ಅದೇನೋ ನಾ ತಿಳಿಯೇ! ಕಡಲ ಸೇರುವಾಗ
ಹೃದಯ ಭಯದಿಂದ ಚಡಪಡಿಸುವುದು!
ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ,
ಪರ್ವತಗಳ ಶಿಖರದ ತುದಿಯಿಂದ ಮೊದಲುಗೊಂಡು
ಕಣಿವೆ, ಕಾನನ, ಕಲ್ಲು, ಮಣ್ಣು ಹಳ್ಳಿಗಳ ದಾಟಿ ಬರುವೆ;
ಮುಂದೆ ಕಾಣುತಿಹುದು,
ಕಣ್ಣು ಹಾಯಿಸಿದಷ್ಟೂ ಹಾಯುವ ಅಗಾಧ ಕಡಲು;
ಕಡಲ ಸೇರಲು ಹಾತೊರೆಯುತ್ತಾ ಹರಿದು ಬಂದವಳು;
ಕಡಲ ಕಂಡೊಡನೆಯೇ ನನ್ನತನವ ಕಳೆದುಕೊಂಡು
ಕಡಲೊಳಗೆ ಒಂದಾಗಿಬಿಡುವೆನೆಂದು ಭೀತಿ ತುಂಬಿದೆ;
ಹಿಂದೆ ಸರಿಯುವ ಮಾತೆಲ್ಲಿ?
ಬಂದ ದಾರಿಗೆ ಸುಂಕವಿಲ್ಲ;
ಮುಂದೆ ಹರಿಯುವುದ ಬಿಟ್ಟು ಬೇರೆ ದಾರಿಯಿಲ್ಲ;
ನಾವೆಲ್ಲರೂ ಅಷ್ಟೇ!, ಹೆಜ್ಜೆ ಇಟ್ಟವರು,
ಈ ಜೀವನ ಸಾಗರದಲ್ಲಿ ಮುಂದೆ ಅಡಿಯಿಟ್ಟವರು;
ಯಾರೂ ಹಿಂದೆ ಹೋಗಲಾರರು!, ಹೆಜ್ಜೆ ಮುಂದಿಟ್ಟಾಗಿದೆ;
ಕಡಲ ಸೇರುವುದು ಖಂಡಿತ, ಭಯ ಭೀತಿಯ ತೊರೆಯಬೇಕಷ್ಟೇ;
ಕಡಲ ಸೇರುವುದರಿಂದಲೇ ಭಯವ ನೀಗಿಸಬೇಕಿದೆ;
ಇರುವ ದಾರಿ ಒಂದೇ, ಅದೇ ಅಚಲ, ಅನಿವಾರ್ಯ;
ನಾನು ನಾನಾಗುವುದು, ಸಂಕುಚಿತತೆಯ ತೊರೆದು,
ಅನಂತನೊಳಗೆ ಅನಂತವಾಗುವುದೊಂದೇ ಮಾರ್ಗ;
ಅಣುವಿನ ಭಾವ ತೊರೆದು, ಅನಂತವಾಗುವುದೇ ಗುರಿ, ಹಂಬಲ;||
No comments:
Post a Comment