Tuesday, March 31, 2026

ಪ್ರಾರ್ಥನೆ


ನನ್ನ ದೇವನೇ, ಕೋಪವೇತಕೆ?

ಕರೆದರೂ ಕೇಳಿಸದೇ?

ನೋವುಂಡ ಜೀವಕ್ಕೆ ಆಸರೆಯಾಗಲಾರೆಯಾ!

ಕೋಪದಿಂದ ನಾನು ನಿನ್ನ ನಿಂದಿಸುವೆನು,

ಅದಕ್ಕೆ ಕೋಪವೇ!,

ದೂರುವೆನು, ಅದಕ್ಕೆ ಸಿಟ್ಟೇ ನನ್ನ ದೇವರೇ!

ನನಗಾರು ಎನ್ನುವಾಗ,

ನೀನಿರುವೆ ಎಂದು ನಂಬಿಹೆನು,

ನಿನಗಾಗಿ ಪರಿತಪಿಸುವೆ,

ನಿನ್ನನ್ನೇ ಪ್ರೀತಿಸುವೆ,

ನಿನ್ನನ್ನೇ ಪ್ರಾರ್ಥಿಸುವೆ,

ನಿನ್ನಲ್ಲಿ ಒಂದಾಗ ಬಯಸಿಹೆ ತಂದೇ.

Wednesday, March 18, 2026

ಕಾಲ, ಶಕ್ತಿ, ಹಣ

ಕಾಲ ನಿಲ್ಲದು ನದಿಯಂತೆ ಹರಿವುದು,

ಕ್ಷಣಗಳಂತೆ ಮಾಯ ಮರಳಿ ಬಾರದು.

ವ್ಯರ್ಥ ಮಾಡದೆ, ಸಮಯ ಕಾಪಾಡಿಕೋ,

ಕಾಲನ ಜೊತೆ ಹೆಜ್ಜೆಹಾಕುವುದ ಕಲಿತುಕೋ.

 

ನಿನ್ನೊಳಗಿನ ಶಕ್ತಿ ಅಖಂಡ ಸೂರ್ಯನಂತೆ,

ತನು ಮನಗಳ ಆರೋಗ್ಯದಿ ಬೆಳೆಸುವುದು.

ತನು ಮನವ ಸಂತೋಷದಿ ಹುರಿಗೊಳಿಸು,

ವಿಶ್ರಾಂತಿಯ ಆಶ್ರಯಿಸಿ ಬಲವ ಇಮ್ಮಡಿಸು.

 

ಹಣವು ನಮ್ಮ ಸಾಧನೆಯ ಸಲಕರಣೆ,

ವೆಚ್ಚ ಮಾಡದೆ ಸಮಯೋಚಿತವಾಗಿ ಬಳಸು.

ಜಾಣ್ಮೆಯಲಿ ವೆಚ್ಚಮಾಡು, ಜತನದಿ ಹೂಡು,

ಚಲನಶೀಲತೆಯಲ್ಲಿ ಅಭಿವೃದ್ಧಿ ಮಾಣು.

 

ಮೂರೂ ಸಂಪತ್ತು, ಸರಳ ಅಮೂಲ್ಯ,

ನಮ್ಮ ಬೆಳವಣಿಗೆಯ ಬೀಜಮಂತ್ರಗಳು.

ಮನ ಹೃದಯದಿ ಬೆಳವಣಿಗೆಗೆ ಬಳಸು,

ಗೆಲುವಿನ ಅನಂತ ಹೆದ್ದಾರಿಯ ಕಾಣು.

Saturday, March 14, 2026

ಸಣ್ಣ ಹೆಜ್ಜೆಗಳ ಶಕ್ತಿ

ಪ್ರತಿ ಮುಂಜಾನೆ ಹೊಸತನದ ಕರೆ,

ಹೊಸ ದಿನಕ್ಕೆ ಹೊಸ ಮುನ್ನುಡಿ ಬರೆ.

ನಿಲ್ಲ ಬೇಡ, ಬೆವರ ಹನಿ ಹರಿಸಿ ಚಲಿಸು,

ಸಣ್ಣ ಹೆಜ್ಜೆಗಳಿಡುತ್ತಾ ಶ್ರೇಷ್ಠತೆಯ ಸಾಧಿಸು.  

 

ಬೆವರ ಹರಿಸು, ಮನವು ಅರಳುವುದು,

ಹಾರ ಬೇಡ, ಸಣ್ಣ ಹೆಜ್ಜೆಗಳನಿಡು.

ವ್ಯಾಯಾಮ, ನಡಿಗೆ, ಉಸಿರಾಟ,

ಆರೋಗ್ಯವ ಸುಧಾರಿಸುವುದು.

 

ನೆಪಗಳು ಓಡುವುದು, ಚೈತನ್ಯ ಬೆಳಗುವುದು,

ಸಮಯ ನಿನಗೆ ದಾರಿ ಮಾಡಿಕೊಡುವುದು.

ಕಷ್ಟಗಳಲ್ಲೇ ಆನಂದ ಅಡಗಿದೆ,

ಮನದೊಳಗಿನ ಕಿಡಿ ಬೆಳಕ ಚೆಲ್ಲುವುದು.

 

ಬೆವರು, ಸಣ್ಣ ಹೆಜ್ಜೆಗಳು ತೆರೆವುದು ಹೆದ್ದಾರಿ,

ಪ್ರತಿಕ್ಷಣ, ಪ್ರತಿದಿನ ಮನ ಅರಳುವುದು.

ಸಂತಸ ಬಾಳ್ಗೆ ನಿರಂತರ ಹರಿವುದು,

ಸಾಧನೆಯ ಹಾದಿಯಲ್ಲಿ ಬೆಳದಿಂಗಳು ಜಾರುವುದು.

ಸತ್ಯದ ಕನ್ನಡಿ

ಪ್ರತಿದಿನ ಕನ್ನಡಿಯ ಮುಂದೆ ನಿಲ್ಲು,

ಮುಖವಾಡ ಕಳಚುವುದು ದಿಟ.

ನಿನ್ನದಲ್ಲದ ಭಾವಗಳು ನರ್ತಿಸುವುದು,

ಸತ್ಯದ ಅನಾವರಣ ಕಣ್ಣಮುಂದಾಗುವುದು.


'ಅಹಂ' ನ ಪೊರೆ ಕಳಚುವುದು,

ನಿಜದ ಮೌಲ್ಯವ ನೀ ಅರಿತು ಕೋ.

ನಕ್ಕುಬಿಡು ನಿನ್ನ ಮೂರ್ಖತನಕೆ,

ಬದಲಾಗು, ನಡೆ ಸತ್ಯದ ಹಾದಿಯಲ್ಲಿ.


ಸೋಲು ಮಳೆಯಂತೆ,

ಮನದ ನೋವ ತೊಳೆವುದು.

ಕಣ್ಣ ಪೊರೆ ಕಳಚಿ,

ಸತ್ಯ ದರ್ಶನ ಮಾಡಿಸುವುದು.


ಧೈರ್ಯದಿಂದ ನಡೆ,

ಪ್ರಾಮಾಣಿಕತೆಯಿಂದ ನಡೆ.

ಮನದ ಕನ್ನಡಿಯಲ್ಲಿ ನೋಡು,

ನಿನ್ನ ನೀ ಅರಿವ ಹಿರಿಮೆಯ ಕಾಣು.

Friday, March 13, 2026

ಪ್ರತಿದಿನದ ಬೆಳಕು

ನಿನ್ನೊಳಗೆ ಇದೆ ಅಖಂಡ ಬೆಳಕು,

ಅರಿತು ಕಂದೀಲ ಹಚ್ಚಬೇಕು.

ದೀಪವಿದೆ, ಬತ್ತಿಯಿದೆ ಮನಸ್ಸು ಬೇಕು,

ಜೀವನದ ಪ್ರತಿಹೆಜ್ಜೆಯ ಸೊಬಗ ಸವಿಯಬೇಕು.

 

ಭಯವ ಕಂಡು ಒಮ್ಮೆ ನಕ್ಕುಬಿಡು,

ಸೋಲು ಬಂದರೆ ನಮಿಸಿ ಪಾಠಕಲಿ.

ಪ್ರತಿದಿನದ ಚಿಕ್ಕ ಹೆಜ್ಜೆಗಳ ಇಡುತಿರು,

ಉಜ್ವಲ ಭವಿತವ್ಯದ ಗುರಿಯ ಸಾಧಿಸು.

 

ಸಂತೋಷ ನಾವಿಡುವ ಹೆಜ್ಜೆಗಳ ಸವಿ,

ಪ್ರತಿದಿನದ ಬೆಳವಣಿಗೆಯಲ್ಲಿದೆ ಅದರ ಮೂಲ.

ನಿನ್ನ ಬೆಳವಣಿಗೆಯ ಹೆಜ್ಜೆಗಳು ಆಗುವುದು,

ಪ್ರೇರಣೆ, ಉದಾಹರಣೆ ನಿನ್ನ ನೋಡುವವರಿಗೆ.

 

ಅರಿತು ಕೋ ನಿನ್ನ ಶಕ್ತಿಯ,

ಜಗವು ನಿನ್ನ ಕೈಯಲ್ಲಿ.

ಜೀವನದ ಜಯದ ಮಂತ್ರ,

ಪ್ರತಿದಿನದ ಹೆಜ್ಜೆಗಳಲ್ಲಿ.

Sunday, March 8, 2026

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ, 

ಪ್ರಶಾಂತ ಧ್ವನಿ.

ಕನಸೇ ಕಂಗಳು,

ಅಭಯವೇ ರಕ್ಷಣೆ.


ಬಿರುಗಾಳಿಯೂ ಅವಳೇ,

ಬೆಂಕಿಯ ಕೆನ್ನಾಲಿಗೆಯೂ ಅವಳೇ.

ಶಾಂತ ಸಮುದ್ರವೂ ಅವಳೇ,

ಕರುಣೆಯ ಕಡಲೂ ಅವಳೇ.


ನಮ್ಮೊಳಗಿನ ಶಕ್ತಿ ಆಕೆ,

ನಮ್ಮ ಕಂಗಳ ಜ್ಯೋತಿ ಆಕೆ.

ನಮ್ಮ ಕಾರಣೀಭೂತಳು ಆಕೆ,

ನಮ್ಮ ಪ್ರಪಂಚವೇ ಆಕೆ.


ಅವಳ ರಕ್ಷಣೆ, ನಮ್ಮ ಕರ್ತವ್ಯ,

ಅವಳ ಗೌರವ, ನಮ್ಮ ಉಸಿರು.

ಅವಳ ನಗು, ನಮ್ಮ ಸಂತೋಷ,

ಅವಳ ನೋವು, ನಮ್ಮ ನೋವು. 

ಹೊಸ ಪಯಣ

ವರುಷಗಳ ಪಯಣ ವ್ಯರ್ಥವಾಗಿದೆ,

ಗುರಿ ಇಲ್ಲ, ಗುರುವೂ ಇಲ್ಲ.

ಬಾಳಿನ ಪಯಣದ ಉದ್ದೇಶವೇನು?,

ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.


 ಗುರಿ ಇಲ್ಲದೆ ಮನ ಭ್ರಮೆಯಲ್ಲಿದೆ,

ನೊಣದಂತೆ ಮನ ಪರಿಭ್ರಮಿಸಿದೆ.

ಗುರು ಇಲ್ಲದೆ ಮನ ಸೊರಗಿದೆ,

ಜೀವನ ಕುರುಡಾಗಿದೆ ದಾರಿ ಕಾಣದೆ.

 

ತಿಮಿರಾಂಧಕಾರ ಕಳೆಯಲು ಬೇಕು,

ಜ್ಞಾನದ ಸಣ್ಣ ದೀವಿಗೆ ಹಚ್ಚಬೇಕು.

ಜೀವನದ ಗುರಿಯ ಸಾಕ್ಷಾತ್ಕಾರವಾಯಿತು,

ಬದಲಾಯಿತು ದಿಕ್ಕು ಹೊಸ ಪಯಣಕ್ಕೆ. 

Friday, March 6, 2026

ಸಹನೆ – ಜಯದ ದಾರಿ

ಬಿತ್ತಿದ ಬೀಜ ಮೊಳಕೆಯೊಡೆಯಲು ಸಮಯ ಬೇಕು,
ಅವಸರದಲ್ಲಿ ಗೆಲುವು ಸಿಗುವುದಿಲ್ಲ ಗೆಳೆಯಾ.
ಎಲ್ಲವೂ ಸಮಯದ ನಿಯಮ,
ಸಹನೆ ಇಲ್ಲದೆ ಫಲವಿಲ್ಲ.


ಸಣ್ಣ ಹೆಜ್ಜೆಗಳ ನಿರಂತರ ಪ್ರಯತ್ನ,

ಸಹನೆಯ ಕೈ ಹಿಡಿದು ನಡೆಯಬೇಕು.

ಹಾದಿಯಲಿ ಸಣ್ಣ ಜಯಗಳನ್ನು ಸಂಭ್ರಮಿಸಬೇಕು,
ನಂಬಿಕೆಯಿಂದ ಮುಂದುವರಿಯಬೇಕು.

 

ತಾಳ್ಮೆಯೇ ತಪಸ್ಸು,
ಕಾಲವೇ ಜಯ ತಂದುಕೊಡುವುದು.
ನಿರಂತರ ಪ್ರಯತ್ನದ ಹಾದಿಯಲ್ಲಿ,
ಬಾಳೆಲ್ಲಾ ಸಂಭ್ರಮ ನಿನ್ನದಾಗುವುದು.


Tuesday, March 3, 2026

ತಾಳ್ಮೆಯ ಪಯಣ

ಮನವು ಬಯಸಿದೆ,

ಶಾಂತ ಕ್ಷಣಗಳ,


ತಂಗಾಳಿಯ ಸುಂದರ ಕ್ಷಣಗಳ.

ಭಯ,ಆತಂಕ, ಅವಸರಗಳಿಂದ ಬಲು ದೂರ,

ಜನ ವಿಚಿತ್ರವಾಗಿ ನೋಡುವರು ನನ್ನ.

 

ಜಗತ್ತು ಆತುರದಲ್ಲಿದೆ,

ಎಲ್ಲವೂ ಕ್ಷಣಗಳಲ್ಲಿ ಆಗಬೇಕೆನ್ನುವರು,

ಸೃಷ್ಟಿಯ ನಿಯಮಗಳನ್ನೂ ಬದಲಿಸಬೇಕೆನ್ನುವರು,

ರಾಕೆಟ್ ಯುಗದಲ್ಲಿ ರಾಕೆಟ್ ಮೇಲೇ ಪಯಣಿಸುವರು,

ನಾನು ತಣ್ಣಗಿದ್ದೇನೆ, ತಾಳ್ಮೆಯನ್ನೇ ಆಯ್ದುಕೊಂಡೆನು. 


Monday, March 2, 2026

ಮುಂದಿನ ಹಾದಿ

ನೂರು ಆಗಿ ಹೋಗಿದೆ,

ಏನು ಕಲಿತೆ ಅದರಿಂದ?.

ನೂರು ಆಗುವುದಿದೆ ಮುಂದೆ,

ಏನು ಮಾಡುವೆ ಕಲಿತದ್ದರಿಂದ?

ಬೇಡದ ವಿಷಯಗಳ ಹೊರೆ ಹೊರಬೇಡ,

ಬಾರವಿರೆ ಕಷ್ಟ ಮುಂದೆ ಸಾಗಲು.

ಹಗುರಾಗಿಸಿಕೊ!,

ಬೇಡದ್ದನ್ನು ತೊಳೆದುಕೋ!,

ಬೇಕು, ಬೇಡಗಳ ವಿವೇಚಿಸು,

ಮನವ ತಿಳಿಯಾಗಿಸು,

ಶಾಂತಿಯ ಕಡಲಾಗಿಸು.


ಮನೋರಥ- ಪುಸ್ತಕ

ಮನೋರಥದ ಕಡಲು ಪುಸ್ತಕ , ಶೂನ್ಯದಿಂದ ಅನಂತದೆಡೆಗೆ ಪಯಣ . ಉಲ್ಲಾಸದ ಲಹರಿ ಕವನ , ಕಲ್ಪನೆಯ ಸಾಗರದಿ ತೇಲಿಸುವ ಪ್ರೇರಣ , ಬಡವ , ಬಲ್ಲಿದನಿಗೂ ಸಾಕಾರ , ...