ಗುರಿಯ ತಲುಪಲು ನದಿಯಂತಾಗು,
ಕಲ್ಲು ಬಂಡೆಗಳ ಬಳಸುತ್ತಾ ನಿಲ್ಲದೆ ಮುನ್ನಡೆಯುತ್ತಿರು,
ವಿಸ್ತಾರವಾಗಿ ಹರಡಬೇಕೆಂದಾದರೆ ಅಂತರ್ಜಲವಾಗು,
ಬಿಸಿಲಬೇಗೆಗೆ ಬಳಲಬೇಡ ಆವಿಯಾಗು,
ಗಿರಿ ಕಂದರಗಳ ಭಯಬೇಡ,
ಜೋಗದ ಭೋರ್ಗೆರೆಯುವ ಜಲಪಾತವೇ ನೀ ಆಗು,
ನಿಲ್ಲಬೇಡ ನಿನ್ನ ಗುರಿಯ ತಲುಪುವವರೆಗೂ.
ನಿರ್ಲಿಪ್ತನಾಗು,
ಶಾಂತವಾಗು,
ಅವಶ್ಯಕತೆಗನುಗುಣವಾಗಿ ನಿನ್ನ ನೀ ಬದಲಿಸಿಕೋ,
ಧುಮ್ಮಿಕ್ಕುವ ಗಗನಚುಕ್ಕಿಯಾಗು,
ಕಲ್ಲುಬಂಡೆಗಳ ನಡುವೆ ನುಸುಳು, ಭರಚುಕ್ಕಿಯಾಗು,
ಮರಳ ಹರಳುಗಳ ನಡುವೆ ಭಟ್ಟಿಯಿಳಿ,
ನಿನ್ನ ಕಶ್ಮಲಗಳನೆಲ್ಲಾ ತೊಳೆದುಕೋ ,
ಮುಂದೆ ಹೋಗುವುದ ಮಾತ್ರ ನಿಲ್ಲಿಸದಿರು.
ಜೀವವಾಗು, ಜೀವವಾಹಿನಿಯಾಗು,
ತಪ್ಪಲುಗಳಲ್ಲಿ ಹರಿಯುತ್ತಾ ಜೀವ ಚೈತನ್ಯವ ತುಂಬು,
ಇಂದೋ, ನಾಳೆಯೋ ಭರವಸೆಯೊಂದು ಉಳಿದಿರಲಿ,
ಕಾಣದ ಗುರಿಯ ತಲುಪುವವರೆಗೂ ನಿಲ್ಲದಿರು,
ಓಡುವೆಯೋ!, ತೆವಳುವೆಯೋ?,
ನೀರವವಾಗಿ ಮುನ್ನಡೆಯುತ್ತಿರು ನಿಲ್ಲದೆ.
No comments:
Post a Comment