Saturday, August 30, 2025

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ,

ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ.

ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗಳು,

ಕೊಟ್ಟಿಹರೆನಗೆ ಆಶೀರ್ವದಿಸಿ ಅಜೇಯ ಆತ್ಮಶಕ್ತಿಯನ್ನು.

 

ಸನ್ನಿವೇಶ ಪ್ರತಿಕೂಲ ಪರಿಸ್ಥಿತಿಗಳ ಒತ್ತಡದಲ್ಲಿಯೂ,

ಎದೆಗುಂದಲಿಲ್ಲ ಅಥವಾ ಅಸಹಾಯಕನಾಗಿ ಅಳಲಿಲ್ಲ ನಾನು.

ಅವಕಾಶದಲೆಗಳ ಹೊಡೆತಕ್ಕೆ ನಲುಗಿದೆ ಬಳಸಿಕೊಳ್ಳಲಾಗದೆ,

ಯೋಚನೆ,ಚಿಂತೆ ನೂರಾರು ತಲೆಯಲ್ಲಿ, ಎದೆಗುಂದಲಿಲ್ಲ ನಾನು.

 

ಪರಾಜಯ, ಅವಮಾನಗಳ ಸಮಯದಲ್ಲಿ,

ಅಸಹಾಯಕತೆ ಮೈ-ಮನಗಳ ಕಟ್ಟಿಹಾಕಿದೆ.

ಇನ್ನೂ ಹಲವು ವರುಷಗಳ ಹಾದಿ ಬಾಕಿಯಿದೆ,

ನನ್ನ ನಾನು ಕಂಡುಕೊಳ್ಳಲು ಧೈರ್ಯಗೆಡದೆ ನಡೆಯಬೇಕಿದೆ.

 

ನನ್ನ ದಾರಿ ಎಷ್ಟು ನೆರವಾಗಿದೆಯೆಂಬುದು ಮುಖ್ಯವಲ್ಲ,

ಹಾದಿಯಲ್ಲಿ ನಡೆವಾಗ ಎಷ್ಟು ಅನುಭವ ಪಡೆದೆನೆಂಬುದು ಸತ್ಯ.

ನನ್ನ ಗುರಿಗೆ ನಾನೇ ಕಾರಣ, ಬೇರೆ ಯಾರ ಹೀಗೆಳೆಯಲಿ,

ಅವರದಲ್ಲ ತಪ್ಪು, ನಾನು ನಡೆದದ್ದೇ ಹಾದಿ, ನನಗೆ ನಾನೇ ನಾಯಕ.

ದೀಪದ ನೆನಪು

ಇಷ್ಟು ದಿವಸ ಬೆಳಕು ನೀಡಿದ ದೀಪವೊಂದು,

ಈಗ ತಾನೇ ಆರಿದೆ.

ತನ್ನ ಕೆಲಸ ಮುಗಿಯಿತೆಂದು ಹೊರಟಿದೆ.

ಎಂಥ ಚಂದದ  ಬೆಳಕು,

ಎಂಥ ಚಂದದ ದೀಪ,

ಇಷ್ಟು ಬೇಗ ಆರಿತಾದರೂ ಏಕೆ?

ಕಾರಣ ತಿಳಿಯದಾಗಿದೆ!.

ಮತ್ತೆ ದೀಪ ಹಚ್ಚಲಾಗದು!

ಹೊಸ ದೀಪ,

ಹೊಸ ಬತ್ತಿ,

ತರುವುದೆಂತು?, ಕಾಯಬೇಕಿದೆ.

ಹಳೆಯ ದೀಪ, ಎಂಥ ಭಾಂದವ್ಯ!,

ಎಷ್ಟು ವಾತ್ಸಲ್ಯ!,

ಎಷ್ಟು ಮಮಕಾರ!,

ಎಲ್ಲವ ಬಿಟ್ಟು,

ಎಲ್ಲಾ ಸಂಬಂಧಗಳ ಕಳಚಿ.

ಮುಗಿಯಿತು ಆಟವೆಂದು ತೆರಳಿದೆ.

ಇನ್ನು ನೆನಹು ಮಾತ್ರ,

ದೀಪದ ನೆನಪು,

ಬೆಳಕ ನೆನಪು ಮಾತ್ರ,

ಮುಂದಿನ ಬಾಳ ಯಾತ್ರೆಗೆ.

ಎದೆಯೊಳಗಿನ ಭಯ

ನನ್ನ ಇಷ್ಟಪಡದ ಯಾವುದೋ ಒಂದು ವಿಷಯವಿದೆ,

ಹೆಪ್ಪುಗಟ್ಟಿದ ಎದೆಯ ನೋವು ನನ್ನ ಕೆಳಗೆ ಎಳೆಯುತ್ತಿದೆ,

ಸೂರ್ಯನ ಬಿಸಿಲಿಗೆ ಎದೆಯ ತೆರೆದು ನೋವು ಹಾರಿಹೋಗಲೆಂದು,

ಬಿಸಿಲಿಗೆ ಮೈಯೊಡ್ಡಿ ಬೆತ್ತಲಾಗಿ ನಿಂತಿರುವೆ ಹಾರಿಹೋಗು, ಹೋಗು.

 

ನಾನೊಂದು ಬೇಟೆಗೆ ಹೊರಟಿದ್ದೆ, ಜಿಂಕೆಯೊಂದನು ಸೆರೆಹಿಡಿಯಲು,

ಕಾಡಿನೊಳಗೆ ಒಳಹೊಕ್ಕು ಬೆದರಿದೆ ಬಂದ ದಾರಿ ಕಾಣದೆ,

ಹಕ್ಕಿಗಳಿಂಚರ, ತಂಪಾದ ಗಾಳಿ ಹಣೆಯ ಮೇಲೆ ಬೆವರಿಳಿಸಿದೆ,

ಬಂದುದನೆ ಮರೆತಿದ್ದೆ, ಬೆದರಿದ್ದೆ, ಬೆವತಿದ್ದೆ, ಕೊರಗಿದೆ.

 

ತಲೆಮರೆಸಿಕೊಂಡೆ, ಎದೆಯೊಳಗಿನ ಭಯಗಳಿಗೆ ಸೋತು ಕೂತೆ,

ಅಲ್ಲೇ ಇದ್ದ ಕಲ್ಲೊಂದರ ಮೇಲೆ ಹಾಗೇ ಕೂತೆ ಬೇಸರವ ಕಳೆಯಲು,

ಕಾಡಿಗೆ ವಸಂತ ಬಂದನೆಂದು ಕೇಳಿದ್ದೆ, ಎಲ್ಲಿರುವನೆಂದು ಹುಡುಕಿದೆ,

ಎಲ್ಲಿ ಕಾಣುವೆನೆಂದು ಕಾಣುವ ಬೆದರಿದ ಬೆಟ್ಟವ ನೋಡುತ್ತಾ ಕುಳಿತೆ.

ಮನದ ಪಯಣ

ಒಲುಮೆಯಿಂದ ಹಾರೈಸು,

ಬಾಳು ಬೆಳಗಲೆಂದು.

ಹಾತೊರೆಯುವ ಮನಕೆ,

ದೀವಿಗೆಯಾಗಲಿ ನಿನ್ನ ಹಾರೈಕೆ.

 

ಸೋತು ಬಳಲಿ ಬೆಂಡಾಗಿರಲು,

ಸಾಂತ್ವನದ ಮಾತುಗಳು ಬೇಕಾಗಿದೆ.

ಹಾರೈಸುವ ಮನಗಳ ಮಾತು,

ಕೇಳಲು ಬಯಸುವುದು ಹೃದಯ.

 

ಕೋಪ,ತಾಪ, ಸಿಟ್ಟು, ಸೊಡರುಗಳು,

ಮನವ ಆವರಿಸಿರಲು ದಿಕ್ಕುಗಾಣದಾಗಿದೆ.

ಆಸರೆ, ಆಶ್ರಯವು ಅಗತ್ಯವಾಗಿರಲು,

ಯಾರ ಬಳಿ ತೆರಳಿ ಶಾಂತಿಗಾಣುವುದೋ.

 

ಕಾಲ ಉರುಳಿತು ಮಾಸಿ ಗಾಯಗಳ,

ಮುಂದೆ ಸಾಗಬೇಕು ಎಲ್ಲಾ ಮರೆತು.

ಕಾಣುವುದು ಬಹಳಿದೆ ಬದುಕಿನಲಿ,

ಸಂಕಷ್ಟಗಳಿಗೆ ಮುರುಟದಿರು ಮನವೇ!.

 

ನಮ್ಮ ಸಮಯ ಕಾದಿದೆ,

ಕುತೂಹಲದಿ ಸಾಗಬೇಕಿದೆ.

ತವಕವಿದೆ ಸಂತೋಷ ಕಾಣಲು,

ಪಯಣದ ಹೆಜ್ಜೆ, ಗುರಿಯ ತಲುಪಬೇಕಷ್ಟೇ.

Tuesday, August 26, 2025

ನದಿಯಂತಾಗು!

ಗುರಿಯ ತಲುಪಲು ನದಿಯಂತಾಗು,

ಕಲ್ಲು ಬಂಡೆಗಳ ಬಳಸುತ್ತಾ ನಿಲ್ಲದೆ ಮುನ್ನಡೆಯುತ್ತಿರು,

ವಿಸ್ತಾರವಾಗಿ ಹರಡಬೇಕೆಂದಾದರೆ ಅಂತರ್ಜಲವಾಗು,

ಬಿಸಿಲಬೇಗೆಗೆ ಬಳಲಬೇಡ ಆವಿಯಾಗು,

ಗಿರಿ ಕಂದರಗಳ ಭಯಬೇಡ,

ಜೋಗದ ಭೋರ್ಗೆರೆಯುವ ಜಲಪಾತವೇ ನೀ ಆಗು,

ನಿಲ್ಲಬೇಡ ನಿನ್ನ ಗುರಿಯ ತಲುಪುವವರೆಗೂ.

 

ನಿರ್ಲಿಪ್ತನಾಗು, ಶಾಂತವಾಗು,

ಅವಶ್ಯಕತೆಗನುಗುಣವಾಗಿ ನಿನ್ನ ನೀ ಬದಲಿಸಿಕೋ,

ಧುಮ್ಮಿಕ್ಕುವ ಗಗನಚುಕ್ಕಿಯಾಗು,

ಕಲ್ಲುಬಂಡೆಗಳ ನಡುವೆ ನುಸುಳು, ಭರಚುಕ್ಕಿಯಾಗು,

ಮರಳ ಹರಳುಗಳ ನಡುವೆ ಭಟ್ಟಿಯಿಳಿ,

ನಿನ್ನ ಕಶ್ಮಲಗಳನೆಲ್ಲಾ ತೊಳೆದುಕೋ ,

ಮುಂದೆ ಹೋಗುವುದ ಮಾತ್ರ ನಿಲ್ಲಿಸದಿರು.

 

ಜೀವವಾಗು, ಜೀವವಾಹಿನಿಯಾಗು,

ತಪ್ಪಲುಗಳಲ್ಲಿ ಹರಿಯುತ್ತಾ ಜೀವ ಚೈತನ್ಯವ ತುಂಬು,

ಇಂದೋ, ನಾಳೆಯೋ ಭರವಸೆಯೊಂದು ಉಳಿದಿರಲಿ,

ಕಾಣದ ಗುರಿಯ ತಲುಪುವವರೆಗೂ ನಿಲ್ಲದಿರು,

ಓಡುವೆಯೋ!, ತೆವಳುವೆಯೋ?,

ನೀರವವಾಗಿ ಮುನ್ನಡೆಯುತ್ತಿರು ನಿಲ್ಲದೆ. 

Sunday, August 24, 2025

ಮನದೊಳಗಿನ ಯುದ್ಧ

ಮನದೊಳು ನಡೆಯುತ್ತಿದೆ ನೂರು ಕದನ

ಹೋರಾಡುತ್ತಲೇ ಇದ್ದೇನೆ ದಶಕಗಳಿಂದ

ಮತ್ತೆ ಮತ್ತೆ ಮನಸ್ಸು ಜರ್ಜರಿತ

ಒಂದು ಅವಕಾಶ!,

ಮತ್ತೊಂದು ಪುಳಕ!,

ಸೋತು ನೀರಾಗಿಲ್ಲ ನಾನು!

ನಿರಾಶಾವಾದಿಯೂ ಅಲ್ಲ,

ಸೋತೆನೇದು ಫಲಾಯನಗೈವುದೂ ಇಲ್ಲ,

ಪ್ರಯತ್ನ ನಿರಂತರ ಉಸಿರು ನಿಲ್ಲುವವರೆಗೂ ।।

Friday, August 22, 2025

ಸಾಂತ್ವನದ ಬೆಳಕು

ಬಾ ಎಂದು ಕರೆದರೂ ಬಳಿ ಬರಲಾರೆಯಾ,

ಬಂದೊಮ್ಮೆ ಮನವ ಸಂತೈಸಲಾರೆಯಾ|

ಭಾವಗಳ ಭಾರದಿ ಮನದಲ್ಲಿ ಹೊರೆ ಹೆಚ್ಚಿರಲು,

ಬಂದೊಮ್ಮೆ ಬೆನ್ನು ತಟ್ಟಿ ಚೈತನ್ಯ ತುಂಬಲಾರೆಯಾ||

 

ಚಿಂತೆಗಳು ಮನವನ್ನೇ ಆಕ್ರಮಿಸಿ ಹಿಂಸಿಸುತ್ತಿರಲು,

ಸಾಂತ್ವನವ ಹೇಳುವ ಹೃದಯವೊಂದು ಬೇಕೆನೆಗೆ|

ಜೀವನದ ಜಂಜಾಟದಲ್ಲಿ ಎಡವಿ ಬೀಳುತಿರಲು,

ಕೈ ನೀಡಿ ಸಹಕಾರ ನೀಡಬಯಸುವವ ಬೇಕೆನಗೆ||

 

ವಿರಹದಿ ಬಾಯಾರಿ ಚಿಂತೆಯಲಿ ಬೆಂದಿರಲು,

ಹಾಯೆನಿಸುವ ಕರುಣಾರಸವ ಹರಿಸು ಬಾ||

ಎದೆಯ ಮೇಲೆ ನೋವಿನ ಭಾರವ ಎಳೆದುಕೊಂಡಿರಲು,

ಸಾಂತ್ವನದ ನುಡಿಗಳ ಮೂಲಕ ಬೆಳಕ ಚೆಲ್ಲಿ ಕತ್ತಲ ಓಡಿಸು ಬಾ ।।

 

ಕಣ್ಣು ತೆರೆದಿದ್ದರೂ ಕತ್ತಲ ಪಟ್ಟಿ ಬಿಗಿದಿರಲು,

ಜ್ಞಾನ ದೀವಿಗೆಯ ತಂದು ಕೈ ಹಿಡಿದು ನಡೆಸು ಬಾ||

ಹೃದಯದಲಿ ಭಯದ ತೆರೆಯು ಮುಸುಕಿರಲು,

ಧೈರ್ಯ ತುಂಬಿ ಅಧೀರತೆಯ ಕಳೆಯೆ ಬಾ||

ಕೊಳಲ ನೃತ್ಯ

  ನೋವು ಏಕೋ?

ಮತ್ತೆ ಮತ್ತೆ ನುಸುಳುತ್ತಿದೆ;

ಬೇರೆ ದಾರಿ ಕಾಣದೆ,

ನನ್ನನೇ ಹುಡುಕಿ ಬರುತ್ತಿದೆ ಮಾಧವ ||

 

ಮನಸ್ಸು ನೋವು!

ನೋವು ಮನಸ್ಸು!

ಮನದೊಳಗೆ ಸೇರಿ ಬೆರೆತಿದೆ,

ಕೊಳಲ ನುಡಿಸು ಮಾಧವ||

 

ಕೊಳಲ ದನಿ ಕೇಳುತಿರಲು

ಮನದ ನೋವು ಕರಗುವುದು|

ಒಲವ ಬಳಸಿ ಸೇರುತಿರಲು

ಮನವು ತಕಥೈ ಮಾಧವ||

 

ನಾದವು ಹೊಮ್ಮುತಿರಲು

ಜೀವ ಬಿಡದು ಸುಖವನು|

ನಾದದಲ್ಲಿ ತೇಲುತಿರಲು

ನೋವು ಸುಖವೇ ಮಾಧವ ||

 

ಗಾಳಿಯಲ್ಲಿ ತೇಲಿ ಬರುವುದು

ನಿನ್ನ ಕೊಳಲ ಗಾನ|

ವಿರಹದಿ ಕಾಯುತಿಹೆನು

ನಿನ್ನ ಒಲವ ಕಾಣಲು ಮಾಧವ ||

Sunday, August 17, 2025

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ;

ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ;

ಕಣ್ಣ ತೆರೆದರೂ ಅದೇ!

ಕಣ್ಣು ಮುಚ್ಚಿದರೂ ಅದೇ!

ರುದ್ರ ನರ್ತನಗೈದು ಭಯವನೇ ಬಿತ್ತುತ್ತಿದೆ;

ನೂರು ಆಲೋಚನೆಗಳ ಹುಟ್ಟು ಹಾಕಿದೆ;

ಮನದಲ್ಲಿ ನೂರು ಭಾವಗಳ ಬಿತ್ತಿದೆ;

ಎದುರಿಸಲೋ! ಇಲ್ಲ ಶರಣಾಗಲೋ!

ಭಾವಗಳ ಹೊಡೆತಕ್ಕೆ ತಲೆಬಾಗಲೋ!

ಇಕ್ಕಟ್ಟಿಗೆ ಸಿಲುಕಿ ಹೊರಟುಹೋದೆ ನೀನು;

ಕಣ್ಣ ತೆರೆದರೂ ನೀನೇ!

ಕಣ್ಣು ಮುಚ್ಚಿದರೂ ನೀನೇ!

ಬೆದರಿ ಬೆವತಿಹೆನು ಮನದಲ್ಲೇ!

ಮುಕ್ತನಾಗ ಬಯಸಿಹೆನು ಇಲ್ಲೇ!

ಭಾವದಲೆಗಳ ನುಂಗಿ, ಆಲೋಚನೆಗಳ ಬದಿಗೊತ್ತಿ,

ಶಾಂತತೆಯ ಕಡಲಾಗ ಬಯಸಿಹೆನು ನಿಲ್ಲೇ!।।

Saturday, August 16, 2025

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ! ಕಡಲ ಸೇರುವಾಗ

ಹೃದಯ ಭಯದಿಂದ ಚಡಪಡಿಸುವುದು!


ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ,

ಪರ್ವತಗಳ ಶಿಖರದ ತುದಿಯಿಂದ ಮೊದಲುಗೊಂಡು

ಕಣಿವೆ, ಕಾನನ, ಕಲ್ಲು, ಮಣ್ಣು ಹಳ್ಳಿಗಳ ದಾಟಿ ಬರುವೆ;


ಮುಂದೆ ಕಾಣುತಿಹುದು,

ಕಣ್ಣು ಹಾಯಿಸಿದಷ್ಟೂ ಹಾಯುವ ಅಗಾಧ ಕಡಲು;

ಕಡಲ ಸೇರಲು ಹಾತೊರೆಯುತ್ತಾ ಹರಿದು ಬಂದವಳು;

ಕಡಲ ಕಂಡೊಡನೆಯೇ ನನ್ನತನವ ಕಳೆದುಕೊಂಡು

ಕಡಲೊಳಗೆ ಒಂದಾಗಿಬಿಡುವೆನೆಂದು ಭೀತಿ ತುಂಬಿದೆ;

 

ಹಿಂದೆ ಸರಿಯುವ ಮಾತೆಲ್ಲಿ?

ಬಂದ ದಾರಿಗೆ ಸುಂಕವಿಲ್ಲ;

ಮುಂದೆ ಹರಿಯುವುದ ಬಿಟ್ಟು ಬೇರೆ ದಾರಿಯಿಲ್ಲ;

 

ನಾವೆಲ್ಲರೂ ಅಷ್ಟೇ!, ಹೆಜ್ಜೆ ಇಟ್ಟವರು,

ಜೀವನ ಸಾಗರದಲ್ಲಿ ಮುಂದೆ ಅಡಿಯಿಟ್ಟವರು;

ಯಾರೂ ಹಿಂದೆ ಹೋಗಲಾರರು!, ಹೆಜ್ಜೆ ಮುಂದಿಟ್ಟಾಗಿದೆ;

ಕಡಲ ಸೇರುವುದು ಖಂಡಿತ, ಭಯ ಭೀತಿಯ ತೊರೆಯಬೇಕಷ್ಟೇ;

ಕಡಲ ಸೇರುವುದರಿಂದಲೇ ಭಯವ ನೀಗಿಸಬೇಕಿದೆ;

ಇರುವ ದಾರಿ ಒಂದೇ, ಅದೇ ಅಚಲ, ಅನಿವಾರ್ಯ;

ನಾನು ನಾನಾಗುವುದು, ಸಂಕುಚಿತತೆಯ ತೊರೆದು,

ಅನಂತನೊಳಗೆ ಅನಂತವಾಗುವುದೊಂದೇ ಮಾರ್ಗ;

ಅಣುವಿನ ಭಾವ ತೊರೆದು, ಅನಂತವಾಗುವುದೇ ಗುರಿ, ಹಂಬಲ;||

Thursday, August 14, 2025

ಅಪರಿಚಿತ ಅತಿಥಿ

 ಬಾ,   ಅಪರಿಚಿತ ಅತಿಥಿ

ಭಯಬೇಡ ಅಪಾಯವಿಲ್ಲಿಲ್ಲ,

ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು

ಬಾ, ಹಾಡು ಬಾ ವಸಂತಗೀತೆ ।।

 

ಚಳಿಗಾಳಿ ಹೆದರಿ ಓಡಿಹೋಗಿದೆ

ಸುಮಗಳರಳಿ  ಸುವಾಸನೆ ಬೀರಿದೆ,

ಬಾ ಅತಿಥಿಯೇ! ನೀನಿಲ್ಲಿಯೆ ನೆಲೆಸು,

ಬಾ, ಹಾಡು ಬಾ ಭಾವಗೀತೆ ।।

Sunday, August 10, 2025

ಅವನು, ನಾನು – ಸಂಗೀತ

 ನಾನು ವೀಣೆ,

ಅವನು ವೈಣಿಕ,

ಸಂಗೀತವೇ ನಮ್ಮ ಜೀವನ||

 

ನಾನು ಜೀವ,

ಅವನು ದೈವ,

ಹೊಮ್ಮಲಿ ಗಂಧರ್ವ ಗಾನ।।

 

ನಾನು ದಾರಿ,

ಅವನೇ ಗುರಿ,

ನಡೆವ ಹಾದಿಯೇ ಸ್ವರ್ಗ||

 

ನಾನು ನಿಮಿತ್ತ,

ಅವನು ಅನಂತ,

ಅವನೇ  ಅಂತಿಮ ಗುರಿ||

 

ನಾನು ಅವನ ಇರುವಿಕೆಗೆ ಅಕ್ಷಿ,

ಅವನು ನನ್ನ ಇರುವಿಕೆಗೆ ಸಾಕ್ಷಿ||

Saturday, August 9, 2025

ಮೌನದೊಳಗಿನ ಕವಿತೆ

 ಏಕೆ ಗೊಂದಲವೋ?

ಮೌನವಾಗಿರುವಾಗ!

ಕವಿತೆ ಬರೆವಾಗಲೂ!

ಯೋಚಿಸಿದೆ ಸತತವಾಗಿ

ಎಲ್ಲಾ ಕೋನ, ಕೊನರುಗಳಿಂದ

ಸ್ಪಷ್ಟಚಿತ್ರ ಮನದಲ್ಲಿ ಮೂಡಲೆಂದು.

ದಾರಿ ಸ್ಪಷ್ಟವಾಗಿದೆಯೆಂದು

ಹೆಜ್ಜೆಯಿಟ್ಟೆ ಗುರಿಯ ಕಡೆಗೆ

ಆದರೆ ದಾರಿ ನನ್ನದಾಗಿರಲಿಲ್ಲ.

ಏನೋ ಅಂದುಕೊಂಡೆ, ಆದದ್ದೇನೋ!

ಗೊಂದಲದ ಗೂಡಾಗಿದೆ

ತಿಮಿರದ ಮನೆಯಾಗಿದೆ

ಮನ ಅಸ್ಪಷ್ಟ ಚಿತ್ರ ಕೂಟ

ಕವಿತೆಯಾಗಿದೆ ಮನದ ಭಾವವೆಲ್ಲಾ

ಬಿಡಲಾರೆ, ತೊರೆಯಲಾರೆ

ಜೊತೆಗೆ ನಡೆಯುವೆ,

ಮೌನವಾಗಿರುವಾಗಲೂ .......

ಕವಿತೆ ಬರೆವಾಗಲೂ ......

Friday, August 8, 2025

ಅವ್ಯಕ್ತ

 ಬೆಳಕನು ನುಂಗುತ್ತಾ,

ಕತ್ತಲೆಯು  ಎಲ್ಲೆ ಮೀರಿತ್ತು!,

ಕಾಡು ನಾಡೆನ್ನದೆ,

ಎಲ್ಲವ  ಬಳಸಿ ಆವರಿಸಿತ್ತು,

ಮೌನವು ಎಲ್ಲೆಡೆ

ಸಂತಸದಿ ತಾ ಮಾತನಾಡಿತ್ತು,

ಕತ್ತಲೊಳು ಎಲ್ಲವೂ  ಲಯವಾದುವು,

ಇಹ ಪರಗಳು ಎರಡೂ ಒಂದಾದುವು,

ಮನದೊಳು ಎದ್ದ ಭಾವದಲೆಗಳು,

ಧ್ಯಾನದಿ ಅವುಗಳ ನುಂಗಿತ್ತು.||  

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...