Sunday, November 2, 2025

ಆಹಾ! ಈ ಮಣ್ಣು,

ಆಹಾ! ಈ ಮಣ್ಣು,

ನಾನು ಆಡಿ ಬೆಳೆದ ಮಣ್ಣು.
ನಾನು ಬಿದ್ದಾಗಲೂ,
ಬರಿಗಾಲಿಗೆ ಮುಳ್ಳು ಚುಚ್ಚಿ ರಕ್ತ ಸುರಿಸಿದಾಗಲೂ,
ನನ್ನೊಡನೆ ಸಹನೆಯಿಂದ ಇದ್ದದ್ದು – ಇದೇ ಮಣ್ಣು.

 

ಎಲ್ಲೋ ಮಳೆ ಹನಿಯುವಾಗ,
ಈ ಮಣ್ಣಿನ ಸುಗಂಧ ಆಪ್ಯಾಯಮಾನ.
ತಿಂದು ಬಿಸಾಡಿದ ಮಾವಿನ ವಾಟೆಯಿಂದ
ಮಾವಿನ ಗಿಡ ಚಿಗುರಿದ ದಿನ – ಅದ್ಭುತ, ರೋಮಾಂಚನ.

 

ನಾನೇ ಭೂಮಿಯನ್ನು ಅಗೆದು ಗುಂಡಿ ತೆಗೆದು,
ಮಲ್ಲಿಗೆ, ದಾಸವಾಳದ ಗಿಡ ನೆಟ್ಟು,
ಕೆಲ ವಾರಗಳಲ್ಲಿ ನಗುತ್ತಾ ಚಿಗುರೊಡೆವುದನ್ನು
ನೋಡುವುದೇ ಸಂತೋಷ , ಸ್ವರ್ಗ ಸಿಕ್ಕಹಾಗೆ-ಅದೇ ಈ ಮಣ್ಣಿನ ಗುಣ.

 

ಇದೇ ಮರಳಿನಲ್ಲಿ ಮಳೆ ಬಂದಾಗ,
ದಿನವೆಲ್ಲಾ ಆಡಿ, ಅಪ್ಪನ ಕೋಪಕ್ಕೆ ಗುರಿಯಾದದ್ದು.
ಇದೇ ಜೇಡಿಮಣ್ಣಿನಿಂದ ಮೊದಲ ಗಣಪನನ್ನು
ಮಾಡಿದಾಗ,
ನೆರೆಹೊರೆಯವರೆಲ್ಲಾ ಹೊಗಳಿದ್ದು,
ಅಪ್ಪ ಮಾತ್ರ ಬೈದಿದ್ದು,
ಶಾಸ್ತ್ರ ಪದ್ದತಿಯಂತೆ ಇಲ್ಲವೆಂದದ್ದು,
ನೋವು, ನಲಿವು ಎರಡೂ ಕೊಟ್ಟದ್ದು – ಇದೇ ಮಣ್ಣು.

 

ಮಣ್ಣು – ಎಂಥ ಅದ್ಭುತ ಆಧ್ಯಾತ್ಮಿಕತೆ,
ರಹಸ್ಯ ಬಿಟ್ಟುಕೊಡದ ವಿಚಿತ್ರ ಸತ್ಯ.

ಬದುಕ ಪಯಣದಲ್ಲಿ,
ಜೀವನ ಪ್ರೀತಿ ಬಿಟ್ಟು ಕೊಡದೆ,
ಮನಸ್ಸು ಬಯಸುವುದು –
ಇದೇ ಮಣ್ಣಲ್ಲಿ ಮಣ್ಣಾಗುವುದ.

ಧೂಳಿನ ಕಣ ಕಣವಾಗಿ ಮಣ್ಣಲ್ಲೇ ಮಣ್ಣಾಗುವ ಆಸೆ.

No comments:

Post a Comment

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ , ಅತಿನೀಲಿ ಕಿರಣಗಳ ರಕ್ಷಾ ಕವಚವದು , ಭೂಮಿಗೆ ತಂಪಾದ ಬೆಳಕ ನೀಡುವುದು , ಓಜೋನ್ ಅದರ ಹೆಸರು - ನಮ್ಮ ದೈವವದು .   ...