ಬಾ ಎಂದು ಕರೆದರೂ ಬಳಿ ಬರಲಾರೆಯಾ,
ಬಂದೊಮ್ಮೆ ಮನವ ಸಂತೈಸಲಾರೆಯಾ|
ಭಾವಗಳ ಭಾರದಿ ಮನದಲ್ಲಿ ಹೊರೆ ಹೆಚ್ಚಿರಲು,
ಬಂದೊಮ್ಮೆ ಬೆನ್ನು ತಟ್ಟಿ ಚೈತನ್ಯ ತುಂಬಲಾರೆಯಾ||
ಚಿಂತೆಗಳು ಮನವನ್ನೇ ಆಕ್ರಮಿಸಿ ಹಿಂಸಿಸುತ್ತಿರಲು,
ಸಾಂತ್ವನವ ಹೇಳುವ ಹೃದಯವೊಂದು ಬೇಕೆನೆಗೆ|
ಜೀವನದ ಜಂಜಾಟದಲ್ಲಿ ಎಡವಿ ಬೀಳುತಿರಲು,
ಕೈ ನೀಡಿ ಸಹಕಾರ ನೀಡಬಯಸುವವ ಬೇಕೆನಗೆ||
ವಿರಹದಿ ಬಾಯಾರಿ ಚಿಂತೆಯಲಿ ಬೆಂದಿರಲು,
ಹಾಯೆನಿಸುವ ಕರುಣಾರಸವ ಹರಿಸು ಬಾ||
ಎದೆಯ ಮೇಲೆ ನೋವಿನ ಭಾರವ ಎಳೆದುಕೊಂಡಿರಲು,
ಸಾಂತ್ವನದ ನುಡಿಗಳ ಮೂಲಕ ಬೆಳಕ ಚೆಲ್ಲಿ ಕತ್ತಲ ಓಡಿಸು ಬಾ ।।
ಕಣ್ಣು ತೆರೆದಿದ್ದರೂ ಕತ್ತಲ ಪಟ್ಟಿ ಬಿಗಿದಿರಲು,
ಜ್ಞಾನ ದೀವಿಗೆಯ ತಂದು ಕೈ ಹಿಡಿದು ನಡೆಸು ಬಾ||
ಹೃದಯದಲಿ ಭಯದ ತೆರೆಯು ಮುಸುಕಿರಲು,
ಧೈರ್ಯ ತುಂಬಿ ಅಧೀರತೆಯ ಕಳೆಯೆ ಬಾ||
No comments:
Post a Comment