Saturday, October 18, 2025

ಕಡಲೇ.....

 ಕಡಲೇ, ನೀನು ಎಷ್ಟು ಅಗಾಧ!

ಕಣ್ಣ ನೋಟ ಹರಿಸಿದಷ್ಟೂ ವಿಶಾಲ.
ಆಶ್ಚರ್ಯ, ಪರಮಾಶ್ಚರ್ಯನೀನು ಅನಂತ,
ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ?

 ಕಡಲೇ, ನಿನ್ನೊಳಗಿನ ರಹಸ್ಯವೇನು?

ಪ್ರಕೃತಿಯ ಗುಟ್ಟುಗಳು ಅಡಗಿಸಿಕೊಂಡವನೇ ನೀನು?
ನಿನ್ನ ಕಂಡಾಗಲೆಲ್ಲಾ ಮನವು ಪರಿತಪಿಸುತ್ತದೆ,
ನಿನ್ನನ್ನೇ ದಿಟ್ಟಿಸಿ ನೋಡುವ ಆಸೆ ಎನಗೆ.

 ಕಡಲೇ, ಜೀವಂತಿಕೆಯ ಸಂಕೇತವಂತೆ ನೀನು,

ನಿನ್ನೊಡಲಲಿ ಆಡುವ ಆಸೆ ಎನಗೆ.
ನಿಂತಿಹೆನು ಮೂಕನಾಗಿ ನಿನ್ನ ನೋಡುತ್ತಾ,
ನಿನ್ನಲೆಗಳ ಸಪ್ಪಳದಲ್ಲಿ ಏನೋ ಮಾಧುರ್ಯವಿದೆ.

 ಕಡಲೇ, ನಿನ್ನೊಡನೆ ಮಾತನಾಡುವ ಬಯಕೆಯಿದೆ,

ನಿನ್ನಲೆಗಳು ನನ್ನ ಕಾಲನ್ನು ಸ್ಪರ್ಶಿಸಿದರೆಆನಂದ!
ಬಿಸಿಗಾಳಿ, ನಿನ್ನ ಬಿಗಿದಪ್ಪಿದ ಭಾವ ಮನದಲ್ಲಿ,
ನಿನ್ನ ಸನ್ನಿಧಿಯಲ್ಲಿ ಎಲ್ಲವೂ ಮರೆತುಹೋಗುತ್ತದೆ.

 ಕಡಲೇ, ನಿಂತು ನೋಡುವಾಗಲೂ, ಕುಳಿತು ನೋಡುವಾಗಲೂ,

ಮಕ್ಕಳಂತೆ ನಿನ್ನಲೆಗಳೊಡನೆ ಆಡುವಾಗಲೂ,
ಮನದಲ್ಲಿ ಯಾವ ಚಿಂತೆಗಳೂ ನುಸುಳಲಾರವು,

ಸಚ್ಚಿದಾನಂದ ಸಂಗನಿನ್ನ ಒಡಲು.

 ಕಡಲೇ, ನಿನ್ನ ಸನ್ನಿಧಾನವ ಬಿಟ್ಟು ಹೊರಟರೆಸಂಕಟ,

ವಿರಹ, ಮನದಲ್ಲೇನೋ ಭಾರ.
ದಿಟ್ಟಿಸುತ್ತಾ, ನಗುತ್ತಾ, ಎಲ್ಲವ ಮರೆಯುತ್ತಾ,
ಕಾಣುವ ನಿನ್ನ ಒಡಲ ಸೇರಲಾರನೇ...

Friday, October 17, 2025

ಬಂಧಿ ಏಕಾದೆ ಮನವೇ?

 

ಅರೆ ಕ್ಷಣದ ಸುಖವೆಣಿಸಿ,

ಜಗದ ಮಾಯೆಗೆ ವಶವಾಗಿ,

ತನ್ನ ಚೈತನ್ಯವನೇ ಮರೆತು,

ಅಹಂಕಾರದಲಿ ಮೈಮರೆತು,

ಬಂಧಿ ಏಕಾದೆ ಮನವೇ?

 

ಎಲ್ಲವ ನೋಡಿಕೊಳ್ಳುವೆನೆಂದು,

ಅವ ನಂಬಿಕೆ ಇತ್ತು ಕಳುಹಿರಲು,

ಜಗದ ಮಾಯೆಗೆ ಸಿಲುಕಿದ ಮೇಲೆ,

ಅವನನ್ನೇ ಮರೆತು,

ಬಂಧಿ ಏಕಾದೆ ಮನವೇ?

 

ಬಣ್ಣ ಬಣ್ಣದ ಚಂದಕ್ಕೆ,

ಜೋತು ಬಿದ್ದು ಮಾಯೆಗೆ,

ನಿತ್ಯ ಕರ್ಮಗಳಲಿ ಸುಖ ಕಾಣದೆ,

ಕಾಣದ ಸುಖಕ್ಕೆ ಮನಸೋತು,

ಬಂಧಿ ಏಕಾದೆ ಮನವೇ?

 

ಆಂತರ್ಯದಲ್ಲಿ ಶಕ್ತಿ ಅನಂತವಾಗಿರಲು,

ಮೋಹದ ಬಲೆಗೆ ಸಿಲುಕಿ,

ನಿನ್ನ ನೀ ಮರೆತು,

ಶಕ್ತಿ ಹೀನನಾಗಿ,

ಬಂಧಿ ಏಕಾದೆ ಮನವೇ?

Saturday, October 11, 2025

ತಂಗಾಳಿಯ ಹಾಡು

 

ಸಂಜೆ ಆಗಸದಲ್ಲಿ ತಾರೆಗಳು ಹೊಳೆಯುವುದು, 

ಗಗನದಲ್ಲಿ ದೀಪಗಳ ಸಾಲು ಸಾಲು ಸರತಿಯಲ್ಲಿವೆ. 

ಚಂದ್ರನ ಬರುವಿಕೆಗೆ ತಾರೆಗಳು ಕಾಯುವುವು, 

ತಂಗಾಳಿ ಬೀಸುವಾಗ ಗಾಳಿ ಹಾಡು ಹಾಡುವುದು. 

 

ಮರಗಳ ನಡುವೆ ಹಕ್ಕಿಗಳು ತಂಪಾಗಿ ಮಲಗುವುವು, 

ತಂಗಾಳಿಯ ಸ್ಪರ್ಶಕ್ಕೆ ಕನಸುಗಳು ಕಣ್ಣು ತೆರೆಯುವುವು. 

ಹೊಂಗೆ ಮರದ ನೆರಳಲ್ಲಿ ತಾಯಿಯ ತಂಪು ನೆನಪಾಗುವುದು, 

ಪ್ರತಿ ಎಲೆಯಲ್ಲೂ ತಂಗಾಳಿಯ ಸಂಗೀತ ಹರಡುವುದು. 

 

ಈ ಜಗವು ದಿನದ ಗಡಿಬಿಡಿಯಲ್ಲಿ ಎಲ್ಲವ ಮರೆವುದು, 

ಇರುಳ ನಿದ್ದೆಯಲ್ಲಿ ಶಾಂತಿಯ ಹುಡುಕಾಟ ನಡೆಸುವುದು. 

ಚಿಂತೆ ಮರೆ ಆಗಲಿ, ವಿಶ್ರಾಂತಿಯಲ್ಲಿ ಶಾಂತಿ ಹರಡಲಿ,

ಹೃದಯ, ಮನಸ್ಸು ಮೌನದಲಿ ನವ ಚೈತನ್ಯ ಹೊರಳಲಿ.

 

ಅವಘಡವು ಅವಸರದ ಹೆಜ್ಜೆ, ತಾಳ್ಮೆಯೆಡೆ ಸಾಗಲಿ,

ಅಮೃತತ್ವದೆಡೆ ನಡೆಯಲಿ ನಮ್ಮಯ ಚಿತ್ತ, ಅದೇ ಗುರಿ.

ಹೃದಯದಲಿ ಹೊಮ್ಮಲಿ ಕರುಣೆ,  ಮಮತೆಯ ರಸಧಾರೆ,

ಒಳಗಣ್ಣ ತೆರೆ,ಬೆಳಕ ಹರಿದು ಕತ್ತಲೊಡಲಿ ಮನಮನಗಳಿಂದೆ.   

ಸಂಜೆಯ ಮೆರವಣಿಗೆ

 

ಬೆಟ್ಟಗಳ ಹಿಂದೆ ಸೂರ್ಯನು ಮಂಕಾಗಿ ಮರೆಯಾಗುತ್ತಾನೆ,
ಸಂಜೆಯ ಗಾಳಿ ಮೌನವಾಗಿ ಮೆರವಣಿಗೆ ಹೊರಡುವುದು.
ಬೆಳಕಿನ ಪರದೆ ಮೆಲ್ಲನೆ ಆಕಾಶದತ್ತ ಏರುವುದು,
ನಕ್ಷತ್ರಗಳು ಕಣ್ಣು ಮಿಟುಕಿಸುತ್ತಾ ಮಿಂಚುವುವು.

 

ಮನದೊಳಗಿನ ಆಲೋಚನೆಗಳು ನದಿಯಂತೆ ಹರಿಯುವುದು,
ಕನಸಿನಂತೆ ಮನದ ತೆರೆಯಲ್ಲಿ ಅವು ಮೂಡುವುವು.
ನೆನಪುಗಳು ಕೆಲವೊಮ್ಮೆ ನಕ್ಕು ಮರೆಯಾಗುವುವು,
ನೋವುಗಳು ಕಾರ್ಮೋಡದಂತೆ ಮನವ ಸುತ್ತುವರೆಯುವುದು.

 

ಕನಸೋ, ನನಸೋ ಎಂಬ ಭಾವನೆ ತಂಗಾಳಿಯಂತೆ ಬೀಸುವುದು,
ಪ್ರಕೃತಿಯ ನಿಯಮದಂತೆ ಎಲ್ಲವೂ ಶಾಂತವಾಗಿ ನಡೆಯುವುದು.
ಅರಿಯದೆ ನಾವು ಹೆದರುತ್ತೇವೆ, ತಾಳ್ಮೆಯಿಲ್ಲದೆ ತಿರುಗುವೆವು,
ಮನದ ಶಾಂತಿ ಕಳೆದು ಅಲೆಮಾರಿಯಂತೆ ಅಲೆಯುವೆವು.

 

ಮೌನ ಪ್ರಾರ್ಥನೆ ಹೃದಯದ ತಳದಲ್ಲಿ ಮಿಡಿಯುವುದು,
ಭರವಸೆಯ ಬೆಳಕು ಮೂಡಲೆಂದು ಮನಸು ಬಯಸುವುದು,

ನಿಜದ ನಂಬಿಕೆಯು ನಿಶಬ್ದವಾಗಿ ಬಲವಾಗುವುದು,

ಅದೃಶ್ಯದ ಬೆಳಕ ಕಿಡಿಯಿಂದ ಭರವಸೆ ಮೂಡುವುದು. 

Friday, October 10, 2025

ತೆರೆದು ಕೋ! - ಮನ

 ಮನಕೆ ಹಿಂಸೆ, ನೂರು ಯೋಚನೆ,

ಒತ್ತಡ , ಸಾಗಲಾರದ ಕೆಲಸ.

ಕತ್ತೆಯ ತರಹ ಹೊರಬೇಡ,

ವಿಶ್ರಾಂತಿ, ಶಾಂತಿ ಮನಕೆ ತೆಗೆದು ಕೋ!

 

ಪ್ರಪಂಚ ದೊಡ್ಡದು, ಕಿಟಕಿ ತೆರೆ,

ಓದು,ಓಡು, ಬೆಟ್ಟ ಹತ್ತು.

ಮನಸ್ಸು ಹಸಿರಾಗುವುದು,

ಹೊಸ ದಾರಿ ತೆರೆವುದು, ತೆರೆದು ಕೋ!.

 

ವಿರಾಮ, ಏಕಾಂತ, ಅಂಡಲೆ,

ಬಿಸಿ ಬಿಸಿ ಕಾಫಿ ಕುಡಿ,

ಸೈಕಲ್ ತುಳಿ, ಪುಸ್ತಕ ಓದು,

ನಿದ್ದೆ ಮಾಡು, ಕನಸು ಕಾಣು, ಬಳಸಿ ಕೋ!.

 

ಧ್ಯಾನ, ಯೋಗ  ಮಾಡು,

ಹಾರುವ ಹಕ್ಕಿಯ ನೋಡು,

ಕಾಯಕಕ್ಕೆ ಹೆಜ್ಜೆಯಿಡು,

ಯೋಚಿಸು, ಯೋಜಿಸು, ಜಯಶಾಲಿಯಾಗು.

ಹೊಸ ಬೆಳಕು

ದಿನದ ಕೆಲಸಗಳು ಒಂದೇ ರೀತಿಯಾಗಿವೆ,

ಕೆಲ ಸಮಯದ ನಂತರ ಬೋರ್ ಆಗುತ್ತವೆ.

ಮೊದಲ ದಿನ ಉತ್ಸಾಹ ತುಂಬಿಹರಿಯುತ್ತದೆ,

ಹೊಸದರಲ್ಲಿ ಅಗಸ ಬಟ್ಟೆ ಒಗೆದ ಹಾಗೆ,

ಕೆಲ ತಿಂಗಳ ನಂತರ, ಆ ಕೆಲಸವೇ ಬೇಸರ ತರುವುದು.

 

ನಮ್ಮೊಳಗೆ ಒಂದು ಚಿಕ್ಕ ಬೆಳಕು ಇದೆ- ಮಲಗಿದೆ,

ಹೊಸ ಚಿಗುರಿಗೆ  ಅದು ಸಹಾಯ ಮಾಡುತ್ತದೆ.

ಕೆಲಸದಿಂದ ವಿರಾಮ ತೆಗೆದು ಕೋ - ಪುಟಿಯುವುದು,

ಹೊಸತನವ ಪ್ರಯತ್ನಿಸು - ತೆರೆವುದು ಮನ.

 

ಅಡುಗೆ ಮಾಡು, ಚಿತ್ರ ಬಿಡಿಸು,

ಸಂಗೀತ ಗುನುಗು, ಇಷ್ಟವಾದ ಕೆಲಸ ಮಾಡು.

ಸಣ್ಣದು, ದೊಡ್ಡದೆಂಬುದಿಲ್ಲ.

ಸಂತೋಷ ಕೊಡುವುದಷ್ಟೇ ಸಾಕು.

 

ಒಮ್ಮೆ ಪ್ರಯತ್ನಿಸು, ವಿಫಲವಾದರೂ ಸರಿಯೇ,

ಹಲ ದಾರಿಯುಂಟು, ಹೊಸ ದಾರಿ ಹುಡುಕಬಹುದು .

ನವ ನವೀನ ಕೆಲಸ ಕಾರ್ಯಗಳು - ಉತ್ಸಾಹ ಹೆಚ್ಚು,

ಹೊಸ ಯೋಚನೆಗಳ ಹರಿವು , ಮನಸ್ಸು ಚುರುಕಾಗುತ್ತದೆ.

Monday, October 6, 2025

ಅತಿವೃಷ್ಟಿ- ಅನಾವೃಷ್ಟಿ,

 ಮರಗಳಿದ್ದವು ಇದೇ ರಸ್ತೆಯಲ್ಲಿ ದಶಕಗಳ ಹಿಂದೆ,

ಈ ದೊಡ್ಡ ಮರಗಳನ್ನು ಇದೇ ಜನರು ಕಡಿದಿದ್ದರು,

ಎಲ್ಲರೂ ಮರೆತರು ಅಭಿವೃದ್ಧಿಯ ಸಂಕೇತವೆಂದು,

ಅರಣ್ಯದ ಹೃದಯಕ್ಕೆ ಕೊಳ್ಳಿ ಇಟ್ಟವರು ಯಾರು?

ಹವಾಮಾನ ಬದಲಾಗಿದೆ - ಅತಿವೃಷ್ಟಿ,ಅನಾವೃಷ್ಟಿ,

ಬೆಟ್ಟ-ಗುಡ್ಡಗಳ ಕುಸಿತ, ಹಳ್ಳ-ಕೊಳ್ಳಗಳ ಪ್ರವಾಹ,

ಅಲ್ಲಿ ಮರಗಳಿದ್ದವು ಯಾರಿಗೂ ನೆನಪಿಲ್ಲ,

ವನಮಹೋತ್ಸವ ನಡೆಯುತ್ತಿದೆ, ಕಾಡು ಬೆಳೆಸಲೆಂದು.

 

ಅದೊಂದು ದೊಡ್ಡ ಬೆಲೆ ಬಾಳುವ ಮರ, ವಯಸ್ಸಾಗಿದೆ,

ಶತಮಾನಗಳ ಅನುಭವದ ಸಾಕ್ಷಿ,

ಸಾಮಾನ್ಯ ಜನರಿಗೆ ಯಾರ ತಲೆಮೇಲೆ ಬೀಳುವುದೋ ಎಂಬ ಪ್ರಾಣಭಯ,

ಪಾಲಿಕೆಯವರಿಗೆ ಯಾವಾಗ ಬೇಡದ ಕೆಲಸ ಬರುವುದೋ ಎಂಬ ಚಿಂತೆ,

ಮರ ಕಡಿಯುವವರಿಗೆ ಬೇಗ ಬೀಳಲಿ ಸಂಪಾದನೆಯಾಗುವುದೆಂಬ ಆಸೆ,

ಅರಣ್ಯ ಸಚಿವನಿಗೆ ಬೇಗ ಮುರಿದರೆ ಮನೆಯ ಕಪಾಟುಗಳಾಗುವುದೆಂಬ ಸ್ವಾರ್ಥ. 

 

ಒಬ್ಬೊಬ್ಬರದು ಒಂದೊಂದು ಚಿಂತೆ,

ಅವರವರ ಸ್ವಾರ್ಥ ಅವರಿಗೆ ಹೆಚ್ಚು,

ಬದುಕಿ ಬದುಕಲು ಬಿಡಿ ತತ್ವವ ಮರೆತು,

ಪ್ರಕೃತಿ ಎಲ್ಲವ ನೋಡುತ್ತಿದೆ ಮೂಕ ಸಾಕ್ಷಿಯಾಗಿ,

ಏನನ್ನೂ ಮಾಡಲಾಗದೆ ಏಕಾಂಗಿಯಾಗಿ ಸೊರಗಿದೆ,

ನಾಳೆಗಳ ಭಯಾನಕ ಭವಿಷ್ಯವನ್ನು ನಿರೀಕ್ಷಿಸುತ್ತಾ...

Sunday, October 5, 2025

ಕಾಯಕದ ಹಾಡು

ಬೆಳಗಿನ ಜಾವದ ನಿಶಬ್ದದ ಸಂಗದಲ್ಲಿ

ನಡೆವನು ಕರ್ತವ್ಯದ ಜಾಡಿನಲ್ಲಿ

ಶ್ರದ್ಧೆ, ಪ್ರೀತಿ ತುಂಬಿದ ಹೃದಯದಲ್ಲಿ

ಕೆಲಸ ಮಾಡುವರು ಪ್ರತಿಫಲ ಬಯಸದೆ

 

ಹೃದಯದಲ್ಲಿ ಸಂತೋಷ, ಬಾಯಲ್ಲಿ ಹಾಡು

ಕಾಯಕದಲ್ಲಿ ನಲಿವು ಕಾಣುವ ಮುಗ್ದ ಮನಸ್ಸು

ಶುದ್ಧ ಹೃದಯ, ಕೆಲಸದಲ್ಲಿ ಸ್ವಚ್ಛತೆ

ಕಾಣುವುದು ಎಲ್ಲರಿಗೂ ಕೆಲಸದ ಗುಣಮಟ್ಟದಲ್ಲಿ

 

ತೊಟ್ಟ ಅಂಗಿ ಮಾಸಿದೆ - ಹಳೆಯದು

ಬೆನ್ನು ಬಾಗಿದೆ - ವಯಸ್ಸಾಗಿದೆ

ಕಣ್ಣು ಚಿಕ್ಕದಾಗಿದೆ - ಹೊಳಪಿದೆ

ಮನದಲ್ಲಿ ನೋವಿದೆ - ಜೀವನ ಪ್ರೀತಿಯಿದೆ

 

ಪ್ರತಿದಿನವೂ ಕಾಣುವ ತವಕವಿದೆ,
ಗುನುಗುವ ಹಾಡು ಕೇಳುವ ಆಸೆಯಿದೆ,
ಬೆಳಕು ಕಣ್ಣು ಬಿಡುವ ಮೊದಲು,
ಮಾಯೆಯಂತೆ ಕಾಯಕದಲ್ಲಿ ಕಾಣುವನು

Saturday, October 4, 2025

ಹೃದಯ ಸ್ಪರ್ಶಿಸು, ಜನರೇ ಮೊದಲು

             (Touch the heart people first)

 1947 ವೆಜ್ ಹೋಟೆಲ್ ಮಂದ ಬೆಳಕಿನ ಕೆಳಗೆ,

ಮತ್ತೆ ಭೇಟಿಯಾದೆವುಸಂತೋಷದ ಕ್ಷಣಗಳು.

ಹಳೆಯ ಸ್ನೇಹಿತರು, ಹೊಸ ಕಥೆಗಳು, ನಗು ತುಂಬಿದ ಮೇಳ,

ಹೃದಯ ಸ್ಪರ್ಶಿಸು, ಜನರೇ ಮೊದಲುನಮ್ಮ ನಿಜದ ಬೆಳಕು.

                         ಹತ್ತು ಹಲವು ವರ್ಷಗಳು ಕಳೆದಿವೆ, ಹೃದಯದ ಬಂಧ ಬದಲಾಗಿಲ್ಲ,

                        ಟೇಬಲ್ಸುತ್ತಲೂ ನೆರೆದಿದ್ದವುನೆನಪಿನ ನಕ್ಷತ್ರಗಳು.

                        ಅಡುಗೆ ಸುವಾಸನೆಗೆ ಬೆರೆತಿದ್ದವುನಮ್ಮ ಕಾಯಕದ ಕಥೆಗಳು,

                        ನಮ್ಮ ಗೆಲುವುಗಳು, ನೋವುಗಳುಎಲ್ಲವೂ ಹಂಚಿಕೊಂಡೆವು,

                        ಹೃದಯ ಸ್ಪರ್ಶಿಸು, ಜನರೇ ಮೊದಲು - ನಮ್ಮ ತಳಹದಿ.

 ಹೆಸರುಗಳು ಮಾತ್ರ ಉಳಿದಿದ್ದವುಹಳೆಯ ಕಾಲದ ಪರಿಚಯ,

ಹಾಸ್ಯ, ಆಟ, ಮತ್ತು ನಿಜವಾದ ಸ್ನೇಹದ ಪ್ರತಿ ಕ್ಷಣ.

ಪದವಿ ಇಲ್ಲ, ನಾಟಕವಿಲ್ಲನಿಜದ ನಾವು ಮಾತ್ರ,

ನಾವು ನಾವಾಗೇ ಇದ್ದೆವು - ಪರಿಶುದ್ಧ ಆತ್ಮಗಳು,

ಹೃದಯ ಸ್ಪರ್ಶಿಸು, ಜನರೇ ಮೊದಲು  ನಮ್ಮ ಮೌಲ್ಯ.

                     ಪ್ರತಿ ಕ್ಷಣವೂ ಕನಸಿನಂತೆ ಕಳೆಯಿತು,

                     ನೆನಪುಗಳು ನಮ್ಮೊಳಗೆ ಶಾಶ್ವತವಾಗಿ ಅಚ್ಚೋತ್ತಿತು.

                    ಎಲ್ಲಾ ಮುಗಿದು ಹೊರಡುವಾಗ , ಕಂಗಳಲ್ಲಿ ಕಣ್ಣೀರು

                    ಮಳೆಯೂ ನಮ್ಮ ಸಂತೋಷಕ್ಕೆ ಸಾಕ್ಷಿಯಾಯಿತು

                    ಹೃದಯ ಸ್ಪರ್ಶಿಸು, ಜನರೇ ಮೊದಲು - ನಮ್ಮ ಉಸಿರು.

 ಪುನರ್ಮಿಲನವೆಂದರೆ ಊಟ ಮಾತ್ರವಲ್ಲ,

ಅದು ಆತ್ಮಗಳ ಸಂಗಮನಿಜವಾದ ಸಂಬಂಧ.

KTTM ಎಂದೆಂದಿಗೂ ನೆನಪಿನ ಪುಟವಾಗಿರುತ್ತದೆ,

ಸ್ನೇಹ, ಪ್ರೀತಿ, ಮತ್ತು ಏಕತೆಯ ಸಂಕೇತ.

ನೆನಪನ್ನು ಹೃದಯದಲ್ಲಿ ಉಳಿಸಿಕೊಳ್ಳೋಣ

ಹೃದಯ ಸ್ಪರ್ಶಿಸು, ಜನರೇ ಮೊದಲು - ಮನದಲ್ಲಿ ಸದಾ ಹಸಿರು.

ದೇವಕುಂಜರ

ಸೆರೆಮನೆಯಲ್ಲಿ ಬಂಧಿಸಿರಲು ದೇವಕಿ,

ಕಾರ್ಗತ್ತಲ ರಾತ್ರಿಯಲಿ ಅವತರಿಸಿತು,

ನೋವು, ಅಸಹಾಯಕತೆಯ ಕಣ್ಣೀರು

ಒರೆಸಲು ಅವತರಿಸಿತು ದೇವಕುಂಜರ.

 

ದರ್ಪ,ದೌರ್ಜನ್ಯಗಳು ನಡೆಯುತಿರಲು,

ಅಧರ್ಮ, ನೋವುಗಳೇ ಮೆರೆಯುತಿರಲು,

ಧರ್ಮ, ಗೋವು, ಶಿಷ್ಟರ, ಮಾನಿನಿಯರ

ರಕ್ಷಿಸಲು ಧರೆಗಿಳಿಯಿತು ದೇವಕುಂಜರ.

 

ತಾಯಿಯ ನೋವ ಮರೆಯಲು,

ರಕ್ಕಸರ ಅಟ್ಟಹಾಸವ ಅಳಿಸಲು,

ವನಿತೆಯರ ಗೌರವ ಕಾಪಾಡಲು,

ಭೂಮಿಗೆ ಅಡಿಯಿಟ್ಟಿತು ದೇವಕುಂಜರ.

 

ಯಾರಿಗೂ ತಿಳಿಯಲಾಗದವನು,

ಯಾವ ಅಳೆತೆಗೂ ಸಿಗದವನು,

ಎಲ್ಲವೂ ತಾನೇ ಆಗಿರುವವನು,

ಶರಣಾಗತಿಗೆ ಒಲಿಯುವವನು ನಮ್ಮ ಕೃಷ್ಣಾ.

Thursday, October 2, 2025

ಪವಿತ್ರ ಸ್ವಾತಂತ್ರ

ಕಷ್ಟ ಸಹಿಸಿ, ನೋವು ಅನುಭವಿಸಿ,

ಪ್ರಾಣ ಹರಣ, ರುಧಿರ ಹರಿಸಿ,

ಗಳಿಸಿದೆವು ಅಮೂಲ್ಯ ಸ್ವಾತಂತ್ರ!

 

ಬೂಟುಗಾಲುಗಳಿಂದ ಒದೆಸಿಕೊಂಡವರೆಷ್ಟೋ?

ಎದೆಯ ಛೇಧಿಸಿದ ಗುಂಡುಗಳೆಷ್ಟೋ?

ನೇಣಿಗೆ ಒಡ್ಡಿದ ಕೊರಳುಗಳೆಷ್ಟೋ?

ತ್ಯಾಗದಿಂದ ಗಳಿಸಿದೆವು ಸ್ವಾತಂತ್ರ!

 

ಭಿಕ್ಷೆಯಾಗಿ ಸಿಕ್ಕಿಲ್ಲವೀ ಸ್ವಾತಂತ್ರ!

ಕಣ್ಣೀರು, ನೋವು, ಹುತಾತ್ಮರ ತ್ಯಾಗ,

ವೀರ ಯೋಧರ ಸಮಾಧಿಯ ಮೇಲೆ

ಬೆಳೆದೆವು ನಮ್ಮ ಭವಿಷ್ಯದ ಸ್ವಾತಂತ್ರ!.

 

ರಾಜಕೀಯ, ಸ್ವಾರ್ಥ ಸಾಧನೆಯಿಂದ 

ನಿಜ ಸ್ವಾತಂತ್ರದ ಹರಣವಾಗಿದೆ.

ಹುತಾತ್ಮರ ಬಲಿದಾನ ವ್ಯರ್ಥವಾಗಿಸದಿರೋಣ

ಅವರ ತ್ಯಾಗದ ನೆಲೆಯ ಮೇಲೆ

ಅರಳಿಸೋಣ ಸ್ವಾತಂತ್ರ್ಯದ ಹೂವು.

 

ಅವರ ಕನಸುಗಳನ್ನು ಜೀವಿಸೋಣ,

ನಮ್ಮ ನಾಳೆಗಳನ್ನು ಬೆಳಗಿಸೋಣ,

ಉಳಿಸಿಕೊಳ್ಳೋಣ, ಗೌರವಿಸೋಣ

ಸ್ವಾತಂತ್ರ, ಪವಿತ್ರ ಸ್ವಾತಂತ್ರ.

ಮಧುರ ಬೆಳಗು

 

ಬಿಸಿ ಬಿಸಿ ಕಾಫಿಯೊಂದಿಗೆ ತುಟಿಯಲ್ಲಿ ನಗುವೊಂದಿರಲಿ

ನಮ್ಮ ಸಂತೋಷದಲ್ಲಿ ಅದು ಕುದಿಯಲಿ

ನಮ್ಮ ಹೃದಯದ ತುಂಬೆಲ್ಲಾ ಸಂತೋಷ ತುಂಬಲಿ

ಎದೆಯೊಳಗೆ ಮುಂಜಾನೆಯ ಲಹರಿ ಮಿಡಿಯಲಿ

ನನ್ನೊಳಗೆ ನನ್ನ ನಗು ಮಂದವಾಗಿ ಮೊಳಗುತ್ತಿರಲಿ.

 

ಬೆಳಗಿನ ಬೆಳಗು ನಗುತ್ತಾ ಕಿಟಕಿಯಿಂದ ಹರಿಯಲಿ,

ಮನದೊಳಗಿನ ಕನಸುಗಳಿಗೆ ರೆಕ್ಕೆ-ಪುಕ್ಕ ಕಟ್ಟಲಿ,

ಪ್ರತಿ ಉಸಿರಿನಲ್ಲಿ ನವ ಚೈತನ್ಯ ತುಂಬಲಿ,

ಪ್ರತಿ ದಿನವೂ ಬಣ್ಣಗಳಿಂದ ಕೂಡಿ ಸಾಗಲಿ.

 

ಕೈಯಲ್ಲಿ ಕಾಫಿ, ಮನದಲ್ಲಿ ಕನಸ ನಕ್ಷೆಯಿರಲಿ,

ಬಿಸಿಯ ಕಾಫಿಯ ಸೇವನೆಯಲ್ಲಿ ಪ್ರೇರಣೆಯಿರಲಿ,

ಕಂಗಳಲ್ಲಿ ಚೈತನ್ಯ ತುಂಬಿ ಮನವು ಹಗುರಾಗಲಿ,

ದಿನದ ಆರಂಭ ಬಿಸಿ ಕಾಫಿ, ತುಟಿಯಂಚಲಿ ನಗುವಿರಲಿ.

 

ಸಂತೋಷದ ಕ್ಷಣಗಳು ಹೃದಯದಲ್ಲಿ ತುಂಬಲಿ,

ನಗು-ಕಾಫಿ-ಕನಸು-ಬೆಳಕುಗಳೇ ಮಂತ್ರಗಳಾಗಲಿ,

ಈ ಪದ್ಯದ ಪ್ರತಿ ಸಾಲಲ್ಲೂ ನೀನು ನೆನೆಪಾಗಿ ಉಳಿಯಲಿ,

ಪ್ರತಿದಿನ ಹೊಸ ಆರಂಭಕ್ಕೆ ಹಾತೊರೆಯೋಣ ಮುದದಿಂದಲಿ. 

Wednesday, October 1, 2025

ಜನನ ಮರಣ

 

ಉಸಿರಾಟ ನಡೆದಿದೆ ನಿಲ್ಲದೆ,

ಭಾರವೋ?, ಹಗುರವೋ?

ಬಲ್ಲವರಾರು?, ಹೇಳುವರಾರು?

 

ಶತಶತಮಾನಗಳ ಮೌನ - ಶಾಂತ, ಪ್ರಶಾಂತ,

ಮೌನ ಮಡುಗಟ್ಟಿದೆ  -  ತಳಮಳವಿಲ್ಲದೆ!,

ಇತಿಹಾಸದ ಪುಟಗಳಲ್ಲಿ ನೋವು ತುಂಬಿದೆ,

ನೋವು, ರುಧಿರ ಹರಿದು ಮೌನ ತಾಳಿದೆ

 

ಸಮಯ ಓಡುತ್ತಲೇ ಇದೆ - ಕಾಲಚಕ್ರ,

ನಾವು ಹಿಂದೆ ಬಿದ್ದಿದ್ದೇವೆ - ಕುದುರೆ ಹತ್ತಲು,

ಒಂದು ನೋಟ, ಒಂದು ಪದ,

ಮನದಲ್ಲಿ ಮೌನ ಹರಡಿದೆ

 

ಜಗತ್ತು ತಿರು, ತಿರುಗುತ್ತಲೇ ಇದೆ,

ವಿರಾಮ ನಿರೀಕ್ಷಿಸುತ್ತಿದೆ - ನಿಲ್ಲಲೆಂದು,

ರಾತ್ರಿ - ಹಗಲು ಕಾಲಚಕ್ರ ತಿರುಗುತ್ತಿದೆ,

ನೋಡ ನೋಡುತ್ತಲೇ ಭ್ರಮೆ ಆವರಿಸಿದೆ

 

ಜನನ ಮರಣದ  ಉಸಿರಾಟ,

ಎಲ್ಲವೂ ಕೌತುಕ - ಅರ್ಥ ಅಗಾಧ.

ಸ್ನೇಹ - ವ್ಯಾಖ್ಯಾನ

 

ಸ್ನೇಹವೆಂದರೆ ಏನು? ಹೇಗೆ ಹೇಳುವುದು?

ನಿಘಂಟಿನ ಅರ್ಥ ತಿಳಿದಿದೆ ಎಲ್ಲರಿಗೂ,

ಪದಗುಚ್ಛಗಳ ಆಡಂಬೋಲವಲ್ಲ,

ನಾಮಪದ, ಕ್ರಿಯಾಪದ, ಏನೆಲ್ಲಾ!

ಸ್ನೇಹದ ಅರ್ಥ ಅಮಿತವಾದುದು,

ವ್ಯಾಖ್ಯಾನದ ಅಗಾಧತೆ- ಮಿತವಾದುದು, 

ಅನುಭವದ ಆಳ, ಅಗಲ- ಅನಂತ,

ಸ್ನೇಹವೆಂದರೆ ಹೃದಯದ ನಂಟು,

ಪದಗಳಲ್ಲಿ ಸೆರೆಯಾಗದ ಅನುಭವ.

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...