Saturday, November 15, 2025

ಪ್ರಕೃತಿ ರಹಸ್ಯ

ಸೂರ್ಯ ಕೆಲ ಸಮಯ  ಮರೆಯಾಗುವನು, 

ಆಕಾಶದಲ್ಲಿ ಛಾಯೆಯ ನೃತ್ಯ ನರ್ತನ. 

ತಿಮಿರೋದಯ ಲೋಕ ಕ್ಷಣಮಾತ್ರ ಸ್ಥಬ್ದ,

ನೈಸರ್ಗಿಕ ಕ್ರಿಯೆಗೆ ರೋಮಾಂಚನ, 

ಒಂದು ಕ್ಷಣ, ಪ್ರಕೃತಿ ನಿಶ್ಶಬ್ದವಾಗುತ್ತದೆ. 

ಆಗಸದಲ್ಲಿ ಒಂದು ರಹಸ್ಯ ಸಂಕೇತ-ಚಿನ್ನದುಂಗುರ,

ವಿಜ್ಞಾನಿಗಳಿಗೆ ಪ್ರಕೃತಿಯ ರಹಸ್ಯ ಭೇದಿಸುವ ಸಮಯ, 

ಸೂರ್ಯನ ಕಣ್ಣು ಮುಚ್ಚಾಲೆಯಾಟ ಅದ್ಭುತ ಕ್ಷಣ- ಸೂರ್ಯ ಗ್ರಹಣ.

 

ಹುಣ್ಣಿಮೆಯ ಚಂದ್ರನ ಅಂದ ಬಲು ಸೊಗಸು, 

ಸಮಯವೇ ಹಾಗೆ ಕಾಲೆಳೆಯುವುದು ಕರಿಯ ಛಾಯೆ. 

ರಾತ್ರಿ ನಿಶ್ಶಬ್ದ, ಚಂದ್ರನು ಕಣ್ಮರೆಯಾಗುವನು, 

ಭೂಮಿಯ ಛಾಯೆಗೆ ಮರೆಯಾಗುವನು. 

ವಿಜ್ಞಾನಿಗಳಿಗೆ ಕೌತುಕ - ಶೋಧನೆಗೆ ಹಾದಿ,

ಮತ್ತೆ ಬೆಳಗುವ ನಿರೀಕ್ಷೆಯ ಅದ್ಬುತ ಕ್ಷಣಕ್ಕೆ ಹಾತೊರೆಯುವ,

ಚಂದ್ರಮುಖಿಯ ಒಸಗೆ ರಹಸ್ಯಮಯ - ಚಂದ್ರ ಗ್ರಹಣ.

 

ಎರಡು ಹೃದಯಗಳು ಒಂದಾಗುವ ಕಾಲ, 

ಇದು ಮದುವೆಯ ಪವಿತ್ರ ಕ್ಷಣ.

ಆಕಾಶ ಕಾಯಗಳ ಗ್ರಹಣವಲ್ಲ,

ಭೂಗ್ರಹದ ಕಾಯಗಳ ಗ್ರಹಣ,

ನಕ್ಷತ್ರಗಳಲ್ಲ, ಮನಸ್ಸು, ಹೃದಯಗಳ ಸಂಗಮ. 

ಅಗ್ನಿಯ ಸಾಕ್ಷಿಯಾಗಿ, ಮಂತ್ರಗಳ ನಡುವೆ, 

ಜೀವಿತದ ಒಡಂಬಡಿಕೆಗೆ ಶುಭಾರಂಭ.

ಮನೆ ಮಂದಿ, ಬಂಧುಗಳಿಗೆ ಕೌತುಕ,

ಹೊಸ ಸಾಧನೆಯ ರಹದಾರಿಗೆ ಪಯಣ 

ಪ್ರೀತಿಯ ಬಂಧನ, ಜೀವನದ ಹೊಸ ಹಾದಿ- ಪಾಣೀ ಗ್ರಹಣ.

No comments:

Post a Comment

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ , ಅತಿನೀಲಿ ಕಿರಣಗಳ ರಕ್ಷಾ ಕವಚವದು , ಭೂಮಿಗೆ ತಂಪಾದ ಬೆಳಕ ನೀಡುವುದು , ಓಜೋನ್ ಅದರ ಹೆಸರು - ನಮ್ಮ ದೈವವದು .   ...