ಗಂಗೆ-ಶಂತನು


ಸವಿಸ್ತಾರದ ಸಾಮ್ರಾಜ್ಯ;
ಪ್ರಖ್ಯಾತ ರಾಜವಂಶ;
ಹೆಸರಾಗಿದೆ ಹಸ್ತಿನಾಪುರವೆಂದು;
ರಾಜನೋ ಗುಣಾಡ್ಯನಾದ ಶಂತನು;
ರಾಜ್ಯದ ಜನರ ಆಡುಮಾತಿನ ಸತ್ಯಶೀಲ,ಸತ್ಯವಂತ;
ಸತ್ಯ,ಸೂರ್ಯ,ಚಂದ್ರ,ಯಮ,ಭೂಮಿ,ವಾಯು ಗುಣಗಳ ಪೊತ್ತವನವನು;
ಸೌಂದರ್ಯ,ತೇಜಸ್ಸು,ಕೋಪ,ವೇಗ,ತಾಳ್ಮೆ ಹಾಗು ಸತ್ಯದ ಉಪಾದಿಯೇ ಶಂತನು;
ರಾಣಿ ಇಲ್ಲದ ರಾಜ ಏಕಾಂಗಿ;

ಗಂಗಾ ನದಿಯ ತೀರದ ತಾಣ;
ಶಂತನುವಿಗೆ ಆಪ್ಯಾಯಮಾನ;
ಒಮ್ಮೆ ಕಂಡಳು ಅಪ್ಸರೆಯಂತಹ ಹೆಣ್ಣು
ಮರುಳಾದ ಅವಳ ಚೆಲುವಿಗೆ ಶಂತನು
ಪೆಣ್ಣೆಂದರೆ ಹೀಗಿರಬೇಕೆಂದಿತು ಮನ
ಸೌಂದರ್ಯಕ್ಕೇ ಅಪವಾದವಳು ಅವಳೇ ಗಂಗೆ
ಎಂಥ ಸೌಂದರ್ಯ, ಯೌವ್ವನ ಅವಳದು?
ಕಂಡ ಗಂಡಿಗೆ ನಿದ್ದೆ ಕೆಡಿಸುವಂತಹುದು!
ಮೊದಲ ನೋಟದಲ್ಲೇ ಸೋತಿದ್ದ ಶಂತನು
ಅವಳಿಲ್ಲದೆ ಜೀವನ ಬೇಡವೆನಿಸಿತು ಅವನಿಗೆ;
ಮದುವೆಯಾಗೆಂದು ಪರಿಪರಿಯಾಗಿ ಅವಳ ಬೇಡಿದ
ಒಪ್ಪುವೆನು ನೀ ನನ್ನ ಶರತ್ತಿಗೆ ಬದ್ಧನಾದರೆ ಎಂದಳವಳು
ನನ್ನ ಯಾವ ಕೆಲಸಕ್ಕೂ ಅಡ್ಡಿಪಡಿಸಬಾರದು,
ಯಾವ ಕೆಲಸಕ್ಕೂ ಆಕ್ಷೇಪಿಸಬಾರದು,
ಏಕೆ? ಏನು? ಎತ್ತ? ಪ್ರಶ್ನಿಸಲೇಬಾರದೆಂದಳು
ಪ್ರಶ್ನಿಸಿದರೆ ಅಂದೇ ನನ್ನ ನಿನ್ನ ಋಣಾನುಬಂಧ ಕೊನೆಗೊಳ್ಳುವುದು
ನಾ ಎಲ್ಲವನ್ನೂ ತೊರೆದು ನಿನ್ನಿಂದ ದೂರಾಗುವೆನೆಂದಳು ಆ ಪೆಣ್
ಆವುದೋ ಗುಪ್ತಕಾರ್ಯಸೂಚಿಯ ಹೊತ್ತೇ ಧರೆಗಿಳಿದಿದ್ದಳವಳು
ಅವಳ ಯೌವ್ವನದ ಸೆಳೆತಕ್ಕೆ,ಗಾಳಿಕ್ಕೆ ಸಿಕ್ಕ ಮೀನಾಗಿದ್ದ ಶಂತನು
ಮರುಮಾತಿಲ್ಲದೆ,ಯೋಚಿಸದೇ,ವಿವೇಚಿಸದೇ ಆಗಬಹುದೆಂದನು

ನಿಜವಾದ ಕಥೆ ಶುರುವಾದದ್ದು ಈಗಲೇ
ಗಂಗೆ-ಶಂತನು ಮದುವೆಯಾದರು
ಆನಂದದ ದಿನಗಳು-ಸುಖಕ್ಕೆ ಕೊನೆಯೇ?
ರತಿಯೇ ಕೈಹಿಡಿದಿರುವಾಗ ಸ್ವರ್ಗಕ್ಕೆ ಕಿಚ್ಚುಹಚ್ಚಿದ್ದ ಶಂತನು
ಯೌವ್ವನದ,ಹರೆಯದ ಸೌಂದರ್ಯದ ಮೈಥುನದ ಸುಖ
ಒಲ್ಲೆನೆನ್ನದೆ ಧಾರೆ ಎರೆದಿದ್ದಳು ಗಂಗೆ ಶಂತನುವಿಗೆ;
ಶಂತನು ಸ್ವರ್ಗ ಸುಖ ಉಂಡಿದ್ದ-ಶರತ್ತು ಮರೆತಿದ್ದ
ಮೈಥುನದ ಸುಖ ಫಲ ಕೊಟ್ಟಿತ್ತು
ಗಂಗೆಗೆ ಗಂಡು ಮಗುವಾಯಿತು
ಗಂಗೆಯ ನಿಜರೂಪ ಶಂತನುವಿಗೆ ಈಗ ಗೋಚರಿಸಲಾರಂಬಿಸಿತು;
ಗಂಗೆ ಶಂತನುವಿನ ಎದುರಿನಲ್ಲೇ ಮಗುವನ್ನು ನೀರಿಗೆ ಆಹುತಿಯಿತ್ತಳು
ಶಂತನು ಇಕ್ಕಟ್ಟಿಗೆ ಸಿಲುಕಿದ್ದ,ಶರತ್ತು ಅವನಿಗೆ ನೆನಪಾಯಿತು
ಪ್ರಶ್ನೆ ಕೇಳುವ ಹಾಗಿಲ್ಲ... ಇಬ್ಬಂದಿತನ ಶಂತನುವನ್ನು ಕಾಡಿತು
ಗಂಗೆ ಜೊತೆಯಲಿರೆ ಅಂತಹ ಮಕ್ಕಳು ನೂರು.. ಎಂದೆನಿಸಿತು
ಗಂಗೆ ಮೈಥುನಕ್ಕೆ ಒಲ್ಲೆ ಎನ್ನಲಿಲ್ಲ ಅದೇ ಸಂತೋಷ ಶಂತನುವಿಗೆ
ಹೀಗೆ ದಾಂಪತ್ಯದ ಫಲವೆಂಬಂತೆ ಎರಡನೇ,ಮೂರು,ನಾಲ್ಕು,ಐದು
ಆರು ಹಾಗು ಏಳು ಮಕ್ಕಳನ್ನು ಹೆತ್ತಳು ಹಾಗು ಎಲ್ಲವನ್ನೂ
ಶಂತನುವಿನ ಎದುರಿನಲ್ಲೇ ನೀರಿಗೆ ಆಹುತಿಯಿತ್ತಳು ಆ ಮಹಾತಾಯಿ
ಶಂತನಿವಿಗೆ ತಾಳ್ಮೆ ಇಲ್ಲವಾಗಿತ್ತು
ಮಗುವಿಗಾಗಿ ಹಂಬಲಿಸಿದ್ದ,ಬೆಂದುಹೋಗಿದ್ದ
ಗಂಗೆಯೊಂದಿಗಿನ ಸರಸ,ಸಲ್ಲಾಪ,ಮೈಥುನ ಮುಂದುವರೆದಿತ್ತು
ಎಂಟನೆಯ ಮಗುವಿನ ಜನನವಾಯಿತು;
ಶಂತನುವಿನ ಎದುರಲ್ಲೇ ಈ ಬಾರಿಯೂ ನೀರಿಗೆ ಆಹುತಿ ನೀಡಲು ಸಜ್ಜಾಗಿದ್ದಳು
ಇನ್ನೇನು ನೀರಿಗೆ ಆಹುತಿ ನೀಡಬೇಕೆನ್ನುವಷ್ಟರಲ್ಲೇ
ಬೆನ್ನ ಹಿಂದಿನಿಂದ " ಗಂಗೇ ಏನು ಮಾಡುತ್ತಿರುವೆ?"
ತುಟಿ ಮೀರಿ ಶಂತನು ಪ್ರಶ್ನಿಸಿಯೇ ಬಿಟ್ಟಿದ್ದ ಶರತ್ತು ಮುರಿದಿದ್ದ
ಗಂಗೆ ಶಂತನುವಿಗೆ ಆ ಮಗುವನ್ನು ಕೊಟ್ಟಳು
ತಾನು ಬಂದ ಕಾರ್ಯ ಮುಗಿಯಿತ್ತಿನ್ನು
ತಾನು ಬಂದ ರಹಸ್ಯವನ್ನು ಶಂತನುವಿಗೆ ತೆರೆದಿಟ್ಟಳು
ಮರುಮಾತಿಲ್ಲದೆ ನಡೆದು ಮರೆಯಾದಳು
ಆ ಮಗುವೇ ದೇವವ್ರತ- ಮಹಾಭಾರತದಲ್ಲಿ ಭೀಷ್ಮನೆಂದು ಪ್ರಖ್ಯಾತನಾದ||

ಪ್ರೇರಣೆ: " ಶೃಂಗಾರ ಕಥೆಗಳು" ಶ್ರೀ ಬೇಲೂರು ರಾಮಮೂರ್ತಿ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...