ನಾವು ಚಿಕ್ಕವರು ನಿನ್ನ ಮುಂದೆ...


ಇಲ್ಲೊಬ್ಬನು ನಿಂತಿಹನು ಶತಶತಮಾನಗಳಿಂದ
ವೈರಾಗ್ಯದ ಮುಕುಟದಂತೆ;
ತಾಳ್ಮೆಯೇ ತಾನಾದಂತೆ:
ಎಲ್ಲವನ್ನೂ ಮೀರಿದಾತನವನು:
ಪ್ರೀತಿಯ ದಾಟಿದಾತನವನು:
ದ್ವೇಷವ ನುಂಗಿದಾತನವನು:
ರಾಜ್ಯ-ಕೋಶಗಳನ್ನೆಲ್ಲಾ ತೊರೆದಾತನವನು:
ವೈರಾಗ್ಯದ ಹಾದಿಹಿಡಿದು
ಸ್ವಾರ್ಥವನ್ನೆಲ್ಲಾ ತುಳಿದು
ದಿಕ್ಕುಗಳನ್ನೇ ಅಂಬರವಾಗಿಸಿ ಬೆತ್ತಲೆ ನಿಂತನವನು:

ನಾವು ನಾಚಿಕೆ ಪಡಬೇಕು
ಸ್ವಾರ್ಥವನ್ನೇ ವಸ್ತ್ರ-ಅಸ್ತ್ರವನ್ನಾಗಿಸಿಕೊಂಡವರು:
ಅವಮಾನಗಳನ್ನೂ ಲೆಕ್ಕಿಸದೇ
ನಮಗೆ-ನಮ್ಮವರಿಗೆ ದ್ರೋಹಬಗೆದುಕೊಳ್ಳುವವರು;
ನಮ್ಮೊಡನೆ ನೀನು ಎತ್ತರಕೆ ನಿಂತಿರುವೆ
ನಾವು ಕಣ್ಣಿದ್ದೂ ಕುರುಡರಾಗಿದ್ದೇವೆ;
ನಿನ್ನನ್ನು ಹೊಗಳಿಂದ ಪೂಜಿಸುವುದಷ್ಟಕ್ಕೇ ಸೀಮಿತಗೊಳಿಸಿದ್ದೇವೆ;
ನಿನ್ನ ಆದರ್ಶಗಳನ್ನು ಗಾಳಿಗೆ ತೂರಿದ್ದೇವೆ;
ನಿನ್ನ ಮುಂದೆ ನಾವು ಚಿಕ್ಕವರಾಗಿದ್ದೇವೆ ಪಾಠ ಕಲಿಯದೆ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...