Friday, September 26, 2025

ಸ್ನೇಹ ಅಮರ, ಸ್ನೇಹ ಶಾಶ್ವತ

 

ಸ್ನೇಹದ ಆರಂಭ ವಿಚಿತ್ರ ಪರಿಚಯದಿಂದ

ಶಿಫಾರಸ್ಸಿನಿಂದಲ್ಲ, ನಿಜದ ಒಡನಾಟದಿಂದ

 

ಎರಡು ಜೀವ, ಗೆಳೆತನದ ಪಯಣ

ಕಷ್ಟ ನೋವುಗಳ ನಡುವೆ ಹೆಜ್ಜೆ ಹಾಕುವವ

 

ಗೆಳೆಯ ಗೆಳೆತನಕ್ಕೆ ಯಾವಾಗಲೂ ಮೊದಲು

ಎಲ್ಲವನ್ನೂ ಮೀರುವ ನಡೆ -ಗೆಳೆತನ

 

ಸುಳ್ಳು,ದ್ವೇಷ,ದ್ರೋಹಗಳ ವಿರುದ್ಧ

ನಿಜವಾದ ಸ್ನೇಹ ತಡೆಗೋಡೆಯಂತೆ

 

ದಾರಿತಪ್ಪಿ ನಡೆವವರು ಹಲವರು

ಸ್ನೇಹದ ಕಡಲಲ್ಲಿ ಹಾಯುವವರು ನೂರು

 

ಸ್ನೇಹ ಅಮರ, ಸ್ನೇಹ ಶಾಶ್ವತ

ಅಮೂಲ್ಯ ಗೆಳೆತನ

 

ಗೆಳೆಯ, ನನ್ನ ಹರ್ಷದ ಬೆಳಕು ನೀನು, 

ಸಂತೋಷದ ಕ್ಷಣಗಳ ನೀ ನೀಡುವೆ. 

 

ನಾ ದುಃಖದಲ್ಲಿರಲು ನೀ ಸಾಂತ್ವನ ನೀಡುವೆ, 

ನಿನ್ನ ಮಾತುಗಳು ಹೃದಯದ ಗಾಯಗಳಿಗೆ ಮದ್ದು. 

 

ನಿನ್ನಿಂದಲೇ ನನ್ನ ದಿನಗಳು ಸುಂದರ, 

ಗೆಳೆಯ, ನೀನು ನನ್ನ ಜೀವನದ ಆನಂದ

 

ನೀನು ನನಗೆ ಎಷ್ಟು ಅಮೂಲ್ಯವೋ, 

ಗೆಳೆಯ, ನೀನಿಲ್ಲದೆ ನನ್ನ ಸಂತೋಷ ಅಪೂರ್ಣ

Thursday, September 25, 2025

ಸ್ನೇಹ - ಸಂಕೇತ

 

ಅಧಿಕಾರ ಮತ್ತು ವಿಧಿಯ ಮಹಾ ಸಭಾಂಗಣದಲ್ಲಿ,

ಸುಯೋಧನ ಮತ್ತು ಕರ್ಣ — ಸ್ಥಿರ ಕಿರಣದಂತೆ.

ಒಬ್ಬ ರಾಜಕುಮಾರ, ಮತ್ತೊಬ್ಬ ಛಲದ ಯೋಧ,

ನಿಷ್ಠೆ, ಶೌರ್ಯದಲ್ಲಿ ಬೆಸೆದ ಹೃದಯಗಳು,

ಭವಿಷ್ಯದ ದಾರಿಯಲ್ಲಿ ಒಂದೇ ಗುರಿ, ಒಂದೇ ಹೆಜ್ಜೆ.

 

ಸೂರ್ಯನಿಂದ ಹುಟ್ಟಿದ ಉದಾರಿ ಕರ್ಣ,

ದುರ್ಯೋಧನನ ಕಂಗಳಲ್ಲಿ ಸ್ನೇಹವ ಕಂಡ.

ಗೌರವದಿಂದ ಗೆಳೆತನದ ಬಾಹುಗಳಲ್ಲಿ ಬಂಧನ,

ಗೆಳೆತನದ ಸಂಕಲ್ಪದಲ್ಲಿ ಅಚಲವಾಗಿ ಬೆಸೆದರು.

 

ಜಗತ್ತೆಲ್ಲಾ ಹೀಗೆಳೆಯುವಾಗ, ಪಿಸುಮಾತುಗಳು ಜೋರಾದಾಗ,

ಸ್ನೇಹವು ಸ್ಥಿರವಾಯಿತು — ಹೆಮ್ಮೆಯಿಂದ ಬೆಳೆಯಿತು.

ಭೋರ್ಗೆರೆಯುವ ಅಲೆಗಳ ವಿರುದ್ಧ ನಿಂತ ಶಕ್ತಿಯ ಜೋಡಿ,

ಯುದ್ಧದ ಪ್ರಯೋಗಗಳು, ರಾತ್ರಿಯ ಪಿಸುಮಾತುಗಳು,

ಅವರ ಬಂಧವನ್ನು ಬೆಳಕಿನ ದೀಪದಂತೆ ಬೆಳಗಿಸಿದವು.

 

ಹಠ,ಸ್ನೇಹಕ್ಕೆ ಮಾದರಿಯಾದವರು,

ಸುಯೋಧನ,ಕರ್ಣ — ಶಾಶ್ವತ ಸ್ನೇಹದ ಸಂಕೇತ.

ಸ್ನೇಹ - ಅಮರ

 

ಬಾಲ್ಯದ ಕನಸುಗಳು ಗುರುಕುಲದಲ್ಲಿ,

ಕೃಷ್ಣ, ಸುದಾಮ ಸಂತಸದ ಹೃದಯಗಳು.

ಒಬ್ಬ ರಾಜಕುಮಾರ, ಮತ್ತೊಬ್ಬ ಬಡವ,

ಕೈಕೈ ಹಿಡಿದು ನಕ್ಷತ್ರಗಳ ಕೆಳಗೆ,

ಸಮಾನತೆಯ ನೆರಳಲ್ಲಿ ಸಂಭ್ರಮಿಸಿದರು.

 

ವರ್ಷಗಳು ಕಳೆದವು, ಅದೃಷ್ಟ ಬದಲಾಯಿತು,

ಆದರೆ ಅವರ ಸ್ನೇಹ ಶಾಶ್ವತವಾಯಿತು.

ಪ್ರೀತಿ, ವಾತ್ಸಲ್ಯವು ಕಾಲದ ಮಿತಿ ಮೀರಿತು,

ಗೆಳೆತನ ಹೃದಯಗಳಲ್ಲಿ ನೆಲೆಸಿದವು.

 

ಸುದಾಮ, ವಿನಮ್ರ, ಪರಿಶುದ್ಧ ಹೃದಯ,

ಹಸಿವಿನಿಂದ ಕೃಷ್ಣನ ಮನೆ ಬಾಗಿಲು ತಟ್ಟಿದ.

ಕೃಷ್ಣ, ಪ್ರೀತಿಯಿಂದ ಅಪ್ಪಿಕೊಂಡ,

ಸ್ನೇಹದಲ್ಲಿ ಭೇದವಿಲ್ಲ ಜಗಕೆ ತೋರಿಸಿದ.

 

ಒಂದು ಹಿಡಿ ಅಕ್ಕಿ – ಸರಳ ಉಡುಗೊರೆ,

ಕೃಷ್ಣನಿಗೆ ಅತ್ಯಂತ ಅಮೂಲ್ಯವಾದದು.

ಅವರ ಉತ್ಸಾಹ, ಪ್ರೀತಿ, ಭಾವನೆಗಳು,

ಸ್ನೇಹದ ಅಮರತೆಯನ್ನು ಸಾರಿದವು.

 

ಕೃಷ್ಣ,ಸುದಾಮ – ಎರಡು ಹೃದಯಗಳು,

ಸ್ನೇಹದ ನಂಟಿನಲ್ಲಿ ಹೆಣೆದ ಕಥೆ.

ಇದು ನಮ್ಮೆಲ್ಲರಿಗೂ ಪಾಠ –

ಸತ್ಯ ಸ್ನೇಹವು ಶುದ್ಧ, ಶಾಶ್ವತ, ಅಮರ.

Wednesday, September 24, 2025

S. L. ಭೈರಪ್ಪ - ಕನ್ನಡ ದೀಪಸ್ತಂಭ

 

ಸಂತೆಶಿವರದ ಮಣ್ಣಲ್ಲಿ ಮೊಳಕೆಯೊಡೆದ ಕರುನಾಡ ಬೆಳಕು,

ಕಷ್ಟಗಳ ಬೆಂಕಿಯಲ್ಲಿ ಬೆಂದುದಿಸಿದ ಕನ್ನಡ ರತುನ,

ಪುರಾಣದ ಪಥದಲ್ಲಿ ಮಾನವ ಸಂಬಂಧ ಗಳ ಹುಡುಕಾಟ,

ಕಾದಂಬರಿಗಳಲ್ಲಿ ಹರಡಿದ ಕಲಾನದಿಯ ಹರಿವಿನ ಒಡನಾಟ.

 

ವಂಶವೃಕ್ಷದ ಬೇರು, ದಾಟುವ ದಾರಿ, ಸಂಗೀತದ ಮಂದ್ರ,

ಪರ್ವದ ಶಿಖರ, ತಂತುವಿನ ತಂತಿ, ಹೊಸ ದಿಕ್ಕಿನ ಕವಲು.

ಆವರಣದ ಒಳಗಿಂದ ಹೊರಬರುವ ಆತಂಕದ ನುಡಿ,

ಭಾವನೆಗಳ ಜಗತ್ತಿಗೆ ತಂದ ಹೊಸ ಬಿಂಬಗಳ ಪರಿವಿಡಿ.

 

ಅಕಾಡೆಮಿಯ ಪ್ರಶಸ್ತಿ ದಾಟುವ ದೀಪ ಯಾನ,

ಸರಸ್ವತಿ ಸಮ್ಮಾನದಿಂ ಹೊಳೆದ ಕನ್ನಡದ ತಾರೆ.

ಪದ್ಮಶ್ರೀ, ಪದ್ಮಭೂಷಣ – ರಾಷ್ಟ್ರ ಗೌರವದ ನಿನಾದ,

ಭೈರಪ್ಪ ಕನ್ನಡದ ಹೆಮ್ಮೆ, ಕನ್ನಡ ಭಾಷೆಯ ಜಾಗೃತಿ.

 

ಕಾದಂಬರಿಗಳಲ್ಲಡಗಿದೆ  ಜೀವನ ದರ್ಶನ, ತತ್ವದ ಬೆಳಕು,

ಬರಹದ ನುಡಿಗಳಲ್ಲಿ ನಾಡು ಕಂಡಿದೆ ತನ್ನ ಪ್ರತಿಬಿಂಬ.

ಭೈರಪ್ಪ – ಕನ್ನಡ ಸಾಹಿತ್ಯದ ಶ್ರೇಷ್ಠ ತೇಜೋವಂತ,

ನವ ಚಿಂತನದ ಚಿರ ಚಿರಂತನ ಕನ್ನಡ ದೀಪಸ್ತಂಭ.

ಗೆಳೆತನ - ಜೀವನ ಪ್ರೀತಿ

 

ಒಮ್ಮೆ ಹೀಗೆ ಕುಗ್ಗಿ ಹೋಗಿದ್ದೆ,

ಈ ಜೀವನವೇ ಬೇಡವೆನಿಸಿತ್ತು.

ಋಣಾತ್ಮಕತೆಯ ಪಾತಾಳದಲ್ಲಿ ಸೆರೆಯಾಗಿದ್ದೆ,

ಸಾಕು ಸಾಕು ಎಂದು ಜೀವನವನ್ನೇ ತಿರಸ್ಕರಿಸಿದ್ದೆ.

 

ಬೆಳಕು ಭಯವೆನಿಸತೊಡಗಿತ್ತು,

ಕತ್ತಲು ಆಪ್ಯಾಯಮಾನವಾಗಿತ್ತು.

ಶಿಸ್ತು, ಸಂಯಮನಿದ್ದೆಗೆ ಜಾರಿದವು,

ನಿದ್ದೆ ಹವ್ಯಾಸ, ವ್ಯಾಯಾಮ ಬೇಡವಾದವು.

 

ದೇಹ ರೋಗಗಳ ಗೂಡಾಯಿತು,

ಸಾವು ಇಷ್ಟವಾಗತೊಡಗಿತ್ತು.

ಜೀವನವೇ ಬೇಸರವೆನಿಸಿತು,

ಹೃದಯದಲ್ಲಿ ಶೂನ್ಯತೆ ತಾಂಡವವಾಡಿತು.

 

ಆ ಕ್ಷಣಿಕ ತೊಂದರೆಎಲ್ಲಾ ಮಾಯವಾಯಿತು,

ಅದು ಗೆಳೆಯನ ಸ್ಪರ್ಶದಿಂದ.

ಅವನ ಮಾತು, ಅವನ ಹಾಸ್ಯ, ಅವನ ಸನಿಹತೆ —

ಜೀವನದಲ್ಲಿ ಚೈತನ್ಯ ತುಂಬಿತು.

 

ಗೆಳೆತನವೆಂದರೆ ಜೀವನ ಪ್ರೀತಿ,

ಅದು ಬೆಳಕು, ಅದು ಶಕ್ತಿ, ಅದು ನವಚೇತನ.

ಅಂಧಕಾರದೊಳಗಿನ ಬೆಳಕು,

ಮರಳಿತು ನಗು, ಮರಳಿದೆ ನಾನು.

Tuesday, September 23, 2025

ಗೆಳೆತನ-ಸಂಭ್ರಮ

 

ಗೆಳೆತನ ಒಂದು ಅಮೂಲ್ಯ ಪಯಣ
ಅಲ್ಲಿ ನಗುವಿದೆ, ಅಳುವಿದೆ, ಹಾಸ್ಯವಿದೆ
ಜೀವನದ ಎಲ್ಲ ಪ್ರಶ್ನೆಗಳಿಗೆ  ಉತ್ತರವಿದೆ
ದುಃಖ, ದುಮ್ಮಾನಗಳಿಗೆ ರಾಮಬಾಣವಿದೆ

 

ನೆಮ್ಮದಿಯ ದಾರಿ ಕಾಣುವುದು ಗೆಳೆತನದಲ್ಲಿ
ನಮ್ಮ ಜೀವನದ ಗುರಿ ಬೇರೆ ಬೇರೆಯಾದರೂ
ನಮ್ಮ ಪಯಣದ ಹಾದಿ ಒಂದೇ ಆಗಿದೆ

 

ಹತ್ತುವ, ಇಳಿಯುವ ನಿಲ್ದಾಣಗಳು ಬೇರೆ ಬೇರೆಯಾದರೂ
ನಾವೆಲ್ಲರೂ ಹತ್ತಿದ್ದೇವೆ ಗೆಳೆತನವೆಂಬ ರೈಲು
ಎಲ್ಲಿ ಇಳಿಯುವೆವೋ ಬಿಡಿ, ಚಿಂತೆ ಬೇಡ
ಈ ಪಯಣವೇ ನಮ್ಮ ಅನುಭವ, ನಮ್ಮ ಸಂಭ್ರಮ

ಸ್ನೇಹದ ಅಲೆ

 

ಅವನು ನನಗೆ ಬೇಕಾದವನು,

ನಾನು ಅವನಿಗೆ ಬೇಕಾದವನು.

ಒಂದೇ ನಾಣ್ಯದ ಎರಡು ಮುಖಗಳು,

ಒಂದೇ ಹಾದಿಯ ಪಯಣಿಗರು - ಸ್ನೇಹಿತರು .

 

ಗೆಳೆಯ, ಗೆಳೆತನದಾರಿ ಒಂದೇ, ಹೆದ್ದಾರಿ.

ನದಿಯಂತೆ ಹರಿಯುವ ಜೀವಪಯಣ,

ಬೆಟ್ಟ, ಗುಡ್ಡ, ಕಣಿವೆ ದಾಟಿ ಸಾಗುವ ಪಯಣ.

ಪುಟಿದೇಳುವೆವು, ದಾಹವಿದೆ, ದಣಿವರಿಯೆವು

ಆದರೂ ಗುರಿಯೊಂದೇ, ನಿಲ್ಲದೆ ಸಾಗುವೆವು.

 

ಕಡಲು ಸ್ನೇಹದಿ ಸೇರುವ ತವಕ,

ಕೊನೆಯಿರದ ಅಸೀಮ ಸಾಗರ.

ಅಲ್ಲಿ ನಾವೆಲ್ಲರೂ ಒಂದಾಗಿ,

ಸ್ನೇಹದ ಅಲೆಗಳಲ್ಲಿ ತೇಲುವ.

Sunday, September 21, 2025

ಸ್ನೇಹದ ಹರಿವು

 

ಅವಶ್ಯಕತೆಯಿರುವಾಗ ಅಗತ್ಯವಾಗಿ ಸಿಗುವವನು,

ನಗಬೇಕೆನಿಸಿದಾಗ ನಗಿಸುವವನು – ನಗುವಿನ ಕಡಲು.

ನೆಮ್ಮದಿಯು ಸದಾ ಜೊತೆಗಿರುವುದು,

ಅವನು ಜೊತೆಗಿರಲು ಬೇರೇನೂ ಬೇಡ.

 

ಯಾರ ಜೊತೆಗಿರಲು ಕಾಲವೇ ನಿಂತು ಹೋಗುವುದೋ,

ಅವನೇ ಸ್ನೇಹಿತ – ನಮ್ಮ ಸಂಬಂಧ ಸ್ನೇಹದ ಕಡಲು.

ಮುಚ್ಚು ಮರೆಯಿಲ್ಲದ ಎರಡು ಹೃದಯಗಳ ಆಲಯ,

ಸ್ನೇಹಾಲಯ – ನಗೆಗಡಲಲ್ಲಿ ತೇಲುವ ನಾವೆಲ್ಲಾ.

 

ಬನ್ನಿ, ಮತ್ತೆ ಬಾಲ್ಯದ ದಿನಗಳ ಸವಿಯೋಣ,

ಅಲ್ಲಿ ನಗು, ನೆನಪು, ಮತ್ತು ಸ್ನೇಹದ ನದಿಯ ಹರಿವು.

ಬಾಲ್ಯದ ಆ ಮಧುರ ಕ್ಷಣಗಳನ್ನು ಮತ್ತೆ ಜೀವಿಸೋಣ,

ಸ್ನೇಹದ ಕಡಲಲ್ಲಿ ಕೈ, ಕೈಹಿಡಿದು ತೇಲೋಣ.

Saturday, September 20, 2025

ನಮ್ಮ ಶಕ್ತಿ- ಗೆಳೆತನ

 

ನಿನ್ನ ನೆನೆದಾಗಲೆಲ್ಲಾ ಮನಸ್ಸು ಅರಳುತ್ತದೆ.
ಕಾಡಿನ ಕತ್ತಲಲ್ಲೂ ನೀನು ಬೆಳಕು,
ನಿನ್ನ ನೆನೆದರೆ ಭಯವೂ ದೂರವಾಗುತ್ತದೆ.

 

ಚೈತನ್ಯದ ಚಿಲುಮೆಯಂತೆ ನೀನು,
ನಿನ್ನ ಕಂಡಾಗ ನನ್ನ ಮನ ತೇಲುತ್ತದೆ.
ನಿರ್ಮಲ ಮನಸ್ಸಿಗೆ ನೀನೇ ಮಾದರಿ,
ಮುಸುಕು ತೆರೆದರೆ ಬೆಳಕು ಕಾಣುತ್ತದೆ.

 

ನಿನ್ನ ಜೊತೆಗಿನ ಹೊಳಹು,
ನನ್ನ ಬದುಕಿಗೆ ಸೊಬಗು ತರುತ್ತದೆ.
ನೀನು ನನ್ನ ಶಕ್ತಿ ಗೆಳೆಯ,
ನಮ್ಮ ಗೆಳೆತನವೇ ನಮ್ಮ ಶಕ್ತಿ ಗೆಳೆಯ.

ಜೀವನ ಸವಿಯೋಣ!

 

ನಾವು ಹೇಗೆ ಗೆಳೆತನದಲ್ಲಿ ಸಿಲುಕಿದೆವೋ ನಾ ಕಾಣೆ;
ಹೇಗೆ, ಯಾವಾಗ ಸ್ನೇಹಕಾಲದಲ್ಲಿ ಸಂಧಿಸಿದೆವು?
ಐವತ್ತು ವಸಂತಗಳು ಹಾದುಹೋಗಿವೆ – ಸುಂದರ ದಿನಗಳು!
ಇಂದೇ ನಾವು ಭೇಟಿಯಾದಂತೆ ಅನಿಸುತ್ತಿದೆ – ಸುಂದರ ಮನಸುಗಳು.

 

ಕಾಲಘಟ್ಟದಲ್ಲಿ ಗೆಳೆತನದ ಸೊಬಗ ಸವಿದಿದ್ದೇವೆ – ರಸ ಗಳಿಗೆಗಳು;
ನೀನು ಇನ್ನೂ ಚಿಕ್ಕವನಂತೆ ಕಾಣುವೆ – ಗಡ್ಡ ಮೀಸೆ ತೆಗೆದರೆ!
ಬ್ಯಾಟು ಕೈಯಲ್ಲಿ ಹಿಡಿದರೆ – ನಿನ್ನ ತಡೆವರು ಯಾರು?
ನನ್ನ
ಕಪಿಲ್ ನೀನು – ವಿಕೆಟ್‌ಗಳು ತರೆಗೆಲೆಗಳಂತೆ ಬೀಳುವುವು.

 

ನೀನು ಸ್ಲಿಮ್ ಹುಡುಗನಂತೆ ಕಾಣುವೆ – ಹೊಟ್ಟೆಬೊಜ್ಜು ಕರಗಿಸಿದರೆ;
ಥೇಟ್ ರಾಜಕುಮಾರ ನೀನು – ತಲೆಗೂದಲಿಗೆ ಕಪ್ಪು ಬಣ್ಣ ಬಳಿದರೆ!
ಇಂದಿಗೂ ನೀನು – ಹರೆಯದ ಹುಡುಗಿಯರ ನಿದ್ದೆ ಕೆಡಿಸುವ ಕ್ರಶ್;
ನಿನ್ನ ಮಾತುಗಳಿಗೆ ಸೋಲುವವರು – ಈಗಲೂ ಇದ್ದಾರೆ.

 

ನಿನ್ನ ಹೊಟ್ಟೆಬಾಕತನ ಹಾಗೇ ಇದೆ – ಜಾಮೂನು ನಿನ್ನ ಪ್ರಾಣ!
ಆದರೂ ಮಾತ್ರೆಗಳಿಲ್ಲದೆ ನಿನಗೆ ನಿದ್ದೆ ಹತ್ತಿರ ಬಾರದು;
ಗಟ್ಟಿ ಹೃದಯ ನಿನ್ನದು – ಆಗಿದೆ ಆಂಜಿಯೋಪ್ಲಾಸ್ಟಿ ಎರಡು ಸಾರಿ!
ಎಲ್ಲವನ್ನೂ ನೋಡಿದೆ ಈ ಜೀವ – ಇನ್ನೇನು ಬೇಕು?

 

ಬಾ ಗೆಳೆಯ – ಬಿಸಿ ಬಿಸಿ ಕಾಫಿ ಕುಡಿಯೋಣ;
ಮತ್ತೊಮ್ಮೆ – ಜೀವನವನ್ನು ಸವಿಯೋಣ!

Friday, September 19, 2025

ಬಂಗಾರದ ದಿನಗಳು!

 

ಹೇ ಗೆಳೆಯ, ನಿನ್ನ ಜೊತೆಗೂಡಿ ಆಡಿದ ಆ ಧೂಳು ಎಲ್ಲಿಹುದು?
ಮಣ್ಣಿನಲಿ ನಗು, ಆಟ, ಹಬ್ಬ,
ಎಲ್ಲಾ ಮರೆಯಾಗಿವೆ.
ಮತ್ತೆ ಆ ಮಣ್ಣಲ್ಲಿ ಜೊತೆಗೂಡಿ ಆಡೋಣವೆಂದರೆ,
ಸಮಯವೇ ಇಲ್ಲ, ಬದುಕು ಗಡಿಬಿಡಿಯಲಿ ಸೆರೆಯಾಗಿದೆ.

 

ಧೂಳು, ಕೆಮ್ಮು, ಕೋಪ-ತಾಪ,  ಹುರುಪಿನ ಮಾತು,
ಗುನುಗಿದಂತಿದೆ, ಹೃದಯದೊಳಗೆ ಪ್ರತಿಧ್ವನಿಸುತ್ತಿದೆ.
ಜೀವನದ ಹಾದಿಯಲ್ಲಿ ಸೋತು ನಿಂತಾಗ,
ಆ ಮಾತು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.

 

ಶಾಲೆಯ ಕಿಟಕಿಯಿಂದ ಫಲಿತಾಂಶ ನೋಡಿದ ಕ್ಷಣ,
‘ಪಾಸಾದೆ! ಪಾಸಾದೆ!’ ಎಂದು ಕೂಗಿದ ಆ ಕ್ಷಣ  ನೆನಪಿದೆಯಾ?
ಡಿಸೆಂಬರ್ ಚಳಿಯಲ್ಲಿ ಮಾಳಿಗೆಯ ಮೇಲೆ ತೂಕಡಿಸಿ ಓದಿದ ರಾತ್ರಿ,
ಮಾರನೆಯ ದಿನ,
 ಜ್ಞಾಪಕ ತಪ್ಪಿ ತೊಳಲಾಟದ ಆ ಕ್ಷಣಗಳು!

 

ಇಂದಿಗೂ ಆ ದಿನಗಳನ್ನು ನೆನೆದರೆ ಕಂಗಳು ತೇವವಾಗುತ್ತವೆ,
ಮತ್ತೆ ಬಾರದು ಆ ಬಂಗಾರದ ದಿನಗಳು, ಹೌದು?
ಆಕಸ್ಮಿಕವಾಗಿ ಜೀವನದ ಪಯಣದಲ್ಲಿ ಜೊತೆಗೂಡಿ ನಲಿದೆವು,
ಯಾವ ನಿಲ್ದಾಣದಲ್ಲಿ ಹತ್ತಿದ್ದೆವೋ, ಹಾಗೆ ನಮ್ಮ ಪಯಣ ನಮ್ಮದೇ.

 

ನವ ಸಂವತ್ಸರಗಳು ಕಣ್ಣ ಮುಂದೆಯೇ ಹಾದುಹೋಗಿವೆ,
ಆ ದಿನಗಳು ಮತ್ತೆ ಎಂದೂ ಬಾರವು.
ಅನುಭವಗಳೆಲ್ಲಾ ನಮ್ಮ ಇಂದಿನ ಚೈತನ್ಯವಾಗಿದೆ,
ಮತ್ತೆ ಬರಲಿ ಆ ಬಂಗಾರದ ಆ ದಿನಗಳು.

ಬಾರದ ಸಮಯ


ಕಚೇರಿ, ಕೆಲಸ, ಮನೆ,
ಸಮಯವಿಲ್ಲ ಮಾತಾಡಲು, ಮನಸಾರೆ।
"ಅಹಂ" ಸುತ್ತ ತಿರುಗುವ ನಿತ್ಯದ ನಾಟಕ,
ನಮ್ಮತನವ ಮರೆತು, ಬದುಕು ಬತ್ತದ ಪಾತಕ।

 

ಒಳಗುದಿಯಲಿ ತೊಳಲಾಟ, ಹೊರಬರಲಾರದೆ ಪರಿತಾಪ,
ಮುಖದಲ್ಲಿ ಗಂಟು, ಸಿಟ್ಟು, ಸಿಡುಕು,ನಿತ್ಯದ ಭಾವದ ತಾಪ।
ಜೀವನಸಂಜೆಗೆ ಕಾಲಿಡುತ್ತಿದ್ದೇವೆ,
ಆನಂದದ ಬೆಳಕು ಮರೆಯುತ್ತಿದ್ದೇವೆ.

 

ಬಾಲ್ಯದ ಸ್ನೇಹ, ಆಟದ ನಗು,
ಮನದ ಪರದೆಯ ಮೇಲೆ ಹಚ್ಚಹಸಿರು ಬಿಂಬಗಳು।
ಆ ಕ್ಷಣಗಳು,ಮತ್ತೆ ಬಾರದ ಸಮಯ,
ಕಳೆದುಹೋದ ಗಳಿಗೆಗಳಿಗೆ ಹೃದಯದ ಕಂಬನಿಯ ನಮನ।

 

ಎಷ್ಟೊಂದೆಲ್ಲವೂ ಕಳೆದುಹೋಯಿತು,
ಅನೇಕ ನಗು, ಹಲವು ನೆನಪು,
ಮತ್ತೆ ಬರಲಿ ಆ ದಿನಗಳು,
ಬಾಲ್ಯದ ಬಿಸಿಲು, ಮಿತಿಯಿಲ್ಲದ ಪರಿಧಿಗಳು।

ಸ್ವರ್ಗ ಸುಖ ಈ ಪ್ರಯಾಣ

ಹೆಜ್ಜೆ ಹೆಜ್ಜೆ ಮುಂದಡಿ ಇಡಲು ಸುತ್ತಲೂ ಕತ್ತಲು,

ನಡೆವ ಹಾದಿಯಲ್ಲಿವೆ ಕಲ್ಲು ಮುಳ್ಳುಗಳು,

ಮುಂದೆ ಏನಿದೆ? ಲವಲೇಶವೂ ಅಂದಾಜಿಲ್ಲ,

ಸೂರ್ಯನ ಬೆಳಕಿಂಡಿ ಮೆಲ್ಲನೆ ತೆರೆಯುತಿರಲು,

ಕಂಗಳ ಮುಂದೆ ಅನಾವರಣ - ಭೂ ಸ್ವರ್ಗ,

ಬೆಳಕಿನ ಸ್ಫೂರ್ತಿಯಿಂ ಹಾಡುತಿದೆ ಹಕ್ಕಿಗಳು,

ಕಲರವ ಸುತ್ತ ಮುತ್ತಲೂ , ಹೃದಯದಲ್ಲೂ ರಿಂಗಣ,

ಮರ ಗಿಡಗಳು ತಲೆದೂಗುತ್ತಿವೆ ಹಕ್ಕಿಗಳಿಂಚರಕೆ,

ಮನವು ಕುಣಿಯುತಿದೆ ಭೂರಮೆಯ ಸೌಂದರ್ಯಕೆ,

ನಡೆಯುತ್ತಾ, ಅನುಭವಿಸುತ್ತಿದೆ ಸೃಷ್ಟಿಯ ಸೊಬಗ,

ಕಣ್ಣು, ಕಿವಿ, ಹೃದಯಕ್ಕೆ ಸ್ವರ್ಗ ಸುಖ ಪ್ರಯಾಣ.

Saturday, September 13, 2025

ಕನಸಿನ ತೇರು

ಸೂರ್ಯೋದಯ ಆಗಸವ ಆಲಿಂಗಿಸುತ್ತಿದೆ,

ಕತ್ತಲೆ ಕಳೆದು ಚಿನ್ನದ ಬಣ್ಣ ಬಳಿಯುತ್ತಿದೆ.

ತಾಜಾತನದಲ್ಲಿ ಪ್ರಕೃತಿ ಬೆಳ್ಳನೆ ಹೊಳೆಯುತ್ತಿದೆ,

ಮಂಜಿನ ಹನಿಗಳು ಎಲೆಗಳ ಮೇಲೆ ಮಿಂಚುತ್ತಿದೆ.

 

ಮಂಜಿನ ಹನಿಗಳು ಕನಸುಗಳ ಜೋಡಿಸುತ್ತಿದೆ,

ಮನವು ಕನಸಿನ ರೆಕ್ಕೆ ಹರಡಿ ಹಾರುತ್ತಿದೆ.

ಬೆಳಗಿನ ಬೆಳಕಿನಲ್ಲಿ ಅದೇನೋ ಹುರುಪಿದೆ,

ಮನದಲ್ಲಿ ಹೊಸ ಭರವಸೆಗಳ ಹೊತ್ತು ತರುತ್ತಿದೆ.

 

ಗಾಳಿ ಮಂದವಾಗಿ ಪ್ರಕೃತಿ ಶಾಂತವಾಗಿದೆ,

ಬಿಳಿ ಮೋಡಗಳ ನೆರಳಲ್ಲಿ ದಿನ ಆರಂಭವಾಗಿದೆ.

ಅಂತರಂಗದಲ್ಲಿ ಪ್ರಾರ್ಥನೆಯ ದೀಪ ಬೆಳಗಿದೆ,

ತೆರೆದ ಹೃದಯದಿ ಮನದಲ್ಲಿ ಕನಸ ತೇರು ಹೊರಟಿದೆ.

 

ಶುದ್ಧ ಬೆಳಕೇ ಧರೆಗೆ ಬಾ,

ಕೈ ಮುಗಿದು ನಿನ್ನನೇ ಆರಾಧಿಸುತ್ತಿರುವೆ.

ನಿನ್ನೊಳ ಶಕ್ತಿ, ಎನ್ನ ಹೃದಯದಲಿ ಇಳಿಯಲಿ,

ನನ್ನ ಕನಸುಗಳ ಸಾಧಿಸುವ ದಾರಿಯ ತೋರಲಿ.

Friday, September 12, 2025

ಹೊಸ ಕನಸುಗಳ ಸಂಜೆ

ಸಂಜೆ ಮನವ ಕಾಡಿದೆ,

ತಂಗಾಳಿ ಬಿಸಿ ಸಂತಸ ತಂದಿದೆ.|

ಬಂಗಾರ ಕಿರಣದ ತೆರೆ ಏರಿದೆ,

ಕತ್ತಲ ಪರದೆ ಮೆಲ್ಲನೆ ಇಳಿದಿದೆ.|| 

 

ಹಕ್ಕಿಗಳಿಂಚರ ಹರಡಿದೆ ಎಲ್ಲೆಡೆ,

ಮನದಲ್ಲೇನೋ ಹೊಸತನ ಮನೆಮಾಡಿದೆ.|

ನಿನ್ನೆಗಳ ಹಳತನು ತೊಳೆದಿದೆ,

ತಿಂಗಳ ಬೆಳಕು ಹೊಸ ಕನಸನೆ ಕಟ್ಟಿದೆ||

 

ಆಗಸದಲ್ಲಿ ತಾರೆಗಳು ನಲಿಯುತ್ತಿವೆ,

ಮನದ ಕಡಲಿನಲ್ಲಿ ಅಲೆಗಳನೆಬ್ಬಿಸಿದೆ.|

ಮನವು ಹಕ್ಕಿಯಾಗಿ ಆಗಸದಲ್ಲಿ ತೇಲಿದೆ,

ಹಾರುತ್ತಾ ಹೊಸಲೋಕವನೇ ಬಯಸಿದೆ.||

 

ಸಂಜೆಗೆಂಪಿನ ಬೆಳಕು ತೇರನೇರಿ ಹೊರಟಿದೆ,

ಮನದೊಳಗೆ ಕನಸುಗಳು ರಥವನೇರಿ ಬಂದಿದೆ.|

ಭರವಸೆಗಳ ಬಲದಿ ದೃಢವಾಗಿ ಮುನ್ನಡೆದಿದೆ,

ನಾಳೆಗಳ ಸ್ವಾಗತಿಸುತ್ತಾ ಹೊಸ ಗುರಿಯ ಬೆನ್ನಟ್ಟಿದೆ.||

Saturday, September 6, 2025

ಧೈರ್ಯವಿರಲಿ !

ಕನಸ ರೆಕ್ಕೆಗಳ ಹರವಿ ನಭಕ್ಕೆ ಹಾರುವ ತೆರದಿ,

ನಿನ್ನೊಳ ಅದ್ಭುತ ಶಕ್ತಿಯ ಅನಾವರಣಗೊಳಿಸಲು ನಿನಗೆ ಧೈರ್ಯವಿರಲಿ.

ನೂರಾರೊಳಗೆ ನೀನಾಗೇ ಮಿಂಚುವ ಸ್ವಯಂಭುವಾಗೇ,

ನಿನ್ನ ಜೀವನದ ಪ್ರೀತಿಯಲಿ ಜೀವಿಸಲು ನಿನಗೆ ಧೈರ್ಯವಿರಲಿ.

 

ಲೋಕದೊಳು ಸತ್ಯಕ್ಕೆ ಜೊತೆಯಾಗಿ ನಿಲ್ಲುವ ಸ್ಥೈರ್ಯವಿರಲು,

ಜೀವನದ ಸವಾಲುಗಳ ಎದೆಗುಂದದೆ ಎದುರಿಸಲು ನಿನಗೆ ಧೈರ್ಯವಿರಲಿ.

ಕಂಡ ಕನಸುಗಳ ನನಸಾಗಿಸುವ ಉತ್ಸಾಹದಲಿ,

ಸಾಧನೆಯ ಪಥದಲ್ಲಿ ಗೆಲುವಿಗೆ ಎದೆಯೊಡ್ಡಲು ನಿನಗೆ ಧೈರ್ಯವಿರಲಿ.

 

ಹಾದಿಯಲಿ ಕಲ್ಲು ಮುಳ್ಳುಗಳೇ ಇರಲಿ,

ನಗುತ ನೋವ ಮರೆಯುತ ಹೆಜ್ಜೆ ಮುಂದಿಡಲು ನಿನಗೆ ಧೈರ್ಯವಿರಲಿ.

ಸಾಕು ವಿಶ್ರಾಂತಿ, ಸಾಕು ನಿದ್ದೆ, ಬೆಳಕ ಕಾಣುವ ತವಕದಿ,

ಅಂಧಕಾರವ ಧಾಟುತಾ ಸಚ್ಚಿದಾನಂದವ ಪಡೆಯಲು ನಿನಗೆ ಧೈರ್ಯವಿರಲಿ. 

ಕಾಫಿ ಕುಡಿಯೋಣ ಬಾ ಗುರು!

ಕಾಫಿ ಕುಡಿಯೋಣ ಬಾ ಗುರು,

ನಿಧಾನವಾಗಿ ಅನುಭವಿಸುತ್ತಾ, ಆಸ್ವಾಧಿಸುತ್ತಾ.

ಸಮಯ ಕಳೆದುಹೋಗುವುದು,

ಯಾರಿಗೂ ಗೊತ್ತಾಗುವುದಿಲ್ಲ,

ಸಮಾಧಿ ಸ್ಥಿತಿಯ ಅನುಭವ,

ಸಮಯ ಹೆಜ್ಜೆ ಇಡುವುದೇ ತಿಳಿಯುವುದಿಲ್ಲ.

ಬೆಳಗಿನ ಚುಮು,ಚುಮು ಚಳಿಯಲ್ಲಿ,

ಬಿಸಿ ಬಿಸಿ ಕಾಫಿ ವಾಹ್!,

ಚುಂಬಿಸುತಿರೆ ತುಟಿಗೆ ಅಮೂರ್ತ ಧ್ಯಾನದಂತೆ.

ನಿಧಾನವಾಗಿ ಕಾಫಿ ಕುಡಿ ಗುರು,

ಅನುಭವಿಸುತ್ತಾ, ಆಸ್ವಾಧಿಸುತ್ತಾ.

 

ಮೂರುದಿನಗಳ ಸಂಸಾರ

ಬೋರಾಗಿ ಧೀರ್ಘವಾಗಿದೆ,

ಸಾಕಷ್ಟಿದೆಯಿಲ್ಲಿ ಮಾಡಬೇಕಾದುದು.

ಆದರೆ ಬಹಳಷ್ಟು ತಪ್ಪುಗಳಾಗಿವೆ,

ಬಹಳಷ್ಟು ಸಮಯ ಪ್ರಯಾಸಪಟ್ಟೆ,

ಶಕ್ತಿಶಾಲಿಯೆಂದು ನಿರೂಪಿಸಲು.

ಕಾಲ ಯಾರಿಗೂ ಕಾಯುವುದಿಲ್ಲ,

ನಿನ್ನ ಸಮಯ ಮುಗಿಯುವುದರೊಳಗೆ,.

ಬಳಸಿಕೋ ಲೋಕದ ಅಭ್ಯುದಯಕೆ

ನಿಧಾನವಾಗಿ ಕಾಫಿ ಕುಡಿ ಗುರು,

ಅನುಭವಿಸುತ್ತಾ, ಆಸ್ವಾಧಿಸುತ್ತಾ.

 

ಕೆಲವರು ನಮ್ಮೊಂದಿಗಿರುವರು,

ಮತ್ತೆ ಕೆಲವರು ದೂರ ಹೋಗುವರು. 

ಋಣ ಇರುವವರೆಗಷ್ಟೇ ಇಲ್ಲಿ ಜಾಗ,

ಸಾಲ ತೀರಿದ ಬಳಿಕ ಉಸಿರೂ ಮುಕ್ತ ಮುಕ್ತ. 

ಪ್ರೀತಿಸಿದವರು ಸಂತೋಷದಿಂದಿರುವರು,

ಆದರೆ ಎಲ್ಲರೂ ಜೊತೆಗಿರಲಾರರು,

ಬಿಟ್ಟ ಬಾಣದಂತೆ ದೂರ ಹಾರುವರು.

ಎಲ್ಲವೂ ಹೇಗೆ ಸಾಗುತಿದೆಯೋ!,

ಬಲ್ಲವರು ಯಾರೂ ಇಲ್ಲ ಇಲ್ಲಿ,

ಧೈರ್ಯದಿಂದ ಎಲ್ಲವನ್ನೂ ಅನುಭವಿಸು. 

ನಿಧಾನವಾಗಿ ಕಾಫಿ ಕುಡಿ ಗುರು,

ಅನುಭವಿಸುತ್ತಾ, ಆಸ್ವಾಧಿಸುತ್ತಾ.

 

ಜಗದಲಿ ಎಲ್ಲವನ್ನೂ ಪ್ರೀತಿಸು,

ಆದಿ-ಅಂತ್ಯವಿಲ್ಲದ್ದು ಅದೊಂದೇ!.

ನಿನ್ನವರೆಲ್ಲರನ್ನೂ ಪ್ರೀತಿಸು, ಪ್ರಶಂಸಿಸು.

ಜೋರಾಗಿ ನಕ್ಕು ಬಿಡು,

ನಗುವೇ ದಿವ್ಯಔಷಧವಿಲ್ಲಿ,

ಎಲ್ಲಾ ಚಿಂತೆಗಳು ದೂರಾಗಲಿ,

ಮನದ ಕೊಳೆಯಲ್ಲವ ತೊಳೆದುಕೊ!,

ನಿರ್ಲಿಪ್ತನಾಗು, ಕೊಂಡುಹೋಗುವುದೇನೂ ಇಲ್ಲ.

ನಿಧಾನವಾಗಿ ಕಾಫಿ ಕುಡಿ ಗುರು,

ಅನುಭವಿಸುತ್ತಾ, ಆಸ್ವಾಧಿಸುತ್ತಾ.

Friday, September 5, 2025

ಅನಂತತೆಯ ಕಡೆಗೆ

ನನ್ನೊಡನೆಯೇ ಇರು ಸದಾ,

ನಾನು ನಿನಗಾಗಿ,

ನೀನು ನನಗಾಗಿ,

ಏನಬೇಕಾದರೂ ಮಾಡಬಲ್ಲೆ,

ನಂಬಿಕೆಯ ಕಡಲಲಿ ತೇಲಿಸುವೆ,

ಸಣ್ಣ ಸಣ್ಣ ಹೆಜ್ಜೆಗಳನ್ನಿಡುತ್ತಲೇ ಸಾಗುವ ಅನಂತತೆಯ ಕಡೆಗೆ...

ಭರವಸೆ

ಸೋಲು ಬಂದಿದೆ ಬಾಗಿಲು ತಟ್ಟುತ್ತಾ,

ಕದವ ಬಡಿಯುತ್ತಿದೆ, ಚೈತನ್ಯವ ಅಡಗಿಸಿ!,

ಎಣಿಸಿರಲಿಲ್ಲ ಮನೆಯ ಬಾಗಿಲಿಗೇ ಬರುವುದೆಂದು.

ಕರಿಛಾಯೆ ಹೊರಗಡೆ, ಕದವ ತೆರೆಯದೇ ವಿಧಿಯಿಲ್ಲವೆನಗೆ,

ಭಯ ಆವರಿಸಿದೆ ಮೈ ಮನಗಳಲೆಲ್ಲಾ, ಹೀರುತಿದೆ ಅಧಮ್ಯ ಚೇತನವ,

ಇಂದು ನನ್ನದೆಂದು ಕೊಂಡಿದೆಲ್ಲವೂ ಮಂಜಿನಂತೆ ಕರಗಿಹೋಗುತ್ತಿದೆ.

ನನ್ನವರೆಂದು ಕೊಂಡವರೆಲ್ಲಾ ಮುಗಿಯಿತು ಬರುವೆವೆನ್ನುತ್ತಿಹರು.

ನಡೆದ ದಾರಿ ಕೊನೆಗೊಂಡಿದೆ, ಮುಂದೆ ದಾರಿ  ಕಾಣದೆ.

ಮನದಲ್ಲಿ ಗುರಿಯಿಲ್ಲ. ಕೈ ಹಿಡಿದು ನಡೆಸುವ ಗುರುವೂ ಇಲ್ಲ.

ದಾರಿಕಾಣದಾಗಿದೆ, ಮನವು ಗೊಂದಲದಲ್ಲಿದೆ.

ಹೊಸ ಬೆಳಕಿಗೆ ಹಾತೊರೆಯುತ್ತಾ ಭರವಸೆಯ ಬೆನ್ನುಹತ್ತಿದೆ.

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...