ಅಪರಾಧ

ಮನದ ನೋವ ಹೇಳಬೇಡ ಗೆಳೆಯ ಹೇಳಬೇಡ
ಹಲವರಿಗೆ ನೋವಾಗುವುದು ಅಪರಾಧವದು ಗೆಳೆಯ
ಅಪರಾಧಿಯಾಗಬೇಡ ಗೆಳೆಯ||

ನಿನ್ನ ಮನದ ಭಾವಗಳೇನೇ ಇರಲಿ
ನಿನ್ನಲ್ಲೇ ಸಾಯಲಿಬಿಡು
ನಿನ್ನ ಮನದ ನೋವಿಗೆ ಬೆಲೆಯಿಲ್ಲ ಬಿಡು
ನಿನ್ನ ಮನದ ನೋವಿಗಿಂತ
ಹಲವರ ನೋವಿಗೆ ಬೆಲೆಕೊಡು ಗೆಳೆಯ||

ನಿನ್ನ ಮನದ ನೋವುಗಳಿಗೆ ನೂರು ಕಾರಣವಿರಲಿ
ನಿನ್ನಯ ಕಾರಣಗಳು ನಮಗೆ ಬೇಡ
ಮನದ ಭಾವಗಳ ಹತ್ತಿಕ್ಕಲಾರದವ ನೀನು
ನಿನ್ನ ಭಾವಗಳ ನೆಲೆಯ ಮೇಲೆ
ಹಲವರು ಕುಣಿದಾಡಲಿ ಬಿಡು ಗೆಳೆಯ||

ನೋವಾಗಿದೆ ಎಂದು ಹೇಳಬೇಡ ಗೆಳೆಯ
ನೋವ ಹೇಳಿಕೊಳ್ಳುವ ಹಕ್ಕು ನಿನಗಿಲ್ಲ ಬಿಡು
ನಿನ್ನ ಪ್ರಶ್ನಿಸುವ ಹಕ್ಕು ಹಲವರಿಗಿದೆ ಗೆಳೆಯ
ವಾಕ್ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ ಹಾಸ್ಯಾಸ್ಪದ ಗೆಳೆಯ||

ಪ್ರೀತಿ-ವಿಶ್ವಾಸ ನೆಲೆಕಳೆದು ಕೊಂಡಿದೆ
ಮಾತು, ಮನದ ನೋವುಗಳೆಲ್ಲಾ ಗಾಳಿಯಲಿ ತೂರಲಿ ಗೆಳೆಯ
ಠೀಕೆ-ಟಿಪ್ಪಣಿಗಳಿಗೆ ಮರುಗಬೇಡ ಗೆಳೆಯ
ಕಣ್ಣೀರ ಹನಿಗಳಿಗೆ ನೋವು ಕಡಿಮೆಮಾಡುವ ಶಕ್ತಿಯಿದೆ
ನೋವುಂಡವರ ಹೃದಯವ ತೊಳೆಯಲು ಸಿದ್ಧನಾಗು ಗೆಳೆಯ||

ಮೌನಿಯಾಗು,ಮೂಕನಾಗು
ಚೈತನ್ಯವಿಲ್ಲದ ಜೀವಶವವಾಗು
ಮನದ ನೋವು ಹೇಳಿಕೊಳ್ಳುವುದು ಅಪರಾಧ ಗೆಳೆಯ
ಅಪರಾಧಿಯಾಗಬೇಡ ಗೆಳೆಯ
ಮನದ ನೋವ ಹೇಳಬೇಡ ಗೆಳೆಯ
ಹೇಳಬೇಡ ಗೆಳೆಯ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...