Sunday, September 19, 2010

ಬಯಕೆಯೆಂಬ ತೊರೆ

ನಾನಿಲ್ಲದೆ ಜಗವಿಲ್ಲ
ನಾನಿಲ್ಲದೆ ಚೈತನ್ಯವಿಲ್ಲ
ಎಲ್ಲರಲ್ಲೂ ಹರಿವೆ ಕಣ್ಣಿಗೆ ಕಾಣದೆ
ನನ್ನದೇ ಮಸಲತ್ತು ಯಾರನ್ನೂ ಬಿಡದೆ\\


ನನ್ನ ಅಣತಿಯಂತೆ ಎಲ್ಲವೂ
ನಾನೇ ಕಾರಣ ಎಲ್ಲಕೂ
ನಿದ್ದೆಯಲ್ಲಾ, ಎಚ್ಚರದಲ್ಲೂ
ಕಾಡುವೆ ಗುರಿಯ ತಲುಪುವರೆಗೂ\\


ಸಣ್ಣ ಸಣ್ಣ ತೊರೆಯು ನಾ
ಭೋರ್ಗರೆಯುವ ನದಿಯು ನಾ
ಕಣ್ಣ ಬೆಳಕು ನಾ
ನಡೆದಾಡಿಸುವ ಶಕ್ತಿಯು ನಾ\\


ನಾನಿಲ್ಲದೆ ನೀನಿಲ್ಲ
ನಿನ್ನೊಳು ಹರಿವ ಪ್ರೇಮಧಾರೆಯು ನಾ
ನಿನ್ನೊಳು ಹರಿವ ಕರುಣೆಯು ನಾ
ಜಂಗಮ ನಾನು\\


ಕಣ್ಣಲಿ ಹರಿಯುವ ನೀರು ನಾ
ನರನರಗಳಲಿ ಹರಿಯುವ ಚೈತನ್ಯ ನಾ
ನಿನ್ನಲಿ ಕಾಣುವ ಅರಿವು ನಾ
ನಿನ್ನಲಿರುವ ಆಶಾಕಿರಣ ನಾ\\

ಬತ್ತದ ತೊರೆಯು ನಾ
ಕಾಣದೆ ಹರಿಯುವ ಬಯಕೆಯು ನಾ
ಮೋಡವಾಗಿಸುವ ಶಕ್ತಿಯು ನಾ
ಮಳೆಯಾಗಿ ಹರಿಯುವ ತೊರೆಯು ನಾ\\


ಚಿಗುರೊಡೆಯುವ ಮೊಳಕೆಯು ನಾ
ಹೂವಾಗಿ ಹಣ್ಣಾಗುವ ಬಯಕೆಯು ನಾ
ಹೃದಯ ಹೃದಯಗಳಲಿ ಹರಿಯುವ ಪ್ರೇಮರಾಗವು ನಾ
ಕಾಲವ ಓಡಿಸುವ ಚಕ್ರವು ನಾ\\

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...