ಅವನ ಪತ್ರ

ಅವನ ಪತ್ರ ನನ್ನ ಮುಂದಿದೆ
ಹೃದಯ ಭಾರವಾಗಿದೆ ಮಾತು ಹೊರಡದೆ\

ಕಣ್ಣಲ್ಲಿ ನೀರು ಸುರಿಯುತಿದೆ
ಅವನ ಧೈರ್ಯವ ಮನದಲ್ಲೇ ನೆನೆಯುತಿದೆ\\

ನಾವು ಇಲ್ಲಿ ಹಬ್ಬ,ರಜೆಯೆಂದು ಕಾಲಕಳೆಯುತ್ತೇವೆ
ನಮ್ಮ ಸ್ವಾತಂತ್ರವೆಂದು ದೇಶವನ್ನು ಜರಿಯುತ್ತೇವೆ
ತೆರಿಗೆ ಕಟ್ಟದೆ ವಂಚಿಸುತ್ತೇವೆ
ದೇಶ ನಮಗೇನು ಮಾಡಿದೆಯೆಂದು ಪ್ರಶ್ನಿಸುತ್ತೇವೆ\\


ನೀನು ಅಲ್ಲಿ ಕೊರೆಯುವ ಚಳಿಯಲ್ಲಿ ಏಕಾಂಗಿ
ರಾತ್ರಿಯ ನಿದ್ದೆಯನ್ನೂ ಲೆಕ್ಕಿಸದೆ ಕಾಯುತ್ತಿದ್ದೀಯ
ಕಣ್ಣ ಮುಂದೆ ಬಿಳಿಯ ಹಿಮಾಲಯ ಪರ್ವತ
ಮನಸಿನಲ್ಲಿ ವಜ್ರದಂತ ಕಠಿಣ ದೇಶಪ್ರೇಮ\\


ಸದಾ ಮೆಟ್ಟಿನಿಲ್ಲು ಎಂದು ಸಾರುವ ಹಿಮಾಲಯ
ಧೈರ್ಯಕ್ಕೆ ಸವಾಲೆಸೆದು ನಮಗೆಲ್ಲರಿಗೂ
ಮಾಹಾಗೊಡೆಯಂತಿರುವ ನಮ್ಮ ಸೈನಿಕರು
ಆದರೆ ನಮಗೆ ಇರುವೆಯಷ್ಟೂ ದೇಶಪ್ರೇಮವಿಲ್ಲವೇಕೋ?\\


ಕೈಲಾಗದವರಿಗೆ ಸಹಾಯಮಾಡಲಾರದವರು
ದೇಶಕ್ಕಾಗಿ ಒಂದು ನಿಮಿಷವೂ ವ್ಯಯಮಾಡದವರು
ಸ್ವಾತಂತ್ರದ ಸ್ವೇಚ್ಛೆಯನ್ನು ಅನುಭವಿಸುತ್ತಿರುವ ಜಡರು
ನಿಮಗಾಗಿ ನಮ್ಮ ಹೃದಯವನ್ನು ಕಲ್ಲಾಗಿಸಿಕೊಂಡವರು\\


ಈಗಲೂ ಹೃದಯ ಜರ್ಝರಿತಗೊಳ್ಳುತ್ತೆ
ಯಾವುದೇ ಯೋಧ ದೇಶಕ್ಕಾಗಿ ಪ್ರಾಣತೆತ್ತರೆ
ನೋವಾಗುತ್ತೆ ನಾನು ಯಾವಾಗ ಹೀಗೆ ತ್ಯಾಗಮಾಡುವುದು
ಹೀನಾಯ ಸಾವುಬೇಡವೆನಗೆ ದೇಶಕ್ಕಾಗಿ ಈ ಪ್ರಾಣ ಮುಡಿಪು\\


ಅವನ ಪತ್ರ ಹೃದಯದಲ್ಲಿ ನಾಟ್ಟಿತ್ತು
ಪ್ರೀತಿ-ಪ್ರೇಮವೆಂದು ನಾವಿಲ್ಲಿ ಹೃದಯ ಶ್ಯೂನರಾಗುತ್ತಿದ್ದೇವೆ
ನಮಗಾಗಿ ಆ ಜೀವಗಳು ಹಗಲು-ರಾತ್ರಿಯೆನ್ನದೆ
ಶತೃಗಳ ಗುಂಡಿಗೆ ಎದೆಗೊಟ್ಟು ನಿಂತಿವೆ ಗಡಿಯಲ್ಲಿ\\


ಎಂಟುಗಂಟೆಯ ಕೆಲಸಕ್ಕೇ ನಮಗೆ ತಲೆನೋವು
ಇಪ್ಪತ್ನಾಕು ಗಂಟೆಯ ನಿನ್ನ ಕೆಲಸಕ್ಕೆ ಏನೆನ್ನಬೇಕು ಗೆಳೆಯ
ಕಿವಿಗೊಂದು ಮೊಬೈಲು,ಬೇಕು ಬೇಕಾದಾಗಲೆಲ್ಲಾ ಕಾಫಿ ನಮಗೆ
ಹೆಗಲಿಗೆ ರೈಫಲ್ಲು,ಬೇಕೆಂದಾಗ ಸಿಗದ ಕಾಫಿ ಎಂಥ ತ್ಯಾಗ ನಿನ್ನದು\\


ಗುಂಡಿನ ಸದ್ದೇ ನಿಮಗೆ ಸುಪ್ರಭಾತ
ಶತೃವಿನ ರಕ್ತವೇ ಮಹಾ ಮಜ್ಜನ
ಆರ್ಭಟವೇ ಗುಡುಗು ಮಿಂಚು
ಎದೆಯೊಳಗೆ ಗುಂಡುಹೊಕ್ಕಾಗಲೇ ವೀರ ಸ್ವರ್ಗ\\


ಪ್ರೀತಿಸಲು ಹೆಂಡತಿ, ಮಕ್ಕಳು, ತಂದೆ-ತಾಯಿ
ಎಲ್ಲರೂ ಇದ್ದರೂ ನೀನು ಅಕ್ಷರಸಹ ಸಂನ್ಯಾಸಿ
ವೀರ ಸಂನ್ಯಾಸಿ ದೇಶ ಸೇವಕ ನೀನು
ನಮಗೆ ದೇಶ ನೆನಪಿಗೆ ಬರುವುದೇ ಅಪರೂಪ\\


ನಮ್ಮ ಮೆರವಣಿಗೆ ಹೆಣಗಳ ನಡುವೆ ನಡೆಯುವುದು
ಮುಂದೆ ನಾವೂ ಹೆಣವಾಗುವರೇ ಅಲ್ಲವೇ!
ಆಕ್ರಂದನವೇ ನಮಗೆ ಇಲ್ಲಿ ಜೋಗುಳ
ದೇಶ ಮೆಟ್ಟುವ ಶತೃವ ಸಿಗಿಯುವ ತೋಳಗಳು\\


ನಿನ್ನ ಪತ್ರ ಎದುರಿಗಿದೆ
ಅಸಹಾಯಕನಾಗಿದ್ದೇನೆ ನಿನ್ನ ಬಿಂಬ ಮನದಲ್ಲಿದೆ
ನೀನು ಗೆಳೆಯನೆಂಬುದೇ ನನ್ನ ಹೆಗ್ಗಳಿಕೆ
ಇಂದೇ ಪ್ರತಿಜ್ಣೆ ಮಾಡಿದ್ದೇನೆ ನಿನಗಾಗಿಯೇ ನಾನಿದ್ದೇನೆ\\


ಹಬ್ಬದ ಸಡಗರ ಇಲ್ಲೆಲ್ಲಾ ತುಂಬಿದೆ
ನೀನು ಮಾತ್ರ ಅದೇ ವಸ್ತ್ರ,ಮಾಸಿದೆ
ನಿದ್ದೆ ಕಾಣದ ಕಣ್ಣುಗಳು
ನಿನಗಾಗಿ ಈ ಪತ್ರ ನನ್ನ ಹೃದಯದಿಂದ\\


ದೇವರ ಮನೆಯಲ್ಲಿ ದೇವರ ಚಿತ್ರವಿಲ್ಲ
ನಿನ್ನದೇ ಚಿತ್ರ ಮನೆಯಲ್ಲಿ, ಮನದಲ್ಲಿ
ನಿನ್ನದೇ ಹೆಸರಿನಲ್ಲಿ ಒಂದು ಆಶ್ರಮ
ಅಸಹಾಯಕರಿಗೆ ಒಂದು ನೆಲೆ ಕಲ್ಪಿಸಿದೆ\\


ನಿನ್ನ ಹುಟ್ಟು ಹಬ್ಬದ ದಿನ ನನಗೆ ಹಬ್ಬ
ರಾಜಕೀಯ ಪುಡಾರಿಗಳು ದೊಡ್ಡದಾಗಿ ಆಚರಿಸಿಕೊಳ್ಳುತ್ತಾರೆ
ದೇಶ ಸೇವೆಯ ಹೆಸರಿನಲ್ಲಿ ದೇಶ ಸೂರೆಗೈಯ್ಯುತ್ತಾರೆ
ಕೇಳುವವರಿಲ್ಲ ಅದೇ ಇಂದಿನ ಆದರ್ಶ\\


ನಿನ್ನ ತ್ಯಾಗ ಯಾರಿಗೂ ಬೇಡ ಇಲ್ಲಿ
ಗುಂಡಿನಿಂದ ತುಂಬಿದ ನಿನ್ನ ದೇಹ ಬಂದಾಗ
ನಾಟಕೀಯ ರಂಗವೇ ನೆರೆದಿತ್ತು
ಮರೆಯಾಗಿತ್ತು ದೇಶ ಪ್ರೇಮ ಚಿತೆಯ ಹೊಗೆಯಾರುವ ಮುನ್ನ\\

1 comment:

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...