ವರುಷಗಳಾಗಿದೆ ಕಣ್ಣು ಮುಚ್ಚಿ ಕುಳಿತು
ಧ್ಯಾನದಲ್ಲಿ ಮಗ್ನನಾಗಿಹೆನೆಂಬ ಭ್ರಮೆ:
ಕಳಚತೊಡಗಿದಾಗಲೇ ಅರಿವಾದುದು
ವ್ಯರ್ಥ ಪ್ರಯತ್ನ ನನ್ನದಾಯಿತೆಂದು:
ಕಣ್ಣು ಮುಚ್ಚಿದಾಗಲೇ ಕತ್ತಲು:
ಯಾರೋ ಕದ ತಟ್ಟಿದ ಅನುಭವ,
ನನಗೋ ಧ್ಯಾನದ ಭ್ರಮೆ:
ತೆರೆಯಲಿಲ್ಲ ಕದವ,ಭದ್ರವಾಗಿದೆಯೇ
ಮತ್ತೆ ಮತ್ತೆ ಪರಾಮರ್ಶಿಸಿದೆ:
ಹಲವು ಸಲ ಕದ ತಟ್ಟಿದ ಶಬ್ದ,
ನಿರ್ಲಿಪ್ತನಾಗಿ ಭ್ರಮೆಯಲಿ ತೇಲಿದೆ:
ಅಂತೂ ಒಮ್ಮೆ ಎಚ್ಚರವಾಯಿತು,
ಯಾರೋ ನನ್ನ ಹೆಸರೇಳಿ ಕೂಗಿದರೆಂದು ಕಣ್ಣು ತೆರೆದೆ ಸುತ್ತಲೂ
ಕತ್ತಲ ಕಡಲು ಜೊತೆಗೆ ಯಾರೋ ಜೊರಾಗಿ ಕದ ತಟ್ಟುವ ಶಬ್ದ
"ಬಂದೆ,ಬಂದೆ ಒಂದು ನಿಮಿಷ"
ಕೂಗಿಕೊಂಡರೂ ಕೊರಳಿಂದ ದನಿ ಹೊರಡಲಿಲ್ಲ,
ಸುತ್ತಲೂ ಕತ್ತಲು ಬಾಗಿಲೆಲ್ಲಿದೆ? ಹುಡುಕಾಟ,ತಡಕಾಟ
ಅಗುಳಿಯ ತೆಗೆದು ಕದವ ತೆರೆದೆ
ಓ ಪಕ್ಕನೆ ಕಣ್ಣಿಗೊಡೆದ ಬೆಳಕು,
ಮೂಡಣದ ಬೆಳಕಿನ ಬೆಡಗು,
ಮುಂಜಾನೆಯ ಸೂರ್ಯೋದಯ
ಮನದಲಿ ಮೂಡಿಸಿದೆ ಅನನ್ಯ ಬೆರಗು: