ಮತ್ತದೇ ಬೀದಿ ನಾಟಕ


ಎಲ್ಲವೂ ಇಂದು ಮುಗಿದಿದೆ, ಹೊಸ ಅಧ್ಯಾಯ ಪ್ರಾರಂಭವಾಗಿದೆ;
ಮೊನ್ನೆ ಮತಯಂತ್ರದೊಳಗೆ ಮತದಾರ ತನ್ನ ಮನದ ಗುಟ್ಟು ಬಚ್ಚಿಟ್ಟಿದ್ದ,
ಇಂದು ಚುನಾವಣಾ ಆಯೋಗ ಗುಟ್ಟು ರಟ್ಟುಮಾಡಿದೆ;
ಮಾಧ್ಯಮಗಳ ನಿರೀಕ್ಷೆಯಂತೆ ಫಲಿತಾಂಶ ಹೊರಬಿದ್ದಿದೆ;
ಸೋತವನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ;
ಗೆದ್ದವರು ಮಾತ್ರ ಮಾಧ್ಯಮಗಳ ಮುಂದೆ ಬೀಗುವುದು ಕಾಣಿಸಿತು;
ಒಂದು ಭ್ರಷ್ಟ ಪಕ್ಷ  ಹೊರಳಿತು ಅಧಿಕಾರದಿಂದ ನೇಪಥ್ಯಕ್ಕೆ;
ಇತ್ತೀಚಿನ ದಿನಗಳಲ್ಲಿ ಭ್ರಷ್ಟತನವನ್ನೇ ತನ್ನ ವಕ್ತಿತ್ವವಾಗಿಸಿಕೊಂಡಿರುವ
ಮತ್ತೊಂದು ಪಕ್ಷ ಅಧಿಕಾರದ ಗದ್ದುಗೆ ಏರಿದೆ;
ಯಾರು ಬಂದರೂ,
ಯಾರು ಹೋದರೂ,
ರೈತ ಹೊಲ-ಗದ್ದೆಗಳಲ್ಲಿ ಉಳುಮೆ ಮಾಡಲೇಬೇಕು;
ನಮ್ಮ ಬೆವರ ಹನಿ ನಮ್ಮನ್ನು ಕಾಯ್ವದಲ್ಲದೇ ಪರರ ಬೆವರ ಹನಿ ನಮ್ಮ ಕಾಯ್ವದೇ?
ನಮ್ಮ ಬೆವರ ಹನಿ ಬಳಸುವರು ತಮ್ಮ ಕೈ ತೊಳೆಯಲು ನಮ್ಮ ಆಳ್ವರು;
ನಮ್ಮ ಮುಂದೆ ಗೆದ್ದು ಬೀಗುವರು;
ನಾವು ಮಾತ್ರ ಮೂಕ ಪ್ರೇಕ್ಷಕರು;
ಮತ್ತೈದು ವರ್ಷ ನರಕಯಾತನೆಗೆ ಸಿದ್ಧರಾಗುತ್ತಿದ್ದೇವೆ,
ಹೊಸ ಶಕ್ತಿ,ನಿರೀಕ್ಷೆ ಹಾಗು ಆಶಾಭಾವದಿಂದ;
ಬೆಲೆ ಏರಿಕೆ, ನೀರಿನ ಸಮಸ್ಯೆ,ಕಾವೇರಿ ಕಿತ್ತಾಟ,ಕುರ್ಚಿ-ಖಾತೆ ಕಾದಾಟ....ಇತ್ಯಾದಿ ಮುಂದೈತೆ
ನಮಗೆಲ್ಲಾ ಕಾದೈತೆ ಪುಕ್ಕಟ್ಟೆ ಮನರಂಜನೆ.
ಇವೆಲ್ಲಾ ನಮಗೆ ಸಾಮಾನ್ಯವಾಗಿಬಿಟ್ಟಿದೆ
ಬದಲಾವಣೆ ಎಂದರೆ ಬರೀ ಹಸ್ತ ಬದಲಾವಣೆಯಲ್ಲ....
ಗೆಲುವು ಯಾರದಾದರೂ.....
ಸೋಲು ಮಾತ್ರ ಶ್ರೀಸಾಮನ್ಯನದು, ಮತದಾರನದು ಇದು ಸತ್ಯ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...