ಏಕೆ ಗೆಳೆಯ ಹೀಗೆ ಮಾಡಿದೆ?

ಏಕೆ ಗೆಳೆಯ ಹೀಗೆ ಮಾಡಿದೆ?
ಈ ನಿನ್ನ ನಿರ್ಧಾರ ಆಶ್ಚರ್ಯ ತಂದಿದೆ
ಮನದಲ್ಲೆಂದೂ ಎಣಿಸಿರಲಿಲ್ಲ ನೀ ಹೇಡಿಯಾಗುವೆಯೆಂದು||

ಎಲ್ಲವನ್ನೂ ಗೆದ್ದವನೆಂದು ತಿಳಿದಿದ್ದೆ;
ಪರಿಶ್ರಮದ ಪ್ರತೀಕವಾಗಿದ್ದೆ;
ನೋಡನೋಡುತ್ತಿದ್ದಂತೆ ಎಷ್ಟು ಎತ್ತರ ಏರಿದ್ದೆ;
ನನ್ನ ಜೀವನದ ನಾಯಕ ಆಗಿಹೋಗಿದ್ದೆ;
ಎಷ್ಟು ಹೆಮ್ಮೆ ಇತ್ತು ನಿನ್ನ ಬಗ್ಗೆ;
ನಿನ್ನ ಸಾವು ನನ್ನಲ್ಲಿ ಒಂದು ಭಯವನ್ನೇ ತಂದಿದೆ
ಎಲ್ಲವೂ ಮರೀಚಿಕೆ ಎನಿಸುತ್ತಿದೆ||

ಎಲ್ಲವೂ ನಿನ್ನಲ್ಲಿ ಇತ್ತೆಂದು ನಂಬಿದ್ದೆ;
ಎಲ್ಲವನ್ನೂ ಜಯಿಸುವ ಶಕ್ತಿ ನಿನ್ನಲ್ಲಿ ಇತ್ತು;
ನಿನ್ನ ಆತ್ಮಹತ್ಯೆಯಿಂದ ತಿಳಿದಿದ್ದು,
ನಿನ್ನಲ್ಲಿ ಜೀವನ ಪ್ರೀತಿ ಇರಲಿಲ್ಲವೆಂದು;
ಹೇಡಿಗಳೇ ಸಾವಿನ ಬಗ್ಗೆ ಯೋಚಿಸುವರು
ನೀನೂ ಅವರುಗಳ ಸಾಲಿನಲ್ಲಿ ಸೇರಿಹೋದೆ
ಅದೇ ನನ್ನ ಮನದಲ್ಲಿ ಬೇಸರ ತಂದಿದೆ||

ಆದರೂ ಆದರೂ....
ಸಾವಿನ ನಿರ್ಧಾರ ತೆಗೆದುಕೊಳ್ಳುವಾಗ
ನಿನ್ನ ಮನದಲ್ಲಿ ಅದೆಷ್ಟು ನೋವಿತ್ತೋ
ಅದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ...
ಒಂದು ಕ್ಷಣ ಯೋಚಿಸಬಹುದಿತ್ತು;
ಯಾವ ನೋವಿದೆ ಈ ಪ್ರಪಂಚದಲ್ಲಿ ಸಂತೈಸಲಾಗದ್ದು?
ಶಾಂತಿ,ಸಮಾಧಾನ,ಪ್ರೀತಿ,ಆತ್ಮೀಯತೆ,ಮಮತೆ,
ಆರೈಕೆ,ವೈರಾಗ್ಯ ಗಳಿಂದೆಲ್ಲಾ ಸಾಧ್ಯವೆಂಬ ಅರಿವಿರಬೇಕಿತ್ತು;
ನಾ ತಿಳಿಯೇ? ಏನು ಹೇಳಲಿ?
ಆದರೂ ಗೆಳೆಯ,
ನೋವಿನಿಂದಲೇ ಪ್ರಾರ್ಥಿಸುವೆ
"ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ"

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...