ಹೆಸರಲ್ಲೇನಿದೆ ಹೇಳು?

ಹೆಸರಲ್ಲೇನಿದೆ ಹೇಳು? ನಮ್ಮದಲ್ಲದ್ದು!,
ಹುಟ್ಟಿದ ಮೇಲೆ ಜೀವಕ್ಕೊಂದು ಗುರುತು ಪತ್ರದಂತೆ;
ಪ್ರೀತಿಯಿಂದಲೋ? ಯಾರ ನೆನಪಿನಿಂದಲೋ? ಗೊಣಗಿದಂತೆ,
ದೂರದ ಅದಾವುದೋ ಕಾಣದ ತರಂಗಗಳಂತೆ,
ಬೇಸಿಗೆಯ ನೀರವ ರಾತ್ರಿಯ ಪೇಲವ ಉಸಿರಾಟದಂತೆ,
ಬಾಳ ಬಂಡಿಯ ಪಯಣದಲ್ಲಿ ಬದುಕಲು ಟಿಕೇಟು-ಹೆಸರು||

ಕಾಗದದ ಮೇಲೆ ಬರೆದ ಹೆಸರು ಎಂದೋ ಅಂದಗೆಟ್ಟಿದೆ
ಅಸ್ಪಷ್ಟವಾಗಿ,ನಿಗೂಡವಾಗಿ ಏನನ್ನೂ ಹೇಳುತ್ತಿದೆ,
ಸಮಾದಿಯ ಮೇಲೆ ಕೆತ್ತಿದ ಪದಗಳ ಕುರುಹು,ಸ್ಮಾರಕದಂತೆ,
ಸತ್ತ ಹಾಗು ಗತಕಾಲದ ಕಳೆದುಹೋದ ನಿಧಿಯಂತೆ,
ನಮ್ಮ ಹಿರಿಕರ,ಸಂಸ್ಕೃತಿಯ,ಭಾಷೆಯ ಮೇಲಿನ ಋಣದಂತೆ,
ನಮ್ಮ ಹೆಸರ ಮೇಲೆ ಪ್ರೀತಿ ಹೆಚ್ಚು ನಮಗೆ||

ಏನಿದೆ ಹೇಳು ಹೆಸರಲ್ಲಿ? ಮರೆತು ಹೋಗಿದೆ ಬಹಳ ದಿನಗಳಾಗಿ,
ಬಿರುಗಾಳಿಯ ಆವೇಗ ಹಳತನ್ನು ಅಳಿಸಿಹಾಕಿದೆ,ನೆಟ್ಟು ಹೊಸತನ್ನು,
ಅದರೂ ನನ್ನದೆಂಬ ಭ್ರಮೆ,ಪ್ರೀತಿ ನಮ್ಮನ್ನೆಂದೂ ತೊರೆಯದು
ಹೆಸರಲ್ಲೇನಿದೆ ಎಂಬ ಹುಡುಕಾಟದ ಸಿಹಿಭಾವ ಜೀವ ಹಿಡಿದಿದೆ;
ಯಾರೋ ಹೆಸರು ಕರೆದಾಗ ನಮ್ಮನ್ನೇ ಕರೆದರೆಂಬ ವಾಂಛೆ ಏಕೋ?
ಹೆಸರೇಕೆ ನಮ್ಮನ್ನು ಅಷ್ಟು ಬಲವಾಗಿ ಅಪ್ಪಿಹುದೋ?||

ಜೀವ ತೊರೆವಾಗ ಆ ಕ್ಷಣದ ನರಳಾಟ
ಹೆಸರಿಗಾವ ನರಳಾಟವಿಲ್ಲ,ನಗುವಿಲ್ಲ-ನಿರ್ಲಿಪ್ತ;
ಕಾಗದದ ಮೇಲೆ ನಲಿವುದು ಹೊಸ ಲೇಖನಿಯಿಂದ;
ಆಸ್ಪತ್ರೆಯ ಮಂಚದಲ್ಲಿ ಮಲಗಿರಲಿ ನರಳುತ್ತಾ
ಎಲ್ಲರೂ ಕೇಳುವರು ವೈದ್ಯರ, ಹೆಸರ ಮರೆತು
" ರೋಗಿ ಹೇಗಿದ್ದಾನೆ? ಬದುಕುಳಿವ ಸಾಧ್ಯತೆ ಏನು?"
ಜೀವ ಇರುವವರೆಗೂ ಈ ಹೆಸರಿನ ಅಡ್ಡಪಟ್ಟಿ ನಮಗೆ
ಜೀವ ಹೋದ ಮೇಲೆ ಬರೀ ಶವ,ಬರೀ ಶವವಷ್ಟೆ ನಾವು
ಶವದ ಜೊತೆ ಹೆಸರೂ ಮಣ್ಣಾಗುವುದು.....
ಪಯಣ ಮುಗಿದ ಮೇಲೆ ಟಿಕೇಟನ್ನು ಯಾರೂ ಜೋಪಾನ ಮಾಡರು||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...