ಹೇ ಗೆಳೆಯ, ನಿನ್ನ ಜೊತೆಗೂಡಿ ಆಡಿದ ಆ ಧೂಳು ಎಲ್ಲಿಹುದು?
ಮಣ್ಣಿನಲಿ ನಗು, ಆಟ, ಹಬ್ಬ, ಎಲ್ಲಾ ಮರೆಯಾಗಿವೆ.
ಮತ್ತೆ ಆ ಮಣ್ಣಲ್ಲಿ ಜೊತೆಗೂಡಿ ಆಡೋಣವೆಂದರೆ,
ಸಮಯವೇ ಇಲ್ಲ, ಬದುಕು ಗಡಿಬಿಡಿಯಲಿ ಸೆರೆಯಾಗಿದೆ.
ಧೂಳು, ಕೆಮ್ಮು, ಕೋಪ-ತಾಪ, ಹುರುಪಿನ ಮಾತು,
ಗುನುಗಿದಂತಿದೆ, ಹೃದಯದೊಳಗೆ ಪ್ರತಿಧ್ವನಿಸುತ್ತಿದೆ.
ಜೀವನದ ಹಾದಿಯಲ್ಲಿ ಸೋತು ನಿಂತಾಗ,
ಆ ಮಾತು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
ಶಾಲೆಯ ಕಿಟಕಿಯಿಂದ ಫಲಿತಾಂಶ ನೋಡಿದ ಕ್ಷಣ,
‘ಪಾಸಾದೆ! ಪಾಸಾದೆ!’ ಎಂದು ಕೂಗಿದ ಆ ಕ್ಷಣ ನೆನಪಿದೆಯಾ?
ಡಿಸೆಂಬರ್ ಚಳಿಯಲ್ಲಿ ಮಾಳಿಗೆಯ ಮೇಲೆ ತೂಕಡಿಸಿ ಓದಿದ ರಾತ್ರಿ,
ಮಾರನೆಯ ದಿನ, ಜ್ಞಾಪಕ ತಪ್ಪಿ ತೊಳಲಾಟದ ಆ ಕ್ಷಣಗಳು!
ಇಂದಿಗೂ ಆ ದಿನಗಳನ್ನು ನೆನೆದರೆ ಕಂಗಳು ತೇವವಾಗುತ್ತವೆ,
ಮತ್ತೆ ಬಾರದು ಆ ಬಂಗಾರದ ದಿನಗಳು, ಹೌದು?
ಆಕಸ್ಮಿಕವಾಗಿ ಜೀವನದ ಪಯಣದಲ್ಲಿ ಜೊತೆಗೂಡಿ ನಲಿದೆವು,
ಯಾವ ನಿಲ್ದಾಣದಲ್ಲಿ ಹತ್ತಿದ್ದೆವೋ, ಹಾಗೆ ನಮ್ಮ ಪಯಣ ನಮ್ಮದೇ.
ನವ ಸಂವತ್ಸರಗಳು ಕಣ್ಣ ಮುಂದೆಯೇ ಹಾದುಹೋಗಿವೆ,
ಆ ದಿನಗಳು ಮತ್ತೆ ಎಂದೂ ಬಾರವು.
ಅನುಭವಗಳೆಲ್ಲಾ ನಮ್ಮ ಇಂದಿನ ಚೈತನ್ಯವಾಗಿದೆ,
ಮತ್ತೆ ಬರಲಿ ಆ ಬಂಗಾರದ ಆ ದಿನಗಳು.
No comments:
Post a Comment