ಮನಸ್ಸು

ಬೇಡ ಬೇಡವೆಂದರೂ ಏಕೆ ಹೀಗೆ?
ಬೇಕು ಬೇಕುಗಳ ಬಯಲಿನ ಹಿಂದೆಯೇ ಓಡುವುದು
ರೇಜಿಗೆ ಬಿದ್ದ ಮಗುವಿನಂತೆ ಹಠಮಾರಿ ಈ ಮನಸ್ಸು
ಉಬ್ಬು-ತಗ್ಗುಗಳ ರಸ್ತೆಯಲ್ಲಿ ಹರೆಯದ ಹುಡುಗರು
ಓಡಿಸುವ ಗಾಡಿಯಂತೆ ಭಂಡ ಧೈರ್ಯದ ಮನಸ್ಸು
ಹಿಡಿದ ಹಠವ ಬಿಡದ ಛಲದಂಕ ಮಲ್ಲ
ತಪ್ಪಾಗಿ ನೋವಾಗುವವರೆಗೂ ಪಾಠ ಕಲಿಯದು ಈ ಮನಸ್ಸು 

ಏಕೆ ಮರುಳಾದೆ ರಾಧೆ?

ಏಕೆ ಮರುಳಾದೆ ರಾಧೆ?
ಶಾಮನ ನೋಟಕೆ;
ಮಾತಿನ ಮೋಡಿಗೆ
ಏಕೆ ಕಳೆದು ಹೋದೆ?

ಹುಣ್ಣಿಮೆಯ ಚಂದ್ರಿಕೆಯ ಸೊಬಗು
ಕರಿಮೊಗದ ಶಾಮಗೆ ಆಯಿತೇ ಬೆರಗು!
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಆವ ಪುರುಷಗೂ ಒಲಿಯದ ಮನ
ಗೋಕುಲ ನಂದನನ ಬಯಸಿತೇಕೆ ಮನ!
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಪ್ರೀತಿಗೆ ಅನ್ವರ್ಥ ನೀನು
ಕಂಡೆ ಶಾಮನಲ್ಲಿ ಒಲುಮೆ ಜೇನು
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಆವ ಜನುಮದ ಬಯಕೆಯೋ?
ಶಾಮನೇ ಇನಿಯನಾಗುವ ಒರತೆಯೋ?
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಒಂದು ಚಣದ ಅಂದ

ಒಂದು ಚಣದ ಅಂದ ಮನದಲ್ಲಿ ತುಂಬುವುದು ಕೊನೆಯಿರದ ಆನಂದ
ಅದರ ಮನಮೋಹಕತೆಗೆ ಕೊನೆಯುಂಟೆ!;ಎಂದೂ ಶೂನ್ಯ ಭಾವ ತೋರದು
ಅದರೂ ನಮ್ಮೊಳಗೆ ಶಾಂತತೆಯ ತರುವುದು;ನಿದ್ದೆಯೊಳಗೂ
ಪೂರ್ತಿ ಸಿಹಿ ಕನಸುಗಳು,ಆರೋಗ್ಯ ಹಾಗು ಶಾಂತತೆಯ ಕಡಲು;

ಪ್ರೇರಣೆ: A thing of beauty by John Keats.


ಬೆಂಕಿ ಮತ್ತು ನೀರು

ಕೆಲವರು ಬೆಂಕಿ ಎಂದು
ಮತ್ತೆ ಕೆಲವರು ನೀರೆಂದು
ಪ್ರಳಯಕ್ಕೆ ಕಾರಣವೆಂದು ವಾದ-ಪ್ರತಿವಾದ
ನನ್ನನುಭವದ ಒರತೆಗೆ
ಬೆಂಕಿಯ ಮೇಲೆಯೇ ಒಲವು
ದ್ವೇಷದ ಕೆನ್ನಾಲಗೆಯ ಪರಿಚಯವಿದೆ
ವಾದವೋ-ಪ್ರತಿವಾದವೋ?
ಬೆಂಕಿಯೋ? ಜಲಪ್ರಳಯವೋ?
ಯಾವುದಾದರೂ ಸರಿಯೇ ಜೀವಸೆಲೆಗೆ ಸಂಚಕಾರ||

ಪ್ರೇರಣೆ:Fire & Ice by Robert Frost

ಓಹ್! ಇನ್ನೆಷ್ಟು ದಿನ ಈ ಸಂಕಟ

ಓಹ್! ಇನ್ನೆಷ್ಟು ದಿನ ಈ ಸಂಕಟ
ಇನ್ನೆಷ್ಟು ದೂರ ಸಾಗಬೇಕೋ?
ಒಂದೊಂದು ಹೆಜ್ಜೆಯಲ್ಲೂ
ಅಬ್ಬಾ ಎಷ್ಟು ಯಾತನೆ!
ಸಹಿಸಲೇ ಬೇಕು ತೆವಳಲು
ಓಹ್! ಆ ದಿನ ಬಂದೇ ಬರುವುದು
ಅವನು ಬಂದು ನಮ್ಮ ನೋವ ಸಂತೈಸುವನು||

ಸುಖದ ಸುಪ್ಪತ್ತಿಗೆಯಲ್ಲೇ ಮಿಂದವರಾರು?
ನೋವ ಮೆಟ್ಟಿಲುಗಳ ಹತ್ತದೆ
ನರಕ ಸಾಟಿದ ಮೇಲೆ ಸ್ವರ್ಗ ಸಿಗುವುದು
ನೋವಲ್ಲಿ ಬೆಂದ ಮೇಲೆ
ಮತ್ತೆ ಏನು ಬೇಕು?
ಓಹ್! ಆ ದಿನ ಬಂದೇ ಬರುವುದು
ಅವನು ಬಂದು ನಮ್ಮ ನೋವ ಸಂತೈಸುವನು||

ಆಶಯ

ಅವನಿಗಾಗಿಯೇ ಕಾಯುತ್ತಿದ್ದೆ;
ಮುಂದೆಯೂ ಕಾಯುತ್ತೇನೆ;
ಎಷ್ಟೋಂದು ಅನುಭವದ ಮೂಟೆ ಹೊತ್ತಿದ್ದೇನೆ;
ಎಲ್ಲವನ್ನೂ ಅವನ ಮುಂದೆ ಬಿಚ್ಚಿಡಲು;
ಬೇಕು,ಬೇಡಗಳ ಗಂಟು ಕಟ್ಟಿದ್ದೇನೆ;
ಏಕೆಂದರೆ ಅವನಿಗೆ ಏನು ಬೇಕೆಂದು ತಿಳಿದಿಲ್ಲ;
ಒಂದು ನಂಬಿಕೆ,ಮತ್ತೊಂದು ಪ್ರಾಮಾಣಿಕತೆ
ಅಷ್ಟೇ ಗೊತ್ತು ನನಗೆ;
ಎಲ್ಲವನ್ನೂ ಅವನು ಸ್ವೀಕರಿಸುತ್ತಾನೆ
ಎಂಬ ಆಶಯವಷ್ಟೇ ಮನದಲ್ಲಿ ಇದೆ||

ಅರ್ಪಣೆ

ಅವನಿಗೆ ಅರ್ಪಿಸಲು ಸುತ್ತಾಡಿದೆ
ತೋಟದೆಲ್ಲೆಡೆ ಹುಡುಕಾಡಿದೆ
ಒಂದು ಉತ್ತಮ ಹೂವಿಗಾಗಿ
ಮುಗುಳು ನಗುತ್ತಾ ಸ್ವಾಗತಿಸಿವೆ
ಬಣ್ಣಬಣ್ಣದ ವೈಯಾರದ ಹೂಗಳು
ಒಂದೇ ಒಂದು ಹೂವನ್ನೂ ಆರಿಸಲಾಗಲಿಲ್ಲ
ಬೇಸರಿಸಿದೆ ಮನ ದುಗುಡದಿ
ಹೂವ ಕೀಳುವ ಪಾಪ ಮಾಡಹೊರಟ್ಟಿದ್ದೆ
ಎಲ್ಲವೂ ಅವನ ಲೀಲೆ
ಎಲ್ಲವೂ ಅವನ ಮಾಯೆ
ಈ ಸೌಂದರ್ಯವೇ!, ಆ ಸ್ವರ್ಗ;
ಎಲ್ಲವೂ ಅವನದೇ.......
ಹೂವ ಕಿತ್ತು ಅವನಿಗೇ ಅರ್ಪಿಸೋಣವೆಂದಿದ್ದೆ
ಅವನ ಹೂ ನಗುವಿಗೆ
ಮನದಲ್ಲೇ ಅರಿವು ಮೂಡಿತು
ಅಲ್ಲೇ ಸಾಷ್ಟಾಂಗ ನಮಿಸಿದೆ
ಮನವೆಂಬ ಹೂವನ್ನೇ ಅವನಿಗರ್ಪಿಸಿದೆ||

ಆಹ್ವಾನ

ಹಿಡಿ ಮಣ್ಣಲ್ಲಿ ಕಾಣು ಪ್ರಪಂಚವ
ಕಾಡು ಹೂವಿನ ಸೌಂದರ್ಯದಲಿ ಕಾಣು ಆ ಸ್ವರ್ಗವ
ಅನಂತವ ಮುಷ್ಟಿಯೊಳಗಿ ಹಿಡಿದು ಆನಂದಿಸು
ಮುಕ್ತತೆಯ ಅನುಭವಿಸು ಕಾಲನ ತೆಕ್ಕೆಯಲಿ||

ಪ್ರೇರಣೆ: William Blake

ಗದ್ದುಗೆಯ ಗದ್ದಲ

  ಓಹ್ ! ಇವತ್ತು ಹೊಸ ಗದ್ದುಗೆಗೆ ನಾಯಕನ ಪಟ್ಟಾಭಿಷೇಕ ಸಾಕಷ್ಟು ಗ್ಯಾರಂಟಿ ಭರವಸೆಗಳ ಹರಿಸಿ ಇಪ್ಪತ್ತು ದಿನ ಬೆವರು ಹರಿಸಿ ಎದುರಾಳಿಯನ್ನ ಪಂದ್ಯದಲ್ಲಿ ...