Saturday, July 25, 2026

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ,

ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ,

ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು,

ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು.

 

ನಾನು ಇಲ್ಲಿಗೆ ಹೇಗೆ ಬಂದೆ?

ಗಳಿಸಿದ್ದು ಇಷ್ಟೊಂದು ಭ್ರಮೆ,

ಕಳೆದುಕೊಂಡದ್ದು ನೂರರಷ್ಟು,

ಬದುಕು ಮೂರು ದಿನದ ಸಂತೆ.

 

ಆದರೂ ಮನದಲ್ಲಿ ಶೂನ್ಯಭಾವ,

ಸಂತೋಷವಿಲ್ಲ, ಶಾಂತಿಯಿಲ್ಲ,

ಏಕಾಗಿ ಜೀವನ ಪ್ರಶ್ನೆ ಕಾಡಿದೆ,

ಏಕಾಗಿ ಇಲ್ಲಿಗೆ ನಾ ಬಂದೆ, ಉತ್ತರವಿಲ್ಲ.

 

ನಿನ್ನೆ, ಇಂದು, ನಾಳೆ

ಮೂರು ದಿನಗಳಲ್ಲಿ ಕಳೆದು ಹೋದೆವು,

ಮುಂದೆ ಏನು ಪ್ರಶ್ನೆಗೆ ಉತ್ತರ ಹುಡುಕುತ್ತಾ,

ಇಲ್ಲಿ ಎಲ್ಲರೂ ನಮ್ಮಂತವರೇ, ದಾರಿ ಕಾಣದವರು.


Saturday, July 18, 2026

ವಿರಾಮ

ರಾತ್ರಿ ಬೆಳಗು ಕಾಣದ ದರ್ಶನಗಳ ಅನಾವರಣ,

ಸಂತೋಷ ಬಿಟ್ಟು ಭ್ರಮೆಯ ಹಿಂದೆ ನಾವು,

ಕನಸ ಕಾಣುತ್ತಲೇ ಜೀವನ ಸವೆಸಿದವರು,

ವಾಸ್ತವವ ಅರಿಯದೆ ಕಣ್ಣೀರಿಡುವವರು.

 

ಅಲ್ಲೂ ಇಲ್ಲದೆ, ಇಲ್ಲೂ ಇಲ್ಲದೆ,

ನಡುವೆ ನರಳುವವರು ನಾವು,

ಜೀವನ, ಭ್ರಮೆಯ ನಡುವೆ ನಾವು,

ಆಯ್ಕೆ ಗೊಂದಲ ನರಕ ಯಾತನೆ.

 

ಎಲ್ಲವ ಬಿಟ್ಟು ನಡೆಯಲು ವ್ಯಾಮೋಹ,

ಎಲ್ಲವ ಇಟ್ಟು ನಡೆಯಲು ಸ್ವಾರ್ಥ,

ಎರಡೂ ಇರದೆ  ಬರಿಗೈ ದಾಸರು,

 ಸಾವು, ಬದುಕಿನ ನಡುವೆ ವಿರಾಮ.

ಹುಡುಕಾಟ

ನನ್ನ ನಾನು ಹುಡುಕುತ್ತಿದ್ದೇನೆ,

ನನ್ನೊಳಗೆ, ಹೊರಗೆ,

ನಾನು ಯಾರು? ಏಕಿಲ್ಲಿ?

ಭ್ರಮೆಯ ಪ್ರಪಂಚದಲ್ಲಿ ಏಕಾಂಗಿ!.


ಉದ್ದೇಶಗಳ ಮರೆತಿರುವೆ,

ದಾರಿ ಕಾಣದೆ ಅಲೆಯುತ್ತಿರುವೆ,

ನೀರ ಸುಳಿಯಲ್ಲಿ ಸಿಲುಕಿರುವೆ,

ಬಂದು ಹೋಗುವ ಆಟದಲ್ಲಿ.

 

ಎಷ್ಟು ಯುಗಗಳೋ ತಿಳಿಯೆ?,

ಜ್ಞಾನವಿಲ್ಲದೆ ಅಲೆದಿರುವೆ,

ಯಾರ ಬರುವಿಕೆಗೆ ಕಾಯುತಿಹೆ?

ಬಲ್ಲವರಿಲ್ಲ ನಾ ಏಕಾಂಗಿ.

 

ಒಳಗೊಂದು ಆಶಾಕಿರಣ,

ಜ್ಞಾನೋದಯವಾಗುವುದೆಂದು,

ಎಲ್ಲಿ?, ಯಾವಾಗ?

ಸಮಯವೇ ಉತ್ತರ ಕೊಡಬೇಕಿದೆ.

Sunday, July 12, 2026

🎶 ಎಸ್. ಜಾನಕಿ - ಭಾವಗಳ ಕೋಗಿಲೆ

ಬೆಳಗಿನ ಜಾವ ಮೌನದಿ ನಿಮ್ಮಯ ಹಾಡು ಕಣ್ಣ ತೆರೆವುದು,

ಕಾಲಾತೀತ  ಪರಿಮಳ ಹೊತ್ತ ಸೌಮ್ಯ ತಂಗಾಳಿಯಂತೆ.

ಮಲ್ಲಿಗೆಯ ಸುಗಂಧ, ಮನೋಹರ, ಶುದ್ಧ,ಕೋಮಲ,

ಆತ್ಮಗಾನ ಲಹರಿ ಹರಿಗರ್ಪಿತವದು  ಹೃದಯ ಶರಣಾಗುವುದು.


ನಿಮ್ಮ ಪ್ರೀತಿಯ ಹಾಡು, ನೋವಿನ ಹಾಡು,

ಮಧುರ ಗಾನ ನೋವ ತಣಿಸುವ ಅಮೃತಗಾನ.

ಪ್ರತಿ ಆಲಾಪನೆ  ಹೃದಯದ ಪ್ರಾರ್ಥನೆ, 

ಮನಕೆ ನೆಮ್ಮದಿ ಗಾನ ಸರಸತಿಯ ಪಿಸುಮಾತು. 


ನಿಮ್ಮ ಧ್ವನಿ ಕೋಗಿಲೆಯ ಗಾನದಂತೆ,

ಕೃಷ್ಣನ ಮಧುರ ಮುರಳಿ ನಾದದಂತೆ. 

ನಿಮ್ಮ ಹಾಡ ಕೇಳಿ ಬೆಳೆದೆವು, ಕನಸ ಕಂಡೆವು,

ನಿಮ್ಮಂತೆ ಹಾಡ ಬಲ್ಲವರು ಯಾರಿಹರು?. 


ಓ ಜಾನಕಿ, ಕೋಗಿಲೆ ಕಂಠದ ಗಾಯಕಿ, 

ನಿಮ್ಮ ಕಂಠದ ಸಂಗೀತ ಕಿವಿಯಲಿ ನಲಿಯಲಿ. 

ಮನದಲಿ ನಿಮ್ಮ ಮಧುರ ಗಾನ ಅಮರವಾಗಲಿ, 

ನಾವು ಧನ್ಯ, ನೀವು ಅಮರ, ನಿಮ್ಮ ಹಾಡು ಅಮರ. 

Friday, July 10, 2026

ಜೀವನ ನಾಟಕ

ಬೆಳ್ಳಂ ಬೆಳ್ಳಿಗೆ ಕಣ್ಣು ತೆರೆವುದು,

ಹಳ್ಳಿಗಳಿಂದ ಬರುವ ತರಕಾರಿ, 

ಹಣ್ಣು, ಹೂವು ಮಾರಾಟದ ಮಳಿಗೆ,

ಜೀವನದ ಹಾದಿಯ ಪಯಣ ನಿರಂತರ.


ಕೆಲವರಿಗೆ ದಿನದ ಹೊಟ್ಟೆಪಾಡು,

ಮತ್ತೆ ಕೆಲವರಿಗೆ ಹಣ ಮಾಡುವ ದಂಧೆ,

ಮತ್ತೆ ಕೆಲವರಿಗೆ ಜೀವನ ಪ್ರೀತಿ,

ಮತ್ತೆ ಕೆಲವರಿಗೆ ಮೋಸ ಮಾಡುವ ಚಾಕರಿ.


ನಗರದ ಅಂಗಡಿ ಬೀದಿಗಳು,

ಬೀದಿ ದೀಪಗಳು, ಕಟ್ಟಡಗಳು,

ದಿನವೂ ನಾಟಕ ನೋಡಿ ನೋಡಿ,

ನಗುತ್ತಿವೆ ಮಾನವನ ಪಾಡು ಕಂಡು.  


ಕೆಲವು ಮುಖಗಳಲ್ಲಿ ರಾಕ್ಷಸತನ,

ಕೆಲವು ಮುಖಗಳು ಹಸುಳೆಗಳು,

ಮತ್ತೆ ಕೆಲವು ಕಾಡು ಮೃಗಗಳು,

ಮತ್ತೆ ಕೆಲವು ನರಿಗಳೇ ಸರಿ. 

Sunday, July 5, 2026

ಮಳೆಯೇ! ಓ ಮಳೆಯೇ!

 ಮಳೆಯೇ! ಮಳೆಯೇ!

ಎಲ್ಲಿ ಹೋದೆ ನಾ ನಿನ್ನ ಅರಸುತಿಹೆ,

ಬಂದೆ ಎಂದು ಓಡಿ ಬರುವೆ,

ಮನೆಯ ಆವರಣ 'ಹನಿ'ಸದೆ ಓಡುವೆ,

ಮನೆಯ ಬಾಗಿಲ ತೆರೆದು ಕಾದಿಹೆ,

ಗಾಳಿ ಗೆಳೆಯನ ಕೂಡಿ ಮಾಯವಾಗುವೆ,

ಏಕಿನಂತ ಸಿಟ್ಟು, ಸೊಡರು,

ನಿನ್ನ 'ಗುಟುರು' ಕೇಳಿ ವರ್ಷವಾಗಿದೆ,

ಬರುವೆ ಎಂಬ ಭರವಸೆ ಹಸಿರಾಗಿದೆ,

ಬಾ ಗೆಳೆಯನೇ ಬಾ, ತಂಪಾಗಿಸು ಬಾ,

ಭೂ ತಾಯಿಯ ಮಡಿಲ ಹಸಿರಾಗಿಸು ಬಾ.


ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...