ನನ್ನ ಕನಸು

 ಕನಸು ಕಾಣಬೇಕು

ನನ್ನ ಕನಸು ಕಾಣಬೇಕು

ನಾ ಬಾನಲ್ಲಿ ಹಾರಾಡಬೇಕು

ಅದಕ್ಕೆ ನನಗೆ ರೆಕ್ಕೆಗಳು ಬೇಕು

ಬಾನಲ್ಲಿ ತೇಲಾಡಬೇಕು

ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗಬೇಕು

ಭುವಿಯ ಸೇರುವ ತವಕ ಅನುಭವಿಸಬೇಕು

ಭುವಿಗಿಳಿಯುತ್ತಾ ಪ್ರಕೃತಿ ಸೌಂದರ್ಯವ ಸವಿಯಬೇಕು

ಸೌಂದರ್ಯವ ಸವಿಯುತ್ತಾ ನಾನೇ ಪ್ರಕೃತಿಯಾಗಬೇಕು

ತೇಲುವ ಹೂವಿನ ಸುಗಂಧವಾಗಬೇಕು

ತೇಲುತ್ತಾ,ಹಾರುತ್ತಾ ಹಕ್ಕಿಗಳ ಕಲರವ ನಾನಾಗಬೇಕು

ಎಲ್ಲವೂ  ನಾನಾಗಬೇಕು

ಹೃದಯ ಹೊಮ್ಮಿಬರಬೇಕು

ನಾನು ಕನಸಾಗಬೇಕು

ಕನಸು ನನಸಾಗಿಸುತ್ತಾ ಸಾಯಬೇಕು।।

ನಿರ್ಧಾರ ನಿನ್ನದು

 ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ಬಾವಿಯೇ ನಮಗೆ ಪ್ರಪಂಚವಾಗುವುದು

ಹೇಳಲು ಪದಗಳೇ ಇಲ್ಲವಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ನದಿಗಳು ಕೂಡ ಬಾರಿಯ ಗೆರೆಗಳಾಗುವುದು

ವರ್ಣಿಸಲು ಕವನಗಳೇ ಇಲ್ಲವಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ನಾವಿರುವ ಜಾಗವೇ ಸೆರೆಮನೆಯಾಗುವುದು

ಇದ್ದು ಇಲ್ಲದ ಸ್ವಾತಂತ್ರ್ಯ ನಮ್ಮದಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ಬದುಕಿದ್ದೂ ಜೀವಂತ ಶವದಂತಿರಬಹುದು

ಅಗಾಧ ಶಕ್ತಿಯ ಬಳಸದೆ ವ್ಯರ್ಥವಾಗಿ ಸಾಯಬಹುದು।।

 

ಪರಿಧಿಯ ಹಾಕಿಕೊಳ್ಳಲೂಬಹುದು 

ಪರಿಧಿಯ ದಾಟಲೂಬಹುದು

ನೀನೇನಾಗಬೇಕೋ ನಿರ್ಧಾರ ನಿನ್ನ ಕೈಯಲ್ಲಿದೆ।।

ನಾನು ಕರಿ ಹುಡುಗ

 ನಾನು ಕಪ್ಪು ಮಗು,

ನಾನು ಕರಿ ಹುಡುಗ

ನಾನು ವಿಶೇಷ, ಅಪಹಾಸ್ಯವೆಂದೂ ನನ್ನನ್ನು ಹಿಡಿದಿಡದು;

ಕ್ಷಮಿಸಿ,ಅಡೆತಡೆಗಳೆಂದೂ ನನ್ನನ್ನು ತಡೆಯಲು ಸಾಧ್ಯವಿಲ್ಲ;

ನನ್ನ ತಲೆ ಮೇಲಕ್ಕೇರಿಸುವೆ, ಹೆಮ್ಮೆಯಿಂದ ನನ್ನ ಅನನ್ಯತೆಯ ಸಾರುವೆ;

ಇಂತಹುದೇ ಪ್ರತಿಕೂಲ ಪರಿಸ್ಥಿಯಲ್ಲೂ ನನ್ನ ಪ್ರಯತ್ನವನ್ನು ನಿಲ್ಲಿಸಲಾರೆ;

ನನ್ನ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆಯಿದೆ;

ನನ್ನ ಪ್ರತಿಯೊಂದು ಗುರಿಯನ್ನೂ ಸಾಧಿಸುವೆನೆಂಬ ಆತ್ಮವಿಶ್ವಾಸವಿದೆ;

ನಾನೇನಾಗಬೇಕೋ ಅದೆಲ್ಲವೂ ನಾನಾಗುವೆ;

ನಾನು ಕಪ್ಪು ಮಗು,

ನಾನು ಕರಿ ಹುಡುಗ,

ಆ ದೇವರ ಮಗ ನಾನು;

 

ಪ್ರೇರಣೆ: I am the black child

             By: Mychal Wynn        

ಸ್ವಾತಂತ್ರ್ಯಕ್ಕಾಗಿ ನಡೆ

 ಸ್ವಾತಂತ್ರ್ಯಕ್ಕಾಗಿ ನಡೆ :

ಕೆಲವರೆಂದರು ನಮಗದು ದೊರಕದು

ನನ್ನ ನಂಬಿಕೆ ಏನೆಂದರೆ

'ಜನರು ನಾಣ್ಯದ ಮತ್ತೊಂದು

ಮುಖವನ್ನು ಕಂಡಾಗ'

'ಎಲ್ಲೇ ಅನ್ಯಾಯವಾದಾರೂ ಅದು

ಎಲ್ಲೆಡೆಯ ನ್ಯಾಯಕ್ಕೆ ಅವಮಾನ'

ಘೋಷಣೆಗಳ ಕೂಗುವರು ,

ವಸ್ತುಗಳ ಎಸೆಯುವರು

ಆದರೆ ನನ್ನ ಹೋರಾಟವನೆಂದೂ ನಿಲ್ಲಿಸುವುದಿಲ್ಲ;

ಸ್ವಾತಂತ್ರ್ಯಕ್ಕಾಗಿ ನಿಲ್ಲದೆ ನಡೆದೆ ರಾತ್ರಿ-ಹಗಲೆನ್ನದೆ

ಪೊಲೀಸರು ಕೂಗುವರು ಹಾಗೂ

ನಮ್ಮನ್ನು ರಸ್ತೆಗಳಲ್ಲಿ ತಡೆಯುವರು

ಜನರಿಗೆ ಆಜ್ಞಾಪಿಸುವರು

'ಹಿಂದೆ ಹೋಗಿ'

ಗುಂಪು ಗುಂಪು ಜನರು ನಮ್ಮ ಮುಖದ ಮೇಲೆ

ಘೋಷಣೆಗಳ ಮೊಳಗಿಸುವರು;

ಅವರು ಹಿಡಿದ ಫಲಕಗಳು ಹೇಳುತ್ತವೆ

" ಮುನ್ನಡೆಯಿರಿ, ನಿಲ್ಲದೆ ಮುಂದುವರೆಯಿರಿ"

ಪ್ರೇರಣೆ:Freedom Walk       

           Bu Chaline F

ಸಹಜತೆ ಉಳಿಯಲಿ

 

ನೀನು ಹುಟ್ಟಿನಿಂದಲೇ ಕಲ್ಲಿನಿಂದ ಕಡೆದ ಪ್ರತಿಮೆಯಲ್ಲ

ಅಥವಾ ಭೂಮಿಯೊಳಗೆ ಬೇರು ಬಿಟ್ಟು ಬೆಳೆದ ಮರವಲ್ಲ

ಹುಟ್ಟಿದಾಗಿನಿಂದಲೇ ನಿನ್ನಲ್ಲಿದೆ ಸಹಜತೆ

ಅದು ಶುದ್ಧ ಹಾಗೂ ಪರಿಪೂರ್ಣವಾದುದು।।

 

ಯಾವ ಪಂಜರವೂ ನಿನ್ನ ಹಿಡಿದಿಡಲಾಗದು

ಯಾವ ತಲೆಬರಹವೂ ನಿನ್ನ ವರ್ಣಿಸಲಾಗದ್ದು

ನೀನು ಚೈತನ್ಯಪೂರ್ಣನೂ

ದ್ರವದಂತೆ ಬದಲಾಗುವವನು||

 

ನೀನು ಕಲ್ಲಲ್ಲ , ಬಂಡೆಯಂತೂ ಅಲ್ಲವೇ ಅಲ್ಲ

ಎಷ್ಟೊಂದಿದೆ ಈ ಪ್ರಪಂಚದಲ್ಲಿ ಶೋಧಿಸಲು

ಅಲೆದಾಡು ಸಹಸ್ರ ದಾರಿಗಳಲ್ಲಿ

ತಟ್ಟು ಕಂಡ ಕಂಡ ಬಾಗಿಲುಗಳನ್ನು||

 

ನಿನ್ನ ಸಾಹಸಗಳನ್ನು ಇಂದಿಗೂ ನಿಲ್ಲಿಸದಿರು

ನಿನ್ನೊಳಗಿನ ಚಿಕ್ಕ ತರಲೆ ಮಗುವ ಆಲಂಗಿಸಿಕೋ

ಭಯರಹಿತನಾಗು, ಕುತೂಹಲವನೆಂದೂ ಉಳಿಸಿಕೋ

ಯಾವಾಗಲೂ ಸಕಾರಾತ್ಮಕವಾಗಿರು, ಸಹಜತೆಯ ಉಳಿಸಿಕೋ।।

 

ಪ್ರೇರಣೆ:  Stay Wild

                 By MS Moem         

ಸಂತೋಷ

 ಸಂಕಟ ಹಾಗು ಸಂತೋಷ

ಎರಡೂ ಜೀವನದ ಜೋಡೆತ್ತುಗಳು

ಎರಡೂ ಬೆಸೆದಿದೆ ಬಿಡಿಸಲಾಗದ ನಂಟು

ಈ ಮನುಷ್ಯ ಜೀವಕೆ

ದೇವಾ ಹೊದಿಸಿದ ಬಟ್ಟೆ

ಪ್ರತಿಯೊಂದು ಸಂತೋಷ ಹಾಗೂ ಸಂಕಟ

ಜೀವನದೊಂದಿಗೆ ಸೂಕ್ಷ್ಮ ದಾರದಿಂದ ಬೆಸೆದಿದೆ

ಅದು ಹಾಗಿದ್ದರೇನೇ ಚಂದ

ಮನುಷ್ಯ ಭೂಮಿಗೆ ಬಂದುದೇ

ಸಂತೋಷ ಹಾಗೂ ಸಂಕಟ ಎರಡನ್ನೂ ಅನುಭವಿಸಲು

ಇದನ್ನು ತಿಳಿದಾಗ ಮಾತ್ರ

ಜೀವನ ಸುಗಮ ಹಾದಿಯಲ್ಲಿ ಸಾಗುವುದು\\

 

ಪ್ರೇರಣೆ: Joy

              By William Blake  

ಅರಿವು

 

ಹೀಗೆ ನೋವಿನಲಿ ಬಳಲುತ್ತಿದ್ದೆ

ಒಮ್ಮೆ ಮನಕೆ ಗೋಚರಿಸಿತು||

 ಅದೊಂದು ಮುಂಜಾನೆ

ದಿಕ್ತಟದಲ್ಲಿ ನೋಟ ನೆಟ್ಟಿತ್ತು

ಮೂಡಣದಲ್ಲಿ ರವಿಯ ಮೊದಲ

ಕಿರಣಗಳು ಭೂಮಿಯ ತಲುಪುವ ತವಕದಲ್ಲಿತ್ತು

ಮನದಲ್ಲಿ ಹೊಸತೊಂದು

ಬಾಗಿಲು ತೆರೆದುಕೊಳ್ಳುತ್ತಿತ್ತು

ಮನದಾಳದಲ್ಲೊಂದು ಅವ್ಯಕ್ತಭಾವ

ವಿಲವಿಲನೆ ಒದ್ದಾಡುತ್ತಿತ್ತು

ಹಾಗೆ ಒಮ್ಮೆಲೇ ಏನೋ

ನನ್ನಿಂದ ಬಿಟ್ಟು ಹೋದಂತಾಯಿತು

ಏನೋ ಒಂದು ರೀತಿಯ ಉಲ್ಲಾಸ

ಮನದ ತುಂಬೆಲ್ಲಾ ಮನೆಮಾಡಿತು

ಏನೋ ಗಳಿಸಿಕೊಂಡ ವಿಜಯದ ಭಾವ

ಮುಖದಲ್ಲಿ ಚೈತನ್ಯ ಹೊರಹೊಮ್ಮಿತು||   

ನನ್ನ ಕನಸು

  ಕನಸು ಕಾಣಬೇಕು ನನ್ನ ಕನಸು ಕಾಣಬೇಕು ನಾ ಬಾನಲ್ಲಿ ಹಾರಾಡಬೇಕು ಅದಕ್ಕೆ ನನಗೆ ರೆಕ್ಕೆಗಳು ಬೇಕು ಬಾನಲ್ಲಿ ತೇಲಾಡಬೇಕು ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗ...