ಹಲವು ಹೊಸ ಚಿನ್ನದ ಚಿಗುರಿನ ಬಾನೆತ್ತರದ ಮರವದು,
ಹಳೇ ಮರ ,ಹೊಸ ಚಿಗುರು, ಆಗ ತಾನೇ ಕಣ್ಣ ತೆರೆಯುತ್ತಿತ್ತು,
ಹೊಸತನ, ಹೊಸ ಹುರುಪು, ಸೂರ್ಯರಶ್ಮಿಯ ಕಾಣ್ವ ತವಕ,
ಚಿಗುರು ಮರದ ಭರವಸೆ, ಭವಿಷ್ಯದಲ್ಲಿ ಬೆಳೆಯುವ ಹಂಬಲ.
ಅದೇ ಮರದ ಮತ್ತೊಂದು ಕೊಂಬೆಯಲ್ಲಿ ನಗುತ್ತಿದೆ ಹಣ್ಣೆಲೆ,
ಮಳೆ, ಗಾಳಿ, ಬಿಸಿಲ
ಕಂಡಿದೆ, ಧೈರ್ಯದಿ ಗಟ್ಟಿಯಾಗಿ ನಿಂತಿದೆ,
ಬದುಕ ಪಯಣದಲ್ಲಿ ಬರ, ನೋವು, ನಲಿವು ಎಲ್ಲವ ಕಂಡಿದೆ,
ಅನುಭವದಲ್ಲಿ ಮಾಗಿದೆ, ಹೊಸ ಚಿಗುರ ಕಂಡು ನಲಿದಿದೆ.
ಹೂವು ಬಿಡುವ ಸಮಯ ಸಂತೋಷದಿ ಬರಮಾಡಿಕೊಂಡಿದೆ,
ಮೊಗ್ಗು ಹೂವಾಗಿ, ಕಂಪು ಬೀರುವಾಗ ಪರಿಮಳವ ಆಸ್ವಾದಿಸಿದೆ,
ಮೊಗ್ಗು ಹೂವಾಗಿ, ಹೂವು ಕಾಯಾಗಿ, ಕಾಯಿ ಹಣ್ಣಾಗಿದೆ,
ಹಣ್ಣೆಲೆ ಎಲ್ಲವ ಕಂಡು ಹಿಗ್ಗಿದೆ, ಪರಿಪೂರ್ಣತೆಯ ಪಡೆದಿದೆ.
ಹಣ್ಣೆಲೆ ನಕ್ಕಿದೆ, ಹೊಸ ಚಿಗುರ ಸ್ವಾಗತಿಸಿದೆ, ಶಾಂತಿ ನೆಲೆಸಿದೆ,
ಹಕ್ಕಿಗಳು ಗೂಡು ಕಟ್ಟುತ್ತವೆ, ಹಕ್ಕಿಯ ಹಾಡಿಗೆ ಸಾಕ್ಷಿಯಾಗಿದೆ,
ಸಂಘರ್ಷದ ಜೀವನ ಹಣ್ಣೆಲೆಯದು, ಬದುಕಿನ ಆಟ, ಪಾಠ,
ಬದುಕಿನ ಹಂತಗಳ ಸಾಕ್ಷಿಯಾಗಿ ಮರವು ನಿಂತಿದೆ ಮೌನದಿ.
No comments:
Post a Comment