Saturday, March 7, 2015

ಓಹ್! ಇನ್ನೆಷ್ಟು ದಿನ ಈ ಸಂಕಟ

ಓಹ್! ಇನ್ನೆಷ್ಟು ದಿನ ಈ ಸಂಕಟ
ಇನ್ನೆಷ್ಟು ದೂರ ಸಾಗಬೇಕೋ?
ಒಂದೊಂದು ಹೆಜ್ಜೆಯಲ್ಲೂ
ಅಬ್ಬಾ ಎಷ್ಟು ಯಾತನೆ!
ಸಹಿಸಲೇ ಬೇಕು ತೆವಳಲು
ಓಹ್! ಆ ದಿನ ಬಂದೇ ಬರುವುದು
ಅವನು ಬಂದು ನಮ್ಮ ನೋವ ಸಂತೈಸುವನು||

ಸುಖದ ಸುಪ್ಪತ್ತಿಗೆಯಲ್ಲೇ ಮಿಂದವರಾರು?
ನೋವ ಮೆಟ್ಟಿಲುಗಳ ಹತ್ತದೆ
ನರಕ ಸಾಟಿದ ಮೇಲೆ ಸ್ವರ್ಗ ಸಿಗುವುದು
ನೋವಲ್ಲಿ ಬೆಂದ ಮೇಲೆ
ಮತ್ತೆ ಏನು ಬೇಕು?
ಓಹ್! ಆ ದಿನ ಬಂದೇ ಬರುವುದು
ಅವನು ಬಂದು ನಮ್ಮ ನೋವ ಸಂತೈಸುವನು||

Monday, March 2, 2015

ಆಶಯ

ಅವನಿಗಾಗಿಯೇ ಕಾಯುತ್ತಿದ್ದೆ;
ಮುಂದೆಯೂ ಕಾಯುತ್ತೇನೆ;
ಎಷ್ಟೋಂದು ಅನುಭವದ ಮೂಟೆ ಹೊತ್ತಿದ್ದೇನೆ;
ಎಲ್ಲವನ್ನೂ ಅವನ ಮುಂದೆ ಬಿಚ್ಚಿಡಲು;
ಬೇಕು,ಬೇಡಗಳ ಗಂಟು ಕಟ್ಟಿದ್ದೇನೆ;
ಏಕೆಂದರೆ ಅವನಿಗೆ ಏನು ಬೇಕೆಂದು ತಿಳಿದಿಲ್ಲ;
ಒಂದು ನಂಬಿಕೆ,ಮತ್ತೊಂದು ಪ್ರಾಮಾಣಿಕತೆ
ಅಷ್ಟೇ ಗೊತ್ತು ನನಗೆ;
ಎಲ್ಲವನ್ನೂ ಅವನು ಸ್ವೀಕರಿಸುತ್ತಾನೆ
ಎಂಬ ಆಶಯವಷ್ಟೇ ಮನದಲ್ಲಿ ಇದೆ||

ಅರ್ಪಣೆ

ಅವನಿಗೆ ಅರ್ಪಿಸಲು ಸುತ್ತಾಡಿದೆ
ತೋಟದೆಲ್ಲೆಡೆ ಹುಡುಕಾಡಿದೆ
ಒಂದು ಉತ್ತಮ ಹೂವಿಗಾಗಿ
ಮುಗುಳು ನಗುತ್ತಾ ಸ್ವಾಗತಿಸಿವೆ
ಬಣ್ಣಬಣ್ಣದ ವೈಯಾರದ ಹೂಗಳು
ಒಂದೇ ಒಂದು ಹೂವನ್ನೂ ಆರಿಸಲಾಗಲಿಲ್ಲ
ಬೇಸರಿಸಿದೆ ಮನ ದುಗುಡದಿ
ಹೂವ ಕೀಳುವ ಪಾಪ ಮಾಡಹೊರಟ್ಟಿದ್ದೆ
ಎಲ್ಲವೂ ಅವನ ಲೀಲೆ
ಎಲ್ಲವೂ ಅವನ ಮಾಯೆ
ಈ ಸೌಂದರ್ಯವೇ!, ಆ ಸ್ವರ್ಗ;
ಎಲ್ಲವೂ ಅವನದೇ.......
ಹೂವ ಕಿತ್ತು ಅವನಿಗೇ ಅರ್ಪಿಸೋಣವೆಂದಿದ್ದೆ
ಅವನ ಹೂ ನಗುವಿಗೆ
ಮನದಲ್ಲೇ ಅರಿವು ಮೂಡಿತು
ಅಲ್ಲೇ ಸಾಷ್ಟಾಂಗ ನಮಿಸಿದೆ
ಮನವೆಂಬ ಹೂವನ್ನೇ ಅವನಿಗರ್ಪಿಸಿದೆ||

ಆಹ್ವಾನ

ಹಿಡಿ ಮಣ್ಣಲ್ಲಿ ಕಾಣು ಪ್ರಪಂಚವ
ಕಾಡು ಹೂವಿನ ಸೌಂದರ್ಯದಲಿ ಕಾಣು ಆ ಸ್ವರ್ಗವ
ಅನಂತವ ಮುಷ್ಟಿಯೊಳಗಿ ಹಿಡಿದು ಆನಂದಿಸು
ಮುಕ್ತತೆಯ ಅನುಭವಿಸು ಕಾಲನ ತೆಕ್ಕೆಯಲಿ||

ಪ್ರೇರಣೆ: William Blake

Tuesday, February 10, 2015

ದಾರಿ ಕಾಣದಾಗಿದೆ

ಬೆಳ್ಳಂಬೆಳಿಗ್ಗೆ ಕಾಣುವ ಈ ದಾರಿ
ರಾತ್ರಿ ಕಾಣೆಯಾಗುವುದು ಏನು ಸೋಜಿಗ?

ಎಷ್ಟೋ ಬಾರಿ ನಡೆದಿದ್ದೇನೆ
ನಡೆಯುವ ಆ ಸುಖಕ್ಕೆ ಯಾವುದು ಸಾಟಿ?

ಈಗಲೂ ಅದೇ ದಾರಿಯಲ್ಲಿ ಚಲಿಸುತ್ತೇನೆ
ಕಾಲ್ನಡಿಗೆಯಲ್ಲಿ ಅಲ್ಲ ದ್ವಿಚಕ್ರ ವಾಹನದಲ್ಲಿ
ಅನಿಸುತ್ತಿದೆ " ಏನನ್ನೋ ಕಳೆದುಕೊಂಡಿದ್ದೇನೆ"ಎಂದು

ಅಂದು ನಡೆವಾಗ ಆ ಅನುಭವ ಆಪ್ಯಾಯಮಾನ
ಇಂದೇಕೋ ಅದೇ ಆಗಿದೆ ಅಪಾಯಮಾನ

ಬೆಳಿಗ್ಗೆ ಈ ದಾರಿ ಎಷ್ಟು ಸ್ಪಷ್ಟ
ರಾತ್ರಿ ಕಳೆದಿರಲು ಕನಸದಾರಿ ಅಸ್ಪಷ್ಟ

ಏನಾಗಿದೆ ನನಗೆ,ತೋಚದಾಗಿದೆ
ಕನಸ ಕಾಣುವ ಆ ದಾರಿ ಏಕೆ ಕಾಣೆಯಾಗಿದೆ?

ಕನಸು ಕಾಣೆಯಾಗಿದೆ!

ಕನಸುಗಳ ಕದ್ದಿದ್ದಾರೆ
ಯಾರಿಗೆ ದೂರು ಕೊಡಲಿ
ಹುಡುಕಿ ಕೊಡಿ ಎಂದು?
ಒಂದಲ್ಲ,ಎರಡಲ್ಲ ನೂರಾರು ಸ್ವಾಮಿ ಏನು ಮಾಡಲಿ?

ಪ್ರತಿದಿನ ಕಳೆದು ಕತ್ತಲಾಗುವುದಕ್ಕೆ
ಕಾಯುತ್ತಿದ್ದವನು ನಾನು
ಹುಣ್ಣಿಮೆ ಚಂದಿರನ ಬರುವಿಕೆಗೆ
ಶಾಪ ಹಾಕುತ್ತಿದ್ದವನು ನಾನು||

ಎಲ್ಲಿ ಹೋದವೋ ಆ ಕಾಲ?
ನಿಶ್ಚಿಂತೆಯಿಂದ ಕನಸ ಕಾಣುತ್ತಿದ್ದ ಆ ಕಾಲ
ಇಂದೇಕೋ ಮನದಲ್ಲಿ ದುಗುಡವಿದೆ
ಭಯ ಮಡುಗಟ್ಟಿದೆ ಕನಸ ಕಾಣಲು||

ಹೊಸ ಯುಗದ ಜಗವಿದು
ಕಾಣುವ ಕನಸನ್ನೂ ಕದಿಯುವವರ ಕಾಲವಿದು
ಯಾರು ಕದ್ದರೋ ನನ್ನ ಕನಸುಗಳ?
ಯಾವ ಠಾಣೆಯಲ್ಲಿ ದೂರು ಕೊಡಲಿ ಹೇಳಿ?

Monday, January 26, 2015

ಭರವಸೆಯ ಕಿರಣ

ಎಲ್ಲವೂ ಹೋದ ಮೇಲೆ
ನೆನಪ ನೋವ ಅರೆದ ಮೇಲೆ
ಉಳಿವುದೇನಿದೆ?
ಅವನು ಅವಳು
ಅವಳು ಅವನು
ಕಾರಣಗಳು ನೂರಿರಲಿ
ಎಲ್ಲವೂ ಮುಗಿದ ಮೇಲೆ
ಹೇಳುವುದೇನಿದೆ?
ಕಾರಿರುಳು ತುಂಬಿದ ಮನದಲ್ಲಿ
ಬಯಕೆ ಚಿಗುರು ಹೊಮ್ಮಲೆಂದು
ಭರವಸೆಯ ಕಿರಣ ಬಿತ್ತಬಹುದೆ?

Saturday, January 24, 2015

ಏಕೆ ರಾಧೆ!ಮೌನಿಯಾದೆ?

ಏಕೆ ರಾಧೆ!
ಮೌನಿಯಾದೆ?
ಏಕೆ ಹೀಗೆ
ಏಕಾಂಗಿಯಾದೆ?
ಎಲ್ಲಿ ಹೋದೆ
ಏಕೆ ಮರೆಯಾದೆ?
ಕೃಷ್ಣನ ಜೀವವಾದೆ
ಕೊಳಲ ದನಿಯಾದೆ
ಬೃಂದಾವನದ ಮಾತಾದೆ
ಪ್ರೀತಿಯ ಪ್ರತಿಮೆಯಾದೆ
ತ್ಯಾಗದ ಧ್ಯೋತಕವಾದೆ
ಏಕೆ ರಾಧೇ
ಮೌನಿಯಾದೆ?

ವೈರಾಗ್ಯ ಘನನಿಧಿ

ವಿರಾಗಿ ಈತ
ಸುಂದರ,ಸದೃಡ
ಅಜಾನುಬಾಹು
ಮಂದಸ್ಮಿತ
ಸುಂದರ ಮನ್ಮಥ ರೂಪ
ಪರಮಾನಂದ ಸ್ವರೂಪ
ದಿಗಂತವೇ ಎಲ್ಲೆ
ಎಲ್ಲವನ್ನೂ ತೊರೆದ
ವೈರಾಗ್ಯ ಘನನಿಧಿ
ಮಹಾಮೂರ್ತಿ
ಗೊಮ್ಮಟಮೂರ್ತಿ||

Friday, January 9, 2015

ಹೊಸ ವರುಷದ ಆಶಯ

ಹೊಸ ವರುಷ ಈ ಲೋಕಕ್ಕೆ
ಹರುಷವಿದೆ ಮನದಲ್ಲಿ
ಏನನ್ನು ನಿರೀಕ್ಷಿಸೋಣ ಹೇಳಿ
ನೂರೆಂಟು ನಿರೀಕ್ಷೆಗಳು ಹೊಸ ವರುಷಕ್ಕೆ
ಹಳೆಯ ವರುಷದ ನಿರೀಕ್ಷೆಗಳೇ ಗಹಗಹಸಿ ನಗುತ್ತಿದೆ,
ನೋಡಿ ಕುಚೋಧ್ಯ ಮಾಡುತ್ತಿವೆ ಹೆಳವನೆಂದು.
ಸಾಧಿಸಿದ್ದಾದರೂ ಏನು? ಬರೀ ಶೂನ್ಯ.....
ಕನಸ ಕಾಣುವುದರಲ್ಲೇ ಕಾಲ ಕಳೆದಿದ್ದೇವೆ
ಇನ್ನು ನನಸಾಗುವ ಮಾರು ದೂರವೇ ಸರಿ;
ವರುಷಗಳುರುಳಲಿ ಬಿಡಿ
ನಾವು ಬದಲಾಗುತ್ತೇವೋ? ಇಲ್ಲವೋ?
ಕಾಲ ಬದಲಾಗುತ್ತಿದೆ
ಮನೆಯ ಕ್ಯಾಲೆಂಡರ್ ಬದಲಾಗುತ್ತಿದೆ
ಹೊಸತನಕ್ಕೆ ಹರುಷಪಡೋಣ;
ಹೊಸತನ ಸ್ವಾಗತಿಸೋಣ;
ನಾವು ಕಾಲನ ಜೊತೆ ನಡೆಯಲಾಗದಿದ್ದರೂ
ಸಾಧ್ಯವಾದಷ್ಟು ತೆವಳೋಣ
ಎಷ್ಟಾದರೂ ಸವೆಸುವ ದಾರಿ ನಮಗಾಗಿಯೇ ಇದೆಯಲ್ಲವೇ!
ಏನೇ ಆದರೂ ಆಶಿಸೋಣ
ನಿಂತ ನೀರಾಗಿರದೆ, ನಿಲ್ಲದೆ ತೆವಳುತ್ತಾ ಬದಲಾವಣೆಗೆ ಮೈ ಒಡ್ಡುವ;
ಹೊಸತನದ ಹಿತಗಾಳಿ ಮನವ ಸಂತೈಸಲು ಅವಕಾಶ ನೀಡೋಣ;
ಹೊಸ ವರುಷ ಬರಲಿ
ಹರುಷ ತರಲಿ;

Thursday, January 1, 2015

ಮಾತು ಗೌಣ

ನಾವು ಎತ್ತ ಸಾಗುತ್ತಿದ್ದೇವೋ ಸ್ಪಷ್ಟತೆಯಿಲ್ಲ
ಸ್ವಾತಂತ್ರದಿಂದ ಗುಲಾಮಗಿರಿಯತ್ತಲೋ?
ಅನುಮಾನವಿದೆ,ಇಂದಲ್ಲದಿದ್ದರೂ ಮುಂದೊಂದು ದಿನ....
ನಮ್ಮದೇ ಅಸ್ಥಿತ್ವಕ್ಕೆ ಹೋರಾಡುತ್ತಿದ್ದೇವೆ
ಎಲ್ಲರೂ ನಮ್ಮವರೇ
ಮೈ ಬಣ್ಣ,ಹರಿಯುತ್ತಿರುವ ರಕ್ತ,ಉಸಿರಾಡುವ ಗಾಳಿ
ನಮ್ಮವರೆಂದುಕೊಂಡೆವು
ಆದರೇನಾಯಿತು?
ನಮ್ಮವರು ನಮಗೇ ಶತೃಗಳು
ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ;
ನಮ್ಮ ಮಾತಿಗೆ ಕಿಮ್ಮತಿಲ್ಲ;
ನಮ್ಮ ಕೈಗಳನ್ನೇ ಕಟ್ಟಿಹಾಕಿದ್ದಾರೆ;
ಕಣ್ಣುಗಳನ್ನೂ ಮುಚ್ಚಿದ್ದಾರೆ;
ಯಾವ ಬಟ್ಟೆಯಿಂದಲೋ?
ಮೃದುವಾಗಿದೆಯಾದರೂ ಕಠೋರವಾಗಿದೆ;
ಯಾರ ಕೈವಶವಾಗಿಹೆವೋ?
ಮಾತು ಗೌಣ;ಮೂಕ ರೋಧನ;
ಅಸಹಾಯಕರಾಗಿದ್ದೇವೆ;
ಮನದ ನೋವು ನಿಶಬ್ದವಾಗಿದೆ.

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...