Sunday, December 30, 2012

ಹೊಸ ವರುಷದ ಆಶಾಕಿರಣ


ಹೊಸ ವರ್ಷ ಇಣುಕಿದೆ, ಆಶಾಕಿರಣ ಹೊಮ್ಮಿಸಿದೆ;
ಎಲ್ಲರ ಮನದಲ್ಲೂ ನೂರೆಂಟು ಅಲೋಚನೆಗಳ ಗರಿಗೆದರಿದೆ;
ಹೊಸವರ್ಷದ ಗೊತ್ತುವಳಿ ಸಿದ್ಧಪಡಿಸುವವರು ಹಲವರು;
ಹಾಡು,ಕುಣಿತ,ಕುಡಿತಕ್ಕೆ ತಯಾರಾಗುವವರು ಹಲವರು;
ಲಾಭ-ನಷ್ಟ,ಗಳಿಕೆ,ಹೂಡಿಕೆಗಳ ಬಗ್ಗೆ ಯೋಚಿಸುವವರು ಹಲವರು;
ಏರುತ್ತಿರುವ ಬೆಲೆಗಳ,ಹೆಚ್ಚುತ್ತಿರುವ ಸಾಮಾಜಿಕ ಅಶಾಂತಿ
ತಲೆಕೆಡಿಸಿಕೊಳ್ಳುವವರು ಹಲವರು;
TRP ಬಗ್ಗೆ ಯೋಚಿಸುವ ದೃಶ್ಯ ಮಾಧ್ಯಮ;
circulation ಬಗ್ಗೆ ಕಂಗಾಲಾಗುವ ಪತ್ರಿಕಾ ಮಾಧ್ಯಮ;
ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳು;
ಪ್ರಶಸ್ತಿಗಳ ಮೇಲೆ ವ್ಯಾಮೋಹಗೊಂಡಿರುವ ಸಾಹಿತಿಗಳು;
ಸದಾ ಸಮಾಜದ ಸಾಮರಸ್ಯ,ಸ್ವಾಸ್ಥ್ಯ ಕೆಡಿಸಲು ಹೊಂಚುಹಾಕುತ್ತಿರುವ ಬುದ್ಧಿಜೀವಿಗಳು;
ಹೊಟ್ಟೆಗೆ,ಬಟ್ಟೆಗೆ,ಸೂರಿಗೆ, ಒದ್ದಾಡುವ ಸಾಮಾನ್ಯಜನರಿಗೆ..
ಹೊಸ ವರುಷ ಆಶಾಕಿರಣವಾಗಲಿ;
ಹೊಸ ವರುಷ ಹರುಷ ತರಲಿ.....

ಹದಗೆಟ್ಟ ದಿನ


ನನ್ನ ಭಾವನೆಗಳ ಮೇಲೆ ನನಗೆ ಹಿಡಿತವಿಲ್ಲವಾದರೆ
ಎಂದೆಂದಿಗೂ ನಾನು ಸಂತೋಷಿಯಾಗಲಾರೆ;
ನನ್ನ ಕಾರಿಗೆ ಏಟು ಬಿದ್ದು ಗೆರೆಗಳು ಮೂಡಿದರೆ
ನನ್ನ ಇಡೀ ದಿನ ಹಾಳಾಗುತ್ತದೆ
ಹಾಗೂ ಕೋಪದ ಮಾತುಗಳು ಮನೆಯೆಲ್ಲಾ ತುಂಬಿರುತ್ತದೆ;
ಕೆಲಸದಲ್ಲಿ ಗೋಜಲು;
ಉಳಿಸಿಕೊಳ್ಳಲಾರದ ನಂಬಿಕೆಗಳು;
ಉಳಿಸಿಕೊಳ್ಳಲಾರದ ಸಂಬಂಧಗಳು;
ಅಂದುಕೊಂಡಿದ್ದಕ್ಕಿಂತ ಕಡಿಮೆಯಾದ ಫಲಿತಾಂಶ;
ಸುಕ್ಕುಗಟ್ಟಿದ ಕೊರಳಪಟ್ಟಿ,ಬಟ್ಟೆಗಳು;
ನನ್ನ ಭಾವನೆಗಳಿಗೆ ನಾನೇ ಬಲಿಪಶುವಾದರೆ
ಎಂದೆಂದಿಗೂ ನಾನು ಸಂತೋಷಿಯಾಗಲಾರೆ;
ಆಗುವೆ ನನ್ನದೇ ಬಯಕೆಗಳ ಗುಲಾಮ;
ಅತಿಯಾಗಿ ಹೆಚ್ಚಿದ ನಿರೀಕ್ಷೆಗಳ ಖೈದಿ;

ಪ್ರೇರಣೆ: 'A Spoilt Day'-Achieve Success and happiness by A.P.Pereira

ಸಂತೋಷಿಗಳು


ಮನುಷ್ಯರ ಸಂತೋಷಕ್ಕೆ ಮೂಲ ಕಾರಣ ಹುಡುಕುತ್ತಿದ್ದೆ
ಆ ಸಂತೋಷಕ್ಕೆ ಮೂಲ ಕಾರಣ
ಹಣ,ಸಂಪತ್ತು,ಐಶ್ವರ್ಯ,ಸೋಮಾರಿತನ,ಲಾಭಗಳಿಕೆ,
ಸಂತೋಷಕೂಟಗಳು ಅಥವಾ ರೋಮಾಂಚನ
ಇವಾವುವೂ ಆಗಿರಲಿಲ್ಲ;

ಸಂತೋಷದಿಂದ ಇರುವ ಜನರಲ್ಲಿ ನಾನು ಕಂಡೆ
ಸುರಕ್ಷತೆ,ಆತ್ಮೀಯತೆ,ಸರಳತೆ,ನೆಮ್ಮದಿ,ಶಾಂತಿ,
ಸಣ್ಣ ಸಣ್ಣ ವಿಷಯ ಅಥವಾ ವಸ್ತುಗಳಲ್ಲಿ ಸಂತೋಷ;

ಸಂತೋಷದಿಂದ ಇರುವ ಜನರ ಕಂಡು
ನಾನು ಅಶ್ಚರ್ಯಚಕಿತನಾಗಿದ್ದೇನೆ
ಮೂರ್ಖ ಆಸೆಗಳು ಅವರಲ್ಲಿ ಇಲ್ಲದಿರುವುದ ಅರಿತು;

ಸಂತೋಷದಿಂದ ಇರುವ ಜನರಲ್ಲಿ
ನಾನು ಎಂದೂ ಕಾಣಲಿಲ್ಲ
ಅಶಾಂತಿ,ಅವಿಶ್ರಾಂತ ಮನಸ್ಸು, ಹುಚ್ಚು ಹುಡುಕಾಟ,ಸ್ವಾರ್ಥ,
ಎಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿ ಒಳ್ಳೆಯ ಹಾಸ್ಯಪ್ರಜ್ಜೆ ಇದೆ.

ಪ್ರೇರಣೆ: 'The Happy People'-Achieve Success and happiness by A.P.Pereira



Saturday, December 29, 2012

ಹೊಸವರ್ಷದ ಹೊಸ್ತಿಲಲ್ಲಿ...


ವರ್ಷದ ಕೊನೆಯ ಪುಟವನ್ನು ತೆರೆದಿದ್ದೇನೆ
ಕಣ್ಣ ಮುಂದಿದೆ ಹೊಸವರ್ಷದ ಬೆಳಕು
ಯೋಚಿಸುತ್ತಾ ಕುಳಿತೆ ಹಳೆಯ ನೆನಪುಗಳ ಪುಟ ತೆರೆದು
ಒಂದೊಂದೇ ಪುಟ ತೆರೆದು ಇಣುಕಿದೆ
ಸಂತೋಷದ ಗಳಿಗೆಗಳಿಗೆ ಗಾಳ ಹಾಕುತ್ತಾ....
ಒಂದೇ ಒಂದು ಪುಟವೂ ದೊರೆಯಲಿಲ್ಲ,
ಪುಟವಿರಲಿ ಜೀವನ ಕಾವ್ಯದ ಒಂದು ಸಾಲಿನಲ್ಲೂ
ಸಿಗದು ಸುಖ-ನೆಮ್ಮದಿಯ ಪದಗಳು
ಎಲ್ಲವೂ ನೋವಿನ ಗೆರೆಗಳೇ!
ಶೋಕಗೀತೆಯ ಸಾಲುಗಳೇ!
ಸ್ವಾರ್ಥ,ದುರಾಸೆ,ತಾತ್ಸಾರ,ಮತ್ಸರ
ಮಾಸಗಳ,ಋತುಗಳ ದಾಟಿ ಬಂದಿದ್ದೇನೆ
ಹೊಸ ಉತ್ಸಾಹದಿ,ಹೊಸ ಆಕಾಂಕ್ಷೆಯಿಂದ
ಎಲ್ಲವನ್ನೂ ಮೂಲೆಗೆ ತಳ್ಳಿದ್ದೇನೆ
ಸೋಲುಗಳಿಂದ ಪಾಠ ಕಲಿತಿದ್ದೇನೆ
ಹೊಸ ಭರವಸೆಯಿಂದ ಸ್ವಾಗತಿಸಲು ನಿಂತಿದ್ದೇನೆ
ವರ್ಷದ ಕೊನೆಯ ಪುಟದಲ್ಲಿ
ಹೊಸವರ್ಷದ ಹೊಸ್ತಿಲಲ್ಲಿ..... 

ಹಸ್ತ ಚಾಚು ಸೋದರತೆಯ


ಈ ದಿನಗಳಲ್ಲಿ ಮನುಷ್ಯರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ,
ಗ್ರಾಫ್,ನಕ್ಷೆ,ಯೋಜನೆ,ಬಣ್ಣದ ಮಾತುಗಳೊಡನೆ
ಈ ಪ್ರಪಂಚವನ್ನು ಚೆನ್ನಾಗಿ ಮಾಡಲು
ಇವೆಲ್ಲವೂ ಅಪ್ರಯೋಜಕ ಕನಸುಗಳೇ?

ಈ ಪ್ರಪಂಚವನ್ನು ಚೆನ್ನಾಗಿ ಮಾಡಬೇಕಾದರೆ
ಹೀಗೆ ಮಾಡಬೇಕು.... ಹೇಗೆಂದರೆ
ನಿನ್ನ ಪಕ್ಕದಲ್ಲಿರುವವನೆಡೆಗೆ
ಹೆಜ್ಜೆ ಇಡು, ಹಸ್ತ ಚಾಚು ಸೋದರತೆಯ.



ಪ್ರೇರಣೆ:-Achieve success and happiness by A.P Pereira.

ಒಮ್ಮೆಯಾದರೂ ನಗು


ಒಮ್ಮೆಯಾದರೂ ನಗು,
ಹೃದಯ ಹಗುರವಾಗುವುದು ನಕ್ಕಾಗ;
ಒಮ್ಮೆಯಾದರೂ ನಗು,
ನಡೆವ ದಾರಿ ಬೆಳಕಿನೆಡೆಗೆ ಹೊರಳುವುದು;
ಜೀವನ ಕನ್ನಡಿಯ ಹಾಗೆ, ನಾವು ನಕ್ಕರೆ
ನಗುವು ಹೊರಹಿಮ್ಮುವುದು ನಮ್ಮನ್ನು ಹಾರೈಸಲು;
ನಾವು ಯಾವಾಗಲೂ ಶೋಕಿಸುತ್ತಿದ್ದರೆ
ಶೋಕವೇ ನಮ್ಮನ್ನು ಆವರಿಸುತ್ತದೆ.

ಪ್ರೇರಣೆ: 'Smile a while'-Achieve success and happiness by A.P Pereira.

ಜಾಗೃತನಾಗಿರು......


ನಿನ್ನ ಯೋಚನೆಗಳ ಬಗ್ಗೆ ಜಾಗೃತನಾಗಿರು,
ಯೋಚನೆಗಳೇ ನಿನ್ನ ಪದಗಳಾಗುತ್ತವೆ;

ನಿನ್ನ ಪದಗಳ ಬಗ್ಗೆ ಜಾಗೃತನಾಗಿರು,
ಪದಗಳೆ ನಿನ್ನ ನಡೆಯಾಗುತ್ತದೆ;

ನಿನ್ನ ನಡೆಯ ಬಗ್ಗೆ ಜಾಗೃತನಾಗಿರು,
ನಡೆಯೇ ನಿನ್ನ ಹವ್ಯಾಸವಾಗುತ್ತದೆ;

ನಿನ್ನ ಹವ್ಯಾಸಗಳ ಬಗ್ಗೆ ಜಾಗೃತನಾಗಿರು,
ಹವ್ಯಾಸಗಳೇ ನಿನ್ನ ಗುಣವಾಗುತ್ತದೆ;

ನಿನ್ನ ಗುಣಗಳ ಬಗ್ಗೆ ಜಾಗೃತನಾಗಿರು,
ಗುಣಗಳೇ ನಿನ್ನ ಗುರಿಯಾಗುತ್ತದೆ.


ಪ್ರೇರಣೆ: 'Be careful'-Achieve success and happiness by A.P Pereira.

Monday, December 24, 2012

ಮಳೆಯಲ್ಲಿ ಕೇಕೆ


ಹೇಗೆ ಕೆಲವು ಜನರಿರುತ್ತಾರೆಂದರೆ
ಸೂರ್ಯನನ್ನು ನೋಡುತ್ತಾ ಕುಳಿತ ಸೊರಗಿದ ಸೇಬುಗಳಂತೆ ಕಾಣುವರು
ಮತ್ತೆ ಕೆಲವರು ಮಳೆಯಲ್ಲಿ ಶಿಲ್ಲೆ ಹಾಕುತ್ತಾ ಕೇಕೆ ಹಾಕಿ ಕುಣಿವರು

ಹೇಗೆ ಕೆಲವು ಜನರಿರುತ್ತಾರೆಂದರೆ
ಕಣ್ಣು-ಬಾಯಿ ತೆರೆದೊಡನೆಯೇ ಅವರಿಗೆ ಕಾಣುವುದು ಬೇರೆಯವರ ತಪ್ಪುಗಳೇ?
ಏಕೆಂದರೆ ಅವರಿಗೆ ಈ ಜೀವನದ ಅರ್ಥ ತಿಳಿದಿಲ್ಲ, ಈ ವಸ್ತುಗಳ ಅರ್ಥ ಗೊತ್ತಿಲ್ಲ!

ಅವರಿಗೆ ದೇವರ ಸಹಾಯ ಬೇಕು
ಒಳಗಿನ ಶಕ್ತಿಯಾಗಿ ಅಲ್ಲ, ಅಥವಾ ದೂರದಲ್ಲೆಲ್ಲೋ ಇರುವವನಂತೆ ಅಲ್ಲ
ಬೇಕಾಗಿದೆ ಆತ್ಮೀಯ ಗೆಳೆಯನಾಗಿ, ಕೈ ಹಿಡಿದು ನಡೆಸುವ ತಂದೆಯಾಗಿ.

ದೇವರೊಂದಿಗಿನ ಆತ್ಮೀಯತೆ, ಪ್ರೀತಿ
ಜನರು ಹೊರ ಜಗತ್ತನ್ನು ಒಳಗಣ್ಣಿನಿಂದ ನೋಡುತ್ತಾರೆ
ಮತ್ತು ತಮ್ಮ ಎಂದಿನ ಬೆಳಗನ್ನು ಹೊಸ ಹೃದಯದಿಂದ ಆರಂಭಿಸುತ್ತಾರೆ.

ಪ್ರೇರಣೆ: 'Whistling in the rain' - Achieve success and happiness by A.P Pereira.

ಅವನ ಉಡುಗೊರೆ- ಇಂದು


ನಾನು ’ನಿನ್ನೆ’ಯೇ ಮನೆಯ ಬಾಗಿಲನ್ನು ಮುಚ್ಚಿದ್ದೇನೆ
ಹಾಗು ಅದರ ಕೀಗಳನ್ನು ದೂರಕ್ಕೆ ಎಸೆದಿದ್ದೇನೆ;
’ನಾಳೆ’ಎನ್ನುವುದು ಎಂದೂ ನನ್ನಲ್ಲಿ ಭಯ ತರಲಾರದು
ಏಕೆಂದರೆ ನನಗೆ ’ಇಂದು’ಎಂಬ ಉಡುಗೊರೆ ದೊರೆತಿದೆ.

ಪ್ರೇರಣೆ: Vivian Laramore.

Monday, December 17, 2012

ನಾವು ಸರಿಯಾಗೋಣ


ಸ್ವಲ್ಪವೇ ಸಮಯ, ಸಾಧಿಸಬೇಕಾದದ್ದು ಬಹಳಷ್ಟು,
ಸರಿಮಾಡಬೇಕಿದೆ ಈ ಪ್ರಪಂಚವನ್ನು
ಮೊದಲು ನಾವು ಸರಿಯಾಗೋಣ
ಆಗ ಯಶಸ್ಸು ನಮ್ಮನು ಹುಡುಕಿಕೊಂಡು ಬರುವುದು
ಹೆದರಬೇಡ ಕೆಲಸ ಮಾಡಲು ಅಥವಾ ಕಷ್ಟಗಳ ಎದುರಿಸಲು
ಹುಡುಕಬೇಡ ಪ್ರೀತಿ-ವಿಶ್ವಾಸ, ನಗುವನ್ನು
ನಾವು ಸರಿಯಿದ್ದರೆ ನಮಗೆ ಬೇಕಾದುದು ಎಲ್ಲಾ ಕಡೆಯೂ ಸಿಗುವುದು.....

ಪ್ರೇರಣೆ: Achieve success & Happiness By A.P.Pereira.

Sunday, December 16, 2012

ಯಶಸ್ಸಿನ ಗುಟ್ಟೇನು?




’ಒತ್ತು" ಹೇಳಿತು ಗುಂಡಿ (ಬಟನ್).
’ಸೀಸ ಆಗಲೇ ಬೇಡ’ ಹೇಳಿತು ಪೆನ್ಸಿಲ್.
’ನೋವುಗಳನ್ನು ತಡೆದು ಕೋ" ಹೇಳಿತು ಕಿಟಕಿ.
’ಯಾವಾಗಲೂ ತಣ್ಣಗಿರು’ ಹೇಳಿತು ಮಂಜುಗಡ್ಡೆ.
’ಸಿದ್ಧವಾಗಿರು’ ಹೇಳಿತು ಕ್ಯಾಲೆಂಡರ್.
’ಎಂದಿಗೂ ನಿನ್ನ ತಲೆ ಕಳೆದುಕೊಳ್ಳಬೇಡ’ ಹೇಳಿತು ಪಿಪಾಯಿ.
’ಎಲ್ಲವನ್ನೂ ಬೆಳಗು’ ಹೇಳಿತು ಬೆಂಕಿ.
’ನಡೆಯುವ ವ್ಯಾಪಾರ ಮಾಡು’ ಹೇಳಿತು ಸುತ್ತಿಗೆ.
’ಮೊನಚಾಗಿರು ನಿನ್ನ ವ್ಯವಹಾರದಲ್ಲಿ’ ಹೇಳಿತು ಚಾಕು.
’ಒಳ್ಳೆಯದನ್ನು ಕಂಡುಹಿಡಿ ಮತ್ತು ಅದಕ್ಕೆ ಅಂಟಿ ಕೋ ’ ಹೇಳಿತು  ಅಂಟು.


ಪ್ರೇರಣೆ: 'Achieve Success & Happiness' By A.P Pereira.

Wednesday, December 12, 2012

ತಾಯಿಯ ಆತಂಕ


ಬಿಟ್ಟಿರಲಾರದೆ ಕಳುಹುತ್ತಿದ್ದೇನೆ
ಮನದ ಭಾರದ ಹೃದಯದಿಂದ
ಅಲ್ಲಿ ನಿನ್ನ ಹೇಗೆ ನೋಡಿಕೊಳ್ಳುವರೋ ಆತಂಕ!
ಮನದ ತುಂಬಾ ಭಯ ಕಾಡಿದೆ...

ಎಂದೂ ಒಂದು ಕ್ಷಣವೂ ಬಿಟ್ಟಿರದ ನೀನು
ಅದು ಹೇಗೆ ನನ್ನ ಬಿಟ್ಟಿರುವೆ?
ಒಂದು ಕ್ಷಣ ಯೋಚಿಸಿದರೇ
ಎದೆ ಝಲ್ಲೆನ್ನೆವುದು ನೋವ ಸಹಿಸದೇ...

ಆತಂಕ ಒಂದು ಕಡೆ,ಸಂತೋಷ ಇನ್ನೊಂದು ಕಡೆ
ನನ್ನ ಕಂದ ಹೊರ ಪ್ರಪಂಚಕ್ಕೆ,ಹೊಸತನಕ್ಕೆ
ಅಡಿ ಇಡುತ್ತಿದ್ದಾನ್ನೆನ್ನುವ ಸಂತೋಷ ಒಂದು ಕಡೆ,
ಈ ದುರುಳ ಪ್ರಪಂಚವನ್ನು ಹೇಗೆ ಎದುರಿಸುವನೋ ಎಂಬ ಆತಂಕ ಮತ್ತೊಂದೆಡೆ!

ಮೊದಲ ಹೆಜ್ಜೆ ಮನೆಯಿಂದ ಹೊರಗೆ ಇಡು ಕಂದ ಬಲವಾಗಿ
ಆತ್ಮಸೈರ್ಯದಿಂದ, ನಂಬಿಕೆಯಿಂದ,ಅರಿವಿನ ಹೊಸ ಲೋಕಕ್ಕೆ
ನನ್ನ ಪ್ರೀತಿಯ ಧಾರೆಯನ್ನೆಲ್ಲಾ ಹರಿಸಿದ್ದೇನೆ,ಶ್ರಮಿಸಿದ್ದೇನೆ,
ಈ ಪ್ರಪಂಚವನ್ನು ನೀನು ಎದುರಿಸಿ ಜಯಶಾಲಿಯಾಗುವ ಭರವಸೆಯಿಂದ.

Monday, December 10, 2012

ತಾತ್ಸಾರ


ಏಕೆ ಹೀಗೆ ಅರ್ಥವಾಗುವುದಿಲ್ಲ
ನಿನ್ನ ಆಟದ ಪರಿಯೆಲ್ಲಾ
ಇಲ್ಲವೆನ್ನಲಾಗದೆ ಎಲ್ಲವನ್ನೂ ಅನುಭವಿಸಲೇ
ಇಲ್ಲಿ ಬಂದಿಹೆವು ಕಾರಣ ಇಲ್ಲದಿಲ್ಲ
ಎಲ್ಲರಿಂದಲೂ ತಾತ್ಸಾರ ಕಾರಣ ತಿಳಿದಿಲ್ಲ
ಎಲ್ಲವೂ ಕಂಡಮೇಲೆ ವ್ಯಾಮೋಹವಿಲ್ಲ
ಜೀವನವೇ ಹೀಗೆ ನಿನ್ನ ಆಟದ ಲೀಲೆ
ನೋವು ಆಗಲಿ
ಮನಸು ಗಟ್ಟಿಗೊಳ್ಳಲಿ
ಅನುಭವ ಪಾಠ ಕಲಿಸಲಿ.....

Saturday, December 8, 2012

ಜೀವನ ಆಟ


ಬಾ ನಾವು ಆಟ ಆಡೋಣ
ಸಮುದ್ರದ ಮರಳಲ್ಲಿ ಚಿಕ್ಕಮಕ್ಕಳಂತೆ
ಆಡೋಣ ಬಾ,ಮೈ ಮರೆತು ಆಡೋಣ ಬಾ||

ಮರಳಲ್ಲಿ ನಮ್ಮದೇ ಚಿಕ್ಕ ಮನೆ ಕಟ್ಟೋಣ
ಸಮುದ್ರದ ಅಲೆಗಳು ಅದನ್ನು ಕೆಡವುವಂತೆ ಕಟ್ಟೋಣ
ಕಟ್ಟುತ್ತಾ,ಕೆಡವುತ್ತಾ, ನೋವು ನಲಿವುಗಳ ಪಡೆಯೋಣ||

ದಾರಿ ಹೋಕರು,ನಮ್ಮಂತೆ ಬಂದವರು
ಏಕಾಂಗಿಗಳು,ಜೋಡಿಹಕ್ಕಿಗಳು,ಪ್ರಾಯದವರು
ವಿರಹಿಗಳು,ಜೀವನ ಸಂಧ್ಯೆಯಲ್ಲಿರುವರು ಎಲ್ಲರೂ ಇಲ್ಲಿ ಅತಿಥಿಗಳೇ!||

ಜೀವನವೆಂಬ ಆಟದಲ್ಲಿ ಸೋತು-ಗೆದ್ದೆವು
ಮುಗ್ಧ ಮನಸ್ಸಿನಿಂದ ಎಲ್ಲವನ್ನೂ ಅನುಭವಿಸಿದೆವು ಚಿಕ್ಕ ಮಕ್ಕಳಂತೆ
ಶೋಧಿಸಿ,ಭೋದಿಸಿ,ಭೇದಿಸಿ ಎಲ್ಲವನ್ನೂ ಅರಿತೆವು, ಮನನದಾದದ್ದು ಸಾಸಿವೆಯಷ್ಟೇ!||

ಬಾ ಮರಳ ಮನೆಯ ಕಟ್ಟೋಣ
ಅಲೆಗೆ ಸಿಕ್ಕಿ ನೆಲಸಮವಾಗುವುದ ಕಂಡು ನಗೋಣ
ಮತ್ತೆ ಕಟ್ಟೋಣ, ಮತ್ತೆ ನಗೋಣ
ಸಾಗುತಿರಲಿ ಕೆಡವುತ ಕಟ್ಟುವುದು 
ಕೊನೆಗೆ ಸತ್ಯವೇ ಉಳಿಯಲಿ 
ಅಸತ್ಯವು ಅಳಿಯಲಿ ।।


Thursday, November 29, 2012

ನಿನ್ನ ಆತ್ಮ


ನಿನ್ನ ಕಣ್ಣುಗಳನ್ನೇ ಪರಿಶೀಲಿಸುತ್ತಿದ್ದೇನೆ
ಮತ್ತು ತುಟಿಗಳನ್ನೇ ನೋಡುತ್ತಿದ್ದೇನೆ
ಕಾಯುತ್ತಲೇ ಇದ್ದೇನೆ
ಶಾಶ್ವತವಾದ ಮುತ್ತಿಗಾಗಿ.

ನಿನ್ನ ಮನವನ್ನು ಹೊಕ್ಕೆ
ನೀನು ನನ್ನ ಬಿಗಿಯಾಗಿ ಹಿಡಿದಾಗ
ನಾನು ಬಯಸುತ್ತೇನೆ ನಿನ್ನ ಜೊತೆಯಿರಲು
ಶಾಶ್ಚತವಾಗಿ ಆ ಮುಕ್ತ ರಾತ್ರಿಗಾಗಿ.

ನಿನ್ನ ಕೈಗಳ ಹಿಡಿದಿದ್ದೇನೆ
ಮೃದು ಹಾಗು ಕರುಣೆಯಿಂದ
ನಾವುಗಳು ಸೆಳೆಯಲ್ಪಟ್ಟಿದ್ದೇವೆ
ಎಂದೂ ಕೊನೆಯಿಲ್ಲದ ಬಂಧನದಲ್ಲಿ.

ನಿನ್ನ ಪ್ರೀತಿಯನ್ನು ಅನುಭವಿಸಿದ್ದೇನೆ
ಸ್ವಲ್ಪ ಸಮಯ
ನಿನ್ನೊಡನೆ ಇರುವುದು
ಯಾವ ಅಪರಾಧವೂ ಅಲ್ಲ.

ನಿನ್ನ ಮುಖವನ್ನು ಸ್ಪರ್ಶಿಸಿದ್ದೇನೆ
ಮೃದು ಹಾಗು ಬೆಚ್ಚನೆ
ಅವೆಲ್ಲವೂ ದಾರಿದೀಪಗಳು
ಬರಸಿಡಿಲಿನ ಚಂಡಮಾರುತದಂತೆ ದಾಳಿಯಿಡುತ್ತಿದೆ.

ಪ್ರೇರಣೆ:’Your Soul’ by Asim Nehal

Sunday, November 25, 2012

ನಿಜ-ನೈಜತೆ


                                 ನಿರುದ್ಯೋಗಿ!
                             ಕಾಯಕ , ಹುಡುಕಾಟ
                        ಆಸಕ್ತಿ, ಕಲಿಕೆ, ರಾಜಕೀಯ, ಭಡ್ತಿ,
              ಪ್ರೀತಿ,ಪ್ರೇಮ,ಜಗಳ,ಕದನ,ಮದುವೆ,ವರದಕ್ಷಿಣೆ,ವಿಚ್ಛೇದನ,
                        ನಿರಾಸಕ್ತಿ, ಬೇಸರ, ಕಾಟಾಚಾರ
                             ಚಮಚಾಗಿರಿ, ಬಕಪಕ್ಷಿ
                                 ಉದ್ಯೋಗಿ!                      

ವಾಸ್ತವ


                             ಪ್ರೀತಿ!
                       ಆನಂದ,ಸೌಂದರ್ಯ
                 ರೋಮಾಂಚನ, ಪಾತರಗಿತ್ತಿಗಳು,
        ಕನಸಿನಲೋಕ, ಅನುರಾಗ,  ಮದುವೆ - ವಾಸ್ತವ
                 ಮಕ್ಕಳು, ಸಂಬಂಧಗಳು,ಹೊರೆಗಳು
                     ಬೇಸರ, ಪ್ರಯಾಸ
                             ದ್ವೇಷ!


ಪ್ರೇರಣೆ: Reality (Neo-Diamante) by Ashok Babu

[Diamante is a 7 line poem, shaped like a diamond- the subject at the top of diamond is totally different or opposite to the subject at the bottom. This one is my own variant- "neo diamante" or "new diamond"-        by Ashok Babu ]


Saturday, November 24, 2012

ಹೆಂಡತಿಯರು


ನನಗೆ ತಿಳಿದಿಲ್ಲ,ಅನೇಕ ಮಹಿಳೆಯರಿಗೂ ಸಹ ತಿಳಿದಿಲ್ಲ.
ಇದು ಮೌನವಾದ  ಕೃತಜ್ಜತೆ.
ಹಾಗು ಸಮಂಜಸ ನಮ್ಮೊಳಗಿನ ಹೆಣ್ಣನ್ನು ತಿಳಿಯಲು,
ಆಕೆಯೋ ಬದುಕಲು ಇಷ್ಟಪಡುವವಳು.

ಸಂಕೀರ್ಣತೆಗಳು ಬದಲಾಗುತ್ತವೆ ಅನೇಕ ರೀತಿಯಲ್ಲಿ,
ಅವಳು ಪಕ್ವಗೊಳ್ಳುವಳು
ಅಥವಾ ಪಕ್ವಗೊಂಡಿದ್ದಾಳೆ ಲೌಕಿಕ ಮನೆಗೆಲಸಗಳಲ್ಲಿ.

ಹೆಣ್ಣಾಗಿ ಹೊರಹೊಮ್ಮುವ ಅವಳು,

ತಳದಲ್ಲಿ ಹೆಂಡತಿಯಾಗಿಯೂ ಅಸ್ತಿತ್ವವಿದೆ.
ಉಮ್ಹ್.. ಒಂದು ಸುಂದರ ಮಜಲು,ಆದರೆ ಅದರದೇ ಹೆಜ್ಜೆ.
ಕ್ರಮವಾಗಿ ,ನಾನು ನನಗೋಸ್ಕರ, ಅವಳು ಅವಳಿಗೋಸ್ಕರ.
ನಾನು ಮಹಿಳೆ,ಅವಳು ಹೆಂಡತಿ.
ಆದರೆ ನಾವು ಅದ್ವೈತ.


ಪ್ರೇರಣೆ:’Wives' by Sumita Jetley

ತೆರೆಯದ ಬಾಗಿಲು


ಧರ್ಮದ ವಿಚಾರ ಮಾತನಾಡುವಾಗ
ಸಮ್ಮತವಿಲ್ಲದ ವಿಚಾರ ಹೇಳಿದೆ
ಕಟ್ಟಿದ್ದಾರೆ ನನ್ನ ತಲೆಗೆ ಬಹುಮಾನ.


ತಪ್ಪುತಿಳುವಳಿಕೆಗಳು ಹಲವು
ತಡಕಾಡಿ ಹುಡುಕಿದೆ ಪವಿತ್ರಗ್ರಂಥಗಳ
ವ್ಯಾಖ್ಯಾನಗಳ ನಡುವೆ ಸಿಲುಕಿದೆ.

ತಾವೇ ಮುಗ್ದರೆಂದು ಯಾಚಿಸುತ್ತಾರೆ ದೇವರನ್ನು
ಅವರಿಗೆ ಅವನ ಬಳಿ ಯಾವುದೂ ಉಚಿತವಲ್ಲ
ಬೆಲೆ ತೆರಬೇಕು ಬಡ್ಡೀಸಮೇತ.


ಪ್ರೇರಣೆ:’closed doors’by Asim Nehal


Wednesday, November 21, 2012

ಮತ್ತೊಂದು ದಿನ ನೀನು ನನ್ನೊಡನಿರಲು ಬಯಸುತ್ತೇನೆ


ನನ್ನಲ್ಲಿ ಖಿನ್ನತೆ ಹಾಗು ದುಃಖ  ಮಡುಗಟ್ಟಿದೆ
ನನಗೀಗ ಬೇಕಾಗಿರುವುದು ವಿಶ್ರಾಂತಿ
ರಾತ್ರಿ ನಾನು ನಿದ್ದೆಗೆ ಜಾರುತ್ತೇನೆ
ಆದರೆ ನನ್ನ ಕನಸುಗಳು;  ಓಹ್! ನಾನು ಸೆಣಸಲಾರೆ


ನಾನು ಯೋಚಿಸುತ್ತೇನೆ ನೀನು ಹಾಸಿಗೆಯ ಮೇಲೆ ಮಲಗಿರುವುದ
ಮತ್ತು ಆಶ್ಚರ್ಯವಾಗುತ್ತದೆ ಏನಾದರೂ ನಿನ್ನ ಬಗ್ಗೆ ಹೇಳಿರಬಹುದೆಂದು
ನಾನು ಬಯಸುತ್ತೇನೆ ನೀನು ಈಗಲೂ ಇಲ್ಲೇ ಇರಬೇಕಾಗಿತ್ತೆಂದು
ಆದರೆ ನನಗೆ ತಿಳಿದಿದೆ ನೀನು ಈಗಲೂ ನನ್ನ ಸನಿಹವೇ ಇದ್ದೀಯ


ನೀನು ತಿಳಿದಿರುವುದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ
ನಾನು ಆಶಿಸುತ್ತೇನೆ ನೀನು ಇನ್ನೂ ಇಲ್ಲೇ ಇರಬೇಕಿತ್ತೆಂದು
ನಾ ಬಯಸುತ್ತೇನೆ ಮತ್ತೊಂದು ದಿನ ನಿನ್ನ ಜೊತೆ ಇರಲು
ಮತ್ತು ನಾ ಬಲ್ಲೆ ನಿನಗೇನು ಬೇಕಿತ್ತೆನ್ನುವುದೂ ಸಹ

ದಿನ ಪ್ರತಿದಿನ ನಾನು ನೀನಿಲ್ಲದ ಖಾಲಿತನವನ್ನು ಹೆಚ್ಚಾಗಿ ಅನುಭವಿಸುತ್ತಿದ್ದೇನೆ
ನಮ್ಮ ನಡುವೆ ಅನೇಕ ಸಂಗತಿಗಳಿವೆ  ಹೇಳಿಕೊಳ್ಳಲು 
ನಾ ಬಲ್ಲೆ ನಾನು ನಿನ್ನನ್ನು ಮತ್ತೆ ನೋಡುವೆನೆಂದು
ಆದರೆ ನನ್ನ ಜೀವನ ಈಗಷ್ಟೇ ಶುರುವಾಗುತ್ತಿದೆ

ಪ್ರೇರಣೆ:’I just want one more day with you’ by Cyndi



Monday, November 19, 2012

ನೀಲಿ ನಭದಾಚೆ


ಅಲ್ಲೊಬ್ಬನಿದ್ದಾನೆ ಚಿಕ್ಕಮಕ್ಕಳ ಗೆಳೆಯ
ನೀಲಿ ನಭದಾಚೆ;
ಆ ಗೆಳೆಯ ಎಂದೂ ಬದಲಾಗದವ
ಅವನ ಪ್ರೀತಿ ಎಂದೆಂದಿಗೂ ಅಮರ;
ಈ ಭೂಮಿಯ ಗೆಳೆಯರು ನಮ್ಮನ್ನು ಬಿಡಬಹುದು
ಹಾಗು ಬದಲಾಗುತ್ತಾರೆ ವರುಷಗಳು ಉರುಳುತಿರೆ,
ಇವನೋ ಬಹು ಅಮೂಲ್ಯವಾದವನು
ಅವನ ಹೆಸರಲ್ಲೇ ಅಷ್ಟು ಸೆಳೆತವಿದೆ.

ಅಲ್ಲಿ ಚಿಕ್ಕಮಕ್ಕಳ ಮನೆಯಿದೆ
ನೀಲಿ ನಭದಾಚೆಯಲ್ಲಿ.
ಕೃಷ್ಣ ನೆಲೆಸಿದ್ದಾನೆ ಅಲ್ಲಿ
ಶಾಂತಿ,ನೆಮ್ಮದಿಯ ತಾಣವದು
ಈ ಪೃಥ್ವಿಯಲ್ಲಿ ಅಂತಹ ತಾಣವೆಲ್ಲೂ ಇಲ್ಲ
ಅದಕ್ಕೆ ಸರಿಸಾಟಿಯಾವುದೂ ಇಲ್ಲ
ಎಲ್ಲರೂ ಸಂತೋಷಿಗಳೇ
ನಿತ್ಯ ಸುಖಿಗಳೇ ಅವರು.


ಪ್ರೇರಣೆ-’Above the Bright Blue Sky’ by Albert Midlane

Saturday, November 10, 2012

ಹಣತೆಗಳ ಹಬ್ಬ ದೀಪಾವಳಿ


ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ
ಸಂಸ್ಕೃತಿಯ ಬಿಂಬವಾಗಿ,ಜೀವನದ ಹೊಂಬೆಳಕಾಗಿ ಮತ್ತೆ ಬಾಳಿಗೆ ಬಂದಿದೆ
ಸಾಲು ಸಾಲಿ ಹಣತೆಯ ಹಚ್ಚಿ,ಮನದ ಅಹಂ,ಕೊಳೆಗಳನ್ನೆಲ್ಲ ಕೊಚ್ಚಿ
ಹೊಸ ಬಗೆಯ ಬೆಳಕಿಗೆ ಮನವ ತೆರೆದಿಡೋಣ,ಬನ್ನಿ ನಾವೂ ಹಣತೆಯಾಗೋಣ.
ಕೃಷ್ಣ-ಸತ್ಯಭಾಮೆಯ ಕೂಡಿ ನರಕಾಸುರನ ವಧಿಸಿ
ಹದಿನಾರುಸಾವಿರ ನಾರಿಯರ ಸೆರೆಬಿಡಿಸಿ ಉದ್ಧರಿಸಿದ ದಿನವಿಂದು;
ನಮ್ಮೊಳಗಿನ ಹದಿನಾರುಸಾವಿರಕ್ಕೂ ಹೆಚ್ಚು ಕೊಳಕು,ತೆವಲುಗಳಿಗೆ ವಿಧಾಯ ಹೇಳೋಣ ಇಂದೇ
ಸಾಲು ಸಾಲು ಹಣತೆಯ ಹಚ್ಚಿ ಮನದೊಳ ಮೂಲೆಯಲ್ಲಿ ನೆಲೆಗೊಂಡ ಅಜ್ಯಾನ,ಧ್ವೇಷ,
ನಮ್ಮೊಳಗಿನ ವೈರಿಗಳಿಗೆ ಬಿಡುಗಡೆಯ ಹಾದಿ ತೋರಿಸೋಣ ಇಂದೇ
ಬನ್ನಿ ಬರಮಾಡಿಕೊಳ್ಳೋಣ,ಮತ್ತೆ ಬಂದಿದೆ ಹಣತೆಗಳ ಹಬ್ಬ ದೀಪಾವಳಿ.

ನೊಂದುಕೊಳ್ಳಬಲ್ಲೆ ಅಷ್ಟೆ..........


ಬೆಳಗಿನಿಂದ ಒದ್ದಾಡುತ್ತಿದ್ದೇನೆ
ಅನೇಕಾನೇಕ ಆಗಬೇಕಾದ ಕೆಲಸಗಳ ಪಟ್ಟಿಹಿಡಿದು;
ಪಟ್ಟಾಭಿಷೇಕ ಮೊದಲನೆಯದಾದರೆ,
ಕವಿತೆ,ಕಾವ್ಯ,ಅಭ್ಯಾಸಕ್ಕೆ ನೂರೆಂಟು ಪುಸ್ತಿಕೆಗಳು
ಎಲ್ಲವೂ ಕಾಯುತ್ತಿವೆ ಒಟ್ಟಾಗಿ ಮರದ ಕಪಾಟಿನಲ್ಲಿ;
ಅಮೂರ್ತ,ಅವಗಾಹನೆ,ಅವರೋಹಣ,ಆರೋಹಣ,
ಎಲ್ಲಾ ರೀತಿಯ ತಕತೈ,ತಕತೈ ಕುಣಿತಕ್ಕೆ ಸಿದ್ಧ ಉಡುಪು ನಾನೇ;
ರಂಗಸ್ಥಳ ಸಿದ್ಧವಾಗೇ ಇದೆ ಎದುರಲ್ಲೇ.
ಅಕಾಶವಾಣಿಯ ಸುಪ್ರಭಾತ,ಆಲಾಪಗಳಿಗೆ ಮನಸೋತಿತು ಮನ ಕ್ಷಣದಲ್ಲಿ
ಭಕ್ತಿ,ಪ್ರೀತಿ,ಹಳೆಯ,ನವೀನ ಹಾಡುಗಳು ಭಿತ್ತರಗೊಂಡಿವೆ ಒಂದಾದಮೇಲೊಂದರಂತೆ;
ಮನಸ್ಸು ಚೈತನ್ಯದಾಯಿ,
ದೇಹ ಆಯಾಸದಾಯಿ;
ಸೊರಗಿದೆ ನೂರೆಂಟು ರೋಗ-ರುಜಿನಗಳಿಂದ,
ನೆಗಡಿ,ಕೆಮ್ಮು,ಜ್ವರಗಳಿಂದ ಮೊದಲುಗೊಂಡು;
ಮನಸ್ಸು ಹಾರುವ ಹಕ್ಕಿಯಾದರೆ;
ಈ ತುಮುಲಗಳೆಲ್ಲಾ ಕಾಲಿಗೆ ಕಟ್ಟಿದ ಭಾರದ ಬೇನೆಗಳು
ಆಗಸಕ್ಕೆ ಹಾರುವ ಮಾತೆಲ್ಲಿ ಹೇಳಿ!
ಮಾತ್ರೆ,ಪಥ್ಯ,ವಿಶ್ರಾಂತಿ ಇವೇ ಆಗಿದೆ ಈ ಕ್ಷಣದ ಮಂತ್ರ;
ಅಂತೂ ಇಂತೂ ಮನಸ್ಸು ಮಾಡಿ ಸ್ವಲ್ಪ ಹೊಸಗಾಳಿ ಸೇವನೆಗೆ ಹೊರಬಿದ್ದೆ;
ಚಳಿಗಾಳಿ ಬಿಸಿಕಾಫಿಗೆ ಬೇಡಿಕೆ ಇಟ್ಟಿತು.
ಮಾಣಿಗೆ ಹೇಳಿ ಬಿಸಿಕಾಫಿಯ ಹೀರುವ ತಯಾರಿ ನಡೆಸಿದೆ;
ಮನಸ್ಸಿಗೆ ದುಃತ್ತನೆ ಘಾಸಿ,ಮನ ಮರುಗಿತು,
ಇಳಿಯ ವಯಸ್ಸಿನ ಆಕೆ,ಮಕ್ಕಳ,ಮೊಮ್ಮಕ್ಕಳ ಜೊತೆ ಆರಾಮವಾಗಿರಬೇಕಾದಾಕೆ,
ಹೋಟಲಿನಲ್ಲಿ ತಟ್ಟೆ-ಲೋಟ,ಕಸ-ಮುಸುರೆ ತೊಳೆಯುವದ ಕಂಡು ಹಿಂಸೆಯಾಯಿತು;
ಕಾಫಿ ರುಚಿಸಲಿಲ್ಲ,ಅಸಹಾಯಕ ಪರಿಸ್ಥಿತಿ ನನ್ನದೂ,ಆಕೆಯದೂ
ನೊಂದುಕೊಳ್ಳಬಲ್ಲೆ ಅಷ್ಟೆ.....................................................

ಆತ್ಮದ ಕರೆ


ನಾನಾರೆಂದು ನೀ ತಿಳಿದೆಯಾ?
ಒಂದು ಪ್ರಶ್ನೆ ಮನದಲ್ಲಿ ಮೂಡಿದೆ
ಅನೇಕ ಹುಡುಕಾಟಗಳಿಗೆ ಕಾರಣವಾಗಿದೆ
ನಾನು ಏಕೆ?
ಏಕಾಗಿ ಬಂದೆ?
ಇಲ್ಲಿಯ ವ್ಯಾಪಾರವೇನು?
ನನ್ನಿಂದ ಏನಾಗಬೇಕು?
ಲೋಕದ ವ್ಯಾಪಾರಗಳ ಅರಿಯುವ ವಣಿಕನೇ?
ಎಲ್ಲೂ ನಿಲ್ಲದೆ,ಯಾವುದೋ ಸೆಳೆತಕ್ಕೆ ಓಡುವ ಪಯಣಿಗನೇ?
ಅರಿವು,ತಿಮಿರ,ಆಧ್ಯಾತ್ಮ,ವಿಜ್ಯಾನ,ವ್ಯೋಮ ಪರಿಧಿಗಳ ಅರಿವಿಲ್ಲದೆ ತೊಳಲಾಡುವ ಜೀವಿಯೇ?
ನೂರಾರು ಪ್ರಶ್ನೆಗಳು ಮುಂದಿದೆ....
ಲೋಕದ ಮಾಯೆಗೆ ಬಲಿಪಶುಗಳು ನಾವೆಲ್ಲಾ
ಅವನಾಡಿಸಿದಂತೆ ಆಡುವ ತೊಗಲುಗೊಂಬೆಗಳು
ಗಾಳಿ ಬಂದಲ್ಲಿಗೆ ತೂರುವ ತರಗೆಲೆಗಳು
ಕಾಲನ ಕೈಗೆ ಸಿಕ್ಕು ನಲುಗುವ ಜೀವ ಕ್ರಿಮಿಗಳು
ಮತ್ತೆ ಹುಟ್ಟು;
ಮತ್ತೆ ಸಾವು;
ಕೊನೆ-ಮೊದಲಿಲ್ಲದ ಈ ಜಂಜಾಟದಲ್ಲಿ ಬೆಂದು ಬೇಯುವ ಪದಾರ್ಥಗಳು
ಮನದಲ್ಲಿ ಪ್ರಶ್ನೆ;
ಕಾಣದ ಉತ್ತರಕ್ಕೆ ಹುಡುಕಾಡಲೇ ಹುಟ್ಟಿ,ಕೊನೆಗೆ ಸಾಯುವವರು.

Tuesday, November 6, 2012

ಕ್ಷುದ್ರ ಗ್ರಹ


ಹೊಳೆಯುವುದಿಲ್ಲ,ಬೆಳೆಯುವುದಿಲ್ಲ
ಆಕಾಶದಲ್ಲಿ ಹೊಳೆಯುವ ತಾರೆ ನಾನಲ್ಲ
ಪರರ ಬದುಕಿಗೆ ಬೆಳಕ ನೀಡುವ ಚೈತನ್ಯ ನಾನಲ್ಲ
ಜಡತ್ವವೇ ಉಸಿರಾಗಿಸಿಕೊಂಡ,ಮೈದಳೆದ
ಕಲ್ಲು,ಮಣ್ಣು,ಧೂಳು,ವಿಷಾನಿಲವೇ ನಾನು
ದಿಕ್ಕುಗಾಣದೆ ಯಾವುದೋ ಅನನ್ಯ ಚೈತನ್ಯಕ್ಕೆ ಸೋತು
ಸೌರಮಂಡಲದಲ್ಲಿ ಅಲೆಯುವ ಅಲೆಮಾರಿ ನಾನು
ಯಾರ ಯಾರ ಹೊಡೆತಕ್ಕೋ ನಲುಗುವೆ,
ಯಾರ ಯಾರ ಸೆಳತಕ್ಕೋ ಸೋಲುವೆ
ಎಂದೂ ಚೈತನ್ಯವಾಗದ.
ಸದಾ ಅಂಡಲೆಯುವ ಕ್ಷುದ್ರಗ್ರಹ ನಾನು.

Wednesday, October 31, 2012

ಜೀವನ ಪ್ರೀತಿ


ಅಪ್ಪಿಕೋ
ಒಪ್ಪಿಕೋ
ನನ್ನ ಪ್ರೀತಿಯನ್ನ||

ಒಲವಿನ ಬದುಕಿಗೆ
ಪ್ರೀತಿಯ ಕನಸ ಬೆಸೆದು
ಒಂದಾಗಿ ಹೆಜ್ಜೆ ಹಾಕೋಣ
ಅಪ್ಪಿಕೋ,ಒಪ್ಪಿಕೋ ನನ್ನ ಪ್ರೀತಿಯನ್ನ||

ಮನೆಯ ಬೆಳಗು
ಮನವ ಬೆಳಗು
ಏಕಾಂಗಿತನವ ಕಟ್ಟಿಹಾಕು ಬಾ
ಅಪ್ಪಿಕೋ,ಒಪ್ಪಿಕೋ ನನ್ನ ಪ್ರೀತಿಯನ್ನ||

ಬಂಧನದಲ್ಲಿ ಸಿಲುಕೋಣ
ಸಂಸಾರ ಸಾಗರವ ಈಸೋಣ
 ದಾಂಪತ್ಯ ಸಖ್ಯದ ಸವಿಜೇನ ಸವಿಯೋಣ ಬಾ
ಅಪ್ಪಿಕೋ,ಒಪ್ಪಿಕೋ ನನ್ನ ಪ್ರೀತಿಯನ್ನ||

ಬಾಳಬಂಡಿಯ ಪಯಣದ
ಪಯಣಿಗರು ನಾವು
ಒಪ್ಪಿಕೊಂಡಿದ್ದೇವೆ,ಅಪ್ಪಿಕೊಂಡಿದ್ದೇವೆ ಸಂಸಾರವ
ಬಾ ಗೆಳತಿ ಅಪ್ಪೋಣ,ಒಪ್ಪೋಣ ಜೀವನ ಪ್ರೀತಿಯನ್ನ||

ಕನ್ನಡ ಶೋಕಾಚರಣೆ


ಕನ್ನಡ ರಾಜ್ಯೋತ್ಸವ ದಿನ ಮುಂದಿದೆ
ನೀಲಂ ಎಲ್ಲೆಡೆಯಲ್ಲೂ ಆವರಿಸಿದ್ದಾಳೆ
ಮೂರು ದಿನದ ಶೋಕಾಚರಣೆಯಂತೆ
ಕಣ್ಣೀರು ಸುರಿಸುತ್ತಲೇ ಇರುತ್ತಾಳಂತೆ

ಕನ್ನಡದ ಧ್ವಜಕ್ಕೆ ಅಧೀಕೃತ ಮಾನ್ಯತೆಯಿಲ್ಲ
ರಾಜ್ಯ ಉಚ್ಛನ್ಯಾಯಲದ ತೀರ್ಪಿದು
ಧ್ವಜವನ್ನು ಹಾರಿಸುವ ಹಾಗಿಲ್ಲ
ಧ್ವಜ ಹಾರಿಸಲು ಕಟ್ಟು-ಪಾಡುಗಳಿಲ್ಲ
ಸರ್ಕಾರಕ್ಕೆ ಧ್ವಜ ನಮ್ಮದು,ಕನ್ನಡಿಗರ ಆಸ್ತಿ
ಎಂದು ಸಮರ್ಥಿಸಿಕೊಳ್ಳುವ ನೈತಿಕತೆಯಿಲ್ಲ
ಸಾಹಿತಿಗಳು,ಕನ್ನಡ ಸಂಘ ಸಂಸ್ಥೆಗಳು,ಲ(ಬು)ದ್ದಿ ಜೀವಿಗಳೂ
ಮೌನಕ್ಕೆ ಶರಣಾಗಿ ಕನ್ನಡ ನಾಡು,ನುಡಿ,ಸಂಸ್ಕೃತಿಗೆ ದ್ರೋಹಬಗೆದಿದ್ದಾರೆ
ಕನ್ನಡ ನುಡಿ ನಲುಗುತ್ತಿದೆ,ಸೊರಗುತ್ತಿದೆ ಕನ್ನಡನಾಡಲ್ಲೇ....
ಅದಕ್ಕೆ ಎಲ್ಲೆಡೆಯಲ್ಲೂ ಶೋಕಾಚರಣೆ,ಕಣ್ಣೀರ ಆರಾಧನೆ ’ನೀಲಂ’ನಿಂದ.

ಒಳಗಿನ ಬೇಗುದಿ


ಬೆಂದು ಹೋಗಿದ್ದೇನೆ ಒಳಗಿನ ಅಸಮಾಧಾನದ ಬಿಸಿಯ ಹೊಗೆಯಿಂದ
ಬೇರೆ ದಾರಿ ಕಾಣದೆ ಒಳಒಳಗೇ ನರಳುತ್ತಿದ್ದೇನೆ,ಬೇಯುತ್ತಿದ್ದೇನೆ ತಾಳ್ಮೆಯ ದಹಿಸಿ ದಹಿಸಿ
ಎಷ್ಟು ದಿನ ಬೇಯಬೇಕೋ? ಅರಿಯೇ, ಮುಂದೆ ದಾರಿಯೇನೋ? ಅದನ್ನೂ ನಾನರಿಯೇ!
ಎಲ್ಲವೂ ನಿನ್ನ ಪದಕಮಲಗಳಲ್ಲಿ ಅರ್ಪಿಸಿದ್ದೇನೆ ದೇವ, ಕರುಣೆಯ ತೋರುವಿಯೆಂದು.
ದೇವಾ, ತಾಳ್ಮೆಯ ಕೈಹಿಡಿದಿದ್ದೇನೆ ದಾಟಿಸುವೆಯೋ?,ಮುಳುಗಿಸುವೆಯೋ?
ಎಲ್ಲವೂ ನಿನ್ನ ತಾಳ್ಮೆಯ ಮೇಲೇ ನಿಂತಿದೆ ದೇವ,ನಾನು ನಿನಗೆ ಶರಣಾಗಿದ್ದೇನೆ.

ನೀಲಂ


ಬೆಳಗಲೇ ಬೇಕು ಕತ್ತಲಾದ ನಂತರ
ಅದೇ ಅಲ್ಲವೇ ದಿನಚರಿ
ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿತ್ತು ನಿನ್ನೆ
      ಬೆಳಕು ಬರಲೇ ಇಲ್ಲ
ಏಕೆಂದರೆ ಎಲ್ಲೆಡೆಯಲ್ಲೂ ವ್ಯಾಪಿಸಿದ್ದಳು ನೀಲಂ
ಮಂಕು ಕವಿದಿದ್ದ ಆಕಾಶರಾಜ
ಸೂರ್ಯತೇಜ ಎಂದಿನಂತೆ ಬರಲಿಲ್ಲವೆಂದು
ಆಗಸದಲ್ಲಿ ಎಲ್ಲೆಲ್ಲೂ ಶೋಕಾಚರಣೆ
ಬೆಳಗಿನಿಂದಲೇ ಶುರುವಿಟ್ಟಿದ್ದ ಕಣ್ಣೀರು ಹರಿಸಲು
ಮೂರು ದಿನ ಸ್ವಾಂತನಗೊಳಿಸುವಳಂತೆ ನೀಲಂ.




ಸೂಚನೆ: ’ನೀಲಂ’ ಚಂಡಮಾರುತದ ಹೆಸರು
ದಿನಾಂಕ: ೩೧,೧೦,೨೦೧೨ ರಿಂದ ೨.೧೧.೨೦೧೨ ರವರೆಗೂ ಬೆಂಗಳೂರಿನಲ್ಲಿ ಮಳೆಯ ಜೊತೆಗೆ ಚಳಿಯನ್ನೂ ತರುತ್ತೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ. ಅದರಂತೆ ೩೧ ಹಾಗು ೧ ನೇ ನವೆಂಬರ್ ೨೦೧೨ ರಂದು ಮಳೆಯದೇ  ರಾಜ್ಯಭಾರ.

Sunday, October 21, 2012

ಬಾರದ ಗೆಳೆಯ


ದಿನವೆಲ್ಲಾ ಕಾದರೂ
ಬಾರಲಿಲ್ಲವಲ್ಲಾ ಇವ
ಮರೆತನೇನೋ? ಆದರೂ
ಅರ್ಥಮಾಡಿಕೊಳ್ಳಲಿಲ್ಲವಲ್ಲಾ ಮನದ ಭಾವ||

ಮುಂಜಾನೆ ಬೇಗ ಎದ್ದು
ದಿನವಹಿ ಕೆಲಸಗಳನೆಲ್ಲಾ ಮುಗಿಸಿ
ಕಾಯುತ್ತಾ ಕುಳಿತ್ತಿದ್ದೆ,ಎಚ್ಚರಿಕೆಯಿಂದ ಎದ್ದು
ಕ್ಷಣಗಳು,ಗಂಟೆಗಳೂ ಜಾರಿಹೋದವೋ ನನ್ನ ಸಹಿಸಿ||

ಆದರೂ ಬೇಸರಿಸಲಿಲ್ಲ ಕಾಯಿಸಿ ಬಾರದಿದ್ದಕ್ಕೆ
ಹೊಸತೊಂದು ಚಿಂತನೆ ಮನದ ಅಂಗಳವ ತಲುಪಿತು
ನೀ ಬಂದಿದ್ದರೆ ಅವುಗಳಿಗೆಲ್ಲಾ ಕತ್ತರಿಬೀಳುತ್ತಿತ್ತು,ಧನ್ಯವಾದ ಅದಕ್ಕೆ
ನೂರೆಂಟು ಯೋಚನೆಗಳು,ಪುಸ್ತಕ,ಪಠ್ಯ,ಕವಿತೆ ಮನವ ಕಾಪಿಟ್ಟಿತು||

Monday, October 15, 2012

ಸೋಮವಾರದ ಸಂಜೆ ಮಳೆ


ಸೋಮವಾರದ ಸಂಜೆ ಮಳೆಯೇ
ಬಂದೆ ಏಕೆ?
ಯಾರ ಕರೆಗೆ ಓಗೊಟ್ಟು ಬಂದೆ ಹೇಳು?
ಒಂದು ಕಡೆ ನಿನ್ನೊಡನೆ ಬಂದಿಹನು ಚಳಿರಾಯ;
ಮತ್ತೊಂದು ಕಡೆ ಕಣ್ಣಾಮುಚ್ಚಾಲೆ ಆಡುತಿಹನು ದೀಪರಾಯ;
ಒಂದು ಕಡೆ ಖುಷಿ ನೀ ಬಂದೆ ಎಂದು;
ಮತ್ತೋಂದೆಡೆ ದುಃಖ, ರಾಜಕಾರಣಿಗಳ ಮುಖವಾಡ ಕಳಚಲಿಲ್ಲವೆಂದು;
ಆಟ ಮುಗಿದಿದೆ
ಸೋತ ಆಟ ನಮ್ಮದು
ಗೆದ್ದವರು ಬೀಗುತ್ತಿದ್ದಾರೆ
ನಿನ್ನೆ,ಇಂದು,ನಾಳೆ......
ಗೆದ್ದವರ ಗರ್ಜನೆ
ಸೋತವರ ಕಣ್ಣೀರು
ನಾಳೆಗೆ ಏನನ್ನೋ ಬಿಟ್ಟು ತೆರಳುತ್ತಿದೆ
ಕತ್ತಲ ತೋಳತೆಕ್ಕೆಯಲ್ಲಿ ಅದ್ವೈತ ಮೊಳಗುತ್ತಿದೆ
ನಾಳೆಯ ಕನಸಿಗೆ ನಿದ್ರಾದೇವಿ ಸೆರಗಹಾಸುತ್ತಾ
ಜಾರುತ್ತಿರುವ ಇರುಳು ಎಲ್ಲರ ಬಾಯಿಮುಚ್ಚಿಸಿದೆ.

Sunday, October 14, 2012

ಹೊಸತನಕ್ಕೆ.......


ಮನಸ್ಸಿನಿಂದ ಎಲ್ಲವನ್ನೂ ಕಿತ್ತುಹಾಕಿದ್ದೇನೆ
ಅನೇಕ ಯೋಚನೆಗಳನ್ನು, ನೋವುಗಳನ್ನು,ತೆವಲುಗಳನ್ನು
ಕಷ್ಟ-ನಷ್ಟಗಳನ್ನು,ಆಕ್ರೋಶವನ್ನು......
ಮನದ ತುಂಬೆಲ್ಲಾ ಹರಡಿ
ಕೊಳೆತು ನಾರುತಿತ್ತು
ಎಷ್ಟು ದಿನ  ಗಬ್ಬುನಾತ ತಡೆದುಕೊಳ್ಳಲಿ
ಕೊನೆ ಎಂಬುದು ಎಲ್ಲಕ್ಕೂ ಇರುತ್ತದಲ್ಲವೇ?
ಇಂದು ನಿರಾಳವೆನಿಸುತ್ತಿದೆ
ನಾನು ಯಾರಿಗೂ ಹೆದರಬೇಕಾಗಿಲ್ಲ;
ಯಾರಿಗೂ ಜೀ ಹುಜೂರ್ ಎಂದು ಸಲಾಮು ಹೊಡೆಯಬೇಕಾಗಿಲ್ಲ;
ಇಂದೇ ನನಗೆ ಸ್ವಾತಂತ್ರ ಸಿಕ್ಕಿತೇನೋ ಎಂಬಷ್ಟು ಹರ್ಷವಿದೆ ಮನದಲ್ಲಿ
ಆದರೂ ಇಷ್ಟು ದಿನ ಯಾರಿಗಾಗಿ ಹೆದರಿದೆ,ಬೆದರಿದೆ
ಒಂದೂ ಗೊತ್ತಿಲ್ಲ ಹುಚ್ಚು ಮನಸ್ಸು
ಬೆದರಿ ಮುದುರಿತ್ತು;
ಎಲ್ಲಾ ಬೇಡಿಗಳನ್ನೂ ಕಳಚಿದ್ದೇನೆ;
ಮುಕ್ತಗೊಳಿಸಿದ್ದೇನೆ
ಹೊಸ ದಿನಕ್ಕೆ;
ಹೊಸ ಬೆಳಕಿಗೆ
ಹೊಸತನಕ್ಕೆ.......

ಏಕಾಂಗಿ-ನನ್ನ ಗೆಳೆಯ


ಏಕಾಂಗಿಯಾದಾಗ ನನಗೆ ಅರಿವು
 ಮೂಡುತ್ತದೆ;
ನನ್ನೊಳಗಿನ ಅಂಧಕಾರ
ಹೊರಬರುತ್ತದೆ;
ಆ ಕ್ಷಣ ನನಗೆ ತುಂಬಾ
 ಭಯವಾಗುತ್ತದೆ;
ಆದರೂ ಏಕಾಂಗಿಯಾಗ
 ಬಯಸುತ್ತೇನೆ;
ನನ್ನೊಳಗಿನ ಕೆಟ್ಟತನವೆಲ್ಲಾ
 ಹೊರಬರಲಿ;
ಮನವನ್ನು ಹಿಂಡಿಹಿಪ್ಪೆಮಾಡಿ
ಮೂಲೆಗುಂಪು ಮಾಡುತ್ತದೆ;
ಆದರೂ ಛಲವಂತೂ ಬಿಡುವುದಿಲ್ಲ
ಅವಕ್ಕೆ ಒಂದು ದಾರಿ
 ತೋರಿಸುತ್ತೇನೆ;
ಎಲ್ಲಾ ತೊಳಲಾಟವಾದ ನಂತರ
ಮನಕ್ಕೆ ಹೊಸ ಚೈತನ್ಯ
ಬರುತ್ತದೆ ಹೊಸ ದಾರಿ
ತೆರೆದುಕೊಳ್ಳುತ್ತದೆ;
ಆನಂತರ ಮನಸ್ಸು ಹಕ್ಕಿಯಂತೆ
ಹಾರುತ್ತದೆ;
ಮನದ ಭಾರವೆಲ್ಲಾ ಇಳಿದಮೇಲೆ
ಇನ್ನೇನು ಮಾಡುವುದು;
ಮತ್ತೊಂದು ಏಕಾಂಗಿತನಕ್ಕೆ
ಹಾತೊರೆಯುತ್ತೇನೆ
ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು,
ಪರಿತಪಿಸಲು;
ಮತ್ತೊಮ್ಮೆ ನನ್ನ ಮನದ ಗೋಡೆಯೊಳಗೆ
ಇಣುಕಿನೋಡುತ್ತೇನೆ;
ನನ್ನ ಸ್ಥಿತಿಯ ಕಂಡು ಮರುಗುತ್ತೇನೆ;
ಹೊಸ ಶಕ್ತಿ ದೊರೆಯಲಿ
ಎಂದು ದಿನವೂ ಪ್ರಾರ್ಥಿಸುತ್ತೇನೆ;
ದಿನವೂ ಬರಲಿ;
ಹೊಸ ಸಂಕಷ್ಟಗಳು ಬರಲಿ
ಹೊಸ ಹೊಸ ದಾರಿ ತೆರೆದುಕೊಳ್ಳಲಿ
ಮನ ಮುದಗೊಳ್ಳಲಿ.......

ಕಾವೇರಿಯ ಕನವರಿಕೆ




ಏಕಾದರೂ ಈ ಮಳೆರಾಯ ಬರಲಿಲ್ಲವೋ ನಾ ಕಾಣೆ
ಪ್ರತಿ ವರ್ಷ ಬಂದೇ ಬರುತ್ತಾನೆ ಎಂದು ಎಲ್ಲರಿಗೂ ತಿಳಿದಿದೆ
ಆದರೆ ಈ ವರ್ಷ ಏನಾಗಿದೆಯೋ ತಿಳಿದಿಲ್ಲ||

ಇವ ಬರದೆ ದೊಡ್ಡ ಅವಾಂತರ ಮಾಡಿದ್ದಾನೆ
ನಾ ಹುಟ್ಟಿ ಮುಂದೆ ಸಾಗುವೆಡೆಯಲೆಲ್ಲಾ
ಈಗ ತುಂಬಿದೆ ಎಲ್ಲೆಲ್ಲೂ ಕಸಿವಿಸಿ
ಆತಂಕ ತುಂಬಿದೆ ,
ಧರಣಿ, ಬಂದ್,ಸತ್ಯಾಗ್ರಹ,ಚಳುವಳಿಗಳು
ಎಲ್ಲವೂ ಇಂದು ಬೀದಿಗೆ ಬಂದಿದೆ ನನಗಾಗಿ
ಕಾರಣ ಇಂದು ಬರಿದಾಗಿದೆ ನನ್ನ ಒಡಲು ನಿನ್ನಿಂದ ಅದಕ್ಕೆ||

ನಾನು ಈಗಲೂ ಹರಿಯುತ್ತಿದ್ದೇನೆ
ಆದರೆ ತುಂಬಿ ತುಳುಕುತ್ತಿಲ್ಲ
ಪ್ರವಾಹದ ಪರಿಸ್ಥಿತಿಯಂತೂ ಖಂಡಿತ ಇಲ್ಲ
ಇದೇ ಎಲ್ಲರ ಚಿಂತೆಗೂ ಕಾರಣ||

ತಮಿಳರಿಗೂ ,ಕನ್ನಡಿಗರಿಗೂ ಜಗಳ ನನ್ನಿಂದ
ನಾನು ತುಂಬಿ ತುಳುಕಿದರೆ ಎಲ್ಲವೂ ಶಾಂತ ,ನಿರ್ಮಲ
ಮಳೆರಾಯ ನೀನು ಮಳೆಹುಯ್ಯಲಿಲ್ಲ
ಹುಯ್ದೆ ವೈಮನಸ್ಯದ ಬೀಜ ನನ್ನ ಮೂಲಕ||

ಸಾಕು ಸಾಕು.....
ಜಯ, ಕರುಣಾನಿಧಿ,ವೈಕೋರ ಆರ್ಭಟ
ಕನ್ನಡಿಗರಲ್ಲಿ ಆತಂಕ
ರಾಜಕಾರಣಿಗಳ ಮುಖಕಳಚುವುದು
ಕನ್ನಡಿಗರ ಪಾಲಿಗೆ ಕಹಿದಿನ
ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ
ಜನರ ಕಣ್ಣೀರು ಒರೆಸುವವರು ಯಾರೂ ಇಲ್ಲ
ಮಳೆರಾಯ ಮರೆಯದೇ ಬಾ ...
ಕನ್ನಡಿಗರ ಕಣ್ಣೀರು ಒರೆಸು
ನನ್ನ ನೀ ಸಲುಹು ಬಾ....||


Saturday, October 6, 2012

ಕಾವೇರಿ




ತಾಯೇ ನಿನಗೆ ಯಾರಾದರೂ ಶಾಪವಿತ್ತಿದ್ದಾರೆಯೇ?
ಜನರ ಜನರ ನಡುವೆ ಏರಿದೆ ನಿನಗಾಗಿ ಕಾವು

ನೀನು ತುಂಬಿ ಹರಿದರೆ
ಎಲ್ಲರಿಗೂ ಸಂತೋಷ,ಸಮಾಧಾನ
ಎಲ್ಲರ ಮುಖಗಳಲ್ಲಿ ನಗು,ಸುಖ ಎಲ್ಲೆಡೆಯಲ್ಲೂ

ರಾಗ-ಧ್ವೇಷಗಳು ನಿನ್ನಲ್ಲಿ ಇಲ್ಲ
ಆದರೆ ನಿನ್ನ ಬಳಸುವ ನಮಗೆ ಏಕಿದೆ ತಿಳಿಯೆವು
ನಿನ್ನ ಮೇಲಿನ ಪ್ರೀತಿಯಿಂದಲೋ ನಾವರಿಯೆವು

ಕನ್ನಡ ಜನರ ಜೀವ ನೀನು;
ನಮ್ಮ ಭಾವನೆ ನೀನು;
ನಮ್ಮ ತಾಯಿ ನೀನು;
ನಿನ್ನ ಪ್ರೀತಿಯ ಹಂಚಿಕೊಂಡಿದ್ದೇವೆ ತಮಿಳು ಜನರೊಡನೆ ನಿಸ್ವಾರ್ಥವಾಗಿ
ಆದರೆ ಅವರಿಗೆ ನಿನ್ನ ಮೇಲೆ ಅತಿಯಾಸೆ, ನಮ್ಮ ಮೇಲೆ ಧ್ವೇಷ
ನಿನ್ನನ್ನು ನಮ್ಮಿಂದ ಕಿತ್ತುಕೊಳ್ಳುವ ಯತ್ನ ಇಂದು ನಿನ್ನೆಯದಲ್ಲ

ನಾವು ನೀರಿಲ್ಲದೆ ಸೊರಗುತ್ತಿದ್ದೇವೆ
ಸರಿಯಾಗಿ ಮಳೆಯಿಲ್ಲದೆ
ಆದರೂ ಅವರಿಗೆ ನಾವು ನಿನ್ನನ್ನು ಬಿಟ್ಟುಕೊಡಬೇಕು
ಮಾನವೀಯತೆ ಇಲ್ಲದ ಅವರ ವರ್ತನೆ ಸರಿಯೇ?

ನಮ್ಮ ರಾಜಕೀಯ ನಾಯಕರೂ ಸರಿಯಾಗೇ ಇದ್ದಾರೆ
ಜನರ ಭಾವನೆಗಳೊಡನೆ ಚಲ್ಲಾಟವಾಡುತ್ತಾರೆ
ಅವರವರ ಸ್ವಾರ್ಥಕೆ ಬೆಲೆಕೊಟ್ಟು
ನಿನ್ನನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡರು
ಮೊಸಳೆ ಕಣ್ಣೀರು ಮಾತ್ರ ಸುರಿಸುತ್ತಾರೆ
ಬುಗಿಲೆದ್ದಾಗ ಆಕ್ರೋಶ;
ಒಗ್ಗಟ್ಟಿಲ್ಲದೆ ನಾವು ನಿನ್ನನ್ನು ಕಳೆದುಕೊಳ್ಳುತ್ತಿದ್ದೇವೆ
ನಮ್ಮಲ್ಲಿ ಆತ್ಮಸ್ತೈರ್ಯ ತುಂಬು ತಾಯೆ...
ಆದರೂ ನಮಗೆ ಸಂಶಯ ನಿನಗಾರಾದರೂ ಶಾಪವಿತ್ತಿದ್ದಾರೆಯೇ
ನಿನ್ನ ಮಕ್ಕಳೆ ಬಡಿದಾಡಿ ಸಾಯಲಿ ಎಂದು....
ಬಾ ತಾಯಿ ಬಾ ಶಾಂತಿಯ ಮೇಳೈಸಿ ಬಾ.

ಅಣ್ಣ


ಎಷ್ಟು ಬಾರಿ ನೆನೆಯುತ್ತೇನೆ ನಿನ್ನನ್ನು
ಕೊರತೆ ಎದುರಾದಾಗಲೆಲ್ಲಾ ನೀ ಕಣ್ಣ ಮುಂದೆ ನಿಲ್ಲುವೆ
ಬೇರೆ ಯಾರೂ ನೀಡದಂತಹ ನೈತಿಕತೆ ತುಂಬಿದೆ ನನ್ನಲ್ಲಿ
ಅದಕ್ಕೆ ನೆನೆಯುತ್ತೇನೆ ದಿನವೂ ನಿನ್ನನ್ನು||

ಬೇಡಿದನ್ನು ಕೊಡುವುದು ಕಲ್ಪವೃಕ್ಷವಂತೆ
ನನ್ನ ಪಾಲಿಗೆ ನೀನು ಕಲ್ಪವೃಕ್ಷವೇ ನಿಜ
ಎಂದೂ ನಿನಗಾಗಿ ಏನನ್ನೂ ಕೇಳಲಿಲ್ಲ
ಕೊರತೆ, ನೋವು ನಿನಗಿದ್ದರೂ ಹೇಳಲಿಲ್ಲ||

ನಿನ್ನ ಆ ಅಕಲ್ಮಷ ಹೃದಯ ಯಾರಿತ್ತರೋ?
ಬದುಕಿನ ಯಾತ್ರೆಯಲ್ಲಿ ನಿನ್ನ ಜೊತೆ ನಾನು ಎಂತಹ ಸುಕೃತ ನನಗೆ
ನೂರು ಬಾರಿ ದೇವರಲ್ಲಿ ಪ್ರಾರ್ಥಿಸುತ್ತೇನೆ
ನಿನಗೆ ಎಲ್ಲವೂ ಸಿಗಲಿ,ನಿನಗೆ ಕೊರತೆ ಇರದಿರಲಿ.

Tuesday, October 2, 2012

ದೇವರ ಅದ್ಭುತ ಸೃಷ್ಟಿ ತಾಯಿ



ದೇವರು ಸೃಷ್ಟಿಸಿದ ಅಪೂರ್ವ ಮಮತಾಮಯಿ ತಾಯಿಯ
ತಾಯಿ ಎಂದೂ ಹಳೆಯದಾಗದ ಅಪೂರ್ವ ಮಣಿ||

ದೇವರು ಸೂರ್ಯನ ಕಿರಣಗಳನ್ನೇ ಆಕೆಯ ನಗುವಾಗಿಸಿದ
ಅಪ್ಪಟ ಅಪರಂಜಿ ಚಿನ್ನದಿಂದ ಎರಕ ಹೊಯ್ದ ಅವಳ ಹೃದಯವನ್ನು||

ಅವನೋ ಅವಳ ಕಣ್ಣುಗಳಲ್ಲಿ ಹೊಳೆಯುವ ತಾರೆಯರನ್ನು ತುಂಬಿದ
ಕಾಣಿಸದೇ ನಿಮಗೆ ಅವಳ ಕೆನ್ನೆ,ಗಲ್ಲದಲ್ಲಿ ಗುಲಾಬಿಯ ಹೂಗಳ||

ದೇವರು ಸೃಷ್ಟಿಸಿದ ಅಪೂರ್ವ ಮಮತಾಮಯಿ ತಾಯಿಯ
ಆ ಮಮತಾಮಯಿ ತಾಯಿಯ ನನಗಾಗಿಯೇ ನೀಡಿದ||

Wednesday, September 19, 2012

ಹಬ್ಬಗಳೂ ಬರಲಿ,ಮನವು ಬಾಡದಿರಲಿ.........


ಅದೇ ಶುಭಾಷಯಗಳು
ಅದೇ ಹಾಡು, ಅದೇ ರಾಗ;
ಹಬ್ಬಗಳು ಒಂದಾದ ಮೇಲೆ ಒಂದು ದಾಳಿಯಿಡುತ್ತಿವೆ;
ಶ್ರಾವಣ ಬಂದನೆಂದರೆ
ಹಬ್ಬಗಳಿಗೆ ಮುನ್ನುಡಿಯಿಟ್ಟಂತೆ;
ಆಷಾಡ ಅಮಾವಾಸ್ಯೆಯಿಂದಲೇ
ಮನ-ಮನಗಳಲ್ಲಿ ಹಬ್ಬಗಳ ಸಾಲುಸಾಲು;
ಏರಿದ ಬೆಲೆಗಳ ನಾಡಲ್ಲಿ
ಎಲ್ಲವೂ ಕಷ್ಟವೇ!
ನಾಡಿನ ದೊರೆಗಳು ಮಾತ್ರ
ನೆಮ್ಮದಿಯ ಉಸಿರುಬಿಡುತ್ತಾರೆ
ಏಕೆಂದರೆ ಅವರ ಖರ್ಚು-ವೆಚ್ಚಗಳನ್ನು
ಭರಿಸುವವ ಜನ ಸಾಮಾನ್ಯನೇ!
ಅವರಿಗೆ ಎಲ್ಲವೂ ಉಚಿತ
ಜೊತೆಗೆ ಮಾಮೂಲು ಪ್ರತಿಯೊಂದು ಯೋಜನೆ ಜಾರಿಗೊಳಿಸಿದಾಗಲೆಲ್ಲಾ.....
ತಲೆತಲಾಂತರಗಳಿಗೆ ಇವರೇ ಕೂಡಿಡುತ್ತಾರೆ
ಬಡವರ ಕಣ್ಣೀರಿನ ,ಬೆವರಿನ ಹನಿಯಿಂದ
ಸಾಯುವವನು ಸಾಯುತ್ತಲ್ಲೇ ಇದ್ದಾನೆ
ಮಜ ಉಡಾಯಿಸುವವ ಉಡಾಯಿಸುತ್ತಲೇ ಇದ್ದಾನೆ
ಎಲ್ಲವೂ ಅಯೋಮಯ
ನಾವು ಮಾತ್ರ ಎಲ್ಲವನ್ನೂ ಮರೆಯುತ್ತೇವೆ
ಹಬ್ಬಗಳು ಬಂತೆಂದರೆ ಖುಷಿ
ತೂತಾದ ಜೋಬಿಗೆ ಮತ್ತೊಂದು ತೂತು ಬಿದ್ದರೆ ವ್ಯತ್ಯಾಸ ಏನೂ ಇರದು
ಖಾಲಿಯಾಗಲಿ ಬಿಡಿ;
ನಾಳೆ ನಮಗಾಗಿಯೇ ಇದೆ;
ಮೈಯಲ್ಲಿ ಶಕ್ತಿ ಇದೆ;
ಸಾವು ಬರುವವರೆಗೂ ದುಡಿಯುವ ತವಕವಿದೆ
ಮನಸು ಮಾತ್ರ ಮುರುಟದಿರಲಿ
ಎಂಬುದೇ ನಮ್ಮೆಲ್ಲರ ಪ್ರಾರ್ಥನೆ;
ಹಬ್ಬಗಳೂ ಬರಲಿ
ಮನವು ಬಾಡದಿರಲಿ.........

Wednesday, September 12, 2012

ಬಣ್ಣ


ನಾನು ಹುಟ್ಟಿದಾಗ ನನ್ನ ಬಣ್ಣ ಕಪ್ಪು;
ಬೆಳೆದು ದೊಡ್ಡವನಾದಾಗ ಕಪ್ಪು;
ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿದಾಗ ನನ್ನ ಬಣ್ಣ ಕಪ್ಪು;
ನಾನು ಆತಂಕದಲ್ಲಿದ್ದಾಗ ಕಪ್ಪು;
ನಾನು ಅನಾರೋಗ್ಯದಿಂದ ನರಳಿದಾಗ ನನ್ನ ಬಣ್ಣ ಕಪ್ಪು;
ನಾನು ಸತ್ತಾಗಲೂ ನನ್ನ ಬಣ್ಣ ಕಪ್ಪು;
ನಾನು ಯಾವಾಗಲೂ ಕಪ್ಪು;

ನನ್ನ ಬಿಳಿಯ ಗೆಳೆಯರೇ!
ನೀವು ಹುಟ್ಟಿದಾಗ ನಿಮ್ಮ ಬಣ್ಣ ಗುಲಾಬಿ;
ನೀವು ಬೆಳೆದು ನಿಂತಾಗ ನಿಮ್ಮ ಬಣ್ಣ ಬಿಳಿ;
ನೀವು ಸೂರ್ಯನಿಗೆ ಮೈಯ್ಯೊಡ್ಡಿದಾಗ ಕೆಂಪು;
ತಣ್ಣನೆಯ ಸಮಯದಲ್ಲಿ ನೀಲಿ;
ಗಾಬರಿಯಾದಾಗ ಹಳದಿ;
ಅನಾರೋಗ್ಯದಿಂದಾಗಿ ನರಳುವಾಗ ಹಸಿರು;
ಸತ್ತಾಗ ಕಂದು;
 ಆದರೂ ನನ್ನನ್ನು ಕಂಡಾಗ ಬಣ್ಣದವನು ಎನ್ನುತ್ತೀರಿ!


ಈ ಕವಿತೆ, ಬರೆದಿದ್ದು ಆಫ್ರೀಕಾದ ಮಗು. ೨೦೦೫ ರ ಅತ್ಯುತ್ತಮ ಕವಿತೆ ಎಂದು ಹೆಸರುಮಾಡಿದೆ.
ಚಿತ್ರಕೃಪೆ: Facebook.

ನಾನು ಅರಿತೆ



ನಾನು ಅರಿತೆ,
ನಾನು ಏಕಾಂಗಿಯಾಗಿಯೇ ಬಂದೆ ಹಾಗು ಏಕಾಂಗಿಯಾಗಿಯೇ ಹೋಗಬೇಕು.

ನಾನು ಅರಿತೆ,
ಕೆಲವೇ ಕೆಲವರು ನಿನ್ನ ಜೊತೆ ಇರುತ್ತಾರೆ,
ನಿನ್ನ ಅವಶ್ಯಕತೆ ಇರುವಾಗ ಮಾತ್ರ,ಇಲ್ಲವಾದಲ್ಲಿ ಇಲ್ಲ.

ನಾನು ಅರಿತೆ,
ಯಾರಿಗಾಗಿ ನೀನು ತುಂಬಾ ಪರಿತಪಿಸಿ ಕಾಳಜಿವಹಿಸುವೆಯೋ
ಅವರೇ ನಿನಗೆ ತುಂಬಾ ನೋವು ಕೊಡುವರು ಹಾಗು ನಿನ್ನನ್ನು ಬೈಯುವರು.

ಅಂತಿಮವಾಗಿ
ನಾನು ಅರಿತೆ,
ಪ್ರೀತಿಸು ಕೆಲವರನ್ನು ಆದರೆ  ಮರೆಯದೆ
ಸ್ವಲ್ಪ ಪ್ರೀತಿ ನಿನಗಾಗಿ ಉಳಿಸಿಕೋ.


ಚಿತ್ರ ಕೃಪೆ: Facebook.

Friday, September 7, 2012

ತಪ್ಪು-ಒಪ್ಪು


ಎಂತಹ ದಿನಗಳನ್ನು ದೂಡಿದ್ದೇವೆ
ಎಲ್ಲಾ ಕಾಲವನ್ನೂ ಹಾಳುಮಾಡಿದ್ದೇವೆ
ಕೊರಗಿ ಕೊರಗಿ ಕಾಲ ಕಳೆಯುತ್ತಿದ್ದೇವೆ
ತಲೆಯಲ್ಲಿ ಬರೀ ಯೋಚನೆಗಳು
ಕಳೆದ ದಿನಗಳದ್ದು..
ಕಳೆದ ಸಿಹಿ-ಕಹಿ ದಿನಗಳದ್ದು..
ಮುಂದೆ ಪ್ರಶ್ನೆ ಇದೆ.
ಕೊರಗು ಇದೆ.
ನಾವು ಕೊರಗುತ್ತಲೇ ಇದ್ದೇವೆ
ಕೈಗೆ ಬರುವ ಹಣ ಕ್ಷಣದಲ್ಲೇ ಮಾಯವಾಗುದ ಕಂಡು ಕಂಗಾಲಾಗಿದ್ದೇವೆ.
ಏರುವ ಬೆಲೆಗಳ ಕಂಡು ಹೈರಾಣಾಗಿದ್ದೇವೆ
ನಮ್ಮನ್ನು ಆಳುವವರು ಮಾತ್ರ ಕೊಳ್ಳೆ ಹೊಡೆಯುತ್ತಲೇ ಇದ್ದಾರೆ
ನಮ್ಮ ಹಣವನ್ನೆಲ್ಲಾ ದೋಚುವುದ ಕಂಡೂ ಸುಮ್ಮನಿದ್ದೇವೆ
ಮೈಮೇಲೆ ಬೆಲೆಗಳ ರಾಶಿ-ರಾಶಿ ಹೇರಿಸಿಕೊಳ್ಳುತ್ತಿದ್ದೇವೆ
ನಾವು ಮಾತ್ರ ಬೆರಗಾಗಿದ್ದೇವೆ,ಚಕಿತರಾಗಿದ್ದೇವೆ ಏನೂ ಮಾಡಲಾಗದೆ
ನಮ್ಮ ಕೈಯಲ್ಲಿ ಏನಾಗುತ್ತೆ?
ಐದು ವರ್ಷಕ್ಕೊಮ್ಮೆ ಮತ್ತೆ ಮತ್ತೆ ಎಡವುತ್ತೇವೆ
ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಮೊರ್ಖರಾಗಿದ್ದೇವೆ
ದಾರಿಕಾಣದೆ ಬೇಸತ್ತಿದ್ದೇವೆ
ಹಿಡಿಶಾಪವನ್ನಲ್ಲದೆ ಇನ್ನು ಏನನ್ನೂ ಮಾಡಲಾಗದ ಅಸಹಾಯರಾಗಿದ್ದೇವೆ
ಗುಲಾಮರಾಗಿದ್ದೇವೆ.

Sunday, April 1, 2012

ಶ್ರೀರಾಮ ನವಮಿ


ನಿನ್ನನ್ನು ನೆನೆಯುತ್ತೇವೆ ದಿನವೂ ಮರೆಯದೆ
ಆದರೂ ನಿನ್ನ ಆದರ್ಶವ ಹತ್ತಿರ ಬರಲು ಬಿಡುವುದಿಲ್ಲ ಏಕೋ?
ನಿನ್ನ ಪ್ರೀತಿಸುವವರಿದ್ದಾರೆ;
ಪೂಜಿಸುವವರಿದ್ದಾರೆ;
ದ್ವೇಷಿಸುವವರಿದ್ದಾರೆ;
ತೆಗಳುವವರಿದ್ದಾರೆ;
ಆದರೂ ನೀನು ನಿತ್ಯ ಸತ್ಯ;
ನಿನ್ನ ಆದರ್ಶ ಸ್ತುತ್ಯಾರ್ಹ;
ವಸಂತ ಋತು;
ಚೈತ್ರ ಮಾಸ;
ಶುಕ್ಲ ಪಕ್ಷ;
ನವಮಿ ತಿಥಿ;
ನಿನ್ನ ತಪ್ಪದೇ ನೆನೆಯುತ್ತೇವೆ.
ಶತ-ಶತಮಾನಗಳು ಕಳೆದರೂ;
ನಾಗರೀಕತೆಗಳು ಮಣ್ಣೂಗೂಡಿದರೂ;
ಕೆಸರೆರಚುವವರು ಎರಚುತ್ತಲ್ಲೇ ಇದ್ದಾರೆ;
ಆರಾಧಿಸುವವರು ಆರಾಧಿಸುತ್ತಲೇ ಇದ್ದಾರೆ;
ಇಬ್ಬರಲ್ಲಿಯೂ ಪ್ರೀತಿ ಇದೆ;
ಅದಕ್ಕೆ ಅಂತ್ಯವೂ ಇಲ್ಲ, ಆದಿಯೂ ಇಲ್ಲ;
ಇದು ನಿರಂತರ, ಅನಂತ;
ನೀನು ನಿತ್ಯ ಸತ್ಯ;
ನಿನ್ನ ಆದರ್ಶ ಸ್ತುತ್ಯಾರ್ಹ;
ಬಿಸಿಲ ಬೇಗೆಯಲ್ಲಿ ನಿನ್ನನ್ನು ನೆನೆಯುತ್ತಾ;
ಪಾನಕ,ಕೋಸಂಬರಿಯ ಸವಿ ಸವಿಯುತ್ತಾ;
ನೆನೆಯುತ್ತೇವೆ,ಪ್ರಾರ್ಥಿಸುತ್ತೇವೆ;
ಈ ಜಗವು ರಾಮರಾಜ್ಯವಾಗಲಿ;

ನಿನ್ನನ್ನು ನೆನೆಯುತ್ತೇವೆ ದಿನವೂ ಮರೆಯದೆ
ಆದರೂ ನಿನ್ನ ಆದರ್ಶವ ಹತ್ತಿರ ಬರಲು ಬಿಡುವುದಿಲ್ಲ ಏಕೋ?


Thursday, March 22, 2012

ಶ್ರೀ ನಂದನ ನಿನಗೆ ಸ್ವಾಗತ


ಬಂತಿದೋ ಹೊಸ ವರುಷ
ತರುತಿದೆ ಹೊನಲ ಹರುಷ
ಬಾಳಬಂಡಿಯ ನೊಗವ ನೂಕುತ್ತಾ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಹೊಸ ವರುಷವೆಂದು ನಾವ್ ಕರೆಯುವೆವು
ಹರುಷ ಪಟ್ಟು ನೋವ್ ಮರೆಯುವೆವು
ಎಲ್ಲರೂ ಕೊಡಿಕೊಂಡು
ರೆಕ್ಕೆ-ಪುಕ್ಕ ಕಟ್ಟಿಕೊಂಡು ನಾವ್ ನಲಿಯುವ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಜಗಕ್ಕೆಲ್ಲಾ ಹಸುರ ಹೊದಿಕೆ
ಮನದ ಕೊಳೆಯ ತೊಳೆಯೆ
ನಮಗಂದೇ ಹೊಸಹಾದಿಗೆ ನಾಂಧಿ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ವಸಂತನು ಚೈತ್ರೆಯ ಜೊತೆಗೂಡಿ
ಮಾವು-ಬೇವು ಎಲ್ಲವನ್ನೂ ತಂದಿಹರು ಬಾಳಿಗೆ
ಕೋಗಿಲೆ ತಾನ್ ಹರುಷದಿ ಹಾಡಿ ನೋವ ಮರೆಸಿದೆ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಮಾವು-ಬೇವು;
ಬೇವು-ಬೆಲ್ಲ;
ನೋವು-ನಲಿವು
ಬಾಳಬಂಡಿಯ ಪಯಣದಲಿ
ಸಮಹಿತದಲಿ ಬಾಳಿಗೆ ಬರಲಿ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

ಸಮರಸ ಜೀವನದಲಿ ಇರಲಿ
ಏರು-ಪೇರು ಸಮತ್ವ ಸಾಧಿಸುವ ಬಲ ಮನಸಿಗೆ ಬರಲಿ
ಮನಸು-ಮನಸು ಸೇರಿ ನಲಿದು ಲೋಕವನೆ ’ನಂದನ’ ಮಾಡಲಿ
ಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತ

Thursday, March 8, 2012

ಹೆಣ್ಣು-ಶಕ್ತಿ;




ಹೆಣ್ಣು ತಾಯಿ;
ಹೆಣ್ಣು ಅಕ್ಕ;
ಹೆಣ್ಣು-ತಂಗಿ;
ಹೆಣ್ಣು- ಸಂಗಾತಿ;
ಹೆಣ್ಣು- ಗೆಳತಿ;
ಹೆಣ್ಣು-ದೇಶ;
ಹೆಣ್ಣು-ಸಂಸ್ಕೃತಿ;
ಹೆಣ್ಣು-ಭಾಷೆ;
ಹೆಣ್ಣು-ಭೂಮಿ;
ಹೆಣ್ಣು-ನದಿ;
ಹೆಣ್ಣು-ಕುಟುಂಬದ ಕಣ್ಣು;
ಹೆಣ್ಣು-ಶಕ್ತಿ;
ಹೆಣ್ಣು ಈ ಪ್ರಪಂಚ;

ಹೆಣ್ಣು ಏನಲ್ಲ?; 
ಹೆಣ್ಣು ಏನಿಲ್ಲ?;
ಮನದ ಶಕ್ತಿ;
ಹೆಣ್ಣಿಗೆ ಆತ್ಮೀಯ ನಮನಗಳು.

ಪ್ರೇರಣೆ:"A Women" by otteri selvakumar 

Wednesday, March 7, 2012

ದ್ವೇಷದ ಬಣ್ಣ ಯಾವುದು?


ಶಾಂತಿಯ ಸಂಕೇತಕ್ಕೆ ಬಣ್ಣದ ಗುರುತಿದೆ;
ತ್ಯಾಗದ ಸಂಕೇತಕ್ಕೂ ಬಣ್ಣವಿದೆ;
ಸಂವೃದ್ಧಿಗೂ ಬಣ್ಣವಿದೆ;
ಈ ಜಗದಲ್ಲಿ ಎಲ್ಲವೂ ಸಾಂಕೇತಿಕವೇ!
ಪ್ರಕೃತಿಯ ಭಾಷೆ- ಬಣ್ಣ
ಪ್ರೀತಿಯ ಬಣ್ಣ ಯಾವುದು?
ಪ್ರೀತಿಸಿದವರಿಗೆ ಗೊತ್ತು!
ಧರ್ಮಗಳ ಬಣ್ಣ ಯಾವುದು?
ಒಂದೊಂದು ಧರ್ಮದವರಿಗೆ ಒಂದೊಂದು ಬಣ್ಣ
ಕೇಸರಿ,ಬಿಳಿ,ಹಸಿರು......
ರಾಷ್ಟ್ರಗಳ ಭಾವುಟಗಳ ಬಣ್ಣ ವರ್ಣರಂಜಿತ
ಪಕ್ಷ-ಪಕ್ಷಗಳ ಬಣ್ಣ ಬೇರೆ ಬೇರೆ
ಇನ್ನು ರಾಜಕಾರಣಿಗಳ ಬಣ್ಣ ಯಾರಿಗೆ ತಾನೇ ಗೊತ್ತಿಲ್ಲ?
ಕಾಮನ ಬಿಲ್ಲಿನ ಬಣ್ಣ ಎಲ್ಲರಿಗೂ ಇಷ್ಟ
ಮನುಷ್ಯರ ಬಣ್ಣ ಹಲವಾರು
ಅದರಲ್ಲೂ ಮೇಲು-ಕೀಳು, ಭೇದ-ಭಾವ;
ಮನುಷ್ಯ-ಮನುಷ್ಯರಲ್ಲಿ ಹರಿಯುವ ರಕ್ತದ ಬಣ್ಣವೂ ತಿಳಿದಿದೆ
ಈ ಪ್ರಕೃತಿಯೇ ಬಣ್ಣಗಳ ಮಾಯಾಜಾಲ
ಎಲ್ಲರಿಗೂ ಬಣ್ಣಗಳೆಂದರೆ ಇಷ್ಟ
ಆದರೂ ಮನುಷ್ಯ-ಮನುಷ್ಯರ ನಡುವೆ ಇರುವ ದ್ವೇಷದ ಬಣ್ಣ ಯಾವುದು?
ಬಣ್ಣವಿಲ್ಲದ ಈ ದ್ವೇಷಯಾರಿಗೂ ಬೇಡ;
ಬಣ್ಣ-ಬಣ್ಣಗಳ ಈ ಬದುಕು ಸುಂದರ;
ನಮ್ಮ ಬದುಕು ಸುಂದರವಾಗಲಿ;
ಹೋಲಿ ಹಬ್ಬ ಎಲ್ಲರ ಜೀವನದಲ್ಲೂ ಹೊಸತನ ತುಂಬಲಿ.

ಮನದ ಪ್ರಶ್ನೆ




ಒಬ್ಬನೇ ಹೊರಟಿಹೆನು
ದೂರದ ಕಡೆಗೆ;
ಕಾಣದೇ ಹೊರಟಿಹೆನು
ಗುರಿಯ ಬಳಿಗೆ;

ಜೊತೆಗಿಲ್ಲ ಯಾರೂ!
ಸಂಗಾತಿ;
ತಂದೆ-ತಾಯಿ;
ಅಣ್ಣ-ತಮ್ಮ;
ಅಕ್ಕ-ತಂಗಿ;
ಬಂಧು-ಬಳಗ;
ಸ್ನೇಹಿತರು......

ಮನದಲ್ಲಿ ಎಲ್ಲರೂ ಇಹರು
ಎಲ್ಲರ ಹಾರೈಕೆಗಳೂ
ನಲ್ಮೆಯ ಹಿತವಚನಗಳೂ
ಎಲ್ಲವೂ ಜೊತೆಗಿರಲು
ಆದದ್ದಾಗಲಿ
ಆಗುವುದೆಲ್ಲಾ ಓಳ್ಳೆಯದೇ ಆಗಲಿದೆ
ಎಂಬ ಭಾವ ಮನದಲ್ಲಿ ಅಲೆ ಎದ್ದಿದೆ;
ಗುರಿಯ ತಲುಪುವೆ ಖಾತರಿಯಿದೆ;
ಬಳಿಕ ಏನು? ಪ್ರಶ್ನೆ ಮನದಲಿ ಕಾಡಿದೆ;

Monday, March 5, 2012

ಜೀವನಶಾಲೆ


ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ
ನಮ್ಮ ಬದುಕಿನ ಯಾತ್ರೆಗೆ;
ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ
ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ;

ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ;
ಮರೆಯಿತ್ತಿದ್ದೇವೆ ತತ್ವಜ್ಯಾನದ ಬೀಜ-ಮಂತ್ರ;
ಅರಿವನ್ನು ಸ್ವೀಕರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ
ಇಷ್ಟೇ ಜೀವನವೆಂಬ ಉದಾಸೀನ ಮನದಲ್ಲಿ ಮನೆಮಾಡದೆ;

ಜೀವನ ಬರಭೂರ ರಸಭರಿತ
ಅನುಭವಗಳ ಜೀವನ ಪಾಠಶಾಲೆ
ಅಳವಡಿಸಿಕೊಳ್ಳುವವನ ಜೀವನ ಪಾಕಶಾಲೆ
ಎತ್ತೆರೆತ್ತರಕ್ಕೆ ಬೆಳೆಯಬೇಕು ಸಾರ್ಥಕವಾಗಿಸಿಕೊಳ್ಳಬೇಕು ಜೀವನಶಾಲೆ;

Saturday, March 3, 2012

ಒಂದು ಸಂಜೆಯ ಟ್ರೈನು ಪ್ರಯಾಣ


ಸುಮ್ಮನೆ ಕುಳಿತಿದ್ದೇನೆ
ಕಿಟಕಿಯ ಹೊರ ಪ್ರಪಂಚವನ್ನು ದಿಟ್ಟಿಸುತ್ತಾ....
ಗಿರಿ-ಕಂದರ;
ಬೆಟ್ಟ-ಗುಡ್ಡ;
ಹಳ್ಳಿ-ಬಯಲು;
ಕೊಳ-ನದಿ, ಸೇತುವೆ;
ಒಂದಾದ ಮೇಲೊಂದರಂತೆ
ಕ್ಷಣದಲ್ಲಿ ಬದಲಾಗುವ ಪ್ರಕೃತಿಯ ಚಿತ್ರಗಳ ಸವಿಯುತ್ತಾ...
ಪ್ರಕೃತಿಯ ವೈಚಿತ್ರ್ಯಕ್ಕೆ ಮನಸೋಲುತ್ತಾ....

ಟೀ-ಚಾಯ್,ಟೀ-ಚಾಯ್......
ಧ್ಯಾನಕ್ಕೆ ಧಕ್ಕೆ ತರುವಂತಾ ಕೂಗು,
ಗೊರಕೆ ಸದ್ದು ಸಂಜೆ ಕತ್ತಲಿನಲ್ಲಿ ಸಿಹಿ ನಿದ್ದೆಯ ಮೊಹರು.
ಮಾತು-ಕಥೆ,ಧ್ಯಾನ,ನಿದ್ದೆ,ಮೌನ
ಎಲ್ಲವನ್ನೂ ಆಂತರ್ಯದೊಳರಗಿಸಿ ಮುನ್ನಡೆದಿದೆ ಈ ಬದುಕು;

ಒಂದು ನಿಲ್ದಾಣದಿಂದ ಮತ್ತೊಂದಕ್ಕೆ ನಿಲ್ಲದೇ ನಡೆದಿದೆ ಪಯಣ
ಸಂಜೆ, ಕತ್ತಲು-ಬೆಳಕಿನ ನಡುವೆ ನಡೆದಿದೆ ಘರ್ಷಣ
ಟ್ರೈನು ಮಾತ್ರ ಯಾವುದನ್ನೂ ಲಕ್ಕಿಸದೆ ಮುನ್ನಡೆಯುತ್ತಿದೆ ಘರ್ಜಿಸುತ್ತಾ ಘೋಷಣಾ....

Wednesday, February 29, 2012

ಕೋಟೆ ಕೊತ್ತಲಗಳೆಂದರೆ ನನಗಿಷ್ಟ!


ಕೋಟೆ ಕೊತ್ತಲಗಳೆಂದರೆ ನನಗಿಷ್ಟ!
ಮನಸು ತುಂಬಿಬರುವುದು;
ಮನಸನೆಳವುದು;
ಭಾವ ಉಕ್ಕುವುದು;
ಏಕೋ ಗೊತ್ತಿಲ್ಲ ನಾ ಕಾಣೆ?

ಹೋರಾಟಗಳ ಸಂಕೇತವೆಂದೋ?
ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?
ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?
ಕೋಟೆ-ಕೊತ್ತಲಗಳೆಂದರೆ
ಮನಸು ತುಂಬಿಬರುವುದು;
ಭಾವ ಉಕ್ಕುವುದು;

ಗತಕಾಲದ ನೆನಪೊಂದು
ಮನದ ಮುಂದೆ ಬಾರಲಾರದೆ
ಪ್ರೀತಿಯ ಭಾವವಾಗಿ ಹೊರಹೊಮ್ಮುತಿಹುದೋ ನಾ ಕಾಣೆ?
ಯಾವ ಯುದ್ಧದಲ್ಲೋ
ನನ್ನ ಭೂಮಿ,ನನ್ನ ಕೋಟೆ,
ನನ್ನವರಿಗಾಗಿ ಹೋರಾಡುತ್ತಾ ಮಡಿದನೇನೋ?
ಈ ಕೋಟೆ-ಕೊತ್ತಲಿನಲ್ಲಿ ನೆನಪು ಬಾರದು
ಭಾವ ಉಕ್ಕುವುದು;

ಕೋಟೆ,ರಾಜ್ಯ ಕೈತಪ್ಪಿಹೋಯಿತೋ?
ವೈರಿ ಪಡೆಯ ನಾಮಾವಶೇಷವಾಗಿ ಗೆಲುವು ನಮಗಾಯಿತೋ?
ಒಂದೂ ನೆನಪಿಲ್ಲ;
ತುಪಾಕಿ-ಪಿರಂಗಿಗಳ ಶಬ್ದ;
ಸಾವು-ನೋವುಗಳ ಚೀರಾಟ;
ರಣಕಹಳೆ ದುಂದುಬಿಯ ಮೊಳಗಾಟ;
ಮನದಲ್ಲಿ ಇನ್ನೂ ಹಸಿರಾಗಿದೆ
ಪೌರುಷವನೆ ತುಂಬುತಿಹುದು;
ಕಣ್ಣ ಮುಂದೆ ಯಾವಚಿತ್ರವೂ ಬಾರದೆ
ಮನದ ಪರದೆಯ ಹಿಂದೆ ಯಾವುದೋ ಶಕ್ತಿ ನರಳುವಂತೆ ಮಾಡುತ್ತಿದೆ
ಕೋಟೆ ಎಂದರೆ ಭಾವ ಉಕ್ಕುವುದು;

ಏನನ್ನೂ ಮಾತನಾಡದೆ ಸುಮ್ಮನೆ ನಿಂತಿರುವ ಕೋಟೆಯ ಗೋಡೆ,
ಮುರಿದು ಬಿದ್ದ ಪಿರಂಗಿ,ಬಾಗಿಲುಗಳೇ ಹೇಳಿ ನಾನಾರೆಂದು?
ಗುಂಡು,ಪಿರಂಗಿಗಳಿಗೆ ಎದೆಯ್ಯೊಡ್ಡಿದರೂ
ಅಚಲರಾಗಿ ಅಜೇಯರಾಗಿದ್ದೀರಿ;
ಗುಂಡೇಟುಗಳಿಂದ ಘಾಸಿಯಾದ ಜಾಗಗಳು;
ಪಿರಂಗಿಗಳ ಹೊಡೆತದಿಂದ ಮುರಿದು ಬಿದ್ದ
ಗೋಡೆ-ಚಾವಣಿಗಳು
ಎಲ್ಲವೂ ನೆನಪಿದೆ
ಆದರೆ ನಾನಾರೆಂದು ಮಾತ್ರ ಮರೆತಿದೆ;
ಕೋಟೆ ಎಂದರೆ ಭಾವ ಉಕ್ಕುವುದು;

Monday, February 27, 2012

ನಿನ್ನ ಮರೆತೆ ನಾನು...

ನಿನ್ನ ಮರೆತೆನೆಂದುಕೊಂಡಿದ್ದೆ ಎಷ್ಟು ವರುಷಗಳಾದವು ನಿನ್ನ ಮರೆತು; ಅದೆಷ್ಟು ಕಷ್ಟಪಟ್ಟೆ ಮರೆಯಲು; ಕನಸಿನಲ್ಲೂ; ದಿನಂಪ್ರತಿ ನಿನಗಾಗಿ ನರಳಿದೆ; ನನ್ನವರನ್ನೂ ನರಳಿಸಿದೆ; ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ: ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ; ಭ್ರಮೆಯಲ್ಲೇ ಜೀವನ ಸಾಗಿಸುತ್ತಿದ್ದೆ; ಕಾಲ ಎಲ್ಲ ಪಾಠವನ್ನೂ ಕಲಿಸಿತು; ಭ್ರಮೆಯ ಪರಧೆ ಕಳಚಿತು; ನೀನಿಲ್ಲದೇ ಎಲ್ಲವನ್ನೂ ಕಂಡೆ; ಅನುಭವಿಸಿದೆ; ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟೆ; ಇಂದು ಮನದಲ್ಲಿ ನಿರ್ಲಿಪ್ತತೆ ಮನೆ ಮಾಡಿದೆ; ನಿನ್ನ ಮರೆಯುವ ಅವಶ್ಯಕತೆ ಎನಗಿಲ್ಲ; ನಿನ್ನ ಮರೆತ ನಾನು, ಇಂದು ಮೊದಲಿಗಿಂತಲೂ ಶಕ್ತನಾಗಿದ್ದೇನೆ;

Sunday, February 26, 2012

ನಾವು ಚಿಕ್ಕವರು ನಿನ್ನ ಮುಂದೆ...


ಇಲ್ಲೊಬ್ಬನು ನಿಂತಿಹನು ಶತಶತಮಾನಗಳಿಂದ
ವೈರಾಗ್ಯದ ಮುಕುಟದಂತೆ;
ತಾಳ್ಮೆಯೇ ತಾನಾದಂತೆ:
ಎಲ್ಲವನ್ನೂ ಮೀರಿದಾತನವನು:
ಪ್ರೀತಿಯ ದಾಟಿದಾತನವನು:
ದ್ವೇಷವ ನುಂಗಿದಾತನವನು:
ರಾಜ್ಯ-ಕೋಶಗಳನ್ನೆಲ್ಲಾ ತೊರೆದಾತನವನು:
ವೈರಾಗ್ಯದ ಹಾದಿಹಿಡಿದು
ಸ್ವಾರ್ಥವನ್ನೆಲ್ಲಾ ತುಳಿದು
ದಿಕ್ಕುಗಳನ್ನೇ ಅಂಬರವಾಗಿಸಿ ಬೆತ್ತಲೆ ನಿಂತನವನು:

ನಾವು ನಾಚಿಕೆ ಪಡಬೇಕು
ಸ್ವಾರ್ಥವನ್ನೇ ವಸ್ತ್ರ-ಅಸ್ತ್ರವನ್ನಾಗಿಸಿಕೊಂಡವರು:
ಅವಮಾನಗಳನ್ನೂ ಲೆಕ್ಕಿಸದೇ
ನಮಗೆ-ನಮ್ಮವರಿಗೆ ದ್ರೋಹಬಗೆದುಕೊಳ್ಳುವವರು;
ನಮ್ಮೊಡನೆ ನೀನು ಎತ್ತರಕೆ ನಿಂತಿರುವೆ
ನಾವು ಕಣ್ಣಿದ್ದೂ ಕುರುಡರಾಗಿದ್ದೇವೆ;
ನಿನ್ನನ್ನು ಹೊಗಳಿಂದ ಪೂಜಿಸುವುದಷ್ಟಕ್ಕೇ ಸೀಮಿತಗೊಳಿಸಿದ್ದೇವೆ;
ನಿನ್ನ ಆದರ್ಶಗಳನ್ನು ಗಾಳಿಗೆ ತೂರಿದ್ದೇವೆ;
ನಿನ್ನ ಮುಂದೆ ನಾವು ಚಿಕ್ಕವರಾಗಿದ್ದೇವೆ ಪಾಠ ಕಲಿಯದೆ.

Wednesday, February 15, 2012

ಇಂದು ಪ್ರೀತಿಯ ದಿನವಂತೆ

ಇಂದು ಪ್ರೀತಿಯ ದಿನವಂತೆ
ನಿನಗಾಗಿ ಕಾಯುತ್ತಿದ್ದೆ;
ಎಂದಿನಂತೆ ಇಂದೂ ನಿನ್ನ ಬರುವಿಲ್ಲ
ವಿರಹಿ ನಾನು ನೀ ಬಲ್ಲೆ;

ನಿನ್ನ ನೆನಪು ಕಾಲ ಕಳೆಯಲು ಸಾಕು
ನಿನ್ನ ಪ್ರೀತಿ ಸದಾ ನನಗೆ ಬೇಕು;
ವಿರಹಿಯಾಗಿ ಕಾಲಕಳೆಯುತಿಹೆನು
ವಿರಹದಲ್ಲೇ ಏನೋ ಸುಖವೆನಿಸಿದೆ ನಿಜವೇ?;

ನೀ ಬರಲಿ ಎಂದು ಮನ ಬಯಸದು
ನೀ ಎಲ್ಲೇ ಇರು ಸುಖವಾಗಿರೆಂದು ಮನ ಬಯಸಿದೆ;
ಇಂದು ಪ್ರೀತಿಯ ದಿನವಂತೆ ಕೆಲವರಿಗೆ
ನನಗಾದರೂ ಪ್ರತಿದಿನವೂ ಪ್ರೀತಿಯ ದಿನವೇ ಸರಿ!

Thursday, February 2, 2012

ಸಂಕೇತ


ನೂರಾರು ಸಂಕೇತಗಳು,ಸಂಜ್ಞೆಗಳು
ಅರ್ಥವಾಗದ ಭಾಷೆಗಳು
ಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;
ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆ
ಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;
ನಮ್ಮ ಅರಿವೇ ಶ್ರೇಷ್ಠ;
ನಾವೇ ಶ್ರೇಷ್ಠ;
ಅಹಂಮಿನ ಸಾರೋಟದಲ್ಲಿ
ತಪ್ಪು ಭಾವನೆಗಳು ಮೇಳೈಸಿವೆ ದಿಗಂತದೆತ್ತರಕ್ಕೆ
ಹೊಸ ಹೊಸ ವಿಮರ್ಶೆಗಳ ದಾರಿ ತೆರೆದುಕೊಂಡಿದೆ;
ಸ್ಥಿತಿ-ಪರಿಸ್ಥಿತಿಗಳು ಬದಲಾಗುತ್ತಿದೆ ಗೋಚರಿಸದೇ...
ಮನಸ್ಸುಗಳೂ ಕೂಡ ಅರ್ಥವಾಗದ ಹಾಗೆ
ನಮಗೆ ಗೊತ್ತು ಬರೀ ಬಾಹ್ಯ ಬೇಕು-ಬೇಡಗಳು ಮಾತ್ರ
ಅಂತರಂಗದ ಬೇಕು-ಬೇಡಗಳು ಯಾರಿಗೆ ಗೊತ್ತು?
ಅದು ಯಾರಿಗೂ ಬೇಡ!;
ಪ್ರೀತಿ ಬೆತ್ತಲಾಗಿದೆ ಕತ್ತಲಲ್ಲಿ;
ದ್ವೇಷ ಮೇಳೈಸಿದೆ ಬೆಳಕು-ಕತ್ತಲೆನ್ನದೆ;
ಮನಸ್ಸು ಸಂಕುಚಿತಗೊಂಡಿದೆ ವ್ಯಾಮೋಹಗಳಿಂದ;
ನಿರ್ಲಿಪ್ತತೆ ಅರ್ಥಕಳೆದುಕೊಂಡಿದೆ;
ಪ್ರಕೃತಿ ತನ್ನ ಪಾಡಿಗೆ ತಾನು ಸಂಕೇತಗಳನ್ನು ಕೊಡುತ್ತಲೇ ಇದೆ;
ನಾವು ಮಾತ್ರ ಅರ್ಥಮಾಡಿಕೊಂದಿದ್ದೇವೆ ಬೇರೆಯದೇ ರೀತಿಯಲ್ಲಿ;
ಪ್ರಕೃತಿ ಸೊರಗುತ್ತಿದೆ ಸಂಕೇತ,ಸಂಜ್ಞೆಗಳನ್ನು ತೋರಿಸುತ್ತಾ.......

Tuesday, January 31, 2012

ಘರ್ಷಣೆ


ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;
ಸತ್ತ ಆದರ್ಶಗಳಿವೆ;
ಸಾಯುತ್ತಿರುವ ಆದರ್ಶಗಳಿವೆ;
ಸತ್ತ ಭಾಷೆಗಳಿವೆ;
ಸಾಯುತ್ತಿರುವ ಭಾಷೆಗಳಿವೆ;
ಸತ್ತವರಿದ್ದಾರೆ;
ಸಾಯುವವರಿದ್ದಾರೆ;
ಬದುಕ ಬಯಸುವವರ ಹುಡುಕಬೇಕಿದೆ;
ಪ್ರೀತಿಸುವವರಿದ್ದಾರೆ ಸತ್ತವರನ್ನು;
ಪ್ರೀತಿಸುವವರಿದ್ದಾರೆ ಸಾಯುತ್ತಿರುವವರನ್ನು;
ಬದುಕುವವರ ಪ್ರೀತಿಸುವವರು ಬೇಕಾಗಿದೆ;
ಹಾತೊರೆಯುವ ಮನಗಳು;
ಹಂಬಲಿಸುವ ಮನಗಳು;
ಸ್ಪಂದಿಸದ ಮನಗಳು;
ಎರಡೂ ಎಂದೂ ಸೇರದ ದಿಕ್ಕುಗಳಾಗಿವೆ;
ಅವರ ಕಂಡರೆ ಇವರಿಗಾಗದು
ಇವರ ಕಂಡರೆ ಅವರಿಗಾಗದು;
ಇಬ್ಬರ ನಡುವೆಯೊ ಘರ್ಷಣೆ ನಡೆಯುತ್ತಲೇ ಇರುತ್ತೆ ವಿಶ್ರಾಂತಿಯಿಲ್ಲದೆ;
ಅವರ ಕಾಲು ಇವರೆಳೆಯುತ್ತಾರೆ;
ಅವರ ಕಾಲು ಇವರೆಳೆಯುತ್ತಾರೆ;
ಇವನು ಬಿದ್ದರೆ ಅವನು ನಗುತ್ತಾನೆ;
ಅವನು ಬಿದ್ದರೆ ಇವನು ನಗುತ್ತಾನೆ;
ಯಾವುದಕ್ಕೂ ಕೊನೆಯೆಂಬುದಿಲ್ಲ;
ಇಬ್ಬರಿಗೂ ಕೆಲಸವಿಲ್ಲ;
ಸಮಯ ಕಳೆಯಲು ಬೇಕು ವಿಷಯ;
ವಿಷಯ ಮಂಥನ ಮಾತ್ರ ಯಾರಿಗೂ ಬೇಡ;
ಸ್ವಲ್ಪ ಸಿಹಿ;
ಸ್ವಲ್ಪ ಕಹಿ;
ಇಬ್ಬರೂ ಸೋಲುತ್ತಾರೆ;
ತತ್ವ-ಆದರ್ಶ ಸೊರಗುತ್ತೆ;
ಸಮಸ್ಯೆಗಳು ನಳನಳಿಸುತ್ತೆ;
ಪರಿಸ್ಥಿತಿ ಗಹಗಹಿಸಿ ನಗುತ್ತೆ;
ಕತ್ತಲು ಕವಿಯುತ್ತೆ;
ಹೊಸ ಬೆಳಕು ಹೊಮ್ಮುತ್ತದೆ;
ಅದೇ ಗೋಳು;
ಅದೇ ದೊಂಬರಾಟ;
ಪಾತ್ರಗಳು ಬದಲಾಗುತ್ತೆ;
ಘರ್ಷಣೆ ಮಾತ್ರ ನಿರಂತರ

Saturday, January 21, 2012

ನಾಗರೀಕ ಪ್ರಜ್ಞೆ




ದಿನವೂ ನಿಲ್ಲುತ್ತೇನೆ ರಸ್ತೆಯ ಬದಿ
ಟ್ರಾಫಿಕ್ ಸಿಗ್ನಲ್ ನಲ್ಲಿ;
ಅಲ್ಲಿ ನಡೆಯುವ ವಿದ್ಯಮಾನಗಳನ್ನು
ಗಮನಿಸುತ್ತೇನೆ;
ಮನದಲ್ಲಿ ನೂರು ಯೋಚನೆಗಳು
ಮನೆಮಾಡುತ್ತವೆ;
ಅನೇಕ ಪ್ರಶ್ನೆಗಳು ಮನದಲ್ಲಿ
ಶಾಂತಿಯ ಕದಡುತ್ತದೆ;
ಆದರೆ ನಾನು ಮಾತ್ರ ಮೊಕ ಪ್ರೇಕ್ಷಕ;
ರಸ್ತೆ ನಿಯಮ ಉಲ್ಲಂಘಿಸುವವರು;
ಎಲ್ಲೆಂದರಲ್ಲೇ ಉಗಿಯುವವರು;
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು;
ಬಹಿರ್ದೆಸೆಗೆ ಹೋಗುವವರು;
ಕಸವನ್ನು ರಸ್ತೆಯಲ್ಲೇ ಚಲ್ಲುವವರು;
ಎಲ್ಲವೂ ಅಯೋಮಯವಿಲ್ಲಿ;
ಶುಚಿಯ ಬಗ್ಗೆ ಎಲ್ಲರಿಗೂ ಗೊತ್ತು
ಶುಚಿಯ ಬಗ್ಗೆ ನೀವು ಅವರನ್ನೇ ಕೇಳಿ,
ಗಂಟೆಗಟ್ಟಲೆ ಮಾತನಾಡುವರು
ಆದರೆ ಅದನ್ನು ಪಾಲಿಸುವ ವಿಷಯದಲ್ಲಿ
ಎಲ್ಲರೂ ನಿಸ್ಸೀಮರೇ ಉಲ್ಲಂಘಿಸುವುದರಲ್ಲಿ;
ನಮಗೆ ನಾಗರೀಕ ಪ್ರಜ್ಞೆ ಬರುವುದಾದರೂ ಯಾವಾಗ?
ನೂರು ಬುದ್ಧರು;
ನೂರು ಗಾಂಧಿಗಳು;
ಹುಟ್ಟಿಬಂದರೂ ನಮ್ಮ ನಡುವಳಿಕೆ ತಿದ್ದಲು ಸಾಧ್ಯವೇ?
ಆ ದಿನ ಬರುವುದೇ?
ಆ ದಿನ ಕನಸಾಗದಿರಲಿ, ಕನಸಾಗದಿರಲಿ.

Wednesday, January 18, 2012

ಸತ್ಯದ ದಾರಿ


ಹತ್ತು- ಹಲವಾರು ಸತ್ಯದ ದಾರಿಗಳಿವೆ;
ಈ ಸತ್ಯ ಎಲ್ಲರಿಗೂ ಗೊತ್ತು;
ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆ
ಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;
ನಾನು ಸತ್ಯ;
ನೀನು ಸತ್ಯ;
ರಾಮ ಸತ್ಯ;
ರಹೀಮ ಸತ್ಯ;
ಕ್ರಿಸ್ತ ಸತ್ಯ;
ಬಸವಣ್ಣ,ಬುದ್ಧ,ಮಹಾವೀರನೂ ಸತ್ಯ;
ವಿಜ್ಯಾನ,ಅಧ್ಯಾತ್ಮ ,ಹತ್ತು ಹಲವು ಸತ್ಯಗಳು
ಅವರವರಿಗೆ ಗೋಚರಿಸಿದ್ದು,ಪ್ರೇರಣೆಯಾಗಿದ್ದು ಸತ್ಯವೇ
ಅಲ್ಲಗೆಳದವರು ಯಾರು?
ನನ್ನಲ್ಲಿ ನಿನ್ನನ್ನು ಕಾಣದವ;
ರಾಮನಲ್ಲಿ ರಹೀಮನ ಕಾಣದವ;
ರಹೀಮನಲ್ಲಿ ರಾಮ,ಕ್ರಿಸ್ತ,ಬುದ್ಧ,ಬಸವನ ಕಾಣದವ;
ಅಂತಹವನ ಆಲೋಚನೆಗಳು ಹೇಗೆ ಸತ್ಯವಾದಾವು?
ಎಲ್ಲಾ ತತ್ವಗಳಲ್ಲಿ,ಧರ್ಮಗಳಲ್ಲಿ ಮಾನವೀಯತೆ ಮರೆಯಾದರೆ ಅದು ಸತ್ಯ ಹೇಗಾದೀತು?
ಎಲ್ಲಾ ಸತ್ಯಗಳು ಸುಕ್ಕುಗಟ್ಟಿದ ದಾರದಂತೆ;
ಒಳ ಸುಳಿಗಳ ದಾರಿಯಂತೆ;
ಎಲ್ಲೋ ಒಂದು ಕಡೆ ಎಲ್ಲವೂ ಸೇರಲೇಬೇಕು;
ಅದನ್ನು ಹುಡುಕುವವನೇ ನಿಜವಾದ ಅನ್ವೇಷಕ;
ಆ ದಾರಿಯೇ ಎಲ್ಲರಿಗೂ ಬೇಕಾಗಿದೆ;
ಅದೇ ನಿಜವಾದ ಸತ್ಯದ ದಾರಿ.

Sunday, January 15, 2012

ಮುಖವಾಡ


ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತು
ಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;
ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;
ಬಾಳು ಸಾಗಲೇಬೇಕು ಭರವಸೆಯಿಂದ ನಾಳೆಯ ಕಡೆಗೆ; ಮುಖವಾಡಗಳು,ಪೊಳ್ಳು ಆದರ್ಶಗಳು ನಮಗಾಗಿಯೇ ಬಹಳಷ್ಟಿದೆ ಬದುಕಿಗೆ;

ಹತ್ತು ಮುಖಗಳು;
ಹತ್ತು ಮುಖವಾಡಗಳು;
ನೂರು ದಾರಿಗಳು;
ಎಲ್ಲವನ್ನೂ ಅರಿಯಬೇಕು,ನಮ್ಮ ದಾರಿಯನ್ನು ನಾವೇ ಆರಿಸಿಕೊಳ್ಳಬೇಕು;

ತಪ್ಪು-ಒಪ್ಪುಗಳು;
ಸತ್ಯ-ಅಸತ್ಯಗಳು;
ನೂರು ದಾರಿದೀಪಗಳು;
ಎಲ್ಲವೂ ತಿಳಿದಿದೆ, ಅದರೂ ತಪ್ಪುಹೆಜ್ಜೆಯಿಡುತ್ತೇವೆ ನಮ್ಮ ಗುರಿ ಮುಟ್ಟಲು;

ನಗಬೇಕು ಎದುರುಬಂದವರಿಗೆ
ಮನದೊಳಗೆ ಅಸಹ್ಯ ಕೋಪ-ದ್ವೇಷವಿದ್ದರೂ
ನಮ್ಮ ಬೇಳೆ ಬೇಯಬೇಕಲ್ಲ, ನಮಗೆ ನಾವೇ ಮುಖವಾಡಗಳನ್ನ ತೊಡಿಸಿಕೊಂಡು
ದಿನವೂ ಒಂದೊಂದು ಮುಖವಾಡ, ನಿಜವಾದ ಮುಖವಾವುದೆಂದು ನಮಗೇ ಮರೆತಿದೆ,ನಿಜ ಮುಖ ನಮಗೇ ಬೇಕಿಲ್ಲ!;

ಎಲ್ಲವೂ ನಮಗಾಗಿ
ಎಲ್ಲವೂ ಪೈಪೋಟಿಗಾಗಿ
ಎಲ್ಲರಿಗೂ ನಾವೇ ಶ್ರೇಷ್ಠವೆಂದು ತೋರಿಸುವುದಕ್ಕಾಗಿ
ನಮ್ಮ ಅಧಃಪತನ ನಮ್ಮಿಂದಲೇ ಎಂಬುದ ನಾವು ಮರೆತಿದ್ದೇವೆ, ಆದರೂ ಹೊಡೆದಾಡುತ್ತೇವೆ ಸಾಯಲು;

ಎಲ್ಲವನ್ನು ಕಂಡು ನಗುಬರುವುದು
ಕನ್ನಡಿಯ ಮುಂದೆ ನಮ್ಮದೇ ಮುಖವಾಡ ಕಳಚುವುದು
ಹೆದರಿಕೆ ಇದೆ, ನಮ್ಮತನವನ್ನು ನಾವು ಮಾರಾಟ ಮಾಡಿಬಿಟ್ಟಿದ್ದೇವೆಂದು
ಅದರೂ ಪೊಳ್ಳು ಆದರ್ಶಗಳನ್ನು ಬಿಡುವುದಿಲ್ಲ, ಅದರಲ್ಲೇ ನಮ್ಮ ಸುಖವಿದೆ ಎಂಬ ಪರದೆ ಕಳಚಿದರೂ ನಾವು ಬಿಡುವುದಿಲ್ಲ.
ಮುಖವಾಡವಿಲ್ಲದೆ ನಾವು ಬದುಕಲು ಸಾಧ್ಯವೇ?

Saturday, January 14, 2012

ಸಂಕ್ರಾಂತಿ


ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆ
ಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆ
ಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದು

ಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆ
ಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆ

ಹಬ್ಬಗಳು ಅರ್ಥ ಕಳೆದುಕೊಂಡರೂ
ಆಧುನಿಕತೆ ಆದರ್ಶವನ್ನು ಮರೆಮಾಚಿದರೂ
ಸಂಸ್ಕೃತಿ-ಪರಂಪರೆ ಮಾಸುತ್ತಿದ್ದರೂ
ಒಮ್ಮೆಯಾದರೂ ನಮ್ಮತನವ ನೆನೆಯುವ ದಿನವಾಗಲಿಯೆಂದು ಆಶಿಸುತ್ತೇವೆ

ಆಧುನಿಕತೆಯಲ್ಲಿ
ತಾಂತ್ರಿಕತೆಯಲ್ಲಿ
ನಗರದ ಆರ್ಭಟದಲ್ಲಿ
ನಮ್ಮ ತನವ ಮರೆತ ನಮಗೆ
ಹಬ್ಬಗಳು ಅರಿವನ್ನು ಮೊಡಿಸಲಿ
ಹಳ್ಳಿಯ ಜೀವನ ಎಂದೆಂದೂ ಹಸುರಾಗಿ ಆದರ್ಶವಾಗಿ ಕಾಣಲಿ
ಹಬ್ಬಗಳು ಸಾಮಾಜಿಕ ಸಾಮಾರಸ್ಯ ಮನಮನಗಳಲ್ಲಿ ಬಿತ್ತಲಿ
ಆಚರಣೆಗಳು ಅರ್ಥಪೂರ್ಣವಾಗಿರಲಿ ಎಂದು ಆಶಿಸುತ್ತೇವೆ.

Sunday, January 1, 2012

ಹೊಸವರುಷ-2012


ಹೊಸ ವರುಷವು ಬಂತೊಂದು
ಎಲ್ಲೆಡೆಯಲ್ಲೂ ಸಂತಸ ತುಂಬಿದೆಯಿಂದು

ವರುಷ ವರುಷವೂ ಸಂತಸ ಉಕ್ಕುತ್ತಿದೆ ಕೇಳಿ
ಗುಂಡು ಪಾರ್ಟಿ.ಕೂಗಾಟ,ಕಿರುಚಾಟ ಹೊಸತನವೇನಿದೆ ಹೇಳಿ?

ಹೊಟ್ಟೆ ತುಂಬಿದವರಿಗೆ ಖರ್ಚುಮಾಡಲು ನೂರು ದಾರಿಗಳಿವೆ ಇಲ್ಲಿ
ಹಸಿದವರಿಗೆ ಒಂದೇ ಒಂದು ದಾರಿಯೊ ಕಾಣಿಸದು ಸಂಪಾದನೆಗೆ ಇಲ್ಲಿ

ಹೊಸತೋ ಹಳತೋ ಹಸಿದವರಿಗೆ ಎಲ್ಲವೂ ಒಂದೇ
ಸಮಾನತೆಯ ಸರ್ವೋದಯ ಆಗುವುದೇ ಇಂದು?

ಶತ-ಶತಮಾನಗಳು ಕಳೆದರೂ
ನೂರಾರು ಬದಲಾವಣೆಗಳು ಕಂಡರೂ

ಚೈತನ್ಯವೆಂದೂ ಮಾಯವಾಗಿಲ್ಲ ಈ ಜಗದಲ್ಲಿ
ಇರದುದೆಡೆಗೆ ನಡೆವ ಛಲ ಮನುಜ ಬಿಟ್ಟಿಲ್ಲ ಇಲ್ಲಿ

ಏನೇ ಇರಲಿ
ಹೊಸವರುಷ ಬರಲಿ
ಎಲ್ಲರಿಗೂ ಹರುಷ ತರಲಿ

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...