ನಾವು ಹೇಗೆ ಗೆಳೆತನದಲ್ಲಿ ಸಿಲುಕಿದೆವೋ ನಾ ಕಾಣೆ;
ಹೇಗೆ, ಯಾವಾಗ ಸ್ನೇಹಕಾಲದಲ್ಲಿ ಸಂಧಿಸಿದೆವು?
ಐವತ್ತು ವಸಂತಗಳು ಹಾದುಹೋಗಿವೆ – ಸುಂದರ ದಿನಗಳು!
ಇಂದೇ ನಾವು ಭೇಟಿಯಾದಂತೆ ಅನಿಸುತ್ತಿದೆ – ಸುಂದರ ಮನಸುಗಳು.
ಕಾಲಘಟ್ಟದಲ್ಲಿ ಗೆಳೆತನದ ಸೊಬಗ ಸವಿದಿದ್ದೇವೆ – ರಸ ಗಳಿಗೆಗಳು;
ನೀನು ಇನ್ನೂ ಚಿಕ್ಕವನಂತೆ ಕಾಣುವೆ – ಗಡ್ಡ ಮೀಸೆ ತೆಗೆದರೆ!
ಬ್ಯಾಟು ಕೈಯಲ್ಲಿ ಹಿಡಿದರೆ – ನಿನ್ನ ತಡೆವರು ಯಾರು?
ನನ್ನ ಕಪಿಲ್ ನೀನು – ವಿಕೆಟ್‌ಗಳು
ತರೆಗೆಲೆಗಳಂತೆ ಬೀಳುವುವು.
ನೀನು ಸ್ಲಿಮ್ ಹುಡುಗನಂತೆ ಕಾಣುವೆ – ಹೊಟ್ಟೆಬೊಜ್ಜು ಕರಗಿಸಿದರೆ;
ಥೇಟ್ ರಾಜಕುಮಾರ ನೀನು – ತಲೆಗೂದಲಿಗೆ ಕಪ್ಪು ಬಣ್ಣ ಬಳಿದರೆ!
ಇಂದಿಗೂ ನೀನು – ಹರೆಯದ ಹುಡುಗಿಯರ ನಿದ್ದೆ ಕೆಡಿಸುವ ಕ್ರಶ್;
ನಿನ್ನ ಮಾತುಗಳಿಗೆ ಸೋಲುವವರು – ಈಗಲೂ ಇದ್ದಾರೆ.
ನಿನ್ನ ಹೊಟ್ಟೆಬಾಕತನ ಹಾಗೇ ಇದೆ – ಜಾಮೂನು ನಿನ್ನ ಪ್ರಾಣ!
ಆದರೂ ಮಾತ್ರೆಗಳಿಲ್ಲದೆ ನಿನಗೆ ನಿದ್ದೆ ಹತ್ತಿರ ಬಾರದು;
ಗಟ್ಟಿ ಹೃದಯ ನಿನ್ನದು – ಆಗಿದೆ ಆಂಜಿಯೋಪ್ಲಾಸ್ಟಿ ಎರಡು ಸಾರಿ!
ಎಲ್ಲವನ್ನೂ ನೋಡಿದೆ ಈ ಜೀವ – ಇನ್ನೇನು ಬೇಕು?
ಬಾ ಗೆಳೆಯ – ಬಿಸಿ ಬಿಸಿ ಕಾಫಿ ಕುಡಿಯೋಣ;
ಮತ್ತೊಮ್ಮೆ – ಜೀವನವನ್ನು ಸವಿಯೋಣ!
No comments:
Post a Comment