ನೊಂದುಕೊಳ್ಳಬಲ್ಲೆ ಅಷ್ಟೆ..........


ಬೆಳಗಿನಿಂದ ಒದ್ದಾಡುತ್ತಿದ್ದೇನೆ
ಅನೇಕಾನೇಕ ಆಗಬೇಕಾದ ಕೆಲಸಗಳ ಪಟ್ಟಿಹಿಡಿದು;
ಪಟ್ಟಾಭಿಷೇಕ ಮೊದಲನೆಯದಾದರೆ,
ಕವಿತೆ,ಕಾವ್ಯ,ಅಭ್ಯಾಸಕ್ಕೆ ನೂರೆಂಟು ಪುಸ್ತಿಕೆಗಳು
ಎಲ್ಲವೂ ಕಾಯುತ್ತಿವೆ ಒಟ್ಟಾಗಿ ಮರದ ಕಪಾಟಿನಲ್ಲಿ;
ಅಮೂರ್ತ,ಅವಗಾಹನೆ,ಅವರೋಹಣ,ಆರೋಹಣ,
ಎಲ್ಲಾ ರೀತಿಯ ತಕತೈ,ತಕತೈ ಕುಣಿತಕ್ಕೆ ಸಿದ್ಧ ಉಡುಪು ನಾನೇ;
ರಂಗಸ್ಥಳ ಸಿದ್ಧವಾಗೇ ಇದೆ ಎದುರಲ್ಲೇ.
ಅಕಾಶವಾಣಿಯ ಸುಪ್ರಭಾತ,ಆಲಾಪಗಳಿಗೆ ಮನಸೋತಿತು ಮನ ಕ್ಷಣದಲ್ಲಿ
ಭಕ್ತಿ,ಪ್ರೀತಿ,ಹಳೆಯ,ನವೀನ ಹಾಡುಗಳು ಭಿತ್ತರಗೊಂಡಿವೆ ಒಂದಾದಮೇಲೊಂದರಂತೆ;
ಮನಸ್ಸು ಚೈತನ್ಯದಾಯಿ,
ದೇಹ ಆಯಾಸದಾಯಿ;
ಸೊರಗಿದೆ ನೂರೆಂಟು ರೋಗ-ರುಜಿನಗಳಿಂದ,
ನೆಗಡಿ,ಕೆಮ್ಮು,ಜ್ವರಗಳಿಂದ ಮೊದಲುಗೊಂಡು;
ಮನಸ್ಸು ಹಾರುವ ಹಕ್ಕಿಯಾದರೆ;
ಈ ತುಮುಲಗಳೆಲ್ಲಾ ಕಾಲಿಗೆ ಕಟ್ಟಿದ ಭಾರದ ಬೇನೆಗಳು
ಆಗಸಕ್ಕೆ ಹಾರುವ ಮಾತೆಲ್ಲಿ ಹೇಳಿ!
ಮಾತ್ರೆ,ಪಥ್ಯ,ವಿಶ್ರಾಂತಿ ಇವೇ ಆಗಿದೆ ಈ ಕ್ಷಣದ ಮಂತ್ರ;
ಅಂತೂ ಇಂತೂ ಮನಸ್ಸು ಮಾಡಿ ಸ್ವಲ್ಪ ಹೊಸಗಾಳಿ ಸೇವನೆಗೆ ಹೊರಬಿದ್ದೆ;
ಚಳಿಗಾಳಿ ಬಿಸಿಕಾಫಿಗೆ ಬೇಡಿಕೆ ಇಟ್ಟಿತು.
ಮಾಣಿಗೆ ಹೇಳಿ ಬಿಸಿಕಾಫಿಯ ಹೀರುವ ತಯಾರಿ ನಡೆಸಿದೆ;
ಮನಸ್ಸಿಗೆ ದುಃತ್ತನೆ ಘಾಸಿ,ಮನ ಮರುಗಿತು,
ಇಳಿಯ ವಯಸ್ಸಿನ ಆಕೆ,ಮಕ್ಕಳ,ಮೊಮ್ಮಕ್ಕಳ ಜೊತೆ ಆರಾಮವಾಗಿರಬೇಕಾದಾಕೆ,
ಹೋಟಲಿನಲ್ಲಿ ತಟ್ಟೆ-ಲೋಟ,ಕಸ-ಮುಸುರೆ ತೊಳೆಯುವದ ಕಂಡು ಹಿಂಸೆಯಾಯಿತು;
ಕಾಫಿ ರುಚಿಸಲಿಲ್ಲ,ಅಸಹಾಯಕ ಪರಿಸ್ಥಿತಿ ನನ್ನದೂ,ಆಕೆಯದೂ
ನೊಂದುಕೊಳ್ಳಬಲ್ಲೆ ಅಷ್ಟೆ.....................................................

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...