ಮನದೊಳ ಅಂಕಣದಲ್ಲಿ

ಹಣತೆ ಹಚ್ಚಬೇಕೆಂದು ಕೊಂಡೆ
ಹುಡುಕಾಡಿದೆ ಮನೆಯ ತುಂಬೆಲ್ಲಾ
ಪರಿಕರಗಳು ಬೇಕಾದವು ಒಂದೇ? ಎರಡೇ?
ಮನಸ್ಸಿಲ್ಲದೆ ಮಾರ್ಗವಿಲ್ಲ;
ಪ್ರೇರಣೆಯಿಲ್ಲದೆ ಕಾಯಕವಿಲ್ಲ;
ಇಂಧನವಿಲ್ಲದೆ ಚೈತನ್ಯವಿಲ್ಲ;
ಕತ್ತಲಿಲ್ಲದೆ ಬೆಳಕಿಗೆ ಮಹತ್ವವಿಲ್ಲ;
ಬೆಳಕಿಡಿಯಿಲ್ಲದೆ ಬೆಳಕಿಲ್ಲ;
ಮನದೊಳ ಅಂಕಣದಲ್ಲಿ
ನೂರು ದೀಪಗಳ ಬೆಳಕಿದೆ;
ನಮ್ಮ ನಾವು ಅರಿತರೆ
ನೂರು ಜನಕ್ಕೆ ನಾವೇ ದಾರಿದೀಪ;

ನೀ ನನ್ನ ಹೃದಯದೊಳು ನೆಲೆಸಿರುವೆ

ನನ್ನ ಹೃದಯದೊಳು ನೀನಿರುವೆ
ನಾ ಎಲ್ಲೇ ಹೋದರೂ ನೀ ಜೊತೆಗಿರುವೆ
ನಿನ್ನ ಇರುವಿಕೆ ಒಂದು ರೀತಿಯ ಸಂತೋಷ ಮನದಲ್ಲಿ ತಂದಿದೆ
ಮನದಲ್ಲಿ ಸಮಾಧಾನ,ಚೈತನ್ಯ,ಉತ್ಸಾಹ ಆವರಿಸಿದೆ
ನಾನು ಏಕಾಂಗಿಯಲ್ಲ;
ನನಗಾರು ಇಲ್ಲ;
ಇತ್ಯಾದಿ.ಇತ್ಯಾದಿ ಹುಸಿ ನಂಬಿಕೆಗಳನ್ನು ಕಿತ್ತೆಸೆದಿದ್ದೇನೆ
ಕಾರಣ ನೀ ನನ್ನ ಹೃದಯದೊಳು ನೆಲೆಸಿರುವೆ
ನಾನು ನಿನ್ನ ಏನೆನ್ನಲ್ಲಿ?
ಬಂಧುವೆನ್ನಲೋ?
ಗೆಳೆಯನೆನ್ನಲೋ?
ಪ್ರಿಯತಮನೆನ್ನಲೋ?
ದ್ವಂದ್ವಕ್ಕೆ ಸಿಲುಕಿಸಿರುವೆ...
ನೀ ಏನೇ ಆಗಿರು ನನಗೆ
ನನ್ನ ಮನದ ಚೈತನ್ಯವೆನ್ನುವುದು ಸತ್ಯ
ನನ್ನ ಮನದ ಛಲವೆನ್ನುವುದು ಸತ್ಯ
ನನ್ನ ಮನದ ನಂಬಿಕೆಯೆನ್ನುವುದು ಸತ್ಯ.

ನಾನು ನಿನ್ನವಳಲ್ಲ.....

ನಾನು ನಿನ್ನವಳಲ್ಲ
ನಾ ನಿನ್ನ ವಶವಾಗಿಲ್ಲ
ಪ್ರೀತಿಯ ಭ್ರಮೆಯಲ್ಲಿ ತೇಲಿದ್ದು ನಿಜ
ನಿನ್ನ ಪ್ರೀತಿಯ ಬಲೆಗೆ ಸಿಕ್ಕಿದ್ದು ನಿಜ
ನಿನ್ನಿಂದ ವಂಚನೆಗೆ ಒಳಗಾಗಿದ್ದೂ ಅಷ್ಟೇ ಸತ್ಯ
ಒಮ್ಮೆ ಮಾಡಿದ ತಪ್ಪು
ಮತ್ತೆ ಮತ್ತೆ ಹೇಗೆ ಮಾಡಲಿ ಹೇಳು?
ಪ್ರೀತಿ ಅಮೃತವೆನ್ನುವರು ಈ ಜನರು
ಆದರೆ ನಿನ್ನ ಪ್ರೀತಿ ನನಗೆ ಬಲು ಕಹಿ,ಒಗರು
ಮತ್ತೆ ಬಾರದಿರು ಎದುರಿಗೆ
ಎಲ್ಲವನ್ನೂ ಮರೆತಿರುವಾಗ
ಹಳೆಯ ನೆನಪ ತಾರದಿರು
ನೀ ಎದುರು ಬಂದರೂ
ನಾನು ನಿನ್ನವಳಲ್ಲ
ನಾ ನಿನ್ನ ವಶವಾಗಲ್ಲ

ಕಣ್ಣೀರಾಗುವ ಆಸೆ-ಭ್ರಮೆ

ಓಹ್! ಸುಂದರ ಮನೋಹರ ಬೆಳಗು
ಹರಿದು ಬರುತಿದೆ ಸಂತೋಷದ ಹೊನಲು
ಕಣ್ತೆರೆದು ಆಸ್ವಾದಿಸುತಿಹೆ ಪ್ರತಿ ನಿಮಿಷ||

ಅಲ್ಲಿ ಇಲ್ಲಿ ಅಂಗಡಿ ಮುಗ್ಗಟ್ಟು ತೆರೆದಿಹವು ನೋಡು
ಕಾಣದ ಭ್ರಮೆಯಲ್ಲಿ ತೇಲಿಹೋಗುತ ವಶವಾದೆ
ಕಣ್ಣಿದ್ದು ಕುರುಡನಾದೆ ಹಗಲುಗನಸು ಕಂಡು||

ಮುಸ್ಸಂಜೆಯ ಬೆಳಗು ಜಾರುವ ಹೊತ್ತಲ್ಲಿ ನೆನಪಾಯಿತು
ಅಂಗಡಿಯಲ್ಲಿ ವ್ಯಾಪಾರ ಮಾಡುವುದು ಬಹಳಿತ್ತು
ಸಮಯ ಹೋದ ಮೇಲೆ ಕಣ್ಣೀರಿಡುವುದು ಗೊತ್ತು||

ಈ ಜೀವನವೇ ಹೀಗೆ ನೋಡಿ
ಇಲ್ಲದಿದ್ದಾಗ ಆಸೆಪಡುತ್ತೇವೆ
ಇದ್ದಾಗ ಭ್ರಮೆಯಲ್ಲಿರುತ್ತೇವೆ
ಆಸೆ-ಭ್ರಮೆ ಕಳಚಿದಾಗ ಕಣ್ಣೀರಾಗುತ್ತೇವೆ||

ಯಾರ ಪ್ರೀತಿಯ ವಶವಾಗಿಹೆ?

ನೀ ಬರುವೆಯೆಂದು ಕಾದಿಹೆನು ಕಾತರದಿ
ಕಾಣದೆ ಬಲುದಿನಗಳಾದವು ಬಳಿಬಾರಾ
ಕಾಡಿದೆ ಮನ ನಿನ್ನ ಕಾಣದೆ,ನೊಂದಿದೆ ಮನ
ವಿರಹದಿ ನೊಂದು ಬಳಲಿಹೆನು ಬಾರಾ ಮಧುರ ಬಾಲಾ||

ಎಲ್ಲಿರುವೆ ಚಂದ್ರನೆ? ಮದನ ಮೋಹನನೇ?
ಎಲ್ಲಿರುವೆ ಮುಕುಂದನೆ? ಹೃದಯ ಗಾನ ಮುರುಳಿಯೇ?
ಪರೀಕ್ಷಿಸುವ ಈ ಪರಿ ಸರಿಯೇ? ನ್ಯಾಯವೆ?
ಮುಖತೋರಿ ಸಲಹಬಾರದೇ ಗೋಕುಲ ಬಾಲಾ||

ಯಾರ ಪ್ರೀತಿಯ ವಶವಾಗಿಹೆ?
ನಿನ್ನ ಕಾಣದ ಈ ಕಂಗಳು ಕುರುಡಾಗಿವೆ
ಬಂದು ದಾರಿ ತೋರಬಾರದೇ?
ನಿನ್ನೊಲವ ಮಾತುಗಳಿಗೆ ಕಿವಿಗಳು ಹಂಬಲಿಸಿವೆ
ಕರುಣೆ ನಿನಗೆ ಬಾರದೇ?
ಎಲ್ಲಿ ಮರೆಯಾದೆ ಎನ್ನ ಹೃದಯದರಸನೇ?
ಎದುರು ಬಂದು ನಿಲ್ಲಬಾರದೇ ಗೋಪಾಲ ಬಾಲಾ||

ಯಶಸ್ಸು

ಯಶಸ್ಸಿನ ರಸ್ತೆ ನೇರವಾಗಿಲ್ಲ ಗೆಳೆಯ
ವಕ್ರವಾಗಿದೆ ಹಾಗು ಸೋಲೆನ್ನುವರು ಗೆಳೆಯ
ಸುರುಳಿಯಂತಿರುವ ಅದನ್ನು ಭ್ರಾಂತಿಯೆನ್ನುವರು ಗೆಳೆಯ
ವೇಗ ನಿಯಂತ್ರಣ ಉಬ್ಬುಗಳನ್ನು ಗೆಳೆಯರೆನ್ನುವರು
ಕೆಂಪು ದೀಪಗಳನ್ನು ವೈರಿಯೆಂದು,
ಎಚ್ಚರಿಕೆ ದೀಪಗಳನ್ನು ಕುಟುಂಬವೆನ್ನುವರು ಗೆಳೆಯ;

ನಿನ್ನೊಳು ಒಂದಿನಿತು ದೃಡತೆಯಿದ್ದರೆ
ಚೈತನ್ಯದ ಮೂಲ ತಾಳ್ಮೆ,ಛಲ,
ವಿಮೆಯೆನ್ನುವ ನಂಬಿಕೆ ಮತ್ತು
ಶ್ರೀಕೃಷ್ಣ ಚಾಲಕನಾಗಿರೆ.....
ನೀ ಹೊರಟಿರುವ ಆ ಸ್ಥಳ ಯಶಸ್ಸೇ ಆಗಿರುವುದು ಗೆಳೆಯ;

ಪ್ರೇರಣೆ: " Success" by Niderah

ಅದುವೇ ಜೀವನ

ಈ ಜೀವನವೊಂದು ಉಡುಗೊರೆ ಅದನ್ನು ಒಪ್ಪಿಕೋ,ಅಪ್ಪಿಕೋ.
ಆರಂಭವಾಗುವುದು ಹೊಸದಿನದಂತೆ... ಎದ್ದೇಳು ಹಾಗು ಅಭಿನಂದಿಸು.
ಜೀವನವೊಂದು ಸಾಹಸ.. ಧೈರ್ಯವಾಗಿ ತಲೆ ಎತ್ತು ಹಾಗು ಭೇಟಿಮಾಡು.
ಜೀವನವೊಂದು ಅವಕಾಶ.. ಬಳಸಿಕೋ?, ವ್ಯರ್ಥಮಾಡದೆ.

ಜೀವನವೊಂದು ರಹಸ್ಯ...ಬಿಚ್ಚು,ಆ ಒಗಟನ್ನು ಬಿಡಿಸು.
ಅದು ಆರಂಭವಾಗುವುದು ಒಳಾರ್ಥದಿಂದ... ಜಾಗೃತನಾಗು ಹಾಗು ಅರ್ಥಮಾಡಿಕೋ.
ಜೀವನವೊಂದು ಗುರಿ..ಸೆಣಸು ಅದರೊಡನೆ ಹಾಗು ಯಶಸ್ಸು ನಿನ್ನದಾಗಿಸಿಕೋ.
ಜೀವನವೊಂದು ಪರಿಪೂರ್ಣ ನಂಬಿಕೆ... ಪೂರೈಸು?,ಬಿಡದೆ ಉಳಿಸಿಕೋ.

ಜೀವನವೊಂದು ದುಃಖದ ನಾಟಕ.. ಎದುರುಗೊಳ್ಳು,ಮನಃಪೂರ್ವಕವಾಗಿ ಒಪ್ಪಿಕೋ..
ನೋವಿನಿಂದ ಆರಂಭವಾಗುವುದದು... ಎದ್ದೇಳು ಹಾಗು ಸಹಾಯ ಮಾಡು.
ಜೀವನವೊಂದು ಸೆಣಸಾಟ.. ಧೈರ್ಯದಿಂದ ಎದುರಿಸು
ನೋವಿನ ನದಿಯೇ... ಕ್ಷಮಿಸು? ನಿರ್ಲಿಪ್ತನಾಗಿ ದಾಟು.

ಜೀವನವೊಂದು ಬೆಲೆಬಾಳುವಂತಹುದು... ಹಿಡಿ,ಆ ಸಂಪತ್ತು ನಿನ್ನದಾಗಿಸಿಕೋ
ಅದು ಭರವಸೆಯಿಂದ ಆರಂಭವಾಗುವುದು... ಎದ್ದೇಳು ಹಾಗು ಅನುಭವಿಸು.
ಜೀವನವೊಂದು ಆಯ್ಕೆ... ಅದನ್ನು ಆರಿಸಿಕೋ ಹಾಗು ಸಾಧಿಸು
ಅದು ಜ್ಯಾನದ ಹೊಳೆ... ಬಳಸಿಕೋ ,ಅಪವ್ಯಯ ಮಾಡಬೇಡ.

ಜೀವನವೊಂದು ಸಾಹಸ...ಅನುಭವಿಸು ಹಾಗು ಪರಿಶೋಧಿಸು
ಅದು ಕರ್ತವ್ಯದೊಡನೆ ಆರಂಭವಾಗುವುದು... ಎದ್ದೇಳು ಹಾಗು ನಿರ್ವಹಿಸು
ಜೀವನವೊಂದು ಪ್ರೀತಿ...ಪರಿಪೂರ್ಣವಾಗಿ ಪ್ರೀತಿಸು
ಸೌಂದರ್ಯದ ಗಣಿ.... ಹೊಗಳು?, ಹಾಗು ವೀಕ್ಷಿಸು.

ಇದೇ ಜೀವನ.... ಬಾಳು, ಕಲಿ ಹಾಗು ಬೆಳೆ
ಜೀವನ ಸುಂದರ....ನೀ ತಿಳಿದಿರುವುದಕ್ಕೆಲ್ಲಾ ನ್ಯಾಯ ಒದಗಿಸು.

ಪ್ರೇರಣೆ:"That's Life" by © Danny Joyce

ಕರಗುವ ಮೋಡದಿಂದಲೇ

ಕರಗುವ ಮೋಡದಿಂದಲೇ
ಮಳೆಯ ಹನಿಗಳನ್ನಲ್ಲದೆ ಬೇರೇನನ್ನೋ ನಿರೀಕ್ಷಿಸಬಹುದೇ?

ಕರಗುವ ಹೃದಯದಿಂದಲೇ
ಕಣ್ಣೀರ ಹನಿಗಳನ್ನಲ್ಲದೆ ಬೇರೇನನ್ನೋ ನಿರೀಕ್ಷಿಸಬಹುದೇ?

ಕರಗುವ ಹಿಮದಿಂದಲೇ
ಹರಿಯುವ ನದಿಯನ್ನಲ್ಲದೆ ಬೇರೇನನ್ನೋ ನಿರೀಕ್ಷಿಸಬಹುದೇ?

ಬಯಸುವ ಹೃದಯದಿಂದಲೇ
ಪ್ರೀತಿಯ ಮಳೆಯನ್ನಲ್ಲದೆ ಬೇರೇನನ್ನೋ ಬಯಸಬಹುದೇ?

ಕಾಡುವ ಕನಸಿನಿಂದಲೇ
ಜೀವನದ ಗುರಿಯನ್ನಲ್ಲದೆ ಬೇರೇನನ್ನೋ ಹಾತೊರೆಯಬಹುದೇ?

ಸೆಳೆಯುವ ಮೋಹದಿಂದಲೇ
ಈ ಜೀವನ ಚಲಿಸುವುದಲ್ಲದೆ ನಿಂತ ನೀರಾಗಬಹುದೇ?

ನಾನೊಬ್ಬಳು ಹುಡುಗಿ

ನಗುವ ಹಿಂದೆ ನನ್ನೊಳಗಿನ ನೋವುಗಳನ್ನೆಲ್ಲ ಬಚ್ಚಿಡುವವಳು
ಹೊರಗೆ ನೋಡಲು ಬಲು ಬಜಾರಿಯಾಗಿ ಕಾಣವವಳು
ನೂರೆಂಟು ಸಮಸ್ಯೆಗಳ ಹೊತ್ತು ಹೆಣಗುವವಳು
ಏನನ್ನೂ ಹೇಳಿಕೊಳ್ಳಲಾರದ ಸಂಕೋಚವ ಹೊತ್ತವಳು
ನನ್ನೆಲ್ಲವನ್ನೂ ಸೀಸೆಯೊಳಗೆ ಬಂಧಿಸಿರುವಳು ನಾನೊಬ್ಬಳು ಹುಡುಗಿ

ಕೆಲವು ವೇಳೆಯಲ್ಲಿ ನನ್ನ ಮಾತು ಕೇಳಿಸಿಕೊಳ್ಳುವವರ ಅಗತ್ಯವಿರುವವಳು
ನನ್ನನ್ನು ಸಂತೈಸಲು ಹೃದಯವಂತರು ಇರಲಿ ಎಂದು ಹಂಬಲಿಸುವವಳು
ನನ್ನ ಸಮಸ್ಯೆಗಳಿಗೆ ಕರಗುವ ತಾಯ ಕರುಳು ಇರಲಿ ಎಂದು ಕರುಬುವವಳು
ನಾನು ಅಳುವಾಗ ನನ್ನ ಕಣ್ಣಾಲಿಗಳಲ್ಲಿ ಜಾರುವ ನೀರನ್ನು ಒರೆಸುವವರು ಬೇಕೆಂದು ಮರುಗುವವಳು
ನನ್ನನ್ನು ಪ್ರೀತಿಸುವ ಹೃದಯ ಬೇಕೆಂದು ದೇವರಲ್ಲಿ ಪ್ರಾರ್ಥಿಸುವವಳು ನಾನೊಬ್ಬಳು ಹುಡುಗಿ

ಯಾರಿಗೂ ತಿಳಿದಿಲ್ಲ ನನ್ನ ನೈಜ ಆಂತರ್ಯ
ಯಾರಿಗೂ ತಿಳಿದಿಲ್ಲ ನನ್ನ ದಿನನಿತ್ಯದ ಬವಣೆಗಳು
ಯಾರಿಗೂ ತಿಳಿದಿಲ್ಲ ದಿನವೂ ತೆವಳಿ ಸವೆಸುವ ಹಾದಿಯ
ಯಾರಿಗೂ ತಿಳಿದಿಲ್ಲ ನಾನೊಬ್ಬಳು ಹುಡುಗಿ
ತನ್ನನ್ನು ತಾನೇ ಮರೆತವಳು ಹಾಗು
ನಾನೊಬ್ಬಳು ಹುಡುಗಿ ದಿನವೂ ಅಳುತ್ತಾ,
ಕೊರಗುತ್ತಾ ರಾತ್ರಿ ನಿದ್ದೆಯ  ಕರೆವವಳು ನಾನೊಬ್ಬಳು ಹುಡುಗಿ

ಪ್ರೇರಣೆ: "And I'm the Girl by Jillian Baker

ನನ್ನ ಕೋಣೆ,ಕತ್ತಲ ಓಣಿ

ನನ್ನ ಕೋಣೆ, ಕತ್ತಲ ಓಣಿ
ನನ್ನ ದುಃಸ್ವಪ್ನಗಳೇ ಮತ್ತೆ ಬನ್ನಿ
ನನ್ನ ಭೂತಗಳು ಬಿಡಲಾರವು
ನನ್ನ ಕಾಪಾಡಲು ಯಾರೂ ಇಲ್ಲ
ನನ್ನ ಮನಸ್ಸಿಗೆ ತುಂಬಾ ನೋವಾಗಿದೆ
ನನ್ನ ನೋವುಗಳು ನನ್ನನ್ನೇ ತಿನ್ನುತ್ತಿವೆ;
ನನ್ನ ಕಂಗಳು ತೇವವಾಗಿವೆ
ಕಾರಣಗಳ ನಾನೆಂದೂ ಮರೆಯಲಾರೆ
ನನ್ನ ಉಸಿರುಗಟ್ಟುತ್ತಿದೆ;
ನನ್ನ ಮಾತುಗಳು ತೊದಲುತ್ತಿದೆ;
ನನ್ನ ಹೃದಯ ಚೀರುತ್ತಿದೆ;
ನನ್ನ ಜೀವ ಸಾವಿನ ಮನೆಯ ಬಾಗಿಲ ತಟ್ಟುತ್ತಿದೆ;

ಪ್ರೇರಣೆ:  "My Room, Dark black"  By Anonymous

ಹೇಳಲಾರದ ಸತ್ಯ

ನನ್ನ ನೋವು,ಈ ನರಳಾಟ ಎಲ್ಲವೂ ನನ್ನ ಹಣೆಬರಹ;
ಬಲವಂತವಾಗಿ ಮನಮಾಡಿ ಎಲ್ಲವನ್ನೂ ನಿರ್ಲಕ್ಷಿಸಿದರೂ
ಹಳೆಯ ನೆನಪು,ಸುತ್ತಮುತ್ತಲ ಪರಿಸರ ನನ್ನನ್ನು ಕಟ್ಟಿಹಾಕಿದೆ;
ದ್ವೇಷ ನನ್ನ ಚರ್ಮದ ಕೆಳಗೆ ಬುಗಿಲೇಳುವ ಹುನ್ನಾರ ನಡೆಸಿದೆ;
ರಕ್ತ ದಮನಿಗಳಲ್ಲಿ ಕೋಪ-ತಾಪ ಸಿಡಿದೇಳುವ ಹವಣಿಕೆ ಕಾಣುತ್ತಿದೆ;
ನೋವಿನ ಗಾಯಗಳು ಜ್ವಾಲಾಮುಖಿಯಂತೆ ಸ್ಪೋಟಗೊಳ್ಳಲು ಕಾಲ ಎಣಿಸುತ್ತಿದೆ;
ಕಣ್ಣುಗಳನ್ನು ಕತ್ತಲು ಬಂಧಿಸಿದೆ ಆದರೂ ತುಟಿಯ ಮೇಲೆ ನಗುವ ತೋರುವ ಹವಣಿಕೆ;
ಜನರ ನಡುವೆ ಮಾತನಾಡುವಾಗ ನಗುವ ಮುಖವಾಡ ಧರಿಸುತ್ತೇನೆ;
ಒಳಒಳಗೆ ನಾನು ಸಾಯುತ್ತಿದ್ದೇನೆ;
ಜನ ನನ್ನ ನೋಡುವ ದೃಷ್ಟಿಕೋನ ಬದಲಾಯಿಸುವರೇನೋ?
ಒಳಗಿನ ನಾನು ಬೇರೆಯವನೇ ಆಗಿಹನೇನೋ? ಇಲ್ಲ
ಎರಡೂ ಒಂದೇ ಆಗಿಹನೇನೋ?
ಸತ್ಯವೆಲ್ಲವನ್ನೂ ನಾನು ಬಲ್ಲೆನೆಂದು ಅವರು ನನ್ನ ಹೀಗೆಳೆಯದಿರಲಿ;
ಆ ಸತ್ಯ ನನ್ನ ಹೃದಯದಲ್ಲಿ ಬಂಧಿಯಾಗಿದೆ;
ಅದಕ್ಕೆ ತೆಗೆಯಲಾರದ ಬೀಗ ಜಡಿದಿದ್ದೇನೆ;
ಅದು ತನ್ನ ಕಣ್ಣೀರಿನಿಂದ ನನ್ನನ್ನು ಬೇರೆಯವನನ್ನಾಗಿಸಿದೆ.

ಪ್ರೇರಣೆ: "Truth Untold" by Shianne.

ಸಾವು

ಕಾಲ ನಿಂತಿದೆ
ಏನೂ ಚಲಿಸದೆ
ಪ್ರತಿ ದಿನವೂ......
ಪ್ರತಿ ಕ್ಷಣ
ಪ್ರತಿ ದಿನ
ವರುಷಗಳಂತೆ ತೋರುತಿದೆ
ಎಲ್ಲೋ ಕಳೆದು ಹೋಗುತ್ತಿದ್ದೇನೆ
ಯಾರಿಗೂ ಸಿಗದ ಕತ್ತಲಲ್ಲಿ
ಅನಿಸುತ್ತಿದೆ ಸಾಯುತ್ತಿದ್ದೇನೆಂದು

ಚಳಿ,
ಶೂನ್ಯತೆ ಹಾಗು
ಒಂಟಿತನ
ನನ್ನನ್ನು ಹಿಂಸಿಸುತ್ತಿದೆ
ಕಟ್ಟಿಹಾಕಿದೆ ಬಿಡಿಸಿಕೊಳ್ಳಲಾರದಂತೆ
ಪ್ರತಿ ಕ್ಷಣ ನನ್ನನ್ನು ತಿನ್ನುತ್ತಿದೆ
ನನ್ನೆಲ್ಲಾ ಚೈತನ್ಯ ಬರಿದಾಗುವವರೆಗೆ
ಮೇಲುನೋಟಕ್ಕೆ ನಾನು ಚೆನ್ನಾಗಿಯೇ ಇದ್ದೇನೆ
ಆದರೆ ನಾನು ಜೀವಂತ ಶವವಾಗಿದ್ದೇನೆ

ಪ್ರೇರಣೆ:  Death by Evan

ಕೀಳರಿಮೆ

ನನ್ನೊಳಗೆ ಒಂದು ಕತ್ತಲಿದೆ;
ಹೃದಯದ ಬೆಳಕಿನ ದೀಪದ ಕೆಳಗಿದೆ ಆ ಕತ್ತಲ ದ್ವೀಪ;
ಅಲ್ಲಿ ತುಂಬಾ ಕತ್ತಲಿದೆ;
ಅಲ್ಲಿ ತುಂಬಾ ಚಳಿಯಿದೆ;
ಅದು ನೋಡಲು ಬಲು ಭಯಂಕರವಾಗಿದೆ;
ನನ್ನಲ್ಲಿ ಭಯ ಹುಟ್ಟಿಸುತ್ತೆ;
ನನ್ನಲ್ಲಿ ಜಿಗುಪ್ಸೆ ಹುಟ್ಟಿಸುತ್ತೆ;

ಕಣ್ಣು ಮುಚ್ಚಿ ಮಲಗಿ
ಭರವಸೆಯ ಕನದ ಕಂಡೆ;
ಶುಭಹಾರೈಕೆ,
ಶುಭ ಆಕಾಂಕ್ಷೆಗಳ ಬಯಸಿದೆ ನನ್ನವರಿಂದ;
ಕನಸ ಕೈಗೂಡುವ ಆ ದಿನಕ್ಕೆ
ಹಂಬಲಿಸಿದೆ ತವಕದಿಂದ;
ನನ್ನೊಳ ಕೀಳರಿಮೆ ಜಾರುವುದೆಂಬ ಬಯಕೆಯಿಂದ;

ಆ ಕತ್ತಲು,
ಕಾರ್ಗತ್ತಲು ಹೆದರಿಸುತ್ತಲ್ಲೇ ಇತ್ತು ನನ್ನನ್ನು;
ನನ್ನ ಆವರಿಸುತ್ತಿತ್ತು
ತನ್ನ ಭೀಭಿತ್ಸ ರೂಪ ತೋರಿ
ನನ್ನಲ್ಲಿ ಅಳುವಲ್ಲದೆ,
ಏನನ್ನೂ ಮಾಡಲಾರದವನಾದೆ;
ಅದರ ಹೃದಯ ಕರಗಲಿಲ್ಲ;
ನನ್ನನ್ನು ಆವರಿಸಿತು
ನನ್ನ ದೇಹವನ್ನು ಸುಡತೊಡಗಿತು
ನನ್ನ ಆತ್ಮ ಜರ್ಜರಿತವಾಯಿತು
ನಾನು ಶವವಾದೆ;
ನನ್ನ ಅಸ್ಥಿಪಂಜರ ಭೂದಿಯಾಯಿತು
ನಾನು ಇತಿಹಾಸವಾದೆ.

ಪ್ರೇರಣೆ: "Cold Dark Corner" by Blake Duffy.

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...