-ದೂರ ಹೋದವರು-

ದೂರ ಹೋದವರು ಯಾರು ?
ನಾವೋ ? ನೀವೋ?
ಹೋಗಬೇಡಿ ಹೋಗಬೇಡಿರೆಂದು
ಅಂಗಲಾಚಿ ಬೇಡಿದರೂ
ಮನಸು ಮುರಿದು ಹೋದವರು ಯಾರೋ?\\

ನಂಬಿಕೆಗಳು ಬೇರೆ ಬೇರೆ
ಆಚಾರ ವಿಚಾರ ಬೇರೆ ಬೇರೆ
ನೋಡುವ ದೃಷ್ಟಿ ಬೇರೆ ಬೇರೆ
ಮನಸ್ತಾಪಗಳು ನೂರಿರಲಿ
ಬಗೆಹರಿಸಿಕೊಳ್ಳುವ ಮನವಿಲ್ಲದೆ
ದ್ವೇಷದ ಮೆಟ್ಟಿಲೇರಿ ಹೋದವರು ಯಾರೋ?\\



ಒಂದೇ ಮರದ ರೆಂಬೆಗಳು ನಾವು
ಒಂದೇ ಗಾಳಿ
ಒಂದೇ ನೀರು
ದೇಹದ ರಕ್ತದ ಬಣ್ಣವೂ ಒಂದೇ
ಇದೇ ಮಣ್ಣಿನಲಿ ಬೆಳೆದವರು
ಇಲ್ಲ ಸಲ್ಲದ ಮಾತುಗಳಿಗೆ
ನೀರೆರೆದು ಬೆಳೆಸಿ ಸ್ನೇಹದ ,ಭಾಂದವ್ಯದ ಕೊಂಡಿ ಕಳಚಿಕೊಂಡವರಾರೋ?\\

-ಪ್ರಶ್ನೆ-

ಅದೇ ಸೂರ್ಯ
ಅದೇ ಚಂದ್ರ
ಅದೇ ತಾರೆಯರು
ಹೊಸತೇನು? ಪ್ರಶ್ನೆ ಮಾತ್ರ ಹೊಸದಲ್ಲ\\

ಅದೇ ದುಃಖ
ಅದೇ ಚಿಂತೆ
ಅದೇ ಜಂಜಾಟ
ಹೊಸತೇನು? ಸಾರವಿಲ್ಲದ ಸಂಸಾರ\\

ಯಾಂತ್ರಿಕತೆಯೋ?
ಮಾಂತ್ರಿಕತೆಯೋ
ಅಯೋಮಯವೋ?
ವಾದ ವಿವಾದಗಳ ಜಿಜ್ಞಾಸೆ\\

ನಾವು ಏಕೆ?
ನಾನು ಏಕೆ?
ಈ ಬದುಕು ಏಕೆ?
ಉತ್ತರವಿಲ್ಲದ ಪ್ರಶ್ನೆ ಉದ್ದವಾಗಿದೆ\\

-ಕಾಣದ ದಾರಿ-

ಬಯಕೆ ನೂರು ದಾರಿ ಕಾಣದೆ
ಎಲ್ಲಾ ಕಡೆಗೂ ಹರಡಿದೆ
ಬಯಕೆ ನೂರು ತಣಿಯದೇ
ಮನದಲ್ಲಿ ಸುಮ್ಮನೆ ನರಳಿದೆ\\

ಯಾವ ತಂತಿ ಮೀಟಲಿ?
ಯಾವ ನಾದಕೆ ಸೋಲಲಿ?
ಬಯಕೆ ತಂತಿಯ ಮೀಟಿದೆ
ನೂರು ನಾದಗಳು ಹೊಮ್ಮಿ ಹೃದಯ ಮೃದಂಗವನೆ ನುಡಿಸಿದೆ \\

ಯಾವ ರಾಗಕೆ? ಯಾವ ತಾಳಕೆ?
ಕುಣಿಯಬೇಕೆಂದು ತಿಳಿಯದಾಗಿದೆ
ಭಾವ ರಾಗಕೆ ,ಹೃದಯ ತಾಳಕೆ
ಮನಸು ತನ್ಮಯತೆಯಲಿ ನಲಿದಿದೆ\\

ನೂರು ಭಾವಗಳು
ನೂರು ರಾಗಗಳು
ನನ್ನ ಕಂಡು ಅಣಕಿಸಿ
ಮನದಲಿ ಕೋಲಾಹಲವನೇ ಎಬ್ಬಿಸಿದೆ\\



-ಜವರಾಯ-

ಓ ಜವರಾಯ ನಾನು ನಿನ್ನನ್ನು ತಡೆಯಲಾರೆ!
ಸಿದ್ಧ ವಾಗಿದೆ ನಮ್ಮ ಪಯಣಕ್ಕೆ ಗಾಡಿ
ನಿನ್ನ ಕನಿಕರದಿಂದ ಇಂದು ನಾನು ಜೀವಂತವಾಗಿದ್ದೇನೆ\\


ನಾವು ನಿಧಾನವಾಗಿ ಅವನ ಕಡೆಯೇ ಹೊರಳುತಿದ್ದೇವೆ;
ಅವನಿಗೇನೂ ತ್ವರಿತತೆಯ ಅಗತ್ಯವಿಲ್ಲ, ತಿಳಿದಿದೆ ಅವನಿಗೆ
ನನ್ನ ಕೆಲಸ,ವಿಶ್ರಾಂತಿ ಎಲ್ಲವನ್ನೂ
ಅವನ ಒಳ್ಳೆಯತನ,ನಿಷ್ಠೆಗೆ ಬಿಟ್ಟುಕೊಟ್ಟಿದ್ದೇನೆ\\

ನನ್ನ ಶಾಲೆಯ ಮುಂದೆ ನಿಂತಿದ್ದೇನೆ
ಇಲ್ಲೇ ಹುಡುಗರು ಆಟವಾಡುತ್ತಿದ್ದರೆ
ಕೆಂಪು ನೆಲದ ಮೇಲೆ ಕುಳಿತು ಗುರುಗಳ ಪಾಠ ಕೇಳುತ್ತಿದ್ದೆವು
ಇದೆ ತೋಟ ,ಗದ್ದೆಗಳಲ್ಲಿ ಓಡಾಡಿ
ಸೂರ್ಯಾಸ್ತವನ್ನು ಸವಿದಿದ್ದೇವೆ\\

ಎಲ್ಲವು ಮುಗಿದು ಈಗ ನಿಂತಿದ್ದೇವೆ
ಆ ಮನೆಯ ಮುಂದೆ ನಮ್ಮ ಸರದಿಗಾಗಿ
ನಿಂತ ನೆಲವೆಲ್ಲಾ ಮುರುಟುವಂತೆ ಭಾಸವಾಗಿದೆ
ಆ ಮನೆಯ ಮೇಲ್ಚಾವಣೆ ಅಂಧಕಾರದಲ್ಲಿ ಮುಳುಗಿದಂತಿದೆ
ಮನೆಯ ಅಂದವೆಕೋ ಕೆಟ್ಟಂತಿದೆ\\

ಇದು ಶತಮಾನಗಳಿಂದ ನಡೆಯುತ್ತಿರುವ ಪ್ರಕ್ರಿಯೆ
ಜೀವನ ಇಂದು ಕ್ಷ ಣಿಕವೆನಿಸುತ್ತಿದೆ,
ಅದರೂಸಾವಿನ ಆಚೆಯಿರುವ ಸಾವಿಲ್ಲದ ಕಾಲದ ಕಡೆಗೆ ಪ್ರೀತಿಯಿಂದ ಹೆಜ್ಜೆಯಿಡುತ್ತಿದ್ದೇವೆ\\


ಪ್ರೇರಣೆ :" Because I could not stop for death" by Emily Dickinson




-ನಿಲ್ಲದ ಮಳೆ -

ಮಳೆಯು ಬರುತಿದೆ
ಬರದೇ ಬರದೇ ಕಾಯುತ್ತಿರುವ
ಮನಸ್ಸಿಗೆ ಭಾವ ತೀವ್ರತೆ ಬಂದ ಹಾಗೇ
ಮಳೆಯು ಬರುತಿದೆ
ಮನಸ್ಸು ಹರುಷಗೊಂಡಿದೆ \\

ಬೇಸರಗೊಂಡು ಕುಳಿತಿರಲು
ಮತ್ತೆ ಮತ್ತೆ ನೆನಪಾಯಿತು
ಯಾಕಾಗಿ ಕಾಯುತಿಹೆ?
ಯಾರಿಗಾಗಿ ಕಾಯುತಿಹೆ?
ಉತ್ತರ ಸಿಗದ ಪ್ರಶ್ನ್ತೆಯಂತೆ
ಕಣ್ಣ ಮುಂದೆಯೇ ಮಳೆಯು ಸುರಿಯುತಿದೆ\\

ಅಂಗಳದ ಕಸವೆಲ್ಲಾ ಕೊಚ್ಚಿ ಹೋಯಿತು
ಮತ್ತೊಂದು ಸಂಪುಟಕ್ಕೆ ಖಾಲಿ ಜಾಗ ಸಿಕ್ಕಂತೆ
ಧೋ ಎಂದು ಬೀಳುವ ಮಳೆಯ ರಿಂಗಣಕ್ಕೆ
ಮನದ ನೋವೆಲ್ಲಾ ಮರೆತು ಹೋಗಿದೆ
ಹೊಸ ಅಸೆ, ಚೈತನ್ಯ ,ಉತ್ಸಾಹ ಚಿಗುರೊಡೆದಿದೆ\\

-ನಿನ್ನ ಧ್ಯಾನ -

ನಿನ್ನ ಧ್ಯಾನಿಸುತ ಮನದಲ್ಲಿ
ಎಂತಹ ಸುಖವ ಕಂಡೆ ದೇವ\\

ನೂರು ಚಿಂತೆಗಳು ಮನದಲ್ಲಿ
ಪರಿಹಾರ ಕಾಣದೆ ಹಿಂಸಿಸುತಿರಲು
ನಿನ್ನ ಧ್ಯಾನದಿಮ್ದಲಿ ಮನಸು
ಶಾಂತಿಯ ಜಲಧಿಯನ್ತಾಯಿತೋ ದೇವ\\

ನೂರು ದಾರಿಗಳು ಕಣ್ಮುಂದೆ
ಎತ್ತ ಹೋಗಲಿ ಎಂಬ ಪ್ರಶ್ನೆ ಬೃಹದಾಕಾರವಾಗಿರಲು
ನಿನ್ನ ಧ್ಯಾನದಿಂದಲಿ ಹೊಸ ಹರುಷ
ಸತ್ಯ ಮಾರ್ಗವು ಗೋಚರಿಸಿತೋ ದೇವ\\

ನೂರು ಕಷ್ಟಗಳು ಬಾಳಿನಲಿ
ಏನು ಮಾಡಲಿ? ತೋಚದಂತಾಗಿರಲು
ನಿನ್ನ ಧ್ಯಾನದಿಂದಲಿ ಹೊಸ ಹುರುಪು
ಧೈತ್ಯ ಶಕ್ತಿ ಬಂದು ಕಷ್ಟಗಲೆಲ್ಲವು ಕರಗಿದವು ದೇವ\\

ನೂರು ರೂಪಗಳಲ್ಲಿ ನೀನಿರಲು ಮನದಲ್ಲಿ ಅನವರತ
ಮತ್ತಿನ್ಯಾವ ಸೌಭಾಗ್ಯಗಳು ಬೇಡ
ನಿನ್ನ ಧ್ಯಾನದಿಂದಲೇ ಅನವರತ
ಜೀವಿಸುವ ಶಕ್ತಿ ನೀಡೋ ದೇವ\\



-ನಾಲ್ಕು ದಿನದ ಸಂತೆ -

ನಾಲ್ಕು ದಿನದ ಸಂತೆ
ಮುಗಿಯುವ ದಿನ ಬರುವುದಂತೆ
ಬೆದರುವವರು, ಭೋಗಿಸುವವರು
ಹಿಂಸಿಸುವವರು ಶೋಷಿತರ ದನಿ ಕಳೆಯುತಿರುವಂತೆ\\

ವೇಧ ಭಾರತ ಮುಸುಕಾಗಿರಲು
ಸ್ವಾತಂತ್ರ ಜ್ಯೋತಿಗೆ ಎರಕಹೊಯ್ಯುತಿರಲು
ದಾಸ್ಯ ಕಳಚಿ, ನೋವು ಮರೆಯುತಿರಲು
ಒಳಮನಸುಗಳ ದ್ವೇಷ ಜ್ವಾಲೆ ಹೊಗೆಯಾಡುತಿರಲು\\

ಸಾಮ್ರಾಜ್ಯಶಾಹಿ ,ಅಧಿಕಾರಶಾಹಿ
ಪುರೋಹಿತಶಾಹಿ, ಮೌಲ್ವಿ-ಪಾದ್ರಿ ಶಾಹಿ
ಗಹಗಹಿಸಿ ನಕ್ಕು ಮೌನಕ್ಕೆ ಶರಣಾಗುತಿರಲು
ದಲಿತಶಾಹಿ, ರಾಜಕೀಯಶಾಹಿ ಮೊಗೆಮೊಗೆಯುತಿರಲಿ\\

ಸಾಮಾನ್ಯ ಬಡ ಉಳ್ಳವರು
ಸಮಾನತೆಗಾಗಿ ಬಾಯಿ ಬಡಿದುಕೊಳ್ಳುತ್ತಿರಲು
ಬಡತನ. ಮಾನವೀಯತೆ ಮೌನವಾಗಿ
ಮುಖಕ್ಕೆ ಫರದೆ ಹಾಕಿಕೊಂಡು ಎದುರಿಸಲಾಗದೆ ಕಾಳುಕೀಳುತ್ತಿರಲು\\

ಎದುರಿಸಲಾಗದವರ ಬಾಯಲ್ಲಿ ಬರೀ ವೇದಾಂತ
ನೋವುನ್ದವರ ಬಾಳೆಲ್ಲಾ ಬರೀ ಶೋಕಾಂತ
ಹಣದ ಥೈಲಿ ಕೈಯವರ ಬದುಕು ಸುಖಾಂತ
ಹೋರಾಡುವವರು,ಶೋಕಿಸುವವರು, ನೋವನ್ನೇ ನುಂಗುವವರು ಸಾಗುತಲಿರಲು\\

ಸಮಾನತೆಯೆನ್ಬುದು ದೂರದ ಬೆಟ್ಟ
ಅಧ್ವೈತವೆನ್ಬುದು ಮರೀಚಿಕೆ
ಸುಖವೆಂಬುದು ಭ್ರಮೆ
ಬದುಕೆಮ್ಬುದೆ ಮಾಯೆ ನಿಜವಾಗುತಿರಲು\\

ನಾಲ್ಕು ದಿನಕ್ಕೆ ಇದ್ದು ಹೋಗಲು ಬಂದವರು
ಇಲ್ಲ ಸಲ್ಲದ ಬಯಕೆಗಳಿಗೆ ಬಲಿಬಿದ್ದು
ಶಾಂತಿ ಸಾಗರದಲ್ಲಿ ಸ್ವಾರ್ಥದ
,ದ್ವೇಷದ ಮೆಲೋಗರವ ಬೆರೆಸುತಿರಲು\\

ಕಣ್ಣು ಕಾನದವರಂತೆ ನಿಂತಿರುವೆಯೇಕೆ?
ಮುಖ ಮಂದಹಾಸದಿ ತೇಲುತಿದೆ
ನಾಲ್ಕು ದಿನದ ಕೊನೆಗಳಿಗೆಯಲ್ಲಿ
ಹಿಂದೆ ನೋದುತಿರಲು ಬಯಕೆ,ಸ್ವಾರ್ಥ ಗಹಗಹಿಸಿ ನಗುತ್ತಿದೆ\\

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...