ಯಾರು ನನ್ನ ಬೆನ್ನ ಹಿಂದೆ ಬೆಂಬಲವಾಗಿ ನಿಂತರೋ?
ಕಾಣದ ಆ ಕೈಗಳು ಎಷ್ಟು ಸಾರಿ ಬೆನ್ನು ತಟ್ಟಿತೋ?
ಪ್ರತಿ ಸಾರಿ ಸೋತು ಕಣ್ಣೀರಿಟ್ಟಾಗ
ಜೀವನ ಬೇಡಬೇಡವೆಂದು ಬೇಸರಿಸಿದಾಗ
ನನ್ನ ಕಣ್ಣಾಗಿ,ಮನದ ಶಕ್ತಿಯಾಗಿ,ಗೆಲುವಾಗಿ ಕಾಣದಾಯಿತೋ!
ಹೃದಯ ಬೆಂದು ಬೇಯುತ್ತಿರುವಾಗ
ಕಣ್ಣಲ್ಲಿ ನೋವು ನೀರಾಗಿ ಹರಿವಾಗ
ಗೆಳೆಯರು ಕೈಲಾಗದವನೆಂದು ನಕ್ಕಾಗ
ಪರೀಕ್ಷೆಯಲ್ಲಿ ನಾಪಾಸಾದಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?
ಆಶಾವಾದವೆಲ್ಲಾ ನಿರಾಶೆಯಾಗಿ ಕರಗುವಾಗ
ಹೆಜ್ಜೆಹೆಜ್ಜೆಯಲ್ಲಿ ಸೋಲುಂಡಾಗ
ನನ್ನವರೆಂದುಕೊಂಡವರೆಲ್ಲಾ ಕಾಣೆಯಾದಾಗ
ಏಕಾಂಗಿಯಾಗಿ ಜೀವನದ ಕಹಿ ನುಂಗುವಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?
ನಾನು ನಾನಾಗದೆ ನನ್ನ ನಾ ಮರೆತಾಗ
ನನ್ನತನವ ಕಂಡುಕೊಂಡು ನರಳುವಾಗ
ನೆರೆಹೊರೆಯವರ ಠೀಕೆ ಮನವ ಕಲಕಿದಾಗ
ಸಿಟ್ಟು ದ್ವೇಷವಾಗಿ ಮನುಷ್ಯತ್ವವ ಮರೆತಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?
ಇಂದು ನಾನು ನಾನಾಗಿಹೆ
ಠೀಕೆ-ಟಿಪ್ಪಣಿಗಳಿಗೆಲ್ಲಾ ಉತ್ತರವಾಗಿಹೆ
ಕಂಡು ನಕ್ಕ ಗೆಳೆಯರಿಗೆಲ್ಲಾ ಸವಾಲಾಗಿಹೆ
ಸೋತು-ಸೋತು ಗೆಲ್ಲುವಂತಾಗಿಹೆ
ಯಾರೂ ಸಾಗದ ಹಾದಿಯಲ್ಲಿ ನಡೆದಿಹೆ
ನನ್ನ ಬೆನ್ನಹಿಂದೆ ನಿಂತು ಬೆಂಬಲವಾಗಿಹರಾರೋ
ತಿಳಿಯುವ ಬಯಕೆ ಇಂದಾಗಿದೆ
No comments:
Post a Comment