ವಿಧಾಯ

ಓ! ಅವನನ್ನು ಏನೆಂದು ಕರೆಯಲಿ?
ಗೆಳೆಯನೇ? ಇನಿಯನೇ? ಅಥವಾ
ನೋವನ್ನು ನೀಗುವ ದೇವನೆನ್ನಲೋ?
ಅಲ್ಲಿ ಕುಳಿತಿದ್ದಾನೆ,
ನಿಶಬ್ದವಾದ ನನ್ನ ಮನೆಯ ಬಾಗಿಲಿನ ಮುಂದೆ
ನನ್ನ ಸಾವಿನ ಮನೆಯ ಬಾಗಿಲನ್ನು ತೆರೆದು
ಅಲ್ಲಿಯೇ ಕಾಯುತಿದ್ದಾನೆ,
ಯಾವ ಮುನ್ಸೂಚನೆಯನ್ನು ನೀಡದೆ ಬಂದ ಅತಿಥಿ.
ಅದೇ,ಅದೇ ನನ್ನ ಭರವಸೆಯ ಕಸಿಯುತ್ತಿದೆ.
ನಾನು ಕೊನೆಯಾಗುತ್ತಿದ್ದಂತೆಯೇ...
ನನ್ನೆಲ್ಲಾ ಭವಿಷ್ಯವೆಲ್ಲಾ ಕಣ್ಣಮುಂದೆ ನಾಪತ್ತೆಯಾಗುತ್ತದೆ.
ನನ್ನ ಕಣ್ಣೊಳಗಿನ ಚೈತನ್ಯ ಕಳೆಗುಂದುತಿದೆ
ನೋಡ ನೋಡುತ್ತಿದ್ದಂತೆ ನಾನೂ ಮೈಮರೆಯುತ್ತಿದ್ದೇನೆ.

ಪ್ರಪಂಚದ ತುತ್ತ ತುದಿಯಲ್ಲಿ ನಿಂತು ಒಮ್ಮೆ ನೋಡು
ಮಂಕು ಕವಿದ ಮಂಜು ಜಾರುತ್ತಿದೆ ಪ್ರವಾಹದಂತೆ
ತುತ್ತ ತುದಿಯಲ್ಲಿ ನಿಂತು ಸಾವ ನೆನೆಯುವವನಿಗೆ
ಜೀವನ ಮರೀಚಿಕೆ ಎನಿಸದಿರದು
ಅದಕ್ಕೂ ಗಂಡೆದೆ ಬೇಕೆ ಬೇಕು.
ಒಂದು ಹೆಜ್ಜೆಯ ಅಂತರವಷ್ಟೇ "ಜೀವನ" ಅಥವಾ "ಸಾವು"
ಆರಿಸಿಕೊಳ್ಳುವುದು ಮನಸ್ಸಿನ ನಿರ್ಧಾರ,
ಆದರೂ ಜೀವನ!, ನಾನು ಎಷ್ಟೋಂದು ಪ್ರೀತಿಸುತ್ತಿದ್ದೆ.
ಹೊಸತನದ ಆಕಾಶನೀಲಿಯ ತೆರೆ ತೆರೆದುಕೊಳ್ಳುತ್ತಿದೆ;
ಬೆಟ್ಟ ಪರ್ವತಗಳು ಸೂರ್ಯನ ಕಿರಣಗಳಿಗೆ ಬೆಳಗುತ್ತಿದೆ;
ನದಿ,ತೊರೆಗಳು ಜೋಗುಳ ಹಾಡುತ್ತಾ ನರ್ತಿಸುತ್ತಿವೆ;
ಮೌನ ಕಾಣದ ಕಾರಣಕ್ಕೆ ಶೋಕಿಸುತ್ತಿದೆ;
ಚೈತನ್ಯ ಕಾರಣವಿಲ್ಲದೆ ನರಳುತ್ತಿದೆ;
ಶಾಂತಿಯ ನೆರಳು ವಿಧಾಯ ಹೇಳಬಯಸಿದೆ;

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...