ಆಸ್ಫೋಟವಿದು

ಶೋಷಿತಳು ನಾನು.....
ಶೋಷಿತನು ನಾನು....
ಶತಶತಮಾನಗಳ ಒಳಬೇಗುದಿ!
ಅಲ್ಲಿ-ಇಲ್ಲಿ ಆಗೊಂದು-ಈಗೊಂದು ಪ್ರಕರಣಗಳು ಹೊರಬರುತ್ತಿತ್ತು
ಅಸಹಾಯಕರ ನೋವಿನ ಆಸ್ಫೋಟವಿದು
ಸೋಗು, ಮುಖವಾಡ ಹಾಕಿಕೊಂಡವರ ನಡತೆ ಬೆತ್ತಲಾಗಿದೆ ಇಂದು
ಚಳುವಳಿಯೆನ್ನಲೋ?
ಅಭಿಯಾನವೆನ್ನಲೋ?
ರಂಗನಾಟಕ ಮುಗಿದ ಮೇಲೆ
ಬಣ್ಣ ತೊಳೆಯುವ ತೆರದಿ
ಸಭ್ಯರ ಮುಖವಾಡ ಕಳಚುತ್ತಿದೆ
ಇದು ಇಂದು ನೆನ್ನೆಯ ಕಥೆಯಲ್ಲ
ಹೆಣ್ಣೊಬ್ಬಳ ಅಥವಾ ಗಂಡೊಬ್ಬನ
ಕಥೆಯಂತೂ ಅಲ್ಲವೇ ಅಲ್ಲ
ಬಲಾಢ್ಯ ರೆನಿಸಿಕೊಂಡವರು ತಮ್ಮ ಬಳಿ ಬಂದವರ ನಡೆಸಿಕೊಂಡ ಪರಿಯಿದು
ಅಂದು ಅಸಹಾಯಕತೆ ,ಅವಮಾನಗಳು ಮಡುಗಟ್ಟಿದ್ದವು
ಆದರೆ ಇಂದಲ್ಲ, ಆದದ್ದು ಆಯಿತು ಎಂದು ಸುಮ್ಮನಾಗಲು
ಕಾಲಗರ್ಭದೊಳ ಅಡಗಿಹ ನೋವು ತುಮುಲಗಳೆಲ್ಲಾ
ಇಂದು ದುತ್ತನೇ ಗೋರಿಯಿಂದೆದ್ದಿವೆ ಸಹನೆಯ ಕಟ್ಟೆಯೊಡೆದು
ಹೊರಬರಲಿ ಅಸಹಾಯಕ ನೋವುಗಳೆಲ್ಲಾ
ಭಸ್ಮಾಸುರನಂತಾಗಲಿ....
ಅಂದು ರಣಹದ್ದುಗಳಾಗಿ ಕಾಡಿದವರೆಲ್ಲಾ ಇಂದು
ಕಣ್ಣೀರು ಹರಿಸುವಂತಾಗಲಿ
ಕಟಕಟೆಗೆ ಬರಲಿ ಕಂಬಿಯ ಎಣಿಸಿ ಅವಮಾನದಿಂದ ಬೇಯಲಿ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...