ಹಕ್ಕಿಯಾಗ ಬಯಸಿದೆ ಮನಸು

ಹಕ್ಕಿಯಾಗ ಬಯಸಿದೆ ಮನಸು
ಕಂಡೆ ನಭದಲ್ಲಿ ಹಾರುವ ಸುಖದ ಕನಸು//

ಹಸಿರು ಮರದ ಸಿರಿಯ ಬೆರಗು
ಹಾರುತ್ತ ಹಾರುತ್ತ ಕೊಂಬೆ,ರೆಂಬೆಗಳ
ಹಣ್ಣು ಹಂಪಲುಗಳ ತಿನ್ನುವ ಸೊಬಗು
ಹಕ್ಕಿಯಾಗ ಬಯಸಿದೆ ಮನಸು//

ಕಾಡು ಮೇಡುಗಳ ಅಲೆದು
ಪರ್ವತ,ಪಾತಾಳಗಳ ಬಳಸಿ
ಜಗದ ತಾಯಿಯ ಸೌಂದರ್ಯದ ಸೊಬಗ ಸವಿದು
ಹಕ್ಕಿಯಾಗ ಬಯಸಿದೆ ಮನಸು//

ಎಷ್ಟು ಸ್ವತಂತ್ರ ಹಕ್ಕಿಯ ಜೀವನ
ಭವ ಬಂಧನಗಳಿಲ್ಲದ ಸೋಪಾನ
ಅದರ ಸುಖ ನನಗೂ ಬೇಕು
ಹಕ್ಕಿಯಾಗ ಬಯಸಿದೆ ಮನಸು//

ಸೌಂದರ್ಯ

ಯಾರು ತುಂಬಿದರು ನಿನ್ನಲ್ಲಿ ಸೌಂದರ್ಯ?
ಎಷ್ಟುದಿನ ಇರುವುದೋ ಈ ಚೆಲುವು?
ಕಾಲನ ಆಂತರ್ಯ ಬಲ್ಲವರು ಯಾರು?
ಇಂದು ರೂಪವಂತ,ನಾಳೆ ಕುರೂಪಿ?
ಇಂದು ರೂಪಕ್ಕೆ ಮರುಳಾದವರು
ನಾಳೆ ಏನಾಗುತ್ತಾರೆ? ಅಂಜುವರೋ? ಮರುಗುವರೋ?
ಒಂದಂತು ಸತ್ಯ,ಬಾಹ್ಯ ಸೌಂದರ್ಯ ಶಾಶ್ವತವಲ್ಲ
ಆದರೂ ರೂಪದ ಭ್ರಮೆ ನಮ್ಮನ್ನು ಏಕೆ ಆವರಿಸುವುದು?
ಯಾವುದು ಸತ್ಯ,ಸುಂದರ ,ಶಿವನೋ ಅವು ಕಣ್ಣಿಗೆ ಕಾಣದು,
ಒಳಗಣ್ಣ ತೆರೆಯಬೇಕು ಸೌಂದರ್ಯವ ಆಸ್ವಾಧಿಸಲು ,
ಭ್ರಮೆಯ ಲೋಕ ಗೋಚರಿಸದು ಕಣ್ಣಿಗೆ
ಸಾಧನೆಯ ಬಲ ಬೇಕು ಅರಿಯಲು
ತಾಳ್ಮೆಬೇಕು ಸಾಧಿಸಲು ಓ ಸತ್ಯವೇ ಬಾ,
ಓ ಸೌಂದರ್ಯವೇ ಬಾ,ಓ ಶಿವನೇ ಬಾ 
ಮನದ ತಿಮಿರವ ನುಂಗಿ ಬೆಳಕ ತಾ//

ದೀಪಾವಳಿ

ರಾತ್ರಿಯಾಗಸದಲ್ಲಿ ತಾರೆಗಳ ಎಣಿಸುತ್ತಿದ್ದೇನೆ
ನಾಳೆಗಳ ಭವಿಷ್ಯವ ತಿಳಿಯಲು
ಹಿತ,ಅಹಿತ,ಲಾಭ,ನಷ್ಟಗಳು ಎಣಿಸುತ್ತಿದ್ದೇನೆ
ಒಂದೊಂದೇ ತಾರೆಯ ಮಿಂಚುವ ವೇಗದಿ
ಏನು ಹೇಳುವುದದು?ಕಾಲಹರಣವಲ್ಲದೆ ಮತ್ತೇನು?
ಆದರೂ ಏನೋ ಹಿತವಿದೆ ಅದರಲ್ಲಿ!
ದೀಪಾವಳಿಯ ಬೆಳಕಿನ ಮಿಂಚು ಆಗಸದಲ್ಲಿ
ಏನೋ ಹೊಸತನ ದಾಳಿಯಿಟ್ಟಂತಿದೆ
ಹೊಗೆ,ಶಬ್ದ ಮಾಲಿನ್ಯ ಎಲ್ಲದರ ಹೊರತಾಗಿಯೂ
ಮಕ್ಕಳಲ್ಲಿ,ಹಿರಿಯರಲ್ಲಿ ಏನೋ ಚ್ಯೆತನ್ಯ ತುಂಬಿದೆ
ನಾಳೆಗಳ ಎಣಿಸಿ ಬಳಲಿದವನು ನಾನು
ಹಬ್ಬ,ಆಚರಣೆ ಸಂಭ್ರಮ ಪಟ್ಟವರು ಅವರು
ಮಿನುಗುವ ನಕ್ಷತ್ರಗಳ ನೋಡುತ್ತಾ ಕಳೆದು ಹೋದೆ
ಹಳೆಯದು ಜಾರಿ ಹೊಸದೊಂದು ದಿನ ಕಣ್ಣುಬಿಟ್ಟಿತು//

ತಲ್ಲಣಗಳ ಕದನ


ಮುಖ ನೋಡಿ ಮನುಷ್ಯರ ಅಳೆವವನಲ್ಲ ನಾನು
ಆದರೂ ಅರಿಯಬಲ್ಲೆ ಮನದೊಳಗಿನ ಕದನ
ಗೆಳೆಯ ಹೊರಹಾಕು ಮನದೊಳಗಿನ ತಲ್ಲಣಗಳ
ಹಾಗೆ ಮನದೊಳಗೆ ಬಚ್ಚಿಟ್ಟರೆ ಹಾಳು ನೆಮ್ಮದಿ
ಕಣ್ಣೀರ ಸುರಿಸಬೇಡ ಮನದ ಶಾಂತಿ ಹಾಳಾದರೆ
ನಲ್ವತ್ತು ವಸಂತಗಳ ಅನುಭವಿಸಿದ ರಸಿಕ ನೀನು
ಆದರೂ ಮನದೊಳಗೆ ತಲ್ಲಣವೇಕೆ ನೀ ಬಲ್ಲೆಯಾ?
ಅನುಭವಗಳ ಗುಲಾಮನಾದೆಯಾ ನೀನು?
ಏನೇ ಆದರೂ ಹೋರಾಡಬಲ್ಲೆ , ಯೋಧ ನೀನು
ಯುದ್ಧದಲ್ಲಿ ಅರಿಗಳೊಡನೆ ಹೋರಾಡುವುದು ಸುಲಭ
ಮನದ ಮಿತ್ರನೋ ? ವ್ಯೆರಿಯೋ? ಹೋರಾಡು!
ರುಧಿರ ಹರಿಯದೆ ನೀನು ಶವವಾಗುವೆ ಇಲ್ಲಿ
ಜವನ ಕೈವಶ ನೀನು ಹೋರಾಟವಿಲ್ಲದೆ
ಸೌಂದರ್ಯವಶನಾದವನಿಗೆ ಹಸಿವೆಯೆಲ್ಲಿ?
ನಿನ್ನ ಮನದ ಆಟ ಬಲ್ಲೆ ಹೇಳು ನಿರಾಳನಾಗು

ಅರಿವಿನ ಹಣತೆ

ದೀಪ ಹೊತ್ತಿಸೋಣ ಗೆಳೆಯ
ಬಾ ದೀಪಾವಳಿಯ ಈ ದಿನ 
ದೀಪ ಹೊತ್ತಿಸೋಣ ,ದೀಪ ಹೊತ್ತಿಸೋಣ
ಮನ ಮನದ ನಡುವೆ ಹೊತ್ತಿರುವ
ಅಪನಂಬಿಕೆಯ ದ್ವೇಷದ ಜ್ವಾಲೆಯ ಆರಿಸೋಣ
ನೋಡಲ್ಲಿ ಆಕಾಶದಲ್ಲಿ ಬಣ್ಣ ಬಣ್ಣಗಳು
ಮಿಂಚುತಿದೆ ಸಂತೋಷದ ಆಕಾಶದ ಬುಟ್ಟಿ
ಹೊಂಚುಹಾಕಿ ಕುಳಿತಿದೆ ವಿಷಬೀಜ ಬಿತ್ತುವ,
ಅವಕಾಶವಾದಿ ದೊಡ್ಡ ದಂಡುಕೂಟ
ಶಾಂತಿ ಕದಡುವ ಹುನ್ನಾರ ನಡೆಸುವವರು
ವ್ಯೆಷಮ್ಯ ಬಿತ್ತುವ ತವಕದವರು
ಮನ ಮನದ ನಡುವೆ ವಿಷದ ಬೀಜ ಬಿತ್ತುವ ಅಕ್ಷರ ಭಯೋತ್ಪಾದಕರಿಹರು ಇಲ್ಲಿ ಬಹಳ
ಮನದ ಹಣತೆಯ ಆರಿಸಲು ಸಂಚು ರೂಪಿಸಿ
ಮೌಢ್ಯದ ಬೆಂಕಿ ಹೊತ್ತಿಸ ಹೊರಟ ದಂಡಿಹುದಿಲ್ಲಿ
ಅರಿವಿನ ಹಣತೆಯ ಉಡುಗೊರೆ ನೀಡೋಣ
ಅರಿವಿನ ಬೆಳಕ ಹೊತ್ತಿಸೋಣ ಗೆಳೆಯ
ಹೊಸ ಮನ್ವಂತರದ ದಿಶೆಗೆ ಮುನ್ನುಡಿ ಬರೆಯೋಣ
ದೀಪಾವಳಿಯ ಈ ದಿನ ಮನಸ್ಸಿನಲ್ಲಿ
ಅರಿವಿನ ಹಣತೆಯ ಹಚ್ಚೋಣ
ಬಾ ಗೆಳೆಯ ಬಾ ದೀಪ ಹಚ್ಚೋಣ//

ನೀನಿರುವುದ ಅರಿತಿರಲಿಲ್ಲ

ಎಲ್ಲೋ ಅವಿತಂತೆ ಮಾಡಿ ಕಣ್ಣ ಮುಚ್ಚೆ ಕಾಡೆಗೂಡೆ ಮಾಡಿ ಎಲ್ಲಿರುವೆ ಹುಡುಕು ಎಂಬಂತೆ ಕಣ್ಣು ಕಟ್ಟಿ ಬಿಟ್ಟಿರುವೆ ನೀನು,ಕಟ್ಟಿರುವ ಕಣ್ಣು ಬಿಚ್ಚಿದ್ದರೂ
ಕಣ್ಣ ಮುಂದೆಯೇ ನೀನಿರುವುದ ಅರಿತಿರಲಿಲ್ಲ
ನೀ ಎಲ್ಲೋ ಅಲ್ಲ ನಮ್ಮ ಮುಂದೆಯೇ ಇರುವುದ ಅರಿತಿರಲಿಲ್ಲ
ನಿನ್ನ ಕಾಣಲೆಂದು ಎಲ್ಲಿಂದಲೋ ಬರುವವರ
ನಿಷ್ಥೆಯಲ್ಲಿ ನೀನಿರುವುದ ಅರಿತಿರಲಿಲ್ಲ
ನಿನ್ನ ಕಾಣಲೆಂದು ದೇಹವ ದಂಡಿಸಿ
ಸುರಿಸುವ ಬೆವರಹನಿಯಲ್ಲಿ ನೀನಿರುವುದ ಅರಿತಿರಲಿಲ್ಲ
ಆಚಾರ ,ವಿಚಾರಗಳ ತಿಳಿಯದೆ ಸಂಪೂರ್ಣ ಶರಣಾದವರ ಶರಣಾಗತಿಯಲ್ಲಿ ನೀನಿರುವುದ ಅರಿತಿರಲಿಲ್ಲ
ವಿದ್ಯೆ,ಬುದ್ಧಿ,ಸಂಪತ್ತುಗಳ ಹೊಂದಿದ್ದರೂ ಎಲ್ಲವ ಹೊರತಾಗಿಯೂ  ಭಕ್ತಿ,ವಿವೇಕದಲ್ಲಿ ನೀನಿರುವ ಅರಿವಿರಲಿಲ್ಲ
ಸಾಧಕರ ಸಾಧನೆಯ ದಾರಿಯಲ್ಲಿ ನೀನಿರುವುದ ಅರಿತಿರಲಿಲ್ಲ
ಹೆಜ್ಜೆಯಿಡುವ ಪ್ರತಿ ಹೆಜ್ಜೆಯಲ್ಲಿ ನೀನಿರುವುದ ಅರಿತಿರಲಿಲ್ಲ
ಜೀವನದ ಪ್ರತಿ ಕ್ಷಣದಲ್ಲೂ ನೀ ಅವಿರುವುದ ಅರಿತಿರಲಿಲ್ಲ
ಪ್ರಕೃತಿಯ ಹಸಿರು ಹಾಸಿನಲ್ಲಿ, ಅಲ್ಲೆ ಬೆಟ್ಟದ ಮಡಿಲಲ್ಲಿ ಬಿದ್ದಿರುವ ಕಲ್ಲಿನಲ್ಲಿ ನೀ ಅವಿತಿರುವುದ ಅರಿತಿರಲಿಲ್ಲ
ನಿನ್ನದೇ ಮೂರ್ತಿಯ ಕಂಡು ಭಾವನೆಗಳ ಮನದಲ್ಲಿ ತುಂಬಿಕೊಂಡು ಕಣ್ಣಲ್ಲಿ ಸುರಿಸುವ ಕಣ್ಣೀರಿನಲ್ಲಿ ನೀ ಅವಿತಿರುವುದ ಅರಿತಿರಲಿಲ್ಲ

ಮನದ ಭಾರ

ಮನದ ಮಾತುಗಳ ಹೇಳಿಕೊಳ್ಳೋಣವೆಂದರೆ
ಏನಿದು ಗೆಳೆಯ ನೂರೆಂಟು ಅಡ್ಡಿ ಆತಂಕಗಳು
ಮನಸ್ಸು ಹಗುರವಾಗಿಸೋಣವೆಂದರೆ
ಮನದ ಭಾರ ಹೆಚ್ಚಿತ್ತಿದೆಯೆ ಹೊರತು ಇಳಿಯುತ್ತಿಲ್ಲ
ನೋವಿನ ನಡುವೆ ಹೊರಳಾಡುವುದೇ ಸುಖವೆನಿಸಿದೆ
ಸಂತೋಷವೇನೆಂದು ಮರೆತು ಹೋಗಿದೆ
ಜೀವನಚಕ್ರ ಸಲೀಸಾಗಿ ಹೊರಳದೆ
ತ್ರಾಸದಾಯಕವಾಗಿದೆ ಮೆಲ್ಲಮೆಲ್ಲನೆ
ಏನೋ ಆತಂಕ ! ಏನೋ ಬೇಸರ!ಏನೋ ಹೇವರಿಕೆ!
ಮರಳಿಬಾರದ ದಿನಗಳ ನೆನಹುಗಳು ಅಣಕಿಸುತ್ತಿದೆ
ಅಟ್ಟಹಾಸದಿಂದ ನಗುವ ಕಾಲ
ಅಹಂಮಿನ ಕಾಲು ಮುರಿದಿದೆ ನೋವ ಮರೆಸುತ್ತಾ
ಇದೇ ಜೀವನವೆಂಬ ಸಮಾಧಾನದ ತೆವಲು ನಗೆ
ಬೀರುತ್ತಾ ಎಲ್ಲವನ್ನೂ ಅನುಭವಿಸುತ್ತಾ ತೆವಳಿದೆ//

ಹರಿದ ನಾಲಗೆ

ನೋಡಿದೆಯಾ,ಕೇಳಿದೆಯಾ ಗೆಳೆಯ
ಎತ್ತರದ ಸ್ಥಾನದಲ್ಲಿರುವವರ ಮಾತುಗಳ
ಎಂಥ ಸ್ಥಿತಿ ಬಂತು ನಮ್ಮ ನಾಡಿಗೆ
ಇಷ್ಟೊಂದು ಬರವೇ ಬೌಧ್ದಿಕತೆಗೆ?
ನಾಡಿನ ಸ್ಥಾನಮಾನ, ಗೌರವವೆಲ್ಲಾ
ಮಣ್ಣುಪಾಲಾಗಿಸುತ್ತಿದ್ದಾರೆ ಈ ಮೂಢರು
ನಾಲಗೆಯ ಹರಿಬಿಡುವರು ಎಲ್ಲೆಯಿಲ್ಲದೆ
ಹಣ,ಅಧಿಕಾರ,ಸ್ಥಾನಮಾನದ ಅಹಂಮಿನಿಂದ
ಎಷ್ಟುದಿನ ನಡೆವುದು ಇವರ ಆಟ?
ನಾಗರೀಕತೆ ಬೆಳೆದಂತೆ ಎತ್ತಣದತ್ತ ನಮ್ಮ ಪಯಣ?
ಯಾವುದರ ಅಟ್ಟಹಾಸವಿದು ಬಲ್ಲೆಯೇನು?
ಯಾರು ಈ ನಾಟಕದ ಸೂತ್ರಧಾರ?
ಎಲ್ಲಬಲ್ಲವ ನೀನು ಸುಮ್ಮನೇ ನೋಡುತಿಹೆ
ತಿಳಿದೂ ತಿಳಿಯದವನಂತೆ, ಏನಿದರ ಗುಟ್ಟು?

ನಮ್ಮ ನಾಡು

ಇದು ನಮ್ಮ ನಾಡು
ಇದು ನಮ್ಮ ನಾಡು
ಇದೇ ಕನ್ನಡ ನಾಡು
ಕನ್ನಡಿಗರ ನಾಡು
ಶಿಲ್ಪಕಲೆಗಳ ನಾಡು
ಶ್ರೀಗಂಧದ ಬೀಡು
ಕಬ್ಬಿಗರ ಬೀಡು
ಕಾವ್ಯರಸಿಕರ ಬೀಡು
ಶಾಂತಿಪ್ರಿಯರ ಬೀಡು
ದಾಸ,ಶರಣ,ಗಾನ ಗಂಧರ್ವರ ಬೀಡು
ಇದು ನಮ್ಮ ನಾಡು
ಕನ್ನಡಿಗರ ಬೀಡು//

ನನ್ನ ಕನಸು

  ಕನಸು ಕಾಣಬೇಕು ನನ್ನ ಕನಸು ಕಾಣಬೇಕು ನಾ ಬಾನಲ್ಲಿ ಹಾರಾಡಬೇಕು ಅದಕ್ಕೆ ನನಗೆ ರೆಕ್ಕೆಗಳು ಬೇಕು ಬಾನಲ್ಲಿ ತೇಲಾಡಬೇಕು ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗ...