Saturday, June 6, 2026

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ,

ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ.

ಮನದ ಬಾಂದಳದಿ ಸಾವಿರ ವಿಚಾರಗಳಿವೆ,

ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ.


ಆ ತಾರೆಗಳು ಸ್ವತಂತ್ರದಿ ನಗುತ್ತಿವೆ,

ಈ ತಾರೆಗಳು ಬಿಡುಗಡೆಗೆ ಹಪಹಪಿಸುತ್ತಿವೆ.

ಆ ತಾರೆಗಳ ನಿಯಂತ್ರಿಸುವವನಾರೊ?,

ಈ ತಾರೆಗಳ ಬಳಸುತ್ತಿರುವವನಾನೇ!.


ದಾಟಿ ಪರಿಧಿಗಳ ಬಾಂದಳದಿ ನಗುತ್ತಿವೆ,

ದಾಟಲಾರದೆ ಅಂಕೆಶಂಕೆಯಲಿ ನಲುಗುತ್ತಿವೆ.

ಪ್ರಕೃತಿ ತತ್ವಗಳ ಎಲ್ಲೇ ಮೀರುವುದೇ?,

ಅಂಕೇಶಂಕೆಯಲ್ಲಿ ಮಿಂದು ನರಳುವುದೇ?.


ಯಾವ ದಾರಿ ಹುಡುಕುವುದೋ?,

ಯಾರು ದಾರಿ ತೋರುವರೋ?.

ಸಾಧನೆಯ ಹಠಹಿಡಿದು ಹೊರಡುವುದೋ?,

ಅಂಕೇಶಂಕೆಯಲ್ಲಿ ನೊಂದು ಬೇಯುವುದೋ?.


ದಾರಿ ತೋರಬೇಕು, ಬೆಳಕು ಹಾಯಬೇಕು,

ಆ ಕಾಲಕ್ಕೆ ಹಂಬಲದಿ ಕಾಯಬೇಕು.

ಅರಿತು ಪ್ರಕೃತಿ ತತ್ವಕ್ಕೆ ತಲೆಬಾಗಬೇಕು,

ಅಲ್ಲಿಯವರೆಗೂ ಪ್ರಯತ್ನಿಸುತ್ತಲೇ ಇರಬೇಕು. 

ಸಿಹಿಮಾತು - ಬಿರುಗಾಳಿ

ಸಿಹಿಮಾತು, ಸಿಹಿಮಾತು,

ಎದೆಯು ಬಯಸುತಿದೆ.

ಬಿರುಗಾಳಿ, ಬಿರುಗಾಳಿ,

ಎದೆಯ ನಡುಗಿಸುತಿದೆ.

 

ಸಿಹಿಮಾತು, ಸಿಹಿಮಾತು,

ಕರುಣೆಯ ಕಡಲ ಸೇರುವುದು.

ಬಿರುಗಾಳಿ, ಬಿರುಗಾಳಿ,

ಮರಣದ ಭಯವ ತರುವುದು.

 

ಸಿಹಿಮಾತು, ಸಿಹಿಮಾತು,

ಹೃದಯದ ಹೂವು ಅರಳುವುದು.

ಬಿರುಗಾಳಿ, ಬಿರುಗಾಳಿ,

ಭರವಸೆಯ ದೀಪವ ಆರಿಸುವುದು.

 

ಸಿಹಿಮಾತು, ಸಿಹಿಮಾತು,

ಜೀವನದ ದಾರಿದೀಪವಾಗುವುದು.

ಬಿರುಗಾಳಿ, ಬಿರುಗಾಳಿ,

ಜೀವನ ಅಲ್ಲೋಲಕಲ್ಲೋಲವಾಗುವುದು.

 

07.06.2026

Sunday, May 31, 2026

ಇರುಳ ನೆರಳಿನ ಪಯಣ

ಇರುಳ ಕತ್ತಲಿನಲ್ಲಿ ಬಯಕೆಗಳ ಕನಸ ನೆರಳ ಹೆಣೆದೆ,

ರಾತ್ರಿಯ ಪ್ರಶಾಂತ ಕತ್ತಲೆಯ ನೆಲಹಾಸಿನ ಮೇಲೆ,

ಅಸ್ಪಷ್ಟ, ಅಗೋಚರ, ಅಲೆದಾಟ, ತೀರದ ದಾಹ,

ಇರುಳ ಕತ್ತಲೆಯಲ್ಲಿ ನಡೆವ ದಾರಿ ಕಾಣದಾಯಿತು.


ಪ್ರಯಾಣದ ದಾಹ, ಬಾಯಾರಿಕೆ, ಹತಾಶೆ,


ಬಳಲಿಕೆ,ದಾಹ ತಣಿಸುವರೆಂದು ಕಾಯುವಿಕೆ,

ಕಣ್ಣರಳಿಸಿ ನೋಡಿದರೂ ಸುತ್ತಲೂ ಬರೀ ಕತ್ತಲೆ,

ಭಯ ಕತ್ತಲ ಆವರಿಸಿ ದೇಹ ಬೆವೆತಿದೆ ದಾರಿ ಕಾಣದೆ.


ಮುಂದೆ ಹೆಜ್ಜೆ ಇಡುವುದೋ!, ದ್ವಂದ್ವ,

ಮುಂದೆ ದಾರಿ ಕಾಣುವುದೇ!, ಪ್ರಶ್ನಾರ್ಥಕ,

ಮರದ ಬುಡದಲ್ಲಿ ಬೆವೆತು ಮಲಗಿದೆ,

ನಾಳೆಯ ಕರಾಳ ಚಿತ್ರವ ನೆನೆದು ಬೆದರಿದೆ.


ದಾಹ, ಬಳಲಿಕೆ, ತಂಪಾದ ಗಾಳಿಗೆ ನಿದ್ದೆಯ ನಶೆ,

ಕನಸ ಪಯಣದಲ್ಲೂ ಬಯಕೆ ನೆರಳು ಹೆಣೆದಿದೆ,

ಹಕ್ಕಿಗಳಿಂಚರ, ಬೆಳಗಿನ ಮಂಜು ಎಚ್ಚರಿಸಿತು,

ಭಯ ಕರಗಿತು, ಸೂರ್ಯೋದಯ ತೆರೆ ಎಳೆದಿತ್ತು.

Saturday, May 30, 2026

ಮೌನ - ಮಾತು

ಪ್ರೀತಿಯ ಭಾವವ ವ್ಯಕ್ತಪಡಿಸು,

ಮೌನ ಪ್ರೀತಿಯ ಭಾಷೆಯಲ್ಲ,

ಸಮಯಕ್ಕೆ ಮಾತುಗಳ ಜೋಡಿಸು,

ಸಾಂತ್ವನದ ಮಾತುಗಳು ಹೃದಯ ತಟ್ಟುವುವು.


ಹೃದಯ ತೆರೆದು ಮಾತನಾಡು,

ಮಾತುಗಳು ಮಧುರ ಪುಷ್ಪಗಳ ಅರ್ಪಿಸು,

ಮೌನ ಬೇಡ, ಮೌನರಾಗ ಬೇಡ,

ಪದಗಳು ಸಂಗೀತವಾಗಿ ರಾಗ ಮಾಲಿಕೆಯಾಗಲಿ.


ಹೇಳಿಬಿಡು, ಮಧುರ ಮಾತುಗಳಲ್ಲಿ,

ಒಪ್ಪುವುದೋ!, ಇಲ್ಲವೋ!, ಗೊಂದಲಬೇಡ,

ಹೃದಯ ನಿನ್ನದಾದರೆ ಜೊತೆಗೂಡುವುದು,

ಇಲ್ಲವಾದರೆ ಅದೊಂದು ಮರೀಚಿಕೆಯಷ್ಟೇ!.


ನಿನ್ನದೆಂದು ಬರೆದಿರುವುದು ಕಾದಿದೆ ನಿನಗಾಗಿ,

ನಿನ್ನದಲ್ಲದ ಹೃದಯ ನಿನಗೇಕೆ ಹೇಳು!,

ಪ್ರಶ್ನಿಸು, ಹೇಳು, ಕೇಳು, ಬಿಡುಗಡೆಗಾಗಿ,

ಮೌನವಾಗು, ಜೊತೆಗೂಡು ನಿನ್ನದಾದಂತೆ. 

Friday, May 29, 2026

ಚಿತ್ತಾರದ ಕನಸು

ನಿನ್ನ ನೆನಪಿನ ಣೆಯೇರಲು ನನ್ನೊಳಗೆ ಕಾಡುತ್ತಿದೆ,

ಕಾಡುವ ಇರುಳ ಕನಸಿನ ದೇವತೆ ನೀನು,

ಸಂಶಯಾನದ ಮೌನಗೀತೆಯಲ್ಲಿ ನೀ ಪ್ರತಿದ್ವನಿಸುವೆ,

ಕಾಡಿನ ಕಣಿವೆಯ ಮೌನರಾಗವು ನೀನೇನೆ.

 

ರಾಧಾ-ಕೃಷ್ಣರಂತೆ ಪ್ರೀತಿಸುವ ಬಾ,

ಹೋಳಿಯ ಬಣ್ಣಗಳಲ್ಲಿ ನಿನ್ನ ನಗುವ ಕಂಡೆ,

ಇರುಳು ಎಂದೂ ಮುಗಿಯದಿರಲಿ ಸದಾ,

ಹೃದಯಗಳು ಬೆರೆತು ಸಂಭ್ರಮಿಸಲಿ ಸದಾ.

 

ನಿದಿರೆ ದೂರಾಗಿ ಹೊಸ ಕನಸುಗಳ ತೆರೆದಿದೆ,

ಕತ್ತಲೆಯ ಭಯ ದೂರಾಗಿ ಹೊಸತನ ಮೇಳೈಸಿದೆ,

ಬೆಳಕಿನ ಚಿತ್ತಾರದಂತೆ ಮನವು ಕುಣಿದಿದೆ,

ನಮ್ಮ ಪ್ರೀತಿ ಹೃದಯದೊಳಗೆ ನರ್ತಿಸಿದೆ.

 

ನೀ ಮನದಲ್ಲಿ ಹೆಜ್ಜೆ ಇಡಲು ಆನಂದವೇ!,

ಮೈ-ಮನಗಳಲ್ಲಿ ಸದಾ ಸಂತೋಷವೇ!,

ಹೃದಯದ ಮಿಡಿತದಲ್ಲಿ ನೀ ಬೆರೆತುಹೋಗು,

ಉಸಿರಿನ ಕಣ-ಕಣಗಳಲ್ಲಿ ನೀ ಕರಗಿ ಹೋಗು.

Wednesday, May 27, 2026

ಅನಂತ ಪಯಣ

ನಾವು ಪಯಣಿಗರು,

ಎಷ್ಟು ದೂರ ಪಯಣ ತಿಳಿದವರಿಲ್ಲ,

ಪ್ರಯಾಣ ಎಂದು ಆರಂಭವಾಯಿತೋ?,

ಕೊನೆ ಎಂದೋ, ಅರಿತವರಿಲ್ಲ.


 ಇಲ್ಲಿ ಎಲ್ಲರೂ ಅಪರಿಚಿತರು,

ಎಲ್ಲರೂ ಬಂದು ಹೋಗುವವರೇ!,

ನೆಲೆ ನಿಲ್ಲುವವರು ಬಲು ವಿರಳ,

ಇಂದಲ್ಲ ನಾಳೆ ನಮ್ಮ ಪಯಣ ನಿಶ್ಚಿತ.

 

ಕೆಲವರು ಇಲ್ಲಿ ಹಿರಿಯರು,

ಕೆಲವರು ಇಲ್ಲಿ ಕಿರಿಯರು,

ಮತ್ತೆ ಕೆಲವರು ಸಮ ವಯಸ್ಕರು,

ಎಲ್ಲರೂ ಕಾಯುತ್ತಿರುವವರೇ!.

 

ನಮ್ಮ ಜೀವನದ ಉದ್ದೇಶ, ಆಶ್ಚರ್ಯ,

ಬಂದದ್ದು ಏಕೆ?, ಪ್ರಶ್ನಾರ್ಥಕ!,

ಅರಿವಿಲ್ಲದೆ ಸಂಸಾರದಲ್ಲಿ ತಲ್ಲೀನ,

ಬಾಳ ಪಯಣ ನಿರಂತರ, ಅನಂತ.


Sunday, May 24, 2026

ಜನನಿ, ಓ! ಜನನಿ

ಜನನಿ, ! ಜನನಿ,

ಭೂಮಿಗೆ ತಂದವಳು ನೀನಲ್ಲವೇ!,

ಕಂಗಳ ಬೆಳಕು ನೀನೇ ಅಲ್ಲವೇ!,

ಕಂಗಳು ಮೊದಲು ನೋಡಿದ ದೇವತೆ ನೀನಲ್ಲವೇ!,

ನೀನೇ ನನಗೆ ವಿಶ್ವವಲ್ಲವೇ!

ಹಸಿವಾದಾಗ ಉಣಿಸಿದವಳು ನೀನು,

ಬಿದ್ದು ನೋವಾದಾಗ ನೋವುಂಡವಳು ನೀನು,

ನೀನಿಲ್ಲದೆ ನಾನು ಹೇಗಿರಲಿ?,

ನಿನ್ನ ಆಸರೆಯಲ್ಲಿ ಬೆಚ್ಚಗೆ ನಿದಿರೆಯ ತರುವೆ,

ನಿನ್ನ ಕೈಯಲ್ಲಿ ತಂಗಾಳಿಯ ಕರೆತರುವೆ,

ನಿನ್ನ ಕೈ ತುತ್ತು ಅಮೃತವು ಎನಗೆ,

ನಿನ್ನ ಅಡಿಗಳಲ್ಲಿ ಅಡಗಿದೆ ಸ್ವರ್ಗ,

ಅಮ್ಮಾ,ಅಮ್ಮಾ ಎಂದರದೇ ಸ್ವರ್ಗ.

Sunday, May 17, 2026

ಸ್ಥಿರತೆ - ಚಲನೆ

ಇಲ್ಲಿ ಎಲ್ಲವೂ ಚಲಿಸುತ್ತಿದೆ, 

ನಾವು ಮಾತ್ರ ನಿಂತಿದ್ದೇವೆ.

ಆಲೋಚನೆಗಳು ಹರಿಯುತ್ತಿವೆ,

ಸಾಗರದ ಅಲೆಗಳು ಎಂದೂ ನಿಲ್ಲದು.


ಕಾಲವೂ ಕ್ಷಣವೂ ನಿಲ್ಲದೆ ಓಡಿದೆ,

ಭೂಮಿಯೂ ತಿರುಗುತ್ತಲೇ ಇದೆ.

ಬೆಟ್ಟ ಪರ್ವತಗಳು ನಿಂತಲ್ಲೇ ನಿಂತಿವೆ,

ಆದರೂ, ಅವು ನಿರಂತರವಾಗಿ ಕರಗುತ್ತಿವೆ.


ಮನದಲ್ಲಿ ಸ್ಥಿರತೆ ಇಲ್ಲ,

ಯೋಚನೆಗಳಲ್ಲಿ ಏಕಾಗ್ರತೆ ಇಲ್ಲ.

ಅಲೆದಾಡುವ ಮನಕ್ಕೆ ಹಿಡಿತವಿಲ್ಲ,

ಹಿಡಿತವಿಲ್ಲದೆ ಸಾಧನೆ ಶೂನ್ಯ. 


ಹಿಡಿತ ಸಾಧಿಸೆ ಮನವು ಶಾಂತ,

ಶಾಂತ ಮನಸ್ಸೇ ಬೆಳಕಿಂಡಿ.

ಬೆಳಕ ಹಾದಿಯ ಹೆಜ್ಜೆ ಹೆಜ್ಜೆಗೂಡಿ,

ಸಾಧನೆಯ ಹೆದ್ದಾರಿ ತೆರೆವುದು ಹಾಡಿ.  

Friday, May 15, 2026

ದೂರ ಹೋಗದಿರು ಗೆಳೆಯಾ!.

ದೂರ, ಬಹುದೂರ  ಹೋಗದಿರು ಪ್ರಿಯ ಗೆಳೆಯಾ,

ದೂರ ಹೋಗಬೇಕೆಂದು ಎಂದೂ ಯೋಚಿಸದಿರು,

ನಾ ನಿನ್ನ ಬಿಟ್ಟಿರಲಾರೆ, ದಿನವಲ್ಲ ಕ್ಷಣ ಮಾತ್ರವೂ,

ದಿನವಲ್ಲ, ಕ್ಷಣವೂ ದುರಾಗುವುದ ಯೋಚಿಸಲಾರೆ.


ಹೃದಯದ ಚೈತನ್ಯವೇ ನೀನು,

ನೀ ದೂರಾದರೆ ನಾ ಉಳಿಯುವೆನೇ?

ದೇಹದ ಪ್ರಾಣವೇ ನೀನಲ್ಲವೇ!,

ಉಸಿರು ನಿಂತ ಮೇಲೆ ಶವವೇ ತಾನೇ.

 

ಕಡಲು ನೀನು, ನಿನ್ನಲ್ಲಿ ಕರಗುವೆ ನಾನು,

ಕಣ್ಣು ನೀನು, ಕಣ್ಣು ರೆಪ್ಪೆ ನಾನು,

ಒಬ್ಬರನೊಬ್ಬರು ಬಿಟ್ಟಿರದವರು ನಾವು,

ದೇಹ ನಾನು, ಪ್ರಾಣ ನೀನು, ಅಂತರ್ಯಾಮಿ.

 

ದೂರ, ಬಹುದೂರ  ಹೋಗದಿರು ಗೆಳೆಯಾ!.

Sunday, May 10, 2026

ಸಂಜೆಯ ಹೆಜ್ಜೆಗಳು

ನಾನೊಬ್ಬ ಅಜ್ಞಾತ ವ್ಯಕ್ತಿ, ಅನನುಭವಿ,

ನಾನು ದೇವನಲ್ಲ, ದೆವ್ವವಂತೂ ಅಲ್ಲವೇ ಅಲ್ಲ,

ಸ್ವರ್ಗವ ಸೃಷ್ಠಿಸಲಾರದವನು,

ಅದಿರಲಿ, ಕ್ಷಣದಲ್ಲಿ ಸಂತೋಷವನ್ನೂ ಸಹ,

ಆದರೂ, ಭರವಸೆ ಇಡು ನನ್ನಲ್ಲಿ,

ತಪ್ಪು ತಿಳುವಳಿಕೆ, ಜಗಳ, ಕದನ,

ಹಸಿವು, ಎಲ್ಲವೂ ಕಳೆದು ಹೋಗುವುವು,

ಈಗ ಸಂಜೆಯ ಸೂರ್ಯಾಸ್ತದಲ್ಲಿ,

ಕೈಹಿಡಿದು ನಡೆಯೋಣ, ಎಲ್ಲವ ಬದಿಗಿಟ್ಟು,

ನನ್ನೊಂದಿಗೆ ಹೆಜ್ಜೆ ಇಡು, ಜೊತೆಗೆ ನಗುವಿರಲಿ,

ಮನದ ಮೂಲೆಯಲ್ಲಿ ಕಷ್ಟಗಳ ಸಹಿಸುತ್ತಾ,

ಮುಂದೆ ತಲೆಗೂದಲು ಬೆಳ್ಳಗಾದಾಗ,

ನಾವು ವಯಸ್ಸಿನ ಸಂಜೆಯಲ್ಲಿದ್ದಾಗ,

ಮತ್ತೆ ಕೈ, ಕೈ ಹಿಡಿದು ನಡೆಯೋಣ,

ಸಂಜೆಯಾಗಸದ ರವಿಯ ನೋಡುತ್ತಾ,

ಆಗ ಹೇಳು ನಿನ್ನ ಮನದ ಮಾತುಗಳ,

ಎಲ್ಲಿ ಹೋದವೋ ಸುಂದರ ದಿನಗಳು...

ಮತ್ತೆ ಭರವಸೆಗಳ ಮೆಟ್ಟಿಲು ಹತ್ತೋಣ,

ಜೀವನ ಪ್ರೀತಿಯ ಹೆಜ್ಜೆಗಳ ಇಡೋಣ,

ನಗುವ ಮರೆಯದೆ ನಗುತ್ತಲೇ ಇರೋಣ.

Saturday, May 9, 2026

ಹೂವಿನ ಮೋಹ



ಮೋಸವೇಕೆ ಹೋದೆ ಹೃದಯವೇ?,

ಕೈ ಜಾರುತಿದೆ ಎಂದರೂ ಮರೆತೆ ಏಕೆ?,

ಜಾರಿಹೋದ ನೀರಿನಂತೆ ಬೆಟ್ಟದ ಹೂವು,

ಕಾಲ ನಿರಂತರ ಸತ್ಯವೆಂದು ನಿರೂಪಿಸಿತು,

ನೆನಪೊಂದೇ ಉಳಿದಿದೆ, ಮನವ ಕಾಡುತ್ತಾ,

ಹೂವು ನಮ್ಮದಲ್ಲ, ಬರಿ ಭ್ರಮೆಯಷ್ಟೇ!,

ಕಂಪು ಬೀರುವ ಮುನ್ನವೇ ಬೇಗ ಬಾಡಿದೆ.

ಕಣ್ಣಿನ ಸಾಕ್ಷಿ

ಕನ್ನಡಿಯ ಮುಂದೆ ನಾನು,

ನನ್ನ ಕಂಗಳು ದಿಟ್ಟಿಸುತ್ತಿವೆ,

ಒಮ್ಮೆ ಭಯ, ಮತ್ತೊಮ್ಮೆ ನಾಚಿಕೆ,

ಕಾಳಜಿಯೋ?, ಇಲ್ಲ ಶಿಕ್ಷೆಯೋ?

ಏನನ್ನೋ ನಿರೀಕ್ಷಿಸುತ್ತಿದೆ,

ಭಯದಿಂದಲೋ!, ಕಾಳಜಿಯಿಂದಲೋ!,

ಹೃದಯದಲ್ಲೇನೋ ಭಯ, ಕಸಿವಿಸಿ,

ಕಂಗಳು ಸಾಕ್ಷಿಯಾಗುತ್ತಿವೆ,

ಕಣ್ಣೀರು ಧಾರಾಶಾಹಿ,

ಕಂಗಳು ದಿಟ್ಟಿಸುತ್ತಲೇ ಇದೆ,

ಹೃದಯ ತಂಪನ್ನೆರೆಯುತ್ತಿದೆ.

Saturday, May 2, 2026

ಮೌನದ ಅಸ್ತಿತ್ವ

ಮೌನವೇಕೆ?

ಏಕೆ ನಿಂತಿರುವೆ?

ಗತ ಕಾಲದ್ಲಲೇಕೆ ನರಳುವೆ?

ಕಾಲ ಮುಂದೆ ಸಾಗಿದೆ ಕಾಣದೆ.

 

ನೆನಪುಗಳು ಬೇಕು,


ತಂಗಾಳಿಯಂತೆ ಮನಸಿಗೆ.

ಬಿರುಗಾಳಿಯಂತಾಗಬಾರದು,

ಉಳಿಗಾಲವಿಲ್ಲ ನಿನಗೆ.

 

ನಾನು ಚಿರಂಜೀವಿ,

ನನಗೆ ಸಾವಿಲ್ಲ.

ಸತ್ತನೆಂಬ ಭ್ರಮೆ ಬೇಡ,

ನಿನ್ನ ಉಸಿರಲ್ಲಿ ನಾನಿರುವೆ.

 

ಉದಯಿಸುವ ಸೂರ್ಯನ ಬೆಳಕಲ್ಲಿ,

ಬೆಳಗಿನ ಬೀಸುವ ತಂಗಾಳಿಯಲ್ಲಿ.

ಮರಗಿಡಗಳ ಚಿನ್ನದ ಚಿಗುರಲ್ಲಿ,

ಆಕಾಶದಿಂದ ಧರೆಗಿಳಿವ ಮಳೆಯಲ್ಲಿ.

 

ಪಂಚಭೂತಗಳಲ್ಲಿ ಕಾಣದೆ,

ಇದ್ದೂ ಇಲ್ಲದಂತಿರುವೆ ನಾನು.

ಬರಿಗಣ್ಣಿಗೆ ಕಾಣಲಾರೆನು ನಿಜ,

ನಿನ್ನ ಕಣ ಕಣದಲ್ಲಿ ನೆಲೆಸಿರುವೆ ನಾನು.

ಅಳಿಯದ ನೆನಪು

ಮನದ ಮೂಲೆಯಲ್ಲಿ,

ಬೇಡದ ಗಂಟು ಮೂಟೆಯಿದೆ.

ಹತ್ತು ಹಲವಾರು ವರುಷಗಳಲ್ಲಿ,

ಕೂಡಿಟ್ಟ ನೋವಿನ ಕಂತೆಯಾಗಿದೆ.

 

ಯಾರಿಗೂ ತಿಳಿಯದ,

ವಿಷಯಗಳು ಅಲ್ಲಿ ಕೊಳೆಯುತ್ತಿದೆ.

ನನಗೆ ಮತ್ತೆ ನೆನಪಾದ

ಸಂಗತಿಗಳು ಸಾವಿಲ್ಲದೆ ಮಲಗಿದೆ.

 

ಹೊರಗೆ ಮಾಸಿದಂತೆ ಕಾಣುವುದು,

ಒಳಗೆ ಜೀವತೆಗೆಯುವಷ್ಟು ಮಾರಣಾಂತಿಕ.

ಎಲ್ಲವೂ ತಿಳಿದಿದೆ ಸಮಯ ಕಾಯುವುದು,

ಒಳಗೆ ಜ್ವಾಲಾಮುಖಿಯ ಸಾಂಕೇತಿಕ.

 

ಮಾಸಿದ ಕಾಗದದಲ್ಲಿ, 

ಅಕ್ಷರಗಳು ಕಾಣದೇ ಕ್ಷೀಣಿಸಿವೆ.

ಮನದ ಪಟಿಲದಲ್ಲಿ,

ಗಾಯಗಳು ಮಾಸದೇ ಉಳಿದಿವೆ.  

 

ಮೌನದ ಮಡಿಲಲ್ಲಿ ಬೆಳಕು ಕಾದಿದೆ,

ಗಂಟುಗಳ ಹಿಂದೆ ಹೊಸ ದಾರಿ ನಿಂತಿದೆ.

ಮನದ ಗಾಯಗಳಲಿ ಆಶೆಯ ಕಿರಣ,

ಜೀವನದ ಪಟದಲ್ಲಿ ಪುನರುಜ್ಜೀವನ.

 

03.05.2026

Friday, May 1, 2026

ಪ್ರಕೃತಿ ತತ್ವ

 ಪ್ರಕೃತಿಯಲ್ಲಿ ಅಣು ನಾನು,

ನಾನೇ ಪ್ರಕೃತಿ,

ನನಗಳಿವುಂಟು, ಜಂಗಮ ನಾನಲ್ಲ,

ಇದೇ ಪ್ರಕೃತಿ ತತ್ವ.


ಅಣು ಅಣುವಾಗಿ ವಿಭಜಿಸು,

ನಿನ್ನ ಅಂಕೆಗೆ ಗೆಲುವಿದೆ,

ಪರಮಾಣುವಿನಲ್ಲೂ ಅಗಾಧ ಶಕ್ತಿಯಿದೆ,

ನಾನು ಶಕ್ತಿ, ಕೊನೆಯೆಂಬುದಿದೆ.


ಒಗ್ಗಟ್ಟು, ವಿಭಜನೆ,

ಎರಡೂ ಪ್ರಕೃತಿಯ ತತ್ವಗಳೇ,

ಪ್ರಕೃತಿಯ ಕೈಯಲ್ಲಿ ನಮ್ಮ ನಡೆ,

ಸಮತೋಲನವಿದ್ದರೆ ಎಲ್ಲವೂ ಸುಲಲಿತ. 

Saturday, April 25, 2026

ಅನಂತ ಗಾನ

ಆತ್ಮದ ಹೃದಯ 'ಭರವಸೆ',

ಕಾಣದ ರೆಕ್ಕೆಗಳು ಅನಂತದೆಡೆಗೆ,

ಕಣ್ಣು ತೆರೆದೊಡೆ ನಭವೇ 'ಅನಂತ'.

 

'ಭರವಸೆ' ಅನಂತ ಗೀತೆಯಂತೆ,

ಪದಗಳೇ ಇಲ್ಲದ ರಾಗದಂತೆ,

ಅಂತ್ಯವಿಲ್ಲದ ಅನಂತ ಗಾಯನದಂತೆ.

 

'ಭರವಸೆ' ಕಾಣದ ಕಡಲಿನಂತೆ,

ಹರಿಯುವ ನದಿಯಂತೆ,

ಕಾಲನಂತೆ ನಡೆ ಅನಂತಾದೆಡೆಗೆ.

 

'ಭರವಸೆ' ಆತ್ಮದ ಬೆಳಕಿನಂತೆ,

ತಿಮಿರವ ಕಳೆವ ದೀವಿಗೆಯಂತೆ,

ಆತ್ಮೋನ್ನತಿಯ ಅರಸುವ ಜ್ಞಾನಿಯಂತೆ.

Friday, April 24, 2026

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು,

ಗುರುಗ್ರಹದಷ್ಟು ದೊಡ್ಡದು,

ಒಳ-ಹೊರಗೆ ನಾವೆಲ್ಲರೂ ಒಂದೇ!,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ದೊಡ್ಡಣ್ಣನಂತೆ ಹಣದ ಶ್ರೀಮಂತರು,

ಬಿಕ್ಷುಕನಂತೆ ಅಲೆದಾಡುವ ಬಡವರು,

ನಾವೆಲ್ಲರೂ ಒಂದೇ ಆಗಿಬಿಡುವೆವು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಅವನು ಪರಂಗಿ ಕೆಂಪುಬಣ್ಣ,

ಇವನು ಗೋಧಿಬಣ್ಣ,

ಅವನೋ ಅಮಾವಾಸ್ಯೆ ಕಪ್ಪುಬಣ್ಣ,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಕಣ್ಣು ತೆರೆದಿದ್ದೇವಷ್ಟೇ,

ಒಳಗುರುಡು ಎಲ್ಲರಿಗೂ,

ಅವನು ಬೆಳಕು ಹರಿಸಬೇಕು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.

 

ಪ್ರೇರಣೆ:   No Difference" by Shel Silverstein

ಮುರಳಿಯ ಕರೆ

ಮುರಳಿ ಕರೆಯುತಿದೆ,

ಮರಳಿ ಬಾರೆನುತಿದೆ.

ಕರುಣೆಯ ಹೃದಯದಿ ಪ್ರೀತಿಯನಿಟ್ಟು,

ತಾಯ ಪ್ರೀತಿಯ ಹಂಬಲದಿ ಮನವನಿಟ್ಟು.


ಮುರಳಿ ನಗುತಿಹನು,

ಮರಳಿ ಬಾರೆನುತಿಹನು

ಕಳೆದು ಹೋದ ಸವಿನೆನಹುಗಳ ಹಾರಿಬಿಟ್ಟು,

ಸವಿಜೇನ ಸವಿಯುವ ಬಾ ಎಂದು ಬೊಗಸೆಯಲಿಟ್ಟು.

 

ಮುರಳಿ ಮಿಡಿಯುತಿದೆ,

ಮರಳಿ ಬಾರೆನುತಿದೆ.

ಬಾಲ್ಯದ ದಿನಗಳ ಕಾಮನಬಿಲ್ಲ ಮೂಡಿಸಿ,

ಹೃದಯದಿ ಹೂವ ಭರವಸೆಯ ತುಂಬಿಸಿ.

 

ಮುರಳಿ ಹಾಡುತಿದೆ,

ಮರಳಿ ಬಾರೆನುತಿದೆ.

ಸ್ನೇಹದ ತಂತಿಯಲ್ಲಿ ಸೌರಭವ ಸೂಸಿ,

ಜೀವನದಿ ಸಂಗೀತ ಸುಧೆಯ ಪೂಸಿ.

Thursday, April 23, 2026

ಅಸ್ತಿತ್ವದ ಪ್ರಶ್ನೆ

ದೀಪವು ಯಾರದು?,

ಗಾಳಿಯು ಯಾರದು?,

ಎರಡನ್ನೂ ಆಡಿಸುವವರು ಯಾರು?,

ಎಲ್ಲವ ನೋಡುವವರು ನಾವು ಯಾರು?.

 

ದೀಪವು ಹೊತ್ತಿಸ ಬೇಕು!,

ಗಾಳಿಯೂ ಬೇಕು,

ಸ್ಥಿರವೋ?, ಅನಿಶ್ಚಿತವೋ ಬಲ್ಲವರಾರು?,

ಕಣ್ಣಿದ್ದು ಕುರುಡರಾಗಿಹೆವು ನಾವು ಏಕೆ?.

 

ಒಂದು ಕ್ಷಣ ಸಂತೋಷ,

ಮತ್ತೊಂದು ಕ್ಷಣ ದುಗುಡ,

ಏರುಪೇರಿನ ಗಾಯನವ ಹಾಡುವವನಾರು?,

ತರಂಗಗಳ ಆಲಿಸುತಾ ಕಿವುಡರಾದೆವು ನಾವು!.

 

ಎಲ್ಲೊಂದ ಬಂದೆವು ನಾವು?,

ಎಲ್ಲಿಗೆ ಹೊರೆಟೆವು ನಾವು?,

ಏನನ್ನು ಹುಡುಕುತ್ತಿರುವೆವು ನಾವು,

ವ್ಯರ್ಥವೋ?, ಸಾರ್ಥಕತೆಯೋ ಹೇಳುವವರಾರು?.


ಬೆಳಕಿನ ಪಯಣ

ಏಳು ತಮ್ಮ, ಏಳು ಅಣ್ಣ, ನೋಡು ಮೂಡಣದ ಚಿನ್ನದ ಬಣ್ಣ,

ಕತ್ತಲು ಜಾರಿ, ಬೆಳಕ ಪರದೆ ಏರಿ, ಬಾನೆಲ್ಲಾ ರಂಗಿನ ಕೆಂಪು ಬಣ್ಣ.

ಹಳ್ಳಿಗಳ ಚಿಲಿಪಿಲಿ, ತಂಗಾಳಿಯ ಇಂಚರದ ಜೀವಸುಧೆಯ ಕೇಳು,

ಗುಡಿ ಗೋಪುರ, ನೇಸರನ ಮುಂಜಾನೆಯ ಸುಪ್ರಭಾತ ಹಾಡು ಹೇಳು.

 

ನಿನ್ನೆಯ ನೋವು ಜಾರಿ, ಇಂದಿನ ನವ ಭರವಸೆಗಳು ಮೂಡಿದೆ,

ಕಣ್ಣೀರ ಒರೆಸು, ಸಣ್ಣ ಹೆಜ್ಜೆಗಳನಿಡು ನವೋದಯವ ಸ್ವಾಗತಿಸು.

ಹುಡುಗರೇ ಏಳಿ, ಹುಡುಗಿಯರೇ ಏಳಿ, ಬಾಳ ಕನಸ ರಥವನೇರುವ,

ಇಂದಿನ ಜೀವ ಬೆಳಕ ಹೀರಿ, ಸೋಜಿಗದ ಭವಿತವ್ಯದ ಬದುಕ ಕಟ್ಟುವ.

 

ಭಯದ ಮುಂದೆ ಗೆಲುವಿದೆ, ಕಡಿದ ಮರದ ತುದಿಯಲ್ಲಿ ಚಿಗುರಿದೆ,

ನಭವೇ ನಮಗೆ ಮಿತಿ, ಬದುಕ ಸಂಕೋಲೆಗಳ ಕಳಚಿ ನಭಕ್ಕೆ ಹಾರುವ.

ಚಿಕ್ಕ ಹೆಜ್ಜೆಗಳನಿಡುತ ನಾಳೆಯ  ಭರವಸೆಗಳ ಕನಸ ಕಟ್ಟುವ,

ಅನುಭವಿಸಿ, ಸಂಭ್ರಮಿಸಿ, ನೋವು ನಲಿವುಗಳ ಬದುಕಲಿ ಗೆಲುವಾಗುವ. 

 


Saturday, April 18, 2026

ನನ್ನ ಪಯಣ

ನಾನು ಉಸಿರಾಡುತ್ತಿದ್ದೇನೆ,

ನನ್ನ ಜೀವನ ಪ್ರೀತಿಯಿಂದ.

ನಾನು ಮೌನವಾಗಿದ್ದೇನೆ,

ನನ್ನ ಸಮಯಕ್ಕೆ ಕಾಯುತ್ತಾ.

ನಾನು ಸಂತೋಷವಾಗಿದ್ದೇನೆ,

ನನ್ನತನವ ಉಳಿಸಿಕೊಳ್ಳುತ್ತಾ.

ನಾನು ಹೋರಾಡುತ್ತಿದ್ದೇನೆ,

ನನ್ನ ಜೀವನದ ಅರ್ಥ ಹುಡುಕುತ್ತಾ.

ನಾನು ಪ್ರಾರ್ಥಿಸುತ್ತಿದ್ದೇನೆ,

ನನ್ನ ಬದುಕ ಹಸನಾಗಿಸಲು.

ನಾನು ಹಾರಾಡುತ್ತಿದ್ದೇನೆ,

ನನ್ನ ದಿನವ ಸಂಭ್ರಮಿಸಿ ಹಾಡಲು.

ನಾನು ಕಣ್ಣೀರಿಡುತ್ತಿದ್ದೇನೆ,

ನನ್ನ ದೇವನ ಋಣವ ತೀರಿಸಲು.

Friday, April 17, 2026

ಮನೋರಥ- ಪುಸ್ತಕ

ಮನೋರಥದ ಕಡಲು ಪುಸ್ತಕ,

ಶೂನ್ಯದಿಂದ ಅನಂತದೆಡೆಗೆ ಪಯಣ.

ಉಲ್ಲಾಸದ ಲಹರಿ ಕವನ,

ಕಲ್ಪನೆಯ ಸಾಗರದಿ ತೇಲಿಸುವ ಪ್ರೇರಣ,

ಬಡವ,ಬಲ್ಲಿದನಿಗೂ ಸಾಕಾರ,

ಶುಲ್ಕ,ಕರವಿಲ್ಲದಿದಕೆ ಸರಳ,

ಆತ್ಮೋನ್ನತಿಗೆ ಸುಲಭ ಸುಲಲಿತ ಹೂರಣ.

Saturday, April 11, 2026

ಅಂತರಂಗದ ಹೋರಾಟ

ಏಕೆ ಹೀಗೆ?,ಏಕೆ ಹೀಗೆ?,

ನಾನು ಬದಲಾಗಲಿಲ್ಲ.

ನನ್ನಿಂದ ಹಲವರಿಗೆ ನೋವು, ಕಷ್ಟ,

ನನ್ನಿಂದ ಅವರಿಗೆ ಅವಮಾನ.

 

ಆದರೆ ನಾನೋ!,.....


ಏನೂ ಆಗಿಲ್ಲವೆಂದು ನಿರ್ಲಿಪ್ತ,

ಅವರ ಬಗ್ಗೆ ಕಾಳಜಿ ನನಗಿಲ್ಲವೇ?,

ಅವರ ಪ್ರೀತಿ,ವಿಶ್ವಾಸ ನನಗೇನೆಂದೇ?,

ಅವರಿಗೆ ನಾ ಮಾಡುತ್ತಿರುವ ಅವಮಾನವೇ?

 

ಮನದೊಳು ಎಲ್ಲಾ ದುಗುಡಗಳು ಅಡಗಿವೆ,

ಭಯ, ಆತಂಕ, ಕತ್ತಲೆ, ಇನ್ನೇನೋ....

ಪ್ರತಿದಿನ ಹೋರಾಟ ಅವುಗಳ ಮೇಲೆ,

ಒಂದು ದಿನ ಗೆಲ್ಲುತ್ತೇನೆ, ಮತ್ತೊಮ್ಮೆ ಸೋಲುತ್ತೇನೆ.

 

ಯಾರ ಕೈ ಮೇಲಾಗುವುದೋ ನಾ ತಿಳಿಯೆ,

ಒಂದಂತೂ ಸತ್ಯ, ನಾನು ಬದಲಾಗಿಲ್ಲ.

ನನ್ನ ಹುಡುಕಾಟದಲ್ಲಿ ದಾರಿ ಕಾಣದಾಗಿದೆ,

ನನ್ನಿಂದಲೇ ನನ್ನವರಿಗೆ ಸುಖವಿಲ್ಲ, ನೆಮ್ಮದಿಯಿಲ್ಲ.

 

ಮುಂದೆ ಏನು? ನನಗೆ ತಿಳಿದಿಲ್ಲ.

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...