ಕೊಳಕು ಮಾತು

ಒಮ್ಮೆ ಬೀದಿಯಲ್ಲಿ ನಡೆವಾಗ,
ಅದೇ ಬಿಳಿಗೌನು ದರಿಸಿದ ಅವನು ಎದುರಾದ;
ಇದೇನು ಮೊದಲ ಭೇಟಿಯಲ್ಲ ನಮ್ಮದು;
ನಮ್ಮಿಬ್ಬರ ಮಾತುಕತೆಗೆ ಬಣ್ಣ ಬಳಿಯುವ ಅಗತ್ಯವಿಲ್ಲ
ಏಕೆಂದರೆ ಎರೆಚಿದ ಬಣ್ಣವೇ ಮಾಸುತ್ತಿದೆ,ಹೊಸತರ ಅಗತ್ಯವಿಲ್ಲ
ಅವನೋ ಸಭ್ಯತೆಯ ಸಾಕಾರ ಮೂರ್ತಿ-ಮುಖವಾಡ;
ನಾನೋ ವ್ಯಭಿಚಾರದ ನಿರ್ಮಲ ಪರಿಮಳ;
ಸಭ್ಯರಿಗೆ ನಮ್ಮ ಮಾತುಗಳು ಕೊಳಕೆನಿಸಬಹುದು
ಕೊಳಕು ಎಲ್ಲಿಲ್ಲ ಹೇಳಿ? ಎನ್ನುವುದೇ ನನ್ನ ಪ್ರಶ್ನೆ ಅವರಿಗೆ;
ನೇರಾನೇರ ಬಿಡುಗತ್ತಿಯ ನುಡಿಗಳು ನಮ್ಮವು
ಆಶ್ಚರ್ಯ, ನೋವಾಗಬಹುದು ಕೇಳುಗರಿಗೆ;
ಕಾಮ ಪಿಶಾಚಿ ಅವನು;
ಬಟ್ಟೆ ಬದಲಿಸಿದಂತೆ ಹೆಣ್ಣುಗಳ ಬದಲಿಸಿದವನು ಅವನು;
ಅವನು ನನ್ನೆದೆಯ ಮೊಲೆಗಳ ಮೇಲೆ ಕಣ್ಣಾಡಿಸಿ ನಕ್ಕು ಹೇಳಿದ
"ನಿನ್ನ ಮೊಲೆಗಳು ಅಂದ ಕಳೆದುಕೊಂಡಿವೆ,ಸೊರಗಿವೆ,ನಿಂತು ನಿಮಿರಲಾರದೆ ಜೋತಿವೆ,
ಆಸರೆ ಬಯಸಿವೆ, ಅವು ಯಾರಿಗೆ ಸುಖ ಕೊಟ್ಟಾವು?;
ಇನ್ನೆಷ್ಟು ದಿನ ರತಿಯ ಮುಖವಾಡ?
ಪೊಗರಿಳಿದ ಮೇಲೆ ಮೂಲೆ ಸೇರಲೇಬೇಕು
ಕೊಳಕು ನೆಲೆಗಳ ಬಿಟ್ಟು ಬಾ
ನನ್ನೊಡನೆ ಬಾ
ದೇವಾಲಯದಲ್ಲಿ ನೆಲೆಗೊಂಡು ನನ್ನೊಡನೆ ಶಾಂತಿಯ ಅರಸು ಬಾ..

ನಾನು ನಕ್ಕೆ ಅವನ ಮಾತುಗಳ ಕೇಳಿ
ನಾನಂದೆ "ಕೆಲಸವಾದ ಮೇಲೆ ಎಲ್ಲವೂ / ಎಲ್ಲರೂ ಸೊರಗಲೇಬೇಕು;
ಅದೇ ಜೀವನ ನಿಯಮ;
ನಿನ್ನದೂ ಅಷ್ಟೆ, ನೀನೇನೂ ಮನ್ಮಥನಲ್ಲ;
ಬೇರೆಯವರ ಅಂಕು-ಡೊಂಕುಗಳ ಮೇಲೇ ನಿನಗೆ ಕಣ್ಣು;
ಲೋಕದ ಜನರಿಗೆ ನಿನ್ನ ಡೊಂಕುಗಳ ಕಾಣುವ ಕಾಲ ಸನ್ನಿಹಿತವಾಗುತ್ತಿದೆ ಎಚ್ಚರ;
ಸಭ್ಯನಂತೆ ಮುಖವಾಡ ಹಾಕಿ ಎಷ್ಟು ದಿನ ನಿನಗೆ ನೀನೇ ಮೋಸ ಮಾಡಿಕೊಳ್ಳುವೆ?
ಕೊಳಕಿನ ನೆಲೆಯಲ್ಲಿ ಸ್ವತಂತ್ರವಾಗಿ ಉಸಿರಾಡಬಹುದು,ನಿರ್ಮಲವಾಗಿ ನರಳಬಹುದು
ಜೀವ ಹೋಗುವವರೆಗೂ.....
ನಾಟಕರಂಗದ ಮೇಲೆ ಬೇರೆಯವರು ಆಡಿಸಿದಂತೆ ಆಡಲು ನನ್ನಿಂದ ಸಾಧ್ಯವಿಲ್ಲ;
ನಿನ್ನ ಸ್ವಾರ್ಥದಲ್ಲಿ ನನ್ನ ಶಾಂತಿ ಅಡಗಿಲ್ಲ;
ಕ್ರೂರಮೃಗ ನೀನು, ನಿನ್ನಿಂದ ಮತ್ತೆ ಚಿತ್ರಹಿಂಸೆಗೆ ಒಳಗಾಗುವ ಆಸೆ ಮತ್ತೊಮ್ಮೆ ನನಗಿಲ್ಲ;
ನಿನ್ನ ರೀತಿ ಶಾಂತಿ ಅರಸುವುದು ಮೂರ್ಖತನ
ಸಭ್ಯತೆಯ ಮುಖವಾಡ ನನಗೆ ಬೇಕಿಲ್ಲ
ಮತ್ತೆ ಬಲಿಪಶುವಾಗಲಾರೆ ನಾ...
ಅವನ ಕಪಾಲಕ್ಕೆ ಹೊಡೆಯಬೇಕೆನಿಸಿತು ಆದರೆ ಮಾಡಲಿಲ್ಲ
ಜೋರಾಗಿ ನಕ್ಕೆ
ಅವನು ನಗಲಿಲ್ಲ
ತುಂತುರು ಮಳೆಯ ಹನಿಗೆ ದೇಹ ಒಡ್ಡುತ್ತಾ
ಹಿತ ಅನುಭವಿಸುತ್ತಾ ಮುನ್ನಡೆದೆ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...