ ಏಕೋ ಈ ಆವೇಗ
ಸುಮ್ಮನೆ ನೆಮ್ಮದಿಯ ಕಳೆದುಕೊಳ್ಳುವೀ ಏಕೆ ನಾಗ?

ನಿನ್ನ ಮನದ ಕೊಳೆಯನು ತೊಳೆದು ಕೋ
ಪರರ ಮೇಲಿನ ಕೊಳೆಯ ಬಗ್ಗೆ ಏಕೆ ಚಿಂತೆ ||

ನಿನ್ನ ಮನದ ನೆಮ್ಮದಿ ನಿನ್ನ ಕೈಯಲ್ಲೇ ಇದೆ
ನಿನ್ನ ನೆಮ್ಮದಿ ಬೇರೆಯವರು ಕಾರಣರಲ್ಲ ಎಂಬುದ ತಿಳಿಯುವುದರಲ್ಲಿದೆ||

ದ್ವೇಷ ಬೀಜವ ಮನದಲ್ಲಿ ಬಿತ್ತಿರುವೆ ಏಕೆ?
ನಮ್ಮೊಳ ದ್ವೇಷ ಪರರ ಸುಡದೆ ನಮ್ಮನೇ ಸುಡುವುದು ಜೋಕೆ!||

ಕೆಲಸದಲ್ಲಿ ನೀ ಮೊದಲಿಗ
ದ್ವೇಷದ ಜ್ವಾಲಾಗ್ನಿಗೆ ಬಲಿಯಾಗ ಬೇಡ ಮಗ||

ದ್ವೇಷವೇ ಉಸಿರಾಗಿಸಿಕೊಂಡವರು ಯಾರೂ ಉದ್ಧಾರವಾಗಿಲ್ಲ
ಮನಸ್ಸಿನ ನೆಮ್ಮದಿಯಲ್ಲೇ ನಮ್ಮ ಉದ್ಧಾರ ತಿಳಿ ಮಲ್ಲ||

ನಿಲ್ಲು ನಿಲ್ಲು ನಾಗ
ದ್ವೇಷದ ಸಂಗ ಬೇಡ ನಾಗ||

(ನನ್ನ ಆತ್ಮೀಯ ಗೆಳೆಯ ನನ್ನ ಮೇಲಿನ ದ್ವೇಷದಿಂದ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿಕೊಂಡಿದ್ದಾನೆ. ಅವನ ಮನಸ್ಸಿಗೆ ನೆಮ್ಮದಿ,ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ)

ನೋವೆ ನೋವೆ ಏಕೆ ಬಂದೆ?

ನೋವೆ ನೋವೆ ಏಕೆ ಬಂದೆ?
ಮನದಲಿ ನರಳುತ ಏಕೆ ನಿಂದೆ?||

ಪ್ರೀತಿಯು ಹೋಯಿತು ಅದಕೆ ಬಂದೆ
ಕಣ್ಣೀರ ಹರಿಸಲು ಮನದಲಿ ನಿಂದೆ||

ಪ್ರೀತಿಯು ಎಲ್ಲಿಂದ ಬಂತು?
ಪ್ರೀತಿಯು ಎಲ್ಲಿಗೆ ಹೋಯಿತು?

ಅದು ನಿನ್ನಲ್ಲೇ ಇತ್ತು
ನಿನ್ನಲ್ಲೇ ಕಳೆದು ಹೋಯಿತು||

ಆಗ ಇತ್ತು, ಈಗ ಇಲ್ಲ
ಏನಿದರ ಮರ್ಮ?
ಈ ನರಳಾಟ, ಈ ಹುಡುಕಾಟ
ಏನಿದು ನನ್ನ ಕರ್ಮ?||

ಸುಮ್ಮನೆ ನೋಡು

ನನ್ನ ಕಣ್ಣುಗಳನ್ನೇ ನೊಡು
ಹೇಳು ನನಗೆ ನಿನಗೆ ಏನು ಕಾಣುಸುವುದೆಂದು
ಅದರಲ್ಲಿ ಸಂತೋಷವಿಲ್ಲ;
ಅದರಲ್ಲಿ ಅಂದವಿಲ್ಲ;

ನನ್ನ ನಟನೆಯಿಂದ
ನೋಡುಗರಿಗೆ ನಾನು ಸಂತೋಷವಾಗಿ ಕಾಣಿಸುತ್ತೇನೆ;
ಅದರಿಂದ ನನ್ನಲ್ಲೇನೂ ತೊಂದರೆಯಿಲ್ಲ
ಆದರೆ ನೋಡು ನನ್ನ ಕಣ್ಣೊಳಗೆ;

ನನ್ನ ಕಣ್ಣೊಳಗೆ ನೋಡು
ಅದರಲ್ಲಿ ಎಲ್ಲವೂ ಕಾಣಿಸುವುದು
ಎಲ್ಲವನ್ನೂ ಅದರೊಳಗೆ ಹಿಡಿದಿರುವೆ
ಅಲ್ಲಿ ನೀನು ನನ್ನನ್ನು ಕಾಣುವೆ;

ಪ್ರೇರಣೆ: "Just Look" By Bryan Rankin.

ನೀ ಕೊಟ್ಟ ಪ್ರೀತಿ ಮಳೆಯಲ್ಲಿ ಕೊಚ್ಚಿಹೋಯಿತು

ನೀ ಕೊಟ್ಟ ಪ್ರೀತಿ ಮಳೆಯಲ್ಲಿ  ಕೊಚ್ಚಿಹೋಯಿತು
ಹೃದಯದಲಿ ತುಂಬಿದ ಪ್ರೀತಿ ನೋವಾಗಿ ಬದಲಾಯಿತು

ಕನ್ನಡಿಯೊಳಗಿನ ನನ್ನ ಮುಖ ನಿನ್ನ ನೆನಪ ತರುವುದು
ಅದೇ ನೀ ನುಡಿದ ಸುಳ್ಳು ನೀ ನಿಜವೆಂದುಲಿದುದು

ನನ್ನ ಕಣ್ಣಾಲಿಗಳಲಿ ತುಂಬಿದ ನೀರು ನೀ ಕಾಣುವೆ ನೋಡು
ನೀ ಕಾಣುವ ಮುಖದ ಮೇಲಿನ ಗೆರೆಗಳು ಮನದ ಆಳುವೆ ನೋಡು

ನೀ ಕೊಟ್ಟ ಪ್ರೀತಿ ಮಳೆಯಲ್ಲಿ  ಕೊಚ್ಚಿಹೋಯಿತು
ಹೃದಯದಲಿ ತುಂಬಿದ ಪ್ರೀತಿ ನೋವಾಗಿ ಬದಲಾಯಿತು

ಪ್ರೇರಣೆ:A Sad Song by Ten Years After

ದುಃಖ

iಬಳಲಿದ ಕಂಗಳು
ಸೊರಗಿದ ಹೃದಯ
ಸಾಗಲಾರದ ದಿನಗಳು
ನೀನು ದೂರವಾದ ಮೇಲೆ||

ಅಳುವ ದಿನ
ನರಳಿಸುವ ನಾಳೆ
ದುಃಖದ ಮಳೆ ಸುರಿಸುವ ರಾತ್ರಿ
ಕಣ್ಣೀರ ನದಿ
ನೀನು ದೂರವಾದ ಮೇಲೆ||

ದುಃಖವೇ ದೂರಾಗು
ದುಃಖವೇ ಅಂತ್ಯವಾಗು
ದುಃಖವೇ ನಾನು
ಎಂದೂ ಮುಗಿಯಲಾರದು
ನೀನು ದೂರವಾದ ಮೇಲೆ||


ಪ್ರೇರಣೆ: "Sad" by Ray Hansell

ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು

ಬಾಸು,ಬಾಸು ನಮ್ಮ ವಾಸು
ಆಗಬೇಡ ನೀನು ರಕ್ತ ಪೀಪಾಸು
ಕೊಡಬೇಡ ಮಳ್ಳಿ ಮಳ್ಳಿಯಂತ ಪೋಸು
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು

ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು
ದಿನವೂ ನರಳೂತ್ತಿದ್ದೇನೆ ನಿಮ್ಮ ಅಡಿಯಲ್ಲಿ
ಕಣ್ಣೂ ಬತ್ತಿ ಹೋಗಿದೆ ಸುರಿಸಲಾರದೆ ಕಣ್ಣೀರು||

ದಿನವೂ ನಡೆಯುತ್ತಿದೆ ದೌರ್ಜನ್ಯ ತಡೆಯಿಲ್ಲದೆ
ಮನಸು ಮುದುಡುತಿದೆ ಆಸರೆ ಸಿಗಲಾರದೆ
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು||

ದಿನವೂ ನರಳುತ್ತಿದ್ದೇವೆ ಬೈಗುಳ ಕೇಳಿ ಕೇಳಿ
ಉತ್ಪಾದನೆಯೇ ಪ್ರಗತಿ ನಮ್ಮ ಕಣ್ಣೀರ ನದಿಯ ಮೇಲೆ
ನಿಮ್ಮ ಸವಾರಿ ನಮ ಮೃಧು ಮನಗಳ ಮೇಲೆ
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು||

ಬೆಳೆಯುತಿದೆ ಕಟ್ಟಡಗಳು ವರ್ಷ ವರ್ಷವೂ
ಮೇಲೇರುವವರು ಏರುತ್ತಲೇ ಇದ್ದಾರೆ
ನಾವೋ ಇದ್ದಲ್ಲಿಯೇ ಇದ್ದೇವೆ
ನಿಂತು ಸೊರಗುತ್ತಿದ್ದೇವೆ ಏಳಿಗೆ ಕಾಣದೆ||

ಬಳಲಿದ್ದೇವೆ ದಿನವೂ ಹೊತ್ತು ಹೊತ್ತು ನಿಮ್ಮ ಅಡ್ಡಪಲ್ಲಕ್ಕಿ
ಬಳಲಿ ಬೆಂಡಾಗಿದ್ದೇವೆ ತೋರಿ ತೋರಿ ನಮ್ಮ ಅವ್ಯವಸ್ಥೆ
ನಿಮ್ಮ ಎಳಿಗೆಗೆ ನಮ್ಮ ಬಳಸಿದಿರಿ ಈಗ ನಾವು ಬೇಕಿಲ್ಲ ನಿಮಗೆ
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು||

ಹೇಳಿದರೂ ಮನದ ನೋವು
ಕೇಳಿಸದೇ ನಮ್ಮ ಮಾತು
ಏಕೆ ನಮ್ಮನ್ನು ಕಡೆಗಣಿಸುತಿರುವಿರಿ?
ಹೊಟ್ಟೆ ತುಂಬಿದವಗೆ
ಹಸಿದವರ ನೋವು ಅರ್ಥವಾಗದು ಬಾಸು||

ಮುಖವಾಡ

ಒಮ್ಮೆ ನಾನು ಒಂಟಿಯಾಗಿದ್ದೆ, ದುಃಖ ಜೊತೆಯಾಯಿತು;
ಸಮಾಧಾನ ಪಡಿಸುವ ಯಾವ ಹೃದಯವೂ ಬಳಿ ಸುಳಿಯಲಿಲ್ಲ;
ಯಾವಾಗಲೂ ನಗುವ ಮುಖವಾಡ ತೊಟ್ಟೆ ಸತ್ಯ ಮರೆಮಾಚಲು;
ಹೃದಯ ಭಾವನೆಗಳ ಬಚ್ಚಿಟ್ಟೆ ಸಟೆಯ ತೆರೆಯ ಹಿಂದೆ||

ಬಹು ದಿನಗಳಿಂದ ನನಗೂ ಗೆಳೆಯರಿದ್ದರು
ನಾನೂ ಒಬ್ಬನಾಗಿದ್ದೆ ಮುಖವಾಡದ ಸಹಾಯದಿಂದ;
ಆವರಿಸಿದೆ ಮನದಾಳದಲ್ಲಿ ಶ್ಯೂನತೆಯ ಭಾವ
ನನ್ನತನ ಎಲ್ಲೋ ಕಳೆದುಹೋದ ಶೋಕಭಾವ ||

ಕಗ್ಗತ್ತಲ ರಾತ್ರಿಯಲ್ಲಿ ಅಳುವ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ
ಅದಕ್ಕಾಗಿಯೇ ಒಂದು ಮುಖವಾಡ ತೊಟ್ಟೆ ಸುಳ್ಳುಗಳ ಮರೆಮಾಚಲು;
ಬೆಳ್ಳಂಬೆಳಗಿನಲ್ಲೂ ನನ್ನ ಮುಖದಲ್ಲಿ, ನನ್ನಲ್ಲಿ ಅಡಗಿದ ನೋವ ಯಾರೂ ನೋಡಲಿಲ್ಲ;
ಅದಕ್ಕಾಗಿಯೇ ಸದಾ ನಗುವ ಮುಖವಾಡ ತೊಟ್ಟೆ ನೋವ ಮರೆಮಾಚಲು;

ನನ್ನೆಲ್ಲಾ ನಗುವ ದೋಣಿಗೆ ನನ್ನ ಕಣ್ಣೀರಿನ ನದಿ ಜೊತೆಯಾಗಿದೆ
ನನ್ನೆಲ್ಲ ಸಕಲ ವೈಭೋಗಗಳ ಹಿಂದೆ ಅವ್ಯಕ್ತ ಭಯವಿದೆ;
ಎಲ್ಲರೂ ನೋಡುವ, ಭಾವಿಸುವ ಹಾಗೆ ನಾನಿಲ್ಲ
ಅದೆಲ್ಲಾ ನಾ ತೊಟ್ಟ ಮುಖವಾಡದ ಪ್ರತಿಫಲ||

ದಿನವೂ ಪ್ರತಿದಿನವೂ
ನಿಧಾನವಾಗಿ ನಾನು ಸಾಯುತ್ತಿದ್ದೇನೆ;
ಮುಂದೆ ಸಾಗಲೂ ನನ್ನಿಂದ ಸಾಧ್ಯವಿಲ್ಲ
ನಾನು ಏನನ್ನೋ ಕಳೆದುಕೊಂಡಿದ್ದೇನೆ||

ಇದುವರೆಗೂ ನಾನು ಹುಡುಕುತ್ತಲೇ ಇದ್ದೇನೆ
ಅದು ಸಿಕ್ಕರೆ ನಾನು ಅಳುವ ನಿಲ್ಲಿಸಬಹುದೆಂದು;
ಯಾರಾದರೂ ಬಂದು ನನ್ನ ಕಣ್ಣೀರನ್ನು ಒರೆಸುವರೆಂದು;
ಯಾರಾದರೂ ಬಂದು ನನ್ನ ಭಯಹೋಗಲಾಡಿಸುವರೆಂದು||

ಅಲ್ಲಿಯವರೆಗೂ ನಾನು ನಗುತ್ತಲೇ ಇರುತ್ತೇನೆ
ನಗುವ ಮುಖವಾಡದ ಹಿಂದೆ ನನ್ನೆಲ್ಲಾ ನೋವುಗಳ ಮರೆಮಾಚಿ;
ಭರವಸೆ ಇದೆ ಒಮ್ಮೆಯಾದರೂ ಸಹಜವಾಗಿ ನಗುತ್ತೇನೆಂದು
ಅಲ್ಲಿಯವರೆಗೂ ನಾನಿಲ್ಲಿ ಇರುತ್ತೇನೆ ಕಾಯುತ್ತಾ.........||

ಪ್ರೇರಣೆ: 'Mask' by Potsim And Pikachu

ಮಾತು-ಮೌನ

ಪ್ರತಿದಿನವೂ ನಾವಿಲ್ಲಿ ಬದುಕಬೇಕು
ಏಕೆ? ಎಂಬ ಪ್ರಶ್ನೆ ಮನದಲ್ಲಿ ಮೂಡದಹಾಗೆ
ಮನದಲ್ಲಿ ನೂರು ಯೋಚನೆ,ಯಾಚನೆ
ನೋವು,ಸಂತಸ,ಗುರಿ ನಡೆಸುವುದು ಮುಂದಕ್ಕೆ||

ಒಂದು ಮಾತು ಹೆಚ್ಚು,ಒಂದು ಮಾತು ಕಡಿಮೆ
ನೂರು ಭಾವನೆಗಳ ಹುಟ್ಟುಹಾಕುವುದು
ನೋವು ಸಂತಸವನಾಳುವುದೋ?
ಸಂತಸ ನೋವನಾಳುವುದೋ?
ನೋವು-ಸಂತಸ ಬದುಕೆಂಬ ನಾಣ್ಯದ ಎರಡು ಮುಖಗಳು||

ಮಾತು ಮಾತು ಮಾತು ಮನದ ಭಾವಗಳ ಹೊರಹಾಕುವ ಸಾಧನ
ಮೌನ ಮೌನ ಮೌನ ನಮ್ಮೊಳಗಿನ ಭಾವಗಳ ಬಚ್ಚಿಟ್ಟುಕೊಳ್ಳುವ ಸಾಹಸ
ಮಾತು-ಮೌನ ನಮ್ಮ ವ್ಯಕ್ತಿತ್ವದ ಪ್ರಶಸ್ತಿ ಪತ್ರ
ಯಾವುದೂ ಹೆಚ್ಚಾಗಬಾರದು,ಕಡಿಮೆಯಾಗಬಾರದು
ಸಮಭಾವ,ಸಮಚಿತ್ತ,ಸಮಹಿತ ಸಮ್ಮೇಳನ ಬದುಕು ಭಾವಮೇಳ||

ಏಕೆ ಈ ಮುನಿಸು ಹೇಳು ಗೆಳತಿ?

ಏಕೆ ಈ ಮುನಿಸು  ಹೇಳು ಗೆಳತಿ?
ಹತ್ತಿರ ಸೆಳೆದರೂ ಏಕೆ ದೂರ ಹಾರುತಿ?

ಕಣ್ಣು ಕಣ್ಣು ಬೆರೆತರೂ
ಮನಸು ಮನಸ ಸೆಳೆದರೂ ಗೆಳತಿ
ದೂರ ತಳ್ಳುವೆ ಏಕೆ?
ಈ ಹುಸಿ ಕೋಪ ಇಂದೇಕೋ? ಗೆಳತಿ||

ನಾ ಮೌನ ಮುನಿ ತಿಳಿದಿದೆ
ಅದೇ ನಿನ್ನಲ್ಲಿ ಮುನಿಸು ತಂದಿದೆ ಗೆಳತಿ
ಮನವ ಹಗುರಗೊಳಿಸು,ಸಂತೈಸಿಕೋ
ಮನದಲಿ ಸ್ಪೂರ್ತಿ,ಶಾಂತಿ ನೆಲೆಗೊಳಿಸಿಕೋ ಗೆಳತಿ||

ಇದೇ ಕೊನೆಯಲ್ಲ, ಮೊದಲೂ ಅಲ್ಲ
ಮಧುರ ದಿನಗಳು ಕಾದಿವೆ ಗೆಳತಿ
ಪ್ರೀತಿಯ ಇನಿದನಿಗೆ ಸೋಲೋಣ
ಹೊಸ ಪ್ರೀತಿಯ ಪುಟ ತೆರೆಯೋಣ ಬಾ ಗೆಳತಿ||

ಬಿಡು ಮುನಿಸು
ಕೊಡು ಮನಸು  ಗೆಳತಿ.....

ನಮ್ಮ ಉತ್ಕಟ ವ್ಯಥೆ

ಸಮುದ್ರದ ಮೇಲೆ ಸೂರ್ಯನುದಿಸುವಾಗ
ಹೊರಹೊಮ್ಮುವ ಮಂಜಿನಂತೆ

ನೀರು ಬಿಸಿಯಾಗುತ್ತಿದ್ದಂತೆಯೇ
ಮಾಯವಾಗುವುದು
ನಮ್ಮ ಮಗುವಿನಂತೆ
ನಮ್ಮಯ ಉತ್ಕಟವಾದ ವ್ಯಥೆ

ಪ್ರೇರಣೆ:  'Great our sorrow' by Heather Burns

ಏಕಾಂಗಿ

ಕಗ್ಗತ್ತಲ ರಾತ್ರಿಗಳಲ್ಲಿ ನಡೆದಾಡಿದ್ದೇನೆ ಏಕಾಂಗಿಯಾಗಿ;
ಜೀವನ ಯಾತ್ರೆಯ ಕೊನೆಗೊಳಿಸಿಕೊಳ್ಳಲು ಪ್ರಾರ್ಥಿಸಿದ್ದೇನೆ ಏಕಾಂಗಿಯಾಗಿ;
ನಾನು ಏಕಾಂಗಿ, ಒಂಟಿ ಜೀವ ನನ್ನದು;
ಏಕಾಂಗಿ ಬದುಕು ನನ್ನದು, ಈ ಜೀವನ ಚಕ್ರದಲ್ಲಿ;

ಒಂಟಿಯಾಗಿಯೇ ತಿನ್ನುವೆ;
ಒಂಟಿಯಾಗಿಯೇ ಮಲಗಿವೆ;
ಒಂಟಿಯಾಗಿಯೇ ಓಡಾಡುವೆ;
ಒಂಟಿಯಾಗಿಯೇ ಓಡುವೆ;
ಒಂಟಿಯಾಗಿಯೇ ಅಳುವೆ;
ಒಂಟಿಯಾಗಿಯೇ ಜೋರಾಗಿ ಕಿರುಚುವೆ;

ಸಣ್ಣ ತೂತುಗೂಡಲ್ಲಿ ಬಿದ್ದಿರುವೆ ಏಕಾಂಗಿಯಾಗಿ;
ಏಕಾಂಗಿ ನಾನು, ಪ್ರೀತಿಯಿಲ್ಲ ತೋರ್ಪಡಿಸಲು;
ಮನೆಯಲ್ಲಿ ಒಂಟಿ, ಏಕಾಂಗಿ ಎಲ್ಲೆಡೆಯಲ್ಲೂ;
ಏಕಾಂಗಿ ನಾನು , ಜೀವನದ ಕೊನೆಯವರೆಗೂ.....

ಪ್ರೇರಣೆ:  'Alone' by Arik Fletcher.

ಮನದ ಹಠ

ದಿನವೂ ಕೈಕಟ್ಟಿ ನಿಲ್ಲುವೆ;
ಮನವಿಟ್ಟು ಕಿವಿಗೊಟ್ಟು ಕೇಳುವೆ;
ಮನದಲ್ಲಿ ನೂರು ಜರಡಿಗಳಿವೆ;
ಪ್ರತಿಬಾರಿ ಕೇಳಿಸಿಕೊಳ್ಳುವಾಗಲೂ
ಮನಕ್ಕೆ ತೆಗೆದುಕೊಳ್ಳುವೆ
ಬೇಡದ ಕಸವನ್ನೆಲ್ಲಾ ದೂರಕ್ಕೆ ತಳ್ಳುವೆ;
ಕಾಲ ಬದಲಾಗುತ್ತದೆಂಬ ಆಶಾಕಿರಣ ಮನದಲ್ಲಿ ನೆಲೆಗೊಂಡಿದೆ;
ಎಲ್ಲವನ್ನೂ ಸಹಿಸಿಕೊಳ್ಳುವೆ;
ಎಲ್ಲಾ ಅವಮಾನಗಳನ್ನೂ ಸಹಿಸುವೆ;
ಕಾಲಕಸದಂತೆ ಕಂಡವರ ಎದುರು ನಿಲ್ಲಬೇಕಿದೆ ತಲೆಯೆತ್ತಿ;
ಮಾತು,ಕುಹಕ ನಗು;
ಹಾಸ್ಯ,ಅಪಹಾಸ್ಯ;
ಠೀಕೆ,ಪಕ್ಷಪಾತ;
ಎಲ್ಲಾ ಮೋಸದಾಟ ನಡೆಯಲಿ ಬಿಡು;
ಎದೆಗುಂದ ಬೇಡ;
ತಾಳ್ಮೆ ಇರಲಿ;
ಪ್ರೀತಿ ಇರಲಿ;
ಜಗದ ಗೆಲುವು ನಮ್ಮದೇ......

ಕಣ್ಣೀರೆ.ಕಣ್ಣೀರೆ ದೂರ ಹೋಗು

ಕಣ್ಣೀರೆ.ಕಣ್ಣೀರೆ ದೂರ ಹೋಗು
ಏಕೆ ಬರುವೆಯೋ ಪ್ರತಿದಿನವೂ.....?
ನೀ ಬಂದು ನನ್ನ ನೋವುಗಳ ನೆನಪಿಸುವೆ;
ನೀ ಬಂದು ನನ್ನ ಹಳೆಯದೆಲ್ಲವ ತೆರೆದಿಡುವೆ;
ಏಕೆ ನೀನು ದೂರ ಹೋಗಲಾರೆ?
ನಿನ್ನಂದ ಸಂತಸ ಹತ್ತಿರ ಬಾರದು||

ಕಣ್ಣೀರು,ಕಣ್ಣೀರು ನದಿಯಾಗಿ ಹರಿಯುತಿದೆ;
ಹೇಳುತಿರುವೆ ಪುಟ್ಟ ಹೆಣ್ಣು ಮಗುವಿನ ನೋವಿನ ಕಥೆ;
ನೆನಪುಗಳ ಜೇಡರಬಲೆ ಆಕೆಯ ಬಳಸಿದೆ;
ದೇವರಲ್ಲಿ ಮೊರೆಯಿಡುವುದೊಂದೇ ಆಕೆಗಿರುವುದು
ಬಳಲಿ ಬೆಂಡಾಗುವ ಮುಂಚೆ||

ದೇಹಕ್ಕಾದ ಗಾಯ ಮಾಯುವುದು;
ಆದರೆ ಮನಸ್ಸಿಗಾದ ಗಾಯ ಮಾಯುವುದೇ?
ಅವಳು ಬೆಳೆಯುತ್ತಿದ್ದಂತೆ ಭಾವನೆಗಳೂ ಕೆರಳುವುದಿಲ್ಲವೇ?

ಚಿಕ್ಕ ಹುಡುಗಿ;
ಜೀವನದಲ್ಲಿ ಭರವಸೆ ಕಳೆದುಕೊಂಡ ಹುಡುಗಿ;
ಕುಂಟುತ್ತಾ,ಕುಂಟುತ್ತಾ
ಜೀವನ ಪ್ರೀತಿ ಬೆಳೆಸಿಕೊಂಡವಳು||

ಕಣ್ಣೀರೆ,ಕಣ್ಣೀರೆ ಬಾ ಅವಳು ಜಗವ ಬಿಟ್ಟ ಮೇಲೆ
" ಚಿಕ್ಕವಳು, ಸುಖಿ" ಎಲ್ಲವೂ ತಿಳಿದಿದೆ;
ಕುಡುಕ ಅಪ್ಪನಿಂದ ಒದೆ ತಿಂದ ಚಿಕ್ಕ ಮಗು;
ಪ್ರೀತಿಸುವವರು ಯಾರೂ ಇಲ್ಲದವಳು;
ಇನ್ನು ಗೆಳೆಯರೋ ಮಾತನಾಡುವ ಹಾಗಿಲ್ಲ;
ಓ! ನನ್ನ ಜೀವನವೇ, ಏನೆಂದು ಹೇಳಲಿ!

ಪ್ರೇರಣೆ: Tears, Tears go Away by Stephany Manfull

ಕಾಯಕ

ಸಮಸ್ಯೆ ಹುಟ್ಟುಹಾಕುವುದು ಕಷ್ಟವೇನಲ್ಲ
ಸ್ವಾರ್ಥ ಸಾಧನೆಗೆ ಏನು ಬೇಕಾದರೂ ಮಾಡುವರಲ್ಲ
ಆಗುವುದಿಲ್ಲ, ಮಾಡುವುದಿಲ್ಲ ಎಂದೆನ್ನುವುದಕ್ಕೆ
ಕಾರಣಗಳು ಬೇಕಿಲ್ಲ ಏಕೆಂದರೆ ಕುಂಟು ನೆಪ,ಕಳ್ಳ ನೆವ ಇಲ್ಲಿ ನೂರಿವೆ;
ಹೆಜ್ಜೆ ಹೆಜ್ಜೆಗೂ ಸಿಗುವುದು ಕಾರಣ
ಕೆಲಸ ಮುಂದೂಡಲು......
ಇದೇ ನಡತೆ ಮೈಗೂಡಿದೆ ಹಲವರಿಗೆ
ಸೊರಗುತಿಗೆ ಕಾಯಕ,ಕಾಲ
ಕಾಯಕವೇ ಕೈಲಾಸ ವೆಂದವ ಬಿಕ್ಕಳಿಸುತ್ತಿದ್ದಾನೆ
ದುಡಿಮೆಯೇ ದೇವರೆಂದವ ಕಾಣೆಯಾಗಿದ್ದಾನೆ.

ನಿರಂತರ

ಹೇಳುವುದಕ್ಕೆ ನೂರು ಆದರ್ಶಗಳಿವೆ
ನೂರು ಆದರ್ಶ ಪುರುಷರಿದ್ದಾರೆ
ಕಥೆಗಳು ನೂರಿವೆ;
ಪುರಾಣ,ಸ್ಮೃತಿಗಳು ಹತ್ತು ಹಲವು
ಸರಿದಾರಿ ಎನಿಸಿಕೊಂಡವು ಇಲ್ಲಿ ನೂರು;
ಸಂಘರ್ಷ ಎಲ್ಲಿದೆ ದಿನವೂ
ಸಮತೋಲನ ಕಾಯ್ದುಕೊಳ್ಳಬೇಕು ಎಲ್ಲವೂ
ಸತ್ಯ-ಅಸತ್ಯ;
ಧರ್ಮ-ಅಧರ್ಮ;
ಒಳ್ಳೆಯದು-ಕೆಟ್ಟದು;
ಏಕತ್ವ ಸಾಧಿಸಲು ಹೆಣಗಾಟ ನಿರಂತರ;
ಏಕಮೇವಾದ್ವಿತೀಯವಲ್ಲದು ಎಲ್ಲಿದೆ?
ಒಂದೇ ಆಗಿಹೋದರೆ ಅದಕ್ಕೆ ಬೆಲೆ ಎಲ್ಲಿದೆ?
ಹಳೇ ಆದರ್ಶಗಳು ಸಾಯಲೇಬೇಕು;
ಹೊಸ ಆದರ್ಶಗಳು ಹುಟ್ಟಲೇಬೇಕು;
ಹುಟ್ಟು-ಸಾವು ನಿರಂತರ;

ವಿನಿಮಯ

ಸುಂದರವಾದುದನ್ನು ಈ ಬದುಕು ಮಾರಾಟಕಿಟ್ಟಿದೆ
ಭವ್ಯ,ಸುಂದರ ಹಾಗು ಆಪ್ಯಾಯಮಾನವಾದವುಗಳೆಲ್ಲವನ್ನೂ
ಹಿಮಾಲಯದ ತುತ್ತತುದಿಯಲ್ಲಿ ತೇಲುವ ನೀಲಿ ತರಂಗಗಳನ್ನು
ಸಿಡಿದೇಳುವ ಬೆಂಕಿಯ ಕಿಡಿಗಳ ಸಂಗೀತವನ್ನು
ಮುಗ್ಧ ಮಕ್ಕಳ ಮುಖದಲ್ಲಿ ಹೊಮ್ಮುವ ಮಂದಹಾಸ ಹಾಗು
ತಮ್ಮಲ್ಲೇ ಅಡಗಿಸಿಕೊಂಡಿರುವ ಆಶ್ಚರ್ಯದ ಪಾತ್ರೆಯನ್ನು||

ಸುಂದರವಾದುದನ್ನು ಈ ಬದುಕು ಮಾರಾಟಕಿಟ್ಟಿದೆ
ಸಂಗೀತದಂತ ಮೊನೆಯ ಬಂಗಾರವನ್ನು
ಮಳೆಯ ತಂಗಾಳಿಯ ಜೊತೆಗೆ ಶ್ರೀಗಂಧದ ಪರಿಮಳವನ್ನು
ಪ್ರೀತಿಸುವ ಆ ಕಂಗಳು ಹಾಗು ಹಿಡಿದಿರುವ ಆ ಕರಗಳನ್ನು
ನಮ್ಮೊಳಗೆ ಅಡಗಿ ಹೊಮ್ಮುವ ಚೈತನ್ಯದ ಬೆರಗನ್ನು
ರಾತ್ರಿಯ ನಕ್ಷತ್ರದಂತೆ ಹೊಳೆಯುವ ಮಹೋನ್ನತ ಚಿಂತನೆಗಳನ್ನು||

ಸುಂದರತೆಗಾಗಿ ನಿನ್ನದೆಲ್ಲವನ್ನೂ ಖರ್ಚುಮಾಡು
ಕೊಂಡುಕೋ ಮನಸಾರೆ ಎಂದೂ ಬೆಲೆ ಎಣಿಸದೆ
ಹಾಲ್ಗಡಲ ಶಾಂತಿಯ ಸಮಯಕ್ಕೆ
ಎಣಿಸು ಕಲಹದಿಂದ ಕಳೆದುಕೊಂಡದ್ದನ್ನು
ಉಸಿರಾಡು ಬ್ರಹ್ಮಾನಂದವ
ಕೊಡು ನಿನ್ನದೆಲ್ಲವನ್ನೂ.........ಸಾಧ್ಯವಾದರೆ.......

ಪ್ರೇರಣೆ: Barter by Sara Teasdale.

ದೇವರ ದುಡ್ಡು

ಕುಕ್ಕೆ ಸುಭ್ರಮಣ್ಯ;
ಶಿರಡಿ
ತಿರುಪತಿ
ಅನಂತ ಪದ್ಮನಾಭ ದೇವಸ್ಥಾನದ
ಬಂಗಾರ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಯೋಚನೆ
ಎಷ್ಟಾದರೂ ದೇವರ ದುಡ್ಡು ,ಸರ್ಕಾರದ ದುಡ್ಡು;

ಇಲ್ಲಿ ಜನಶೇವೆಯೇ ಜನಾರ್ಧನನ ಸೇವೆ
ಜನರ ಸೇವೆ ಮಾಡುವ ಅಗತ್ಯವೇ ಇಲ್ಲ;
ಏಕೆಂದರೆ ದೇವರೇ ಇಲ್ಲವೆಂದುಕೊಂಡಿದ್ದಾರೆ ಸರ್ಕಾರದವರು
ಜನಸೇವೆ ಮಾಡಿದರೂ ಅಷ್ಟೆ, ಬಿಟ್ಟರೂ ಅಷ್ಟೆ
ಎಷ್ಟಾದರೂ ಸರ್ಕಾರಿ ಕೆಲಸ, ದೇವರ ಕೆಲಸ.

ಸಿದ್ಧತೆ

ಎಲ್ಲಕ್ಕೂ ಸಿದ್ಧನಿದ್ದೇನೆ
ಮನಃಪೂರ್ವಕವಾಗಿ ಅನುಭವಿಸಲು
ನನ್ನ ತಪ್ಪುಗಳಿಗೆ
ನನ್ನದಲ್ಲದ ತಪ್ಪುಗಳಿಗೆ
ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ;

ಮನದ ಭಾವಗಳ ಹೊರಹಾಕಿದ್ದಕ್ಕೆ
ಸತ್ಯದ ನುಡಿಗಳ ಹೇಳಿದ್ದಕ್ಕೆ
ಅಸತ್ಯವನ್ನು ಸತ್ಯವಲ್ಲವೆಂದು ಹೇಳಿದ್ದಕ್ಕೆ
ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಕ್ಕೆ
ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ;

ಏರಿಕೆ

ನಿದ್ದೆಯಿಂದ ಎದ್ದೆ
ಮತ್ತೊಂದು ಹೊಸದಿನವೆಂದು;
ದಿನಪತ್ರಿಕೆಯ ಸುದ್ದಿ
ದಿಗಿಲು ಬರಿಸುವಂತೆ ಇತ್ತು;
ಬಂಗಾರದ ಬೆಲೆ ಅಂತರಿಕ್ಷದ
ಹಾದಿ ಹಿಡಿದಿತ್ತು;
ಡೀಸಲ್,ಪೆಟ್ರೋಲ್,ಗ್ಯಾಸ್
ದಿನ ಬಳಕೆಯ ಬೆಲೆಗಳ ಸಾಲು ಸಾಲು....
ನಾವೇನೂ ಕಡಿಮೆಯಿಲ್ಲವೆನ್ನುತ್ತಿತ್ತು;
ರುಪಾಯಿ ಹ್ಯಾಪ್ ಮೋರೆ ಹಾಕಿತ್ತು
ಗಗನಕ್ಕೇರುವ ಬದಲು
ಪಾತಾಳಕ್ಕಿಳಿಯುತ್ತಿತ್ತು ಡಾಲರ್ ಎದುರು;
ನಮ್ಮ ಆಳುವವರಿಗೆ ಬೆಲೆ ಏರಿಕೆಗೆ
ಮತ್ತೊಂದು ಕಾರಣ ಸಿಕ್ಕಿತ್ತು;

ಹೆಜ್ಜೆ

ಹಿಂತಿರುಗಿ ನೋಡಿದೆ ಮತ್ತೆ ಮತ್ತೆ
ನಡೆದು ಬಂದ ದಾರಿ;
ಪಡೆದ ನೋವು;
ನಗು ನಗುತಾ ಅನುಭವಿಸಿದೆ
ಚುಚ್ಚುಮಾತುಗಳ ಬೆಲೆಕೊಡದೆ ಹೆಜ್ಜೆ ಹೆಜ್ಜೆಗೆ.....

ಈಗಲೂ ಅದೇ ನೋವು
ಪಾತ್ರಗಳು ಮಾತ್ರ ಬದಲಾಗಿದೆಯಷ್ಟೆ
ಅದೇ ಹೆಜ್ಜೆಗಳು;
ಅದೇ ಹೆಜ್ಜೆ ಗುರುತುಗಳು;
ಮಾಸದ ನೆನಪುಗಳು ಹೆಜ್ಜೆ ಹೆಜ್ಜೆಗೆ.....

ಎಚ್ಚರ ಅಥವಾ ನಿದ್ರೆ

ಪ್ರತಿದಿನವೂ ಯೋಚಿಸುತ್ತೇನೆ
ಒಂದಷ್ಟು ಆಳ ಹಾಗು ಸುಂದರವಾದುದನ್ನು ನಿದ್ರೆಗೆ ಜಾರುವ ಮುನ್ನ;
ಮುಖದಲ್ಲಿ ಮಂದಹಾಸ ಹಾಗು
ಮನದಲ್ಲಿ ಶಕ್ತಿ ತುಂಬುವುದು ಮತ್ತೊಂದು ದಿನ ಸವೆಯಲು;
ಏಕೆ ಈ ದಿನ ತೆವಳುತ್ತಿದೆಯೋ
ಸಿಹಿಯಾಗಿರದಿದ್ದ ಮೇಲೆ......

ಪ್ರೇರಣೆ: Awake or Asleep by Neha.

ಬದುಕಿನ ಧ್ಯಾನ....

ನಾವು ಏಕೆ ಪ್ರಾರಂಭಿಸುತ್ತೇವೆ
ಕೊನೆಗೊಳಿಸುವ ಯೋಜನೆಯೇ ಇಲ್ಲದ ಮೇಲೆ;
ನಾವು ಏಕೆ ಪ್ರೀತಿಸುತ್ತೇವೆ
ನೋವಾಗುವುದು ನಮಗೆ ಬೇಕಿಲ್ಲದ ಮೇಲೆ;
ನಾವು ಏಕೆ ಬದುಕುತ್ತೇವೆ
ಕೊನೆಗೊಂದು ದಿನ ಸಾಯಲೇಬೇಕೆಲ್ಲ;
ನಾವು ಎಕೆ ನಗುತ್ತೇವೆ;
ಮನದೊಳಗೆ ನೋವಿನ ಜ್ವಾಲೆ ಸುಡುತ್ತಿರುವಾಗ;
ನಾವು ಏಕೆ ಮುಖ ಸಿಂಡರಿಸುತ್ತೇವೆ
..........

ಪ್ರೇರಣೆ: Pondering life,Why by Helen Grandison.

ಹೆಣ್ಣು-ಕಣ್ಣು

ಏಕೆ ಅಳುವೆ?
ಏಕೆ ಆಳುವೆ?
ಓ ನನ್ನ ಒಲವೇ!

ನಾನು ಹೆಣ್ಣು
ನಾನು ಹೆಣ್ಣು
ಸಂಸಾರದ ಕಣ್ಣು

ನಾನು ನೋವು
ನಾನು ನೋವು
ಭೂತಾಯಿಯ ಮಗಳು

ಅರ್ಥವಾಗಲಿಲ್ಲ ಮಾತು
ಅರ್ಥವಾಗಲಿಲ್ಲ ಮಾತು
ರಹಸ್ಯ ಮನದ ಮಾತು

ಕಾರಣವಿಲ್ಲದೆ ಈ ಕಣ್ಣೀರು
ಕಾರಣವಿಲ್ಲದೆ ಈ ಕಣ್ಣೀರು
ಸುಖದಲಿ ಬಾಳು

ಬೇಕಿಲ್ಲ ಅಳುವಿಗೆ ಕಾರಣ
ಬೇಕಿಲ್ಲ ಅಳುವಿಗೆ ಕಾರಣ
ಬದುಕಿನ ಹೂರಣ

ಅಪರಾಧ

ಮನದ ನೋವ ಹೇಳಬೇಡ ಗೆಳೆಯ ಹೇಳಬೇಡ
ಹಲವರಿಗೆ ನೋವಾಗುವುದು ಅಪರಾಧವದು ಗೆಳೆಯ
ಅಪರಾಧಿಯಾಗಬೇಡ ಗೆಳೆಯ||

ನಿನ್ನ ಮನದ ಭಾವಗಳೇನೇ ಇರಲಿ
ನಿನ್ನಲ್ಲೇ ಸಾಯಲಿಬಿಡು
ನಿನ್ನ ಮನದ ನೋವಿಗೆ ಬೆಲೆಯಿಲ್ಲ ಬಿಡು
ನಿನ್ನ ಮನದ ನೋವಿಗಿಂತ
ಹಲವರ ನೋವಿಗೆ ಬೆಲೆಕೊಡು ಗೆಳೆಯ||

ನಿನ್ನ ಮನದ ನೋವುಗಳಿಗೆ ನೂರು ಕಾರಣವಿರಲಿ
ನಿನ್ನಯ ಕಾರಣಗಳು ನಮಗೆ ಬೇಡ
ಮನದ ಭಾವಗಳ ಹತ್ತಿಕ್ಕಲಾರದವ ನೀನು
ನಿನ್ನ ಭಾವಗಳ ನೆಲೆಯ ಮೇಲೆ
ಹಲವರು ಕುಣಿದಾಡಲಿ ಬಿಡು ಗೆಳೆಯ||

ನೋವಾಗಿದೆ ಎಂದು ಹೇಳಬೇಡ ಗೆಳೆಯ
ನೋವ ಹೇಳಿಕೊಳ್ಳುವ ಹಕ್ಕು ನಿನಗಿಲ್ಲ ಬಿಡು
ನಿನ್ನ ಪ್ರಶ್ನಿಸುವ ಹಕ್ಕು ಹಲವರಿಗಿದೆ ಗೆಳೆಯ
ವಾಕ್ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ ಹಾಸ್ಯಾಸ್ಪದ ಗೆಳೆಯ||

ಪ್ರೀತಿ-ವಿಶ್ವಾಸ ನೆಲೆಕಳೆದು ಕೊಂಡಿದೆ
ಮಾತು, ಮನದ ನೋವುಗಳೆಲ್ಲಾ ಗಾಳಿಯಲಿ ತೂರಲಿ ಗೆಳೆಯ
ಠೀಕೆ-ಟಿಪ್ಪಣಿಗಳಿಗೆ ಮರುಗಬೇಡ ಗೆಳೆಯ
ಕಣ್ಣೀರ ಹನಿಗಳಿಗೆ ನೋವು ಕಡಿಮೆಮಾಡುವ ಶಕ್ತಿಯಿದೆ
ನೋವುಂಡವರ ಹೃದಯವ ತೊಳೆಯಲು ಸಿದ್ಧನಾಗು ಗೆಳೆಯ||

ಮೌನಿಯಾಗು,ಮೂಕನಾಗು
ಚೈತನ್ಯವಿಲ್ಲದ ಜೀವಶವವಾಗು
ಮನದ ನೋವು ಹೇಳಿಕೊಳ್ಳುವುದು ಅಪರಾಧ ಗೆಳೆಯ
ಅಪರಾಧಿಯಾಗಬೇಡ ಗೆಳೆಯ
ಮನದ ನೋವ ಹೇಳಬೇಡ ಗೆಳೆಯ
ಹೇಳಬೇಡ ಗೆಳೆಯ||

ಕೊಳಕು ಮಾತು

ಒಮ್ಮೆ ಬೀದಿಯಲ್ಲಿ ನಡೆವಾಗ,
ಅದೇ ಬಿಳಿಗೌನು ದರಿಸಿದ ಅವನು ಎದುರಾದ;
ಇದೇನು ಮೊದಲ ಭೇಟಿಯಲ್ಲ ನಮ್ಮದು;
ನಮ್ಮಿಬ್ಬರ ಮಾತುಕತೆಗೆ ಬಣ್ಣ ಬಳಿಯುವ ಅಗತ್ಯವಿಲ್ಲ
ಏಕೆಂದರೆ ಎರೆಚಿದ ಬಣ್ಣವೇ ಮಾಸುತ್ತಿದೆ,ಹೊಸತರ ಅಗತ್ಯವಿಲ್ಲ
ಅವನೋ ಸಭ್ಯತೆಯ ಸಾಕಾರ ಮೂರ್ತಿ-ಮುಖವಾಡ;
ನಾನೋ ವ್ಯಭಿಚಾರದ ನಿರ್ಮಲ ಪರಿಮಳ;
ಸಭ್ಯರಿಗೆ ನಮ್ಮ ಮಾತುಗಳು ಕೊಳಕೆನಿಸಬಹುದು
ಕೊಳಕು ಎಲ್ಲಿಲ್ಲ ಹೇಳಿ? ಎನ್ನುವುದೇ ನನ್ನ ಪ್ರಶ್ನೆ ಅವರಿಗೆ;
ನೇರಾನೇರ ಬಿಡುಗತ್ತಿಯ ನುಡಿಗಳು ನಮ್ಮವು
ಆಶ್ಚರ್ಯ, ನೋವಾಗಬಹುದು ಕೇಳುಗರಿಗೆ;
ಕಾಮ ಪಿಶಾಚಿ ಅವನು;
ಬಟ್ಟೆ ಬದಲಿಸಿದಂತೆ ಹೆಣ್ಣುಗಳ ಬದಲಿಸಿದವನು ಅವನು;
ಅವನು ನನ್ನೆದೆಯ ಮೊಲೆಗಳ ಮೇಲೆ ಕಣ್ಣಾಡಿಸಿ ನಕ್ಕು ಹೇಳಿದ
"ನಿನ್ನ ಮೊಲೆಗಳು ಅಂದ ಕಳೆದುಕೊಂಡಿವೆ,ಸೊರಗಿವೆ,ನಿಂತು ನಿಮಿರಲಾರದೆ ಜೋತಿವೆ,
ಆಸರೆ ಬಯಸಿವೆ, ಅವು ಯಾರಿಗೆ ಸುಖ ಕೊಟ್ಟಾವು?;
ಇನ್ನೆಷ್ಟು ದಿನ ರತಿಯ ಮುಖವಾಡ?
ಪೊಗರಿಳಿದ ಮೇಲೆ ಮೂಲೆ ಸೇರಲೇಬೇಕು
ಕೊಳಕು ನೆಲೆಗಳ ಬಿಟ್ಟು ಬಾ
ನನ್ನೊಡನೆ ಬಾ
ದೇವಾಲಯದಲ್ಲಿ ನೆಲೆಗೊಂಡು ನನ್ನೊಡನೆ ಶಾಂತಿಯ ಅರಸು ಬಾ..

ನಾನು ನಕ್ಕೆ ಅವನ ಮಾತುಗಳ ಕೇಳಿ
ನಾನಂದೆ "ಕೆಲಸವಾದ ಮೇಲೆ ಎಲ್ಲವೂ / ಎಲ್ಲರೂ ಸೊರಗಲೇಬೇಕು;
ಅದೇ ಜೀವನ ನಿಯಮ;
ನಿನ್ನದೂ ಅಷ್ಟೆ, ನೀನೇನೂ ಮನ್ಮಥನಲ್ಲ;
ಬೇರೆಯವರ ಅಂಕು-ಡೊಂಕುಗಳ ಮೇಲೇ ನಿನಗೆ ಕಣ್ಣು;
ಲೋಕದ ಜನರಿಗೆ ನಿನ್ನ ಡೊಂಕುಗಳ ಕಾಣುವ ಕಾಲ ಸನ್ನಿಹಿತವಾಗುತ್ತಿದೆ ಎಚ್ಚರ;
ಸಭ್ಯನಂತೆ ಮುಖವಾಡ ಹಾಕಿ ಎಷ್ಟು ದಿನ ನಿನಗೆ ನೀನೇ ಮೋಸ ಮಾಡಿಕೊಳ್ಳುವೆ?
ಕೊಳಕಿನ ನೆಲೆಯಲ್ಲಿ ಸ್ವತಂತ್ರವಾಗಿ ಉಸಿರಾಡಬಹುದು,ನಿರ್ಮಲವಾಗಿ ನರಳಬಹುದು
ಜೀವ ಹೋಗುವವರೆಗೂ.....
ನಾಟಕರಂಗದ ಮೇಲೆ ಬೇರೆಯವರು ಆಡಿಸಿದಂತೆ ಆಡಲು ನನ್ನಿಂದ ಸಾಧ್ಯವಿಲ್ಲ;
ನಿನ್ನ ಸ್ವಾರ್ಥದಲ್ಲಿ ನನ್ನ ಶಾಂತಿ ಅಡಗಿಲ್ಲ;
ಕ್ರೂರಮೃಗ ನೀನು, ನಿನ್ನಿಂದ ಮತ್ತೆ ಚಿತ್ರಹಿಂಸೆಗೆ ಒಳಗಾಗುವ ಆಸೆ ಮತ್ತೊಮ್ಮೆ ನನಗಿಲ್ಲ;
ನಿನ್ನ ರೀತಿ ಶಾಂತಿ ಅರಸುವುದು ಮೂರ್ಖತನ
ಸಭ್ಯತೆಯ ಮುಖವಾಡ ನನಗೆ ಬೇಕಿಲ್ಲ
ಮತ್ತೆ ಬಲಿಪಶುವಾಗಲಾರೆ ನಾ...
ಅವನ ಕಪಾಲಕ್ಕೆ ಹೊಡೆಯಬೇಕೆನಿಸಿತು ಆದರೆ ಮಾಡಲಿಲ್ಲ
ಜೋರಾಗಿ ನಕ್ಕೆ
ಅವನು ನಗಲಿಲ್ಲ
ತುಂತುರು ಮಳೆಯ ಹನಿಗೆ ದೇಹ ಒಡ್ಡುತ್ತಾ
ಹಿತ ಅನುಭವಿಸುತ್ತಾ ಮುನ್ನಡೆದೆ.

ನಿನ್ನ ಚೆಲುವ ಕಂಗಳಿಗೆ

ಎಂಥ ಚೆಲುವು
ಎಂಥ ಚೆಲುವು
ಓ ಹೆಣ್ಣೆ ನಿನ್ನ ಕಂಗಳು
ಮನವ ಸೆಳೆಯುವ ಬೆಳದಿಂಗಳು||

ಆವಲೋಕಕೋ ಸೆಳೆವುದು
ಮೋಡಿಮಾಡಿ ಎಳೆವುದು
ನೆಟ್ಟದೃಷ್ಟಿ ತೆಗೆಯದಂತೆ ಮಾಡುವುದು
ಎಂಥ ಚೆಲುವು ನಿನ್ನ ಕಂಗಳು||

ಆವ ಹೆಸರೋ ಈ ಸೌಂದರ್ಯಕೆ
ಕಾಮಾಕ್ಷಿ ಎನ್ನಲೋ?
ಮೀನಾಕ್ಷಿ ಎನ್ನಲೋ?
ಬೊಗಸೆ ಕಂಗಳೆನ್ನಲೋ?
ಸಾಟಿ ಯಾವುದು ನಿನ್ನ ಚೆಲುವ ಕಂಗಳಿಗೆ?||

ನಿನ್ನ ಕಂಗಳ ಸೌಂದರ್ಯದ ಸೊಬಗಿಗೆ ಏನೆನ್ನಲ್ಲಿ
ಹೆಣ್ಣೆನ್ನಲೋ?
ಭೂರಮೆಯನ್ನಲೋ?
ದೇವಲೋಕದ ಕನ್ನಿಕೆ ಎನ್ನಲೋ?||

ಕಂಗಳಲ್ಲೇ ಮಾತು
ಕಂಗಳಲ್ಲೇ ನೂರು ಸಂದೇಶ
ಭಾವ,ಚೈತನ್ಯ,ಪ್ರೀತಿ-ವಾತ್ಸಲ್ಯದ ಜಲಪಾತ
ಕಂಗಳೆನ್ನಲೋ?
ಸರಸತಿಯೆನ್ನಲೋ?
ಕವಿತೆಯೆನ್ನಲೋ?||

ಅವಳ ಮಾತು ಅರಳು ಹುರಿದಂತೆ

ಅವಳ ಮಾತು ಅರಳು ಹುರಿದಂತೆ
ಏನ ಹೇಳಲಿ ದೊರೆಯೇ?
ಅವಳ ಮಾತಿನಂತೆ ನಡೆಯುವುದು ಹೇಗೆಂದು
ದಿನವೂ ಯೋಚಿಸಿ ಬಳಲಿಹೆನು ಬೆಂಡಾಗಿ
ಹೊಸ ದಾರಿ ಸಿಗದೆ ಅವಳ ಮುನಿಸಿಗೆ ಆಹಾರವಾಗಿಹೆನು||

ನೂರು ಬಾರಿ ಹೇಳಿದೆನು ಬದಲಾಗುವೆನು ನಾನೆಂದು
ಒಮ್ಮೆ ಕೂಡ ಬದಲಾಗದೆ ಹಾಗೇ ಕಾಲ ತಳ್ಳಿದೆನು
ಮುನಿದಾಗ ಅವಳ ಮಾತು ನೆನಪಿಗೆ ಬರುವುದೆನಗೆ
ನಾನು ಬದಲಾಗಬೇಕೆಂದು, ದಾರಿ ಕಾಣದೆ ಮೌನ ಮುನಿಯಾಗುವೆನು||

ಎಷ್ಟು ಸಲ ಹೀಗೆ ನಡೆದಿಹುದೋ ಲೆಕ್ಕವಿಲ್ಲ
ಸಧ್ಯಕ್ಕೆ ಇದಕ್ಕೆ ಪೂರ್ಣವಿರಾಮ ಹಾಕುವ ಕಾಲ ಬಂದಿಲ್ಲ
ಹೀಗೆ ನಡೆಯುತಿಹುದು ನಮ್ಮಯ ಬಾಳ ಪಯಣ
ಅವಳ ಮಾತು ಅರಳು ಹುರಿದಂತೆ,
                ನನ್ನದೋ ಹೂಂ ಗುಟ್ಟುವ ಋಷಿಯಂತೆ||

ನೆನಪಿನ ಗುಟ್ಟು

ಚಿಂತೆಗೆ ಹತ್ತುವುದು ಮನ
ಬಲುಬೇಗ ಏನಿದರ ಗುಟ್ಟು?
ಪಾಠ,ಓಳ್ಳೆಯ ನುಡಿ,ಪ್ರವಚನ
ಬಳಿ ಸುಳಿಯಲಲ್ಲದು ಮನವ ಮುಟ್ಟಿ||

ಉರು ಹೊಡೆಯ ಬೇಕು ಮತ್ತೆ ಮತ್ತೆ
ವಿಜ್ಯಾನ ಸೂತ್ರ,ಇತಿಹಾಸದ ಇಸವಿ,ಹೆಸರುಗಳು ನೆನಪಿಗೆ ಬಾರವು
ನೂರು ಹುಡುಗೀರ ಹೆಸರುಗಳು ಮಾಸದೇ ನಿಂತಿಹುದು
ಕಷ್ಟವಿಲ್ಲದೇ ಬರುವುದು ನೆನಪಿಗೆ ಸುಲಭವಾಗಿ||

ಏನಿದರ ಮರ್ಮವೋ ಕಾಣೆ
ಪ್ರೀತಿ,ಆಕರ್ಷಣೆಯೇ ರಹದಾರಿ
ಪ್ರೀತಿ-ಒಲುಮೆ ಹರಡಿರಲು
ಎಲ್ಲವೂ ಮನಕೆ ಹಿಡಿಸುವುದು||

ಪ್ರೀತಿಯೇ ಅದರ ಗುಟ್ಟು
ಮಾಡಿದೆ ಅರಿತು ಅದರ ರಟ್ಟು||

ನಂಬಿ ಕೆಟ್ಟೆವೇ?

ನಂಬಿ ಕೆಟ್ಟೆವೇ ಇವರನ್ನು
ದೊಡ್ಡವರು ಏಳಿಗೆ ಬಯಸುವರೆಂದು
ನಂಬಿದ್ದೇ ದೊಡ್ಡ ತಪ್ಪಾಯಿತೇನೋ?
ಅವಕಾಶಗಳನ್ನು ತಿಂದುಂಡವರು
ಹೊಟ್ಟೆಯ ತುಂಬಾ ತುಂಬಿಕೊಂಡವರು
ಹಸಿವ ಅಗ್ನಿಯಲ್ಲಿ ಬಳಲುವವರ ಕಷ್ಟ ಅರ್ಥವಾದೀತೇ?

ಮೌನವಹಿಸಿದ್ದೇವೆ ಎಲ್ಲವೂ ನೋಡುತ್ತಾ
ಪ್ರಶ್ನೆ ಕೇಳಿದರೆ ಬಾಯಿ ಬಡಿಯುವರು
ಇದೆಂಥಾ ಶೋಷಣೆಯೋ? ಇಲ್ಲ ಗುಲಾಮಗಿರಿಯ ಪೋಷಣೆಯೋ?
ಸ್ವಾತಂತ್ರ ಕಳೆದುಕೊಂಡ ಸ್ಥಿತಿ ನಮ್ಮೆಲ್ಲರದೂ
ಪ್ರತಿಭಟಿಸುವುದೆಂತೋ ತಿಳಿಯುತ್ತಿಲ್ಲ ಯಾರಿಗೂ
ಒಳಒಳಗೇ ಕುದಿಯುತ್ತಾ
ಎಂದು ಅಗ್ನಿಪರ್ವತದಂತೆ ಒಳಕುದಿ ಸ್ಪೋಟಿಸುವುದೋ?

ಬುದ್ಧ ನಕ್ಕ

ಬೋಧಗಯಾ ಭಯಭೀತವಾಗಿದೆ
ಭಯೋತ್ಪಾದಕರ ದಾಳಿಗೆ ತುತ್ತಾಗಿದೆ
ಸಾವು-ನೋವುಗಳಿಗೆ ಸಾಕ್ಷಿಯಾಗಿದೆ
ದ್ವೇಷದ ಕೆನ್ನಾಲಿಗೆಗೆ ಬಲಿಯಾಗಿದೆ||

ಆಸೆಯೇ ದುಃಖಕ್ಕೆ ಮೂಲವೆಂದವನ ಮುಂದೆ
ಭಯದ ಬೀಜ ಮನದಲ್ಲಿ ಬಿತ್ತುವ ಯತ್ನ ಬೆನ್ನ ಹಿಂದೆ
ನೆಲ ನಡುಗಿದೆ,ಮನ ಕಂಪಿಸಿದೆ
ಜೀವಗಳು ಭಯದ ನೆರಳಲ್ಲಿ ಕಾಲ ಕಳೆದಿದೆ||

ಬುದ್ಧಿಜೀವಿಗಳ ಬಾಯಿಗೆ ಬೀಗ ಬಿದ್ದಿದೆ
ಪ್ರಗತಿಪರರು ನಾಪತ್ತೆಯಾಗಿದ್ದಾರೆ
ರಾಜಕಾರಣಿಗಳು ಎಂದಿನಂತೆ ಮೊಸಳೆ ಕಣ್ಣೀರಿಡುತ್ತಿದ್ದಾರೆ
ಪತ್ರಿಕೆಗಳು ಬೊಬ್ಬೆಹೊಡೆಯದೆ ನಿದ್ರಿಸುತ್ತಿವೆ||

ಕಾಣದ ಹೋಮಕುಂಡಕ್ಕೆ
ಹವಿಸ್ಸನರ್ಪಿಸಿದಂತೆ
ಹೃದಯಗಳ ಬೆಸೆಯುವ
ಕೊಂಡಿಯ ಕಳಚಿದಂತೆ||

ಕಚ್ಚಾಡಿ ಸಾಯುವ ಪಕ್ಷಗಳಿಗೆ
ಒಂದು ದಿನದ ಆಹಾರವಾಯಿತು ಈ ಘಟನೆ
ಧೃಡ ನಿರ್ಧಾರ,ಬದ್ಧತೆ ಪ್ರದರ್ಶಿಸದ
ಗೃಹಖಾತೆ,ಬಟ್ಟಿಂಗಿ ರಾಜಕಾರಣಿ,ಸರ್ಕಾರಕ್ಕಿದುವೆ ಪ್ರತಿಭಟನೆ||

ಸೋತವರಾರೋ? ನರಳಿದವರಾರೋ?
ಯಾರ ಹಿತ ನರಳಿಹುದೋ ಮೌನವಾಗಿ
ಕಾಲ ತೆವಳಿದ ನೋವು-ಸಾವುಗಳೊಡನೆ
ಬುದ್ಧ ಮಾತ್ರ ನಸುನಗುತ್ತಿದ್ದಾನೆ ಎಲ್ಲವನ್ನೂ ಕಂಡೂ ಕಾಣದವನಂತೆ||

ಉಡುಗೊರೆ

ಎಷ್ಟು ಬೇಗ ಹರಿವುದೀ ಮುಂಜಾನೆ
ಏಳುವಾಗ ಕತ್ತಲು ತಬ್ಬಿದ ಇಳೆ
ಶೌಚ ಕಳೆದು;
ಕಾಫಿ ಕುಡಿದು;
ಕವಿತೆ ಓದಿ ಕಣ್ಣು ಬಿಟ್ಟೊಡೆ
ಬೆಳಗ ತೇರು ಕಣ್ಣು ತೆರೆದು
ಜಾರಿ ಬಂದಿದೆ ಮೌನವಾಗಿ ಇಳೆಗೆ
ಸ್ವಾಗತ ಕೋರುವ ಮುನ್ನ ಉಷೆಗೆ
ಚಿಲಿಪಿಲಿ ಗಾನ ಹೊಮ್ಮಿದ ಸುಪ್ರಭಾತ
ಕತ್ತಲು ಜಾರಿದೆ;
ಬೆಳಗು ಮೂಡಿದೆ;
ಹೊಸ ದಿನವ ಹೊತ್ತ ದಿನಕರ
ನಗುತಿಹನು ಮೂಡಣದಲಿ
ಹೊಸದಿನದ ಉಡುಗೊರೆಯೊಂದಿಗೆ....

ನಿನ್ನಿಂದ ಸಾಧ್ಯ

ನಿನ್ನಿಂದ ಸಾಧ್ಯ ಅರಿ
ಸೋತವರಲ್ಲಿ ನೀ ಮೊದಲನೆಯವನಲ್ಲ್ ತಿಳಿ
ಜೀವನದಲ್ಲಿ ಯಶಸ್ವಿಯಾದವರೆಲ್ಲಾ
ಅನುಭವಿಸಿದ್ದಾರೆ ಸೋಲು,ನೋವು,ನಿರಾಸೆ||

ನಮ್ಮ ಕನಸಿನ ರಸ್ತೆ
ಸುಲಭವಾದುದಲ್ಲ,ಬಂಗಾರದಿಂದ ಮಾಡಿಲ್ಲ
ಸೋತವರಿಗೂ,ಗೆದ್ದವರಿಗೂ
ಕೆಲವೇ ಕೆಲವು ಗುಣಗಳಷ್ಟೇ ವ್ಯತ್ಯಾಸ ತಿಳಿ||

ಗೆದ್ದವರು ತುಂಬಾ ಬುದ್ಧಿವಂತರಲ್ಲ
ಪ್ರತಿಭಾಸಂಪನ್ನರಂತೂ ಅಲ್ಲವೇ ಅಲ್ಲ
ಅವರಿಗೆ ಅಚಲವಾದ ನಂಬಿಕೆಯಿದೆ
ಮುಂದೆ ಮಹತ್ತರವಾದದ್ದು ಇದೆ ಎಂದು||

ಸಹನೆಯ ಕಟ್ಟೆಯೊಡೆದಾಗ
ಅವರು ತಾಳ್ಮೆಯ ಕೈಹಿಡಿಯುತ್ತಾರೆ
ತಿಳಿದಿದೆ ಚಂಡಮಾರುತವೂ ಹೆಚ್ಚು
ಸಮಯ ಆರ್ಭಟಿಸಲಾರದೆಂದು||

ಅವರು ತಮ್ಮ ಕನಸುಗಳ ಕಾಯುವರು
ಕಷ್ಟಗಳ ಮಳೆಯ ಹೊಡೆತಕ್ಕೆ
ತಮ್ಮತನವು ಕರಗದಂತೆ ಕಾಯ್ವರು||

ಬಿಡಬೇಡ,ಕೈಚಲ್ಲಬೇಡ
ನಿನ್ನಿಂದ ಸಾಧ್ಯ
ನಿಲ್ಲದಿರು ಗುರಿಮುಟ್ಟುವವರೆಗೂ.......

ಪ್ರೇರಣೆ: "you can do it" unknown author.

ರಂಗೋಲಿ

ಚುಕ್ಕಿ ಚುಕ್ಕಿ ಆಗಸದಿ ಹೊಳೆವ ಬೆಳಕಿನ ಚುಕ್ಕಿ
ಕಣ್ಣ ಮಿಣುಕಿಸುತ ಮನವ ಗೆಲ್ಲುವ ಚುಕ್ಕಿ
ಉದಯರವಿ ಮೂಡುತ್ತಿದ್ದಂತೆ ಆಗಸದಿ
ಹಾರಿ ಬಂದು ಅಮ್ಮನ ಕೈಸೇರಿ ಆಗುವುದು
ಮನೆಯ ಅಂಗಳದ ಚಿತ್ತಾರದ ರಂಗವಲ್ಲಿ
ಅಮ್ಮನ ಮನದ ಹೇಳದ ಕವಿತೆಯದು
ಮನದಲಿ ತುಂಬಿದ ಜೀವನ ಪ್ರೀತಿಯದು
ಜೀವನ ರೂಪಿಸಿದ ರಸ ಕಲಾವಂತಿಕೆಯದು
ಅಮ್ಮನ ಕೈಯಲ್ಲಿ ಅರಳುವ ತಾಯಿ ಸರಸತಿಯ ಸೊಬಗದು
ಮನೆಯ,ಮನದ ಅಂಗಳದಿ ಅರಳುವ ಹೂವದು

ಹೆಣ್ಮನದ ನೋವಿನ ದನಿ

ಎಷ್ಟೊಂದು ಕೈ ಗುರುತು
ಬಣ್ಣ ಬಣ್ಣದ ಕೈ ಗುರುತು
ಗೋಡೆಯ ಮೇಲೆ ಚಿತ್ತಾರದ ಭಾವಗಳು ಕಲೆತು
ಹೆಣ್ಮನದ ಭಾವನೆಗಳೆಲ್ಲಾ ಬಣ್ಣದಲ್ಲಿ ಬೆರೆತು
ಆವುದರ ಹೆಗ್ಗುರುತಾಗಿ ಮೂಡಿಹುದೋ?

ಕರಗಿಹೋದ ಅಬಲೆಯರ ಚಿತ್ರವೋ?
ಎದುರಿಸುವ ಸಬಲೆಯರ ಸಂಕೇತವೋ?
ಬಾಡಿಹೋದ ಹೂಗಳ ನೆನಹೋ?
ಆತ್ಮವಿಶ್ವಾಸದ ಮಾನಿನಿಯರ ಚೈತನ್ಯವೋ?
ಚಿತ್ತಾಕರ್ಷಕ ಕಲಾಕೃತಿಯಾಗಿ ಒಡಮೂಡಿದೆ!

ಬಣ್ಣಬಣ್ಣದ ಹೆಗ್ಗುರುತು ಹೇಳುತಿದೆ
ನೂರು ನೋವಿನ ಕಥೆಗಳ ಮೌನವಾಗಿ
ಶಾಂತಿ ಸಂದೇಶದ ಸಂಕೆತವಾಗಿ ಮೂಡಿದೆ
ಆತ್ಮಸ್ಥೈರ್ಯದ ಕುರುಹಾಗಿ ಅಭಿವ್ಯಕ್ತಿಗೊಂಡಿದೆ
ಮೌನವಾಗಿ ನರಳಿದ ಹೃದಯಗಳಿಗೆ ಸಮಾಧಾನ ತಂದಿದೆ||

ನೋವುಂಡವರ ದನಿಯಾಗಿ
ನಾವಿದ್ದೇವೆ ನಿಮಗಾಗಿ
ಹೆದರದಿರಿ,ಬೆದರದಿರಿ;
ಸಮರ್ಥವಾಗಿ ಎದುರಿಸಿ ಶೋಷಣೆಯ
ಅಸಮಾನತೆ,ದೃಷ್ಟಿಕೋನ ಬದಲಾಗಬೇಕೆಂಬ ಧೋರಣೆ
ಮೌನವಾಗಿ ಚಿತ್ತಾರದ ಕಲಾಕೃತಿಯಾಗಿ ಮೂಡಿದೆ||

ದೀವಟಿಗೆಗಳು

ನೆನಪಿಗೊಂದು ನೆವಬೇಕು
ಪರಂಪರೆಯ ಮೌಲ್ಯಮಾಪನವಾಗಬೇಕು
ಕೊಡುಗೆ.ವಿಚಾರ,ಆಲೋಚನೆ
ಜೀವಂತಿಕೆ ಮುಂದಿನ ಪೀಳಿಗೆಗೆ ಆರೋಹಣೆ||

ಧೀಮಂತರ ಜೀವನ ಚರಿತ್ರೆ
ಬದುಕಿದ ರೀತಿ-ನೀತಿ
ಪ್ರತಿಪಾದಿಸಿದ ಮೌಲ್ಯ,ಆಯಾಮ
ನಡೆ-ನುಡಿ,ವ್ಯಕ್ತಿತ್ವ,ಚಾರಿತ್ರ್ಯ ಓರೆಹಚ್ಚಬೇಕು||

ಇತಿಹಾಸದುದ್ದಕ್ಕೂ ನೂರು ದೀಪಗಳು
ಯಾರೂ ಮೇಲಲ್ಲ,
ಯಾರೂ ಕೀಳಲ್ಲ ಇಲ್ಲಿ
ಸಮಾನತೆಯ,ಮಾನವೀಯತೆಯ ದೀವಟಿಗೆಗಳು
ಮುಂದಿನ ಪೀಳಿಗೆಗೆ ದಾರಿದೀಪಗಳು||

ಹತ್ತು ವರ್ಷಗಳ ಹಾದಿ

ಹತ್ತು ವರ್ಷಗಳ ಹಿಂದೆ ಹೊರಟೆ
ಹೊಸತನ್ನು ಬಯಸಿ ಹಿಡಿದೊಂದು ಹಾದಿ
ಏಕತಾನತೆಯ ತ್ಯಜಿಸಿ;
ಹೊಸತನದ ಭ್ರಮೆಯ ಭಜಿಸಿ;
ನೋವು,ಕಹಿ ಮಾತುಗಳ ಭುಂಜಿಸಿ
ಹೊಸ ಚೈತನ್ಯದ ದಿಕ್ಕಿಗೆ ಹೆಜ್ಜೆ ಹಾಕಿದೆ
ಹೊಸ ಬೆಳಕಿಗೆ,ಹೊಸ ಮನ್ವಂತರಕೆ ಸ್ವಾಗತ ಕೋರಿದೆ;

ಹೊಸ ಕೆಲಸ;
ಹೊಸ ಪರಿಸರ;
ಹೊಸ ಗೆಳೆತನ;
ಹೊಸ ಗುರು;
ಹೊಸ ಗುರಿ;
ಹೊಸತು ಹೊಸತು ಮನದಲೆಲ್ಲಾ ಹೊಸ ಹುರುಪು;
ಹತ್ತು ವರುಷ ಅಂಕದ ಚಿತ್ರದಂತೆ ಜಾರಿದೆ;
ನೂರು ಚಿಂತೆ,ಅಸಮಧಾನಕ್ಕೆ ಕೊನೆ ಎಲ್ಲಿದೆ?
ದುಃಖ,ದುಮ್ಮಾನ ಏನೇ ಇರಲಿ,
ಮನದೊಳು ಸಮಾಧಾನವಿದೆ;
ಆತ್ಮತೃಪ್ತಿ ಇದೆ;

ಬೆವರು ಹರಿಸಿ ಮುಗುಳ್ನಕ್ಕಿದ್ದೇನೆ
ಎಲ್ಲವೂ ಸಿಗದೇಯಿದ್ದರೂ ನಗುತ್ತಿದ್ದೇನೆ
ಕಾಯಕವೇ ನಿನಗರ್ಪಿಸಿಕೊಂಡಿದ್ದೇನೆ
ಇಂದು,ಮುಂದೆ,ಎಂದೆಂದಿಗೂ
ನಿನಗೆ ನ್ಯಾಯ ಒದಗಿಸುತ್ತೇನೆ
ಹೊಸತು ಬರಲಿ
ಸತ್ವ ಇಲ್ಲದ್ದು ಮುಳುಗಲಿ
ಹೊಸ ಮನ್ವಂತರದ ಹಾದಿ ತೆರೆದುಕೊಳ್ಳಲಿ
ಮನದ ನೂರು ಚಿಂತೆಯ ಕಳೆದು ಚೈತನ್ಯ ತುಂಬಲಿ
ಅನುಭವದ ಕೊಡ ತುಂಬಿ ಜೀವನ ಹಸನಾಗಲಿ;

ಮುಂದೆ ಸಾಗು ನಿಲ್ಲದೆ ಗೆಳೆಯಾ

ಮುಂದೆ ಸಾಗು ನಿಲ್ಲದೆ ಗೆಳೆಯಾ
ಎಲ್ಲವೂ ನಿನ್ನಿಂದ ಸಾಧ್ಯ ನೀ ತಿಳಿಯೆಯಾ||

ಸೋಲೇ ಗೆಲುವಿನ ಸೋಪಾನ
ತಿಳಿದು ನಡೆದರೆ ಜೀವನ ಮಧುಪಾನ||

ಯಶಸ್ಸು-ಗೆಲುವು ವಶವಲ್ಲ ಮಂತ್ರ-ತಂತ್ರಕೆ
ಒಲಿವುದು ಸತತ ಪ್ರಯತ್ನ,ನೋವು ತಾಳ್ಮೆಯ ಕಾರ್ಯತಂತ್ರಕೆ||

ಬೆವರಹನಿಗೆ ಬೆಲೆಯಿದೆ
ಗೆಲುವು ಇಂದಲ್ಲ, ನಾಳೆ ನಿನ್ನದೇ||

ಮುಂದೆ ಸಾಗು ನಿಲ್ಲದೆ ಗೆಳೆಯಾ
ಎಲ್ಲವೂ ನಿನ್ನಂದ ಸಾಧ್ಯ ನೀ ತಿಳಿಯೆಯಾ||

ಹತ್ತು ವರ್ಷಗಳ ಹಿಂದೆ.....

ಹತ್ತು ವರ್ಷಗಳ ಹಿಂದೆ
ಕಂಡೆ ಆ ಬೆಳಕನ್ನ ಮುಂದೆ
ಆಕಸ್ಮಿಕವೋ? ಋಣಾನುಬಂಧವೋ?

ಕಂಡ ಬೆಳಕು ಕೈಹಿಡಿಯಿತೆನ್ನ ಮುದದಿ ಅಂತೆ ಕಂತೆ
ಜಾರಿಬೀಳುವವನಿಗೆ ನಿಲ್ಲಲು ಸಣ್ಣ ಆಸರೆ ಸಿಕ್ಕಂತೆ
ಗುರಿ ಇರದವನ ಬಾಳಿಗೆ ಗುರಿ ಸಿಕ್ಕಂತೆ
ಬಾಳಬಂಡಿಯ ಪಯಣದಲಿ ಜೀವನ ಸಂಗಾತಿ ಸಿಕ್ಕಂತೆ||

ಕೈಹಿಡಿಯಿತು ಪ್ರೀತಿ-ಪ್ರೇಮ
ಹಸನಾಯಿತು ಜೀವನ ಗಾನ
ಏಳು-ಬೀಳುಗಳ ಸಹಜ ಜೀವನ
ಬೇವು-ಬೆಲ್ಲ,ನೋವು-ನಲಿವಿನ ಹೂರಣ||

ಪ್ರೀತಿಯ ಸೊಬಗಿಗೆ ಒಂದು ದಶಕ
ಜೊತೆಯಾಗಿ ಹೊಸ ಹೆಜ್ಜೆ ಇಡಲು ಏನೋ ಪುಳಕ
ಜೀವನ ಪ್ರೀತಿ ತಂದಿದೆ ಒಂದೊಂದು ಹೆಜ್ಜೆಯಲ್ಲೂ ತವಕ
ಕಾಣುವ ತವಕ ಹೆಚ್ಚಿದೆ ಸಂವತ್ಸರಗಳ ಶತಕ||

ಹೊಂಗೆಯ ಚೆಲುವು

ಹೊಂಗೆ,ಹೊಂಗೆ,ಹೊಂಗೆ
ಇಂಥ ಚೆಲುವು ಹೆಂಗೆ?
ದೇವಲೋಕದ ಅಪ್ಸರೆಯ ಚೆಲುವು ನಿಂಗೆ!

ಕಣ್ಣೆರಡು ಸಾಲವು
ನೋಡಲು ನಿನ್ನ ಚೆಲುವು
ನಿನ್ನ ಸೌಂದರ್ಯ ವರ್ಣಿಸಲು
ಪದಗಳು ಸಾಲವು||

ನಾಚಿ ನೀರಾಗಿರುವೆ ಏಕೆ?
ಪಾಲ್ಗುಣ ಬರುವನೆಂದು ನಾಚಿಕೆಯೇ?
ಮೈಯೆಲ್ಲಾ ಹೂ ಮುಡಿದು ವಧುವಾಗಿರುವೆ
ಮಕರಂಧ ಹೀರಲು ದುಂಬಿಗಳ ಅಹ್ವಾನಿಸಿರುವೆ||

ಹೂಗೊಂಚಲು ಗಾಳಿಗೆ ತೊನೆದಾಡುವುದ
ನೋಡುವುದೇ ನಯನ ಮನೋಹರ
ದುಂಬಿಗಳ ಝೇಂಕಾರ,ಹಕ್ಕಿಗಳ ಚಿಲಿಪಿಲಿ ನಿನಾದ
ಕೇಳುಗನ ಕಿವಿಗಳಿಗೆ ರಸಗವಳ ಮನೋಹಾರ||

ಉದಯರವಿ ಮೂಡುವ ಮುನ್ನ
ಹೂ ನೆಲದ ಮೇಲೆ ಹಾಸಿಗೆಯಂತೆ ಹಾಸಿ
ಪರಿಸರದಲ್ಲೆಲ್ಲಾ ಹೂ ಗಂಧ ಪೂಸಿ
ಪ್ರಕೃತಿ ಮಾತೆಗೆ ಪೂಜೆ ಸಲ್ಲಿಸುತ್ತಿರುವೆಯೋ?
ಇಲ್ಲ, ವಸಂತಾಗಮದ ವಿರಹ ಕಾಮನೆಯೋ?
ಇಲ್ಲ, ಹಾಡಿ ಹೊಗಳುವ ಕವಿಗೆ ಆತ್ಮೀಯ ಸ್ವಾಗತವೋ?

ಬಿಸಿಲ ಬೇಗೆಯಲಿ
ಹೊಂಗೆಯ ನೆರಳಲಿ
ಹಾಂ! ಎಂಥ ತಂಪು
ಮರುಕಳಿಸುವುದು
ಮಮತೆ,ವಾತ್ಸಲ್ಯದ ಗಣಿ
ತಾಯಿಯ ಕರುಳ
ಮಧುರ ನೆನಪು

ಹೊಂಗೆ,ಹೊಂಗೆ,ಹೊಂಗೆ
ಭೂಲೋಕದ ಅಪ್ಸರೆ
ಇಂಥ ಅಂದ,ಚೆಂದ,ಚೆಲುವು ಹೆಂಗೆ?

ಪ್ರಾರ್ಥನೆಯೊಂದೇ ನನ್ನದು

ಏನು ಸೊಬಗು ಈ ಪ್ರಕೃತಿ
ಎಷ್ಟು ಸುಂದರ ಇಲ್ಲಿನ ಆಕೃತಿ
ಯಾವ ತತ್ವ ಆಧರಿಸಿ ರಚಿಸಲ್ಪಟ್ಟಿತೋ ಈ ಕೃತಿ
ದೃಷ್ಟಿಕೋನ,ಸಮದೃಷ್ಟಿ ಸಮತೋಲನದ ಮೈತ್ರಿ
ಬೆಕ್ಕಸ ಬೆರಗಾಗಿದ್ದೇನೆ,ಬೇಸರಿಸಿದ್ದೇನೆ ಕಂಡು ಈ ಜನರ ವಿಕೃತಿ,ಚಮತ್ಕೃತಿ
ತುಂಬಿದೆಯಿಲ್ಲಿ ಕ್ರೌರ್ಯ,ಸಾವು-ನೋವು,ನಲಿವುಗಳ ಸಂತತಿ
ಅನುಭವಿಸುವ ನಮ್ಮದೇ ನೆನಪುಗಳ ಕಟ್ಟಬೇಕು ಕೊನೆಗೊಳ್ಳುವ ಮುನ್ನ ನಮ್ಮ ಪಾತ್ರ
ಪ್ರಾರ್ಥನೆಯೊಂದೇ ನನ್ನದು, ಉಸಿರು ನಿಲ್ಲುವವರೆಗೂ ನೀಡು ಬದುಕುವ ಜೀವನ ಪ್ರೀತಿ||

ಖುಷಿಯಿಂದ ಅನುಭವಿಸಿದ್ದೇನೆ ಬಿಸಿಕಾಫಿ ತುಟಿಗಪ್ಪುವ ರೀತಿಗೆ

ಮುಂಜಾನೆ ಚಿತ್ತ ಮೂಡಿಹುದು ಕಾಣದ ಚಿತ್ರದ ಕಡೆಗೆ;
ಯೋಚಿಸುತ್ತಾ ನಡೆದೆ ಮನಸೋತ ಬೆಳಗಿನ ಬೆರಗಿಗೆ;
ಹೃನ್ಮದಲಿ ಆ ರಮಣೀಯ ಮನೋಹರ ಅನುಭವ,ಅನುಭಾವದ ಬೆಡಗಿಗೆ;
ಕತ್ತಲ ಓಡಿಸಿ ಬೆಳಗು ಇಳೆಯ ಅಪ್ಪುವ ರಮಣೀಯತೆಗೆ;
ಕಳೆದುಹೋಯಿತು ಮನ ಎಲ್ಲೋ ಹಕ್ಕಿಗಳ ಇನಿದನಿಗೆ;
ಖುಷಿಯಿಂದ ಅನುಭವಿಸಿದ್ದೇನೆ ಬಿಸಿಕಾಫಿ ತುಟಿಗಪ್ಪುವ ರೀತಿಗೆ;

ಮಳೆ ನಿಂತ ಮೇಲೆ ಈ ಮೌನವೇಕೋ?

ಮಳೆ ನಿಂತ ಮೇಲೆ ಈ ಮೌನವೇಕೋ?
ರುದ್ರ ನರ್ತನಗೈದ ಮೇಲೆ ಮತ್ತೇನೋ?
ಯಾರಿಗೆ ಯಾರು ವಿರಾಮ ಕೊಟ್ಟಿದ್ದಾರೆ?
ಯಾರಿಗೆ ಯಾರು ಸ್ವಾಂತನ ನೀಡುತ್ತಿದ್ದಾರೆ?
ಆಕಾಶ ಇಳೆಗೋ?
ನೃತ್ಯ,ಸಂಗೀತ,ವಾದ್ಯಗಳಿಗೋ?
ಇಲ್ಲ ಕೇಳುಗರಿಗೋ? ವೀಕ್ಷಕರಿಗೋ?

ಬೆಲೆ ಏರಿಕೆ- ತೋರಿಕೆ

ಸಾರಿಗೆ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ
ಸಾಮಾನ್ಯ, ಬಡ ಜನತೆಗೆ ತರಿಸಿದೆ ಸರ್ಕಾರದ ನಡತೆಯಿಂದ ವಾಕರಿಕೆ
ಮುಖ್ಯಮಂತ್ರಿ,ಸಾರಿಗೆ ಸಚಿವರ ಗೂಸುಂಬೆತನದ ವಾಸ್ತವಿಕತೆಯ ತೋರಿಕೆ
ಕೈಲಾಗದವರು ಮಾತ್ರ ಹೊರೆಯನ್ನು ಜನತೆಯ ಮೇಲೆ ಹೊರೆಸಿ ತೊಳೆದುಕೊಳ್ಳುವರು ತಮ್ಮ ಕೈ
ಎಂದಾದರೂ ತಮ್ಮ ಬೆವರ ಹನಿಯ ಸಂಪಾದನೆಯಿಂದ ಹಣತೆತ್ತು
ಪ್ರಯಾಣಿಸಿದ್ದರೆ ಗೊತ್ತಾಗುತ್ತಿತ್ತು ಬಡಜನರ ಚಡಪಡಿಕೆ||

ಹೇಳಲೇ ಪ್ರಿಯೇ ನನ್ನ ಮನದ ಇಂಗಿತ

ಹೇಳಲೇ ಪ್ರಿಯೇ ನನ್ನ ಮನದ ಇಂಗಿತ
ಹಾಕುವೆಯಾ ಹೃದಯದಲಿ ಪ್ರೇಮದ ಅಂಕಿತ
ಪ್ರೀತಿಸಿ,ಪ್ರೀತಿಸಿ ನಾನಾದೆ ಪ್ರೇಮ ಪಂಡಿತ
ನಾ ಮಾಡುವೆ ನಿನ್ನ ಈ ಹೃದಯದರಸಿಯ ಖಂಡಿತ||

ಈ ಹೃದಯ ಪ್ರೀತಿಯ ಹೆಸರಲ್ಲಿ ಅನುಭವಿಸಿದ ಸೋಲಿನ ಹೊಡೆತ
ಕಡಲ ತೀರದಲ್ಲಿ ಅಲೆಗಳು ದಡಕ್ಕೆ ಅಪ್ಪಳಿಸಿವಂತೆ ಕಾಡಿದೆ ನಿನ್ನ ನೆನಪ ಕೊರೆತ
ಕೇಳಿಸದೇ ನಿನಗೆ ನನ್ನ ಹೃದಯದ ಮಿಡಿತ,ಪ್ರೀತಿಯ ಗಲಾಟೆ ಮಾಡುತ
ಹೃದಯ  ಗುನುಗಿದೆ ಪದೇ ಪದೇ ನಿನ್ನ ಹೆಸರ,ನಲಿದಿದೆ ಪಾಡುತ||

ಏಕೆ ಹೀಗೋ ನಾನರಿಯೆ ಈ ಹೃದಯ ನಿನಗಾಗಿ ಪರಿತಪಿಸಿದೆ
ನೀನಂತೂ ಏನೂ ಹೇಳದೆ ನಸುನಗುತ್ತಾ ಮರೆಯಾದೆ
ಕಾಯುತ್ತಾ ಕುಳಿತಿಹೆನು ನಿನ್ನದೇ ನೆನಪ ರಂಗವಲ್ಲಿ ಮನದಲಿ ಮೂಡಿದೆ
ನಿನ್ನದೇ ಧ್ಯಾನ, ನಿನ್ನದೇ ನೆನಪ ಮತ್ತೆ ಮತ್ತೆ ತಳುಕು ಹಾಕಿ ಬೇರೆ ದಾರಿ ಕಾಣದೆ|| 

ನರ್ತಿಸು ತಾಯೆ

ನರ್ತಿಸು ತಾಯೆ ಸರಸತಿಯೇ
ಅಜನ ಪಟ್ಟದ ರಾಣಿಯೇ
ನರ್ತಿಸು ಎನ್ನ ಹೃದಯಕಮಲದಲಿ||

ಮನದೊಳು ವ್ಯಾಪಿಸು
ರಕುತದ ಕಣಕಣದಲಿ ನೆಲೆಸು
ಆನಂದಾಮೃತ ರಸ ಪ್ರಹರಿಸು
ನರ್ತಿಸು ತಾಯೆ ಸರಸತಿಯೇ
ಅಜನ ಪಟ್ಟದ ರಾಣಿಯೇ
ನರ್ತಿಸು ಎನ್ನ ಹೃದಯಕಮಲದಲಿ||

ಪಾದ ಧೂಳಿ ಶಿರವ ಸೋಂಕಿದೊಡೆ ಏಳಿಗೆ
ಮೌಡ್ಯವ ಕಳೆಯೆ
ವಿಜ್ಯಾನದ  ಹೊಸ ಕಾಂತಿಯಿಂದ
ಶಾಂತಿಯು ಪ್ರವಹಸಲಿ
ನರ್ತಿಸು ತಾಯೆ ಸರಸತಿಯೇ
ಅಜನ ಪಟ್ಟದ ರಾಣಿಯೇ
ನರ್ತಿಸು ಎನ್ನ ಹೃದಯಕಮಲದಲಿ||

ಪ್ರೇರಣೆ: "ನರ್ತಿಸು ತಾಯೆ" ಕುವೆಂಪು
ಕುವೆಂಪು ರವರಲ್ಲಿ ಕ್ಷಮೆ ಕೋರುತ್ತಾ....

ಕಣ್ಣಲ್ಲೇ ತುಂಬಿದೆ ನಿನ್ನ ರೂಪ

ಕಣ್ಣಲ್ಲೇ ತುಂಬಿದೆ ನಿನ್ನ ರೂಪ
ತೊಳಲಾಡಿದೆ ಈ ಮನಸ್ಸು,ಬೇಸರಿಸಿಕೊಂಡಿದೆ ಪಾಪ
ಇದೊಂತರ ವಿಚಿತ್ರವಾಗಿದೆ ಹಾಗು ಆಗಿದೆ ಅಪರೂಪ
ಪ್ರೀತಿಯ ಸೆಳೆತಕ್ಕೆ ಸಿಲುಕಿ ಹೊರಟಿದೆ ಪ್ರೇಮ ಆಲಾಪ||

ಹೊರಟಿದೆ ಅಲೆಯುತ್ತಾ ನಿನ್ನ ಸಂಗವ ಬಯಸಿ
ಕಾಡು-ಮೇಡು,ಗಿರಿ-ಕಂದರ,ಮರ-ಗಿಡಗಳ ಬಳಸಿ
ಪ್ರೀತಿಯ ಉತ್ಕಟತೆಯ ಅನುಭವದಮೃತವ ಸೇವಿಸಿ
ಒಮ್ಮೆಯಾದರೂ ಕಾಣಿಸಿಕೋ ಸಾಯಿಸಬೇಡ ವಿರಹದಿ ಕಾಡಿಸಿ||

ಬಲು ಬಂಡವಾಗಿದೆ ಈ ದೇಹ,ಮನಸ್ಸು ಸತಾಯಿಸಿ
ನೀ ಸಿಗದಿದ್ದರೂ ಸರಿಯೇ,ನಿನ್ನ ನೆನಪಲ್ಲೇ ಉಳಿವೆ
ಮೋಹ,ವ್ಯಾಮೋಹಗಳ ಪರಿಧಿ ದಾಟಿ ಮನ ಪರಿಪಕ್ವವಾಗಿದೆ
ಈ ನೋವು,ನಲಿವಿನಲ್ಲೇ ಈ ಬದುಕು ಸಾರ್ಥಕವಾಗಿದೆ||

ನೆನಪ ರಥ

ಮನದ ಬೀದಿಯಲ್ಲಿ
ಎಳೆವೆ ನೆನಪ ರಥವ
ವರುಷಕ್ಕೊಮ್ಮೆ ನಡೆವ
ಜಾತ್ರೆಯಂತೆ ತೆವಳಿ ತೆವಳಿ ಪಥವ||

ಸುಖ-ದುಃಖ,ಕೊರತೆ-ಒರತೆ
ಜಾಡುಬಿದ್ದ ಜೇಡರ ಬಲೆಯ ಕವಿತೆ
ಒಂಟಿ ಸಲಗದಂತೆ ಎಳೆಯುವೆ
ಕಿರಿ-ಕಿರಿ,ಅಪಹಾಸ್ಯ ಮಾಡಿದರೂ ಸೆಳೆವೆ||

ಎಲ್ಲವೂ ನನ್ನದೇ ಒಪ್ಪ-ಓರಣವಿಲ್ಲದ
ನನಗೆ ಬೇಡದ ವಸ್ತು,ವಿಚಾರಗಳೇ!
ಜಾರಿಬಿದ್ದೆ ಎಳೆಯಲಾಗದೆ ಕಡಿಮೆಯಾಗಿ ಕೆಚ್ಚು
ನೆರೆದಿದ್ದವರೆಲ್ಲಾ ಕೈಚಾಚದೆ, ನಕ್ಕು ಅಪಹಾಸ್ಯಮಾಡುವವರೇ ಹೆಚ್ಚು||

ಮನದ ಬೀದಿಯಲ್ಲಿ ನೆನಪ ರಥವ ಎಳೆಯಲೇಬೇಕು
ಕಾಲಚಕ್ರ ಮುಂದೆ ಹೋಗುವಂತೆ, ನನ್ನದೂ ನಡೆಯಬೇಕು
ಇದು ನನ್ನೊಬ್ಬನ ಕಥೆ-ವ್ಯಥೆಯಲ್ಲ
ಹುಟ್ಟಿ-ಬದುಕು ಸವೆಸುವ ಎಲ್ಲರದೂ; ಇಂದಿನಂತೆ ನಾಳೆ ಇರಲ್ಲ||

ಏಕೆ ತವಕವೋ ಏನೋ?

ಏಕೆ ತವಕವೋ ಏನೋ?
ಮುಂಜಾನೆ ಕಾಡುವುದು ಮನ
ಜಾರುವ ಮನವ ಹಿಡಿಯುವುದೆಂತೋ?

ಸೆಳೆವ ಪಾರಿಜಾತಾ ಗಂಧ
ಮನದ ಹಿಡಿತ ಸಡಿಲಿಸಿದೆ
ಕಳೆವ ವ್ಯಾಮೋಹಾ ಬಂಧ
ಜೀವನ ಸರಳಗೊಳಿಸಿದೆ||

ಮುಂಜಾನೆ ಆಗಸದಲಿ
ತೇಲುವಾ ಚಂದ್ರ
ಮನದಲಿ ಭಾವನೆಗಳ
ಏರಿಳಿತಗಳಾ ಮಂದ್ರ||

ಚಿಲಿಪಿಲಿ ಹಕ್ಕಿಗಳ
ಮಧುರಾ ಇಂಚರ
ಉದಯರವಿಗೆ ಮುಂಜಾನೆಯ
ಶುಭೋದಯದಾ ಮಂಗಲ|| 

ಮಳೆಯ ಗಾನ

ಓ ಮಳೆಯೇ!
ಓ ಮಳೆಯೇ!
ಏಕೆ ಬಂದಿರುವೆ ಇಲ್ಲಿಗೆ?
ಯಾರು ಕಳುಹಿದರು ಇಳೆಗೆ?||

ದೇವಲೋಕದಿಂದೇನೋ ತಂದಿರುವೆ
ಸಂತಸವೋ?,ದುಃಖದ ಕರಿಛಾಯೆಯೋ?
ನೀ ಬಂದ ಮೇಲೆ ಇಲ್ಲಿ ಹೊಸ ಮನ್ವಂತರ
ಹೊಸ ಭರವಸೆ,ಹೊಸ ಆಸೆ ನೀ ಬಂದ ನಂತರ||

ಇಳೆಯ ಸೊಬಗು ಇಮ್ಮಡಿಸಿದೆ
ತಂಗಾಳಿಗೆ ಚೈತನ್ಯ ತುಂಬಿದೆ
ನವ ಜೀವಜಾತಕೆ ತಾಯಿಯಾಗಿಹೆ
ಜೀವನ ಪ್ರೀತಿ ನೂರ್ಮಡಿಯಾಗಿದೆ||

ಚಿಟ-ಪಟ ಮಳೆಯ ನಾದಲೀಲೆ
ಎಲ್ಲೆಲ್ಲೂ ಆವರಿಸಿದೆ ಮಾಯೆ
ಮರ-ಗಿಡಗಳು,ಹಕ್ಕಿಗಳು ಮನಸೋತು
ಆಲಿಸಿವೆ ನಿನ್ನೆಯ ಗಾನಸುಧೆ||

ಇಳೆಯ ತುಂಬೆಲ್ಲಾ ಹರಿದಿದೆ
ಕೆರೆ-ತೊರೆ,ನದಿಗಳ ಸಂತಸದ ಹೊಳೆ
ಜಗದ ತುಂಬೆಲ್ಲಾ ಮೊಳಗಿದೆ
ಪ್ರಕೃತಿಮಾತೆಯ ಸೌಂದರ್ಯ ಗೀತೆ||

ಕಾನನದ ದೇವಧೂತರೆಲ್ಲಾ
ನಿನ್ನ ಅರೈಕೆ,ಮಮತೆಗೆ ತನ್ಮಯ
ಜಗದ ಅಮೃತಪುತ್ರರೆಲ್ಲಾ
ಆಗಿಹರು ನಿನ್ನ ಮಾಯೆಗೆ ವಿಸ್ಮಯ||

ತಂದೆ-ತಾಯಿ-ಬರಹ

ಆಧ್ಯಾತ್ಮವೇ ಚೈತನ್ಯ;
ಆತ್ಮಸ್ಥೈರ್ಯವೇ ರಹದಾರಿ;
ಅನುಭವವೇ ತಾಯಿ;
ಅನುಭಾವವೇ ತಂದೆ;
ಅಧ್ಯಯನವೇ ಗುರು;
ಕ್ರೀಯಾಶೀಲತೆಯೇ ಗೆಳೆಯ;
ಉಪಮಾನ,ಉಪಮೇಯಗಳೇ ಬಂಧು-ಬಳಗ;
ವಸುದೈವ ಕುಟುಂಬವೇ ಗುರಿ;
ಇವೆಲ್ಲವುಗಳ ಕೈಗೂಸೇ ಬರಹ,ಚಿಂತನೆ;

ಮುಗ್ಧತೆಯ ಅರಿಮೆ

ನೋಡು ಪ್ರಕೃತಿಯ ಸೊಬಗ ತೆರೆದ ಕಂಗಳಿಂದ
ಕಣ್ಣು ಮುಚ್ಚಿ ಧ್ಯಾನಿಸು,ಆರಾಧಿಸು ತೆರೆದ ಒಳ ಕಂಗಳಿಂದ
ಮುಗ್ಧತೆಯ ನೋಟ ನಶ್ವರ ತಿಳಿ
ಅರಿಮೆಯ ನೋಟ ಶಾಶ್ವತ ಕಲಿ||

ಮುಗ್ಧತೆಯಿಂದ ಈ ಜಗದ ಸೊಬಗ ನೋಡಬೇಡ
ಮುಗ್ಧತೆಯ ಅನುಭವ ಆ ಕ್ಷಣದ ಭಾವ ಕ್ಷಣಿಕ
ಅರಿಮೆಯಿಂದಲಿ ಅನುಭವಿಸುವ ಆ ಕ್ಷಣದ ಭಾವ ಸಾರ್ಥಕ
ತೆರೆದಿಡುವುದು ಮುಂದಿನ ಜೀವನದ ಹೊಸ ಪಥ||

ಕತ್ತಲು,ಮೌನ ಏನನ್ನೋ ಹೇಳಹೊರಟಿದೆ
ಮುಗ್ಧತೆಯ ಸೆಳೆತಕ್ಕೆ ಭಾವ ನರಳಿದೆ
ಜಾಗೃತನಾಗು ಕಣ್ತೆರೆದು ನೋಡು
ಮನದ ಹರವು ತೆರೆದುಕೊಳ್ಳುವಂತೆ ಮಾಡು||

ಇಲ್ಲೊಂದು ಜೀವ,ಅಲ್ಲೊಂದು ಹೂವು ಹವಣಿಸಿದೆ
ಜಗದ ಸೌಂದರ್ಯವ ನೋಡಲು ಕಣ್ತೆರೆಯುತ್ತಿದೆ
ಅಲ್ಲೊಂದು ಜೀವ ನರಳಿದೆ ನೋವು ಅನುಭವಿಸಿದೆ
ಇಲ್ಲೊಂದು ನಲಿವು ಹೂ ಅರಳಿದೆ ಸುಗಂಧ ಪಸರಿಸಿದೆ||

ಸಂಜೀವಿನಿ ನೀನು!

ಯಾವ ತತ್ವವ ಸಾರುತಿಹೆ
ನಿಂತಲ್ಲೇ ನಿಂತು
ಎಲ್ಲವನ್ನೂ ಸಹಿಸಿ
ಎಲ್ಲರಿಗೂ ಉಪಯೋಗವನ್ನೇ ಬಯಸುವ
ದೇವಧೂತನೇ ಸರಿ ನೀನು!

ನಿಂತಲ್ಲೇ ನಿಂತು
ಬಾನೆತ್ತರಕೆ ಬೆಳೆದು
ಆವುದೋ ತತ್ವಾದರ್ಶಕ್ಕೆ
ಸಂಕೇತವಾಗಿಹೆ ನೀನು!

ಹಕ್ಕಿಗಳಿಗೆ ಆಶ್ರಯ ತಾಣ
ಗಾನ ಕೋಗಿಲೆಗಳಿಗೆ ಸಾಧನೆಯ ಧ್ಯಾನತಾಣ
ಮನುಜನ ಜೀವಂತಿಕೆಯ ಪ್ರಾಣ
ಜೀವವಾಯು ನೀಡುವ ಸಂಜೀವಿನಿ ನೀನು!

ಶಾಂತತೆಯ ಕಡಲು

ಈ ನಿಶಬ್ದತೆಯ ನೀರವತೆಗೆ ಏನೆನ್ನಲಿ?
ಮೌನವೆನ್ನಲೋ?
ಧ್ಯಾನವೆನ್ನಲೋ?
ನಿದ್ರಾಪರವಶತೆಯೆನ್ನಲೋ?
ಪ್ರಕೃತಿಯ ಈ ಶಾಂತತೆಯ ಕಡಲಿಗೆ
ಏನ ಹೆಸರಿಡಲಿ?
ಉದಯರವಿ ಆಗಮಿಸುವ ಮುನ್ನ
ನೀರವತೆಯ ಹೊನಲು ಹಾಂ!.......
ಅನುಭವಿಸುವವಗೇ ಗೊತ್ತು!
ಆರಾಧಿಸುವವಗೇ ಗೊತ್ತು!
ಧ್ಯಾನಿಸುವವಗೇ ಗೊತ್ತು!
ಪದ ಕಟ್ಟಿ ಹಾಡುವವಗೇ ಗೊತ್ತು!
ಶಾಂತತೆಯ ಕಡಲಿನ ಅಮೃತದನುಭವಕೆ
ಏನೆಂದು ಕರೆಯಲಿ?
ಸಮಾಧಿ,ಸ್ವರ್ಗ,ಪ್ರಕೃತಿ!

ಉದಯ ರವಿಗೆ ಸ್ವಾಗತ

ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು
ದಾಳಿಮಾಡಲು ಇಳೆಯ ಮೇಲೆ
ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು
ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು
ಚಿಟಪಟ,ಚಿಟಪಟ ತದೇಕ ಚಿತ್ತದಿಂದ ಹೊಮ್ಮಿದ ನಾದಸ್ವರ
ಸಂಗೀತ ಕಛೇರಿ ಮುಗಿದದ್ದು ಯಾವಾಗಲೋ!

ಬೆಳಗಿನ ಹಕ್ಕಿಗಳ ಚಿಲಿಪಿಲಿ ದನಿ ಕೇಳಿಸಲಿಲ್ಲ
ಮೌನ ಆಕ್ರಮಿಸಿತ್ತು ಮುಂಜಾನೆಯ ಸಮಯದಲ್ಲಿ
ರಸ್ತೆ ಬದಿಯಲ್ಲೇ ನಿಂತ ದೇವದೂತರು ನಿದ್ರಾಪರವಶರಾಗಿದ್ದರು
ಆಕಾಶ ಕಳೆಗಟ್ಟಿತು
ಬೇಸರಿಸಿತು ಮನ
ಏಕಾಂಗಿ ಸಂಚಾರಿ ನಾನು
ಸಮಯ ಹೊರಳಿತು,ತಂಗಾಳಿ ಬೀಸಿತು
ಮರಗಿಡಗಳ ಮರ್ಮರ ಸಂಗೀತ ಹಬ್ಬಿತು
ಹೊಸ ಚೈತನ್ಯ ಹರಡಿತು
ಕೋಗಿಲೆ,ಕಾಗೆ.ಗೊರವಂಕ ಹಕ್ಕಿಗಳು
ಉದಯ ರವಿಗೆ ಸುಪ್ರಭಾತದ ಸ್ವಾಗತ ಕೋರಿದವು

ಅಧ್ಯಾಯದ ಆರಂಭ-ಕೊನೆ

ಏಕೆ ಹೀಗಾಗುವುದೋ ನಾ ಕಾಣೆ
ಎಲ್ಲವೂ ನಿರ್ಧಾರಿತವಾದುದಕ್ಕೆ ತಡೆ ಬೀಳುವುದೇಕೋ?
ಆಗೇ ಹೋಯಿತು ಅನ್ನುವುದರೊಳಗಾಗಿ
ಇನ್ನೇನೋ ಆಗುವತ್ತ ನಿರ್ಧಾರ ಹೊರಳಿರುತ್ತದೆ
ಬದ್ಧತೆ,ದೃಢತೆ ಮಗ್ಗುಲು ಮಲಗಿಕೊಳ್ಳುತ್ತದೆ
ವಚನ ಭ್ರಷ್ಟತೆ ನಗುತಾ ಹೊರಹೊಮ್ಮುತ್ತದೆ
ಮನಸ್ಸುಗಳು ನರಳುತ್ತದೆ
ಒಂದು ಅಧ್ಯಾಯದ ಕೊನೆ
ಮತ್ತೊಂದು ಅಧ್ಯಾಯದ ಆರಂಭ
ಕೊನೆ ಮೊದಲಿಲ್ಲದ ಕಾಲ ನಾಳೆಗೆ ಹೊರಳುತ್ತದೆ
ಉದಯರವಿ ಮತ್ತೊಂದು ಭರವಸೆಯ ದಿವಸ ಕಾದಿರಿಸುವನು ಎಲ್ಲರಿಗೂ||

ಮನದೊಳ ಕದನ


ನೀನು ಏನು ತಿಳಿದಿರುವೆಯೋ ಅದು ನಾನಲ್ಲ
ಬಾಹ್ಯದಲ್ಲಿ ಹೀಗೆ ಕಾಣುವ ನಾನು, ನಾನಲ್ಲ;
ಆಂತರ್ಯದಲ್ಲಿ ಎದೆ ತಟ್ಟಿದೆ ನೂರು ಕದನ
ಅಲ್ಲಿ ಯೋಧನೂ ನಾನೇ!
ಶಾಂತಿ ಧೂತನೂ ನಾನೇ!
ನಡೆಯುವ ಯುದ್ಧ ಏತಕ್ಕೋ? ನಾನರಿಯೆ
ಪ್ರತಿದಿನ ಕದನ ನಡೆವುದು ಮನದೊಳಗೆ
ತೀವ್ರ ಹೋರಾಟದ ನಡುವೆಯೂ ಸಾಯುತ್ತೇನೆ
ರಾತ್ರಿ ಕತ್ತಲಾವರಿಸಿದ ಮೇಲೆ;
ಉದಯಿಸುವ ರವಿಯ ಬೆಳಕಿಡಿಗಳ ಮೂಲಕ ಮರುಜನ್ಮ
ಹೊಸಶಕ್ತಿಯೊಂದಿಗೆ ಕದನವು ಮುಂದುವರೆಯುವುದು
ಸತ್ತು-ಬದುಕಿ,ಸತ್ತು-ಬದುಕಿ
ಜೀವನದರ್ಥ ಬದಲಾಗಿದೆ, ಹೊಸತನ ಅರಳಿದೆ
ಹೊಸ ಕವನ ಕಣ್ಣುತೆರೆದಿದೆ;

ಮೌಢ್ಯರಕ್ತಬೀಜಾಸುರ


ಅಯ್ಯೋ! ಇಂದೇನಾಗಿದೆ ಹಾಂ! ದುರ್ವಿಧಿಯೇ!
ನಾಕು ಇದುದು ನಾಕು ಸಾವಿರವಾಗಿದೆ
ಮೀಸಲು,ಸವಲತ್ತುಗಳ ತಂದು ಜಾತಿಗಳ ಗಟ್ಟಿಗೊಳಿಸಿದರ್
ವಿಶ್ವಮಾನವರಾಗುವರಾರ್ ಇಲ್ಲಿ ಗುರುದೇವ
ಸ್ವಾರ್ಥದಿಂದೆಲ್ಲರೂ ಮೌಢ್ಯರಕ್ತಬೀಜಾಸುರರೇ ಆಗಿಹರ್||

ಹರಿಕಾರರು


ಸಾಮಾಜಿಕ ನ್ಯಾಯದ ಹರಿಕಾರರು ಇವರು
ಹೊತ್ತು ತಂದಿದ್ದಾರೆ ಹುಸಿ ಭರವಸೆಗಳ ನೂರು
ಅಧಿಕಾರ ಕೈ ಹತ್ತಿದ್ದೇ ಬದಲಾಗಿದೆ ನೋಡು
ದ್ವೇಷ-ಅಸೂಯೆಗಳೇ ಮೈವೆತ್ತಿ ಕೀಳು ರಾಜಕಾರಣದ ಕೇಡು||

ಸಿಕ್ಕ ಫಲವೇನು?


ಸ್ವಾತಂತ್ರ್ಯಾನಂತರ ಅರವತ್ತಾರು ವರ್ಷಗಳ
ರಾಷ್ಟ್ರೀಯಪಕ್ಷದ ಗುಲಾಮಗಿರಿಗೆ
ಕರ್ನಾಟಕಕ್ಕೆ ಸಿಕ್ಕ ಫಲವೇನು?
ಕಾವೇರಿ,ಕೃಷ್ಣ ರಾಜ ಸಾಗರ ಬತ್ತಲಾದದ್ದೇ ಲಾಭ!||

ಹೊಳೆ-ಬೆಳೆ


ಮನದ ಚಿಂತೆ,ಕಂತೆ ಎಲ್ಲಾ ತೊಳೆ
ಜೀವನದ ಮೌಡ್ಯ,ದುಃಖ,ದುಮ್ಮಾನ ಕಳೆ
ಶಾಂತ ಕಡಲಿನ ಅಲೆಗಳ ಮೇಲೆ ಬೆಳೆ
ತಾರೆಯರಂತೆ ಆಗಸದಲ್ಲಿ ಹೊಳೆ||

ಜಲ ಬರಿದು.....


ಜಲ ಬರಿದು.....
ಬರಿದಾಗುತ್ತಿದೆ ವಸುಂಧರೆಯ ಒಡಲು
ಕೆರೆ,ತೊರೆ,ನದಿ,ಜೀವನದಿ ಎಲ್ಲಾ ಬಟ್ಟಾಬಯಲು
ಕೇಳಲ್ಲಿ ಪ್ರಾಣಿ,ಪಕ್ಷಿ ಸಂಕುಲದ ಮೂಕ ಹುಯಿಲು
ಇಂದೇ ಬರೆದಿಡು ನಾಳೆಗೆ ನಿನ್ನಯ ಉಯಿಲು
ಸರ್ಕಾರ ಮಾಡಬೇಕಿದೆ ಜನರಿಗೆ ಅಪೀಲು
ಉಳಿಸಿ ಉಳಿಸಿ ಜೀವ ಜಲ ಉಳಿಸಿ||

ದುಡ್ಡು ಕೊಡುವೆವು;
ನೀರು ಸಿಗುವುದು;
ನಮ್ಮಯ ಜನರ ಅಹಂಕಾರ,ಧರ್ಪ;
ಅರಿತು ಬಳಸುವವರು ಯಾರಿಲ್ಲ ಇಲ್ಲಿ;
ಎಚ್ಚರಿಕೆ ಕೋರಿಕೆಗಳಿಗೆ ಬೆಲೆ ಇಲ್ಲ ಇಲ್ಲಿ;
ಜಲಕ್ಷಾಮ ಬಂದಾಯ್ತು;
ಎಚ್ಚರಗೊಳ್ಳದಿರೆ ಅಪಾಯ ಕಾದಿದೆ
ಊರಿಗೆ ಊರೇ ಸಾಯುವುದು ಖರೆ
ಕೇಳು ನೀ ಮನುಜ ವಸುಂಧರೆಯ ಕರೆ
ಎಲ್ಲೆಡೆ ಮುಕ್ಕುವುದು ಸೂತಕ
ಹಣ,ಅಂತಸ್ತು,ಸಂಪತ್ತು ಮಣ್ಣುಗೂಡುವುದು
ಎಚ್ಚರಗೊಳ್ಳೋ ಮನುಜ
ರಕ್ಷಿಸು ಜೀವಜಲ
ಉಳಿಸು ಮನುಜ ಕುಲ||

ಚಿತ್ರಕೃಪೆ:ಕನ್ನಡಪ್ರಭ




ಪ್ರೀತಿ-ವಿಶ್ವಾಸ-ವಾತ್ಸಲ್ಯ


ಹೃದಯದ ಅಣುಅಣುವಿನಲಿ
ಪ್ರೀತಿ-ವಾತ್ಸಲ್ಯಗಳಿರಲಿ
ಹೃದಯ ವೈಶಾಲತೆಯು ಸದಾ ಹಸಿರಾಗಿರಲಿ
ಪ್ರೀತಿ-ವಿಶ್ವಾಸ-ವಾತ್ಸಲ್ಯ
ಮಾನವೀಯತೆಗಳೇ ಜೀವನದ
ಅಮೂಲ್ಯ ಸಂಪತ್ತುಗಳಾಗಲಿ||

ಗಂಗೆ-ಶಂತನು


ಸವಿಸ್ತಾರದ ಸಾಮ್ರಾಜ್ಯ;
ಪ್ರಖ್ಯಾತ ರಾಜವಂಶ;
ಹೆಸರಾಗಿದೆ ಹಸ್ತಿನಾಪುರವೆಂದು;
ರಾಜನೋ ಗುಣಾಡ್ಯನಾದ ಶಂತನು;
ರಾಜ್ಯದ ಜನರ ಆಡುಮಾತಿನ ಸತ್ಯಶೀಲ,ಸತ್ಯವಂತ;
ಸತ್ಯ,ಸೂರ್ಯ,ಚಂದ್ರ,ಯಮ,ಭೂಮಿ,ವಾಯು ಗುಣಗಳ ಪೊತ್ತವನವನು;
ಸೌಂದರ್ಯ,ತೇಜಸ್ಸು,ಕೋಪ,ವೇಗ,ತಾಳ್ಮೆ ಹಾಗು ಸತ್ಯದ ಉಪಾದಿಯೇ ಶಂತನು;
ರಾಣಿ ಇಲ್ಲದ ರಾಜ ಏಕಾಂಗಿ;

ಗಂಗಾ ನದಿಯ ತೀರದ ತಾಣ;
ಶಂತನುವಿಗೆ ಆಪ್ಯಾಯಮಾನ;
ಒಮ್ಮೆ ಕಂಡಳು ಅಪ್ಸರೆಯಂತಹ ಹೆಣ್ಣು
ಮರುಳಾದ ಅವಳ ಚೆಲುವಿಗೆ ಶಂತನು
ಪೆಣ್ಣೆಂದರೆ ಹೀಗಿರಬೇಕೆಂದಿತು ಮನ
ಸೌಂದರ್ಯಕ್ಕೇ ಅಪವಾದವಳು ಅವಳೇ ಗಂಗೆ
ಎಂಥ ಸೌಂದರ್ಯ, ಯೌವ್ವನ ಅವಳದು?
ಕಂಡ ಗಂಡಿಗೆ ನಿದ್ದೆ ಕೆಡಿಸುವಂತಹುದು!
ಮೊದಲ ನೋಟದಲ್ಲೇ ಸೋತಿದ್ದ ಶಂತನು
ಅವಳಿಲ್ಲದೆ ಜೀವನ ಬೇಡವೆನಿಸಿತು ಅವನಿಗೆ;
ಮದುವೆಯಾಗೆಂದು ಪರಿಪರಿಯಾಗಿ ಅವಳ ಬೇಡಿದ
ಒಪ್ಪುವೆನು ನೀ ನನ್ನ ಶರತ್ತಿಗೆ ಬದ್ಧನಾದರೆ ಎಂದಳವಳು
ನನ್ನ ಯಾವ ಕೆಲಸಕ್ಕೂ ಅಡ್ಡಿಪಡಿಸಬಾರದು,
ಯಾವ ಕೆಲಸಕ್ಕೂ ಆಕ್ಷೇಪಿಸಬಾರದು,
ಏಕೆ? ಏನು? ಎತ್ತ? ಪ್ರಶ್ನಿಸಲೇಬಾರದೆಂದಳು
ಪ್ರಶ್ನಿಸಿದರೆ ಅಂದೇ ನನ್ನ ನಿನ್ನ ಋಣಾನುಬಂಧ ಕೊನೆಗೊಳ್ಳುವುದು
ನಾ ಎಲ್ಲವನ್ನೂ ತೊರೆದು ನಿನ್ನಿಂದ ದೂರಾಗುವೆನೆಂದಳು ಆ ಪೆಣ್
ಆವುದೋ ಗುಪ್ತಕಾರ್ಯಸೂಚಿಯ ಹೊತ್ತೇ ಧರೆಗಿಳಿದಿದ್ದಳವಳು
ಅವಳ ಯೌವ್ವನದ ಸೆಳೆತಕ್ಕೆ,ಗಾಳಿಕ್ಕೆ ಸಿಕ್ಕ ಮೀನಾಗಿದ್ದ ಶಂತನು
ಮರುಮಾತಿಲ್ಲದೆ,ಯೋಚಿಸದೇ,ವಿವೇಚಿಸದೇ ಆಗಬಹುದೆಂದನು

ನಿಜವಾದ ಕಥೆ ಶುರುವಾದದ್ದು ಈಗಲೇ
ಗಂಗೆ-ಶಂತನು ಮದುವೆಯಾದರು
ಆನಂದದ ದಿನಗಳು-ಸುಖಕ್ಕೆ ಕೊನೆಯೇ?
ರತಿಯೇ ಕೈಹಿಡಿದಿರುವಾಗ ಸ್ವರ್ಗಕ್ಕೆ ಕಿಚ್ಚುಹಚ್ಚಿದ್ದ ಶಂತನು
ಯೌವ್ವನದ,ಹರೆಯದ ಸೌಂದರ್ಯದ ಮೈಥುನದ ಸುಖ
ಒಲ್ಲೆನೆನ್ನದೆ ಧಾರೆ ಎರೆದಿದ್ದಳು ಗಂಗೆ ಶಂತನುವಿಗೆ;
ಶಂತನು ಸ್ವರ್ಗ ಸುಖ ಉಂಡಿದ್ದ-ಶರತ್ತು ಮರೆತಿದ್ದ
ಮೈಥುನದ ಸುಖ ಫಲ ಕೊಟ್ಟಿತ್ತು
ಗಂಗೆಗೆ ಗಂಡು ಮಗುವಾಯಿತು
ಗಂಗೆಯ ನಿಜರೂಪ ಶಂತನುವಿಗೆ ಈಗ ಗೋಚರಿಸಲಾರಂಬಿಸಿತು;
ಗಂಗೆ ಶಂತನುವಿನ ಎದುರಿನಲ್ಲೇ ಮಗುವನ್ನು ನೀರಿಗೆ ಆಹುತಿಯಿತ್ತಳು
ಶಂತನು ಇಕ್ಕಟ್ಟಿಗೆ ಸಿಲುಕಿದ್ದ,ಶರತ್ತು ಅವನಿಗೆ ನೆನಪಾಯಿತು
ಪ್ರಶ್ನೆ ಕೇಳುವ ಹಾಗಿಲ್ಲ... ಇಬ್ಬಂದಿತನ ಶಂತನುವನ್ನು ಕಾಡಿತು
ಗಂಗೆ ಜೊತೆಯಲಿರೆ ಅಂತಹ ಮಕ್ಕಳು ನೂರು.. ಎಂದೆನಿಸಿತು
ಗಂಗೆ ಮೈಥುನಕ್ಕೆ ಒಲ್ಲೆ ಎನ್ನಲಿಲ್ಲ ಅದೇ ಸಂತೋಷ ಶಂತನುವಿಗೆ
ಹೀಗೆ ದಾಂಪತ್ಯದ ಫಲವೆಂಬಂತೆ ಎರಡನೇ,ಮೂರು,ನಾಲ್ಕು,ಐದು
ಆರು ಹಾಗು ಏಳು ಮಕ್ಕಳನ್ನು ಹೆತ್ತಳು ಹಾಗು ಎಲ್ಲವನ್ನೂ
ಶಂತನುವಿನ ಎದುರಿನಲ್ಲೇ ನೀರಿಗೆ ಆಹುತಿಯಿತ್ತಳು ಆ ಮಹಾತಾಯಿ
ಶಂತನಿವಿಗೆ ತಾಳ್ಮೆ ಇಲ್ಲವಾಗಿತ್ತು
ಮಗುವಿಗಾಗಿ ಹಂಬಲಿಸಿದ್ದ,ಬೆಂದುಹೋಗಿದ್ದ
ಗಂಗೆಯೊಂದಿಗಿನ ಸರಸ,ಸಲ್ಲಾಪ,ಮೈಥುನ ಮುಂದುವರೆದಿತ್ತು
ಎಂಟನೆಯ ಮಗುವಿನ ಜನನವಾಯಿತು;
ಶಂತನುವಿನ ಎದುರಲ್ಲೇ ಈ ಬಾರಿಯೂ ನೀರಿಗೆ ಆಹುತಿ ನೀಡಲು ಸಜ್ಜಾಗಿದ್ದಳು
ಇನ್ನೇನು ನೀರಿಗೆ ಆಹುತಿ ನೀಡಬೇಕೆನ್ನುವಷ್ಟರಲ್ಲೇ
ಬೆನ್ನ ಹಿಂದಿನಿಂದ " ಗಂಗೇ ಏನು ಮಾಡುತ್ತಿರುವೆ?"
ತುಟಿ ಮೀರಿ ಶಂತನು ಪ್ರಶ್ನಿಸಿಯೇ ಬಿಟ್ಟಿದ್ದ ಶರತ್ತು ಮುರಿದಿದ್ದ
ಗಂಗೆ ಶಂತನುವಿಗೆ ಆ ಮಗುವನ್ನು ಕೊಟ್ಟಳು
ತಾನು ಬಂದ ಕಾರ್ಯ ಮುಗಿಯಿತ್ತಿನ್ನು
ತಾನು ಬಂದ ರಹಸ್ಯವನ್ನು ಶಂತನುವಿಗೆ ತೆರೆದಿಟ್ಟಳು
ಮರುಮಾತಿಲ್ಲದೆ ನಡೆದು ಮರೆಯಾದಳು
ಆ ಮಗುವೇ ದೇವವ್ರತ- ಮಹಾಭಾರತದಲ್ಲಿ ಭೀಷ್ಮನೆಂದು ಪ್ರಖ್ಯಾತನಾದ||

ಪ್ರೇರಣೆ: " ಶೃಂಗಾರ ಕಥೆಗಳು" ಶ್ರೀ ಬೇಲೂರು ರಾಮಮೂರ್ತಿ.

ಯಯಾತಿ!


ಬಯಸುತ್ತೇವೆ ನಾವು ಎಲ್ಲವನ್ನೂ
ಎಲ್ಲರದ್ದೂ ನಮಗೆ ಸಿಗಲೆಂದು
ಎಲ್ಲಕ್ಕೂ ಆಸೆ ಮಿತಿಮೀರಿ ಬತ್ತದೆ ಹಸಿರಾಗಿದೆ
ದುಃಖಕ್ಕೆ ಮೂಲ ಕಾರಣ ತಿಳಿದಿದ್ದರೂ ಅದೇ ಉಸಿರಾಗಿದೆ||

ಅವನ/ಅವಳ ಕೆಲಸ ನನ್ನದಾಗಬೇಕು!
ಅವನ/ಅವಳ ಮನೆ.ಕಾರು,ಹೆಂಡತಿ/ಗಂಡ ನನ್ನದಾದರೆ ಚೆಂದ
ಮನಸ್ಸಿಗೆ,ಆಸೆ ಸ್ವಾರ್ಥಕ್ಕೆ ಎಲ್ಲೆ ಇಲ್ಲವಾಗಿದೆ
ಯಾಂತ್ರಿಕತೆ,ಜಾಗತೀಕರಣ ಎಲ್ಲವನ್ನೂ ಸಾಧ್ಯವಾಗಿಸಿದೆ||

ಮೋಹ,ವ್ಯಾಮೋಹಗಳಿಗೆ ಅರ್ಥಬದಲಾಗಿದೆ
ದುರಾಸೆ,ದುರ್ಬುದ್ಧಿಗೆ ಮಾನ್ಯತೆಯಿದೆ
ವ್ಯಾಪಾರ,ವಹಿವಾಟಿಗೆ ಅದೇ ಬಂಡವಾಳವಾಗಿದೆ
ಇಂದಿಗೆ ಎಲ್ಲರೂ ಯಯಾತಿಯರೇ ಆಗಿಹೋಗಿದ್ದಾರೆ||

ಆ ಕಾಲ! ಈ ಕಾಲ!


ಎಲ್ಲೊ ಹೋದವು ಆ ಕಾಲ?
ಮನದಲ್ಲಿ ಮಧುರ ದಿನಗಳ ನೆನಪು
ಚಿತ್ರತೆರೆಯ ಮೇಲೆ ಬಂದು ಹೋದಂತಾಗಿತ್ತು||

ಸಿಹಿ-ಕಹಿ ಎಲ್ಲವೂ ಚಿತ್ರತೆರೆಯ ಮೇಲೆ ಸಹ್ಯವಾಗಿತ್ತು
ಕಳೆದ ಕಾಲ,ಬೆಳೆದ ಮನ,ಎಳೆತನ-ಗೆಳೆತನ ಎಲ್ಲವನ್ನೂ ಮಾಗಿಸಿತ್ತು
ಹೊಸತನ,ದೃಷ್ಟಿಕೋನ,ಎದುರಿಸುವ ಛಲ ಮನಕ್ಕೆ ಮುದನೀಡಿತ್ತು||

"ಬಂದೇ ಬರುತಾವ ಕಾಲ" ಆ ಕಾಲಕ್ಕೆ ಕಾಯುತ್ತಿದ್ದೇವೆಯೇ?
ಒಳ್ಳೆ ಕಾಲ.ಕೆಟ್ಟ ಕಾಲ ಎಂಬುದು ಇದೆಯೇ?
ಅದು ಭ್ರಮೆಯೋ? ಮೌಡ್ಯವೋ? ಕಾಲ ಮಾತನಾಡುವುದೇ?||

ಎಲ್ಲಕ್ಕೂ ಮೌನವೇ ಉತ್ತರ, ಅರಿಯುವೆವೇ ನಾವು!
ಕಾಯುತ್ತಾ ಕುಳಿತಿರುವವರಿಗೆ ಏನು ಹೇಳೋಣ
"ಕಾಲವನ್ನು ತಡೆಯೋರು ಯಾರು ಇಲ್ಲ" ಎನ್ನೋಣವೇ!
ಕಾಯುತ್ತಲೇ ಇರಬೇಕು ಬರುವವರೆಗೂ ಸಾವು||

ಭಕ್ತಿಯ ಮೂರ್ತರೂಪ


ಏಕೆ ಕುಳಿತಿಹೆ ಅಳಿಲೇ?
ಮರದ ಮೇಲೆ ಅಲ್ಲೇ!
ಯಾರ ದಾರಿ ಕಾಯುತ್ತಿರುವೆ?
ಮರವೆಲ್ಲಾ ಕಣ್ಣಾಗಿದೆ,ಮನವೆಲ್ಲಾ ಹಣ್ಣಾಗಿದೆ;
ಜೀವನವೆಲ್ಲಾ ಯಾರಿಗೆ ಮುಡಿಪಾಗಿಟ್ಟಿರುವೆ?

ಆಗೋ ಬಂದೇ ಬರುವ!
ಈಗೋ ಬಂದೇ ಬರುವ!
ಕಾಣಲು ತವಕದ ಕಣ್ಣುಗಳು
ಎಷ್ಟು ವರ್ಷಗಳ ತಪಸ್ಸು ನಿನ್ನದು?
ಈ ಪರಿ ನಿನ್ನದು ಭಕ್ತಿಯೋ?,ಸೇವೆಯೋ?
ನೀನು,ಶಬರಿಯೂ ಭಕ್ತಿಯ ಮೂರ್ತರೂಪವೇ ಸರಿ.


ಮಯೂರ ಜುಲೈ-2013 ರ ಸಂಚಿಕೆಯ "ಚಿತ್ರಕಾವ್ಯ" ದಲ್ಲಿ ನನ್ನ ಕವನ.






ಮೋಡದ ಅಳು


ನನ್ನ ಅಮ್ಮ


 ನನ್ನ ಅಮ್ಮ ಶಾರದೆ
ಎಷ್ಟು ದಿನಗಳಾದವು ಮನಕೆ ಬಾರದೆ
ಏಕೆ ದಯ ಬಾರದೆ
ಅಮ್ಮಾ ಶಾರದೆ ಮನಕೆ ಬಾರಮ್ಮ||

ಅಮ್ಮಾ ನಿನ್ನ ಪ್ರೀತಿಯ ಆಳ
ವಾತ್ಸಲ್ಯದ ವಿಸ್ತಾರ
ಅರಿಯದ ಮುಗ್ಧ ಬಾಲಕ ನಾನಮ್ಮ
ಮರೆಯದೆ ಮನಕೆ ಬಾರಮ್ಮ||

ಕಣ್ಣರಳಸಿ,ಹೃದಯ ಹಿಗ್ಗಿಸಿ ಕಾಯುತಿಹೆ
ನಿನ್ನ ಮೊಗವ ನೋಡಲು ತವಕ ಹೆಚ್ಚಿದೆ
ವಾತ್ಸಲ್ಯದ ನುಡಿಗಳ ಕೇಳಲು ಕಿವಿಗಳು ಚಡಪಡಿಸಿದೆ
ಕಾಯುತಿಹೆ ಅಮ್ಮಾ ಮನಕೆ ಬಾರಮ್ಮ||

ಅಲ್ಲೇ ಎಲ್ಲೋ ಅವಿತಿಹೆ,ಬಂದೆನೆಂದು ಮಾತ್ರ ಹೇಳುವೆ
ತುಂಟತನದಿ ಪ್ರೇಮಿಯಂತೆ ಕಾಯಿಸಿವೆ,ಹುಸಿ ಕೋಪ ತೋರುವೆ
ಬಾ ಬಾರೆಂದು ಕರೆದರೂ ಬಂದೆ ಈಗ ಬಂದೆನೆಂದು ಸತಾಯಿಸುವೆ
ಸಾಕು ಸೊರಗಿರುವೆ,ಹಸಿವೆ ಹೆಚ್ಚಿದೆ ಅರಿವ ಬಟ್ಟಲೊಡನೆ ಬಾ ಮನಕೆ ತಾಯೇ||                    

ಮತ್ತದೇ ಬೀದಿ ನಾಟಕ


ಎಲ್ಲವೂ ಇಂದು ಮುಗಿದಿದೆ, ಹೊಸ ಅಧ್ಯಾಯ ಪ್ರಾರಂಭವಾಗಿದೆ;
ಮೊನ್ನೆ ಮತಯಂತ್ರದೊಳಗೆ ಮತದಾರ ತನ್ನ ಮನದ ಗುಟ್ಟು ಬಚ್ಚಿಟ್ಟಿದ್ದ,
ಇಂದು ಚುನಾವಣಾ ಆಯೋಗ ಗುಟ್ಟು ರಟ್ಟುಮಾಡಿದೆ;
ಮಾಧ್ಯಮಗಳ ನಿರೀಕ್ಷೆಯಂತೆ ಫಲಿತಾಂಶ ಹೊರಬಿದ್ದಿದೆ;
ಸೋತವನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ;
ಗೆದ್ದವರು ಮಾತ್ರ ಮಾಧ್ಯಮಗಳ ಮುಂದೆ ಬೀಗುವುದು ಕಾಣಿಸಿತು;
ಒಂದು ಭ್ರಷ್ಟ ಪಕ್ಷ  ಹೊರಳಿತು ಅಧಿಕಾರದಿಂದ ನೇಪಥ್ಯಕ್ಕೆ;
ಇತ್ತೀಚಿನ ದಿನಗಳಲ್ಲಿ ಭ್ರಷ್ಟತನವನ್ನೇ ತನ್ನ ವಕ್ತಿತ್ವವಾಗಿಸಿಕೊಂಡಿರುವ
ಮತ್ತೊಂದು ಪಕ್ಷ ಅಧಿಕಾರದ ಗದ್ದುಗೆ ಏರಿದೆ;
ಯಾರು ಬಂದರೂ,
ಯಾರು ಹೋದರೂ,
ರೈತ ಹೊಲ-ಗದ್ದೆಗಳಲ್ಲಿ ಉಳುಮೆ ಮಾಡಲೇಬೇಕು;
ನಮ್ಮ ಬೆವರ ಹನಿ ನಮ್ಮನ್ನು ಕಾಯ್ವದಲ್ಲದೇ ಪರರ ಬೆವರ ಹನಿ ನಮ್ಮ ಕಾಯ್ವದೇ?
ನಮ್ಮ ಬೆವರ ಹನಿ ಬಳಸುವರು ತಮ್ಮ ಕೈ ತೊಳೆಯಲು ನಮ್ಮ ಆಳ್ವರು;
ನಮ್ಮ ಮುಂದೆ ಗೆದ್ದು ಬೀಗುವರು;
ನಾವು ಮಾತ್ರ ಮೂಕ ಪ್ರೇಕ್ಷಕರು;
ಮತ್ತೈದು ವರ್ಷ ನರಕಯಾತನೆಗೆ ಸಿದ್ಧರಾಗುತ್ತಿದ್ದೇವೆ,
ಹೊಸ ಶಕ್ತಿ,ನಿರೀಕ್ಷೆ ಹಾಗು ಆಶಾಭಾವದಿಂದ;
ಬೆಲೆ ಏರಿಕೆ, ನೀರಿನ ಸಮಸ್ಯೆ,ಕಾವೇರಿ ಕಿತ್ತಾಟ,ಕುರ್ಚಿ-ಖಾತೆ ಕಾದಾಟ....ಇತ್ಯಾದಿ ಮುಂದೈತೆ
ನಮಗೆಲ್ಲಾ ಕಾದೈತೆ ಪುಕ್ಕಟ್ಟೆ ಮನರಂಜನೆ.
ಇವೆಲ್ಲಾ ನಮಗೆ ಸಾಮಾನ್ಯವಾಗಿಬಿಟ್ಟಿದೆ
ಬದಲಾವಣೆ ಎಂದರೆ ಬರೀ ಹಸ್ತ ಬದಲಾವಣೆಯಲ್ಲ....
ಗೆಲುವು ಯಾರದಾದರೂ.....
ಸೋಲು ಮಾತ್ರ ಶ್ರೀಸಾಮನ್ಯನದು, ಮತದಾರನದು ಇದು ಸತ್ಯ.

ಮುಗಿಯದ ಎಣಿಕೆ


ಪ್ರತಿ ಬಾರಿ ಎಣಿಸುತ್ತೇನೆ
ಒಂದು,ಎರಡು,ಮೂರು.......ಹತ್ತರವರೆಗೆ
ಆ ಹೂವನ್ನು ನೋಡಿ ನಗುತ್ತೇನೆ
ನೋಡಿ ನಗುವಂತೆ ಜೀವ ಚೈತನ್ಯ ಉಕ್ಕಿಸುವ ಹೂವಿಗೆ ನಮನಗಳು;

ಪ್ರತಿ ತಿಂಗಳೂ ಎಣಿಸುತ್ತೇನೆ
ಬಿಡಿ,ಹತ್ತು,ನೂರು,ಸಾವಿರ....ಮುಗಿಯದ ಎಣಿಕೆ
ಸಂಖ್ಯೆಗಳ ಮೊತ್ತ ನೋಡಿ ನಗುತ್ತೇನೆ
ನೋಡಿ ನಗುವಂತೆ ಮನದೊಳಗೆ ಅಸಹಾಯಕತೆ ಗುರುತಿಸುವ ಅಂಕೆಗಳಿಗೆ ನಮನಗಳು;

ಪ್ರತಿ ರಾತ್ರಿ ಎಣಿಸುತ್ತೇನೆ
ಕತ್ತಲಲ್ಲಿ ಮಿನುಗುವ ತಾರೆಯರ
ಬೇಸರ ಪಡುತ್ತೇನೆ ಹುಣ್ಣಿಮೆಯಂದು
ನನ್ನ ನೋಡಿ ಕಣ್ಣು ಮಿಟುಕಿಸುವ ತಾರೆಯರ ವಾತ್ಸಲ್ಯಕ್ಕೆ ವಂದನೆಗಳು;

ವಸಂತ-ಚೈತ್ರ


ಎಲ್ಲವನ್ನೂ ಕಳಚಿ ಬೆತ್ತಲಾಗಿವೆ
ಹಳೆಯದರ ಲವಲೇಶವೂ ಇಲ್ಲದಂತೆ ಎಲ್ಲವೂ ಬರಿದು
ಹೊಸತನ ಆಂತರ್ಯದಲ್ಲಿ ಹುಟ್ಟುವ ಆ ಪರಿ
ಅತ್ಯಂತ ರೋಚಕ,ರೋಮಾಂಚನ, ಆನಂದ;
ವಸಂತನೇ ಮನದೊಳಗೆ ನೆಲೆಗೊಳ್ಳುವನೋ!
ಚೈತ್ರೆ ಪ್ರೀತಿಯ ಕಂಪನ್ನು ಪಸರಿಸುವಳೋ!
ಒಂದಂತೂ ನಿಜ, ವಸಂತ-ಚೈತ್ರ ಪ್ರಗತಿಗಾಮಿಗಳು
ಅದಕ್ಕೇ ಯುಗಾದಿಯಲ್ಲಿ ಜೀವನ ಪ್ರೀತಿ ಹರಿದಿದೆ;

ಮೋಹ,ಮಾಯೆ


ಮೋಹ,ಮಾಯೆ
ಜೀವ,ದೇವ
ದ್ವಂದ್ವ ನಿಲುವುಗಳ ಸಾಕ್ಷಾತ್ಕಾರ||

ಮೋಹ ಕಾಡಿದೆ
ಮಾಯೆ ಬೇಡಿದೆ
ಜೀವನ ಭಿಕ್ಷಾಪಾತ್ರೆಯಾಗಿದೆ||

ನೀರು ಮುತ್ತೇ?
ಮುತ್ತು ಮೂಗುತಿಯೇ?
ನೀರಿಗಾಗಿ ಹಾಹಾಕಾರ,ರಕ್ತಪಾತವಾಗಿದೆ||

ಬೆಂಕಿಯಲ್ಲಿ ಶಾಖವಿದೆ
ಶಾಖ ಸುಡುತ್ತದೆ
ಬೆಂಕಿ,ಶಾಖ ನಮ್ಮೊಡಲಲ್ಲೇ ಅಡಗಿದೆ||

ಪ್ರೇರಣೆ: ಮೋಹವೆಂಬ ಮಾಯೆ-ಡಾ|| ಬಸವರಜ ಸಬರದ

ಕನ್ನಡಿ


ಪ್ರತಿಮೆಗಳು ಹಲವು;
ಪ್ರತೀಕಗಳು ಹಲವು;
ಒಂದೊಂದು ಬಗೆಬಗೆಯ ಆದರ್ಶಗಳ ಪ್ರತಿಬಿಂಬ;
ಬೆನ್ನೆತ್ತುವವರು ಹಲವರು;
ಕೈಚೆಲ್ಲುವವರು ಹಲವರು;
ಗುರಿಮುಟ್ಟುವವರು ಮಾತ್ರ ಕೆಲವೇ ಕೆಲವರು;
ಸಾರ್ಥಕತೆಯನ್ನರಸಿ ಪರಿತಪಿಸುವವರು ಒಬ್ಬರೋ! ಇಬ್ಬರೋ!
ಸಾಧಕನಿಗಲ್ಲದೆ ಮತ್ಯಾರಿಗೊಲಿವುದು ಗೆಲುವು ಹೇಳಿ!

ಕತ್ತಲು-ಬೆಳಕು


ಕತ್ತಲು-ಬೆಳಕು
ನಾನು ಕತ್ತಲಲ್ಲಿ;
ಅವನು ಬೆಳಕಲ್ಲಿ;
ಕತ್ತಲಲ್ಲಿ ನಾನು ಬೆಳಕ ಕಾಣಬಯಸಿದ್ದೇನೆ;
ಬೆಳಕಲ್ಲಿ ಅವನು ಕತ್ತಲ ಕಾಣುತ್ತಿದ್ದಾನೆ;
ಭ್ರಮೆಯಲ್ಲಿದ್ದೇನೆ ಬೆಳಕಿನಲ್ಲಿ ನಾನಿದ್ದೇನೆಂದು;
ನಗುತ್ತಿದ್ದಾನೆ ಅವನು ಬೆಳಕಿನ ಮಾಯೆಗೆ ಮರುಳಾಗಿ;
ನಾನಂದು ಕೊಂಡಿದ್ದೂ ಸತ್ಯವೋ? ಮಿಥ್ಯವೋ?
ಅವನು ಅಂದುಕೊಂಡಿದ್ದು ಸತ್ಯವೋ? ಮಿಥ್ಯವೋ?
ಭ್ರಮೆಯ ಬದುಕು;
ಮಾಯೆಯ ಸೆಳೆತ;
ಕತ್ತಲಲ್ಲಿ ಬೆಳಕ ಹುಡುಕುವವನು ಅಶಾವಾದಿ;
ಬೆಳಕಲ್ಲಿ ಕತ್ತಲ ಕಾಣುವವನು ನಿರಾಶಾವಾದಿ;

ಕನ್ನಡ ಸಮ್ಮೇಳನ-೨೦೧೩


ಮತ್ತೊಂದು ಕನ್ನಡ ಸಮ್ಮೇಳನ ಸದ್ದಿಲ್ಲದೆ
ಇತಿಹಾಸ ಪುಟಗಳ ಸೇರಿತು ಹೊಸತನವಿಲ್ಲದೆ!
ಮರೆತಾದರೂ ಹೇಗೆ ಮರೆಯೋಣ ಹೇಳಿ
ಜೋತು ಬಿದ್ದಿದ್ದೇವೆ ಯಾರೋ ಹಾಕಿದ ಆಲದ ಮರಕ್ಕೆ!
ಮುಂದೆ ಸಾಗದೆ ಇದ್ದ ಜಾಗದಲ್ಲೇ ನಿಂತು
ಅಡಿ ಇಡಲಾಗದೆ ಮುಂದೆ, ನಮ್ಮನ್ನು ನಾವೇ ಹಳಿದುಕೊಳ್ಳುತ್ತಿದ್ದೇವೆ!
ಸಾಪೇಕ್ಷ ಸಿದ್ಧಾಂತಕ್ಕೆ ಸೋತು;
ಮುಂದೆ ಹೋಗುವವರ ಕಂಡು;
ನಾವು ಮುನ್ನಡೆಯುತ್ತಿದ್ದೇವೆಂಬ ಭ್ರಮೆಯಲ್ಲಿದ್ದೇವೆ!
ತಂತ್ರಾಂಶ,ಸುಧಾರಣೆ,ಹೊಸತನ,ಆವಿಷ್ಕಾರ
ಎಲ್ಲೋ ಕೇಳಿದ ಹೊಸಪದಗಳಂತೆ ತೋರುತ್ತಿವೆ!
ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ ನಿರಂತರವಾಗಿ
ಈಗಿನದು ಮುಂದಿನ ಕ್ಷಣದಲ್ಲಿ ಬದಲಾಗಿರುತ್ತದೆ
ಕನ್ನಡ ಭಾಷೆ,ಕನ್ನಡ ಬಳಕೆ ಮಾತ್ರ ಎಂದಿನಂತೆ ಸೊರಗಿದೆ
ಚರ್ಚೆ,ಸವಾಲು,ಆವಿಷ್ಕಾರಗಳು ಕನ್ನಡಕ್ಕೆ ಎಲ್ಲಿಂದ ಬರಬೇಕು?
ಕನ್ನಡ ಸಂಕೀರ್ಣವಾಗಿ,ಕನ್ನಡಿಗರ ಸಂಕುಚಿತತೆಗೆ ಬಲಿಯಾಗಿ ಬೆಳೆಯಲಾರದೆ,ನಿಂತನೀರಾಗಿ
ಬೆಂಗಳೂರಿನ ಕೆರೆಗಳ ಸ್ಥಿತಿ ಕನ್ನಡ ಭಾಷೆಗೆ ಬಂದೊದಗಿದೆ;
ಇರುವ ಶಬ್ದಗಳೇ, ಪದಗಳೇ ಬಳಕೆಯಾಗದೆ ಕಣ್ಮರೆಯಾಗಿತ್ತಿದೆ;
ಕನ್ನಡನಾಡಲ್ಲೇ ಕನ್ನಡಶಾಲೆಗಳು ನೆಲೆಕಳೆದುಕೊಳ್ಳುತ್ತಿವೆ;
ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ನಾವು ಒಳಗಾಗಿದ್ದೇವೆ;
ಆಂಗ್ಲ ಶಾಲೆಗಳು ಕನ್ನಡ ಶಾಲೆಗಳ ನುಂಗುತ್ತಿವೆ;
ನಮ್ಮದೇ ಸಿನಿಕತೆಗೆ;
ಅನ್ಯಭಾಷೆಗಳ ಒತ್ತಡಕ್ಕೆ ಸಿಲುಕಿದೆ ಕನ್ನಡ;
ಕನ್ನಡಿಗರ ಕೈಯಲ್ಲೇ ಅವಮಾನಿಸಲ್ಪಟ್ಟಿದೆ ಕನ್ನಡ;
ಇನ್ನು ಸಾಹಿತಿ,ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಬಲಿಕೊಡುತ್ತಿದ್ದಾರೆ ಕನ್ನಡವನ್ನು;
ವಿಜ್ಯಾನ,ತಂತ್ರಜ್ಯಾನ ಹೊಸಹೊಸ ದಾರಿಗಳು ತೆರೆದಿಕೊಳ್ಳುತ್ತಿದೆ;
ಬೇರೆ ಭಾಷೆಗಳು ಆಕ್ರಮಿಸಿದರೆ,ಕನ್ನಡ ಮಾತ್ರ ನರಳಿದೆ;
ಪ್ರಪಂಚವನ್ನು ಕನ್ನಡದ ಕಂಗಳಿಂದ ನೋಡುವ.ಅರಿವ ಭಾಗ್ಯ ಕನ್ನಡ ಕಂದರಿಗಿಲ್ಲ;
ಆರ ಸೌಭಾಗ್ಯಕ್ಕೋ!,ಆರ ಅನುಕೂಲಕ್ಕೋ?
ಬೆಳಕಿಗೆ ಬಾಗಿಲ ತೆರೆಯದೆ, ಕತ್ತಲಲ್ಲಿದ್ದೇವೆ ಎಂದು ಬೊಬ್ಬೆಹೊಡೆಯುತ್ತಿದ್ದೇವೆ ನಾವು;
ಎಷ್ಟು ಸಮ್ಮೇಳನಗಳು ಮಾಡಿದರೂ....
ಕೋಟಿ ಕೋಟಿ ಹಣವ ಸುರಿದರೂ.....
ನಾವೇ ಹಾಕಿಕೊಂಡ ಬೇಡಿಯ ಕಳಚದಿರೆ ಸ್ವಾತಂತ್ರವೆಂಬುದಿದೆಯೇ?
ಕನ್ನಡ,ಕನ್ನಡ,ಕನ್ನಡ,ಕನ್ನಡ
ಪ್ರಪಂಚಕ್ಕೆ ಸಂವಾದಿಯಾಗಬಲ್ಲುದೇ?

ವಿಷವೃಕ್ಷ


ನನ್ನ ಗೆಳೆಯನ ಬಗ್ಗೆ ಕೋಪಗೊಂಡಿದ್ದೆ,
ಮನಸ್ಸಿಗೆ ಸ್ವಾಂತನ ಹೇಳಿದೆ;
ಕಡುಕೋಪ ಕೊನೆಗೊಂಡಿತು;
ನನ್ನ ಶತೃವಿನ ಬಗ್ಗೆ ಕೋಪಗೊಂಡಿದ್ದೆ,
ಮನಸ್ಸಿಗೆ ಸ್ವಾಂತನ ಹೇಳಿದರೂ
ಕಡುಕೋಪ ಹೆಮ್ಮರವಾಯಿತು;

ಮನದ ತೋಟದಲ್ಲಿ ಭಯಕ್ಕೆ ನೀರಡಿಸಿದೆ
ರಾತ್ರಿ ಮತ್ತು ಹಗಲೆನ್ನದೆ ನನ್ನ ಕಣ್ಣೀರಿನಿಂದ;
ನನ್ನ ನಗುವಿನ ಬೆಳಕು ಹರಿಸಿದೆ
ಅಪನಂಬಿಕೆಯ ಹೊಗೆ ಆರಲಿಲ್ಲ;

ರಾತ್ರಿ ಮತ್ತು ಹಗಲೆನ್ನದೆ ನನ್ನ ಎದೆಯಲ್ಲಿ ಬೆಳೆಯುತ್ತಿತ್ತು
ಒಂದು ದಿನ ತೋಟದ ಹಣ್ಣಾಯಿತು ಹೊಳೆಯುವ ಸೇಬಿನಂತೆ;
ನನ್ನ ಶತೃವೂ ಅದರಷ್ಟೇ ಹೊಳೆಯುತ್ತಿದ್ದ
ಹಾಗು ಅವನಿಗೆ ಗೊತ್ತಿತ್ತು ಅದು ನನ್ನದೆಂದು;

ಒಮ್ಮೆ ರಾತ್ರಿಯ ಕತ್ತಲ ಸೆರಗು ಜಾರುತ್ತಿದ್ದಂತೆ
ನನ್ನ ತೋಟದಲ್ಲಿ ಬೆಳೆದ ಹೊಳೆವ ಸೇಬು ಕಣ್ಮರೆಯಾಗಿತ್ತು;
ಮನಸ್ಸು ಹಗುರಗೊಂಡಿತ್ತು ಆ ಸಂತೋಷದ ದಿನ
ಅದರ ಹಿಂದೆಯೂ ನನ್ನ ಶತೃವಿನ ಹಸ್ತಕ್ಷೇಪವಿದೆ ಎಂದು ಅರಿವಾಗಿತ್ತು;

ಪ್ರೇರಣೆ: 'A Poison Tree' by William Blake

ಮೌನಿ


ನೋಡ ನೋಡಬೇಕೆಂದು ಕನವರಿಸಿದ್ದೆ;
ಮಾತನಾಡಬೇಕೆಂದು ಬಡಬಡಿಸಿದ್ದೆ;
ನೋಡಲೂ ಇಲ್ಲ;
ಮಾತನಾಡಲೂ ಇಲ್ಲ;
ಅದಕ್ಕೆ ಇಂದು ಮೌನಿಯಾಗಿದ್ದೇನೆ;
ಮೌನವಾಗಿ ಎಲ್ಲವನ್ನೂ ಎದುರಿಸುತ್ತಿದ್ದೇನೆ;
ಒಳಒಳಗೇ ಮಾನಸಿಕವಾಗಿ ಬಲವಾಗುತ್ತಿದ್ದೇನೆ;
ಏನೇ ಬಂದರೂ;
ಏನೇ ಆದರೂ;
ಹೇಡಿಯಾಗಿ ಶರಣಾಗದೆ
ಧೈರ್ಯವಾಗಿ ಹೋರಾಡಲು ಸಿದ್ಧನಿದ್ದೇನೆ;
ಸಿದ್ಧನಾಗಿದ್ದೇನೆ;

ನಾಳೆಗೆ ಸಿದ್ಧತೆ


ನಿದ್ದೆ ಬರುವುದೆಂದು ಮಲಗಿದ್ದೆ
ಬದುಕಿನ ಭರವಸೆಗಳ ಕನಸು ಕಾಣುತ್ತಾ....
ಹೃದಯದ ಬಡಿತದ ತಾಳ-ಮೇಳಗಳ ಆಟದಲ್ಲಿ
ಹೊಸ ರಾಗ-ತಾನಗಳ ಹುಡುಕಾಟದಲ್ಲಿ
ಕಣ್ಣು ಮುಚ್ಚಿ ಎಲ್ಲವನ್ನೂ ಆಹ್ವಾನಿಸಿದ್ದೆ
ನಾಳೆಯೆಂಬ ಅವಕಾಶಗಳ ಹೆದ್ದಾರಿಗೆ
ಹೆಜ್ಜೆಯಿಡಲು ಮಾನಸಿಕವಾಗಿ ಸಿದ್ಧನಾಗಿದ್ದೆ.......

ತಿರಸ್ಕಾರ


ಮನದಲ್ಲಿ ನೂರು ಯೋಚನೆಗಳಿವೆ
ಕೊನೆಯೆಂದೋ ಬೇಸತ್ತಿದ್ದೇನೆ
ಹೊಸತನ ಹುಡುಕುವ ತವಕ ಒಂದು ಕಡೆ
ಕಾಣದ ಬೇಸರಕ್ಕೆ ಮನ ಮುದುಡುತ್ತಿದೆ ಮತ್ತೊಂದು ಕಡೆ
ಹೆಣಗಬೇಕು, ಸೊರಗಬೇಕು ಮತ್ತೆ ಮತ್ತೆ ಅಲ್ಲೇ ಕೊಳೆತು ನಾರುತ್ತಾ...
ಹೊಸಬರು ನಮ್ಮ ಸ್ಥಾನವನ್ನು ತುಂಬುವುದನ್ನು ನೋಡಿ
ಮನದಲ್ಲೇ ಕೊರಗುತ್ತಿದ್ದೇವೆ;
ನಮಗಿಲ್ಲದ ಅವಕಾಶ ಹೊರಗಡೆಯಿಂದ ಬಂದವನಿಗೆ ಸಿಗುತ್ತಿರುವುದಕ್ಕೆ
ಹೊಟ್ಟೆಯಲ್ಲಿ ಕಿರುಕುಳ ಶುರುವಾಗಿದೆ;
ನಮ್ಮ ಅವಕಾಶಗಳನ್ನು ಅವರು ಕಿತ್ತುಕೊಳ್ಳುತ್ತಿದ್ದಾರೆ ಎನ್ನಲೋ!
ಇಲ್ಲ ನಮ್ಮವರೇ ನಮಗೆ ಅವಕಾಶ ನಿರಾಕರಿಸುತ್ತಿದ್ದಾರೆ ಎನ್ನಲೋ!
ಇಲ್ಲ ನಿಮಗ್ಯಾರಿಗೂ ಯೋಗ್ಯತೆಯಿಲ್ಲವೆನ್ನುವ ಸಂದೇಶವೋ?
ಒಂದೂ ತಿಳಿಯದಾಗಿದೆ;
ಮೌನವೇ ಮಾತಾಗಿದೆ;
ಮನದಲ್ಲೇ ಅಸಹನೆಯ ಜ್ವಾಲಾಮುಖಿ ಒಳಗೊಳಗೇ ಕುದಿಯುತ್ತಿದೆ

ಘೋಷಣೆ-ಪೋಷಣೆ


ಮತ್ತೊಂದು ಚುನಾವಣೆಯ ಘೋಷಣೆ
ಎಲ್ಲಾ ಪಕ್ಷಗಳಿಂದ ಮತದಾನ ಪ್ರಭುವ ಪೋಷಣೆ
ಹಣ,ಹೆಂಡದಿಂದ ಮತದಾರನ ಅಭಿಷೇಕ
ಮತ್ತೈದು ವರ್ಷ ನಿಲ್ಲದು ಮತದಾರನ ಶೋಕ

ಚುನಾವಣೆ-ಭ್ರಷ್ಟಾಚಾರ


ಚುನಾವಣೆಗಳ ಸಾಲು ಸಾಲು ಮುಂದೆ
ಪಕ್ಷಗಳ ತತ್ವಗಳು ಮಾರು ಮಾರು ಹಿಂದೆ
ಹಣ,ಹೆಂಡ ಹಂಚುವಿಕೆಯೇ ಎಲ್ಲಾ ಪಕ್ಷಗಳ ತಂತ್ರ
ಭ್ರಷ್ಟಾಚಾರದ ಹಣ, ಆಸ್ತಿಗಳಿಕೆಯ ತಂತ್ರ\\

ಗೀಳು


ಉಳ್ಳವರು shopper stop,
Meenakshi mall, Central,Forum mall ಗಳಿಗೆ ಹೋಗುವರು
ನಾನೇನು ಮಾಡಲಿ ಬಡವನಯ್ಯಾ!
Big bazaar, Gopalan mall, More ಗಳೇ ನಮಗೆ ಹಿತವಯ್ಯಾ!

ಕನಸು-ಕುತಂತ್ರ


ಕಾಣಬೇಕು ಕನಸು
ಮಾಡಬೇಕು ಮನಸು
ಧೃತಿಗೆಡದಿದ್ದರೆ ನನಸು
ಇದೇ ಜೀವನ ಮಂತ್ರ
ಸಾಧನೆಯೇ ಅದರ ತಂತ್ರ
ಹೊಡದೋಡಿಸಬೇಕಿದೆ ಅಡ್ಡದಾರಿಯ ಕುತಂತ್ರ\\

ಬಜೆಟ್-ಬಫೆಟ್


ಚಿದಂಬರಂ ಮಂಡಿಸಿದ್ದಾರೆ ವರ್ಷದ ಬಜೆಟ್
ಎಲ್ಲಾ ಕಡೆಗಳಲ್ಲೂ ಖೋತಾ
ಸಾಮಾನ್ಯನ ಜೇಬಿಗೆ ಮಾಡಿದ್ದಾರೆ ತೂತು
ಕನಸು ಕಾಣುತ್ತಿದ್ದಾರೆ ಎಲ್ಲರೂ ಆಗುತ್ತಾರೆಂದು ವಾರನ್ ಬಫೆಟ್||

ಮನ್ನಾ-ಕನ್ನಾ


ಸರ್ಕಾರ ಮಾಡಿತು ರೈತರ ಸಾಲ ಮನ್ನಾ
ಅಧಿಕಾರಿಗಳು,ರಾಜಕಾರಣಿಗಳು
ಹೊಂಚಿಹಾಕಿ ಕಾಯುತ್ತಿದ್ದಾರೆ
ರೈತರ ಜೇಬಿಗೆ ಕನ್ನಾ............

ಬ್ರಿಟೀಷ್ ಮನಸ್ಸು


ಸ್ವಾತಂತ್ರ್ಯ ಹೋರಾಟಗಾರರೂ ಹೋರಾಟಗಾರರೇ.....
ತ್ಯಾಗ-ಬಲಿದಾನದಿಂದ ತಾಯಿ ನೆಲೆದ ಋಣ ತೀರಿಸಿದವರು....
ಮೆಕಾಲೆ ಶಿಕ್ಷಣ ಪಡೆದ ಬುದ್ಧಿಜೀವಿಗಳಿಗೇನಾಗಿದೆ?
ಸ್ವಾತಂತ್ರ್ಯಹೋರಾಟಗಾರರೂ,ಕ್ರಾಂತಿಕಾರಿಗಳೂ....
ಇವರ ಕಣ್ಣಿಗೆ ದರೋಡೆಕೋರರಾಗಿ,ಭಯೋತ್ಪಾದಕರಾಗಿ ಕಾಣಿಸುತ್ತಾರೆ
ಎಷ್ಟಾದರೂ ಬ್ರಿಟೀಷ್ ಮನಸ್ಸುಗಳೇ ಅಲ್ಲವೇ......!

ಪಕ್ಷ-ಭಯೋತ್ಪಾದನೆ


ಆಗಿದೆ ಭಯೋತ್ಪಾದಕರಿಗೆ ಗಲ್ಲಿನ ಶಿಕ್ಷೆ
ಕಾಂಗ್ರೆಸ್ ಸರ್ಕಾರ ಕೊನೆಗೂ ತೋರಿದೆ ನೈತಿಕತೆ
ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೂ
ಕೊನೆಗೂ ಧೈರ್ಯವಹಿಸಿ ತೆಗೆದುಕೊಂಡಿದೆ ವಿಳಂಬವಾಗಿ...
ಇನ್ನೂ ಆಗಬೇಕಿದೆ ಶಿಕ್ಷೆ ಪಕ್ಷದೊಳಗೇ ಇರುವ ಭಯೋತ್ಪಾದಕರಿಗೆ..||

ಅಹಂ


ಅವರವರ ಭಾವ ಅವರವರಿಗೇ ಹೆಚ್ಚು
ಹುಚ್ಚೋ!, ಬೆಪ್ಪೋ! ತೆವಲೋ ಮೂರ್ಖತನವೇನೋ?
ತಾನೇನೋ ಹೊಸತು ಕಂಡು ಹಿಡಿದೆನೆನ್ನುವ ಅಹಂ
ಬೇರಾರಿಗೂ ತಿಳಿಯದ್ದು ತನಗೇ ಹೊಳೆಯಿತೆನ್ನುವ ಮೆಚ್ಚೋ ಹೇಗೆ?||

ಹೊಸ ಹುಟ್ಟು


ನೆನಪುಗಳು ಚಂದ್ರನ ಬೆಳಕು ಚೆಲ್ಲಿದಂತೆ
ಕಾಡುತ್ತದೆ,ನರಳಿಸುತ್ತದೆ ಹುಣ್ಣಿಮೆಯಂತೆ
ಸವಿಯೋ,ಕಹಿಯೋ ಮನವ ನರಳಿಸುತ್ತದೆ ಹಿತವಾಗಿ
ಕಾಡಿ,ಕಾಡಿ ಹೊಸ ಹುಟ್ಟು ನೀಡುತ್ತದೆ ನಾಳೆಗೆ||

ಲೆಕ್ಕಾಚಾರ


ಮನದ ತುಂಬೆಲ್ಲಾ ನೂರಾರು ಅಲೆಗಳ ಸೂಚನೆ
ಬೇಡದ ವಿಷಯಗಳ ಸುತ್ತ ಮನದ ಯೋಚನೆ
ಬೆಂಬಿಡದ ಕಾಮನೆ,ಪ್ರೀತಿ-ಪ್ರಣಯಗಳ ಯಾಚನೆ
ಮನಸ್ಸಿಗೆ ಚಿಂತೆ ಸಾಧ್ಯ-ಅಸಾಧ್ಯತೆಯ ಲೆಕ್ಕಾಚಾರದ ಗಣನೆಯ ಆಲೋಚನೆ

ನೋವಿನ ವಿಧಾಯ


ಎಲ್ಲವನ್ನೂ ಬರೆದುಬಿಟ್ಟಿದ್ದಾನೆ ಅವನು
ವಿಧಿಯಾಟವೆನ್ನುವೆಯೋ?
ವಿಧಿಲಿಖಿತವೆನ್ನುವೆಯೋ?
ನಮ್ಮ-ನಮ್ಮ ಪಾತ್ರಗಳು ಮುಗಿದ ಮೇಲೆ
ರಂಗಸ್ಥಳದಲ್ಲಿ ನೆಲೆನಿಲ್ಲಲಾದೀತೇ?
ನಮ್ಮ-ನಮ್ಮ ಆಟಗಳು ಮಿಗಿದ ಮೇಲೆ
ನೇಪಥ್ಯಕ್ಕೆ ಸರಿಯಲೇಬೇಕಲ್ಲವೇ?
ಯಾರು ಇರಲಿ, ಯಾರು ಹೋಗಲಿ
ಜೀವನವೆಂದೂ ನಿಂತ ನೀರಾಗಿರದೆ
ತನ್ನಷ್ಟಕ್ಕೆ ತಾನು ಮುಂದೆ ಹೋಗುತ್ತಲೇ ಇರುತ್ತದೆ
ನಮ್ಮನ್ನು ನಾವು ಬದಲಾವಣೆಗೆ ಒಡ್ಡಿಕೊಳ್ಳಬೇಕು
ನಮ್ಮ ಪಾಲಿನದೆಲ್ಲವನ್ನೂ ನಾವು ಅನುಭವಿಸಲೇಬೇಕು
ಇದ್ದಾಗ ಮುಖವನ್ನೂ ಸಹ ನೋಡಬಯಸದವರು
ಹೋದ ಮೇಲೆ ಮುಖನೋಡಲು ಸಿಗಲಿಲ್ಲವೆಂದು ಕೊರಗುವರು
ಇದೇ ಜೀವನ..
ಇದೇ ಅನುಭವ...
ಇದೇ ವಿಧಿಯಾಟವೆನ್ನೋಣವೇ?

Someಕ್ರಾಂತಿ


ಜೀವನ ನಿಂತ ನೀರಾಗಿದೆ ಎನಿಸುವಷ್ಟರಲ್ಲೇ
ಮತ್ತೆ ಬಂದಿದೆ ಸಂಕ್ರಾಂತಿ
ಜೀವನದಲ್ಲಿ ಸಣ್ಣ ಕಾಂತಿ ತಂದಿದೆ
ಎಲ್ಲರಲ್ಲೂ ತವಕವಿದೆ,ಹುಡುಕಾಟವಿದೆ
ನಗರದ ಬೆಂಬಿಡದ ಯಾಂತ್ರಿಕತೆಗೆ ಬೇಸತ್ತು
ಒಂದು ದಿನ ರೆಸಾರ್ಟ್ ನಲ್ಲಿ ವಿಶ್ರಾಂತಿ ಅರಸುವ ನಾವು
ಹಳ್ಳಿಯ ಜೀವನದ ಸರಳತೆಗೆ ಮನಸೋಲದವರು
ಹಳ್ಳಿಯ ಸಮಸ್ಯೆಗಳನ್ನೇ ದೊಡ್ಡದು ಮಾಡಿ ಮೂಗುಮುರಿಯುವೆವು
ಹಳ್ಳಿಹಬ್ಬದ ನೆಪದಲ್ಲಿ ರಜೆಯ ಮಜೆಯನ್ನು ಅನುಭವಿಸುವವರು
ಎಳ್ಳು-ಬೆಲ್ಲ ತಿಂದು ಮನವ ಬದಲಾಯಿಸಿಕೊಳ್ಳುವ ಅವಶ್ಯಕತೆ
ಈ ಹಬ್ಬ ಸಾರುತಿದೆ,ಕಾಲ ಬದಲಾಗಲಿ ಮನಸ್ಸು ನಿರ್ಮಲವಾಗಿರಲಿ.
ಸರಳತೆಯ ಕ್ರಾಂತಿ ಎಲ್ಲರ ಮನದಲ್ಲೂ ಉದಯವಾಗಲಿ.

ಭ್ರಷ್ಟತೆ


ಇಲ್ಲಿ ಯಾರು ಭ್ರಷ್ಟರಲ್ಲ ಹೇಳಿ?
ನಾನು,ಅವನು,ಅವರು
ಆ ಧರ್ಮದವರು,ಈ ಧರ್ಮದವರು
ರಾಜಕಾರಣಿಗಳು,ಅಧಿಕಾರಿಗಳು
ಸಮಾಜಸೇವಕರು,ಸಾಹಿತಿಗಳು
ಬುದ್ಧಿಜೀವಿಗಳು,ನ್ಯಾಯಾಧೀಶರು
ಶಿಕ್ಷಕರು,ಪೋಲೀಸ್........
ಪಟ್ಟಿ ತುಂಬಾ ಉದ್ದವಿದೆ;
ವ್ಯವಸ್ಥೆಗೆ ವ್ಯವಸ್ಥೆಯೇ ಭ್ರಷ್ಟ;
ಸಮಾಜಕ್ಕೆ ಸಮಾಜವೇ ಭ್ರಷ್ಟ;
ಭ್ರಷ್ಟತೆಗೆ ಎಲ್ಲರೂ ಪಾಲುದಾರರೇ
ನಮ್ಮನ್ನು ನಾವು ಪರಾಮರ್ಶಿಸಿಕೊಳ್ಳಬೇಕು
ಸ್ವಹಿತಾಸಕ್ತಿ,ಸ್ವಾರ್ಥ,ಸಾರ್ಥ,ಓಲೈಕೆ
ಎಲ್ಲವೂ ಭ್ರಷ್ಟತೆಗೆ ಕಾರಣಗಳೇ!
ಭ್ರಷ್ಟತೆಗೆ ಮಾನದಂಡದ ಮಾಪನವೇ?
ಎಲ್ಲರೂ ಭ್ರಷ್ಟರೇ ಆಗಿರುವಾಗ
ಆ ಕೋಮು,ಈ ಜಾತಿಯ ಜನರು ಭ್ರಷ್ಟರೆನ್ನುವುದು ಹಾಸ್ಯಾಸ್ಪದ;
’ವ್ಯಾಪಾರಂ ದ್ರೋಹ ಚಿಂತನಂ’ ಎಂಬುದೇ ಭ್ರಷ್ಟತೆಯ ಮೂಲ.

ಗುರಿ-ಸಾಧನೆ


ಎತ್ತ ಸಾಗಿದೆ ನಮ್ಮ ಪಯಣ?
ಗುರಿ ಇದ್ದೇ ಸಾಗುವ ಪಯಣ ಕಠಿಣ
ಗುರಿ ಇರದ ಪಯಣ ಪ್ರಾಣಿಗಳ ಜೀವನ
ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!

ಯಕ್ಷಪ್ರಶ್ನೆ


’ಪ್ರೀತಿ’ ಹಾಗೆಂದರೇನು?
’ವಾತ್ಸಲ್ಯ’ ಹಾಗೆಂದರೇನು?
’ಮಮತೆ’ ಎಂದರೇನು?
’ಕರುಣೆ’ ಎಂದರೇನು?
ಶಬ್ದ ಕೋಶದಲ್ಲಿ ಮಾತ್ರ ಸಿಗುವ ಉತ್ತರಗಳು
ನಿಜ ಜೀವನದಲ್ಲಿ ಮಾತ್ರ ಯಕ್ಷ ಪ್ರಶ್ನೆಗಳೇ ಸರಿ!

ಕರುಣಾಸಾಗರ


ಹಾಡು ಹೇಳಬೇಕ್ಕೆನ್ನುವ ಆಸೆ
ಆದರೆ ಹಾಡಲಾರೆ:
ವರ್ಣಮಯ ಚಿತ್ರಗಳ ಬರೆಯುವ ಆಸೆ
ಆದರೆ ಬರೆಯಲಾರೆ;
ಉತ್ತಮ ಕವನಗಳ ಬರೆಯುವ ಆಸೆ
ಆದರೆ ಕವನ ರಚಿಸಲಾರೆ;
ಸುಂದರ ಶಿಲಾಕೃತಿಗಳ ಕೆತ್ತುವಾಸೆ
ಆದರೆ ಕೆತ್ತಲಾರೆ;
ಉತ್ತಮವಾಗಿ ಅಭಿನಯಿಸುವಾಸೆ
ಆದರೆ ಅಭಿನಯಿಸಲಾರೆ;
ಎಲ್ಲರ ಹೃದಯ ಗೆಲ್ಲುವಾಸೆ
ಆದರೆ ಗೆಲ್ಲಲಾರೆ;
ಜೀವನದಲ್ಲಿ ಏನೇನೋ ಆಗುವಾಸೆ
ಆದರೆ ಎಲ್ಲವೂ ನಾನಾಗಲಾರೆ;
ದೇವ ನಾನೇನಾಗಬೇಕೆಂಬುದು ನಿನ್ನಾಸೆ
ನೀ ಹೇಳಲಾರೆಯಾ?
ಅಥವಾ ಅರಿವು ಮೂಡಿಸಲಾರೆಯಾ?
ನಿನ್ನ ಹಾಡು ಹೊಗಳಲೂ ನನ್ನಿಂದಾಗದು
ಎಲ್ಲಕ್ಕೂ ನಿನ್ನ ಕರುಣೆಯ ಅಗತ್ಯವಿದೆ ದೇವ!;
ನಿನ್ನ ಕರುಣೆಯಿಲ್ಲದೆ
ಇಲ್ಲಿ ಏನೂ ಚಲಿಸದು ದೇವ
ಕರುಣಾಸಾಗರನೆಂದು ಕರೆವರು ನಿನ್ನ
ಒಂದು ಬಿಂದು ಕರುಣಾರಸವ ನೀ ನೀಡೆಯಾ ದೇವ.

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...