ಬಾ ನಾವು ಆಟ ಆಡೋಣ
ಸಮುದ್ರದ ಮರಳಲ್ಲಿ ಚಿಕ್ಕಮಕ್ಕಳಂತೆ
ಆಡೋಣ ಬಾ,ಮೈ ಮರೆತು ಆಡೋಣ ಬಾ||
ಮರಳಲ್ಲಿ ನಮ್ಮದೇ ಚಿಕ್ಕ ಮನೆ ಕಟ್ಟೋಣ
ಸಮುದ್ರದ ಅಲೆಗಳು ಅದನ್ನು ಕೆಡವುವಂತೆ ಕಟ್ಟೋಣ
ಕಟ್ಟುತ್ತಾ,ಕೆಡವುತ್ತಾ, ನೋವು ನಲಿವುಗಳ ಪಡೆಯೋಣ||
ದಾರಿ ಹೋಕರು,ನಮ್ಮಂತೆ ಬಂದವರು
ಏಕಾಂಗಿಗಳು,ಜೋಡಿಹಕ್ಕಿಗಳು,ಪ್ರಾಯದವರು
ವಿರಹಿಗಳು,ಜೀವನ ಸಂಧ್ಯೆಯಲ್ಲಿರುವರು ಎಲ್ಲರೂ ಇಲ್ಲಿ ಅತಿಥಿಗಳೇ!||
ಜೀವನವೆಂಬ ಆಟದಲ್ಲಿ ಸೋತು-ಗೆದ್ದೆವು
ಮುಗ್ಧ ಮನಸ್ಸಿನಿಂದ ಎಲ್ಲವನ್ನೂ ಅನುಭವಿಸಿದೆವು ಚಿಕ್ಕ ಮಕ್ಕಳಂತೆ
ಶೋಧಿಸಿ,ಭೋದಿಸಿ,ಭೇದಿಸಿ ಎಲ್ಲವನ್ನೂ ಅರಿತೆವು, ಮನನದಾದದ್ದು ಸಾಸಿವೆಯಷ್ಟೇ!||
ಬಾ ಮರಳ ಮನೆಯ ಕಟ್ಟೋಣ
ಅಲೆಗೆ ಸಿಕ್ಕಿ ನೆಲಸಮವಾಗುವುದ ಕಂಡು ನಗೋಣ
ಮತ್ತೆ ಕಟ್ಟೋಣ, ಮತ್ತೆ ನಗೋಣ
ಸಾಗುತಿರಲಿ ಕೆಡವುತ ಕಟ್ಟುವುದು
ಕೊನೆಗೆ ಸತ್ಯವೇ ಉಳಿಯಲಿ
ಅಸತ್ಯವು ಅಳಿಯಲಿ ।।
No comments:
Post a Comment