ಭೀಭತ್ಸವೆಂದರೆ ಇದೇನೇ.....

ಭೀಭತ್ಸವೆಂದರೆ ಇದೇನೇ.....
ಮುಗ್ಧ ಮಕ್ಕಳ ಹತ್ಯಾಕಾಂಡ ಸಮರ್ಥನಿಯವೇ?
ವಾತ್ಸಲ್ಯ,ಪ್ರೀತಿ,ಕರುಣೆಗೆ ಯಾವುದೇ ಧರ್ಮದ ಸೋಂಕಿಲ್ಲ
ಪ್ರಕೃತಿಯ ಶುದ್ಧ ಪ್ರಮಾಣಗಳೆಂದರೆ ಅವೇನೇ....

ಮೂರ್ಖತನಕ್ಕೆ,ಹೇಡಿತನಕ್ಕೆ,ಗುಂಡಿನ ಮೊರೆತಕ್ಕೆ
ಮುಗ್ಧ ಅಮಾಯಕತೆ ಬಲಿಯಾಗಿರಬಹುದು
ಭಯೋತ್ಪಾದನೆ ಕ್ಷಣಿಕ ಗೆಲುವಿನ ನಗೆ ಬೀರಿರಬಹುದು
ಅದು ನಿಜವಾದ ಗೆಲುವಲ್ಲ,ಶಾಶ್ವತವೂ ಅಲ್ಲ;

ಯಾವುದೇ ಧರ್ಮವಿರಲಿ ಮಾನವೀಯತೆಯೇ ಬುನಾದಿ
ಅನಾದಿಯಿಂದಲೂ ದಯವೇ ಧರ್ಮದ ಮೂಲ
ರಕ್ತ ಪೀಪಾಸುಗಳಿಗೆ,ಸ್ವಾರ್ಥಿಗಳಿಗೆ ಕಾಣಿಸದು
ರಕ್ತ ಹರಿದರೆ,ಭಯ ತೋರಿದರೆ ಲೋಕ ತನ್ನದಾಗದು;

ಹಿಂದೂಧರ್ಮ ಬಿಕ್ಕಿತ್ತಿದೆ;
ಇಸ್ಲಾಂ ಧರ್ಮ ಕಣ್ಣೀರಿಡುತ್ತಿದೆ;
ಕ್ರಿಶ್ಚಿಯನ್ ಧರ್ಮ ನರಳುತ್ತಿದೆ;
ಮಾನವೀಯತೆಯ ಮೇಲೆ ಬಿದ್ದ ಕರಿನೆರಳಿಗೆ
ಅಮಾಯಕ ಮಕ್ಕಳ ಮಾರಣಹೋಮಕ್ಕೆ.......

ಮನದ ದ್ವಂದ್ವ

ಏನು ಹೇಳಬೇಕೋ ತೋಚುತ್ತಿಲ್ಲ
ಹೌದೆನ್ನಲೋ? ಇಲ್ಲವೆನ್ನಲೋ?
ಮನದ ದ್ವಂದ್ವ ಕದನವಾಡುತ್ತಿದೆ ಹಿಂಸಿಸುತ್ತಾ
ನನ್ನ ಕಷ್ಟ ನನಗೆ
ಮನದ ಹಿಂಸೆ ದಾರಿತೋರದೆ ಮರುಗಿದೆ
ಯಾವುದ ಅಪ್ಪಲಿ;
ಯಾವುದ ತೊರೆಯಲಿ;
ಕಾಲವೇ ಹೇಳಬೇಕೆಂದು ಬಯಸಲೇ?
ಒತ್ತಡ ಮನದಲ್ಲಿ ನೂರು
ಬತ್ತದ ಭರವಸೆಗೆ ಹೊಸವರಸೆ
ಯಾವುದು ಆರಂಭವೋ?
ಯಾವುದು ಕೊನೆಯೋ?
ಚಿಂತಿಸುವ ಮನಕ್ಕೆ ಎಲ್ಲವೂ ಶೂನ್ಯವೇ!
ಒಂದು ಎರಡಾಗಲಿ;
ನೂರು ಇನ್ನೂರಾಗಲಿ;
ನನ್ನದೇ ದಾರಿಯಲ್ಲಿ ನಡೆವೆ
ಚಿಂತೆಯ ದ್ವಂದ್ವ ಹೊಡೆದೋಡಿಸುವೆ||

ಮನದ ಕದನ

ಭೂಮಿಯ ಮೇಲೆ ಒಂದೊಂದೇ ಹೆಜ್ಜೆ ಇಡುತ್ತಿದ್ದೇನೆ
ನಡೆದಷ್ಟೂ ದೂರ ಸವೆಯದ ಹಾದಿ;
ಶೂನ್ಯ ತುಂಬಿದ ಮನ;
ತಂತಿ ಹರಿದ ವೀಣೆ;
ಮುರಿದ ಎಲುಬುಗಳ ಗೂಡು;
ದೃಷ್ಟಿಹೀನ ಕಣ್ಣುಗಳು;
ತಪ್ಪುದಾರಿಯಲ್ಲೇ ನಡೆದು,ಸರಿದಾರಿಯ ಇಷ್ಟಪಡುವವನು;
ರಕ್ತನೆರೆತ ಮಣ್ಣು;
ಈ ಮಣ್ಣಿಗೋ ಇಲ್ಲ ಆ ಮನಕ್ಕೋ ದಾಹ ಇನ್ನೆಷ್ಟೋ?
ಸ್ವಾರ್ಥಕ್ಕೋ ಇಲ್ಲ ಬಯಕೆಗೋ?
ಯುದ್ಧ ಭೂಮಿಯಲ್ಲಿ ಸಾಲು ಸಾಲು ಪ್ರಾಣಹಾರಿದ ದೇಹಗಳು;
ಬಿಕ್ಕುತ್ತಿರುವ "ದೇವನಾಂಪ್ರಿಯ ಅಶೋಕ"
ಕೈಯಲ್ಲಿ ನೆತ್ತರು ಸುರಿಸುತ್ತಿರುವ ಕತ್ತಿ-ಬಯಸಿದೆ ಮತ್ತಷ್ಟು ರುಧಿರ;
ರೋಧನ,ಆಕ್ರಂಧನ,ನೋವು,ಹಿಂಸೆ,ಹತಾಶೆ......
ಮತ್ತೆ ಬಾರದ ಜೀವಗಳು-ಸಾಮ್ರಾಜ್ಯದಾಹಿಯ ನರ್ತನ;
ಗಳಿಸಿದ್ದೇ ಗಳಿಸಿದ್ದು-ನಡೆದದ್ದೇ ನಡೆದದ್ದು
ಸಾವು ಅಪ್ಪಿದ ಹೆಣಗಳ ಮೇಲೆ,ಮಾನವೀಯತೆಯ ಸಮ್ರಾಜ್ಯದ ಮೇಲೆ;
ಬೊಬ್ಬೆ ಇಡು ಇಲ್ಲ ಗಹಗಹಸಿ ನಗು,
ಎಲ್ಲವೂ ಶೂನ್ಯ ರಣರಂಗದಲ್ಲಿ;
ಎದುರಿಗೆ ಬರುವವರೆಲ್ಲರೂ ಶತೃಗಳೇ ರುಂಡ ಉರುಳಲೇ ಬೇಕು
ಒಂದೋ ಎದುರಿನವರದು ಇಲ್ಲ ನನ್ನದು.....
ಶಾಂತಿ ಮಂತ್ರ ಪಠಿಸುವ ಬುದ್ದನೂ ಸಂತೈಸಲಾರ
ಶರಣು,ಶರಣು ಹೊಡೆದರೂ ಮರುಗಲಾರ
ಬೋಧಿವೃಕ್ಷದ ಕೆಳಗೆ ಧ್ಯಾನ
ಮುಂದುವರೆಯಲಿ ಮನದ ಕದನ||

ಗಳಿಕೆ ಕ್ಷಣಿಕ

ಇಂದು ಏನಾಗುವುದೋ ಆಗಲಿ
ಎಲ್ಲಕ್ಕೂ ಸಿದ್ಧವಾಗೇ ಇದ್ದೇನೆ
"ಮಾಡು ಇಲ್ಲವೇ ಮಡಿ" ಎನ್ನುವುದಿಲ್ಲ
ಮಾಡುವ ಇರಾದೆ ಇದೆಯೆ ಹೊರತು
ಮಡಿಯುವ ಚಿಂತೆಯಿಲ್ಲ
ಮಾಡೇ ಮಡಿಯುವ
ನೋವು ಅನುಭವಿಸುವುದಕ್ಕೆ ಸಿದ್ಧ
ಏನನ್ನಾದರೂ ಗಳಿಸಲು ಸ್ವಲ್ಪ ಏನನ್ನಾದರೂ ಕಳೆದುಕೊಳ್ಳಲೂ ಸಿದ್ಧ
ಕಳೆದುಕೊಳ್ಳುವುದರಲ್ಲಿಯೇ ಸುಖ ಅಡಗಿದೆ ಗಳಿಸುವುದರಲಿಲ್ಲ||

ಮನದ ತುಳಿತ

ತುಳಿತದ ಅನುಭವ ಪ್ರತಿದಿನ
ಮೇಲೇಳಲಾರದ ಚೈತನ್ಯ ಮುರುಟಿದೆ
"ಹೊರಟು ಹೋಗು" ಕೂಗಿಕೊಳ್ಳುವೆ ಕತ್ತಲೆಯ ಕೋಣೆಯೊಳಗೆ
ಕಾಣದ ಕತ್ತಲಲ್ಲಿ ಯಾರೋ ಕತ್ತು ಹಿಸುಕಿದ ಅನುಭವ
ಪಂಜರದ ಗಿಳಿಗೆ ರೆಕ್ಕೆ ಕತ್ತರಿಸಿದ ಹಾಗೆ
ಮೂಕ ರೋಧನ ಮನೆ ಮಾಡಿದೆ ಎದೆಯ ಗೂಡಿನೊಳಗೆ
ಯಾರು ಸಲಹುವರು ನನ್ನ?
ಯಾರು ಸಲಹುವರು ನನ್ನ?
ಮೂಕವೇಧನೆಗೆ ಸಾಂತ್ವನದ ಭ್ರಮೆ!
ಯಾರೋ ಹತ್ತಿರ ಬರುವರೆಂದು,ಸಲಹುವರೆಂದು....
ಮನದಲ್ಲಿ ಕಾಣದ ಭರವಸೆ ಎನ್ನಲೋ?
ಇಲ್ಲ ಕನವರಿಕೆ ಎನ್ನಲೋ?
ಕತ್ತಲ ನೆರಳನ್ನೇ ನಿಜವೆಂದು ಭ್ರಮಿಸಿದೆನೇನೋ?
ಬದುಕುವ ತುಡಿತ ಇದೆ,ಇನ್ನೂ ಇದೆ.....
ನೋವು ಸವೆಯುತ್ತಿದೆ ಕಾಲನ ಮಹಿಮೆಯಿಂದೆ
ಭಯವ ನೆನೆದರೆ ನೋವು ಅಪ್ಪುವುದು
ಹೋಗು ಹೋಗೆಂದರೂ ಬರಸೆಳೆವುದು ಇನ್ನೂ......

ಏಕಾಂತ

ಮರದ ಕೆಳಗೆ ಏಕಾಂತ ,ಒಂಟಿತನದ ಭಾವ
ದೂರದಲ್ಲಿ ಹಾರಿಬರುವ ಕಪ್ಪು ಮೋಡಗಳ ನೋಟ
ಅಳುಕುವ ಮನ,ರೋಧಿಸುವ ಭಾವ
ಏನನ್ನೋ ಕಳೆದುಕೊಂಡ ಶೂನ್ಯಭಾವ-ವೈರಾಗ್ಯವೆನ್ನಲೇ?
ಕತ್ತುಹಿಸುಕುವ ಚಳಿ
ಬೆಚ್ಚಿಬೀಳಿಸುವ ಗುಡುಗಿನ ಆರ್ಭಟ
ಕೊಚ್ಚಿಹೋಗುವ ಮಳೆಯಲ್ಲಿ ಸಿಲುಕಿದೆ ಜೀವ
ಸಾವು,ಬದುಕು ಮಗ್ಗುಲು ಮಲಗಿದೆ ಭರವಸೆ
ಕೊಚ್ಚಿ ಹೋಗಲಿ ನೋವುಗಳೆಲ್ಲಾ ಮಳೆಯ ನರ್ತನದಲ್ಲಿ
ಸೇರುವ ತವಕ ಹೆಚ್ಚಾಗಿದೆ ಹೊಸತನದ ಭಾವ ಅಳುಕುತ್ತಲೇ....

ಸುಂದರ ಜೀವನ

ಬಣ್ಣ ನೋಡಿ ಮರುಳಾಗಬೇಡ
ದ್ವೇಷಕ್ಕಿಂತ ಪ್ರೀತಿಯೇ ಚಂದ
ಇಂದು ಬದುಕು, ನಾಳೆ ಸಾವು
ತಲೆ ಎತ್ತಿ ನಡೆ ತುಟಿಯಂಚಲಿ ನಗುವಿನೊಡನೆ
ಅವಕಾಶಗಳ ಕೈಚಲ್ಲಬೇಡ
ಜೀವನ ತುಂಬಾ ಚಿಕ್ಕದು ಹಾಗು ಸುಂದರ||

ಬೆಂಕಿ

ಕೆಂಪು ಕೆನ್ನಾಲಿಗೆ, ಸೆಳೆಯುವ ಬಿಸಿಯಾದ ಕೈಗಳು
ಧಗಧಗಿಸುವುದೋ ಇಲ್ಲ ನರಳುವುದೋ ಹಸಿವೆಯಿಂದ
ಆರಂಭ ಚಿಕ್ಕದಾದರೂ ಅಂತ್ಯ ಅನಂತ...
ಎಲ್ಲವನ್ನೂ ತೆಕ್ಕೆಗೆ ಹಾಕಿಕೊಳ್ಳುವ ತರಾತುರಿ
ಕಷ್ಟ ಹಾಗು ಕಠಿಣ ತೆರೆದ ಸಾವಿನ ಕದ ಮುಚ್ಚಲು
ಹಸಿವು ಹೆಚ್ಚಾದರೆ ಆಹುತಿ ಅನಿವಾರ್ಯವೆಂಬ ಸಂಕೇತ||

ಸುಡುವ ಪ್ರೀತಿ

ಪ್ರೀತಿ ಸುಡುವ ಮೇಣದ ದೀಪ
ನಿಭಾಯಿಸುವುದು ಸುಲಭವಲ್ಲ
ಸುಡುತ್ತೆ, ಆದರೂ ಅದರಲ್ಲೇನೋ ಹಿತವಿದೆ
ಜೀವನವೆನ್ನುವ ಉತ್ಸವಕ್ಕೆ ಅರ್ಥ ತುಂಬಿದೆ||

ಅದು ಸೂರ್ಯಾಸ್ತ,
ಸುಡುವ,ಸತಾಯಿಸುವ ರಸಿಕತೆ
ಅದೊಂದು ಪ್ರಣಯ ಗೀತೆ
ಕೇಳಿದರೆ ಕುಣಿಯುವಂತೆ ಪ್ರೇರೇಪಿಸುತ್ತದೆ||

ಏಂಜಲ್ ವಿಂಗ್ಸ್



ಹೃದಯಾಕಾರದ ಹಸಿರು ತೇರು
ಕೆಂಪು,ಬಿಳಿ,ನೇರಳೆ,ಹಳದಿ ಬಣ್ಣದ ಚಿತ್ತಾರ
ನೋಡುಗರ ಮನಸೆಳವ ಚಿತ್ರಾಂಗದೆ
ಮೊದಲ ನೋಟಕ್ಕೆ ಮನಸೆಳವ ಅಪ್ಸರೆ
ರೆಕ್ಕೆಗಳೋ? ಇಲ್ಲ ಮೈಮಾಟವೋ?
ಚಿತ್ತಾಕರ್ಷಕ ಮೆರುಗು ಪಡೆದ ತಾರೆ
ಸ್ವರ್ಗದಿಂ ಇಳಿದ ಇಳೆಯನಾಳುವ ದೇವತೆ|| 

ಜೀವನ ರಹಸ್ಯ

ಕ್ಯಾಲೆಂಡಿರಿನ ದಿನಗಳು ಉರುಳಿಹೋಗುತ್ತಿದೆ
ಕಾಲನ ನಡೆ ಎತ್ತ ಕಡೆಗೋ?
ಸಮಯವನ್ನು ಮಾತ್ರ ನಾವು ವ್ಯಯಿಸುತ್ತಿದ್ದೇವೆ
ರಾತ್ರಿ,ಬೆಳಗು ನಿಲ್ಲದ ಚಕ್ರ
ಬದುಕ ಬಂಡಿಯ ಎಳೆಯುತ್ತಿರುವರು ಯಾರು?

ವ್ಯವಸ್ಥಿತ ಪಿತೂರಿ ಕಾಲನದು
ವಯಸ್ಸಾಗುತ್ತಿದ್ದಂತೆ ಶಕ್ತಿ ಕಡಿಮೆ
ಶಕ್ತಿ ಕಡಿಮೆಯಾಗುತ್ತಿದ್ದಂತೆ ಬದುಕಬೇಕೆಂಬ ಚಪಲ ಹೆಚ್ಚು
ಸಾವಿನ ಬಾಗಿಲ ಯಮ ತಟ್ಟುತ್ತಿರುವಾಗ ಜೀವನ ಪ್ರೀತಿ ಸೆಳೆತ ಯಾಕೋ?

ಜಗಳ,ಮನಸ್ತಾಪ,ಹುಚ್ಚು ಮನಗಳ ನಡುವೆ
ಬೇಡವೆಂದರೂ ನಾವೇ ತೋಡುವೆವು ದೊಡ್ಡ ಕಂದಕ
ಕೋಪ,ದ್ವೇಷದ ಕೆನ್ನಾಲಗೆಯ ಚಾಚಿ ಸುಡುವೆವು
ಪ್ರೀತಿ-ಪ್ರೇಮದ ಬಲೆಯ ಕ್ಷಣ ಮಾತ್ರದಿ ಕಳಚುವ ಈ ಪರಿ ಯಾಕೋ?

ಹುಟ್ಟು-ಸಾವು ಜೀವನದ ಎರಡು ಕೊನೆಗಳು
ಜನನ ಆಕಸ್ಮಿಕವಾದರೂ ನಡೆವ ಜೀವನ ದಾರಿ ಸತ್ಯ
ಜೀವನ ಹೀಗೆ ನಡೆಯಬೇಕೆಂಬ ನಿಯಮವಿಲ್ಲ ಯಾರಿಗೂ
ಜೀವನದ ಕೊನೆ ಮುಟ್ಟುವುದು ಅನಿವಾರ್ಯವಾದರೂ ಈ ಜೀವನದ ಅನುಭವದ ಗುರಿಯಾದರೂ ಏನು?

ಬಂದು ಹೋಗುವ ನಡುವೆ ಎಷ್ಟೊಂದು ಬಯಕೆಗಳು
ಕೊನೆ-ಮೊದಲಿಲ್ಲದೆ ಸೆಳೆವುದು,ಕಾಡುವುದು ಸತತ
ನಾನೇ ಎಲ್ಲವೂ,ಎಲ್ಲವೂ ನನ್ನದೇ ಹುಚ್ಚು ಹಂಬಲ
ಎಂದೂ ತನ್ನದಾಗದ,ಯಾರಿಗೂ ಕೈವಶವಾಗದ ಈ ಜೀವನ ರಹಸ್ಯವಾದರೂ ಏನು?

ಒಳದನಿ

ನನ್ನೊಳಗೆ ಒಬ್ಬ ಅವಿತಿಹನು
ಯಾವಾಗ ಏಳುವನೋ?
ಯಾವಾಗ ಮಲಗಿರುವನೋ?
ಹೇಳಲಾಗದು ಅವನ ಬಗೆ||

ಏನನ್ನೊ ನೋಡಿದಾಗ
ಮನಕಲಕುವುದ ಕಂಡಾಗ
ಸೌಂದರ್ಯ ಸುಧೆಯ ಅನುಭವಿಸಿದಾಗ
ಕವಿಯಾಗಿ ಹಾಡುವನು ಒಳಗಿಂದೆ||

ನೋವೋ? ನಲಿವೋ?
ಕವಿತೆಯಾಗುವುದು ಅವನಿಂದೆ
ಯಾವ ರಾಗಕ್ಕೂ ಮನಸೋಲದೆ
ಪದಗಳೇ ತಾನಾಗಿ ಹಾರವಾಗುವುದು ತಾಯಿಗೆ||

ಬಾ ಎಂದಾಗ ಬಾರದವನು
ಬರಬೇದವೆಂದಾಗ ಬರುವನು
ಏನ ಹೇಳಲಿ ಅವನ ಚರ್ಯೆ
ಸದಾ ಒಳಒಳಗೆ ಕಾಡುವನು||

ನಾನೇ ಅವನಾಗಿ
ಅವನು ಎಲ್ಲವೂ ಆಗಿ
ಬದುಕ ಪಥವ ಹರವಿದನು
ಅನುಭವ ಸುಧೆಯ ಕುಡಿಸಿದನು||

ಗುಲಾಬಿ

ಸೂರ್ಯ ಹೊರಳಿದ
ಆಕಾಶ ಮಂಕಾಯಿತು
ಗಾಳಿ ಬಿರುಸಾಗಿ ಬೀಸಿತು
ಬೆನ್ನ ಮೇಲೆ ನಾ ಹೊರಳಿದೆ||

ಮಳೆಗೆರೆಯಿತು
ನೀರಲ್ಲಿ ಮುಳುಗಿದೆ
ತಲೆ ಎತ್ತಿ ನಿಂತೆ
ಮಳೆ ನೀರು ಕುಡಿಯುತ್ತಾ||

ಉತ್ಸಾಹ ಇಮ್ಮಡಿಸಿತು
ನನ್ನೊಳಗೆ ಹೇಳಿಕೊಂಡೆ" ದಯವಿಟ್ಟು ಅಳಬೇಡ"
ನನ್ನ ದಳಗಳು ಕಣ್ಣೊರೆಸಿದವು
ಅವು ಒಣಗುವವರೆಗೂ||

ಮೋಡಗಳು ಕಣ್ಮರೆಯಾದವು
ಸೂರ್ಯ ಮೆಲ್ಲಗೆ ಕಣ್ತೆರೆದ
ನನ್ನೊಳಗಿನ ಸೌಂದರ್ಯ
ಆಗ ತಾನೆ ಬೆಳಗಲು ಶುರುವಾಯಿತು||

ಪ್ರೇರಣೆ: ' The Rose' by Bille Jo.

ಬಿರುಗಾಳಿ

ನಾನು,ನಾನೊಂತರ ಸರ್ವಾಂತರ್ಯಾಮಿಯಂತೆ
ಮಾಳಿಗೆ,ಮಣ್ಣು ಹಾಗು ಆತ್ಮಗಳಲ್ಲಿ ನೆಲೆಸಿರುವೆ ಕಂಬನಿಗೆರೆಯುತ್ತಾ;

ಮಳೆಗೆರೆಯುವೆ ಅಳುವುದಕ್ಕಾಗಿ
ನಾನು ಸಾವಿಲ್ಲದವನು;

ಆಲಿಕಲ್ಲು,ಹಿಮ ಹಾಗು ಚಂಡಮಾರುತಗಳೆಲ್ಲಾ ನನ್ನದೇ ಆಟಗಳು
ನನಗೆ ಯಾವಾಗಲೂ ಮನುಷ್ಯರ ಬೇರೆ ಬೇರೆ ಹೆಸರುಗಳ ಆರೋಪಿಸುವರು;

ಜನರೆಲ್ಲಾ ನನ್ನನ್ನು ದ್ವೇಷಿಸುವರು ಹಾಗು ನನ್ನ ಮೇಲೆ ಹೋರಾಡಲು ಪ್ರಯತ್ನಿಸುವರು
ರಾತ್ರಿಯಲ್ಲಿ ನಾನು ಮರೆಯಾಗುವವರೆಗೂ ಅವರ ಪ್ರಯತ್ನ ನಡದೇ ಇರುತ್ತದೆ;

ಸಂಭ್ರಮಿಸುತ್ತಾರೆ ಈ ಜನ ನಾನು ಮತ್ತೆ ಬರುವವರೆಗೂ
ಅವರ ಒಳಒಳಗೇ ಕುದಿಯುತ್ತಿದೆ ನನ್ನ ಮೇಲಿನ ಕೋಪ ಹಾಗು ದ್ವೇಷ;

ಆದರೂ ನನ್ನಂತೆಯೇ ಇದ್ದಾನೆ ಮತ್ತೊಬ್ಬ
ಅವನ ನಿಮ್ಮೆಲ್ಲರ ಹೃದಯಗಳಲ್ಲಿ ಕಂಡು ಕಾಣದ ಹಾಗೆ,ನಿಮಗೆ ಏಕೆ ಕಾಣಿಸುವುದಿಲ್ಲ?;

ನಾನು ಇಲ್ಲಿ ಬರುವೆ ಹಾಗು ಹೋಗುವೆ
ನನ್ನಿಂದ ಗಾಳಿ,ಮಳೆ,ಮುರಿದ ಮನ ಹಾಗು ಹಿಮ;

ನೆನಪಿರಲಿ,ನೀವು ತಿಳಿಕೊಂಡಿರಬಹುದು ಬಿರುಗಾಳಿ ಹೊರಟುಹೋಯಿತೆಂದು
ಆದರೆ ಹಲವು ಹೃದಯಗಳಲ್ಲಿ ಬಿರುಗಾಳಿ ಯಾವಾಗಲೂ ಇದ್ದೇ ಇರುತ್ತದೆ;

ಪ್ರೇರಣೆ: 'Strom' by Melody Tadeo

ಮುರಿದ ವಂಶವೃಕ್ಷ

ನಾನೂ ಒಬ್ಬ ಹಲವರಲ್ಲಿ
ಮುರಿದ ಕೊಂಬೆಗಳ ಮರದ ಚಿಕ್ಕ ರೆಂಬೆ ನಾನು;
ಯಾವಾಗಲೂ ಮೇಲಕ್ಕೇರಿರುವ ರೆಂಬೆಗಳನ್ನೇ ಅನುಸರಿಸಿದವನು;
ರಕ್ಷಣೆ,ಮಾರ್ಗದರ್ಶನ ಹಾಗು ಆಂತರಿಕಶಕ್ತಿಗಾಗಿ;
ಚಿಕ್ಕದಾದರೂ ಬೇರೆ ರೆಂಬೆಗಳು
ಮುರಿದುಹೋಗದಂತೆ ತಡೆಯಲೆತ್ನಿಸುತ್ತಿರುವವನು;
ಯಾರು ಕಳಚಿಕೊಳ್ಳುವರೋ?
ಯಾರು ಜೊತೆಯಲ್ಲಿ ಉಳಿವರೋ?
ಈಗ ನಾನು ಒಬ್ಬಂಟಿಯಾಗಿ ನಿಂತಿದ್ದೇನೆ
ಮಳೆಯಿಂದ ತೊಯ್ದ ಭೂಮಿಯನ್ನು ನೋಡುತ್ತಿದ್ದೇನೆ
ಹಾಗು ಅನುಭವಿಸುತ್ತಿದ್ದೇನೆ ಮುರಿದ ರೆಂಬೆಗಳ ಭಾವ
ಮನದಲ್ಲಿ ನೋವ ಹರಡಿದೆ;
ಎಷ್ಟು ಜನ ಗರಗಸದಿದ್ಮ ತಮ್ಮತನವ ಬೇರ್ಪಡಿಸಿಕೊಂಡರೋ
ನಮ್ಮ ಸಂಸ್ಕೃತಿಯ ಬೇರುಗಳ ಕಿತ್ತುಕೊಂಡರೋ
ನಮ್ಮ ನಾಶದ ದಿಕ್ಸೂಚಿಯ ತಲೆಮಾರಿನ ತಲೆಗಳಲ್ಲಿ ಬಿತ್ತಿದರೋ
ನನಗೇನಾದರೂ ಅಂತಹ ಗರಗಸ ಕೈಗೆ ಸಿಕ್ಕಿದ್ದೇ ಆದರೆ
ಸಮುದ್ರದಾಳಕ್ಕೆ ಎಸೆಯುವೆ ಮತ್ತೆ ಯಾರಿಗೂ ಸಿಗದ ಹಾಗೆ
ನನ್ನ ಮುಂದಿನ ತಲೆಮಾರುಗಳ ನಾಶವಾಗದಂತೆ ರಕ್ಷಿಸುವೆ;
ನಾನೂ ಒಬ್ಬ ಹಲವರಲ್ಲಿ
ಆದರೂ ಒಬ್ಬನೇ ಹೊರಡುತ್ತಿದ್ದೇನೆ
ಹೊಸ ಮನ್ವಂತರದ ಬೀಜಗಳ ಬಿತ್ತುವೆ
ಸುಂದರ ವೃಕ್ಷಗಳ ಅದರಿಂದ ಬೆಳೆಯುವೆ;

ಪ್ರೇರಣೆ:' A Broken Familiy Tree'
By Lori McBride.

ಅನುಭವ

ಅದು ತುಂಬಾ ಕಷ್ಟ
ಮನಸುಗಳ ಒಳಹೊಕ್ಕು
ತುಕ್ಕು ಹಿಡಿದ ಅಂತರಂಗವ
ಸೋಸಿ ನೋಡುವುದು ಬಲುಕಷ್ಟ||

ಹೇಳುವುದು ಸುಲಭ
ಮಾಡಿದ ಅಡುಗೆಗೆ ರಾಗ ತೆಗೆವುದು ಸುಲಭ
ರುಚಿರಿಚಿಯಾಗಿ ಅಡುಗೆ ಮಾಡುವುದು ಕಷ್ಟ
ಮಾಡುವವನ ಕಷ್ಟ ಹೇಳುವುದರಲ್ಲಿಲ್ಲ||

ಮೂಗಿನ ನೇರಕ್ಕೆ ಹೇಳುವುದು
ಎಲ್ಲವ್ಯ್ ಸುಲಭವೆನ್ನುವ ಭ್ರಮೆಗೆ ಎಲ್ಲರೂ ಬಲಿ
ಮಾಡುವಾಗಿನ ರಸ ಸಮಯದ ಅನುಭವ
ಕಾವ್ಯ ಮೆಲ್ಲುವ ರಸಿಕನೇ ಬಲ್ಲ||

ಕಷ್ಟ

ಅದು ತುಂಬಾ ಕಷ್ಟ
ನಾನು ಎಲ್ಲವನ್ನೂ ಎದುರಿಸುತ್ತಿದ್ದೇನೆ
ನೀನು ಕಾಣನಹುದು ನನ್ನ ಹೋರಾಟವನ್ನು
ಅದರೆ ನಾನು ಬೀಳುವುದ ನೀ ಎಂದೂ ನೋಡಲಾರೆ||

ಪ್ರೇರಣೆ: Joyce Alcantara

ಆ ಲೋಕ ಧರೆಗಿಳಿವುದೆಂತು?

ಕನಸು, ಮನಸಿನೊಳಗಿನ ಕನಸು
ಮನದ ಕನವರಿಕೆಯ ಕನಸು
ಕತ್ತಲಾಚೆಯ ಕನಸಲೋಕ
ಸೇರುವುದೆಂತು? ಬಳಸುವುದೆಂತು?
ಕೈಗೆ ಸಿಗದ,ಕಣ್ಣಿಗೆ ಕಾಣದ
ಆ ಲೋಕ ಇರುವುದೆಂತು?
ಭ್ರಮೆಯಲ್ಲೋ? ಇಲ್ಲ ವಾಸ್ತವದಲ್ಲೋ?
ದಾರಿ ತೋರುವರಾರು?
ಸುಂದರ ನೋಟ,
ಆಲಿಂಗನ,ಸಂತೋಷ,ಆಮೋಧ......
ಬೇಸರಿಸದೆ ಅನುಭವಿಸುವ ಆ ಪರಿ ಅಮೋಘ;
ಭರವಸೆಯ ಹೊಂಗಿರಣ ಹೊಮ್ಮಿಬರುತ್ತಲೇ
ಹೃದಯ ಎಲ್ಲವನ್ನೂ ಆಪೋಷಣ ಮಾಡಿದೆ
ಹೃದಯ ತುಂಬಿದರೂ ಉಕ್ಕಿ ಹರಿಯುತ್ತಲೇ ಇದೆ
ನೋವಿಲ್ಲದ,ಹಸಿವಿಲ್ಲದ,ಭಯವಿಲ್ಲದ
ಆ ಲೋಕ ಧರೆಗಿಳಿವುದೆಂತು?

ಕವಿತೆಯ ದನಿ

ಕವಿತೆ,ಕವಿತೆ
ತಾಯ ಮಮತೆಯಾಗಿ ನಿಂದೆ
ಏನೋ ಹೇಳ ಹೊರಟೆ?
ಎತ್ತಲಿಂದಲೋ ಬಂದೆ ಮಿಂಚಿ ಮಾಯವಾದೆ
ನಾನಿಹನೆಂದು ಸಾರ ಹೊರಟೆ;
ನೀತಿ,ತತ್ವ, ಸಂಪ್ರದಾಯ,ಸಂಸ್ಕೃತಿಯ ಮುಖವಾಡವಾದೆ
ಎಲ್ಲವೂ ತಾನೇ ಆಗಿ,ಎಲ್ಲವನ್ನೂ ಮೀರಿ ಹೊರಟೆ;
ಪ್ರೀತಿ,ದ್ವೇಷ,ಶೋಷಣೆಯ ದನಿಯಾಗಿ ಕಿಚ್ಚು ಹೊತ್ತಿಸಿದೆ
ಸರ್ವೋದಯ,ಸಮತೆಯ ಹಣತೆಯ ಹಚ್ಚ ಹೊರಟೆ;
ನೋವು ನವಿವು,ಭಾವ,ಉದ್ವಿಗ್ನ ಮನದ ತೊಳಲಾಟದ ದನಿಯಾದೆ
ಸಾಂತ್ವನ ಹೇಳುವ ತಾಯ ಕರುಳಾಗ ಹೊರಟೆ;
ಬದುಕ ದಾರಿಯ ಕತ್ತಲ ನೆಲಮಾಳಿಗೆಯ ಪಯಣದ ಜೊತೆಗಾರನಾದೆ
ನಿನ್ನಿರುವ ಅನ್ವೇಷಿಸುವ ಅನ್ವೇಷಕ ನಾನಾಗ ಹೊರಟೆ;
ಬಾ ಎನ್ನೆದೆಯ ಮನದ ಬಾಂದಳಕೆ
ಮನವ ಮಥಿಸಿ ಕವಿತೆಯಾಗಿ ಹೊಮ್ಮಿ ಬಾ
ಮನೆಯಂಗಳಕೆ,ಮನದಂಗಳಕೆ
ಚೈತನ್ಯದ ಚಿಲುಮೆಯಾಗಿ, ಒಲುಮೆಯಾಗಿ ಬಾ.

ಹಾರೈಕೆ

ಬೆನ್ನು ತಟ್ಟದ ಜನ,
ಮೇಲೇರಲು ಬಿಡದೆ ಕಾಲೆಳವ ಜನ,
ಬಿದ್ದಾಗ ನಗುವ ಜನ
ಹಿಂದೆ.ಮುಂದೆಲ್ಲವೂ ಇಂತಹ ಜನರ ಸಂತೆಯಲ್ಲಿ
ಒಂಟಿ ಪಯಣಿಗರು ನಾವು
ನೂರು ಕನಸ ಮೂಟೆ ಹೊತ್ತು
ಹೊರಟಿಹೆವು ನನಸಾಗಿಸುವ ದಾರಿ ಹಿಡಿದು
ನಮ್ಮ ನೋವು,ನಮ್ಮ ನಲಿವು
ಏನೇ ಆದರೂ ಹಂಚುವೆವು ಸ್ನೇಹದ ಸಿಹಿ
ನಮ್ಮ ಬಾಳಿಗೆ ಬರಲಿ ನೋವುಗಳ ಕಹಿ
ಅನುಭವಿಸುವ ಶಕ್ತಿ ನಿಮ್ಮ ಹಾರೈಕೆಯಲ್ಲಿರಲಿ||

ಕದನ

ಮನದೊಳಗೆ ನೂರು ಕದನ
ನಿಲ್ಲದ ಹೋರಾಟ ಅಂತ್ಯವೆಂದೋ?
ಹಿಂಸೆ,ನೋವು ಇಲ್ಲದ ಜಗವುಂಟೇ
ಮನದೊಳು ನಡೆವ ಈ ಕದನ ನಿರಂತರ||

ದೀಪ ಜ್ಯೋತಿ

ದೀಪ ಜ್ಯೋತಿಯೇ ಪರಂ ಬ್ರಹ್ಮ
ದೀಪಜ್ಯೋತಿಯೇ ಜನಾರ್ಧನ
ದೀಪವೇ ಮನದ ಚೈತನ್ಯವು
ಜೀವನ ಬೆಳಗುವ ದೀಪವೇ ನಿನಗೆ ನಮನ||

ಮನವ ಅರಳಿಸುವ ಆತ್ಮಜ್ಯೋತಿಯೇ
ಅಂಧಕಾರವ ಕಳೆಯುವ ಚೈತನ್ಯವೇ
ಆತ್ಮಶಕ್ತಿಯ ಬೆಳಗುವ ದೀಪವೇ
ನಿನ್ನ ಶಕ್ತಿಗೆ ನಮಿಸುವೆನು ಸದಾ||

ಪ್ರೇರಣೆ: ಸಂಸ್ಕೃತ ಶ್ಲೋಕ

ಹಿಂಸೆ ಮತ್ತು ನೋವು

ಹಿಂಸೆ ಮತ್ತು ನೋವು
ಪಡೆಯಲು ಬಹಳಷ್ಟಿದೆ
ಶಾಂತಿ ಮತ್ತು ಪ್ರೀತಿ
ಎಲ್ಲವೂ ಒಂದೇ
ಗೊಂದಲ ಮತ್ತು ಅನುಮಾನ
ನಾವಿಲ್ಲ ಅದ ಬಿಟ್ಟು
ನಾವು ಗೋಳಾಡುತ್ತೇವೆ
ನಾವು ಅಳುತ್ತೇವೆ
ನಾವು ಅಂಗಲಾಚುತ್ತೇವೆ
ನಾವು ಪ್ರಯತ್ನಿಸುತ್ತೇವೆ
ನಾವು ನಗುತ್ತೇವೆ
ನಾವು ಹಾಸ್ಯಮಾಡುತ್ತೇವೆ
ಏನೇ ಆದರೂ ಹಿಂಸೆಯೇ ಸರಿ
ಅದೂ ಕೊನೆಯ ಪ್ರಯತ್ನ
ಜೀವನ ಒಂದು ಪಾಠ
ಸರಿಯಾಗಿ ಕಲಿಯ ಬೇಕು ಅದರಿಂದ
ಮುಂದೆ ಒಂದು ದಿನ
ಅದೊಂದು ಉದಾಹರಣೆಯಾಗಬಹುದು

ಪ್ರೇರಣೆ:'Hurt and Pain' By Lora.

ಮೌನ ಕಣ್ಣೀರು

ಶ್!... ಆಲಿಸು
ಕೇಳಿಸದೆ ನಿನಗೆ,
ನಾನು ಅಳುತ್ತಿದ್ದೇನೆ ಆದರೆ ಅದು ಮೌನ ಕಣ್ಣೀರು,
ನಾನು ಮನದೊಳಗೆ ಆಳುತ್ತಿದ್ದೇನೆ ಅದಕ್ಕೆ ನಿನಗೆ ಕಾಣಿಸದು
ಎಲ್ಲಾ ನೋವುಗಳು ಮನದಲ್ಲಿ ಗಿರಿಕಿ ಹೊಡೆದು ಓಡುತ್ತಿವೆ
ನಾನು ಅಳುವೆ ನಿನಗಾಗಿ,
ನಾನು ಅಳುವೆ ನನಗಾಗಿ,
ನಾನು ಅಳುವೆ ಸಮಯಕ್ಕಾಗಿ ಆದರೆ ಅಳಲಾರೆ
ನೀನು ಆಲಿಸಿದರೆ ನಿನಗೆ ನನ್ನ ಮೌನ ಕಣ್ಣೀರು ಕೇಳಿಸಬಹುದು

ಪ್ರೇರಣೆ:' Silent Tears' By Amanda Smith

ನಿಶಬ್ದ

ಮಣಿಕಟ್ಟಿನ ಗಾಯದ ಗುರುತುಗಳ
ಮೇಲೆ ಕಣ್ಣಾಡಿಸುವೆ, ಅವು ಏನೋ ಹೇಳುತ್ತವೆ.
ಅದು ಹೀಗೇ ಇರಬೇಕೆಂದೇನೂ ಇಲ್ಲ,
ನಾನು ಮಾತನಾಡಬೇಕಷ್ಟೆ
ಒಳಗಿನ ಎಲ್ಲವನ್ನೂ ಹೊರಗೆಳೆಯಬೇಕು
ಆದರೆ ಹೃದಯವಿರುವವರಾರೂ ಇಲ್ಲ ಕೇಳಿಸಿಕೊಳ್ಳಲು
ಜೋರಾಗಿ ಅರಚಿದರೂ.....
ಮನೋವ್ಯಾಕುಲತೆ ಗಾಡಾಂಧಕಾರ
ಹೊರಗೆ ಬಾ.....
ನಿನ್ನ ಕಬಳಿಸಿ ಮಾತ ನುಂಗುವ ಮುನ್ನ.....

ಪ್ರೇರಣೆ:'In the Silence' By Rebecca Swadzba

ನಾ ಏಕಾಂಗಿ ಏಕೋ?

ಬಲ್ಲೆ ಈ ಜಾಗ ಹೊಸತಲ್ಲವೆನಗೆ
ಆದರೂ ಕಳೆದು ಹೋಗಿದ್ದೇನೆ ಏಕೋ?
ಮನೆಯವರೆಲ್ಲಾ ಜೊತೆಗಿದ್ದಾರೆ
ಆದರೂ ಈ ಹೃದಯ ಒಡೆದಿದೆ ಏಕೋ?
ಗೆಳೆಯರು,ಒಡನಾಡಿಗಳು ಎಲ್ಲರೂ ಇದ್ದಾರೆ ಇಲ್ಲಿ
ಆದರೂ ನಾನು ಏಕಾಂಗಿ ಏಕೋ?
ಪ್ರಕೃತಿ ಸೌಂದರ್ಯ ಮುಂದಿರಲು
ನಾನು ನಾನಾಗಿಯೇ ಇದ್ದೇನೆ ಏಕೋ?
ನಾನು ರಹಸ್ಯವಾಗಿಯೇ ಉಳಿಯುವೆನೇ...?

ಪ್ರೇರಣೆ: ' How could I be so lonely' By Cath Glasgow

ಪರವಶತೆಯ ಅನುಭವ

ಆ ಅನುಭವ ನನಗೆ ಬೇಕು
ನಿನಗೆ ಗೊತ್ತೇ?
ಪರವಶತೆಯ ಆ ಅನುಭವ
ಎಷ್ಟು ಸರಳ,
ಅದಾದರೂ ಎಲ್ಲದರ ಮಿಶ್ರಣ
ಪ್ರೀತಿ,ಕಾಮ,ಸಂತೋಷ,ನೋವು
ಎಲ್ಲವೂ.
ಆದರೂ,
ಆ ಅನುಭವ ನನಗೆ ಬೇಕು
ನಿನಗೆ ಗೊತ್ತೇ?
ಪರವಶತೆಯ ಆ ಅನುಭವ.

ಪ್ರೇರಣೆ: ' That Feeling of forever' By Laura

ಹಿಂತಿರುಗಿ ನೋಡದಿರು

ಹಿಂತಿರುಗಿ ನೋಡದಿರು
ನಿನ್ನ ಭೂತ ಕಾಲವ,
ಭೂತ, ಭೂತವೇ...
ಕಳೆದುಕೊಂಡದ್ದೇನೂ ಇಲ್ಲ.
ಮುಂದೆ ನೋಡು ಭವಿತವ್ಯದ ಕಡೆಗೆ
ನಿನ್ನ ದೂರದೃಷ್ಟಿಗೆ ಏನು ಕಾಣುವುದೋ
ನನ್ನ ನಿನ್ನ ಒಡನಾಟ ಎಂದೆಂದಿಗೂ....

ಪ್ರೇರಣೆ: 'Never look back' by Christina Renee Donnal

ನೀನು ಆಳುವೆ ನನಗಾಗಿ ಒಂದು ದಿನ

ನೀನೂ ಅಳುವೆ ನನಗಾಗಿ ಒಂದು ದಿನ, ನಾನು ನಿನಗಾಗಿ ಬಿಕ್ಕಿ ಬಿಕ್ಕಿ ಅತ್ತಂತೆ;
ನೀನೂ ಕಳೆದುಕೊಳ್ಳುವೆ ನನ್ನನ್ನು ಒಂದು ದಿನ, ನಾ ನಿನ್ನ ಕಳೆದುಕೊಂಡಂತೆ;
ನನ್ನ ಅವಶ್ಯಕತೆ ನಿನಗಾಗುವುದು ಒಂದು ದಿನ, ನಿನ್ನ ಅವಶ್ಯಕತೆ ನನಗಿದ್ದಂತೆ;
ನನ್ನ ನೀನು ಪ್ರೀತಿಸುವೆ ಒಂದು ದಿನ, ಆದರೆ ನಾನು ನಿನ್ನ ಪ್ರೀತಿಸಲಾರೆ;

ಪ್ರೇರಣೆ:'You'll cry for me someday' by Maria

ಓ ಪುಟ್ಟ ಮಗುವೇ

ಓ ಪುಟ್ಟ ಮಗುವೇ
ಮುಂದೆ ನೀ ಬೆಳೆದು ದೊಡ್ಡವನಾಗುವೆ
ಕಣ್ಣಮುಂದೆ ನೀ ಆಡಿ ನಗುವುದ ನಾ ನೋಡುವೆ
ಪ್ರತಿದಿನ ನಿನ್ನ ಮೇಲಣ ಪ್ರೀತಿ ಬೆಳವುದ ನಾ ಕಾಣುವೆ
ಈ ಒಲವಿನ ಮಾತ ಹೃದಯಪೂರ್ವಕವಾಗಿ ಹೇಳುವೆ
ನೀ ಹೇಗೇ ಇದ್ದರೂ ನಾ ನಿನ್ನ ಪ್ರೀತಿಸುವೆ

ಪ್ರೇರಣೆ: 'Little Baby' by Lisa

ಅನಿಶ

ನಾವು ಯಾವಾಗಲೂ ಭವಿಷ್ಯತ್ತಿನಲ್ಲಿ ಪರವಶರು;
ಭೂತದಲ್ಲಿ ಕಳೆದುಹೋದವರು
ಹಾಗು ನೋವುಗಳನ್ನು ಸಹಿಸುವವರು;
ಸದಾ ಲೆಕ್ಕ ಚುಕ್ತ ಮಾಡಲು ಹೆಣಗುವವರು;
ಕೆಲವು ಸಂಗ್ರಾಮಗಳನ್ನು ಸೋತವರು,
ಮತ್ತೆ ಕೆಲವನ್ನು ಗೆದ್ದವರು;
ಸದಾ ನಮ್ಮ ಪ್ರಾರ್ಥನೆಯನ್ನು ಯಾರಾದರೂ ಕೇಳಿಸಿಕೊಳ್ಳಲೆಂದು ಬಯಸುವವರು
ಸದಾ ಕೊರಗುವವರು ಕಣ್ಣಲ್ಲಿ ನೀರು ಕಾಣದ ಹಾಗೆ;
ಸದಾ ಯಾವುದಾದರೂ ಮುಖವಾಡ ಧರಿಸಿಕೊಂಡೇ ಓಡಾಡುವವರು;
ಏನೇ ಆದರೂ ಸದಾ ನಂಬಿಕೆಗಳನ್ನು ಬಲಪಡಿಸಿಕೊಳ್ಳುತ್ತಾ ಹೃದಯ ತುಂಬಿ ಬದುಕುವವರು

ಪ್ರೇರಣೆ:'Forever’  by Terri Nicole Tharrington 

ಮುಳ್ಳಿನ ಗುಲಾಬಿ

ಜೀವನ ಮುಳ್ಳಿನ ಗುಲಾಬಿಯಂತೆ
ಪರಿಪೂರ್ಣವಲ್ಲ ಆದರೂ ಸದಾ ರಮಣೀಯ;
ಜೀವನದ ಅಡತಡೆ,ಕಷ್ಟಗಳೇ ಮುಳ್ಳುಗಳು;
ಮೃಧುವಾದ ಕೆಂಪು ಎಸಳುಗಳೇ, ವಿನೋದ ಹಾಗು ಸುಂದರ ಕ್ಷಣಗಳು;
ಮೊಗ್ಗಾಗಿದ್ದಾಗ ಬೀಜಗಳನ್ನು ತಬ್ಬಿಕೊಂಡ ಎಸಳುಗಳೇ,
ಕುಟುಂಬದ ಸದಸ್ಯರು, ಗೆಳೆಯರು;
ನಮ್ಮನ್ನು ರಕ್ಷಿಸುವವರು,ಪ್ರೀತಿಸುವವರು;
ನಮ್ಮ ಬಗ್ಗೆ ಅತೀವ ಕಾಳಜಿಯುಳ್ಳವರು;

'A Thorny Rose' by Kirston D. Warfield 

ಜೀವನ ಸಂಗ್ರಾಮ

ಈ ಕದನ ನನಗೆ ಬೇಕಾಗಿಲ್ಲ
ಆದರೂ ನೀ ಕದನ ಘೋಷಿಸಿರುವೆ
ನಿನ್ನಿಂದ ಪಡೆದ ಒಂದೊಂದು ಹೊಡೆತವೂ
ನನ್ನನ್ನ ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿಸಿದೆ
ನಾನು ಶರಣಾಗುವುದಿಲ್ಲ;
ನಾನು ತ್ಯಜಿಸುವುದೂ ಇಲ್ಲ;
ನೀನು ನನ್ನನ್ನು ಸೋಲಿಸಲಾರೆ;
ನಾನು ನಿನ್ನನ್ನು ಗೆಲ್ಲಲು ಬಿಡುವುದೂ ಇಲ್ಲ;

ಪ್ರೇರಣೆ:' Life's own battle' by Emma Jackson.

ಬೆಂಕಿ

ನಾನೇ ಬೆಂಕಿಯಾಗಿದ್ದೆ
ನನ್ನ ಮನೆಯಲ್ಲಿ ಕತ್ತಲು,ನಿರಾಸೆ ತುಂಬಿತ್ತು
ನೆಮ್ಮದಿ ಹಾಗು ನಿರ್ಮಲವಾಗಿ ನಿದ್ದೆ ಹತ್ತಿತ್ತು||

ಶಬ್ದ,ನೀರವತೆಗೆ ಭಂಗ ತಂದಿತ್ತು
ಶಬ್ದ,ಹಾವಳಿ ಜಾಸ್ತಿಯಾಯಿತು
ಆದರೂ ನನ್ನ ಜೀವ ಉಳಿಯಿತು||

ಎಚ್ಚರಿಕೆಯಾಯಿತು
ಮನದಲ್ಲಿ ಗಾಬರಿ,ದ್ವಂದ್ವ,ನೋವು
ತಿಳಿಯಿತು ಏನಾಗಿದೆಯೆಂದು||

ಮನೆ ಹೊತ್ತಿ ಉರಿಯುತ್ತಿತ್ತು
ನನ್ನ ಅರಮನೆ,ಕೋಟೆ ಉರುಳುತ್ತಿತ್ತು ಕಣ್ಣಮುಂದೆ
ನನಗಾಗ ನಾಲ್ಕು ವರ್ಷ ವಯಸ್ಸು||

ಎಂದೂ ಮರೆಯಲಾರೆ
ತಾಯಿಯ ಮುಖದಲ್ಲಿನ ನೋವಿನ ಭಾವ
ಕಾಣುತ್ತಿತ್ತು ಶುದ್ಧ ಭಯ||

ಅವಳ ಉಟ್ಟ ಬಟ್ಟೆಗಳು
ಮಲಗೆದ್ದು ಕೆದರಿದ ತಲೆಗೂದಲು
ಬೇಗನೆ ಎಚ್ಚರಿಸಿದಳು ನನ್ನನ್ನು||

ನನ್ನ ವಿರಾಮದ ಜೊತೆಗೆ
ನನ್ನ ತಂಗಿ,ಅಣ್ಣ, ಹಾಗು ಅಪ್ಪ
ಅಮ್ಮನ ಪ್ರೀತಿ ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಿತು||

ನನ್ನ ಸಾಕು ಪ್ರಾಣಿಗಳ ಬಿಟ್ಟೆವು
ಅಸಹಾಯಕತೆ ಗಹಗಹಿಸಿತು
ನಮ್ಮನೆಲ್ಲಾ ತೊರೆದವು,ನೋವಿನಿಂದಲೇ||

ಎಲ್ಲವನ್ನೂ ಕಳೆದುಕೊಂಡೆವು
ಚಳಿಯ ಬಯಲಲ್ಲಿ ಬೆತ್ತಲಾದೆವು
ನಡುಗುತ್ತಾ ನಿಂತೆವು ಅಸಹಾಯರಾಗಿ||

ಪಕ್ಕದ ಮನೆಯವರನ್ನು ಕಂಡೆವು
ನಿರ್ಮಲತೆ,ಶಾಂತತೆ ವಿಶ್ರಮಿಸುತ್ತಿತ್ತು
ನಮ್ಮ ಮನದ ಬೇಗುದಿ ನರಳುತ್ತಿತ್ತು||

ಎಲ್ಲವೂ ನಮ್ಮನ್ನು ತೊರೆದವು
ನಮ್ಮ ನೆಲೆದಿಂದಲೇ ದೂರ ತಳಲ್ಪಟ್ಟೆವು
ಪ್ರೀತಿ ನರಳಿತು, ಬಾಳು ಕಾಯುತ್ತಿತ್ತು ಇನ್ನೂ ಹಲವು ವರುಷ|| 

 ಪ್ರೇರಣೆ: "The Fire" In Haiku by Mancinelli 

ತೆವಳುವ ಹಾದಿ

ಬೆಳಕು ಮೂಡುವುದು ಪ್ರತಿದಿನ
ಕತ್ತಲೆ ತೆರೆ ಎಳೆವುದು ಕನಸಿನಂತೆ
ನಿದಿರೆಯ ಕದಡುವುದು ಕನಸು
ಹೊರಟ ದಾರಿಯಲ್ಲಿ ಮುಂದೆ ಹೋಗಲಾರೆನು
ಬೆನ್ನ ತಿರುಗಿಸಿ ಓಡಿ ಹೋಗಲಾರೆನು
ಇದ್ದಲ್ಲೇ ಇದ್ದು ನರಳುವುದು ಹಿತವೆನಿಸಿದೆ
ಕತ್ತಲು-ಬೆಳಕು ಚಿತ್ರದಂತೆ ಬದಲಾಗುತ್ತಿದೆ
ಹೊಸ ಹುರುಪು ಬರಲಿ ಮುಂದೆ ತೆವಳುವ ಹಾದಿಗೆ
ಚೈತನ್ಯ ಮೂಡಲಿ ಮನದಲ್ಲಿ ಗತಿಸುವ ಬಾಳಿಗೆ||

ಪ್ರೇಮರಾಗ

ನಿನ್ನ ಪ್ರೀತಿಯ ಬಂಧನ
ಕಟ್ಟಿ ಹಾಕಿದೆ ನನ್ನ ಹೃದಯ
ವಿರಹದ ಮನಕೆ ನೀ ಬಾರೆಯ||

ಹಿಡಿದಿದೆ ನಿನ್ನ ನೆನಪ
ಶೃತಿ ಹಿಡಿದ ವಿರಹ
ನೋವಾಗದ ಹಾಗೆ ಈ ಹೃದಯ||

ಕೊರಳಲ್ಲಿ ಬಂಗಾರದ,
ಕರಿಮಣಿಯ ಮಂಗಲ ಸೂತ್ರ ಕಟ್ಟಿ
ಈ ಬಾಳಿಗೆ ನೀ ನಾದೆ ಸೂತ್ರದಾರ||

ಬೆಸೆಯುತಿದೆ ನಿನ್ನ ಪ್ರೀತಿ
ಹೃದಯದ ಕಣಕಣದಲಿ
ಮಿಡಿಯುತಿದೆ ಪ್ರೇಮಗಾನ||

ಬೆಸುಗೆ ಹಾಕಿ ಕೊಂಡಿದೆ
ಕೊರಳ ಸರ ಕಳಚಿದರೂ
ಬಿಟ್ಟೂ ಬಿಡದ ಪ್ರೇಮರಾಗ||

ಭರವಸೆ

ಭರವಸೆಯೆಂಬ ಹಕ್ಕಿ
ಎಲ್ಲರ ಮನದಲ್ಲೂ ಹಾರಾಡುವ ಹಕ್ಕಿ
ಆತ್ಮದ ಟೊಂಗೆಯ ಮೇಲೆ ಕುಳಿತಿಹ ಹಕ್ಕಿ
ಜೀವಂತಿಕೆಯ ಹಾಡ ಹಾಡುವ ಹಕ್ಕಿ||

ಕನಸು ಮುರಿದಾಗ ಹಾಡುವ ಹಕ್ಕಿ
ಕಣ್ಣಲ್ಲಿ ಕಂಬನಿ ಹರಿವಾಗ ಹಾಡುವ ಹಕ್ಕಿ
ಆತ್ಮಸ್ಥೈರ್ಯದ ರೆಕ್ಕೆ ಮುರಿದಾಗ ಹಾಡುವ ಹಕ್ಕಿ
ಭರವಸೆಯ ನೈತಿಕ ಶಕ್ತಿಯ ತುಂಬುವ ಹಕ್ಕಿ||

ಆತ್ಮದ ಕರೆಯ ಕೂಗುವ ಶಕ್ತಿ
ಮನದ ನೋವ ನೀಗುವ ಶಕ್ತಿ
ಹೊಸ ಭರವಸೆಯ ಬೆಳಕ ನೀಡುವ ಹಕ್ಕಿ
ಬಾಳ ಬಂಡಿಯ ಬದುಕು ಹಸನಾಗಿಸುವ ಹಕ್ಕಿ||

ಜೀವನ ಪ್ರೀತಿಸು ಎಂದು ಬೋಧಿಸುವ ಹಕ್ಕಿ
ಪ್ರಕೃತಿ ಮಾತೆಯ ಸ್ತುತಿಸುವ ಹಕ್ಕಿ
ಧ್ವೇಷ ಅಳಿಸಿ, ಪ್ರೀತಿ-ಶಾಂತಿಯ ಹಂಚುವ ಹಕ್ಕಿ
ಜೀವನ-ಮರಣಗಳಿಂದ ಮುಕ್ತಿ ಕೊಡುವ ಹಕ್ಕಿ||

ಪ್ರಾರ್ಥನೆ

ಎಲ್ಲವ ಕೊಡುವ ನಮಗೆ ದೇವ
ಏನಾದರೂ ಕೊಡುವ ತಿಳುವಳಿಕೆ ನಮಗೆ ನೀಡು ದೇವ||

ಬೆಳಕು ಕೊಡುವನು ಸೂರ್ಯ,
ತ್ರಾಣವ ನೀಡುವುದು ಗಾಳಿ,
ಹಸಿವ ಅಡಗಿಸುವ ಶಕ್ತಿಯ ನೀಡುವುದು ಭೂಮಿ,
ದಾಹವ ಕಳೆವುದು ನೀರು,
ವಾತ್ಸಲ್ಯವೆರೆಯುವ ಮಾತೆಯ ತೆರದಿ
ಏನಾದರೂ ಕೊಡುವ ತಿಳುವಳಿಕೆ ನಮಗೆ ನೀಡು ದೇವ||

ಬಿಸಿಲ ಬೇಗೆಗೆ ನೆರಳ ನೀಡಿ ತಣಿಸುವುದು ಮರಗಳು,
ಚೈತನ್ಯದ ಸುಗಂಧ ಸೂಸಿ ಹೂವಿನ ಉಡುಗೊರೆ ನೀಡುವುದು ಗಿಡಗಳು,
ಅಮೃತ ಸಮಾನವಾದ ಹಾಲಿತ್ತು ಸಲಹುವುದು ಆಕಳು,
ತ್ಯಾಗವೇ ಉಸಿರಾಗಿರುವ ತರು-ಲತೆಗಳ ತೆರದಿ
ಪರರ ಹಿತವ ಕಾಯುವ ತಿಳುವಳಿಕೆ ನಮಗೆ ನೀಡು ದೇವ||

ವಿದ್ಯೆ ಇಲ್ಲದವರಿಗೆ ಅಕ್ಷರವ ಧಾರೆ ಎರೆಯೋಣ,
ಮಾತಿಲ್ಲದವರಿಗೆ ವಾಣಿಯ ದನಿಯ ನೀಡೋಣ,
ಅನಾಥರಿಗೆ ಆಶ್ರಯ ನೀಡಿ ಸಲಹೋಣ,
ಏಳಿಗೆ  ಕಾಣದೆ ಬಿದ್ದವರ ನೋಡಿ ನಗದೆ ಕೈಹಿಡಿದು ಮೇಲೆತ್ತೋಣ,
ಧ್ವೇಷ ಕಾರುವವರ ಹೃದಯವ ಮಥಿಸಿ ಸಾಮರಸ್ಯದ ಭಾವ ಬಿತ್ತೋಣ,
ಕಾಯಕ ಜ್ಯೋತಿಯ ಬೆಳಗಿ ಹೊಸ ಆಲೋಚನೆಯ ವಿಧಾನ ಕಲಿಯುವ ತೆರದಿ
ವಿಶ್ವ ಶಾಂತಿಯ ಕಾಯುವ ತಿಳುವಳಿಕೆ ನಮಗೆ ನೀಡು ದೇವ||

ಬಿಡುಗಡೆ

ಇದು ಕನಸೋ?
ಇಲ್ಲ ವಾಸ್ತವವೋ?
ಒಂದೂ ತಿಳಿಯದಾಗಿದೆ
ಎಚ್ಚರವಾಯಿತು
ಯಾವಾಗ ನಿದ್ದೆಗೆ ಜಾರಿದೆನೋ?

ಬಹು ಮಂದಿ ಉಪನ್ಯಾಸಕರ ಮಾತಿನ ಮೋಡಿಗೆ ಬಿದ್ದೆ
ಮನದ ಆಲೋಚನೆಗಳೆಲ್ಲಾ ತಲಕೆಳಗಾದವು
ಆದರೂ ಉಸಿರಾಡುತ್ತಿದ್ದೇನೆ ಸಾಯದೆ
ಅರಗಿಸಿಕೊಳ್ಳಲಾಗದ ಮಾತುಗಳ ಮೆಲುಕುಹಾಕುತ್ತಾ....

ಅವರೆಲ್ಲರೂ ಹೊಡೆದ ಗುಂಡು
ಹೃದಯ ತಟ್ಟಿತೋ?
ಬುದ್ದಿಯ ತಟ್ಟಿತೋ?
ಮತ್ತೆ ಯಾರಾದರೂ ಮತ್ತೊಂದು ಗುಂಡು ಹೊಡೆಯಬಹುದೆಂದು

ಗುರಿ ಯಾವುದೋ? ಹೊಡೆದವನ ಕೈಚಳಕದ ಲೀಲೆ
ಹೃದಯ ಹರಡಿಹೆ
ಮೈಯ್ಯೊಡ್ಡಿ ನಿಂತಿಹೆ
ಯಾರ ವಶವಾಗುವೆನೋ ಮೋಹವಿಲ್ಲದ ವಿರಾಗಿ

ಯಾವ ಬೇಟೆಗಾರನ ಬಲೆಗೆ ಬೀಳುವೆನೋ ನಾನರಿಯೆ
ನಾನೊಲ್ಲೆನೆಂದರೂ ಬಿಡುವವರಾರು?
ಬಲೆ ಬೀಸಿ ಕಾದಿಹರು ನೂರು ಮಂದಿ
ಯಾರ ವಶವೋ? ಚಿತ್ತ ಭ್ರಮೆ ಕಣ್ಣುಮುಚ್ಚಿಹೆನು ಮೂಕನಾಗಿ

ಕೊನೆಯ ಗಳಿಗೆಗೆ ಉಸಿರು ಕಟ್ಟಿಹೆ
ನನ್ನ ಯಾರಾದರೂ ಹಿಡಿದೊಯ್ಯಲಿ
ನನ್ನ ಆತ್ಮ ಸ್ವತಂತ್ರವಾಗುವುದು
ಬಿಡುಗಡೆಯ ಸುಖ ನನ್ನದಾಗುವುದು

ಕಾಲ ಬರಲಿ
ಬೇಗ ಬರಲಿ
ಆತ್ಮ ಬಿಡುಗಡೆಯಾಗಲಿ....

ನೆನಪಿರಲಿ

ಜೀವನ ಪಥ ಸವೆಸುತ್ತಾ ಜಾರುತಿರಲು
ಏನೆಲ್ಲಾ ಮಾಡಿದೆನೆಂದು ಹಿಂತಿರುಗಿ ನೋಡಿದೆ
ಗುರಿ ಇಲ್ಲದೆ ಅಂಡಲೆದೆ
ಬೆರಗಾದೆ ಏನಾದೆ ಎಂದು||

ಎಲ್ಲವನ್ನೂ ಬಳಸಿದೆ ಮಿತಿ ಇಲ್ಲದೆ
ವಿಸ್ಮಯಗೊಂಡೆ ಗುರಿ ಸಾಧಿಸಿದೆನೆಂದು
ಪಾಠ ಕಲಿತೆ ಜೀವನದಿಂದ
ದಿಗಿಲುಗೊಂಡೆ ಒತ್ತಡದಿಂದ||

ಕಾಲಕ್ಕೆ ಶರಣಾದೆ
ಜೀವನ ಎಲ್ಲವನ್ನೂ ಕಲಿಸಿತು
ಜೀವನದಲ್ಲಿ ಪ್ರಯತ್ನದ ಅನುಭವ
ಎಲ್ಲವನ್ನೂ ಗಳಿಸಬಹುದೆಂಬ ಸತ್ಯವ ಹೇಳಿತು||

ಪ್ರತಿ ದಿನದ ಪ್ರಯತ್ನ ನಮ್ಮನೆಳೆವುದು
ನೆನಪಿಸಿಕೋ ನಾವು ಏನು ಕಲಿತೆವೆಂದು
ನೆನಪಿರಲಿ ಪ್ರಾರ್ಥನೆಗೆ ಸಮಯ ಮೀಸಲಿಡು
ಪ್ರತಿದಿನ ಅದರ ಅವಶ್ಯಕತೆ ಇದೆ ತಿಳಿ||

ಜೀವನ ಚಿಕ್ಕದಾಗಿರಬಹುದು
ಅನಿರೀಕ್ಷಿತ ಈ ಜೀವನ
ಹೊಡೆತಗಳನ್ನು ಅನುಭವಿಸುತ್ತೇವೆ
ಘಾಸಿಗೊಳಿಸುವುದಿಲ್ಲವೆಂಬ ಆಶಾವಾದದಿಂದ||

ನೀ ಯಾರೆಂದು ನೆನಪಿಸಿಕೋ
ನೀ ಏನಾಗಬೇಕೆಂದು ಬಯಸಿಹೆಯೋ
ಎಲ್ಲವೂ ಕೈಗೂಡುವುದು ತಿಳಿ
ಕಾಲ ಪರಿಪಕ್ವವಾದೊಡೆ||

ಮರೆಯಬೇಡ ನಾ ನಿನ್ನ ಪ್ರೀತಿಸುವೆ
ಜೀವನದ ಪ್ರತಿ ಅವಕಾಶ ಸಿಕ್ಕಾಗಲೂ
ಸಮಯ ಚಿಕ್ಕದಿರಬಹುದು
ಪಶ್ಚಾತ್ತಾಪ ಪಡಲು ಸಮಯವಿರಲ್ಲ ತಿಳಿ||

ಈ ಜೀವನ ಚೈತನ್ಯವಾದುದು
ನಾವು ಕಂಡುಕೊಂಡಂತೆ ಅದು
ವಿಧ್ಯಮಾನ, ಬಿಡುವಿಲ್ಲದ
ಸಮಯದ ಪಾತ್ರೆ ಖಾಲಿ ಖಾಲಿ||

ನೀ ಯಾರೆಂದು ನೆನಪಿಸಿಕೋ
ನೀ ಏನಾಗಬೇಕೆಂದು ಬಯಸಿಹೆಯೋ
ಸಮಯ ಅಲ್ಪಾಯು ಆಗಬಹುದು
ಯಾವ ಕೆಲಸವನ್ನೂ ಮಾಡದೇ ಇರಬೇಡ ತಿಳಿ||

ನೆನಪಿಸಿಕೋ ನಿನ್ನ ಕುಟುಂಬದವರನ್ನು
ಅವರೇ ನಿನಗಾಗುವವರು ಕೊನೆಯವರೆಗೂ
ನಿನಗೆ ಅಗತ್ಯವಿರುವಾಗ ಆಗುವವರು ಅವರೇ
ಅವರನ್ನೆಂದೂ ಕೊಂಡುಕೊಳ್ಳವಾಗದು ತಿಳಿ||

ನೆನಪಿಸಿಕೋ ಅವರು ನಿನ್ನ ಪ್ರೀತಿಸುವರು
ಇಲ್ಲಿಯಾದರೂ ಅಥವಾ ಅಲ್ಲಿಯಾದರೂ
ಯಾವಾಗಲೂ ಅವರು ನಿನ್ನೊಂದಿಗಿರುವರು
ಸಹಾಯ ಮಾಡುವರು ಕಷ್ಟಗಳನೆದುರಿಸಲು ||

ಪ್ರೇರಣೆ: "Remember" by Dawn Jenson 

ಹೇಳಲಾಗದ ಮಾತುಗಳು

ಮಾತು ಬಾರದಾಗಿದೆ
ಕಣ್ಣೀರೇ ಮಾತಾಗಿದೆ
ಅರ್ಥವಾಗದ ಭಾವ ಲಹರಿ
ಮನದ ಶಾಂತ ಕಡಲ ಕದಡಿದೆ||

ಎದುರಲ್ಲೇ ಓಡಾಡುವಾಗ
ಹೇಳಲಾಗದ ಮಾತುಗಳು
ಮನದೊಳಗಿನ ಪ್ರೀತಿ
ಹೊರಬರಲಾರದೆ ನರಳಿತು||

ಎನಿತು ಪ್ರೇಮವೋ?
ಎನಿತು ವಾತ್ಸಲ್ಯವೋ?
ಕಾತರದ ಕಿವಿಗಳಿಗೆ
ರಸದೌತಣದ ಗಳಿಗೆ ಮರೀಚಿಕೆಯಾಯ್ತು||

ಕಾತರದ ಕಿವಿಗಳು
ಕಾಣದ ಕೈವಶವಾಗಿರೆ
ಮನದ ಮಾತುಗಳ ಉಲಿದರೆ
ಸಂತೋಷಪಡುವವರಾರು?||

ಏಳು!,ಎದ್ದೇಳು!
ಹೇಳುವೆನು ಮನದ ಮಾತೆಲ್ಲಾ
ಕೇಳಿಸಿಕೊಳ್ಳದೆ ಮಲಗಿರುವೆಯೇಕೆ?
ಹರಿವ ನದಿಗೆ ಅಡ್ಡಗೋಡೆಯಾಗಿಹೆಯೇಕೆ?||

ಧೋ,,, ಎನ್ನುವ
ಮಳೆಯ ಸದ್ದಿಗೆ
ಮನದ ಕೊರಗು
ಯಾರಿಗೂ ಕೇಳಿಸದೆ ಮರೆಯಾಯ್ತು||

ಮುದುಡಿದೆ ಮನ
ಮಾತು ಬಾರದಾಗಿದೆ
ಕಣ್ಣೀರೇ ಮಾತಾಗಿದೆ
ಕಟ್ಟೆಯೊಡೆದ ತೊರೆಯಾಗಿದೆ||

ಬೇಡದ ವಿರಸ

ಸರಿ ಬಾರದ ಮಾತುಗಳು
ತಂದವು ಗೊತ್ತಾಗದ ಕಲಹ
ಮನ-ಮನಗಳ ನಡುವೆ
ಹುಟ್ಟುಹಾಕಿತು ಬೇಡದ ವಿರಸ||

ಮನವ ನೋಯಿಸುವುದು ಬೇಕಿರಲಿಲ್ಲ
ವಿಷಯ ಹೇಳುವಾಗ ನಾಲಗೆ ಜಾರಿತು
ಆಮೇಲೆ ಎಲ್ಲವೂ ಇತಿಹಾಸ
ಬೇಡದ,ಬಯಸದ ಗುರುತುಗಳ ಹಾವಳಿ ||

ಮತ್ತೊಮ್ಮೆ ಇತಿಹಾಸ ಬರೆಯುವ
ಬಯಸುವೆ ಮಾತನಾಡಲು
ಪ್ರೀತಿಯ ಮಾತನಾಡಲು
ಜಾರುವ ನಾಲಗೆಯ ಪದಗಳ ಜಾಲಾಡುವ||

ಪ್ರೀತಿಯ ಮಳೆ

ಆ ಮೊದಲ ಗಳಿಗೆಗಳಲ್ಲಿ
ಗೊಂದಲ ತುಂಬಿದ ಮನದಲ್ಲಿ
ಬಯಕೆ ಹೊತ್ತ ಹೃದಯದಲ್ಲಿ
ಮೊದಲ ಪ್ರೀತಿಯ ಹನಿ ಜಾರುವ ಹೊತ್ತಲ್ಲಿ||

ಎದೆಯ ಬಡಿತ ಏರುತಿರೆ
ಆವೇಗದ ವೇಗ ಕೈಗೆ ಸಿಗದೆ
ಹುಚ್ಚು ಮನಸ್ಸಿನ ಬಯಕೆಯ
ತೊರೆ  ರಾಕೆಟ್ಟಿನಂತೆ ಹಾರಿದೆ||

ನರನರಗಳಲ್ಲಿ ರಕುತ ಧುಮ್ಮಿಕ್ಕುತ್ತಿದೆ
ನಿನ್ನ ಮನದಲ್ಲಿ ನೆನೆದು ನೆನೆದು
ಸಾವರಿಸಿ ಕೊಂಡು ಏಳಲಾಗದೆ
ನರಳುತಿಹೆನು ಹಿತವಾಗಿ ನಿನ್ನ ನೆನೆದು||

ಮತ್ತೆ ಬಾ ಮನದ ಅಂಗಳಕ್ಕೆ
ಬೇಡಿಕೊಳ್ಳುವೆ ನರಳಿಸು ಹಿತವಾಗಿ
ಪ್ರೀತಿಯ ಮಳೆಯಲ್ಲಿ ನೆನೆಸು,ವಿರಹದಿ ಬೇಯಿಸು
ಪ್ರೀತಿಯ ಒಲೆಯ ಮೇಲೆ ಮಿತವಾಗಿ||

ಅಮಿತ,ಅನಂತ,ಅನನ್ಯ

ಬೆಲೆಗಳೇರುತ್ತಿವೆ ನಾಗಾಲೋಟದ
ಸ್ಪರ್ಧೆಯ ಈ ಜಗದಲ್ಲಿ
ನಾವಂತೂ ಬೆಲೆಯ ಹಗ್ಗವ ಜಗ್ಗಿ ಹಿಡಿದಿದ್ದೇವೆ
ಈ ಸಂಸಾರದ ಜಂಜಾಟದಲ್ಲಿ||

ಕುತ್ತಿಗೆಗೆ ಸುತ್ತಿಕೊಂಡಿದೆ  ಹಗ್ಗ,
ಕೈಬಿಟ್ಟರೆ ಸಾವು ಖಂಡಿತ
ಬಿಡಲಾರೆವು,
ಹಾಗೆ ಹಿಡಿಯಲಾರೆವು
ಎಂಥ ಪರಿಸ್ಥಿತಿ ನಮ್ಮದು!

ಬದಲಾಗಬೇಕು ನಾವು
ಪರಿಸ್ಥಿತಿಗೆ ಹೊಂದಿಕೊಳ್ಳಬೇಕು
ಕಾಲನ ನಡೆಯ ಮುಂದೆ
ನಮಗೆ ಗೆಲುವಾಗಬೇಕು||

ಕಾರು,ಮನೆ,ಫ್ಲಾಟ್
ಪೆಟ್ರೋಲ್,ಡೀಸಲ್,ಗ್ಯಾಸ್
ಎಲ್ಲಕೂ ಬೆಲೆಯಿದೆ
ಎಲ್ಲವೂ ಏರುತ್ತಿದೆ||

ಪ್ರೀತಿ,ವಿಶ್ವಾಸ,ವಾತ್ಸಲ್ಯ
ಸಂಬಂಧ, ಗೆಳೆತನ
ಎಲ್ಲಕ್ಕೂ ಬೆಲೆಯಿದೆ
ಬೆಲೆ ಕಟ್ಟಲಾಗದ ಸಂಪತ್ತು
ಅಮಿತ,ಅನಂತ,ಅನನ್ಯ||

ಹೊಸತನದ ಪುಳಕ

ಕನಸ ಕಂಡಿರಲೇ ಇಲ್ಲ
ಆದರೂ ನಿಜವಾಯಿತೊಂದು ಭ್ರಮೆ
ಈಗ ಅದು ಭ್ರಮೆಯಲ್ಲ
ಸತ್ಯದ ನೆಲೆಯಲ್ಲಿ ಹೊಳೆಯುತ್ತಿರುವ ವಾಸ್ತವ||

ನಮ್ಮ ಶೂನಲ್ಲೇ ಕಾಲಿಟ್ಟು
ಆಗಿದ್ದೆವು ಕೂಪ ಮಂಡೂಕ
ಬಂತೊಂದು ಆಶಾಕಿರಣ
ಬಿಡುಗಡೆಯ ಹೊಸತನದ ಪುಳಕ||

ಮುಕ್ತ ಚೇತನ

ನಾನೆಂದರೆ ವರ್ಣನೆಗೆ ನಿಲುಕದವನು
ನಗು,ನೀಲಾಂಬರ ದಾಚೆ
ವಿವರಣೆಗೆ ಸಿಲುಕದ ಮುಕ್ತ ಚೇತನ,
ಮುಖವಾಡಗಳ ಹಿಂದೆ ಬಚ್ಚಿಡಲಾಗದ ಅನಿಕೇತನ||

ನಾನು ಭಾವೋದ್ದೀಪ್ತ ಪ್ರೇಮಿ
ಕವಿಗಿಂತ ಮಿಗಿಲು
ಅನುಭವದಲ್ಲಿ ಮಾಗಿದ್ದೇನೆ
ಅಕ್ಷರಕ್ಕಿಳಿಸುವ ಮೊದಲು||

ನಾನೇ ಎಲ್ಲವೂ
ಕೊನೆ ಅಣುವೆಂದರೆ ನಾನೇ
ವಿನಮ್ರತೆಯ ಕರುಣೆ
ಕನಸುಗಳ ಕದ್ದೊಯ್ಯುವವನು ನಾನೇ||

ಪ್ರಕೃತಿಯ ಸಣ್ಣ ಸಣ್ಣ ರಹಸ್ಯ
ಅರಿಯುವ ಪ್ರಯತ್ನ ನನ್ನದು
ಸಂಶೋಧನೆಯಲ್ಲಿ ಪ್ರಗತಿ
ಕಾಣುವ,ತಲುಪುವ ತವಕ ನನ್ನದು||

ತಿಳಿದಿದೆ ಪ್ರತಿಭೆ ಕಾಣಬಹುದು
ಕೆಲವೇ ಪದಗಳಿಂದ,ಕಾಯಕಗಳಿಂದ
ಹಲವು ಬಾರಿ ಈ ವಿದ್ವಾಂಸ,ಪಾಮರರು
ಕಂಡರೆ ಅಸಂಬದ್ದವೆನಿಸುವುದು||

ಹೊಸತನವಿದೆ ಮನದಲ್ಲಿ
ಕಲ್ಪನೆ ಮನದಲ್ಲಿ ನರಳುತ್ತಿದೆ
ಈ ಪ್ರಪಂಚವೇ ಹೀಗೆ, ಹುಡುಕಾಟದಲ್ಲಿ
ನಮ್ಮೊಳಗಿನ ಮಗುವನ್ನು ಕಳೆದುಕೊಳ್ಳುತ್ತೇವೆ||

ಕಲೆ ಮನಸೆಳವುದು
ಭಾವನೆ ನಮ್ಮನಾಳುವುದು
ಕಷ್ಟದಲ್ಲಿ ಜೀವಿಸುವವರನ್ನು,
ಬುದ್ದಿ ಇದ್ದೂ ಒದ್ದಾಡುವವರನ್ನು
ಕತ್ತೆಗಳೆಂದೇ ಹೇಳಲಾಗುವುದು||

ನನ್ನ ಸ್ಪರ್ದೆ ಯಾರೊಂದಿಗೂ ಇಲ್ಲ
ಮತ್ತೊಂದು ಆಟ ಆಡುವುದೊಂದೇ ಗುರಿ;
ಆದರೆ ಪ್ರತಿಭೆ ಎನ್ನುವ ಅನನ್ಯತೆ
ನಮಗೆ ಬೇರೆ ದಾರಿಯನ್ನೇ ತೋರುವುದು||

ನಾನು ಕಂಡು ಕೊಳ್ಳುತ್ತಿದ್ದೇನೆ ನನ್ನಲ್ಲಿ
ಕನ್ನಡಿ,ಕುಂಟು ನೆಪ ಬೇಕಿಲ್ಲ;
ನನ್ನೊಳಗಿನ ಚೈತನ್ಯಕ್ಕೆ ನೀರೆರೆದರೆ
ಅದೇ ನನ್ನನ್ನು ದಿಗಂತಕ್ಕೇರಿಸುವುದೆಂದು||

ಪ್ರೇರಣೆ:'I am More" by Dave Wood.

ನನ್ನ ಆವರಿಸಿಹ ಕನಸುಗಳಾವುದು?

ಕ್ಷಣ, ನಿಮಿಷ;
ಮಮ, ನಿಮಿತ್ತ;
ಆಲೋಚನೆ, ಲೋಚನ
ಭಯದ ಹೃದಯ,
ಬಯಸುವ ಹೃದಯಗಳ
ಹಿಂದೆ ಬಿದ್ದಿರುವ ವಿಲಾಸಿ;
ವಿರಹದಿ ಸಾಯುವ ವಿರಹಿ;
ಕನಸುಗಳ ಕದ್ದೊಯ್ಯುವ ಕಳ್ಳ;
ಸಂತೋಷದ ಒಸಗೆ ನೀಡದ ನೀಚ ಪ್ರೇಮಿ;
ಯಾರು ನಾನು?
ನನ್ನ ಆವರಿಸಿಹ ಕನಸುಗಳಾವುದು?

ನನ್ನ ಬಳಸಿಹ ಮೋಹ ಅದಾವುದು?

ಪ್ರೀತಿಯಲ್ಲಿ ದೇವದಾಸ;
ಕಾವ್ಯರಸ;
ಕಾವ್ಯದರಸ;
ಶೃಂಗಾರ ವಿಲಾಸ;
ಬರವಣಿಗೆಗೆ ಮೊದಲು
ಅನುಭವ ಕೈ ಹಿಡಿದಾಗ ಮನೋಲ್ಲಾಸ!
ಮನಸ್ಸಿಗೆ ಮಹೋಲ್ಲಾಸ,ಉತ್ಸಾಹ!
ಯಾರು ನಾನು?
ನನ್ನ ಬಳಸಿಹ ಮೋಹ ಅದಾವುದು?

ಎಲ್ಲಕ್ಕಿಂತ ಮಿಗಿಲು ಯಾವುದು?

ಮಾತಿಗಿಂತ ಮುಗುಳ್ನಗು,
ನಾಚಿಸುವ ನೀಲಿ ಕಂಗಳು,
ಉತ್ತರಿಸುವ ನೀಲಿ ನಭ;
ಬಿಕ್ಕಳಿಸುವ ಕರಿ ಮೋಡ;
ಮುಖವಾಡದ ಹಿಂದಿನ ಸತ್ಯಗಳು;
ಸತ್ಯವೆನಿಸುವ ಸುಳ್ಳುಗಳು;
ಸೌಂದರ್ಯದ ಹಿಂದಿರುವ ಕರಾಳತೆ;
ಸ್ವಾರ್ಥದ ಮುಖವಾಡ ತೊಟ್ಟ ಮುಗ್ಧತೆ;

ಯಾರ ತೊಳಲಾಟದ ಶಾಪವೋ?

ಸತ್ಯ ಹೇಳಲೇಬೇಕಾಗಿದೆ
ನಿನ್ನ ಅವಶ್ಯಕತೆ ನನಗಿದೆಯೆಂದು
ನಿನ್ನೊಂದಿಗಿನ ಮಾತುಗಳ,
ರಾತ್ರಿಗಳ ಕಳೆದುಕೊಂಡಿದ್ದೇನೆ
ಹಂಚಿಕೊಂಡ ದುಃಖ,ನಗು ಎಲ್ಲಿ ಹೋಯಿತೋ?||

ನಮ್ಮೊಳಡಗಿರುವ ಅನಂತ ಚೈತನ್ಯ
ಭೂಮಿಯ ಒಂದು ತುದಿಯಿಂದ
ಮತ್ತೊಂದು ತುದಿಗೆ ಹೊರಳುವುದೇ?
ನಮ್ಮ ಇರುವಿಕೆಯ ಅನುಭವ ನಮಗಾಗುವುದೇ?
ಏಕೆ ಬಂದೆವೋ? ಈ ಬದುಕ ಗುರಿ ಏನೋ?||

ಒಂದೇ ನಾನು,ನೀನು
ಆದರೂ ತುದಿಗಾಲಲ್ಲಿ ನಿಂತಿದ್ದೇವೆ
ಹೊಡೆದಾಡಲು,ಬೈದಾಡಲು
ಮಮತೆಯ ಮನಸುಗಳ ದ್ವೇಷ
ಯಾರ ತೊಳಲಾಟದ ಶಾಪವೋ?||

ಅರ್ಥವಾಗಿದೆ ಮನಸ್ಸಿನ ತೊಳಲಾಟ
ಸಂತೈಸದ ಈ ಮನಸ್ಸಿಗೆ ನೋವಿದೆ
ನನ್ನೊಳಗಿನ ನೋವುಗಳು ನಿನ್ನ ಮನದಲ್ಲಿ
ಆತಂಕ ಹೆಚ್ಚಿಸಬಹುದೆಂಬ ಭಯ ಮನದಲ್ಲಿ
ಮೂಡಿ ಮಾತು ಬಾರದಾಗಿದೆಯೇನೋ?||

ಎಲ್ಲಕ್ಕೂ ಕೊನೆಯಿದೆಯಲ್ಲವೇ?
ಇತಿಹಾಸದಲ್ಲಿ ಮೆರೆದವರೆಲ್ಲರೂ
ಏನಾದರೋ ಅಚ್ಚಳಿಯದೆ ಉಳಿದಿದೆ
ಎಲ್ಲವೂ ಬದಲಾಗಲಿದೆ
ನನ್ನೊಳಗಿನ ನೋವುಗಳಿಗೆ ಸಾವು ಬರಲಿದೆ
ಅದುಮಿಟ್ಟುಕೊಂಡಿರುವ ಮಾತುಗಳೆಲ್ಲಾ ಮಧುರವಾಗಿ
ಚಿಗುರೊಡೆಯುವುದೇ ಮತ್ತೆ?||

ನನ್ನೊಡನೆಯೇ ಇರು

ನನ್ನೊಡನೆಯೇ ಇರು,ಬಿಗಿಯಾಗಿ ನನ್ನ ಕೈಗಳ ಹಿಡಿ
ಅವಶ್ಯಕತೆ ಇದೆ ಇಲ್ಲೇ ಬಳಿಯಲ್ಲೇ ನಿಲ್ಲು,
ಮೋಡಗಳು ಕಣ್ಣೀರಿಡುವವರೆಗೂ,
ಈಗೇಕೋ ನೋವೇ ಇಷ್ಟವಾಗುತ್ತಿದೆ;
ನೀ ಜೊತೆ ಇರಲು ಎಲ್ಲವನ್ನೂ ಅನುಭವಿಸುವೆ ಸಂತಸದಿ
ಆದರೆ ಕತ್ತಲೆಂದರೆ ಭಯವೆನಗೆ,ನನ್ನೊಡನೆಯೇ ಇರು||

ನನ್ನೊಡನೆಯೇ ಇರು,ನೀನೊಬ್ಬನೇ ನನಗೆ ಬೇಕಾದವನು
ನಿನ್ನ ಉಸಿರು,ನಿನ್ನ ಗೆಳೆತನ, ಮನವ ಮುದಗೊಳಿಸುವುದು
ಏಕಾಂಗಿತನದ ಧ್ಯೋತಕವಾಗಿರುವ ಈ ಕೋಣೆಯ ಸುಟ್ಟುಬಿಡೋಣ
ಒಡೆದ ಹೃದಯವ ಗೆದ್ದವನು ನೀನು,ನನ್ನೊಡನೆಯೇ ಇರು||

ನನ್ನೊಡನೆಯೇ ಇರು,ಅವಶ್ಯಕತೆ ಇದೆ ಇಲ್ಲೇ ಬಳಿಯಲ್ಲೇ ನಿಲ್ಲು
ನನ್ನ ಕೈಹಿಡಿ,ಮೋಡಗಳು ಕಣ್ಣೀರಿಡುವವರೆಗೂ
ಆದರೆ ಕತ್ತಲೆಂದರೆ ಭಯವೆನಗೆ,
ನೀ ಜೊತೆ ಇರಲು ಏನೋ ಒಂದು ರೀತಿಯ ಸಮಾಧಾನ
ಈ ಒಂದು ರಾತ್ರಿ ಕನಿಕರಿಸು,ನನ್ನೊಡನೆಯೇ ಇರು||

ನನ್ನೊಡನೆಯೇ ಇರು
ಈ ಜೀವನ ಹಿಂದೆ ಹೀಗಿರಲಿಲ್ಲ
ನಿನ್ನ ಭೇಟಿಯಾದೆ, ಎಲ್ಲಾ ಕಟ್ಟಳೆಗಳ ಮುರಿದೆ;
ಬಿಡುಗಡೆ ದೊರೆಯಿತು,ಬೆಳಕ ಕಂಡೆ
ಕನಿಕರಿಸು, ಈ ರಾತ್ರಿ ನನ್ನೊಡನೆಯೇ ಇರು||

ನನ್ನೊಡನೆಯೇ ಇರು, ಸಮಯ ಕ್ಷೀಣಿಸುತ್ತಿದೆ
ದೂರ ಹೋಗದಿರು,ಬಾಗಿಲು ತೆರೆದಿದೆಯೆಂದು
ದೂರ ಹೋಗದಿರು, ಹಿಂಸೆ ಇವನಿಂದ ಎಂದು
ಜೊತೆಯೆಲ್ಲೇ ಇರು ಕಣ್ಣ ಮುಂದೆ, ಕಣ್ಣು ಮುಚ್ಚುವವರೆಗೂ
ನಿನ್ನ ನೋಡುತ್ತಾ ಕಣ್ಣು ಮುಚ್ಚಿದರೆ ನಿನ್ನ ಬಿಂಬ ಮಾಸದೆ
ಮನದಲ್ಲಿ ಅಚ್ಚೊತ್ತುವುದು ಮತ್ತೆ ಏಳುವವರೆಗೂ....

ಪ್ರೇರಣೆ:'Stay with me" by AiyaH De Torres

ಸಣ್ಣ ಸಣ್ಣ ಹಾರೈಕೆಗಳು


ಸಣ್ಣ ಹಾರೈಕೆಗಳು ಮುದ್ದಾದ ಸುಗಂಧ ಸೂಸುವ ಹೂವಿಗೆ,
ಮಗುವೇ, ನಾನು ನಿನಗೆ ಹಾರೈಸುವೆ;
ಎಂದೆಂದಿಗೂ ಹೂವಿನಂತೆ ನಗುತ್ತಲೇ ಇರು ಹಾಗು ಬೆಳೆಯುತ್ತಲೇ ಇರು,
ಪ್ರೀತಿಯಿಂದ  ಎಲ್ಲಕ್ಕೂ ನಾನು ನಿನ್ನ ಬೆನ್ನೆಲುಬಾಗಿ ನಿಲ್ಲುವೆ ||

ಸಣ್ಣ ಕನಸುಗಳ ಕಾಯುವವನು, ದೊಡ್ಡದಾಗಿ ಹಾರೈಸುವೆ,
ಈ ಪ್ರಪಂಚವೇ ನಿನ್ನ ರಂಗ ಮಂದಿರ, ತೋರು ನಿನ್ನ ಚಮತ್ಕಾರ,ಚಾಕಚಕ್ಯತೆ;
ನೀನು ಇಲ್ಲಿ ಇಂಪಾಗಿ ಹಾಡು ಮತ್ತು ನರ್ತಿಸು,
ನಿನ್ನ ದಾರಿಯಲ್ಲಿ ಬರುವುದೆಲ್ಲವನ್ನೂ ಸಂತೋಷದಿಂದಲೇ ಅನುಭವಿಸು||

ಸಣ್ಣ ಭರವಸೆ ಈ ದೊಡ್ಡ ಪ್ರಪಂಚದಲ್ಲಿ,
ಹೊರಗಿನ ಯಾವ ಶಕ್ತಿಯೂ ನಿನ್ನೊಳಗಿನ ಚೈತನ್ಯವನ್ನು ತಡೆಹಿಡಿಯಲಾಗದು;
ಬೆವರ ಸುರಿಸು, ಸಪ್ಪಳ ಮಾಡು, ಕೊಳಲ ನುಡಿಸು,
ಆ ಸಂಗೀತವನ್ನು ಸಂತೋಷದಿಂದಲೇ ಆಸ್ವಾದಿಸುವೆ||

ಸಣ್ಣ ಸಣ್ಣ ಮುತ್ತುಗಳು ಪ್ರೀತಿಯ ಮಗುವೇ,
ಎಷ್ಟು ಬೇಗ ಬೆಳೆಯುತ್ತಿದ್ದೀ, ಗೊತ್ತೇ ಆಗದೆ;
ನಿನ್ನ ಕಾಲ ಮೇಲೆ ನಿಲ್ಲುವ ಕಾಲ ದೂರ ಉಳಿದಿಲ್ಲ,
ನಿನ್ನದೇ ಕನಸುಗಳ ಬೆನ್ನತ್ತುವ ಶಕ್ತಿಯೂ ಬಂದಾಯ್ತು||

ಪ್ರೀತಿಯ ಮಗುವೇ, ನಾ ನಿನ್ನ ಪ್ರಿತಿಸುವೆ,
ನೀನೇ ನನ್ನ ಕನಸುಗಳ ಕನಸು;
ನೀನೇ ನನ್ನ ಹಾರೈಕೆಗಳ ಹಾರೈಕೆ;
ಅದಕ್ಕಾಗಿಯೇ ನಿನ್ನನ್ನು ಹೆಚ್ಚು ಪ್ರೀತಿಸುವೆ ಇಂದೂ ಎಂದೆಂದಿಗೂ.....||

ಪ್ರೇರಣೆ: "Little Wishes" by Casarah Nance

ನಿತ್ಯತೆಯ ಅಂಚನ್ನು ತಲುಪುವ

ಮೌನ ಕರೆಯುತ್ತಿದೆ
ಹುಣ್ಣಿಮೆಯ ಬೆಳಕು ಜಾರುತ್ತಿದೆ
ತಂಗಾಳಿಯ ಸಪ್ಪಳ ಮೌನಕ್ಕೆ ಶರಣಾಗುತ್ತಿದೆ
ಖಾಲಿಯಾದ ಮನಸ್ಸು ಹಾಗು ನಗುವಿನ
ಚೈತನ್ಯ ಕಾತರತೆಯಿಂದ ನಿರ್ಮಲ
ಪ್ರಕೃತಿಯ ಸೌಂದರ್ಯವ ಆಸ್ವಾದಿಸುತ್ತಿದೆ
ಭರವಸೆಯ ಹೊಸ ಲೋಕವ ತೆರೆಯುವ||

ಕತ್ತಲೆಯ ಕರಿ ಪರದೆ ತೆರೆದುಕೊಳ್ಳುತ್ತಿದೆ
ಬೆಳಗಿನ ಕಣ್ಣು ತೆರೆಯುತ್ತಿದೆ
ಚಿಕ್ಕ ಗರಿಕೆಯ ಹುಲ್ಲು ನಿಧಾನವಾಗಿ ಕಣ್ತೆರೆಯುತ್ತಿದೆ
ಖಾಲಿಯಾದ ಮನಸ್ಸು ಹಾಗು ನಗುವಿನ
ಚೈತನ್ಯ ಕಾತರತೆಯಿಂದ ನಿರ್ಮಲ
ಪ್ರಕೃತಿಯ ಸೌಂದರ್ಯವ ಆಸ್ವಾದಿಸುತ್ತಿದೆ
ಭರವಸೆಯ ಹೊಸ ಲೋಕವ ತೆರೆಯುವ||

ನಿನ್ನನ್ನು ಅಲ್ಲಿಗೆ ಕರೆದೊಯ್ಯುವೆ
ನೀನು ನೆಮ್ಮದಿಯ ನಂಬಿಕೆಯ
ಉಸಿರನ್ನು ಆಸ್ವಾದಿಸುವೆ
ಪರಿತಪಿಸುವ ಕನಸುಗಳ ಮೇಲೆ
ಸವಾರಿ ಹೊರಡುವ,ವಾಸ್ತವದಿಂದ ದೂರ ಸಾಗುವ||

ನಿನ್ನನ್ನು ಅಲ್ಲಿಗೆ ಕರೆದೊಯ್ಯುವೆ
ಭರವಸೆ ಹಾಗು ಭ್ರಮೆಯ ನಾಡಿಗೆ
ಇಬ್ಬನಿಯ ಕಾಲವನ್ನು ಬಳಸುತ್ತಾ
ನಿಧಾನವಾಗಿ ಹೆಜ್ಜೆಯಿಡುತ್ತಾ ನಿತ್ಯತೆಯ ಅಂಚನ್ನು ತಲುಪುವ||

ಪ್ರೇರಣೆ: 'Let me take you there' by Paul Callus

ಗುಣ ನಿಷ್ಕರ್ಷೆ (Appraisal)?

ಜೋರಾಗಿ ಕಿರುಚುತ್ತಿದ್ದೆ
"ನಾನು ಬದುಕಿದ್ದೇನೆ,
ನಾನು ಬದುಕಬೇಕು"
ಅವರಾರಿಗೂ ಕೇಳಿಸಲೇ ಇಲ್ಲ;
ಕಿವಿಯಿದ್ದೂ ಅವರು ಕಿವುಡರಾಗಿದ್ದರು.
ಒಬ್ಬರಲ್ಲ, ಹಲವು ಜನ;
ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದರು;
ಮನಸ್ಸಿಗೂ ಮಸಿ ಅಂಟಿಸಿಕೊಂಡಿದ್ದಾರೆ ಎಂದೆನಿಸಿರಲಿಲ್ಲ;
ಆಕಸ್ಮಿಕವಾಗಿ ಶವಪೆಟ್ಟಿಗೆಯಲ್ಲಿ ಬಿದ್ದೆನೋ?
ಅಥವಾ ಬೀಳಿಸಿದರೋ ತಿಳಿಯಲಿಲ್ಲ;
ಆದರೂ ಬಿದ್ದಿದ್ದೆ ಅದರೊಳಗೆ ಅರಿವಿಲ್ಲದೆ;
ಸುತ್ತಲೂ ಇರುವವರ ಮನಸ್ಸು
ಕಲ್ಲಾಗಿದೆ ಎಂದು ತಿಳಿದಿರಲಿಲ್ಲ;
ದ್ವೇಷವೇ ಉಸಿರಾಗಿದೆ ಎಂದು ತಿಳಿಯಲಿಲ್ಲ;
ಮುಖದಲ್ಲಿ ಆವೇಶ, ಆಕ್ರೋಶ ಮಡುಗಟ್ಟಿತ್ತು;
ಮಾತಲ್ಲಿ ಒರಟುತನ ನರ್ತಿಸುತ್ತಿತ್ತು;
ಎಲ್ಲರ ಕೈಯಲ್ಲೂ ಸುತ್ತಿಗೆ ಹಾಗು ಮೊಳೆ
ಶವ ಪೆಟ್ಟಿಗೆಯಲ್ಲಿ ಬಿದ್ದವರನ್ನು
ಮೇಲೆತ್ತುವುದು ಅವರ ಕಾಯಕವಲ್ಲ;
ಅವರದೇನಿದ್ದರೂ ಮುಗಿಸುವುದಷ್ಟೆ!
ಪರೀಕ್ಷಿಸುವುದಕ್ಕೂ ಅವರ ಬಳಿ ಸಮಯವಿಲ್ಲ;
ಬಿದ್ದದ್ದೇ ತಡ ಮೊಳೆ ಹೊಡೆಯುವುದಕ್ಕೆ ಆರಂಭಿಸಿದರು;
ಹೃದಯಕ್ಕೆ ಮೊಳೆ ಬಡಿದರು;
ಮನಸ್ಸಿಗೆ ಮೊಳೆ ಬಡಿದರು;
ಸತ್ತವರಿಗೂ ಬಡಿದರು;
ಬದುಕಿದವರಿಗೂ ಬಡಿದರು;
ಬದುಕಿದವರು ಸಾಯುವವರೆಗೂ ಬಡಿದರು;

ಈ ಕಣ್ಣೀರಿಗೆ ವಿಷಾದ ಪಡಲಾದೀತೇ?

ನನ್ನ ಕಣ್ಣೀರಿನ ಹನಿಯಲ್ಲಿ
ನಿನ್ನ ಮೇಲಿನ ಪ್ರೀತಿ ಇಮ್ಮಡಿಯಾಗಿದೆ
ನಾನು ಈ ಕೋಣೆಯೊಳಗೆ ಕಳೆದುಹೋಗಿದ್ದೇನೆ
ನಿನ್ನನ್ನು ಪ್ರೀತಿಸುತ್ತಾ ಈ ಎಲ್ಲಾ ವರುಷಗಳು||

ನನ್ನ ಕಣ್ಣೀರು ನೋವ ತುಂಬಿಕೊಂಡಿಲ್ಲ
ಸಂತೋಷವನೆಲ್ಲಾ ವ್ಯಾಪಿಸಿಕೊಂಡಿದೆ
ನನ್ನೊಳಗಿನ ಪುಟ್ಟ ಮಗುವಿಗೆ
ನೀನು ಸಹಾಯ ಮಾಡಿದೆ ಅರಿವು ಮೂಡಲು||

ನನ್ನ ಹೃದಯದೊಳಗಿನ ಗೂಡಿನಲ್ಲಿ
ನನ್ನ ನಿಜವಾದ ಅರಿವು ಹೊರಹೊಮ್ಮಿದೆ
ನನ್ನೊಳಗಿನ ಮನದ ನೋವಿನ ಗಾಯಗಳೆಲ್ಲಾ
ಮಾಯದೇ ಇರುವುದೇ ಈ ದೇವತೆ ಜೊತೆ ಇರುವಾಗ?||

ನಮ್ಮ ನೆನಹುಗಳ ಜೊತೆಯಲ್ಲಿ ಮೈಮರೆಯುವೆ
ಬಯಕೆಯ ಗರಿಯೊಡೆದು ಮತ್ತೊಮ್ಮೆ
ನೀನೇ ಆಕರ ಈ ಸಂತೋಷದ ಕಣ್ಣೀರಿಗೆ
ಈ ಕಣ್ಣೀರಿಗೆ ವಿಷಾದ ಪಡಲಾದೀತೇ?||

ಪ್ರೇರಣೆ: 'My Tears' By Richard Lamoureux.

ಹೇಳಲಾರದ ಮಾತು

ನಾನು ಗೀಚುತ್ತೇನೆ ಮಣ್ಣಿನ ಮೇಲೆ ಅವಾಗವಾಗ
ಪದಗಳನ್ನು ಹುಡುಕಲು ಕಷ್ಟಪಡುತ್ತೇನೆ
ಆಶಿಸುತ್ತೇನೆ ಗಾಳಿ ಬರಲಿ ಇತ್ತಲೇ..
ಬೀಸಿ ಹೊತ್ತು ತರಲಿ ಎಲ್ಲವನ್ನೂ ನಿಮ್ಮ ಬಳಿಗೆ||

ಪ್ರೇರಣೆ: "unspoken words" by Paul Callus.

ಯಾವುದೀ ವಿರಹ?

ಯಾವುದೀ ತಂಗಾಳಿ
ಬೆಂಗದಿರನನ್ನೇ ನಾಚಿಸಿದೆ?
ಮನವು ತೆರೆದು ಹಾಡುವಂತೆ ಮಾಡಿದೆ||

ಯಾವುದೀ ಹೊಸರಾಗ
ಎದೆಯ ಭಾವವನೆ ಕೆಣಕಿದೆ?
ಮನದ ಭಾವ ಹೊನಲಾಗಿ ಹರಿವಂತೆ ಮಾಡಿದೆ||

ಯಾವುದೀ ನಾದ
ಮನವನೆ ಸೆರೆಹಿಡಿದಿದೆ?
ನೂರು ನೆನಹುಗಳು ಮನದಲ್ಲಿ ತೇಲುವಂತೆ ಮಾಡಿದೆ||

ಯಾವುದೀ ವಿರಹ
ಮನವನೆ ನರಳಿಸಿದೆ?
ಮನದ ಬೇಗುದಿಯ ಕಂಗೆಡಿಸಿ ನುಲಿಯುವಂತೆ ಮಾಡಿದೆ||

ಕಳೆದುಕೊಳ್ಳುವುದೇನಿದೆ?

ಇಲ್ಲವೆಂದಾದರೇನು? ಇರಲಿಬಿಡು
ಕಳೆದುಕೊಳ್ಳುವುದೇನಿದೆ?
ನರಕವೇನೂ ಸಿಗದು
ಸ್ವರ್ಗವೇನೂ ಧರೆಗಿಳಿಯದು||

ಹೌದೆಂದಾದರೇನು? ಇರಲಿಬಿಡು
ಸಂತಸಪಡುವುದೇನಿದೆ?
ದುಗುಡವೇನೂ ನರಳದು
ಸಂತಸವೇನೂ ಜೀವನವ ಸಂತೈಸದು||

ಸುಳ್ಳೆಂದಾದರೇನು? ಇರಲಿಬಿಡು
ಆಕಾಶ ಕಳಚಿ ಬೀಳದು!
ಕ್ಷಣ ಕಾಲದ ಸುಖವದು
ಜೀವನವನೇ ಕಾಡುವುದು||

ಸತ್ಯವೆಂದಾದರೇನು? ಇರಲಿಬಿಡು
ಸಿಗುವುದಾದರೂ ಏನು?
ನಿರ್ಮಲ ಮನದ ಗೆಲುವು
ಜೀವನವನೇ ಸಂತೈಸುವುದು||

ಈ ಬೆಳಕ ಹಣತೆಯ ಹಚ್ಚಿದವರಾರು?

ಈ ಬೆಳಕ ಹಣತೆಯ ಹಚ್ಚಿದವರಾರು?
ಯಾರ ಕೇಳಿ ಈ ಹಣತೆಯ ಹಚ್ಚಿದರೋ?
ಬೆಳಕ ಹಣತೆಯ ಹಚ್ಚಿದ್ದು ಏಕೋ?
ಕತ್ತಲನ್ನೇ ಇಷ್ಟಪಡುವವರಿಗೆ ಈ ಬಗೆಯ ಹಿಂಸೆ ಏಕೋ?||

ಬೆಳಕೆಂದರೆ ಬೆಚ್ಚಿ ಬೀಳುವವರು ನಾವು
ಸದಾ ಕೊರಗುತಾ, ಏಳಲಾಗದೆ ಸೊರಗುವವರು ನಾವು
ಯಾರೂ ಕೈಹಿಡಿದು ಮೇಲೆತ್ತಲಿಲ್ಲ,
ನಮ್ಮ ಮನದ ನೋವಿಗೆ ಸ್ಪಂದಿಸಲಿಲ್ಲ||

ಕತ್ತಲ ಪ್ರೀತಿಗೆ ಮನ ಸೋತವರು ನಾವು
ಕತ್ತಲೇ ನಾವಾಗಿ,ನಾವೇ ಕತ್ತಲಾದವರು ನಾವು
ನಮ್ಮ ಏಕತಾನತೆಯ ರಾಗಕ್ಕೆ ಹಚ್ಚುವವರಾರು ಕಿಚ್ಚು?
ಕತ್ತಲ ಕೂಪದಿಂದ ಮೇಲಕ್ಕೆತ್ತುವವರು ಯಾರು ಬೆಳಕ ಹಣತೆಯ ಹಚ್ಚಿ?||

ಕೇಳಿಸದೇ ಅದರ ಆರ್ತನಾದ?

ನನ್ನೊಳ ದನಿಯೊಂದು ಆರನೋ ಕೂಗುತಿದೆ
ಕೇಳಿಸದೇ ಅದರ ಆರ್ತನಾದ?
ನೋವಿನ ಚೀತ್ಕಾರ ಎದೆಯೊಳದಿಂದೆದ್ದು
ನೀಲಿ ನಭಕ್ಕೇರುತ್ತಿದೆ,ಕೇಳಿಸದೆ ಅದರ ಪೂತ್ಕಾರ?
ಕೇಳಿಸದೇ ಅದರ ಮೌನರಾಗ?
ಮನದ ನೋವೆಲ್ಲಾ ಆತ್ಮವೇ ಹೀರಿ
ದನಿಯಡಗಿಸಿ ಕೂಗುತಿದೆ ಯಾರಿಗೂ ಕೇಳದ ಹಾಗೆ;
ಕಿವಿಗಳಿದ್ದೂ ಕಿವುಡರಿಹರು,
ಯಾರಿಗೂ ಕೇಳದು ಈ ನೋವರಾಗ!
ಅವರಿಗೆ ಅವರದೇ ಚಿಂತೆ!
ನೂರಾರಿದೆ ಲೋಕದ ಕಂತೆ!
ಹೇಗೆ ಕೇಳುವುದು ನೋವುಂಡವರ ಆರ್ತನಾದ?
ಲಾಭ-ನಷ್ಟದ ಲೆಕ್ಕವೇ ನೂರಿರಲು
ನೋವಿನ ನಷ್ಟದ ಲೆಕ್ಕಚಾರ ಯಾರಿಗೂ ಬೇಡ;
ದಮನಿತರ ನೋವಿನ ಆತ್ಮನಾದ,
ನೋವುಂಡವರ ನೋವಿನ ಆರ್ತನಾದ
ಯಾರಿಗೂ ಕೇಳುವುದು ಬೇಡ;
ನೋವೆಲ್ಲವೂ ನೋವುಂಡವರಿಗೇ ಇರಲಿ,
ಲೋಕ ಸಂತಸದಿಂದರಲಿ....

ಕನಸು ನನಸಾಗುವುದೇ?

ಇಂದು, ನಾಳೆ ಕಾಯುತಿಹೆವು ನಾವು,
ನಮ್ಮಯ ದಿನ ಬರುವುದೆಂದು;
ಹಗಲು,ಇರುಳು ಕನಸೊಂದ ಕಂಡು,
ಕಂಡದ್ದು ನನಸಾಗುವುದೆಂದು;

ಬಿಸಿಲ ಬೇಗೆಯೆ ಬೇಸಿಗೆಯಲ್ಲಿ
ತಂಗಾಳಿಯ ತಂಪನ್ನು ಅರಸಿದಂತೆ;
ಮೋಡಗಳಿಂದ ತಂಪು ಮಳೆಯ ಬಯಸಿದಂತೆ
ಕಾಯುತಿಹೆವು ನಾವು ನಮ್ಮಯ ದಿನ ಬರುವುದೆಂದು;

ಬಯಸಿದೆವು ಮನಸಿನಿಂದೆ ನನಸಾಗುವುದೆಂದು
ಬಯಸಿ ಬಯಸಿ ಬೆಂಡಾಗಿಹೆವು;
ಕನಸು ನಮ್ಮದಾಗುವುದೆಂದು,ಕನಸು ನನಸಾಗುವುದೆಂದು;
ಕಾಯುತಿಹೆವು ನಾವು ನಮ್ಮಯ ದಿನ ಬರುವುದೆಂದು;

ಏಕಿಂತ ದ್ವೇಷವೋ ನಾನರಿಯೇ?

ಮನುಷ್ಯ-ಮನುಷ್ಯರ ನಡುವೆ
ಮನಸ್ಸು-ಮನಸ್ಸುಗಳ ನಡುವೆ
ಸಂಬಂಧ-ಸಂಬಂಧಗಳ ನಡುವೆ
ಬಿರುಕು ಮೂಡಿಸುವ ಈ ಬಗೆ ಸರಿಯೇ?||

ಪಕ್ಕದ ಗಲ್ಲಿಗೆ ದೂರದೂರಿಂದ ಬರಬಹುದು
ಹತ್ತಿರವೇ ಇರುವ ಮನೆಗೆ ಬರಲಾಗದು
ಕಾಣದ ಸಮಯದ ಅಭಾವದ
ನೆವ ಹೂಡುವುದು ಸುಲಭ ಮಾರ್ಗ||

ಮನದಲ್ಲಿ ದ್ವೇಷ ನೆಲೆಗೊಂಡಿರಲು
ಹಾಲೂ ಹಾಲಾಹಲವಾಗುವುದು
ತೆರೆದ ಹೃದಯವು ಹೇಗೆ ಕಾಣುವುದು,
ದ್ವೇಷದ ಕರಿನೆರಳು ಕಣ್ಣು ಮುಚ್ಚಿರುವಾಗ?||

ಇಲ್ಲಸಲ್ಲದ ನೆವವೊಡ್ಡಿ ದೂರುವುದು
ಸಲ್ಲದ ಮನಗಳ ಕಡೆಗಣನೆ ಸರಿಯೇ?
ಕೇಳಿಕೊಳ್ಳಲಿ ಮನವ ದ್ವೇಷಸುವುದು ಯಾಕಾಗಿ?
ದ್ವೇಷದಿಂದೇನು ಅವರಿಗೆ ಲಾಭ?||

ಇಂಥ ನಡುವಳಿಕೆಗಳ ಕಡೆಗಣಿಸಬೇಕು
ದ್ವೇಷವ ಗೆಲ್ಲುವ ಮಾರ್ಗವ ಹುಡುಕಬೇಕು
ಸಾಗಿ ಬಂದಿಹೆವು ಬಲುದೂರ ಸಾಕಾಗಿದೆ,
ಇನ್ನೇಷ್ಟು ದಿನ, ದೂರ ಸಾಗಬಲ್ಲೆವು ನಾವು?||

ಇದ್ದಾಗ ದ್ವೇಷದಿಂದಲೆ ಕಾಲಕಳೆದು
ಮುಗಿದು ಹೋದ ಮೇಲೆ ಅಳುವುದೇಕೆ?
ದ್ವೇಷ ಸಾಧಿಸಿದ್ದಕ್ಕಲ್ಲ ಅಳುವುದು,
ಸೊರಗಿದ ಗೆಳೆತನದ ನೆಳಲಿಗೆ ಮನ ಬಿಕ್ಕುವುದು||

ನನ್ನ ದನಿಯ ಗುರುತಿಸುವುದೆಂತೋ?

ನನ್ನ ದನಿ ಆವುದೆಂದು ಹುಡುಕಿ ಹುಡುಕಿ ಬಳಲಿದೆ;
ನನ್ನದಲ್ಲದ ದನಿಯ ಮೋಹಿಸಿ ಪರವಶನಾದೆ;
ನನ್ನದಲ್ಲದ ದನಿಗೆ ನಾ ಕಂಠವಾದೆ;
ನನ್ನ ದನಿಯಲ್ಲವೆಂಬ ಭ್ರಮೆ ಕಳಚಿರಲು,
ಮತ್ತೆ ಅದೇ ಹುಡುಕಾಟ;
ನನ್ನ ದನಿಯಾವುದೆಂದು?
ಹುಡುಕಾಟ ನಡೆಯುತ್ತಿದೆ ಕೊನೆ ಮೊದಲಿಲ್ಲದೆ
ಆವ ದನಿ ನನ್ನದೋ?
ಆವ ದನಿ ಹೃದಯವ ತಟ್ಟುವುದೋ?
ನನ್ನ ದನಿಯ ಗುರುತಿಸುವುದೆಂತೋ?
ಅಳತೆಗೋಲಿಲ್ಲದೆ ತಳಮಳ ಹೆಚ್ಚಾಗಿದೆ;
ಹುಡುಕಾಟ ನಡೆಯುತ್ತಿದೆ ನಿಲ್ಲದೆ,ವಿಧಿಯಿಲ್ಲದೆ....

ಏಕೆ ಗೆಳೆಯ ಹೀಗೆ ಮಾಡಿದೆ?

ಏಕೆ ಗೆಳೆಯ ಹೀಗೆ ಮಾಡಿದೆ?
ಈ ನಿನ್ನ ನಿರ್ಧಾರ ಆಶ್ಚರ್ಯ ತಂದಿದೆ
ಮನದಲ್ಲೆಂದೂ ಎಣಿಸಿರಲಿಲ್ಲ ನೀ ಹೇಡಿಯಾಗುವೆಯೆಂದು||

ಎಲ್ಲವನ್ನೂ ಗೆದ್ದವನೆಂದು ತಿಳಿದಿದ್ದೆ;
ಪರಿಶ್ರಮದ ಪ್ರತೀಕವಾಗಿದ್ದೆ;
ನೋಡನೋಡುತ್ತಿದ್ದಂತೆ ಎಷ್ಟು ಎತ್ತರ ಏರಿದ್ದೆ;
ನನ್ನ ಜೀವನದ ನಾಯಕ ಆಗಿಹೋಗಿದ್ದೆ;
ಎಷ್ಟು ಹೆಮ್ಮೆ ಇತ್ತು ನಿನ್ನ ಬಗ್ಗೆ;
ನಿನ್ನ ಸಾವು ನನ್ನಲ್ಲಿ ಒಂದು ಭಯವನ್ನೇ ತಂದಿದೆ
ಎಲ್ಲವೂ ಮರೀಚಿಕೆ ಎನಿಸುತ್ತಿದೆ||

ಎಲ್ಲವೂ ನಿನ್ನಲ್ಲಿ ಇತ್ತೆಂದು ನಂಬಿದ್ದೆ;
ಎಲ್ಲವನ್ನೂ ಜಯಿಸುವ ಶಕ್ತಿ ನಿನ್ನಲ್ಲಿ ಇತ್ತು;
ನಿನ್ನ ಆತ್ಮಹತ್ಯೆಯಿಂದ ತಿಳಿದಿದ್ದು,
ನಿನ್ನಲ್ಲಿ ಜೀವನ ಪ್ರೀತಿ ಇರಲಿಲ್ಲವೆಂದು;
ಹೇಡಿಗಳೇ ಸಾವಿನ ಬಗ್ಗೆ ಯೋಚಿಸುವರು
ನೀನೂ ಅವರುಗಳ ಸಾಲಿನಲ್ಲಿ ಸೇರಿಹೋದೆ
ಅದೇ ನನ್ನ ಮನದಲ್ಲಿ ಬೇಸರ ತಂದಿದೆ||

ಆದರೂ ಆದರೂ....
ಸಾವಿನ ನಿರ್ಧಾರ ತೆಗೆದುಕೊಳ್ಳುವಾಗ
ನಿನ್ನ ಮನದಲ್ಲಿ ಅದೆಷ್ಟು ನೋವಿತ್ತೋ
ಅದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ...
ಒಂದು ಕ್ಷಣ ಯೋಚಿಸಬಹುದಿತ್ತು;
ಯಾವ ನೋವಿದೆ ಈ ಪ್ರಪಂಚದಲ್ಲಿ ಸಂತೈಸಲಾಗದ್ದು?
ಶಾಂತಿ,ಸಮಾಧಾನ,ಪ್ರೀತಿ,ಆತ್ಮೀಯತೆ,ಮಮತೆ,
ಆರೈಕೆ,ವೈರಾಗ್ಯ ಗಳಿಂದೆಲ್ಲಾ ಸಾಧ್ಯವೆಂಬ ಅರಿವಿರಬೇಕಿತ್ತು;
ನಾ ತಿಳಿಯೇ? ಏನು ಹೇಳಲಿ?
ಆದರೂ ಗೆಳೆಯ,
ನೋವಿನಿಂದಲೇ ಪ್ರಾರ್ಥಿಸುವೆ
"ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ"

ಉಳಿದಿರುವುದು ಪ್ರಾರ್ಥನೆಯೊಂದೇ,

ಹತ್ತು ವರುಷಗಳ ನಂತರವೂ ಹುಡುಕುತ್ತಿದ್ದೇನೆ
ನನ್ನ ಮನದಾಳದ ನೂರು ಪ್ರಶ್ನೆಗಳಿಗೆ ಉತ್ತರ!
ನನ್ನ ಪ್ರಶ್ನೆಗಳು ದೊಡ್ಡವೇನಲ್ಲ;
ಉತ್ತರವೂ ದೊಡ್ಡದು ಬೇಕಾಗಿಲ್ಲ;
ಕಾಲೇಜಿನ ಪರೀಕ್ಷೆಯಲ್ಲಿ ಪುಟ ಪುಟಗಳು ಗೀಚಿದ ನೆನಪು;
ಇರುವ ಹತ್ತು ಪ್ರಶ್ನೆಗಳಿಗೆ, ಉತ್ತರವೂ ಹತ್ತೇ ಸಾಲುಗಳು ಸಾಕು;
ಪರೀಕ್ಷೆ ಬರೆಯುತ್ತಿರುವವನು ನಾನೇ,
ಪರೀಕ್ಷೆ ಆರಂಭವಾಗಿ ಹತ್ತು ವರುಷಗಳೇ ಕಳೆದಿವೆ
ಪರೀಕ್ಷೆಯ ಸಮಯವೂ ಇನ್ನೂ ಮುಗಿದಿಲ್ಲ;
ಸಧ್ಯಕ್ಕೆ ಮುಗಿಯುವ ಲಕ್ಷಣವೂ ಕಾಣುತ್ತಿಲ್ಲ;
ನನ್ನ ಉತ್ತರ ಬರೆಯುವುದೂ ಇನ್ನೂ ಆರಂಭವಾಗಿಲ್ಲ;
ಉತ್ತರವೂ ಸರಿಯಾಗಿ ಹೊಳೆಯುತ್ತಿಲ್ಲ;
ಭಯ ಮಾತ್ರ ಮನವ ಆವರಿಸಿದೆ
ಕನಸುಗಳು ಸಾಯುವುದೆಂದು;
ಉಳಿದಿರುವುದು ಪ್ರಾರ್ಥನೆಯೊಂದೇ,
ಪ್ರಾಮಾಣಿಕತೆಯ ಪ್ರಮಾಣವೊಂದೇ.....
ಬರೆಯುವೆನೇ ನನ್ನ ಉತ್ತರ?

ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ
ನೂರು ಚಿಂತೆಗಳು ಮನದಲ್ಲಿ
ನಿಂದು ಚೈತನ್ಯ ಹರಣಗೈದಿವೆ
ನೂರು ಕನಸುಗಳು ಮನದಲ್ಲಿ
ಮೂಡಿ ನಿದಿರೆಯ ಹರಣಗೈದಿವೆ
ಹೊಸ ಆಸೆ ಮೂಡಿ;
ಹೊಸ ಕನಸ ಕಂಡು;
ಹೊಸ ಚೈತನ್ಯದ ನವಪಲ್ಲವ ಹಾಡಿ
ಹೊಸ ಹಾದಿ ತೆರೆದಿದೆ ನೋಡಲ್ಲಿ;
ವಸಂತನಲ್ಲಿ ಚೈತ್ರೆಯು ಜೊತೆಗೂಡಿ
"ಜಯ"ವನ್ನೇ ನಮಗಾಗಿ ತಂದಿಹರು;
ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ಜೀವನದಲ್ಲಿ ಪೂರ್ತಿಸಿಹಿಯೂ ಬೇಡ;
ಜೀವನದಲ್ಲಿ ಪೂರ್ತಿ ಕಹಿಯೂ ಬೇಡ;
ಬೇವು-ಬೆಲ್ಲ ಸಮರಸ ಜೀವನದ ಸಂಕೇತ
ನಾಳೆಯ ಜಯ ಇಂದೇ ನಮಗಾಗಿ ಬಂದಿದೆ
ಹೃದಯ ತೆರೆದು ನಗುವ ತೋರಣವ ಕಟ್ಟಿ
ಅಶಾಂತಿ,ರಾಗ-ದ್ವೇಷ, ಅಸಮಾನತೆ
ಬಡತನ,ಸ್ವಾರ್ಥ ಎಲ್ಲವನ್ನೂ ಹೆಡೆಮುರಿ ಕಟ್ಟಿ
ಚಿಂತೆಯ ಕಸವನ್ನೆಲ್ಲಾ ಗೂಡಿಸಿ ಸ್ವಾಗತಿಸೋಣ ಬನ್ನಿ
ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ರಾಜಕಾರಣವೆಂದರೆ......

ರಾಜಕಾರಣವೆಂದರೆ
ಹುಸಿ ಘೋಷಣೆಗಳ ಗುಚ್ಛ;
ಗೊತ್ತು ಗುರಿಗಳಿಲ್ಲದ
ಶ್ವಾಸವಿಲ್ಲದ ಆಶ್ವಾಸನೆಗಳ ಗಾಳಿ ಪುಚ್ಛ;
ಸಮಾಜದ ಅವಯವಗಳ
ಘಾಸಿಗೊಳಿಸುವುದು ಚುಚ್ಚಿ;
ಧ್ವೇಷ-ಅಸೂಯೆಗಳ
ರುದ್ರ ನರ್ತನ ಸಾಕಾರಗೊಳ್ಳುವ ವೇದಿಕೆ;
ಎಲ್ಲ ತತ್ವಗಳ ಗಾಳಿತೂರಿ
ಅಧಿಕಾರ ಲಾಲಸೆಯ ಉತ್ಕೃಷ್ಟತೆಯ ಪರಿ;
ಆಚಾರ-ವಿಚಾರಗಳ
ನಿರ್ಧಾಕ್ಷಿಣ್ಯವಾಗಿ ಕಡೆಗಣಿಸಿ
ಭ್ರಷ್ಟಾಚಾರವ ನೆಲೆಗೊಳಿಸುವ ಸಾಧನ
ಈ ರಾಜಕಾರಣ;

ನಿನ್ನ ಕರುಣೆ ನನಗಿರಲಿ

ನನ್ನ ಮನವೂ ನಿನಗೆ
ನನ್ನ ಜೀವನವೂ ನಿನಗೆ
ನನ್ನ ಬದುಕ ಪಯಣವೂ ನಿನ್ನಲ್ಲಿಗೆ
ನನ್ನ ಜೀವನದ ಗುರಿಯೂ ನೀನೇ||

ನಾನು ಅವನ ಭಾಗವಾಗಬೇಕು
ನಾನು ಅವನ ಪಾದ ಸೇವಕನಾಗಬೇಕು
ನಾನು ಅವನ ಆತ್ಮ ಬಂಧುವಾಗಬೇಕು
ನಾನು ಅವನ ಉಸಿರಿನ ಗಾಳಿಯಾಗಬೇಕು||

ನನ್ನೆಲ್ಲಾ ಒಳ್ಳೆಯ ಗುಣಗಳು
ನನ್ನೆಲ್ಲಾ ಕೆಟ್ಟ ಗುಣಗಳು
ಗುಣ,ಅವಗುಣಗಳ ಪರಿಗಣನೆ ಇಲ್ಲದೆ
ಎಲ್ಲವನ್ನೂ ನಿನ್ನ ಪಾದ ಕಮಲಗಳಿಗೆ ಅರ್ಪಿಸಿರುವೆ
ನಿನ್ನ ಕರುಣೆಯ ಹೃನ್ಮನಕ್ಕೆ ಶರಣಾಗಿರುವೆ
ಎಲ್ಲವೂ ನಡೆಯಲ್ಲಿ ನಿನ್ನ ಇಚ್ಛೆಯಂತೆ||

ಬೊಗಸೆಯ್ಯೊಡಿ ಬೇಡುವೆ
ನಿನ್ನ ಕರುಣೆ ನನಗಿರಲಿ
ನಿನ್ನ ಮಮತೆ ನಮಗಿರಲಿ...

ಪ್ರೇರಣೆ: 'I Offer' By V.P Mathur

ನೆನಪುಗಳ ತಿಥಿ

ಪ್ರತಿ ಹೆಜ್ಜೆಯಲ್ಲೂ ನಮ್ಮ ಕನಸುಗಳ ಕಟ್ಟಿದೆವು
ವರುಷ ಉರುಳುತಿರೆ ಕನಸು ಭ್ರಮೆಯಾಗುತಿದೆ
ಸತ್ತ ಕನಸುಗಳೆಷ್ಟೋ?.....
ನೆನಪುಗಳ ತಿಥಿಯೂ ಮಾಡಲಾಗುತ್ತಿಲ್ಲ,
ಸತ್ತ ಕನಸುಗಳು ಮತ್ತೆ ಜೀವ ಬೇಡುವುದೇ?

ಕನಸ ಕಾಣಲೂ ಮನದಲ್ಲಿ ಭಯವಿದೆ
ಮತ್ತೆ ಮತ್ತೆ ಕನಸುಗಳಿಗೆ ಚಟ್ಟ ಕಟ್ಟಬೇಕಲ್ಲ!,
ಎಲ್ಲವನ್ನೂ ಸಿದ್ಧವಾಗೆ ಇಟ್ಟುಕೊಂಡಿದ್ದಾರೆ
ನಮ್ಮ ಕನಸುಗಳಿಗೆ ಮಸಣದ ಹಾದಿ ತೋರಿಸಲು

ಯಾಚನೆ

ಬಿಟ್ಟು ಹೋಗದಿರು ಏಕಾಂಗಿಯಾಗಿ
ನಾನು ಬಡವ,ಅಸಹಾಯಕ...
ನನ್ನ ಶಕ್ತಿ,ನನ್ನ ಸಂಪತ್ತು,
ನನ್ನ ಅದೃಷ್ಟದ ಕೊಡ ಖಾಲಿಯಾಗಿದೆ.
ನೀನೋ ಪ್ರೀತಿಯ ಸಮುದ್ರ
ತುಂಬಿಕೊಳ್ಳಲೇ ನನ್ನ ಖಾಲಿ ಕೊಡದಲ್ಲಿ;
ಖಾಲಿಯಾದ ಈ ಹೃದಯದಲ್ಲಿ
ಯಾವ ಸಂಗೀತ ತಾನೆ ಹೊಮ್ಮುವುದು?

ಸಹಾಯ ಮಾಡು,
ಕರುಣೆ ತೋರು,
ನಿನ್ನ ಮುರಲಿಯ ಗಾನವ ತುಂಬು ಎದೆಯಲ್ಲಿ;
ಪ್ರೀತಿಯ ನಾದ ಹೊಮ್ಮಿಸು;
ಎಲ್ಲೇ ಹೋದರೂ ನೀನೇ ಕಾಪಾಡು
ಶರಣಾಗಿದ್ದೇನೆ ನೀನೇ ಪರಿಪೂರ್ಣನೆಂದು
ನೀನಿಲ್ಲದೆ ಮತ್ಯಾರೂ ನನಗಿಲ್ಲ
ಕರುಣಿಸು,ಕರುಣೆ ತೋರು
ಹೃದಯದಲ್ಲಿ ಪ್ರೀತಿಯ ನಾದವ ಮೀಟು.... 

ಮನವ ಮುರಿಯ ಬೇಡ .....

ಒಮ್ಮೆಯಾದರೂ ನಗುತ್ತಾ ಮಾತನಾಡು ಸಿಡುಕದೆ,
ದಿನವೂ ನಿನ್ನ ಹರಳೆಣ್ಣೆ ಮುಖವ ನೋಡಿ,ನೋಡಿ
ಮನಸ್ಸು ರೋಸಿ ಹೋಗಿದೆ.....

ಒಮ್ಮೆ ಕೂಡ ನೀನು ನಮ್ಮನ್ನು ಹೊಗಳುವುದು ಬೇಡ
ಆದರೆ ಮನಸ್ಸು ಅರ್ಥಮಾಡಿಕೊಳ್ಳುವ ಮನಸ್ಸು ನಿನಗಿಲ್ಲವೇ?

ಇಂದು ನೀನು ಹೊಗಳಿದರೂ
ನಮಗದು ಬೈಗಳಂತೆಯೇ ತೋರುತ್ತಿದೆ
ಮಾತೊಂದಿದೆ

"ಹೃದಯಕ್ಕೆ ಸ್ಪಂದಿಸು,
ಜನರು ಮೊದಲು"

ಆದರೆ ನಿನ್ನ ನಡುವಳಿಕೆ

"ಹೃದಯ ಕತ್ತರಿಸು,
ಜನರು ನಿನ್ನ ಕಾಲ ಕಸ"
ಎಂಬಂತಿದೆ.

ಬೇಡ,ಬೇಡ
ಈ ದುರಹಂಕಾರ.
ಬದಲಿಸಿಕೋ ನಿನ್ನ ನಡತೆ...
ಮನವ ಮುರಿಯ ಬೇಡ
ಈ ಹೃದ್ಯ ಪರಿಸರವ ಹಾಳುಮಾಡಬೇಡ||

ಕವನ ಹುಟ್ಟುವುದೇ?

ಗಿರಿ ಕಾನನಗಳ ಅಲೆದಾಡಿ
ಪ್ರಕೃತಿ ಸೌಂದರ್ಯ ಅನುಭವಿಸಿ
ಹಂಬಲಿಸಿದೆ ಮನ ಕವನ ಹುಟ್ಟುವುದೆಂದು||

ಸೂರ್ಯೋದಯ ಕಂಡೆ,
ಚಂದ್ರೋದಯ ಕಂಡೆ,
ಹಕ್ಕಿಗಳಿಂಚರ ಆಲಿಸಿದೆ
ಮರ ಗಿಡಗಳ ಹೊಸ ಚಿಗುರು ಚಿಗುರಿದಂತೆ
ಮನದಲ್ಲಿ ಕವನ ಹುಟ್ಟುವುದೆಂದು||

ಬಿಸಿಲೋ? ಗಾಳಿಯೋ? ಮಳೆಯೋ?
ಎಲ್ಲವನ್ನೂ ಕಂಡೆ,
ಅನುಭವಿಸಿದೆ ಮಧುರತೆ,ನೋವು,
ಮನದಲ್ಲಿ ಕವನ ಹುಟ್ಟುವುದೆಂದು||

ಕಂಡ ಕನಸುಗಳಿಗಿಂದು ಹತ್ತು ವರುಷ

ಕಂಡ ಕನಸುಗಳಿಗಿಂದು ಹತ್ತು ವರುಷ
ನನಸಾಗದ ಕನಸುಗಳ
ಆಲಾಪನೆಗಳಿಗಿಂದು ಹತ್ತು ವರುಷ||

ಸುಧಾರಿಸದ ಸಂಬಂಧಗಳು
ಹೊರಬರಲಾರದ ಒಳತೋಟಿಗಳ
ಕನವರಿಕೆಗೆ ಹತ್ತು ವರುಷ||

ಬದುಕ ದಾರಿಯಲ್ಲಿ
ಸವೆಸಿದ ಗಳಿಗೆಗಳ
ನೋವುಗಳಿಗೆ ಹತ್ತು ವರುಷ||

ಆರಕ್ಕೇರದ ಮೂರಕ್ಕಿಳಿಯದ
ಬದುಕ ಬಾಳ ಬಂಡಿಯ
ಪಯಣಕ್ಕೆ ಹತ್ತು ವರುಷ||

ನನಸಾಗದ ಕನಸುಗಳ
ಬೆಂಬಿಡದ ಆಕಾಂಕ್ಷೆಗಳ
ಬೆನ್ನು ಹತ್ತಿದ ಬಿಸಿಲ್ಗುದುರೆಗೆ ಹತ್ತು ವರುಷ||

ಅವಮಾನ, ಕಡಗಣನೆಯ ಮೂಕವೇಧನೆ
ಹೋರಾಟಕ್ಕಿಳಿಯದ
ಸಮಾಧಾನದ ತಾಳ್ಮೆಗೆ ಹತ್ತು ವರುಷ||

ಹಾರಲಾರದೆ, ಓಡಲಾರದೆ ತೆವಳುತ್ತಿದ್ದರೂ
ಬತ್ತದೆ ಸದಾ ಹರಿಯುತ್ತಿರುವ
ಜೀವನ ಪ್ರೀತಿಗೆ ಹತ್ತು ವರುಷ||

ಏನೇ ಆದರೂ
ನೋವೋ?, ನಲಿವೋ?
ಭರವಸೆಯ ಹೊತ್ತ ಮನಸುಗಳಿಗೆ ಹರೆಯದ ಹತ್ತು ವರುಷ||

ಅತಂತ್ರ

ಮನಸುಗಳ ಹಿಂದೆ
ದೊಡ್ಡ ಸಂಗ್ರಾಮವೇ ನಡೆದಿದೆ
ಮೇಲೇಳದಂತೆ ಮಾಡಲು
ದೊಡ್ಡ ಹುನ್ನಾರವೇ ನಡೆದಿದೆ||

ಬದುಕಿದರೂ ಸತ್ತಂತಿರಬೇಕು
ತಿವಿದರೂ ನೋವಾಗದಂತಿರಬೇಕು
ಒಳಗೆ ಉರಿ ಹೊತ್ತಿ ಸುಟ್ಟರೂ
ತುಟಿಯಂಚಲಿ ನಗು ಸೂಸಬೇಕು||

ಅವಕಾಶಗಳಿಗೆ ಕತ್ತರಿಹಾಕಿ
ಜೀವನದಲ್ಲೇ ಮೇಲೇಳದಂತೆ
ಪೂರ್ಣವಿರಾಮ ಹಾಕಿದರಾಯಿತು
ನಮ್ಮಪ್ಪನ ಗಂಟೇನು ಹೋಗಬೇಕೆ?||

ಒಂದೋ ಇಲ್ಲೇ ಇದ್ದು
ಸತ್ತಂತಿರಬೇಕು!
ಇಲ್ಲವೋ ಒಳಬೇಗೆ
ತಡೆಯಲಾರದೆ ಕಾಲುಕೀಳಬೇಕು||

ಇದೇ ರಣತಂತ್ರ
ಜೀವನ ಕುತಂತ್ರ
ನಮ್ಮ ಮೇಲಿನವರ ವ್ಯವಹಾರ ತಂತ್ರ
ಅವರೋ ಸ್ವತಂತ್ರ
ನಾವು ಅತಂತ್ರ||

ಏಕೆ ಕನಸುಗಳೇ ಕಾಲೆಳೆಯುವಿರಿ?

ನನ್ನನ್ನು ಕಂಡೆ ನನ್ನನ್ನೇ
ಒಂದು ಮೋಹಕ ಕನಸಲ್ಲಿ
ಕಂಡೆ ನನ್ನನ್ನೇ
ಕಾಣುತ್ತಿದೆ ಮನ್ಮಥನಂತೆ;
ತೊಟ್ಟಿದ್ದೆ ಬಂಗಾರದ ಕಿರೀಟ;
ಕಾಣದ ಸಂಪತ್ತಿಗೆ ಅಧಿಪತಿಯಂತೆ;
ನನ್ನನ್ನು ನಾನೇ ಪ್ರೀತಿಸತೊಡಗಿದೆ
ಭ್ರಮೆ ಕ್ಷಣ ಮಾತ್ರದಲ್ಲೇ ಆವರಿಸಿ;
ಹೃದಯ ಮಿಡಿಯಿತು ಸಂತೋಷದ ತುಮುಲದಲ್ಲಿ;
ಹೃದಯ ತಟ್ಟುವ ಹಾಗೆ ಹಾಡಿದೆ,
ಹೃದಯದ ಹಾಡನ್ನು;
ಕನಸುಗಳು ನನ್ನ ತೊರೆಯ ತೊಡಗಿದವು,
ಗೋಗೆರೆದೆ,ಪರಿಪರಿಯಾಗಿ ಬೇಡಿಕೊಂಡೆ
ಕೇಳಿಸಿಕೊಳ್ಳದಂತೆ ನನ್ನ ಆರ್ತನಾದವ ಹಾರಿಹೋದವು;
ಏಕೆ ಕನಸುಗಳೇ ಕಾಲೆಳೆಯುವಿರಿ
ಸಂತೋಷವ ಅನುಭವಿಸುವಾಗ?
ಸೋತೆ ನಾನು, ಕಳೆದುಕೊಂಡೆ ನಾನು
ನನ್ನ ಕನಸಿನ ರಾಜ್ಯವನ್ನು,
ನನ್ನ ಸಂತೋಷದ ಕಾಲವನ್ನು
ಕಲ್ಪನೆಯ ಕಾವ್ಯದಲ್ಲಿ ಕಳೆದುಹೋದೆ....

ಮೊದಲ ಪ್ರಯತ್ನದ ಹಾಯ್ಕುಗಳು -2

ಮನದಲ್ಲಿ ಚೈತನ್ಯ
ಹೃದಯದಲ್ಲಿ ಪ್ರೀತಿಯ ರಂಗೋಲಿ
ಸತ್ತಾಗ ಮಣ್ಣಿನ ಮೇಲೆ ಪ್ರೀತಿ

ಬೆಳಗು ಮೂಡುವುದು
ಹೂವು ಅರಳುವುದು
ಮನಸ್ಸು ಅಳುವುದು

ಕಾಣದ ಸತ್ಯಗಳು ನೂರಾರು
ಕಾಣುವ ಅಸತ್ಯಗಳು ಹಲವಾರು
ಸತ್ಯಹರಿಚ್ಛಂದ್ರ ನಗುತ್ತಿದ್ದಾನೆ

ಬೆಳಕು ಸತ್ಯ
ಕತ್ತಲೂ ಸತ್ಯ
ಹಗಲು-ರಾತ್ರಿಗಳ ಸುಖದ ಹೋರಾಟ

ಅವನು ನಕ್ಕಳು
ಅವಳೂ ನಕ್ಕಳು
ವಿಚ್ಛೇದನಕ್ಕೆ ಇಬ್ಬರೂ ಅರ್ಜಿ ಹಾಕಿದರು.

ಮೊದಲ ಪ್ರಯತ್ನದ ಹಾಯ್ಕುಗಳು -1

ನೋವಿನ ಭಾರ ಮನದಲ್ಲಿ
ಆಗಸದಲ್ಲಿ ಮೋಡ ಕಟ್ಟಿದೆ
ಮನೆಯ ನಲ್ಲಿಯಲ್ಲಿ ನೀರು ಬರುತ್ತಿಲ್ಲ

ನೂರು ಗೊಂದಲ ಮನದಲ್ಲಿ
ಉತ್ತರ ಕಾಣದ ಪ್ರಶ್ನೆಗಳು
ವರ್ಷಕ್ಕೆ ೧೨ ಸಿಲಿಂಡರ್ ಗಳ ಭಿಕ್ಷೆ

ಕಾಣದ ಕನಸುಗಳು
ಕಣ್ಣು ತುಂಬಾ ನಿದ್ದೆ
KRS ನಲ್ಲಿ ನೀರಿಲ್ಲ

ಹತ್ತು ವರ್ಷದ ಕೆಲಸ
ಮೇಲೆಕ್ಕೇರಲಾಗದ ಅಸಹಾಯಕತೆ
ಕಂಪನಿಗೆ ನೂರು ಕೋಟಿ ವ್ಯವಹಾರ ಲಾಭ

ನನಸಾಗದ ಕನಸುಗಳು
ನಲ್ವತ್ತು ವರ್ಷದ ಹರೆಯ
ಬೆಲೆ ಏರಿಕೆಯ ಉಡುಗೊರೆ ಈ ಬೇಸಿಗೆಗೆ

ಅಮೃತದ ಕಡಲು

ಓ ಕರುಣಾಳು, ಕನಿಕರಿಸು
ಮುಂಜಾನೆಯ ಸಂತೋಷವ ಹರಿಸು
ಸದಾ ನೋವಿನ ಕಡಲಲ್ಲಿ ಮೀಯುವವರಿಗೆ
ನಿನ್ನ ಕರುಣೆಯ ಹೊನಲ ಹರಿಸು||

ಉರಿಯುತ್ತಿರುವ ದೀಪ
ಆರುವುದು ಗಾಳಿ ಬೀಸಿದಾಗ
ಬೆಳಕು ಹರಿದು ಕತ್ತಲ ಧೂಪ
ಕನಸುಗಳಿಗೆ ಕಿಚ್ಚು ಹೊತ್ತಿಸಿತಾಗ||

ಮನದ ಭಯವೆಲ್ಲಾ ಕರಗಲಿ
ನಿನ್ನ ಕರುಣೆಯ ಕಡಲಲ್ಲಿ
ನಿನ್ನ ಕರುಣಾಮೃತವ ಸವಿಯುವೆ
ಬದುಕಿನ ಬವಣೆಯ ಪಾತ್ರೆಯಲ್ಲಿ||

ನಿನ್ನ ಪ್ರೀತಿಯ ಅಮೃತದ ಕಡಲಲಿ
ಎಲ್ಲಾ ನೋವ ಮರೆಯುವೆ
ಮನವ ಬಿಚ್ಚಿ, ಹೃದಯ ಹಗುರಗೊಳಿಸುವೆ
ಈ ಬದುಕ ಪುಷ್ಪವ ನಿನಗರ್ಪಿಸುವೆ||

ಹಾಯ್ಕುಗಳು

ಸಾಯುತ್ತಿರುವ ಕೆರೆ
ಹೊಲಸು ವಾಸನೆ ಜೀವಂತಿಕೆಯ
ಕಳೆದುಕೊಳ್ಳುತ್ತಾ....

ನಾನು ಇಂದು ಮಾತನಾಡಿದೆ
ನೆನಪು ಮಾಸುತ್ತಿದೆ
ಮನದಲ್ಲಿ ಭರವಸೆ ನಿಂತಿದೆ

ನಿನ್ನ ನೋವು ಅನುಭವಿಸಿದೆ
ನೀನು ನನ್ನ ಬಿಟ್ಟಿರಲಾರೆ
ಆದರೂ ನಮ್ಮ ದಾರಿ ಬೇರೆ ಬೇರೆ

ಕಣ್ಣೊಳಗಿನ ಕಂಬನಿ ಅವಿತಿದೆ
ನೀನು ದೂರ ಮರೆಯಾಗುವವರೆಗೂ
ನಿನ್ನನ್ನು ಬಿಟ್ಟಿರಲಾರೆ ಓ ಪ್ರೇಮವೇ...

ಬೆತ್ತಲೆ

ಒಳಗಣ್ಣ ತೆರೆದೊಡೆ
ಹೊಸ ಪ್ರಪಂಚಕ್ಕೆ ಪಾದಾರ್ಪಣೆ

ಕತ್ತಲು ಕಳೆದೊಡೆ
ಬೆಳಕ ಹೊಸತನಕ್ಕೆ ಅಂಕುರಾರ್ಪಣೆ

ಆಹಂನ ಮುರಿದೊಡೆ
ನಮ್ಮೊಳ ಶಕ್ತಿ ಹೊರಹೊಮ್ಮುವುದು

ಮನಸ್ಸು ಬೆತ್ತಲಾದೊಡೆ
ಹೊಸ ಮನ್ವಂತರಕ್ಕೆ ಹಾದಿ ತೆರೆಯುವುದು

ನಾನು ಯಾರು?

ನಾನು ಯಾರು?
ಪ್ರಶ್ನೆಯೊಂದಿತ್ತು ಮನದಲ್ಲಿ;
ಸರಿಯಾದ ಉತ್ತರ
ಯಾವುದು?
ಪ್ರಶ್ನೆಗೆ ಮತ್ತೊಂದು ಪ್ರಶ್ನೆ!
ಉತ್ತರ ನಗಣ್ಯ;
ನನ್ನ ಮನಸ್ಸಿಗೆ
ಬಂದದ್ದು ನಾನು;
ಎಲ್ಲವೂ ನಾನು;
ಏನೆಲ್ಲಾ ನಾನು;
ಕಂಡದ್ದು;
ಕಾಣದ್ದು;
ಹಿತವಾದದ್ದು;
ಕಷ್ಟವಾದದ್ದು;
ಏನಲ್ಲ ನಾನು?
ಎಲ್ಲವೂ ನಾನೇ
ನಾನು ನಾನೇ!

ನಂಬಿಕೆಯ ಬಟ್ಟೆ

ನಾವೆಲ್ಲರೂ ಒಟ್ಟಿಗೆ ಹೆಜ್ಜೆಯಿಟ್ಟವರು;
ಬೀಸುವ ತಂಗಾಳಿಗೆ ಮೈಯ್ಯೊಡ್ಡಿದವರು;
ಹೋಗುವ ದಾರಿ ಒಂದೇ ಆದರೂ,
ಒಬ್ಬೊಬ್ಬರದು ಒಂದೊಂದು  ಗುರಿಯ ಹಾದಿ;
ಕೆಲವರಿಗೆ ಮೋಜು;
ಕೆಲವರಿಗದೇ ಜೀವನ;
ಕೆಲವರಿಗದೇ ಜೀವನ ಸಾಧನ;
ಮುಂದೆ ಮುಂದೆ ಸಾಗುತ್ತಿದ್ದೇವೆ
ಸಂತೋಷದ ಕನಸ ಹೊತ್ತು;
ಗೆಳೆತನದ ನಂಬಿಕೆಗಳು ದೃಢವಾಗಿದ್ದವು
ಮೌನದ ಕಡಲಲ್ಲಿ ತೇಲುವ ಹೊತ್ತು;
ಒಂದೇ ಅಪನಂಬಿಕೆಯ ಚಂಡಮಾರುತ
ಎಲ್ಲವನ್ನೂ ಏರುಪೇರಾಗಿಸಿತು;
ನಂಬಿಕೆಗಳ ದೃಢತೆಯ ಪರೀಕ್ಷಿಸಿತು;
ದೂರ ಜಾರಿದವರೆಷ್ಟೋ?
ಮಾತು ಮುರಿದವರೆಷ್ಟೋ?
ಜೊತೆಯಾದವರು ಯಾರು?
ಹುಡುಕಬೇಕಾಗಿದೆ ನಮ್ಮ ಜೊತೆಯ ಪಥಿಕರನ್ನು
ಇಂದು ನಾನು ಏಕಾಂಗಿ
ಮೌನ ಮುರಿದು,
ಹೃದಯ ತೆರೆದು
ನಂಬಿಕೆಯ ಬಟ್ಟೆಯ ಹರವಿ ನಿಂತಿದ್ದೇನೆ
ನನ್ನವರೆಲ್ಲರೂ ಬರುವರೆಂದು||

ದುಃಖದ ಮಳೆ

ಓ ಕೋಗಿಲೆಯೇ! ನನ್ನೊಡನೆ ಹಾಡು
ಗೊಂದಲಪುರದ ನೋವುಗಳೆಲ್ಲಾ ಮರೆಯಲಿ;
ಮನದ ಅಂಕದ ಮೇಲೆ ಬರುವ
ಕಾಣದ ತೀರದ,ದೂರದ ಬದುಕು ನನಸಾಗಲಿ||

ನಿನ್ನಯ ಮಧುರ,ಆಪ್ಯಾಯಮಾನ ಆಲಾಪ,
ನೆನಪ ಕಾರ್ಮೋಡ ಮನದಲ್ಲಿ ಇಳಿಸಿದೆ;
ತಿಳಿನೀಲಿ ಆಕಾಶದ,ತೇಲುವ ಚಂದಿರನ
ಕಣ್ಣಿಗೆ ಎಟುಕದ ದೂರ,ದುಃಖದ ಮಳೆ ಇಳೆಗೆ ಜಾರಿದೆ||

ನಿನ್ನಯ ಹಾಡ ಕೇಳುತ್ತಿದ್ದಂತೆ ಮರೆಯುವೆ,
ಕತ್ತಲ ಕರಾಳ ನೆರಳ ಭೀಬಿತ್ಸ ರೂಪ ಕಳಚುವೆ;
ನಿನ್ನಯ ಹಾಡ ಕೇಳುವೆ ಮತ್ತೆ,ಮತ್ತೆ,
ಪುನಃ ಹೊಸ ಅಧ್ಯಾಯ ಪ್ರಾರಂಬಿಸುವೆ||

ಓ ಕೋಗಿಲೆಯೇ! ನನ್ನೊಡನೆ ಹಾಡು
ಗೊಂದಲಪುರದ ನೋವುಗಳೆಲ್ಲಾ ಮರೆಯಲಿ;
ಮನದ ಅಂಕದ ಮೇಲೆ ಬರುವ
ಕಾಣದ ತೀರದ,ದೂರದ ಬದುಕು ನನಸಾಗಲಿ||

ಓ ನಿದ್ರೆಯೇ ಬಂದು ಬಿಡು

ಓ ನಿದ್ರೆಯೇ ಬಂದು ಬಿಡು
ತಡಮಾಡದೆ ಹರಿಸು ಹೊನಲು
ಎಲ್ಲಾ ಸುಖವ ಧಾರೆ ಎರೆದು ಬಿಡು
ಬೆಳಗು ಮೂಡುವ ಮೊದಲು||

ಬೆಳಗಾದರೆ ನೂರು ಸಮಸ್ಯೆಗಳು
ವಿರಾಮ ಕಾಣದ ಕದನಗಳು
ಕಾಮ,ಲೋಭ,ಮೋಹಗಳು
ಸ್ವಾರ್ಥ ತುಂಬಿದ ಕೊಡಗಳು||

ನಮ್ಮತನವ ಮರೆತ ಮುಖವಾಡಗಳು
ಬೆಳಕಲ್ಲೇ ಬೆತ್ತಲಾಗುವ ಚಿತ್ರಗಳು
ನೋಡನೋಡುತ್ತಿದ್ದಂತೆ ಬಣ್ಣಬದಲಿಸುವ ಚಿಟ್ಟೆಗಳು
ಹಗಲಲ್ಲೇ ಕಾಡುವ ಕನಸುಗಳು||

ಹೊತ್ತಿನೂಟಕ್ಕೆ ಕಷ್ಟಪಡುವ ಜೀವಗಳು
ಸುಖದ ಸುಪ್ಪತ್ತಿಗೆಯಲ್ಲೇ ಓಲಾಡುವ ಜಂತುಗಳು
ಅವಿರತ ಕತ್ತೆ ದುಡಿತದ ಕಾರ್ಮಿಕರು
ಮನಕಲಕುವ ದೃಶ್ಯಗಳು||

ಎಲ್ಲರೂ ಬಯಸುವುದೊಂದೇ
ಎಲ್ಲರ ಮಂತ್ರವೂ ಒಂದೇ
ನಿದ್ರೆಯೇ ಬಾ,
ಸುಖವ ತೋರು ಬಾ,
ನಾಳೆಯ ಚಿಂತೆಗಳ ಹರಿಸು ಬಾ,
ಸುಖದ ಹೊನಲ ಸುರಿಸು ಬಾ.....

ಕಾಯುತಿಹೆನು ಗೆಳೆಯ

ಕಾಯುತಿಹೆನು ಗೆಳೆಯ,
ನೀ ಬರುವೆಯೆಂದು,
ಹೋದವನು ಮತ್ತೆ ನೀ ಬರುವಿಯೆಂದು
ಕಾಯುತಿಹೆನು ಗೆಳೆಯ||

ನಿನ್ನ ನಗು, ನಿನ್ನ ಮಾತು,
ಆ ನೋಟ,
ಎಲ್ಲವೂ ಈಗಲೂ ಹಸಿರಾಗಿದೆ ಮನದಲ್ಲಿ
ಮರೆತಿಲ್ಲ ನಾನು,
ನೀ ಮರೆತು ಹೋದೆಯಾ ಗೆಳೆಯ||

ನಾನು ಅತ್ತಾಗ,
ನಾನು ಬಿದ್ದಾಗ,
ನಿನ್ನ ಕೈಗಳು ನನ್ನ ಕಣ್ಣಿರ ಒರೆಸಿತು,
ನಿನ್ನ ಕೈಗಳು ಬೀಳದಂತೆ ಹಿಡಿಯಿತು,
ಬಿದ್ದಾಗ ನಗುವವರೇ ಹೆಚ್ಚು, ನೀ ಎಲ್ಲರಂತಲ್ಲ ಗೆಳೆಯ||

ನಿನಗೆ ಅವಶ್ಯಕತೆ ಇದ್ದಾಗ,
ನಾನು ಅಸಹಾಯಕನಾಗಿದ್ದೆ,
ಮನದಲ್ಲೇ ನರಳಿದೆ ನಿನಗೆ ಸಹಾಯವಾಗಲಿಲ್ಲವೆಂದು,
ಅರಿತೋ,ಅರಿಯದೆಯೋ ನೀ ನನ್ನ ದ್ವೇಷಿಸಿದೆ
ದೂರವಿರಿಸಿದೆ ನನ್ನ ಏಕೆ ಗೆಳೆಯ||

ಹೋಡಿ, ಬಡೀ,
ನನ್ನ ಅಸಹಾಯಕತೆಗೆ,
ಹೊಡೆಯಬೇಡ,ತೊರೆಯಬೇಡ,
ಗೆಳೆತನದ ಮಧುರತೆಯ
ನನ್ನ ಅಸಹಾಯಕತೆಯನ್ನು ಶಪಿಸಿದ್ದೇನೆ,ನರಳಿದ್ದೇನೆ
ನಮ್ಮ ಸೊರಗಿದ ಗೆಳೆತನವ ನೆನೆದು ಗೆಳೆಯ||

ಕೈ ಚಾಚುವೆ,
ಕೈ ಮುಗಿವೆ,
ಸ್ನೇಹ ಹಸ್ತವ ಹಿಡಿಯುವೆಯೋ?
ಹೊಡೆದುರುಳಿಸುವೆಯೋ? ನಿನಗೆ ಬಿಟ್ಟಿದ್ದು......
ಸ್ನೇಹ ಮುರಿದುಬೀಳುವುದಕ್ಕೆ ನಾನೂ ಕಾರಣನಲ್ಲ,
ನೀನು ಕಾರಣನಲ್ಲ
ಎರಡು ಮನಗಳು,ಎರಡು ದೇಹಗಳು ಗೆಳೆಯ||

ಹೆಸರಲ್ಲೇನಿದೆ ಹೇಳು?

ಹೆಸರಲ್ಲೇನಿದೆ ಹೇಳು? ನಮ್ಮದಲ್ಲದ್ದು!,
ಹುಟ್ಟಿದ ಮೇಲೆ ಜೀವಕ್ಕೊಂದು ಗುರುತು ಪತ್ರದಂತೆ;
ಪ್ರೀತಿಯಿಂದಲೋ? ಯಾರ ನೆನಪಿನಿಂದಲೋ? ಗೊಣಗಿದಂತೆ,
ದೂರದ ಅದಾವುದೋ ಕಾಣದ ತರಂಗಗಳಂತೆ,
ಬೇಸಿಗೆಯ ನೀರವ ರಾತ್ರಿಯ ಪೇಲವ ಉಸಿರಾಟದಂತೆ,
ಬಾಳ ಬಂಡಿಯ ಪಯಣದಲ್ಲಿ ಬದುಕಲು ಟಿಕೇಟು-ಹೆಸರು||

ಕಾಗದದ ಮೇಲೆ ಬರೆದ ಹೆಸರು ಎಂದೋ ಅಂದಗೆಟ್ಟಿದೆ
ಅಸ್ಪಷ್ಟವಾಗಿ,ನಿಗೂಡವಾಗಿ ಏನನ್ನೂ ಹೇಳುತ್ತಿದೆ,
ಸಮಾದಿಯ ಮೇಲೆ ಕೆತ್ತಿದ ಪದಗಳ ಕುರುಹು,ಸ್ಮಾರಕದಂತೆ,
ಸತ್ತ ಹಾಗು ಗತಕಾಲದ ಕಳೆದುಹೋದ ನಿಧಿಯಂತೆ,
ನಮ್ಮ ಹಿರಿಕರ,ಸಂಸ್ಕೃತಿಯ,ಭಾಷೆಯ ಮೇಲಿನ ಋಣದಂತೆ,
ನಮ್ಮ ಹೆಸರ ಮೇಲೆ ಪ್ರೀತಿ ಹೆಚ್ಚು ನಮಗೆ||

ಏನಿದೆ ಹೇಳು ಹೆಸರಲ್ಲಿ? ಮರೆತು ಹೋಗಿದೆ ಬಹಳ ದಿನಗಳಾಗಿ,
ಬಿರುಗಾಳಿಯ ಆವೇಗ ಹಳತನ್ನು ಅಳಿಸಿಹಾಕಿದೆ,ನೆಟ್ಟು ಹೊಸತನ್ನು,
ಅದರೂ ನನ್ನದೆಂಬ ಭ್ರಮೆ,ಪ್ರೀತಿ ನಮ್ಮನ್ನೆಂದೂ ತೊರೆಯದು
ಹೆಸರಲ್ಲೇನಿದೆ ಎಂಬ ಹುಡುಕಾಟದ ಸಿಹಿಭಾವ ಜೀವ ಹಿಡಿದಿದೆ;
ಯಾರೋ ಹೆಸರು ಕರೆದಾಗ ನಮ್ಮನ್ನೇ ಕರೆದರೆಂಬ ವಾಂಛೆ ಏಕೋ?
ಹೆಸರೇಕೆ ನಮ್ಮನ್ನು ಅಷ್ಟು ಬಲವಾಗಿ ಅಪ್ಪಿಹುದೋ?||

ಜೀವ ತೊರೆವಾಗ ಆ ಕ್ಷಣದ ನರಳಾಟ
ಹೆಸರಿಗಾವ ನರಳಾಟವಿಲ್ಲ,ನಗುವಿಲ್ಲ-ನಿರ್ಲಿಪ್ತ;
ಕಾಗದದ ಮೇಲೆ ನಲಿವುದು ಹೊಸ ಲೇಖನಿಯಿಂದ;
ಆಸ್ಪತ್ರೆಯ ಮಂಚದಲ್ಲಿ ಮಲಗಿರಲಿ ನರಳುತ್ತಾ
ಎಲ್ಲರೂ ಕೇಳುವರು ವೈದ್ಯರ, ಹೆಸರ ಮರೆತು
" ರೋಗಿ ಹೇಗಿದ್ದಾನೆ? ಬದುಕುಳಿವ ಸಾಧ್ಯತೆ ಏನು?"
ಜೀವ ಇರುವವರೆಗೂ ಈ ಹೆಸರಿನ ಅಡ್ಡಪಟ್ಟಿ ನಮಗೆ
ಜೀವ ಹೋದ ಮೇಲೆ ಬರೀ ಶವ,ಬರೀ ಶವವಷ್ಟೆ ನಾವು
ಶವದ ಜೊತೆ ಹೆಸರೂ ಮಣ್ಣಾಗುವುದು.....
ಪಯಣ ಮುಗಿದ ಮೇಲೆ ಟಿಕೇಟನ್ನು ಯಾರೂ ಜೋಪಾನ ಮಾಡರು||

ವಿಧಾಯ

ಓ! ಅವನನ್ನು ಏನೆಂದು ಕರೆಯಲಿ?
ಗೆಳೆಯನೇ? ಇನಿಯನೇ? ಅಥವಾ
ನೋವನ್ನು ನೀಗುವ ದೇವನೆನ್ನಲೋ?
ಅಲ್ಲಿ ಕುಳಿತಿದ್ದಾನೆ,
ನಿಶಬ್ದವಾದ ನನ್ನ ಮನೆಯ ಬಾಗಿಲಿನ ಮುಂದೆ
ನನ್ನ ಸಾವಿನ ಮನೆಯ ಬಾಗಿಲನ್ನು ತೆರೆದು
ಅಲ್ಲಿಯೇ ಕಾಯುತಿದ್ದಾನೆ,
ಯಾವ ಮುನ್ಸೂಚನೆಯನ್ನು ನೀಡದೆ ಬಂದ ಅತಿಥಿ.
ಅದೇ,ಅದೇ ನನ್ನ ಭರವಸೆಯ ಕಸಿಯುತ್ತಿದೆ.
ನಾನು ಕೊನೆಯಾಗುತ್ತಿದ್ದಂತೆಯೇ...
ನನ್ನೆಲ್ಲಾ ಭವಿಷ್ಯವೆಲ್ಲಾ ಕಣ್ಣಮುಂದೆ ನಾಪತ್ತೆಯಾಗುತ್ತದೆ.
ನನ್ನ ಕಣ್ಣೊಳಗಿನ ಚೈತನ್ಯ ಕಳೆಗುಂದುತಿದೆ
ನೋಡ ನೋಡುತ್ತಿದ್ದಂತೆ ನಾನೂ ಮೈಮರೆಯುತ್ತಿದ್ದೇನೆ.

ಪ್ರಪಂಚದ ತುತ್ತ ತುದಿಯಲ್ಲಿ ನಿಂತು ಒಮ್ಮೆ ನೋಡು
ಮಂಕು ಕವಿದ ಮಂಜು ಜಾರುತ್ತಿದೆ ಪ್ರವಾಹದಂತೆ
ತುತ್ತ ತುದಿಯಲ್ಲಿ ನಿಂತು ಸಾವ ನೆನೆಯುವವನಿಗೆ
ಜೀವನ ಮರೀಚಿಕೆ ಎನಿಸದಿರದು
ಅದಕ್ಕೂ ಗಂಡೆದೆ ಬೇಕೆ ಬೇಕು.
ಒಂದು ಹೆಜ್ಜೆಯ ಅಂತರವಷ್ಟೇ "ಜೀವನ" ಅಥವಾ "ಸಾವು"
ಆರಿಸಿಕೊಳ್ಳುವುದು ಮನಸ್ಸಿನ ನಿರ್ಧಾರ,
ಆದರೂ ಜೀವನ!, ನಾನು ಎಷ್ಟೋಂದು ಪ್ರೀತಿಸುತ್ತಿದ್ದೆ.
ಹೊಸತನದ ಆಕಾಶನೀಲಿಯ ತೆರೆ ತೆರೆದುಕೊಳ್ಳುತ್ತಿದೆ;
ಬೆಟ್ಟ ಪರ್ವತಗಳು ಸೂರ್ಯನ ಕಿರಣಗಳಿಗೆ ಬೆಳಗುತ್ತಿದೆ;
ನದಿ,ತೊರೆಗಳು ಜೋಗುಳ ಹಾಡುತ್ತಾ ನರ್ತಿಸುತ್ತಿವೆ;
ಮೌನ ಕಾಣದ ಕಾರಣಕ್ಕೆ ಶೋಕಿಸುತ್ತಿದೆ;
ಚೈತನ್ಯ ಕಾರಣವಿಲ್ಲದೆ ನರಳುತ್ತಿದೆ;
ಶಾಂತಿಯ ನೆರಳು ವಿಧಾಯ ಹೇಳಬಯಸಿದೆ;

ಪ್ರೀತಿಸುತ್ತಿದ್ದೆ.....

ನಾನು ನಿನ್ನ ಪ್ರೀತಿಸುತ್ತಿದ್ದೆ
ಪ್ರಾಯಶಃ ಪ್ರೀತಿಸುತ್ತಲೇ ಇರುತ್ತೇನೆ
ಪ್ರೀತಿಯ ಈ ಭಾವ ಮನದಲ್ಲಿ ಅಳಿಯದೆ ಉಳಿವುದು
ನನ್ನ ಈ ಪ್ರೀತಿಯ ಹಿಂಸೆ
ಇನ್ನೆಂದೂ ನಿನ್ನನ್ನು ಭಾದಿಸದು
ನಾನು ಬಯಸುವುದೂ ಇಲ್ಲ
ನಿನಗೆಂದೂ ನೋವಾಗಲೆಂದು.

ನಾನು ನಿನ್ನ ಪ್ರೀತಿಸುತ್ತಿದ್ದೆ
ನನಗೆ ತಿಳಿದಿದೆ ಅಪನಂಬಿಕೆ,
ಮತ್ಸರ,ನಾಚಿಕೆ ಎಲ್ಲವೂ ಪ್ರೀತಿಗೆ ಬೇಕಾಗಿಲ್ಲ
ಮನಸ್ಸು ಮಾಡಿದೆ ಪ್ರೀತಿಸಲು ಮತ್ತೆ,
ಅದೇ ಹೊಸತನ,ಅದೇ ಹುಮ್ಮಸ್ಸು,
ಆ ಪ್ರೀತಿಯ ದೇವತೆ ಮತ್ತೆ ಕರುಣಿಸಲಿ
ನಿನ್ನನ್ನೇ ಪ್ರೀತಿಸಲು.....

ದೂರದ ಪ್ರೀತಿ

ದೂರದೂರಿಗೆ ಹೊರಟಿಹೆನು ನನ್ನ ಮನೆಯದೇ ಎಂದು ತಿಳಿದು
ತೊರೆಯುತ್ತಿದ್ದೇನೆ ನನ್ನದಲ್ಲದ ಈ ಮನೆಯನ್ನು;
ನಿನ್ನ ಕೈಹಿಡಿದು ಕಣ್ಣೀರ ಸುರಿಸಿ ಇನ್ನೂ
ಕ್ಷಣವೂ ಕಳೆದಿಲ್ಲ,ಭಾವನೆಗಳ ಸೋಲಿಸಿತೇ ಕಣ್ಣೀರು?
ಕೈಗಳು ಈಗಲೂ ನಡುಗುತ್ತಲೇ ಇದೆ,
ಮಾತುಗಳು ತೊದಲುತ್ತಿವೆ,
ಮನಸ್ಸು ಹೇಳುತ್ತಿದೆ
" ಈ ನೋವು ಕೊನೆ ಇಲ್ಲವಾಗಲಿ".

ತೊರೆದು ಹೋದೆ ಏಕಾಂತದಲ್ಲಿ
ವಿರಹದಿ ಬೇಯುತ್ತಿದ್ದಾಗ,
ಕಾಣದ ಸುಖವರಸಿ ಸೇರಿದೆವು ಪ್ರೀತಿಯಿಂದಲೇ,
ನೋವಲ್ಲದೆ ಮತ್ತೇನೂ ಕಾಣಲಿಲ್ಲವಾಗ;
ಮತ್ತೆ ಸೇರೋಣ ಮೈಥುನದ ನೆರಳಲ್ಲಿ
ನೀನೆಂದಾಗ, ಸುಖದ ಭ್ರಮೆಯು ತೆರೆದುಕೊಂಡಿತಾಗ;
ನೋವಿಲ್ಲದ ಪ್ರೀತಿಯಲ್ಲಿ ಮೀಯೋಣ
ತಿಳಿನೀಲಿಯಾಕಾಶದ ಅನಂತತೆಯಲ್ಲಿ;

ಕತ್ತಲಾವರಸಿ ತಿಳಿನೀಲಿ ಬಾನು ಮೈತೆರೆದುಕೊಂಡಾಗ
ಮನಸ್ಸು ಭಾರವಾಗಿ ವಿರಹದಿ ನಿನ್ನ ನೆನೆದು ನರಳಿತು,
ಸುಖದ ನೆರಳ ಭ್ರಮೆ ಮೈಮನನೆಲ್ಲಾ ಆವರಿಸಿತು,
ನೋವೆಲ್ಲಾ ಸುಖವಾಗತೊಡಗಿತು,
ರಕ್ತದೋಕುಳಿಯೂ ನಿರ್ಮಲ ನದಿಯಂತೆ ತೋರಿತು,
ನನ್ನ ನರಳಾಟವೂ ಸ್ವರ್ಗಸುಖವಾಗಿ ಅಪ್ಯಾಯಮಾನವಾಯಿತು,
ನಮ್ಮೊಡನೆಯ ಪ್ರೀತಿ ಹಾಲ್ತೊರೆಯಾಗುವುದೋ?
ಇಲ್ಲ, ಹಾಲೋಗರವಾಗಿ ಕಾಡುವುದೋ?
ನಿನ್ನ ಹುಡುಕುತ್ತಾ ಹೊರಟಿಹೆನು
ಮತ್ತೆ ನೀನು ಸಿಗುವ ಭರವಸೆಯಿಂದೆ.....

ಬಿಡುಗಡೆ

ಕಾಣದ ಮನದಾಳದ ಮೂಲೆಯಲ್ಲಿ
ಬೀಡುಬಿಟ್ಟಿರುವ ನೋವುಗಳ ಕಂತೆಗಳು;
ವಸಂತಾಗಮನದ ಸಂತಸದಲ್ಲಿ
ನೋವಿನ ಕಂತೆಗಳ ಬಿಡುಗಡೆಯ ಆಲಾಪಗಳು;

ನನ್ನ ಮನಸ್ಸು ಈಗ ನಿರಾಳವಾಗಿದೆ
ನನ್ನನಾಳುವ ಆ ದೇವಗೆ ನೂರು ನಮಸ್ಕಾರ;
ನನ್ನೊಳ ಭಾದಿಸುವ ಭಾವಗಳ ತೊಳಲುವಿಕೆಗೆ
ಬಿಡುಗಡೆ,ಮುಕ್ತಿಯನ್ನಿತ್ತಿದ್ದೇನೆ ಸಂತಸದಿಂದೆ;

ನಿನ್ನ ಹೆಸರು

ಎಂಥ ವಿಚಿತ್ರ ನೋಡು ಗೆಳತಿ,
ಪ್ರೀತಿಯ ಉನ್ಮಾದದಲ್ಲಿ,
ಪ್ರೀತಿಯ ಉತ್ಕಟತೆಯಲ್ಲಿ,
ಬರೆದೆ ನಿನ್ನ ಹೆಸರ ಆಗಸದ ಮೋಡಗಳ ಮೇಲೆ
ಹೊತ್ತೊಯ್ದವು ಗಾಳಿ ಚದುರಿ ಮೇಲೆ ಮೇಲೆ;

ವಸಂತಾಗಮನದ ಮುಂಚೆ ಮರಗಳ ಮೇಲೆಲ್ಲಾ ಬರೆದೆ
ಹಸಿರೆಲೆಗಳೆಲ್ಲಾ ಮಾಗಿ ಬಿದ್ದುಹೋದವು ಕಳಚಿ;

ಸಮುದ್ರದ ಮಳಲ ಮೇಲೆ ಬರೆದೆ
ಅಲೆಗಳು ಕೊಚ್ಚೊಯ್ದವು ಬಿಡದೆ;

ಬಾಳ ಪುಟದ ಹೃದಯಲ್ಲಿ ಬರೆದೆ
ಜೀವ ಇರುವವರೆಗೂ ಅಳಿಸಲಾಗದೆ ಬೆಸೆದಿದೆ;

ಕರುಣದಿ ಕಾಯೇ ಸರಸತಿಯೇ

ಕರವ ಪಿಡಿದು ನಮಿಸುವೆ
ತಾಯಿ ಸರಸತಿಯೆ
ನಿನ್ನೊಲ ಬೇಡುವೆ
ಕರುಣದಿ ಸಲಹೇ ಭಾರತಿಯೇ||

ನಿನ್ನ ಮುದದಿ ಬೇಡುವೆ
ನಿರ್ಮಲ ಶ್ವೇತಾಂಬರಿಯೆ
ನೀಡು ನಿರ್ಮಲ ಮನವ
ಅಜನ ಪಿತನ ರಾಣಿಯೆ||

ಹಾಡಿ ಹೊಗಳಲು
ನೀಡು ಅಕ್ಷರಗಳ ಕರುಣದಿ
ಮನವ ನೀಡು
ಎಲ್ಲೆಲ್ಲೂ ನಿನ್ನ ಕಾಣುವ ತೆರದಿ||

ಹೊಸ ವರುಷ ಬರುತಿರಲು.....

ಹೊಸ ವರುಷ ಬರುತಿರಲು
ಹೊಸ ಬಯಕೆಯು ಚಿಗುರೊಡೆಯುತಿದೆ;
ಮುಂಬರುವ ಹೊಸ ದಿನಗಳು
ಹೊಸ ಭರವಸೆಯ ಹೊಮ್ಮಿಸಲಿ;
ಸಮೃದ್ಧಿಯ ನೆರೆ ಹರಿಯಲಿ;
ಸುಖ-ಸಂತೋಷಗಳ ಹೊತ್ತು ತರಲಿ;
ಹೊಸ ಯೋಚನೆಗಳಿಗೆ ದಾರಿ ತೋರಲಿ;
ಹೊಸ ಆಲೋಚನೆಗಳು ಒಡಮೂಡಲಿ;
ಹೊಸ ದಿನ,ಪ್ರತಿ ದಿನ ಶಕ್ತಿ ಹರಿದುಬರಲಿ;
ಹೊಸ ಯೋಜನೆಗಳಿಗೆ ತೇಜಸ್ಸು ಭೋರ್ಗರೆಯಲಿ;
ಹೊಸತನದ ಗೊಂಚಲಿನ ಹೂವಿನಂತೆ,
ಸಾಕಾರಗೊಳಿಸುವ ಪ್ರಾರ್ಥನೆಯಂತೆ,
ಆಗಸದಿಂದ ಈ ಭೂಮಿಗೆ ಚೈತನ್ಯದ ಬೆಳಕು ಹರಿದುಬರಲಿ;
ಎಲ್ಲ ಜೀವಿಗಳ ಪುಳಕಗೊಳಿಸಲಿ;
ಪ್ರೀತಿಯ ಹೊನಲು ನಿರಂತರ ಹರಿದುಬರಲಿ;

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...