ಮರಗಳಿದ್ದವು ಇದೇ ರಸ್ತೆಯಲ್ಲಿ ದಶಕಗಳ ಹಿಂದೆ,
ಈ ದೊಡ್ಡ ಮರಗಳನ್ನು ಇದೇ ಜನರು ಕಡಿದಿದ್ದರು,
ಎಲ್ಲರೂ ಮರೆತರು ಅಭಿವೃದ್ಧಿಯ ಸಂಕೇತವೆಂದು,
ಅರಣ್ಯದ ಹೃದಯಕ್ಕೆ ಕೊಳ್ಳಿ ಇಟ್ಟವರು ಯಾರು?
ಹವಾಮಾನ ಬದಲಾಗಿದೆ - ಅತಿವೃಷ್ಟಿ,ಅನಾವೃಷ್ಟಿ,
ಬೆಟ್ಟ-ಗುಡ್ಡಗಳ ಕುಸಿತ, ಹಳ್ಳ-ಕೊಳ್ಳಗಳ ಪ್ರವಾಹ,
ಅಲ್ಲಿ ಮರಗಳಿದ್ದವು ಯಾರಿಗೂ ನೆನಪಿಲ್ಲ,
ವನಮಹೋತ್ಸವ ನಡೆಯುತ್ತಿದೆ, ಕಾಡು ಬೆಳೆಸಲೆಂದು.
ಅದೊಂದು ದೊಡ್ಡ ಬೆಲೆ ಬಾಳುವ ಮರ, ವಯಸ್ಸಾಗಿದೆ,
ಶತಮಾನಗಳ ಅನುಭವದ ಸಾಕ್ಷಿ,
ಸಾಮಾನ್ಯ ಜನರಿಗೆ ಯಾರ ತಲೆಮೇಲೆ ಬೀಳುವುದೋ ಎಂಬ ಪ್ರಾಣಭಯ,
ಪಾಲಿಕೆಯವರಿಗೆ ಯಾವಾಗ ಬೇಡದ ಕೆಲಸ ಬರುವುದೋ ಎಂಬ ಚಿಂತೆ,
ಮರ ಕಡಿಯುವವರಿಗೆ ಬೇಗ ಬೀಳಲಿ ಸಂಪಾದನೆಯಾಗುವುದೆಂಬ ಆಸೆ,
ಅರಣ್ಯ ಸಚಿವನಿಗೆ ಬೇಗ ಮುರಿದರೆ ಮನೆಯ ಕಪಾಟುಗಳಾಗುವುದೆಂಬ ಸ್ವಾರ್ಥ.
ಒಬ್ಬೊಬ್ಬರದು ಒಂದೊಂದು ಚಿಂತೆ,
ಅವರವರ ಸ್ವಾರ್ಥ ಅವರಿಗೆ ಹೆಚ್ಚು,
ಬದುಕಿ ಬದುಕಲು ಬಿಡಿ ತತ್ವವ ಮರೆತು,
ಪ್ರಕೃತಿ ಎಲ್ಲವ ನೋಡುತ್ತಿದೆ ಮೂಕ ಸಾಕ್ಷಿಯಾಗಿ,
ಏನನ್ನೂ ಮಾಡಲಾಗದೆ ಏಕಾಂಗಿಯಾಗಿ ಸೊರಗಿದೆ,
ನಾಳೆಗಳ ಭಯಾನಕ ಭವಿಷ್ಯವನ್ನು ನಿರೀಕ್ಷಿಸುತ್ತಾ...
No comments:
Post a Comment