ಬದಲಾವಣೆಗೆ ಪಕ್ಕಾಗು


ಮನದ ನೋವೇ ಗರಿಗೆದರಬೇಡ
ಮನದ ನೆಮ್ಮದಿಯ ಹಾಳುಗೆಡವಬೇಡ
ಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡ
ಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||

ಮನದಲ್ಲಿ ನೋವಿದೆ
ನೋವಿಗೆ ಪರಿಹಾರವಿದೆ
ತುಸು ಕಾಯಬೇಕಿದೆ
ತಾಳ್ಮೆಯ ಅಗತ್ಯವಿದೆ||

ಮನವೇ ಬಲವಾಗು
ನೋವುಗಳ ಪ್ರೀತಿಸಿ ತಲೆಬಾಗು
ನವೋದಯದ ಸ್ಪರ್ಧೆಗೆ ಛಲವಾಗು
ಬದಲಾವಣೆಗೆ ಪಕ್ಕಾಗು||

ಕಾರ್ಖಾನೆಯ ಕೆಲಸ


ದಿನವೂ ಹನ್ನೆರಡು ನಿಮಿಷಗಳ ನಡುಗೆ
ಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆ
ಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳು
ಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\

ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತ
ಸಮಸ್ಯೆಗಳ ಗಂಟು ಬಿಡಿಸುವ ಗಣಿತ
ಲೆಕ್ಕಾಚಾರ,ಪರಿಹಾರ ತಲೆಕೆಳಗಾಗುವುದು ಗಣಕ
ಬಿಡದೇ ತ್ರಿವಿಕ್ರಮನಂತೆ ಪ್ರಯತ್ನಿಸುವುದೇ ನಮ್ಮ ಕಾಯಕ\\

ಸಮಯ ಹೋಗುವುದೇ ತಿಳಿಯುವುದಿಲ್ಲ
ನಗುನಗುತ್ತಾ ಎಲ್ಲಕ್ಕೂ ಸಿದ್ಧರಿದ್ದೇವೆ ಸೈನಿಕರಂತೆ
ಎಲ್ಲರ ಸಮಸ್ಯೆಗಳಿಗೂ ಹುಡುಕುವೆವು ಪರಿಹಾರ
ನಮ್ಮ ಸಮಸ್ಯೆಗಳು ನೂರಾರು ಯಾರೂ ನೀಡರು ಸಹಕಾರ\\

ಜಾಡುಹೊಡಿ,ಎಣ್ಣೆಹಾಕು,ಯಂತ್ರಗಳ ಸಪ್ಪಳ
ಕತ್ತೆಯ ದುಡಿತ, ಯಂತ್ರಗಳೇ ನಮ್ಮ ಜೀವಾಳ
ಓಡಬೇಕು,ಓಡುತ್ತಲ್ಲೇ ಇರಬೇಕು ನಿಲ್ಲದ ಕುದುರೆ
ನಿಂತರೆ ಎಲ್ಲರ ಬೈಗಳೂ,ಕೈಗಳೂ ನಮ್ಮ ಕಡೆಗೆ\\

ಉತ್ಪಾದನೆಯೇ ಪ್ರಗತಿ,ಸಮಯದ ಕೊರತೆಯಿದೆ
ಹಬ್ಬ-ಹರಿದಿನಗಳು ನಡೆಯುವುದು ನಾವಿಲ್ಲದೆ
’ಜನ ಮೊದಲು ಹೃದಯ ಮುಟ್ಟು’ಘೋಷಣೆ
ಬೂಟಾಟಿಕೆಯ ಬೆಣ್ಣೆಮಾತುಗಳ ಶೋಷಣೆ\\

ಇಂದು ನನ್ನ ಜನುಮ ದಿನ


ಇಂದು ನನ್ನ ಜನುಮ ದಿನ
ತಾಯ ಮಡಿಲ ತುಂಬಿದ ದಿನ

ಡಿಸೆಂಬರ್ ಚಳಿಯು ನಡುಗಿಸುವ ದಿನ;
ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;
ಕೋಗಿಲೆಗಳು ಹಾಡಲಿಲ್ಲ;
ನವಿಲುಗಳು ಸಂತೋಷದಿ ಕುಣಿಯಲಿಲ್ಲ;
ತಂಗಾಳಿ ಬೀಸಲಿಲ್ಲ;
ನದಿಗಳು ಉಕ್ಕಿ ಹರಿಯಲಿಲ್ಲ;
ಸಧ್ಯ ಅದೃಷ್ಟವೆಂಬಂತೆ ಭೂಮಿ ನಡುಗಲಿಲ್ಲ;

ಸನ್ಯಾಸಿ ನಾನಲ್ಲ;
ರಾಜಕುಮಾರ ನಾನಾಗಿರಲಿಲ್ಲ;
ದೇವಧೂತನಂತೂ ಅಲ್ಲವೇ ಅಲ್ಲ;
ಸಮಾಜ ಸುಧಾರಕನಂತೂ ಅಲ್ಲ;
ಸಾಮಾನ್ಯರಲ್ಲಿ ಅತಿಸಾಮಾನ್ಯ ನಾನು;
ಅಮ್ಮ ನೋವಿನಿಂದ ನರಳುತ್ತಿದ್ದಳು
ಏನೂ ಅರಿಯದೆ ಭೂಮಿಗೆ ಬಂದದ್ದಕ್ಕೆ ನಾನು ಅಳುತ್ತಿದ್ದೆ;

ಅಳುದಾದರೆ ಅತ್ತು ಬಿಡು


ಅಳುದಾದರೆ ಅತ್ತು ಬಿಡು
ಮನದಲ್ಲಿ ನೋವುಗಳ ಬಚ್ಚಿಡಬೇಡ

ಮನಸ್ಸು ಆಕಾಶದಂತೆ
ಕರಿಮೋಡ ಭಾರವಾದ ನೋವುಗಳಂತೆ
ಆಕಾಶವ ಕರಿಮೋಡ ಬಳಸಿದರೆ
ಆಕಾಶವೂ ಅಳುವುದು ಮಳೆಯ ಸುರಿಸಿ

ಮನಸ್ಸು ಆಕಾಶದಂತೆ
ತಿಳಿಯಾಗಿಡು ಮನದ ಭಾರವ ಹೊರಚೆಲ್ಲಿ
ಜಾಗಕೊಡು ಮುಂದೆ ಬರುವ ನೋವುಗಳಿಗೆ
ಮನವ ತಿಳಿಯಾಗಿಟ್ಟು ಸಹಕರಿಸಿ

ಮನಸ್ಸು ಆಕಾಶದಂತೆ
ಆಕಾಶಕ್ಕೆ ಹಾರಬೇಕು ಮನದ ರೆಕ್ಕೆ ಬಿಚ್ಚಿ
ಮನವು ತೇಲಬೇಕು ನೋವುಗಳ ಬದಿಗಿಟ್ಟು
ಮನವು ಭಾರವಾದರೆ ಹಾರುವುದಾದರೂ ಹೇಗೆ? ಯೋಚಿಸು

ಅಳುವುದಾದರೆ ಅತ್ತು ಬಿಡು
ಮಳೆಯೊಡನೆ ಯಾರಿಗೂ ಅನುಮಾನ ಬರುವುದಿಲ್ಲ
ನಿನ್ನ ನೋವು,ಮೋಡ ಎರಡು ಒಂದಾಗಿ ಕಡಲ ಸೇರಲಿ
ಮತ್ತೆ ಮೋಡ,ನೋವು ಕಟ್ಟಬೇಕಲ್ಲ

ಶುಭಾಷಯ


ಗೆಳೆಯ ನಿನಗೆ ಶುಭಾಷಯ
ಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?
ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?
ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?

ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,
ಆದರೆ ನಿನ್ನ ನೆನಪು ಹೊಸ ಹುಮ್ಮಸ್ಸು ನೀಡುವುದು ಗೆಳೆಯ.

ಮರೆವುದು ಲೋಕ ಸಹಜ ನಿಜ,
ಆದರೆ ನಿನಗಾಗಿ ನನ್ನ ಮನಸು ಮಿಡಿಯುತ್ತದೆ ಗೆಳೆಯ.

ಆಸ್ತಿ,ಅಂತಸ್ತು,ಪ್ರತಿಷ್ಟೆ,ಅಧಿಕಾರ ಎಲ್ಲವೂ ಇದೆ ನಿಜ,
ಆದರೆ ಸ್ನೇಹಕ್ಕೆ ಇವಾವುದೂ ಬೇಡ ಗೆಳೆಯ.

ನಮ್ಮ ಚಿನ್ನದಂತಹ ದಿನಗಳು ಕಳೆದುಹೋಗಿವೆ ನಿಜ,
ಆದರೆ ನಮ್ಮ ನೆನಪುಗಳು ಇನ್ನೂ ಸತ್ತಿಲ್ಲ ಗೆಳೆಯ.

ಗೆಳೆತನ,ಸ್ನೇಹದ ಬಗ್ಗೆ ಹೇಳಿಕೊಳ್ಳುತ್ತೇವೆ ನಿಜ,
ಆದರೆ ಅದೇ ಗೆಳೆಯತನವನ್ನು ನಿಭಾಯಿಸಲು ಕಷ್ಟ ಗೆಳೆಯ.

ನಮ್ಮ ಗೆಳೆತನ ಅಮರವಾಗಲಿ
ನಿನಗೆ ಶುಭವಾಗಲಿ
ಎಂದಷ್ಟೇ ಆಶಿಸುತ್ತೇನೆ ಗೆಳೆಯ.

ಚಂದ್ರನೇ ಶುಭರಾತ್ರಿ


ಪ್ರಿಯನೇ, ಹೇಳು ನನಗೆ-

ಏಕೆ ನೀನು ಬಂದೆ
ನನ್ನೆಲ್ಲಾ ಹೆಬ್ಬಯಕೆಗಳೆನೆಲ್ಲಾ
ಅನಾಥವಾಗಿಸಿದ ಮೇಲೆ?

ನೀನು ಏಕೆ ಮುಖ ತೋರಿಸುವೆ
ನನ್ನೆಲ್ಲಾ ನಂಬಿಕೆಗಳು
ಕೊಚ್ಚಿಹೋದ ಮೇಲೆ?

ಏಕೆ ಜೇನಿನಂತ ಚಂದ್ರನೇ
ನೀನು ನನ್ನನ್ನು ಭೇಟಿಯಾಗುವೆ
ನನ್ನ ಅಂತ್ಯಸಂಸ್ಕಾರದ ಹಾಸಿಗೆಯ ಮೇಲೆ?

ಮತ್ತು ಹೇಳು-
ಏಕೆ ಸತ್ತವರು
ಸತ್ತೇ ಇರುತ್ತಾರೆ?

ಪ್ರೇರಣೆ: "Goodnight Moon" by - Ivan Granger
ಚಿತ್ರ ಕೃಪೆ: Google

ಬೀಗವಿಲ್ಲದ ಬಾಗಿಲು


ಈ ಮನೆಗೆ ಬಂದು ಬಹುದಿನಗಳು ಕಳೆದವು
ಬಂದಾಗಿನಿಂದ ಇಲ್ಲದ ಪ್ರಶ್ನೆ ಈಗೇಕೋ ಮನದಲ್ಲಿ ಮೊಡಿದೆ
ಈ ಮನೆಗೆ ಬಾಗಿಲಿದೆ ಆದರೆ ಬೀಗವಿಲ್ಲ
ಯಾವಾಗ ಬಂದೆನೋ ತಿಳಿದಿಲ್ಲ
ಏಕಾಗಿ ಬಂದೆನೋ ತಿಳಿದಿಲ್ಲ
ಬಂದು ಹೋಗುವ ಸಮಯವೂ ತಿಳಿದಿಲ್ಲ
ಎಲ್ಲವೂ ಆಶ್ಚರ್ಯ ತಂದಿದೆ
ಬಂದ ಉದ್ದೇಶ ಮರೆಯಾಗಿದೆ
ಇಲ್ಲ ಸಲ್ಲದ ನೆವಮಾತ್ರ ಮುಂದಿದೆ
ರಾತ್ರಿ-ಹಗಲು ಕಳೆದಂತೆ
ದಿನಗಳು ಕಳೆದುಹೋಗುತ್ತಿದೆ
ಬಂದ ಕೆಲಸ ಮಾತ್ರ ಮುಗಿದಿಲ್ಲ
ಯಾರು ಯಾವಾಗ ಕರೆವರೋ ತಿಳಿದಿಲ್ಲ
ಬೀಗವಿಲ್ಲದ ಬಾಗಿಲಿನ ಮನೆಯಲ್ಲಿ
ಏಕಾಂಗಿಯಾಗಿದ್ದೇನೆ;
ಯಾರಾದರೂ ಬಾಗಿಲ ತಟ್ಟುವರೆಂದು ಕಾಯುತ್ತಿದ್ದೇನೆ
ಯಾರಾದರೂ ಬಾಗಿಲ ತಟ್ಟಲಿ ಎಂದು ಪ್ರಾರ್ಥಿಸುತ್ತಿದ್ದೇನೆ
ನನ್ನ ಸರತಿಗಾಗಿ ಕಾಯುತ್ತಿದ್ದೇನೆ
ಬೀಗವಿಲ್ಲದ ಬಾಗಿಲ ಮನೆಯಲ್ಲಿ.

ಕಲ್ಲಾಗುವನಾ ಗೌತಮ?


ತ್ರೇತಾಯುಗದ ಪೂರ್ವದಲ್ಲಿ
ಗೌತಮ ಋಷಿ ಸಾಧಕನೆನಿಸಿದ್ದ;
ಸತಿ ಶಿರೋಮಣಿ ಅಹಲ್ಯೆಯ
ಬೇಕು-ಬೇಡಗಳ ಕಡೆಗಣಿಸಿದ್ದ;
ಅಹಲ್ಯೆ ಸುಂದರಿ;
ಮನದ ತಾರುಣ್ಯದ ಬಯಕೆಗಳೆಲ್ಲಾ
ಋಷಿಯ ಹೋಮ-ಹವನಗಳ ಹೊಗೆಯಲ್ಲಿ ಕಾಣೆಯಾಗಿತ್ತು;
ದೇಹದೊಳ ಬಯಕೆಯ ಕೆಂಡದ
ಬೇಗುದಿಗೆ ಬೇಯುತ್ತಿದ್ದಳವಳು;
ಗೌತಮನಲ್ಲಿ ಹೇಳಲಾದಳು;
ಹೆದರಿದಳು ಅವನ ಶಾಪಕ್ಕೆ;
ಅದಕ್ಕೆ ಬಚ್ಚಿಟ್ಟಳು ತನ್ನ ಮನದ ತಾಪ;
ಸೌಂದರ್ಯಕ್ಕೆ ಮಾರುಹೋಗಿದ್ದ ಇಂದ್ರ;
ಹೊಂಚುಹಾಕಿ ಕಾಯುತ್ತಿದ್ದ ಮಂದ್ರ;
ಅವಳ ತಾಪವು ಇವನನ್ನು ತಟ್ಟಿತೇ?
ಅವಳು ಬೇಯುತ್ತಿದ್ದಳು;
ಇವನು ಕಾಯುತ್ತಿದ್ದ;
ಕಾಲ ಗಹಗಹಿಸಿ ನಗುತ್ತಿತ್ತು;
ಆ ಕಾಲ ಬಂದೇ ಬಂತು;
ಗೌತಮನನ್ನು ಇಂದ್ರ ಯಾಮಾರಿಸಿದ;
ಬೆಳಗಿನ ಯಾಮದ ನಿಯತಿಗೆ ಒಳಪಡಿಸಿದ್ದ;
ಗೌತಮ ಸಾಧಕನಂತೆ ಹೆಂಡತಿಯ ಮರೆತ
ಸಾಧನೆಗೆ ಹೊರಟುನಿಂತ;
ಯಾಮಾರಿದ ಗೌತಮ;
ಯಾಮಾರಿಸಿದ್ದ ಇಂದ್ರ;
ವಂಚನೆಗೆ ಸಿಲುಕಿದಳು ಅಹಲ್ಯೆ;
ಎಲ್ಲವೂ ಮುಗಿದಿತ್ತು;
ಇಂದ್ರನ ಆಸೆ;
ಅಹಲ್ಯೆಯ ತಾಪ;
ಇಂದ್ರ ಗೆದ್ದ;
ಅಹಲ್ಯೆ ಸೋತಳು;
ಎಚ್ಚರಗೊಂಡ ಗೌತಮ;
ಎಲ್ಲೋ ತಪ್ಪಾಗಿದೆ;
ಯಾರೋ ಯಾಮಾರಿಸಿದರು;
ಅರಿವಾಯಿತು ಗೌತಮನಿಗೆ;
ಒಳಗಣ್ಣು ತೆರೆಯಿತು;
ನಾಚಿಕೆಯಾಯಿತು ತಪ್ಪಿನ ಅರಿವಾಗಿ;
ಮನವನ್ನು ಕಲ್ಲಾಗಿಸಿಕೊಂಡ
ತನ್ನ ತಪ್ಪನ್ನು ಲೋಕಕ್ಕೆ ಮರೆಯಾಗಿಸಿದ
ಕೊಟ್ಟ ಶಾಪ ಅಹಲ್ಯೆಗೆ ಕಲ್ಲಾಗೆಂದು;
ಎಲ್ಲಿ ಹೇಳಿಬಿಟ್ಟಾಳೋ ನಿಜವನೆಂದು;
ಜವಾಬ್ದಾರಿಯಿಂದ ವರ್ತಿಸಿದ ಗಂಡಂದಿರು
ಇನ್ನು ಏನು ತಾನೇ ಮಾಡಿಯಾರು?
ಗೌತಮ ಲೋಕಕ್ಕೆ ಉದಾಹರಣೆಯಾದ;
ಶತ-ಶತಮಾನಗಳು ಕಳೆದರೂ;
ಯುಗ-ಯುಗಗಳು ಕಳೆದರೂ;
ಇಂದೂ ಇದ್ದಾರೆ ತನ್ನವರ ಆಸೆ-ಆಕಾಂಕ್ಷೆಗಳ ತಿಳಿಯದ ಗೌತಮರು;
ಬೇಕು ಎಂದು ಹೇಳದೆ ಒಳಒಳಗೇ ಬೇಯುವ ಅಹಲ್ಯೆಯರು;
ಹೊಂಚಿಹಾಕಿ ಸಮಯಸಾಧಿಸುವ ಇಂದ್ರರು;
ಅಸಹಾಯರಾಗಿ ಶಾಪ ಕೊಡಲಾರದ ಗೌತಮರಿದ್ದಾರೆ;
ಕಲ್ಲಾಗುವ ಸರದಿ ಇಂದು ಗೌತಮರದ್ದು!
ಕಲ್ಲಾಗುವನಾ ಗೌತಮ?

ದೇವತೆ


ನಾನು ಹುಡುಕುತ್ತಿದ್ದೆ, ಪ್ರೀತಿ ಮತ್ತು ದೊರಕಿತು ನನ್ನ ಆತ್ಮ;
ನಿನ್ನಿಂದಲೇ, ನನ್ನ ಪ್ರೀತಿಯೇ, ನಾನು ಪರಿಪೂರ್ಣ;
ಹಾಗು ದೈವಿಕ ಪ್ರೀತಿ, ನನ್ನ ಹಾಗು ನಿನ್ನನ್ನು ಕಟ್ಟಿಹಾಕಿದೆ
ಹಾಗು ನನ್ನಲ್ಲಿ ಸದಾ ನೆನಪಿಸುತ್ತದೆ ದೈವಿಕತೆಯನ್ನು.

ನಿನ್ನ ಹೃದಯದಲ್ಲಿ ನಾನು ಕಂಡೆ,
ಪ್ರೀತಿ ಅದು ನನ್ನಲ್ಲಿರಲಿಲ್ಲ
ನಿನ್ನ ಸ್ಪರ್ಶ ಹಾಗು ನಿನ್ನ ಪರಿಮಳ
ದೇವಲೋಕದ ಬಾಗಿಲುಗಳನ್ನು ತೆರೆಸಿದೆ.

ನಿನ್ನಿಂದ ನನಗೆ ಅರಿವುಂಟಾಯಿತು
ನನ್ನಲ್ಲಿ ಏನಿಲ್ಲವೆಂದು
ನಾನು ಏನನ್ನು ಹುಡುಕಬೇಕೆಂದು

ನೀನು ಯಾವಾಗ ನನ್ನನ್ನು ನಿನ್ನ ತೋಳುಗಳಲ್ಲಿ ಅಪ್ಪುವೆಯೋ
ಮತ್ತು ಪ್ರೀತಿಯ ಅಮೃತವನ್ನು ಉಣಬಡಿಸುವೆಯೋ
ಆಗ ಅನಿಸುತ್ತದೆ ಸ್ವರ್ಗದಿಂದಲೇ ಅಮೃತವು ಮಳೆಗೆರೆಯುತ್ತಿದೆಯೆಂದು

ನನ್ನ ಆತ್ಮದ ವಾಸನೆ ಸತ್ವವನ್ನು ಕಳೆದುಕೊಂಡಿದೆ
ನಿನ್ನ ಕೀರ್ತಿ ಹಾಗು ಹೂವಿನಂತಹ ಮೃದುವಾದ ಹೃದಯಕಮಲಗಳ ಮುಂದೆ

ನನ್ನನ್ನು ಆಶ್ಚರ್ಯಚಕಿತನನ್ನಾಗಿಸುತ್ತದೆ
ನಿನ್ನ ಪ್ರೀತಿ ನನ್ನನ್ನು ಮುಕ್ತನನ್ನಾಗಿಸಿದೆ
ಹಾಗು ನನ್ನನ್ನು ಕಟ್ಟಿಹಾಕಿಲ್ಲ
ಪ್ರೀತಿಯ ದೇವತೆಯೇ
ನೀನು ಏನು?
ನಿನ್ನ ನಡೆ ನನ್ನ ಮನದ ಪರಿಧಿಯನ್ನು ದಾಟಿದೆ.

ಪ್ರೇರಣೆ:MYSTIC LADY.... by Siddharth Anand

ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ.


ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ..
ನಾನು ಹೊರಳುತ್ತಿದ್ದೇನೆ ಪ್ರೀತಿಸುವ ಕಡೆಯಿಂದ ಪ್ರೀತಿಸಲಾರದ ಕಡೆಗೆ
ಕಾಯುವ ಕಡೆಯಿಂದ ಕಾಯಲಾರದ ಕಡೆಗೆ
ನನ್ನ ಹೃದಯ ಹೊರಳುತ್ತಿದೆ ಪ್ರೇಮದ ಕಡಲಿಂದ ಬೆಂಕಿಯ ಕೆನ್ನಾಲೆಗೆಯ ಕಡೆಗೆ.

ನಾನು ನಿನ್ನನ್ನು ಪ್ರೀತಿಸುತ್ತೇನೆ ಏಕೆಂದರೆ ನಿನ್ನನ್ನೇ ನಾನು ಪ್ರೀತಿಸುತ್ತೇನೆ;
ನಾನು ನಿನ್ನನ್ನು ದ್ವೇಷಿಸುತ್ತೇನೆ, ಹಾಗು ದ್ವೇಷಿಸುತ್ತಲ್ಲೇ ಇರುತ್ತೇನೆ,
ನಿನ್ನ ಪ್ರೀತಿಗೆ ಬಾಗುತ್ತೇನೆ, ಮತ್ತು ನನ್ನ ಬದಲಾಗುವ ಪ್ರೀತಿಯನ್ನು ಗಮನಿಸುತ್ತೇನೆ
ನಾನು ನಿನ್ನನು ನೋಡಲಾಗುವುದಿಲ್ಲ ಆದರೂ ನಿನ್ನನು ಪ್ರೀತಿಸುತ್ತೇನೆ ಕಣ್ಣುಮುಚ್ಚಿ.

ಬಹುಶ ಜನವರಿಯ ಬೆಳಕು ನನ್ನ ಹೃದಯವನ್ನು
ನುಂಗುವುದೇ ತನ್ನ ಕ್ರೂರ
ಬೆಳಕಿನಿಂದ,ನನ್ನ ಮನದ ನಿಜವಾದ ಶಾಂತಿಯನ್ನು ನಾಶಮಾಡಿ.

ಪ್ರೀತಿ,ಕದನ ಹಾಗು ದ್ವೇಷದ ಹೋರಾಟದ ಕಥೆಯಲ್ಲಿ ನಾನೇ ಸಾಯುವವನು,
ನಾನು ಒಬ್ಬನೇ ಒಬ್ಬ , ಮತ್ತು ಪ್ರೀತಿಗಾಗಿ ಸಾಯುವವನು ಏಕೆಂದರೆ ನಾನು ನಿನ್ನನು ಪ್ರೀತಿಸುತ್ತೇನೆ,
ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ.

ಪ್ರೇರಣೆ:"I Do Not Love You Except Because I Love You" by Pablo Neruda

ಶಿಶುಗೀತೆ- ಮಳೆಯೇ! ಮಳೆಯೇ! ಹೋಗಬೇಡ




ಮಳೆಯೇ! ಮಳೆಯೇ! ಹೋಗಬೇಡ
ನಾಳೆ ಬರುವೆ ಎನಬೇಡ
ನಿನ್ನಿಂದಲೇ ಮರಗಿಡಗಳು;
ನಿನ್ನಿಂದಲೇ ಪ್ರಾಣಿ-ಪಕ್ಷಿಗಳು;
ನಿನ್ನಿಂದಲೇ ನಾವುಗಳು;
ನಿನ್ನಿಂದಲೇ ನಾಳೆಗಳು;
ಮಳೆಯಲ್ಲಿ ಆಡುವುದು ನನಗಾಸೆ
ತಂಪನ್ನು ಸುರಿಸುವೆ
ಎಲ್ಲಿಂದಲೋ ನೀರುತರುವೆ
ಎಲ್ಲಿಗೋ ಹೊತ್ತೊಯ್ಯುವೆ
ಯಾರ ಕೆಲಸ ನೀಮಾಡುತಿರುವೆ?
ನೀ ಎಲ್ಲೂ ಹೋಗಬೇಡ
ನಾಳೆ ಬರುವೆ ಎನಬೇಡ.

ನಕ್ಕು ಬಿಡು


ನಗುತ್ತೇನೆ ಬಹಳಷ್ಟು ಬಾರಿ,
ನಗುವುದಕ್ಕೆ ಕಾರಣಬೇಕೆ?
ಹೌದು! ಕಾರಣಬೇಕು ನಗುವುದಕ್ಕೆ!
ಕಾರಣ ಸಣ್ಣದಿದ್ದರೂ ಸರಿ,
ಸ್ವಾಭಾವಿಕವಾದರೂ ಸರಿ,
ಅಸ್ವಾಭಾವಿಕವಾದರೂ ಸರಿ,
ಬೇರೆಯವರ ತಪ್ಪು ನಮಗೆ ನಗು ಬರಿಸುವುದು,
ಇಂತಹ ನಗು ಬೇರೆಯವರ ಅಪಹಾಸ್ಯ ಎಂಬ ವಿವೇಕ ಇಲ್ಲವಾಗಿದೆ.


ನಗಬೇಕಾದಾಗ ನಕ್ಕುಬಿಡು
ನಮ್ಮಮೊರ್ಖತನಕ್ಕೆ,
ನಮ್ಮ ಮೌಡ್ಯಕ್ಕೆ,
ನಮ್ಮ ದುರಾಸೆಗೆ,
ನಾಳೆ ನಮಗಾಗಿ ಇರುವುದೋ? ಇಲ್ಲವೋ?
ನಗುವುದಕ್ಕೆ ನಮಗೆಲ್ಲಾ ಬಿಡುವು ಬೇಕಿದೆ
ನಮ್ಮ ಆರೋಗ್ಯಕ್ಕೆ ನಗುವು ಬೇಕಿದೆ
"ನಕ್ಕರೆ ಅದೇ ಸ್ವರ್ಗ" ಎಂಬ ಮಾತು ಮರೆತಿದೆ.

ನಗುವುದಕ್ಕೆ ಕಾರಣ



ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು
ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು.
ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು,
ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು.

ನನ್ನ ಕಂಗಳಿಗೆ ಕಣ್ಣೀರು ಸುರಿಸುವ ಹವ್ಯಾಸ,
ಆದರೂ ಹಲವು ಸಂದರ್ಭಗಳಲ್ಲಿ ಅದು ಕೇಳಿಸಿಕೊಳ್ಳುತ್ತದೆ,
ಹೃದಯದಿಂದ ಒಂದು ಸುಮಧುರ ನಗುವಿಗೆ ಕಣ್ಣಲ್ಲಿ ಸುರಿವುದು ಕಣ್ಣೀರು.
ಕಣ್ಣೀರು ಹರಿದರೂ ಯಾರೂ ಇಲ್ಲ ನನ್ನ ಸ್ವಾಂತನ ಮಾಡಲು,
ಏಕೆಂದರೆ ತುಟಿಯಲ್ಲಿನ ಒಂದು ನಗುವು ಕೊಡುವುದು ಉಲ್ಲಾಸ ಪ್ರಿಯಾ.

ಪ್ರೇರಣೆ: " A Reason to Smile" by Rekha Nair

ಆದರ್ಶದ ಸಂಕೋಲೆ



ಅಳುತ್ತಲ್ಲೇ ನಿಂತಿದ್ದೆ,
ಅವನು ಹೋಗುವುದ ನೋಡುತ್ತಾ.
ಕಣ್ಣಲ್ಲಿ ನೀರು;
ಹೃದಯದಲ್ಲಿ ರಕ್ತ ಕಣ್ಣೀರು;
ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾ
ಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;
ಅರಮನೆಯ ಮಹಾಜನತೆ ಅವರ ಹಿಂದೆ,
ದುಃಖದ ಕಡಲು ಹರಿವಂತೆ;
ನನ್ನ ಮನದಲ್ಲೂ ಅವನಿಗಾಗಿ ಹರಿಯುತ್ತಿತ್ತು
ಕಣ್ಣೀರು ಕಡಲಾಗಿ ಯಾರಿಗೂ ಕಾಣದೇ;
ಬೇಡ,ಬೇಡ ಒಂಟಿಯಾಗಿ ಹೋಗಬೇಡ,
ನನ್ನ ಕೂಗು, ಆರ್ತನಾದ ಅವನಿಗೆ ಕೇಳಿಸಲೇಯಿಲ್ಲ;
”ಅಣ್ಣ" ನೆಂಬ ಆದರ್ಶಕ್ಕೆ ಕೊರಳ ಅರ್ಪಿಸಿದ್ದ;
ನನ್ನ ಪ್ರೀತಿ,ಪ್ರೇಮ,ಕಾಮ,ಭೋಗಗಳು ಅವನಿಗೆ ಬೇಕಿರಲಿಲ್ಲ;
ಹೊರಡುವ ಮುನ್ನದಿನದ ರಾತ್ರಿ,
ಕಾಡಿ,ಬೇಡಿ ಹೃದಯದಲ್ಲಿ ತುಂಬಿಕೊಂಡರೂ
ಅದು ಅವನಿಗೆ ಬಲವಂತದ ಮಾಘಸ್ನಾನ;
ಏನೇ ಆದರೂ ಅವನು ತನ್ನ ನಿರ್ಧಾರದಿಂದ ಹಿಂಜರಿಯಲಿಲ್ಲ;
ಅವನ ಅಣ್ಣನ ಪ್ರೀತಿ ಗಟ್ಟಿಯಾಗಿತ್ತು;
ಆದರೆ ನನ್ನ-ಅವನ ಪ್ರೀತಿ ಬಿರುಕುಬಿಟ್ಟಿತ್ತು;
ಅವನೋ ನಾರುಮಡಿಯನುಟ್ಟು ಅಣ್ಣನ ಹಿಂದೆ ಹೋದ;
ನಾನೂ ಅಷ್ಟೆ ನಾರುಮಡಿಯನುಟ್ಟು ಇಲ್ಲೇ ಉಳಿದೆ,
ಅತ್ತೆಯ ಸೇವೆಗೈಯುತ್ತಾ;
ಅರಮನೆಯೇ ಕಾಡಾಗಿತ್ತು ನನಗೆ ಅವನಿಲ್ಲದೇ;
ಮವದಲ್ಲಿ ಅವನ್ ಮೇಲೆ ದ್ವೇಷ ಬೀಡು ಬಿಡುತ್ತಿತ್ತು;
ನನಗೆ ಅವನಿಲ್ಲ;
ಅವನಿಗೆ ನಾನಿಲ್ಲ;
ಇದ್ದೂ ಇಲ್ಲದಂತಾಗುವ ಸರದಿ ನಮ್ಮಿಬ್ಬರದೂ;
ಆದರ್ಶಕ್ಕೆ ನಾವಿಬ್ಬರೂ ಬಲಿಪಶುಗಳಾದೆವು;
ಆದರ್ಶದ ಹೊನ್ನಶೂಲಕ್ಕೆ ನಮ್ಮ ದಾಂಪತ್ಯ ಚೂರು ಚೂರಾಗಿತ್ತು.

ಹೇಳದೇ ಓಡಿಹೋದದ್ದೇಕೆ?



ಕಳ್ಳನಂತೆ ಓಡಿಹೋದ
ಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನು
ಒಂದು ಮಾತು ಹೇಳಲಾಗದೆ ಹೋದದ್ದೇಕೆ?
ನಾನು ಅವನಿಗೆ ತಕ್ಕವಳಲ್ಲವೇ?
ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...
ಗಂಡಬಿಟ್ಟವಳೆಂದು ಹೀಗೆಳೆಯುವ ಪರಿ
ಸಾಕು ಸಾಕು ಉತ್ತರ ಕೊಡದೇ ಹೋದೆ
ನಾನು ನಿನ್ನ ಕ್ಷಮಿಸಲ್ಲ.

ರಾಜಕುಮಾರ ಅವನು
ಅವನ ಮನದನ್ನೆ ನಾನು
ಅಗಾಧ ರಾಜ್ಯ,ಕೋಶ,ಅಷ್ಟೈಶ್ವರ್ಯಗಳು
ಬಂಧು-ಬಳಗ,ಎರಡು ಮುದ್ದಾದ ಮಕ್ಕಳು
ಕೊರತೆ ಎಂಬುದು ಇರಲಿಲ್ಲ ಅವನಿಗೆ
ಸಾವು ಕಂಡ
ನೋವು ಕಂಡ
ಎದುರಿಸದೇ ನಲುಗಿದ
ಆ ರಾತ್ರಿ ಪಕ್ಕದಲ್ಲೇ ಮಲಗಿದ್ದೆ ನಾನು
ನೂರು ಕನಸುಗಳ ಕಂದಿದ್ದೆ ನವ ತರುಣಿಯಾಗಿ
ಕನಸು ನುಚ್ಚುನೂರಾಗುವುದೆಂದು ಎಣಿಸಿರಲಿಲ್ಲ
ಮೊದಲೇ ಗೊತ್ತಿದ್ದರೆ ನನ್ನ ಸೆರಗಿಗೆ ನಿನ್ನ ಕಟ್ಟಿಕೊಂಡುಬಿಡುತ್ತಿದ್ದೆ
ಹೇಳದೇ ಓಡಿಹೋದದ್ದೇಕೆ?
ಹೇಳು ಇನ್ನಾದರೂ....

ಶ್ರೀಮಂತಿಕೆ,ಸಕಲ ವೈಭೋಗಗಳೆಲ್ಲವೂ ಈ ಅರಮನೆಯಲ್ಲಿದೆ
ನನ್ನ ಜೊತೆ ಇರಬೇಕಾದ ನೀನೇ ಇಲ್ಲವಲ್ಲ!
ಸಕಲೈಶ್ವರ್ಯಗಳು ಕಸದಂತೆ ತೊರುತ್ತಿದೆ ನನಗೆ ನೀನಿಲ್ಲದೆ
ಯೌವ್ವನವಿದೆ ಈ ದೇಹಕ್ಕೆ
ಬಯಕೆಗಳಿವೆ ಯೌವ್ವನಕ್ಕೆ
ತೀರಿಸೋ ಅರಸನೇ ನೀನೇ ಇಲ್ಲ
ಯುದ್ಧದಲ್ಲಿ ಓಡಿಹೋಗೋ ರಣಹೇಡಿಯಂತೆ
ಸಂಸಾರದ ಸುಖ-ದುಃಖಗಳಿಗೆ ಎದೆಗೊಡದೆ ಓಡಿಹೋದೆಯಲ್ಲ
ನಾನು ನಿನ್ನ ಜೊತೆಯಿದ್ದೆ ಎಂಬುದನ್ನು ಏಕೆ ಮರೆತೆ?

ಅರಮನೆಯ ವೈಭೋಗಗಳಲ್ಲಿ ನನ್ನ ಬಿಟ್ಟುಹೋದೆ ಎಂಬ ಸಮಾಧಾನವೇ ನಿನಗೆ
ಅರಮನೆಯ ವೈಭೋಗಗಳಲ್ಲಿಯೊ ಏಕಾಂಗಿಯಾಗಿ ನಲುಗಿರುವೆ
ನಿನ್ನ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿರುವೆ
ಶತ-ಶತಮಾನಗಳೂ ಕಳೆದರೂ ದೌರ್ಜನ್ಯ,ಶೋಷಣೆ ತಪ್ಪಿಲ್ಲ
ಹೆಂಡತಿಯನ್ನು ಕಾಡಿಗೆ ಕಳುಹಿಸಿದರೂ....
ಹೆಂಡತಿಯನ್ನು ಅರಮನೆಯಲ್ಲಿ ಬಿಟ್ಟು ಓಡಿಹೋದರೂ.....
ಶೋಷಣೆ ಶೋಷಣೆಯೇ..........................................

ಬಳಸದ ದಾರಿ



ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,
ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲ
ಏಕಾಂಗಿ ಸಂಚಾರಿಯಾಗಿ,ನಿಂತೆ
ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;
ರಸ್ತೆಯ ಅಂಕು ಡೊಂಕು ಕಾಣುವವರೆಗೂ;
ಆಮೇಲೆ ಬೇರೆ ರಸ್ತೆಯ ಕಡೆಗೆ ಹೊರಳಿದೆ
ಆ ರಸ್ತೆಯ ಆಯ್ಕೆಯ ನಿರ್ಧಾರ ಸಮಂಜಸವಾಗಿತ್ತು
ರಸ್ತೆಯಲ್ಲಿ ಹುಲ್ಲು ತುಂಬಿತ್ತು ಮತ್ತು ತುಳಿತಕ್ಕೆ ಒಳಗಾಗ ಬೇಕಿತ್ತು
ಆ ರಸ್ತೆಯಲ್ಲಿ ಜನ ಓಡಾಡಿದ್ದೇ ಆದರೆ
ಅದು ಬೇರೆ ರಸ್ತೆಗಳಷ್ಟೇ ತುಳಿತಕ್ಕೆ ಒಳಗಾಗಬೇಕಿತ್ತು.
ಮತ್ತು ಎರಡೂ ರಸ್ತೆಗಳು ಬೆಳಗಿನ ಬೆಳಕಿಗೆ ಸಮಾನವಾಗಿ ತೆರೆದುಕೊಳ್ಳುತ್ತಿತ್ತು
ಬಿದ್ದ ಎಲೆಗಳು ಕಪ್ಪಾಗಿಲ್ಲ , ಅದರ ಮೇಲೆ ಯಾರೂ ನಡೆದಿಲ್ಲ.
ಮತ್ತೆ ಗೊತ್ತಿದ್ದರೂ ರಸ್ತೆಗಳು ಮತ್ತೊಂದು ರಸ್ತೆಗೆ ತೆರೆದುಕೊಳ್ಳುತ್ತದೆ,
ನನಗೆ ಅನುಮಾನ ಕಾಡಿತು ಮತ್ತೆ ನಾನು ವಾಪಸ್ಸಾಗುವೆನೇ?.
ನಾನು ಹೇಳುತ್ತಿದ್ದೇನೆ ನಿಟ್ಟುಸಿರನ್ನು ಬಿಟ್ಟು
ಶತ-ಶತಮಾನಗಳಿಂದ ನಡೆದು ಬಂದಿದ್ದನ್ನು;
ಕಾಡಿನಲ್ಲಿ ರಸ್ತೆಗಳು ಇಬ್ಬಾಗವಾಗಿದ್ದವು, ಮತ್ತು ನಾನು...
ನಾನು ಕಡಿಮೆ ಬಳಸಿದ ದಾರಿಯನ್ನು ಹಿಡಿದೆ.
ಮತ್ತು ಅದು ಎತ್ತಿ ಹಿಡಿದಿತ್ತು ಬೇರೆಯವರಿಗೂ ನನಗೂ ಇರುವ ವ್ಯತ್ಯಾಸವನ್ನು.

ಪ್ರೇರಣೆ: " Road not Taken" by Robert Frost

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...