ಆದಿಯಲಿ ಪೆಳ್ವೆ ಧಾರುಣೆಯ
ಸಹಜ ಸೊಬಗ
ಹೇಳಿಕೆಯ ಮಾತಲ್ಲ ಆಲಿಸದೆ
ಪರಿತಪಿಸದಿರು ನಿಸರ್ಗಪ್ರಿಯ ೧
ಎನ್ನ ಧಾತ್ರಿಯು ಬಹು
ಸೌಂಧರ್ಯವತಿಯ
ಎಂದು ಪೇಳಿಪರು ಪೂಜಿಪರು ಋಷಿವರ್ಯರು
ಹಿಂದೆ ಈ ಮಾತು ಸುಳ್ಳಲ್ಲ ನಿಸರ್ಗಪ್ರಿಯ೨
ನವ ಜವ್ವನದ ತರುಣಿ
ತರುಲತೆಗಳ ಅಂಗಸ್ಮಿತೆ
ಹರೆಯ ಮುಗಿಯದು ಈಕೆಗೆ
ಸತತ ಜವ್ವನೆ ನಿಸರ್ಗಪ್ರಿಯ೩
ಹರಿಯ ಪ್ರೀತಿಯ ಅಂಗನೆಯೀಕೆ
ಧುರುಳ ಹಿರಣ್ಯಕ ಮನಸೋತ
ಧಾತ್ರಿಯ ಸೌಂದರ್ಯಕೆ
ವರಾಹ ರಕ್ಷಿಪ ಧಾತ್ರಿ ನಿಸರ್ಗಪ್ರಿಯ ೪
ಹಗಲು-ಇರುಳು ಕಾಯ್ವರು
ಸೂರ್ಯ-ಚಂದ್ರರು
ಸೃಷ್ಠಿಯ ಜೀವಕೋಟಿಗೆ
ಕಾರಣನು ನೇಸರು ನಿಸರ್ಗಪ್ರಿಯ ೫
ಧಾರುಣಿಯ ಹೃದಯ ವೀ ಹಿಮಾನಿ
ಮನಃ ಕಠಿಣ ವೀ ಪರ್ವತ ವರ್ಷಿಣಿ
ಮಾತೃತ್ವವೇ ಈ ಜಲದಿ ಕಾನನ
ಮಾತೃ ಅಧಿದೇವತೆ ಧಾತ್ರಿ ನಿಸರ್ಗಪ್ರಿಯ ೬
ವನ್ಯಂಗಗಳು ಹಲವು
ಪೋಷಿಸುವುವು
ಕಾಲ ಅಂತ್ಯವೆಡೆಗೆ ಸರಿಯೆ
ನವನವ ವಸಂತಗಳು ಧಾತ್ರಿಗೆ ನಿಸರ್ಗಪ್ರಿಯ೭
ತರುಲತೆಗಳು ತುಂಬಿಹುದು ಕಾನನದಿ
ತಂಪೆರೆಯಲು ಬಳುಕಿಹಳು ಗಂಗೆ ಕಾವೇರಿ
ಪುಟ ಪುಟನೆ ನೆಗೆಯುತ್ತಿಹವು ಪಾತರಗಿತ್ತಿ
ಪುಷ್ಪಗಳ ಚೆಲುವು ಧಾರುಣಿಯ ನಗುವು ನಿಸರ್ಗಪ್ರಿಯ ೮
ನವ ಚೈತ್ರಗಳು ಉರುಳುರುಳಿ ಹೋದವು
ಜೀವಕೋಟಿಗಳು ಬಂದು ಬಂದು ಹೋದವು
ಧಾರುಣಿಯು ಧಾರುಣಿಯೇ
ಕೊರತೆಯಿಲ್ಲ ಜವ್ವನದ ಧಾತ್ರಿಗೆ ನಿಸರ್ಗಪ್ರಿಯ ೯
ಕೋಗಿಲೆಗಳು ಪೇಳುವುವು
ಧಾರುಣಿಯ ಚೆಲವು ಶ್ರೀಗಂಧವು ಪಸರಿಪುದು ಸ್ನೇಹವ
ಮತ್ತೆಲ್ಲೂ ಕಾಣೆ ಈ ಧಾತ್ರಿ ನಿಸರ್ಗಪ್ರಿಯ ೧೦
ಧಾರುಣಿಯ ಸುತರೊಳ್
ಅತಿ ಮತ್ತ ಈ ಮನುಜ
ಪ್ರಾಣಿಗಳೊಳ್ "ಅತಿಪ್ರಾಜ್ನ" ಬಿರುದಾಂಕಿತ
ಸೂರೆಗೊಳ್ಳುತ್ತಿಹನು ಧಾತ್ರಿಯ ಸೊಬಗ ನಿಸರ್ಗಪ್ರಿಯ ೧೧
ಮನವ ಹಿಗ್ಗಿಸಿ ಹಾಡಲಿಲ್ಲ
ಕೋಗಿಲೆಗಳಂತೆ
ಕುಣಿಯಲಿಲ್ಲ ಪುಟ ಪುಟನೆ ಪಾತರಗಿತ್ತಿಯಂತೆ
ಧಾರುಣಿಯ ಕಣ್ಣೀರೆ ಗಂಗಾ ಕಾವೇರಿ ನಿಸರ್ಗಪ್ರಿಯ ೧೨
ಕಾಂಕ್ರೀಟ್ ಕಾಡುಗಳು ತುಂಬಿಹುದು
ಎಲ್ಲೆಲ್ಲೂ ದುರುಳ ಮನುಜ
ಮನುಜವಿದ್ದೆಡೆ ತೃಣವೂ ಬೆಳೆಯಲೊಲ್ಲದು
ಬಿರುದಾಂಕಿತರೀ ನಡೆ ವಿನಾಶದೆಡೆಗೆ ಧಾತ್ರಿ ನಿಸರ್ಗಪ್ರಿಯ ೧೩
ಕಿವಿ ಚಿಟ್ಟೆನ್ನುವ ಸಪ್ಪಳ
ನೊರೆ ಉಕ್ಕುವ ಕಶ್ಮಲ
ಅಲ್ಲೋಲ ಕಲ್ಲೋಲ ವೀ ಧರೆ
ರಕ್ಷಿಪನಾರೀ ಧಾತ್ರಿಯ ನಿಸರ್ಗಪ್ರಿಯ ೧೪
ಸಹಿಸಲೊಲ್ಲರು ತರುವ ಕಂಡು
ಹಿಡಿಯುವರು ಮಚ್ಚು ಕುಡಿಗೊಲು
ಮತಿ ಭ್ರಷ್ಟರೀ ಮನುಜರು
ಇನ್ನೇಲ್ಲಿ ಜವ್ವನ ಧಾತ್ರಿಗೆ ನಿಸರ್ಗಪ್ರಿಯ ೧೫
ನಿಜಸುತನೊಬ್ಬ ಬಿಕ್ಕಳಿಸುತಲೀ
ಪೇಳ್ದ ಧಾರುಣಿಯೂ ಪಾಠಿ
ಹೀಗೇಕೆ ಈ ಪರಿ
ಮಾತೃಜಗೆ ಮತಿಯಿಟ್ಟು ಕಾಯೋ ನಿಸರ್ಗಪ್ರಿಯ ೧೬
ಹೀಗೇಯೇ ಕಾಲವು ಕಳೆಯೆ
ಸವಕಲಾಗುವಳು ಧಾತ್ರಿ
ಪ್ರಳಯವೂ ಖಾತ್ರಿ
ಮನುಜಗೆ ಮತಿ ಬೀಜವ ಬಿತ್ತು ನಿಸರ್ಗಪ್ರಿಯ ೧೭
ಈ ಮಾತು ಸುಳ್ಳಲ್ಲ
ಕಾಗೆಯು ಬಿಳಿಯಲ್ಲ
ಈ ಪರಿ ಕಾಗೆಯು ಬಿಳಿಯಹುದು
ಸತ್ಯವ ಕಾಯೋ ನಿಸರ್ಗಪ್ರಿಯ ೧೮
ಬಳಕುತ್ತಿದ್ದ ಧಾತ್ರಿ
ಕುಂಟುತ್ತಿಹಳೀಗ
ರೋದಿಸುತ್ತಿರುವ ಜೀವಕೋಟಿಯ
ಕೈ ಹಿಡಿದು ಉದ್ಧರಿಸು ನಿಸರ್ಗಪ್ರಿಯ ೧೯
ಮೇಲ್ಮಾತು ಸುಳ್ಳಾಗಲಿ
ಕುಂಟಿಯಲ್ಲ ವೀ ಧಾತ್ರಿ
ಬಳುಕುವ ಜವ್ವನದ ಭಾಲ
ನಿಜವಾಗಲಿ ಮಾತು ಸಜ್ಜನಕೆ ಧಾತ್ರಿ ನಿಸರ್ಗಪ್ರಿಯ ೨೦
--------------------------------------
No comments:
Post a Comment