ಹೊಸ ದಿನದರ್ಶಿಕೆ

ಬಂದದ್ದೆಲ್ಲಾ ಬರಲಿ ಜೀವನ ಪ್ರೀತಿ ಉಳಿಯಲಿ
ಹಳೆ ದಿನದರ್ಶಿಕೆ ನಿನಗೆ ವಂದನೆಗಳು
ಪ್ರತಿದಿನದ ಉರುಳುವಿಕೆಯಲ್ಲಿ ನಿನ್ನ ಪಾತ್ರವೂ ಇದೆ
ಸದಾ ನಗುತ್ತಲೇ ತಾರೀಖುಗಳ ತೋರಿದವ ನೀನು
ನಮ್ಮ ಮನೋವಿಕಾರಗಳಿಗೆ ಸಾಕ್ಷಿ ನೀನೇ ....
ನಮ್ಮ ಕೋಪಗಳಿಗೆ ಮೊದಲು ಬಲಿಯಾದವ ನೀನು
ದುಃಖವೆನಗೆ ಇಂದೋ ಇಲ್ಲ ನಾಳೆಯೋ ನಿನ್ನ ಬದಲಿಸಬೇಕಿದೆ
ಒಮ್ಮೆ ನಕ್ಕು ಬಿಡು, ನಮ್ಮ ಹುಚ್ಚಾಟಗಳಿಗೆ
ನಿನ್ನ ಗೆಳೆಯನ ಆಹ್ವಾನಿಸುವ ಸುಸಮಯವಿದು
ಹೊಸ ವರುಷದ ದಿನದರ್ಶಿಕೆ ನಿನಗೆ ಸ್ವಾಗತ

ಹೊಸ ಆಕಾಂಕ್ಷೆ

ಸರದಿಯಂತೆ ದಿನ, ಮಾಸ,ತಿಂಗಳುಗಳು ಜಾರಿದವು
ವರುಷದ ಕೊನೆಯ ದಿನಕ್ಕೆ ಬಂದು ನಿಂತಿಹೆವು
ನೋವೋ ನಲಿವೋ ವಿಷಾದದ ನಗೆ ಬೀರುತ್ತಾ
ಹೊಸ ವರುಷವ ಸ್ವಾಗತಿಸಲು ಸಿದ್ಧವಾಗಿಹೆವು||

ಹೊಸ ಹೊಸ ಆಕಾಂಕ್ಷೆಗಳೊಂದಿಗೆ
ಹೊಸ ಹೊಸ ಸಂಕಲ್ಪದೊಂದಿಗೆ ಕಾಯುತಿಹೆವು
ಹಳೇ ದೇಹ, ಹಳೇ ಮನಸ್ಸು ,ಹೊಸಹುರುಪು
ಭಯ,ಕುತೂಹಲ,ನೋವುಗಳು ಧೈರ್ಯ ತುಂಬಿಹವು||

ಗೆಳತೀ .....

ಹಾಗೆ ನೋಡಬೇಡ ಗೆಳತೀ
ಎದೆಯಲ್ಲಿ ಹೃದಯ ಬಡಿತ ಹೆಚ್ಚಾಗುವುದು
ನಿನ್ನ ತುಟಿಯಂಚಿನ ನಗುವು ಈ ಬಡಪಾಯಿಯ ಹೃದಯವ ಇರಿಯುವುದು
ಹೇಳು ಎಷ್ಟುಬಾರಿ ಕೊಲ್ಲುವೇ !
ಈ ಮನಸು,ಹೃದಯ ನಿನ್ನ ಕಣ್ಣಸನ್ನೆಗೆ ವಶವಾಗಿದೆ
ಹೃದಯ ಬಯಸಿದೆ ನಿನ್ನ ಸನಿಹ
ನಿನ್ನ ಮಾತುಗಳ ಕೇಳಬೇಕೆನಿಸಿದೆ ಈ ನನ್ನ ಕಿವಿಗಳಿಗೆ
ಹತ್ತಿರ ಬಂದು ಮಾತನಾಡು
ಸುಮ್ಮನೆ ವಾರೆನೋಟ ಬೀರಿ ನಕ್ಕು ಕೊಲ್ಲಬೇಡ
ನಿನ್ನ ನಗುವು, ಕಿಲಕಿಲ ಮಾತು
ನನ್ನನ್ನೆಲ್ಲಿಗೂ ಸೆಳೆದಿದೆ,ನಿನ್ನ ರೂಪ ಸತಾಯಿಸಿದೆ
ಕಣ್ಣ ತೆರೆದರೂ ನೀನೇ ...
ಕಣ್ಣ ಮುಚ್ಚಿದರೂ ನೀನೇ ,ಬೇಡ ಗೆಳತೀ ಹಿಂಸಿಸಬೇಡ
ದೂರ ಹೋಗಬೇಡ,ತಲ್ಲಣ ಮನದಲ್ಲಿ
ಬಂದುಬಿಡು ಸಪ್ತಪದಿ ತುಳಿದು ಬಾಳ ಪಯಣದಲ್ಲಿ ಒಂದಾಗೋಣ ।।

ಬೆಳಕ ತವಕ

ಒಳಗೆ ನನ್ನೊಳಗೆ ಇಳಿಯುತಿಹೆನು
ಕತ್ತಲ ಪಾತಾಳದೊಳಗಡೆ ಬೆಳಕನರಸಿ
ಕತ್ತಲೆಂದಮೇಲೆ ಬೀಳುಗಳೇ ಹೆಚ್ಚು
ನಿಯಂತ್ರಣವಿಲ್ಲದ ಬೀಳುಗಳಿಗೆಲ್ಲೆ ಎಲ್ಲಿದೆ ?
ಮನದೊಳಗೆ ತವಕವೊಂದೇ ಬೆಳಕು,ಬೆಳಕು
ಜರ್ಜರಿತವಾಗಿಹ ಮನ ಸಾವಧಾನದಿ ಶಾಂತಿ ಶಾಂತಿ ಎಂದುಸುರಿದೆ ;
ಸೋಲುಗಳ ಸರಮಾಲೆಯನ್ನೇ ಹೊದ್ದವನು
ಸೋಲೆಂದರೆ ಮನದಲಿ ಭಯವುಳಿದಿಲ್ಲೆನಗೆ
ಸೋಲೆಮೆಟ್ಟಿಲಾಗಿಸಿ ಎದ್ದು ನಡೆವ ಶಕ್ತಿ-ಯುಕ್ತಿಯಿಹುದು
ಸತತ ಪ್ರಯತ್ನದ ಫಲವದು ನೋವನುಂಗಿ
ಇಂದೋ -ನಾಳೆಯೋ ಗುರಿ ತಲುಪುವೆ ಆ ಬೆಳಕಕಾಣುವ ತವಕವಿದೆ ಮನದಲ್ಲಿ;

ಕಾಣದ ಸುಖವ ಅರಸುತ್ತಾ....

ಎಲ್ಲಿಂದಲೋ ಬಂದವರು ನಾವು
ಕಾದಿಹೆವು ನಾವು ನಮ್ಮ ದಾರಿ ಸವೆಸಲು
ಗಂಟು-ಮೂಟೆ ಹೊತ್ತೇ ಹೊರೆಟಿರುವೆವು
ಜೀವನದ ಮುಂಜಾವಿನಲ್ಲಿ ನಾನು-ಅವಳು;

ಹರೆಯದ ಕರೆಗೆ;
ಹಿರಿಯಜೀವಗಳ ಒತ್ತಾಸೆಗೆ ಒಂದಾದವರು;
ಸುಖ ದುಃಖ ಜೊತೆಜೊತೆಯಾಗಿ ಅನುಭವಿಸಿದವರು
ಹೊಂಗನಸುಗಳ ಬೆನ್ನೇರಿ ಹೊರಟವರು ನಾವು
ಆಗಿದ್ದ ಚೈತನ್ಯ ದೇಹದಲ್ಲಿ ಇಬ್ಬರಿಗೂ ಈಗಿಲ್ಲ;
ಜೀವನದ ಸಂಜೆಯಲ್ಲಿ ನಾವಿಬ್ಬರು ಕಾಯುತಿಹೆವು
ಮುಂದಿನ ದಾರಿ ಅದಾವುದೋ?
ರೈಲು ನಿಂತೇ ಯಿದೆ ,ಕೈಯಲ್ಲಿ ಟಿಕೇಟಿದೆ;
ಪಯಣ ಸಾಗದೆ ನಿಂತಿದೆ;
ನಾನು-ಅವಳು ಬಿಟ್ಟರೆ ಮತ್ಯಾರು ಅಲ್ಲಿಲ್ಲ
ಎಲ್ಲಿಂದಲೋ ಬಂದವರು
ಎತ್ತಲೋ ಹೊರಟವರು
ಕಾಣದ ಸುಖವ ಅರಸುತ್ತಾ....

ನಡೆಮುಂದೆ

ದೂರ ದೂರ ನಡೆದು ಬಂದು ವರುಷಗಳಾದವು
ಹಿಂತಿರುಗಿ ನೋಡಲು ಸವೆಸಿಹ ದಾರಿ ಅನನ್ಯವೇ!
ತೂಗು ಹಾಕಿದರೆ ಗಳಿಕೆಗಿಂತ ಕಳೆದುಕೊಂಡುದುದೇ ಹೆಚ್ಚು
ನಡೆದ ದಾರಿ ಸುಗಮವೇನು?ಪಟ್ಟ ಕಷ್ಟ ನಷ್ಟಗಳೆಷ್ಟು?
ನನ್ನವರೆಂದುಕೊಂಡವರೆಲ್ಲ ಬಹದೂರ ನಡೆದಿಹರು
ನಾನು ನಿಂತಲ್ಲಿಯೇ ನಿಂತ ಅನುಭವ,ಅಪಮಾನ
ನಿಷ್ಠೆಯಿಂ ಕೆಲಸಮಾಡುವವರಿಗಿದು ಕಾಲವಲ್ಲ
ಕುಹಕ ಕಪಟನಾಟಕ ಮಾಡುವವರಿಗಿದು ಸಕಾಲ
ನಮ್ಮಂತಹವರು ನಿಷ್ಠೆಯಿಂ ಮಾಡುವುದ ಇಷ್ಟಪಟ್ಟವರಿಲ್ಲ
ಎಲ್ಲವಂ ಬಲ್ಲಾತ ಕುಹಕ ನಗೆಬೀರಿ ಗೊತ್ತಿಲ್ಲದವನಂತೆ ನಿದ್ರಿಸಿಹನು
ಸಹನೆ,ತಾಳ್ಮೆ ನನಗಿಹುದೇನೆಂದು ಪರೀಕ್ಷಿಸುತಿಹನು
ಅಂಜದೆ,ಅಳುಕದೆ ಆವಫಲಕ್ಕೂ ಆಸೆಪಡದೆ ಮಾಡು ಕೆಲಸವಮ್
ನಿನ್ನ ಕರ್ತವ್ಯವ ಮಾಡು ಪಾಲಿಗೆ ಬಂದದ್ದು ಪಂಚಾಮೃತ
ಧ್ಯಾನಿಸು ಸಮಾಧಾನದಿಂ ನಡೆಯದುವೆ ಏಳಿಗೆಗೆ ದಾರಿ
ಮುಂದೆ ಕಾದಿಹುದು ಕಾಣದ ಭಾಗ್ಯದ ಹಾದಿ
ಮುಂದೆ ನಡೆ ಸಮಾಧಾನದಿ ಬೇಡ ಅವಿವೇಕ
ನಡೆ ಮುಂದೆ ನಡೆಮುಂದೆ ಕಾಲವಂ ನಂಬು
ನಿನ್ನ ಕೈಬಿಡದು ನಿಷ್ಠೆಯಿಂ ಮೌನದಿ ಸಾಧಿಸು ।।

ಚೆನ್ನಕೇಶವ

ಶೈವರು ಶಿವನೆನ್ನುವರು
ವೇದಾಂತಿಗಳು ಪರಬ್ರಹ್ಮನೆನ್ನುವರು
ಬೌದ್ಧರು ಬುದ್ಧನೆನ್ನುವರು
ನೈಯಾಯಿಕರು ಕರ್ತನೆನ್ನುವರು
ಜೈನರು ಜಿನನೆನ್ನುವರು
ಕಾಯಕ ಮಾಡುವವರಿಗದೆ ದೈವವೋ
ಮನಕೊಪ್ಪಿದ ಕೆಲಸವ ಆನಂದಿಸುವವನೇ ದೇವನು
ಆನಂದದಲಿ ಆನಂದನವನು
ಅನಂತದಲಿ ಅನಂತನವನು
ಎಲ್ಲರಿಗೂ ಒಬ್ಬನೇ ಅವನು
ಒಬ್ಬನಾದರೂ ನಾಮ ಮಾತ್ರ ಹಲವು
ಅವನೇ ಚೆನ್ನಿಗರಾ ಚೆನ್ನ ಬೇಲೂರಿನ ಚೆನ್ನಕೇಶವ ।।

ಬೆಳಕು ಹೊರಳುತಿದೆ ಬಾ...

ಸುತ್ತಲೂ ಹಬ್ಬಿಹುದು ಹಸಿರ ಸಿರಿ
ಕತ್ತಲು ಆವರಿಸುತ್ತಿದೆ ಬೆಳಕನುಂಗಿ
ಹೊಳೆಯಲ್ಲಿ ತೇಲಿಬರುತಿದೆ ಅನವರತ ಸಂಗೀತದ ಸುಧೆ
ಕೊಡದಲಿ ತುಂಬಿಹುದು ತಂಪನೆಯ ನೀರು
ಗೆಳತಿಯೋ ಕಳೆದುಹೋಗಿಹಳು ತನ್ನಿನಿಯನ ಧ್ಯಾನದಲ್ಲಿ
ಅವಳ ಮುಖವೋ ಹೊಳೆಯಿತಿಹುದು ಹುಣ್ಣಿಮೆಯ ಚಂದ್ರನಂತೆ
ಕಾದು ಕಾದು ನಾವಂತೂ ಸೋತು ಸೊರಗಿದೆವು
ಪ್ರಿಯೇ ! ಮರಳುವ ಬಾ... ಬೆಳಕು ಹೊರಳುತಿದೆ ಬಾ...
ನಾಡು ಕೈಬೀಸಿ ಕರೆಯುತಿದೆ ಮಂಗಳಮುಖಿ ಬಾರೆಂದು ।।

ತಣಿಸು ಬಾ

ಕಣ್ಣ ಮುಚ್ಚಿದರೂ ಅವನದೇ ಚಿಂತೆ
ಕಣ್ಣತೆರೆದೆನೆಂದರೆ ಅವನಿಲ್ಲದ ನೆವ
ನಿದಿರೆಯ ಆಹ್ವಾನಿಸಿ ಅವನ ಕನಸ ಕಾಣ್ವಹಂಬಲ
ನಿದಿರೆಯನ್ನೂ ದೋಚಿದ ಕಳ್ಳನವನು
ನಿದಿರೆಯಲ್ಲೂ ಅವನ ಸೇರುವ ಹಂಬಲ ವ್ಯರ್ಥ
ಸೊರಗಿದೆ ಈ ತನುವು ಬಳಲಿದೆ ಈ ಮನ
ಚೈತನ್ಯವಾಗಿ ನೀ ಬಳಿ ಬರುವೆಯೆಂದು ಕಾದಿಹೆ
ನಿನ್ನ ತೋರುವ ದಿನವದಾವುದೋ ನಾ ಕಾಣೆ?
ಹಂಬಲದಿಂದೊಂದು ದಿನ ನಿನ್ನ ನೋಡುವ ಭರವಸೆ
ನಿದಿರೆ ನೀ ಬಾರದೆ ನಾ ಹೇಗೆ ಕಾಣಲಿ ಅವನ ಕನಸ ?
ಒಮ್ಮೆ ಬಂದು ಹೋಗು ಬಾ ಈ ವಿರಹವ ತಣಿಸು ಬಾ ।।

ಹೋಗಬೇಡ ಗೆಳೆಯಾ

ಹೊರಟುಹೋದೆಯಾ ಮಾಧವ ಬಳಿಬಂದು ಹೋದುದೇಕೆ?
ಮನದಲಿ ಹಂಬಲ ತುಂಬಿದೆ ವಿರಹದಿ ಬಳಲಿಹೆನು
ಕೋಪದಿಂದೊಂದು ಮಾತಿಗೆ ಮುನಿಸಿಕೊಂಡೆಯಾ
ಬಳಲಿ ಬಳಲಿ ಬೆಂಡಾದವಳಿಗೆ ಉಪವಾಸ ವ್ರತವೇ?
ಬಲುದಿನದನಂತರ ಬಳಿಬಂದೀ ಶುಕ್ಲಪಕ್ಷದ ಚಂದಿರನಂತೆ
ತಾಪದಿ ಒರಟು ಪ್ರೀತಿಯಮಾತಿಗೆ ನೀ ನೊಂದೆಯಾ?
ಹೋಗಬೇಡ! ಹೋಗಬೇಡಾ! ಇನಿಯಾ ತಾಳೆನು ಈ ವಿರಹ
ಹೃದಯ ಸೋತಿದೆ ತನುವು ನಲುಗಿದೆ ನಿನ್ನ ನೋಡದೇ
ಹೋಗಬೇಡ ಗೆಳೆಯಾ ನನ್ನ ತೊರೆದು ಹೋಗಬೇಡ ಇನಿಯಾ...

ಎತ್ತ ಹೊರಟೆ?

ಎತ್ತ ಹೊರಟೆಯೇಕೆ ಚಲುವಾಂಗಿಯೇ?
ರಂಗು-ರಂಗಿನ ಸೀರೆಯುಟ್ಟಿಹೆ ಶೃಂಗಾರಾದಿ
ಅದರದೊಳು ನಗುವ ತಾರೆಹೊಕ್ಕು ಹೊಳೆಯುತಿದೆ
ಮನದಲೇನೋ ಹರುಷ ಹೃದಯದೊಳು ಇನಿಯ
ತವಕ ಹೆಚ್ಚಿದೆ ಯಾವಾಗ ಇನಿಯನ ಕಂಡೆಯೇನೋ
ಎಂಬೀಹಂಬಲ ಮೈಖದಲ್ಲಿ ಹುಣ್ಣಿಮೆಯ ಮಂದಹಾಸ
ಮಿಂಚಿನಂತೆ ಮಾಯವಾಗುವ ಬಂಗಾರ ಜಿಂಕೆಯಂತೆ
ಆತುರದಿ ಹೊರಟು ನಿಂತಿಹೆ ಮುಗುದೇ ಸಮಾಧಾನ
ಜೋಪಾನ ತಾಳ್ಮೆಯಿರಲಿ ನಿನ್ನ ಸುಖ ಬಳಿಬರಲಿ
ಭಯ ಬೇಡ ಬೆಡಗಿ ಹೋಗು ಇನಿಯನ ಸನಿಹಕೆ ||

ತಾಯೇ ಏಕಿಂತ ಮುನಿಸು?

ಪ್ರತಿಯೊಂದು ಕರೆಯಲ್ಲೂ ಅದೇನೋ ಮುನಿಸು
ತಾಯೇ ಏಕಿಂತ ಮುನಿಸು ನಿನ್ನ ಮಕ್ಕಳ ಮೇಲೆ
ತಾಯಾಗುಣವಲ್ಲವೀ ಮುನಿಸು ಕಳವಳವಾಗಿದೆ
ತೊಟ್ಟು ಬಿಟ್ಟ ಬಾಣಗಳು ನಾವು ಬತ್ತಳಿಕೆಯಲ್ಲಿಲ್ಲ
ಜಗವನುದ್ಧರಿಸುವುದೋ? ಮುನಿಸತಣಿಸುವುದೋ?
ಮನವು ನೊಂದಿದೆ ನಿನ್ನ ಈ ಪರಿಯ ಕಂಡು
ಏಕೆ ತಾಯೇ ಮುನಿಸು? ನಾವು ಮಕ್ಕಳಲ್ಲವೇ?
ಪ್ರೀತಿಯ ವಾತ್ಸಲ್ಯದ ಅಮೃತವ ನೀಡುವುದಬಿಟ್ಟು
ದ್ವೇಷ ಅಸೂಯೆಯ ವಿಷವನ್ನೇಕೆವುಣ್ಣಿಸುತಿಹೆ ತಾಯೇ?
ನಿನ್ನ ಇಚ್ಛೆಯಂತಾಗಲಿ ನಾ ಸಿದ್ಧನಿಹೆನು ತಾಯೇ ।।

ನಿನ್ನ ಲೀಲೆ

ಅಚ್ಚರಿಯು ತಾಯೇ ನಿನ್ನ ಲೀಲೆ
ನಿನ್ನ ಕಾರುಣ್ಯವೊಂದಿರೆ ಬೇರೆ ಬೇಡವೆನಗೆ
ಏನ ಬಣ್ಣಿಸಲಿ ನಿನ್ನ ಮಮತೆ ವಾತ್ಸಲ್ಯ
ಕೊಡುವೀ ತುಂಬಿಕೊಳ್ಳುವಷ್ಟು
ತುಂಬಿಕೊಂಡಷ್ಟೂ ದಾಹ ಹೆಚ್ಚಿದೆ
ಕ್ಷಯವಾಗದ ಸಂಪತ್ತು ಅಕ್ಷರದೊಳಿಟ್ಟು
ಹರಸು ನಿನ್ನ ಸುತರನು ಅನಾವರತ ತಾಯೆ ಸರಸತಿಯೇ ।।

ಕೈಚಳಕ

ಎನಿತು ಸುಂದರವೀ ಶಿಲೆಯು
ತದೇಕ ಚಿತ್ತದಲ್ಲಿ ಕಣ್ಣ ಮುಚ್ಚದೆ
ನೋಡು-ನೋಡು ರಸಿಕನೆಂದಾಹ್ವಾನಿಸುತಿದೆ
ಶಿಲ್ಪಕಾರನ ಚಮತ್ಕಾರವೆನ್ನಲೋ!
ಮನದೊಳಗಿನ ಕಾಣದ ಶೃಂಗಾರವೆನ್ನಲೋ!
ಮನಸ್ಸೇ ಸೋತು ಗೊಂದಲಕ್ಕೆ ಸಿಕ್ಕಂತಿದೆ
ಅಚ್ಚರಿಯೋ! ಆಘಾತವೋ! ಮೂಕವಿಸ್ಮಯವೋ!
ಕಾಲನಿಂತಿದೆ ಮನದಲ್ಲಿ ಅದ್ಬುತ ಕೈಚಳಕವ ಕಂಡು

ಪಿಸುಮಾತು

ಪಿಸುಮಾತು ಕಿವಿಯಲುಸುರುವ ನೆಪದ ತವಕ
ಪ್ರಿಯೇ! ನಿನ್ನಯ ಗಲ್ಲವನ್ನೊಮ್ಮೆ ತಿರುಗಿಸು
ನಿನ್ನ ಗಲ್ಲವು ನನ್ನ ಗಲ್ಲವ ಸೋಕಿಸೆ ಮೈಮರೆತೆ
ಮಾತು ಮರೆತೇಹೋಯಿತು ಮೃಧು ಮಧುರ
ಅದರವು ಸೆಳೆಯಿತೆನ್ನನು ಮನವು ನಿನ್ನ
ಸೆಳೆಯಿತು ಪಿಸುಮಾತಿನ ನೆಪದಲಿ ರಸನಿಮಿಷ
ವದುವೇ ಮನವು ನಿನ್ನ ಸ್ಪರ್ಶಸುಖವ ಅನುಭವಿಸಿತು \\

ದುಡಿತ

ಹದಿನಾರು ವರುಷ ದುಡಿತವೋ ದುಡಿತ
ಅರಿವಾಗಲಿಲ್ಲ, ನಾವು ಯಾರಿಗಾಗಿ ದುಡಿಯುತ್ತಿದ್ದವೆಂದು;
ಬಾಸ್ ಗಳೆಲ್ಲಾ ನಮ್ಮ ಶ್ರಮದ ಏಣಿ ಏರಿ ದೊಡ್ಡವರಾಗಿಬಿಟ್ಟಿದ್ದರು
ಅರಿವಾಗಲಿಲ್ಲ, ಅವರು ಕಿವುಡ ಹಾಗು ಕುರುಡರೆಂದು\\

ಕನಸು

ತರ್ಕಿಸ ಬಯಸಿದೆ ಮನ
ನನ್ನೆಲ್ಲಾ ಕನಸುಗಳ

ಪ್ರೀತಿಸ ಬಯಸಿದೆ ಮನ
ನನ್ನೆಲ್ಲಾ ಕನಸುಗಳ

ಆತ್ಮವು ಬಡಿದೆಬ್ಬಿಸಿದೆ ಸಾಕಾರಗೊಳಿಸಲು
ನನ್ನೆಲ್ಲಾ ಕನಸುಗಳ

ಪ್ರೇರಣೆ: ಶ್ರೀ ಚಿನ್ಮಯ್

ಕನಸು

ಬೇಗ ಜಾರು ನಿದ್ದೆಗೆ,
ತವಕದಿ ಆಹ್ವಾನಿಸು ಕನಸಿಗೆ;
ಕನಸಿಲ್ಲದ ಜೀವನ, ರೆಕ್ಕೆ ಮುರಿದ ಹಕ್ಕಿಯಂತೆ
ಜೀವನ ನಿಂತ ನೀರು, ಕೊಳೆತು ನಾರುವುದು ದಿಟವಂತೆ\\

ಬೇಗ ಜಾರು ನಿದ್ದೆಗೆ,
ತವಕದಿ ಆಹ್ವಾನಿಸು ಕನಸಿಗೆ;
ಜಾರಿಹೋದ ಕನಸು, ಕೈಗೆ ಸಿಕ್ಕಿ ಬಾಯಿಗೆ ಸಿಗದಂತೆ
ಮಂಜುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡ ಜೀವದಂತೆ\\

ಪ್ರೇರಣೆ: “Dreams” by Langstone Hughes

ನನ್ನೊಳ ಗುಣಗಳು

ನನ್ನೊಳ ಮೃಗೀಯ ಗುಣ
ಹೊರಹೊಮ್ಮಿಸಿತು
ಹೋರಾಟ ಹಾಗು ದಾಳಿ ಮಾಡುವ ಭಂಡ ಧೈರ್ಯವ\\

ನನ್ನೊಳ ಮಾನವೀಯ ಗುಣ
ತೋರಿತು ಈ ಜಗಕೆ
ಧಿಕ್ಕರಿಸುವ ಹಾಗು ಕೀಳರಿಮೆಯ ಅಸಹಾಯಕ ಸಂಕಟವ\\

ನನ್ನೊಳ ದೈವೀಗುಣ
ತೋರಿತು ಈ ಜಗಕೆ
ಸ್ವೀಕರಿಸುವ ಹಾಗು ಪ್ರೀತಿಸುವ ಧನಾತ್ಮಕತೆಯ\\

ನನ್ನೊಳ ಅನಂತ ಶಕ್ತಿ
ತೋರಿತು ಈ ಜಗಕೆ
ಬದಲಾವಣೆ,ಪರಿವರ್ತನೆ ಹಾಗು ಹೊಸ ಮನ್ವಂತರವ \\

ಪ್ರೇರಣೆ: ಶ್ರೀ ಚಿನ್ಮಯ್

ಇಬ್ಬಗೆಯ ದಾರಿ

ಒಳ್ಳೆಯದೋ! ಕೆಟ್ಟದೋ! ಯಾವುದು ನಮ್ಮ ದಾರಿ?
ಒಳ್ಳೆಯದಕ್ಕೆ ಮಾತ್ರ ನಮ್ಮ ಮನಸ್ಸು ತೆರೆವುದು ಬೇಗನೆ
ನಮ್ಮಯ ಗುರಿ ಇಬ್ಬಗೆಯ ದಾರಿಯದು;
ಪ್ರಕೃತಿ ನಮ್ಮ ಮುಂದೆ ತೋರುವ ವಿರೋಧಾಭಾಸಗಳೋ !
ಇಲ್ಲ ಸವಾಲುಗಳೋ !
ಭಗವಂತನ ಹತ್ತಿರ ಕರೆದೊಯ್ಯುವ ಸಾಧನವಂತೂ ನಿಜ
ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವೆವು
ಸಾವೊಂದೇ ದಾರಿ ಅಮರತ್ವದೆಡೆಗೆ।।

ಪ್ರೇರಣೆ: ಶ್ರೀ ಅರವಿಂದ

ಮಲ್ಲಿಗೆ

ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ
ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ
ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ
ಯಾರು ಕಾರಣರು ಇದಕ್ಕೆಲ್ಲಾ?

ಹುಣ್ಣಿಮೆಯ ರಾತ್ರಿಯಲ್ಲಿ
ಸೌಂದರ್ಯವೇ ತಾನಾಗಿ ನಗುತಿಹುದು
ಮಲ್ಲಿಗೆಯ ಪರಿಮಳ ಗಾಳಿಯಲ್ಲಿ
ತೇಲಿ ಬಂದು ವಿರಹ ಉದಯಿಸಿಹುದು

ಯಾರ ಹೃದಯ ವೇದನೆಗೆ
ನೆಮ್ಮದಿಯ ದಾರಿಯಾಗಿ ಬಂದಿಹುದೋ
ಯಾರ ವಿರಹ ವೇದನೆಗೆ
ತಂಪೆರೆಯಲು ಸ್ವರ್ಗದಿಂದಿಳಿದಿಹುದೋ?

ಏಕೆ ನಗುತಿಹೆ ಮಲ್ಲಿಗೆ ಹೂವೇ ?
ಏಕೆ ಸುಗಂಧವ ಪಸರಿಸಿ ನಿಂತಿರುವೇ ?
ಯಾರ ಸ್ಪರ್ಶದ ಸುಖವೋ ನೀನು
ಶಾಂತಿ ನೆಮ್ಮದಿಯ ಅರಸಿಯೇ ನೀನು ।।

ಮುರಳಿ ಮನೋಹರ

ನೀನೇ ಸುಂದರ, ಅತಿ ಸುಂದರ, ಮನೋಹರ
ಸಾಟಿಯಾರಿಹರು ನಿನ್ನಯ ಈ ಸುಂದರ ತೋಟದಲ್ಲಿ
ರಾತ್ರಿ-ಹಗಲು ಯಾವ ಕಾಲದಲ್ಲಾದರೂ ಸರಿಯೇ!
ನನ್ನೊಳ ಹೃದಯಾಂತರಾಳದಲ್ಲಿ ನೀನೇ ನೆಲೆಸಿರುವೆ
ನೀನಿಲ್ಲದೆ ಈ ಕಂಗಳಿಗೆ ಬೆಳಕೆಲ್ಲಿ?
ಪ್ರತಿಯೊಂದೂ ಭ್ರಮೆಯೋ!ಎಲ್ಲವೂ ಬಂಜರೇ .....
ನನ್ನ ಸುತ್ತಲೂ, ನನ್ನೊಳಗೆ ಹಾಗೂ ಹೊರಗೇ ....
ನಿನ್ನ ಮುರಳಿಯ ಮಧುರಗಾನ ನವಿರೇಳಿಸುವುದು
ನಾನೋ ನೋವುಗಳ ಬದುಕಿನಲ್ಲಿ ಮುಳುಗಿರುವವನು
ಓ ದೇವನೇ! ಓ ಮನ ಮೋಹನನೇ!ಸುಂದರಾಂಗನೆ!
ಜೀವನದಲ್ಲೊಮ್ಮೆ ನಿನ್ನ ಸುಂದರ ಮೊಗವನ್ನು ನೋಡಲಾರನೇ?
ಓ ಮುರಳಿ ಮನೋಹರನೇ ಒಮ್ಮೆಯಾದರೂ ......

ನನ್ನ ಗೆಳೆಯರು


ರಾತ್ರಿ ಮನೋಹರ ಹಾಗು ಸುಂದರ
ನನ್ನ ಗೆಳೆಯರ ಮೊಗದಲ್ಲಿನ ಮಂದಹಾಸದಂತೆ;

ಮಿನುಗುವ ಆ ತಾರೆಗಳೂ ಸುಂದರ
ನನ್ನ ಗೆಳೆಯರ ಮೊಗದಲ್ಲಿನ ಮಿನುಗುವ ಕಂಗಳಂತೆ ;

ಸುಂದರಾಂಗನೂ ಈ ದಿವಾಕರನು
ನನ್ನ ಗೆಳೆಯರ ಚೈತನ್ಯದ ಆತ್ಮಗಳಂತೆ ;

ಪ್ರೇರಣೆ:”My People” by Langston Hughes

ಸೌಂದರ್ಯ

ಸೌಂದರ್ಯ ಸಂತೋಷದ ಒಸಗೆ
ಕ್ಷಣಗಳು ಜಾರುವುದೇ ವಿನಃ
ಬೇಸರವ ತರದು , ಶೂನ್ಯತೆಯ ಕಾಡದು;
ಮೌನವು ಅವರಿಸಿದರೂ ಗಾಢತೆ ಹೆಚ್ಚುವುದು ;
ಮನವೆಂಬ ನವಿಲು ಗರಿಗೆದರಿ ನರ್ತಿಸುವುದು;
ಪ್ರಶಾಂತತೆ,ನೀರವತೆ ಮಾನವನ್ನೆಲ್ಲಾ ಆವರಿಸುವುದು;
ಕಳೆದುಹೋಗುವುದು ಸಾಮಾನ್ಯ ಸಂಗತಿಯೇ ಇಲ್ಲಿ ;
ಸೌಂದರ್ಯದ ಬಲೆಗೆ ಬೀಳದವರಾರು?
ಸೌಂದರ್ಯದ ರಸ ಸಮಯದಲ್ಲಿ ಮಿಂದವರು ಕೆಲವೇ ಕೆಲವರು....

ಮತ್ತೊಮ್ಮೆ

ಓ ಕಾಲವೇ!, ಓ ದೇವರೇ!,ಓ ಜೀವನವೇ
ಯಾವುದು ನನ್ನ ಕೊನೆಯ ಮೆಟ್ಟಿಲು?
ನಿಂತಲ್ಲೇ ಕುಸಿಯುತಿಹೆನು ಗಹಗಹಸಿದ ಸ್ಥಳದಲ್ಲೇ
ಮತ್ತೇ ಆ ಸುಂದರಕ್ಷಣ ಮನದಲ್ಲಿ ಬಾರದೇ!
ಮತ್ತೊಮ್ಮೆ ,ಮತ್ತೊಮ್ಮೆ ಬಾರದೇ ,ಹೇ ವಿಧಿಯೇ ;

ರಾತ್ರಿ,ಹಗಲು,ಮಳೆ,ಗಾಳಿ
ಸಂತಸ ಕಳೆದುಹೋದ ಸಂಪತ್ತು;
ಕಾಲ ನಿಲ್ಲದೆ ತಿರುಗುತ್ತಿದೆ ,ವಸಂತ ನಗುತ್ತಿಹನು
ಕಣ್ಣರಳಿಸಿ ಬೆಳಕ ದಿಕ್ಕನ್ನೇ ನೋಡುತಿಹೆನು
ಮತ್ತೊಮ್ಮೆ ,ಮತ್ತೊಮ್ಮೆ ಬಾರದೇ ,ಹೇ ವಿಧಿಯೇ ;

ಮರೆತಕ್ಷಣ

ಸಂತಸವದುವೆ ಎಲ್ಲ ಮರೆತ ದಿನ
ನೋವು,ಕಷ್ಟ-ನಷ್ಟಗಳನೆಲ್ಲಾ ಮರೆತಕ್ಷಣ
ಪ್ರತಿಕ್ಷಣವೂ ಚಿಂತಿಸುವೆ ಮರೆಯಲೆತ್ನಿಸುವೆ
ಮನದ ಮೂಲೆಯಲ್ಲಿ ಕಸಪೊರಕೆಯಿಂದೊಟ್ಟುಮಾಡಿ ಸುಡುವೆ ;

ಬಿಸಿಲೋ! ಚಳಿಯೋ! ಮಳೆಯೋ!
ಯಾವ ನೆನಪೂ ಬಾರದೆನಗೆ ನಗುವೊಂದಬಿಟ್ಟು
ಮನದಲ್ಲಿ ಹೆಪ್ಪುಗಟ್ಟಿದೆ ಕೊಳೆಯನ್ನೆಲ್ಲಾ ಜಾಡಿಸಿಬಿಟ್ಟೆ
ಹಗುರವೆನಿಸಿತು ಮಗುವಂತಾಗಿ ನಿದ್ದೆ ಹತ್ತಿತೆನಗೆ;

ಹೃದಯ ತುಂಬಿ ಬಂದಿದೆ

ಹೃದಯ ತುಂಬಿ ಬಂದಿದೆ
ಆಕಾಶದಲ್ಲಿ ಮಳೆಬಿಲ್ಲು ಮೂಡಿದಂತೆ;
ಹೊಸ ಚಿಗುರೊಡೆದಾಗ ಏನೋ ಹರುಷ
ನಮ್ಮ ನಾವು ಅರಿತಾಗಲೂ ಅದೇನೋ ಸುಖ;
ಮುದಿತನದಲ್ಲೂ ಜೀವನಪ್ರೀತಿ ಇರೆ ಅದೇ ಸಾರ್ಥಕವು
ಸಾವಿನಲ್ಲೂ ಇರಲಿ ಸಂಯಮ;
ಮುಗ್ಧತೆ ಮನುಷ್ಯನ ತಂದೆ;
ಹಾತೊರೆಯುತ್ತಿದ್ದೇನೆ ಅದ ಸವಿಯಲು
ಬೆಸೆದುಕೊಳ್ಳ ಬಯಸಿದೆ ಪ್ರಕೃತಿಯ ತೆಕ್ಕೆಯಲಿ;
ಹೃದಯ ತುಂಬಿ ಬಂದಿದೆ
ಇಳೆಯ ಬಾಯಾರಿಕೆಗೆ ಮಳೆ ಬಂದಂತೆ;
ಹೃದಯ ತುಂಬಿದೆ ಹೊನ್ನ ಚಂದಿರನ ಬೆಳಕಂತೆ
ರಸನಿಮಿಷ ಜಾರಿದೆ ಕಾಲ ತೆವಳುತ್ತಾ ಹೊರಳಿದಂತೆ;

ನಾನೇ ಅವನು

ನಾನು ಯಾರು?
ಮನಸ್ಸಲ್ಲ ನಾನು!
ಬುದ್ಧಿಯಲ್ಲ ನಾನು!
ಅಹಂ,ಅನುಭವವಲ್ಲ ನಾನು!
ನಾನು ಅವನು!
ನಾನು ಅವನೇ!
ಅವನಿಂದ ವರವ ಪಡೆದವನು, ನಾನೇ ಅವನು!
ಸಾವಿಲ್ಲದವನು!
ಬದುಕದವನು!
ಜಾತಿ,ಕುಲಗಳಿಲ್ಲದವನು ನಾನು!
ತಂದೆ-ತಾಯಿ,ಬಂಧು-ಬಳಗ ಯಾರಿಲ್ಲದವನು ನಾನು!

ನಾನು ಅವನು!
ಅವನಿಂದ ವರವ ಪಡೆದವನು, ನಾನೇ ಅವನು!
ಭ್ರಮೆಯ ಆವರಣ ದಾಟಿ,ಆಕಾರವಿಲ್ಲದವನು ನಾನು!
ಸಂಬಂಧಗಳಿಗೆ ಭಯಾಪದದವನು!
ನಾನು ಮುಕ್ತನಾದವನು,ನಾನು ಮುಕ್ತನು!
ನಾನು ಅವನೇ!
ಅವನಿಂದ ವರವ ಪಡೆದವನು, ನಾನೇ ಅವನು!

ನಾನು ಯಾರು?

ನಾನು ಯಾರೂ ಅಲ್ಲ! ನಾನು ಯಾರು?
ನೀನು ಕೂಡ ಯಾರೋ?
ಈ ಗೊಂದಲ ಎಲ್ಲೆಡೆಯೂ ಇದೆ , ಎಲ್ಲರಲ್ಲಿಯೂ ಇದೆ!
ಆದರೂ ಎಲ್ಲರಿಗು ಎದೆಗಾರಿಕೆ, ಅಹಂ ಬಹಳವಿದೆ||

ಯಾರೂ ಪ್ರಶ್ನಿಸಿಕೊಳ್ಳುವುದಿಲ್ಲ!
ಬೇರೆಯವರನ್ನು ಪ್ರಶ್ನಿಸುವುದಿಲ್ಲ!
ಇಲ್ಲಿ ಎಲ್ಲರೂ ಪರಿಚಿತರೋ? ಅಪರಿಚಿತರೋ?
ಯಾರ ಮನದಲ್ಲೂ ಪ್ರಶ್ನೆ ಬರುವುದೇ ಇಲ್ಲ।।

ಇವೆಲ್ಲವೂ ಎಲ್ಲರಿಗೂ ಗೊತ್ತು!
ಯಾರು,ಯಾರನ್ನೂ ಪ್ರಶ್ನಿಸುವುದಿಲ್ಲ
ಆದರೆ ನಾನೇಕೆ ಪ್ರಶ್ನಿಸುತ್ತಿದೇನೆ
ನಾನು ಯಾರು? ನಾನು ಯಾರು?

ಸಣ್ಣ ದೀಪ

ಹುಡುಕು ನಿನ್ನೊಳಗೆ
ಕತ್ತಲಿಹುದು ಅದರೊಳಗೆ
ಅಪಾರ ಶಕ್ತಿ ಅಡಗಿಹುದು ಕಾಣದೆ
ಮರೆತಿರುವೆ ನಿನ್ನೊಳ ಅನಂತ ಚೈತನ್ಯ
ಕಣ್ಣು ಮುಚ್ಚು ಪ್ರಯತ್ನಿಸು ಒಳಗಣ್ಣ ತೆರೆಯಲು
ಕತ್ತಲಿಹುದೆಂದು ಎದೆಗುಂದಬೇಡ
ಪ್ರಯತ್ನಿಸು,ಪ್ರಯತ್ನಿಸು ನಿನ್ನದೇ ಇಂದಲ್ಲ ನಾಳೆ
ಗುಡಿಯೊಳು ಸಣ್ಣ ದೀಪ ಹತ್ತಿಸು ಇಂದೇ...

ಸಂತಸ ಬಡು

ಸದಾ ಸಂತಸದ ಹೊನಲು ಧರೆಗಿಳಿಯಲಿ
ಹೋರಾಟ,ಹಾರಾಟ.... ನಕಾರಾತ್ಮಕತೆ ಪಾತಾಳಕ್ಕಿಳಿಯಲಿ
ಅನುಭವಿಸು ಸುಖದ ಅನುರಣವ ಎಲ್ಲೇ ಮೀರದೆ
ಬೆನ್ನು ತಟ್ಟಿಕೊ ನಿನ್ನ ನೀನೇ ....
ಮುನ್ನುಗ್ಗು,ಹಾನಿಮಾಡದಿರು ,ಪರರ ಸಂತಸವ
ನಿಯಂತ್ರಿಸಿಕೊ,ಸಹಿಸಿಕೋ .....
ಇಲ್ಲಿ ಶಾಶ್ವತವಾದುದು ಯಾವುದೂ ಇಲ್ಲ ತಿಳಿ
ಕಾಲ ನಗುವುದು ನಿನ್ನ ತೀರಕೆ ಎಳೆದೊಯ್ಯುವುದು
ನೀನು ಕೈಗೊಂಬೆ ತಿಳಿ
ಸಮಯದ ಪಾತ್ರೆ ಕರಗುತಿಹುದು ಎಚ್ಛೆತ್ತುಕೊ...
ಸಂತಸ ಬಡು ಅನುದಿನ .....

ನಿದ್ದೆಯ ಅಣ್ಣ

ಸಾವು ನಿದ್ದೆಯ ಅಣ್ಣ
ನಿದ್ದೆಯೇ ನೀನೆಷ್ಟು ಕರುಣಾಳು
ದಿನದ ನೋವೆಲ್ಲಾ ನಿನ್ನ ಕಂಡರೆ ಓಡುವುದು
ನಿನ್ನ ಅಣ್ಣನು ಬಲು ಕರುಣಾಳೆಂದು ಕೇಳಿದ್ದೇನೆ
ಅವನು ಬರುವುದೇ ಅಪರೂಪವೆಂದು ತಿಳಿದಿದ್ದೇನೆ
ನೀನಾದರೂ ದಿನವೂ ಬರುವೆ ಅನೇಕ ಪರಿಹಾರಗಳೊಂದಿಗೆ
ಆದರೆ ದಿನಬೆಳಗಾದರೆ ಮತ್ತೆ ಒಕ್ಕರಿಸುವುವು ಅವೇ ಸಮಸ್ಯೆಗಳು
ಅವನೆಂದರೆ ಎಲ್ಲರಿಗೂ ಹೆದರಿಕೆ ಏಕೋ?
ಆವನಾದರೂ ಬಾಳಲಿ ಬಂದರೆ ಎಲ್ಲವೂ ಶಾಶ್ವತವಾಗಿ ಮಾಯವಾಗುವುದು
ಸಮಸ್ಯೆಗಳೆಲ್ಲವೂ ಪರರ ಹೆಗಲೇರುವುದು ಖಂಡಿತ .....

ಗಾನ ಗಂಧರ್ವ

ನನ್ನೊಳು ಕನಸೊಂದು ಆವರಿಸುತ್ತಿದೆ
ಎನ್ನೆಂದು ಹೇಳಲಿ, ಅದ್ಬುತವೆನ್ನಲೇ? ಚಮತ್ಕಾರವೆನ್ನಲೇ?
ಮಾತುಗಳಂತೂ ಬಣ್ಣಿಸಲಾರೆ ಈ ಅನುಭವವ
ಮನವು ತೇಲುತಿದೆ
ಹೃದಯದ ಮಾತು ಕೇಳದೆ
ಆ ಗಾನ ತೇಲಿಬಂದ ಕಡೆಗೆ ಹಾರುತಿದೆ
ಎಂದು ಕೇಳದ ಅನಾದಿಗಾನವದು
ಭಾವನೆಗಳ ಹೊನಲೆನ್ನಲೋ?
ಮಧುರ ಭಾವಗಳ ವರ್ಷವೆನ್ನಲೋ?
ಹೀಗೆ ತೇಲಲಿ ಮನ ಅನಂತಾದೆಡೆಗೆ ಸಾಗಲಿ
ಸ್ವರ್ಗವೆಂದರೆ ಇದೆ
ಅನಂತಸುಖವೆಂದರೆ ಇದೆ
ಸಂಗೀತಸುಧೆಯಲ್ಲಿ ತೇಲಿಹೋಯಿತು
ಓ ವೈಣಿಕನೇ ನಿನಗೆ ನಮನ
ನೀನು ಗಾನ ಗಂಧರ್ವನೇ ಸರಿ
ನಿನಗೆ ಸರಿ ಸಮನಾರು ಹೇಳು

ಒಳಗೊಂದು ಕದನ

ಒಳಗೊಂದು ಕದನ ನಡೆಯುತಿದೆ
ಸೋಲು ಗೆಲುವಿನೊಡನೆ ಹಗ್ಗ ಜಗ್ಗಾಟ
ಕಾಣದ ದಾರಿ ಸೆಳೆಯುತಿಹುದು
ಗುರಿಯ ದಿಕ್ಕು ಬದಲಿಸಿ ಹಿಂಸಿಸಿದೆ||

ಒಂಟಿ ಜೀವ, ಸುತ್ತಲೂ ನಿಂತಿಹರು ನೂರಾರು
ಈಟಿ ,ಭರ್ಜಿಯ ಹಿಡಿದಿಹರು
ಕಣ್ಣು ಮಂಜಾಗಿದೆ,
ತಿವಿದ ನೋವು ಸಹಿಸದಾಗಿದೆ||

ಕತ್ತಲು ನನ್ನನ್ನೇ ನುಂಗುವಂತೆ ಭಾಸವಾಗಿದೆ
ನನ್ನೊಳ ಶಕ್ತಿಯ ಹೀರುವಂತೆ ತೋರುತಿದೆ
ಧೈತ್ಯರೂ ,ವೀರಾಧಿವೀರರೂ ,ಸಾವಿನ ಸರಧಾರರು
ಮರಣವನ್ನೇ ಕೈಯಲ್ಲಿ ಹಿಡಿದವರು||

ಶಕ್ತಿಯಾಯಿತು ಶೂನ್ಯ
ಧರೆಗುರುಳುತಿದೆ ದೇಹ
ನೆತ್ತರು ಹರಿಯುತಿದೆ ಭುವಿಯ ತಂಪಾಗಿಸಲು
ಶತ್ರುಗಳ ಸಂತೈಸುತಿಹುದು ಧರೆಗುರುಳಿ।।

ಮೌನ ತಬ್ಬಿದೆ

ಮೌನ ತಬ್ಬಿದೆ ಬೆತ್ತಲಾದ ಮಾನವನು
ನೊಂದು,ಬೆಂದ ಮನಕೆ ಸ್ವಾಂತನ ಬೇಕಾಗಿದೆ||

ಎಲ್ಲಿಂದಲೋ ಬಂದವರು ನಮ್ಮನಾಳುತಿಹರು
ನಮ್ಮ ಮನೆಯಲ್ಲೇ ನಾವು ಪರಕೀಯರಾಗಿಹೆವು।।

ಬಣ್ಣದ ಮಾತುಗಳು ತೆರೆಯ ಮೇಲೆ
ಕತ್ತಿ ಮಸೆಯುತಿಹರು ತೆರೆಯ ಹಿಂದೆ।।

ನಂಬಿಕೆ, ಮೌಲ್ಯಗಳು ಮೂಲೆ ಗುಂಪಾಗಿವೆ
ಕಾಲು ನೆಕ್ಕುವರೇ ಗೆಳೆಯರು ನೈತಿಕತೆ ಹಿಂದೆ ಸರಿದಿದೆ।।

ಬೇಕಂತಲೇ ನಮ್ಮ ಕೆಳಗೆದೂಡಿದರು
ಕೈಗೆಲ್ಲಾ ಎಣ್ಣೆ, ಚಾಚಿಹರು ಮುಂದೆ
ಕೈಲಾಗದವರೆಂದು ಕುಟುಕುತಿಹರು।।

ನಮ್ಮವರು ಸ್ವಾರ್ಥಿಗಳು, ಸಮಯ ಸಾಧಕರು
ತಮ್ಮ ಜೋಳಿಗೆ ತುಂಬಿಸಿಕೊಂಡರು
ತಮ್ಮ ಕುಹಕದಿಂದ ನಮ್ಮೆದೆಯ ಇರಿದರು।।

ಮೌನ ತಬ್ಬಿದೆ ಬೆತ್ತಲಾದ ಮನವನು
ನಂಬಿಕೆಯ ಕೊಂದರು,
ನಮ್ಮಯ ಸ್ಥಿತಿಯ ಕಂಡು ನಕ್ಕರು।।

ಮೌನ ತಬ್ಬಿದೆ, ಮನವು ನರಳಿದೆ,ಬಿಕ್ಕಿದೆ
ಕಾಲಕ್ಕೆ ನಮಿಸುತ್ತಾ,ತೊಳಲುತ್ತಾ...

ಹಂಬಲ

ನಿನ್ನ ಪ್ರೀತಿಯಿಂದಲೇ
ನೋವೆಲ್ಲಾ ಮಾಯವಾಗಿದೆ;
ಈ ತನು-ಮನ ನಿನ್ನದೇ
ಶರಣಾಗತಿಯಿಂದ ಮನವು ಹಾಯಾಗಿದೆ;

ಹಸಿವಿಲ್ಲ, ದಣಿವಿಲ್ಲ
ನಿನ್ನ ನೆನೆದರೆ;
ನಿನ್ನ ಸೇರುವ ಬಯಕೆಯೊಂದೇ
ಮನದಲಿ ತೀರದ ದಾಹವಾಗಿದೆ;

ಎಷ್ಟು ಕೂಗಿದರು ಕೇಳಿಸದೇ ನಿನಗೆ
ನಿನ್ನ ಪ್ರೀತಿಯ ಬಯಸಿಹೆನು;
ಇಂದೋ! ನಾಳೆಯೋ ! ಬರುವಿಯೆಂಬ
ಹಂಬಲವೊಂದೆ ಈ ಜೀವಕೆ;

ಬಾ,ಬಾ ನಿನ್ನ ಕಾಣಬೇಕೆಂಬ ಹಂಬಲವೊಂದೆ
ಒಮ್ಮೆ ಮುಖತೋರು ಬಾ ...
ಇಷ್ಟುಕಾಲ ಸತಾಯಿಸಿದ್ದು ಸಾಕು;
ಈ ಜೀವ ಹೋಗುವ ಮುನ್ನ
ಒಮ್ಮೆ ನನ್ನ ಸಂತೈಸು,
ಈ ಸಂಘರ್ಷವ ಕೊನೆಗೊಳಿಸು ಬಾ ....

ಅಮರ ಸ್ಫೂರ್ತಿ

ಮೌನ, ಮೌನದಾಳದೊಳಗಿಂದ
ಎದ್ದೇಳು! ಎದ್ದೇಳು! ಓ ಅಮರ ಸ್ಫೂರ್ತಿಯೇ,
ಕಾಲಚಕ್ರದ ಮಾಯಾಜಾಲಕ್ಕೆ ಸಿಲುಕದೆ
ಏರೂ,ಏಕಾಂಗಿಯಾಗಿ ಅಮರತ್ವದೆಡೆಗೆ;
ಕತ್ತಲದೊಳಗಣ ಪಿಸುಮಾತುಗಳ ಕಡೆಗಣಿಸು
ನೋವು,ಆಕ್ರಂದನ, ದುಗುಡ,ಸಂಘರ್ಷಗಳ ತೊರೆ
ಮೌನದೊಳಗಡೆ ಎಲ್ಲವನ್ನು ತೂರು ।।

ಎಲ್ಲವನ್ನು ನೋಡು ಒಳಗಣ್ಣಿನಿಂದ
ಬೆರಗುಗಣ್ಣಿನಿಂದ ಮೌನವಾಗಿ ಅವಲೋಕಿಸು
ಮಾತುಗಳ ಕೇಳಿಸಿಕೋ! ನಸುನಗು ಒಳಗೊಳಗೇ
ಇಂದು ನಾಳೆಗಳ ಅಳೆದು ನೋಡು
ಉತ್ತರವಿಲ್ಲದ ಪ್ರಶ್ನೆ ಯಾವುದಿದೆ? ಆಲೋಚಿಸು
ವಿಶ್ರಾಂತಿಯ ಬಿಡು, ಏಕಾಂಗಿಯಾಗಿ ನಡೆ
ಪ್ರಕೃತಿಯೊಳಗಡಗಿದೆ ಸಮಸ್ಯೆಗಳಿಗೆ ಉತ್ತರ
ನೋಡು, ಆಳಕ್ಕಿಳಿ, ಚಿಂತಿಸು,ಆಲೋಚಿಸು
ಶಾಶ್ವತವಾಗಿರಲಿ,ಶಾಂತಿಯಿಂದಿರಲಿ, ತಾಳ್ಮೆಯೊಂದಿರಲಿ
ಏಕಾತ್ಮತಾ ಸೂತ್ರ ಒಂದೇ ಮೌನ, ಶಾಂತಿ
ಅನುಭವಿಸು ,ಪರಿಗ್ರಹಿಸು ಅಮರ ಸ್ಫೂರ್ತಿಯ ।।

ಮೌನ ಹೃದಯ

ಎತ್ತರೆತ್ತರದ ಸೌಧಗಳು ಏನನೋ ಸಾರುತಿವೆ
ಎಣಿಸಲಾರದೆ ಸೋತೆವು ನಿಲುಕದು ಈ ಮನಸಿಗೆ
ವಿಜಯದ ಸಂಕೇತವೋ?
ನಾಶಪಡಿಸಿದ ಅಹಮ್ಮೋ?
ತಿಳಿಸುವವರಾರು ಈ ಮೂಡ ಮನಸಿಗೆ !
ಸಾವಿರ ಸಾವಿರ ನೋಡುವರು ಬರಿಗಣ್ಣಿನಿಂದ
ಒಳಗಣ್ಣ ತೆರೆಯದೇ ನೋಡಣ್ಣ
ಬೆರಗುಪಡುವರು ,ಹೌಹಾರುವರು
ಮನದೊಳಗೆ ನೋವುಂಡವರು ಕೆಲವರು
ನಮ್ಮ ಸಮಾಧಿಯ ಮೇಲೆ ಸೌಧವಕಟ್ಟಿದವರ
ಬೆನ್ನುತಟ್ಟಬೇಕೇ ?
ಅದ್ಭುತವೆಂದು ಹಾಡಿ ಹೊಗಳಬೇಕೆ?
ನಮ್ಮ ಸಂಸ್ಕೃತಿಯ ಮೇಲಾದ ದೌರ್ಜನ್ಯದ ಪ್ರತೀಕಗಳು......
ಒಳಗೊಳಗೇ ಹೃದಯ ನರಳುವುದು
ಮೌನವಾಗಿ ಹಾಡುತಿರುವ ಸೌಧಗಳ ಕಂಡು
ಅಡಿಪಾಯದಲ್ಲಿ ಸಿಲುಕಿ ನರಳುತ್ತಿರುವ ನಮ್ಮತನವ ಕಂಡು।।

ಕೃಪೆ ತೋರು, ಸಂತೈಸು ಬಾ

ಈ ನೋವು ಯಾರಿಗೂ ಅರ್ಥವಾಗದು
ಪ್ರೀತಿಯ ಬೇಗೆಗೆ ಪರಿಹಾರವುಂಟೇ !
ಈ ನೋವು ಕೊಟ್ಟವಗೇ ತಿಳಿಯುವುದು
ಈ ಹೃದಯದ ಬೇಗೆ ಏನೆಂದು
ಈ ವಿರಹಾಗ್ನಿ ಮನವೆಲ್ಲ ಸುಡುತಿರಲು
ನಿನ್ನಿಂದ ಮಾತ್ರ ಸಾಧ್ಯ ಕೃಷ್ಣಾ,ಕೃಷ್ಣಾ
ಕೃಪೆ ತೋರು, ಸಂತೈಸು ಬಾ ,ಬಳಿ ಬಾ ದೇವಾ.....

ಕೃಷ್ಣಾ,ಕೃಷ್ಣಾ

ನನಗೇನಾಗಿದೆ? ಮಾಯೆಯೋ? ಭ್ರಮೆಯೋ?
ಈ ನನ್ನ ಕಂಗಳಿಗೆ ಏನು ಕಾಣದಾಗಿದೆ;
ಕೃಷ್ಣಾ,ಕೃಷ್ಣಾ ನೀನಲ್ಲದೆ ನನಗಾರು ಕಾಣರು
ಇದು ಮತಿಭ್ರಮಣೆಯೋ! ಅವ್ಯಕ್ತ ಪ್ರೀತಿಯೋ!
ನಿರ್ಮಲ ಪ್ರೀತಿಯೋ! ಈ ಜೀವಕೆ ನೀ ಜೊತೆಯಿರಲು....।।

ನಡೆಯುತ್ತಲೇ ಇದ್ದೇನೆ, ನೀ ಜೊತೆಗಿರಲು
ದಣಿವಿಲ್ಲ,ದಾಹವಿಲ್ಲ ಇದೆಂತಹ ಸುಖ?
ದೂರ ದೂರ ನಡೆದರೂ ಈ ಕಾಲ್ಗಳಿಗೆ ನೋವಿಲ್ಲ
ಪ್ರಶಾಂತವಾದ ಇಂತಹ ಮನಸ್ಸು ಹಿಂದೆಂದೂ ಕಂಡಿರಲಿಲ್ಲ
ಭಯವಿಲ್ಲ, ಸಂದೇಹವಿಲ್ಲ ಈ ಜೀವಕೆ ನೀ ಜೊತೆಯಿರಲು....||

ಯಾವುದೂ ನೆನಪಿಲ್ಲ ಕಾಲ, ದೇಶ, ಕಾಲಾತೀತ
ಏನಿದು ಯೋಚನೆಗೆ, ಮನಸ್ಸಿಗೂ ನಿಲುಕುತ್ತಿಲ್ಲ
ತನು-ಮನ ಕುಣಿಯುವುದು ನೀ ಜೊತೆಯಿರಲು
ರಾತ್ರಿ-ಹಗಲೆನ್ನದೆ ನಿನ್ನೊಡನೆಯೇ ಅಲೆಯುವಾಸೆ
ಎಲ್ಲವೂ ನಿನ್ನ ಲೀಲೆ, ಸ್ವರ್ಗ ಈ ಜೀವಕೆ ನೀ ಜೊತೆಯಿರಲು.....||

ಸೋಜಿಗ

ನಗೆಯು ಬರುವುದೆನಗೆ
ಹಿಂತಿರುಗಿ ನೋಡಲು;
ಕ್ಷಣಿಕ ಲಾಲೆಸೆಗೆ ಬೀಳುವ
ಇಂತಹವರ ಕಂಡು ಸೋಜಿಗವೆನಿಸುವುದು
ನನ್ನ ನಾನೇ ನಂಬದಾದೆ
ಇದು ಭ್ರಮೆಯೋ?, ಮತ್ತೇನೋ ತಿಳಿಯದಾಗಿದೆ!
ಎಷ್ಟು ಬದಲಾಗಿದೆ, ಅರಿವಿಗೆ ಬಾರದೆ
ಎಲ್ಲವು ಕೆಟ್ಟ ಕನಸುಗಳಂತೆ ಭಾಸವಾಗುತ್ತಿದೆ।।

ಕನಸು

ನನ್ನೊಳ ಬುದ್ಧಿ ಕೆಡಿಸಿದೆ
ಕನಸುಗಳ ಬೇಗೆಗೆ।।

ನನ್ನ ಹೃದಯ ಜಾರಿದೆ
ಕನಸುಗಳ ಒಸಗೆಗೆ।।

ನನ್ನಾತ್ಮ ನರಳಿದೆ, ಹಂಬಲಿಸಿದೆ
ಕನಸುಗಳ ಬೆಸುಗೆಗೆ।।

ಕನಸರಾತ್ರಿ

ಒಮ್ಮೆ ಕನಸರಾತ್ರಿಯಲ್ಲಿ ಏಕಾಂಗಿ ಸಂಚಾರಿ
ರೆಕ್ಕೆಬಿಚ್ಚಿ ಕನಸತೇರನೇರಿ ಹೊರಟೆ ಇರುಳಲ್ಲಿ
ಮಿನುಗುವ ನಕ್ಷತ್ರ ಗಳ ಕಂಡು ಬೆರಗಾದೆ
ಮುಗುಳ್ನಗುವ ಚಂದಿರನ ಕಂಡು ಪ್ರೀತಿಯಲ್ಲಿ ತೇಲಿದೆ
ಅಗೋಚರ ನರಳಾಟದ ಭೂತ-ಪ್ರೇತಗಳ ಹಾಡ ಆಲಿಸಿದೆ
ಸಾಗರನ ತಿಳಿ ಅಲೆಯ ಸೊಬಗಿನ ಗಾಣಕ್ಕೆ ಮನಸೋತೆ
ಕಂಪಸೂಸಿ ಬಿರಿಯುವ ಹೂವುಗಳ ಬಿಂಕವ ಕಂಡೆ
ಸಪ್ತಸಾಗದಲೆಗಳ ಸುಮಧುರ ಸಂಗೀತಕ್ಕೆ ಶರಣಾದೆ
ಒಮ್ಮೆ ಕನಸಾರಾತ್ರಿಯಲ್ಲಿ ಏಕಾಂಗಿ ಸಂಚಾರಿ ನಾನು ....

ಜಾರು ಕನಸಿಗೆ

ಬೇಗ ಜಾರು ಕನಸಿಗೆ
ಸಂವಹಿಸು ಚೈತನ್ಯವಿಹುದಲ್ಲಿ
ಹೃದಯವ ಮೀಟು ಹಾರುವ ತೆರದಿ
ಸತ್ತವರಿಗಷ್ಟೇ ಕನಸ ಕಾಣಲಾಗದು
ಜೀವಂತ ಶವವಾಗಬೇಡ ಕನಸ ದೂರತಳ್ಳಿ

ಹೃದಯ ಬಯಕೆಯಿಂದ ಬಾಯ್ತೆರೆಯುವ ಮುನ್ನ
ಬೇಗ ಜಾರು ಕನಸಿಗೆ ಚೈತನ್ಯವಿಹುದಲ್ಲಿ
ಬಾಯಾರಿಸು ಕನಸರೆಕ್ಕೆಯ ತೆರೆದು ಹಾರಾಡಿ
ಬಂಜರು ಭೂಮಿಯಲ್ಲವೀ ನಿನ್ನ ಹೃದಯ
ಪ್ರೀತಿ ಬಿತ್ತಿ ಕನಸ ರೆಕ್ಕೆ ಬಿಚ್ಚು ಹಾರಾಡು ಮನವೇ

ಎಲ್ಲಿ ಹೋದವೋ?

ಎಲ್ಲಿ ಹೋದವೋ? ನನ್ನ ಕನಸುಗಳು
ಆಗಾಗ ಬಂದು ಮನವ ಕೆಡಿಸುವ ಹುನ್ನಾರಗಳು
ಬಹಳ ದಿನಗಳಾದವು ಮನಸು ಮುದುಡಿ
ನೀವು ಬರದೇ ಬೇಸರಿಸಿದೆ ಮನ, ಕಾತರಿಸಿದೆ
ಬಂದು ಹೋಗುವ ನೀವು ತರುವಿರಿ ಹೊಸತನವ
ಬನ್ನಿ,ಬನ್ನಿ ನನ್ನೆದೆಗೆ ಹೊನಲ ಹರಿಸ ಬನ್ನಿ....
ಕಾಣದ ಚೈತನ್ಯ ಮನದ ಮುಗಿಲಿಗೆ ತನ್ನಿ....
ಎಂದೂ ಬಾರನೆನ್ನದಿರಿ ಮನವು ಬಳಲುವುದು
ತಾರನೆನ್ನದಿರಿ ಕಠಿಣ ದಿನಗಳ ಎಣಿಸಲಾರೆನು ಬೇಗುದಿ
ಇಂದೋ !, ನಾಳೆಯೋ ಬಂದೇ ಬರುವಿರೆಂದು
ಕಾಯುತಿಹೆನು ಹಗಲು-ರಾತ್ರಿ ಎನ್ನದೇ....
ಬನ್ನಿ,ಬನ್ನಿ ಮರೆಯದೇ ಬಾಗಿಲ ತೆರೆದು ಕಾಯುತಿಹೆನು
ತಳಿರು ತೋರಣಗಳ ಕಟ್ಟಿ ಸಿಂಗರಿಸಿ
ವರುಷ ವರುಷಗಳ ಕೊಳೆಯ ತೊಳೆದು ನಿಂತಿಹೆನು
ಬನ್ನಿ,ಬನ್ನಿ ನನ್ನ ಕನಸುಗಳೇ
ತನ್ನಿ,ತನ್ನಿ ಹೊಸತನವ ನನ್ನೆದೆಗೆ ....... ।।

ವಂದಿಸುವೆ ತಾಯಿಗೆ

ವಂದಿಸುವೆ ತಾಯಿಗೆ
ಗುರು ಹಿರಿಯರಿಗೆ ಗೌರವಿಸುವೆ||

ಕಲಿಯುವೆ ಅನವರತ
ಸತ್ಯನುಡಿಯ ಪರಿಪಾಲಿಸುವೆ||

ಒಳ್ಳೆಯದನ್ನೇ ಬಯಸುವೆ
ಒಳ್ಳೆಯದನ್ನೇ ಮಾಡುವೆ ಎಂದೆಂದಿಗೂ||

ಸಂಸ್ಕೃತಿಯ ಹಿರಿಮೆಯ ಸಾರುವೆ
ದೇಶಭಕ್ತಿಯ ಹೃದಯದಿ ಬಿತ್ತುವೆ||

ಎಲ್ಲರಲ್ಲೂ ಆ ದೇವನ ಕಾಣುವೆ
ಹೃದಯದಿ ಕರುಣೆಯ ಹಣತೆಯ ಹಚ್ಚುವೆ||

ಪ್ರಭುವೇ! ನಿನಗೆ ನನ್ನ ಸಮರ್ಪಣೆ
ಗುರು ಹಿರಿಯರ ತಾಯ್ನೆಲದ ಸೇವೆಗೆ ಈ ಜೀವ ಅರ್ಪಣೆ||

ಆಸ್ಫೋಟವಿದು

ಶೋಷಿತಳು ನಾನು.....
ಶೋಷಿತನು ನಾನು....
ಶತಶತಮಾನಗಳ ಒಳಬೇಗುದಿ!
ಅಲ್ಲಿ-ಇಲ್ಲಿ ಆಗೊಂದು-ಈಗೊಂದು ಪ್ರಕರಣಗಳು ಹೊರಬರುತ್ತಿತ್ತು
ಅಸಹಾಯಕರ ನೋವಿನ ಆಸ್ಫೋಟವಿದು
ಸೋಗು, ಮುಖವಾಡ ಹಾಕಿಕೊಂಡವರ ನಡತೆ ಬೆತ್ತಲಾಗಿದೆ ಇಂದು
ಚಳುವಳಿಯೆನ್ನಲೋ?
ಅಭಿಯಾನವೆನ್ನಲೋ?
ರಂಗನಾಟಕ ಮುಗಿದ ಮೇಲೆ
ಬಣ್ಣ ತೊಳೆಯುವ ತೆರದಿ
ಸಭ್ಯರ ಮುಖವಾಡ ಕಳಚುತ್ತಿದೆ
ಇದು ಇಂದು ನೆನ್ನೆಯ ಕಥೆಯಲ್ಲ
ಹೆಣ್ಣೊಬ್ಬಳ ಅಥವಾ ಗಂಡೊಬ್ಬನ
ಕಥೆಯಂತೂ ಅಲ್ಲವೇ ಅಲ್ಲ
ಬಲಾಢ್ಯ ರೆನಿಸಿಕೊಂಡವರು ತಮ್ಮ ಬಳಿ ಬಂದವರ ನಡೆಸಿಕೊಂಡ ಪರಿಯಿದು
ಅಂದು ಅಸಹಾಯಕತೆ ,ಅವಮಾನಗಳು ಮಡುಗಟ್ಟಿದ್ದವು
ಆದರೆ ಇಂದಲ್ಲ, ಆದದ್ದು ಆಯಿತು ಎಂದು ಸುಮ್ಮನಾಗಲು
ಕಾಲಗರ್ಭದೊಳ ಅಡಗಿಹ ನೋವು ತುಮುಲಗಳೆಲ್ಲಾ
ಇಂದು ದುತ್ತನೇ ಗೋರಿಯಿಂದೆದ್ದಿವೆ ಸಹನೆಯ ಕಟ್ಟೆಯೊಡೆದು
ಹೊರಬರಲಿ ಅಸಹಾಯಕ ನೋವುಗಳೆಲ್ಲಾ
ಭಸ್ಮಾಸುರನಂತಾಗಲಿ....
ಅಂದು ರಣಹದ್ದುಗಳಾಗಿ ಕಾಡಿದವರೆಲ್ಲಾ ಇಂದು
ಕಣ್ಣೀರು ಹರಿಸುವಂತಾಗಲಿ
ಕಟಕಟೆಗೆ ಬರಲಿ ಕಂಬಿಯ ಎಣಿಸಿ ಅವಮಾನದಿಂದ ಬೇಯಲಿ||

ಕೋಮಲ

ಕೋಮಲ ಹಾಗೂ ಮೃಧುವಾಗಿರು
ಸತ್ತವರು ಬಹು ಗಟ್ಟಿ ಹಾಗು ಗಡಸು।।

ಗಿಡ ಮರಗಳು ಕೋಮಲ ಹಾಗೂ ಮೃಧು
ಗಟ್ಟಿಯಾಗಿ ಒರಟಾಗುತ್ತವೆ ಜೀವ ಹೋದ ನಂತರ||

ಯಾರು ಗಟ್ಟಿ ಹಾಗೂ ಒರಟಾಗಿರುವರೋ
ಹೃದಯ ಹೀನರು ಇಲ್ಲವೇ ಸತ್ತವರು;
ಯಾರು ಕೋಮಲ ಹಾಗೂ ಮೃಧುವಾಗಿರುವರೋ
ಚೈತನ್ಯದ ಅಥವಾ ಜೀವಂತಿಕೆಯ ಗುರುತು||

ಗಟ್ಟಿ ಹಾಗೂ ಗಡಸುತನ ಮುರಿಯುತ್ತದೆ
ಕೋಮಲ ಹಾಗೂ ಮೃಧುತನ ಬಾಳುತ್ತದೆ ।।

ಪ್ರೇರಣೆ: ಲವೋ ತ್ಝು

ನಿನ್ನ ಒಲುಮೆ

ದೇವಾ!, ನಿನ್ನ ಒಲುಮೆ ಎಷ್ಟು ಸಿಹಿಯಾಗಿದೆ!
ಕತ್ತಲು ಹಗಲೆನ್ನದೆ ಸರ್ವದಾ ಕಾಯುತ್ತಿರುವೆ ನಮ್ಮನು;
ನಾವು ಎಲ್ಲೇ ಹೋದರು ಬಿಡದೆ ಹಿಂಬಾಲಿಸುವೆ ರಕ್ಷಕನಂತೆ;
ಎಷ್ಟೇ ತಲೆಹರಟೆ,ಕಿತಾಪತಿ ಮಾಡಿದರೂ ತಾಯಿಯಂತೆ ಸಲಹುವೇ;\\

ನಮ್ಮ ಎಷ್ಟೊಂದು ವ್ಯರ್ಥ ಆಲಾಪಗಳನ್ನೆಲ್ಲಾ ಆಲಿಸುವೆ;
ಎಲ್ಲಕ್ಕೂ ನಗುವಿನಲ್ಲೇ ನೀ ಉತ್ತರವೀಯುವೆ;
ಇಲ್ಲಿಯವರೆವಿಗೂ ನಮ್ಮ ತೊಂದರೆಗಳನ್ನೆಲ್ಲಾ ಸಹಿಸಿರುವೆ;
ಆದರೂ ಜೊತೆಗಿದ್ದು ದಾರಿ ತೋರುತ್ತಿರುವೆ ಸಿಹಿ ಮಾತಿಂದ;\\

ಮನವ ಕದ್ದ ಚೋರ

ನನ್ನೊಳಗಿನ ಮುಗ್ಧ ಮಗು ಎಲ್ಲಿ ಕಾಣೆಯಾಯಿತೋ?
ನಾನೂ ಹುಡುಕಾಡುತ್ತಿದ್ದೇನೆ, ಎಲ್ಲಿ ಹುಡುಕಲಿ?
ಇಲ್ಲೇ ಎಲ್ಲೋ ಈಗಲೇ ಬರುವನೆಂದು ಹೋದವನು,
ಮರಳಿ ಬರಲೇ ಇಲ್ಲ ಬಹುದಿನಗಳಾದವು ಅವನ ಕಂಡು\\

ಮುಗ್ದ ಹುಡುಗ ,ವಾಚಾಳಿ;
ಕೆನ್ನೆಯ ಮೇಲೆ ಚಂದದ ಚಂದ್ರಕುಳಿ ಮಾತನಾಡಿದರೆ;
ಕಣ್ಣುಗಳಲ್ಲಿ ಮಿಂಚು, ಅದೇನೋ ಸೆಳೆತವಿತ್ತು;
ಚೈತನ್ಯದ ಚಿಲುಮೆ,ಎಲ್ಲರ ಕಣ್ಮಣಿಯಾಗಿದ್ದ;\\

ಒಮ್ಮೆ ಅಳುತ್ತಿದ್ದ, ಕಂಗಳಲ್ಲಿ ನೀರು;
ಅವನ ಇತಿಹಾಸ ನನಗೇನು ತಿಳಿದಿಲ್ಲ;
ಬೆಳ್ಳಂಬೆಳಗ್ಗೆ ಬೆಳಕು ಮೂಡುತ್ತಿದ್ದಂತೆ ರವಿಯಂತೆ ಬರುತ್ತಿದ್ದ;
ಸಂಜೆ ತಿಳಿಕತ್ತಲಲ್ಲೇ ಕಾಣದಂತೆ ಜಾರಿಹೋಗುತ್ತಿದ್ದ;\\

ಅವನ ಹೆಸರು ನನಗೆ ತಿಳಿದಿಲ್ಲ, ಅನಾಮಧೇಯನೆ?
ಕಣ್ಣಮುಂದೆಯೇ ನಗುತ್ತಿದ್ದ ಜಾಣನಂತೆ;
ಕಾಲ ಚಕ್ರ ಉರುಳುವುದೇ ಗೊತ್ತಾಗಲಿಲ್ಲ;
ಯಾವಾಗ ಮಾಯವಾದನೋ ತಿಳಿದಿಲ್ಲ, ಮನವ ಕದ್ದ ಚೋರ;\\

ನಾನು ಬದಲಾಗಿದ್ದೇನೆ

ಮನದ ಮೂಲೆಯಲ್ಲಿ ಹಳೆಯ ಕತೆಗಳ ಮೂಟೆ;
ವರುಷಗಳ ನೋವು ನಲಿವುಗಳ ಕಂತೆಗಳು;
ಮೊನ್ನೆ ಏನನ್ನೋ ಹುಡುಕುವಾಗ ಗಾಳಿ ಸರಿಸಿತು ;
ಮನಸ್ಸು ದಗ್ಧವಾಯಿತು ಹಳೆಯದನ್ನು ನೆನೆದು;

ಕಠೋರತೆಯ ಮನಸ್ಸು ಬೇಡವೆಂದು ಬಿಸುಟಿತ್ತು;
ಕಣ್ಣಿಗೆ ಕಾಣದಂತೆ ಮೂಲೆಯಲ್ಲಿ ಅಡಗಿಸಿಟ್ಟಿದ್ದೆ;
ವರುಷಗಳ ನಂತರ ಮತ್ತೆ ಕಾಡುತ್ತಿದೆ ಅದ ಕಂಡು ;
ನಾನು ಮಾಗಿದ್ದೇನೆ ,ನಿನ್ನ ದಾಳಿಯ ಎದುರಿಸಬಲ್ಲೆ;

ವರುಷಗಳ ಹಿಂದೆ ನಿನ್ನ ದಾಳಿಗೆ ಹೆದರಿದ್ದೆ;
ಮನದ ನೆಮ್ಮದಿಯ ಹಾಳು ಮಾಡಿಕೊಂಡಿದ್ದೆ;
ನಿನ್ನಿಂದ ಬಹಳಷ್ಟು ಕಳೆದುಕೊಂಡೆ ಹಿಂದೆ;
ಆದರೆ ಹಿಂದಿನ ನಾನು ಬದಲಾಗಿದ್ದೇನೆ;

ನಿನ್ನ ದಾಳಿಯ ಕಂಡು ನಗು ಬರುತ್ತಿದೆ ;
ಇಂದು ಹೆದರುವವ ನಾನಲ್ಲ;
ನಾನು ಬದಲಾಗಿದ್ದೇನೆ ,ನೋವನುಂಡು;
ನಾನು ಬದಲಾಯಿಸುತ್ತೇನೆ ಎದೆಗುಂದದೆ;

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...