Wednesday, December 31, 2025

ಶಕ್ತಿಯ ಹಾದಿ

ನೋವು ಬಂದಾಗ ಹೃದಯ ನಲುಗದಿರಲಿ,

ನೋವ ಎದುರಿಸುವ ತಿಕ್ಕಾಟದಿ ಬೆಳಕು ಕಾಣಲಿ.

ಹರಿವ ಕಣ್ಣೀರ ಹನಿಯಲಿ ಸುಖದ ಬೀಜ ಬಿತ್ತೋಣ,

ಶಿಸ್ತಿನ ನೋವ ಹಾದಿಯ ಬಳಸಿ ಜೀವನ ಬೆಳೆಯೋಣ.

 

ನೋವು  ಬರಲಿ ಎದುರಿಸೋಣ ಹಠ, ಧೈರ್ಯದಿ,

ನೋವ ಮರೆಮಾಡುವುದು ಬೇಡ , ಬರಲಿ ಬಿಡಿ.

ಇರುವ ನೋವು ಮನದ ಶಾಂತಿಯ ಕದಡುವುದು,

ಅನುಭವಿಸಿ, ಎದುರಿಸಿ ಹೃದಯದಿ ಬಲ ನೀಡುವುದು.

 

ಬೆಳಗಿನ ದಿನಚರಿ ಹವ್ಯಾಸ, ಅಭ್ಯಾಸ ಶಕ್ತಿ ತುಂಬುವುದು,

ಸಂಜೆಯ ಸೂರ್ಯಾಸ್ತ ಮನದಲಿ ಶಾಂತಿ ತುಂಬುವುದು,

ಸಣ್ಣ, ಸಣ್ಣ ಹೆಜ್ಜೆ ಇಡು, ದೊಡ್ಡ ಬದಲಾವಣೆಗೆ ಸಜ್ಜಾಗು,

ನಿರಂತರತೆಯ ಕಾಯ್ದುಕೋ, ಹೊಸ ಗುರಿಯೆಡೆ ಪಕ್ಕಾಗು.

 

ನೋವ ಅನುಭವಿಸಿ ದಾಟು, ನಗು ಅರಳುವುದು,

ಪಕ್ವವಾಗಿ ಹೃದಯದಿ ಹೊಸ ಕನಸು ಮೂಡುವುದು.

ತಾಳ್ಮೆ, ಶಿಸ್ತು, ಧೈರ್ಯ, ನಿರಂತರತೆಗೆ ತಲೆ ಬಾಗು,

ಅಭ್ಯಾಸ, ಹವ್ಯಾಸದಿ ಹೃದಯ ತೆರೆದು ಗೆಲುವಾಗು.

ಶಿಸ್ತಿನ ಪಿಸುಮಾತು

ಬೆಳಗಿನ ಬೆಳಕು ಮನದ ಬಾಗಿಲು ತಟ್ಟಿದಾಗ,

ಹೃದಯದೊಳಗೆ ಶಾಂತಿ ಕಿರಣ ಹರಿದಾಗ,

ಸಣ್ಣ ಸಣ್ಣ ಹೆಜ್ಜೆಗಳು ದಿನವನ್ನು ಕಟ್ಟುವುದು,

ಶಿಸ್ತಿನ ಹೂವು ಹೃದಯದಲ್ಲಿ ಅರಳುವುದು.

 

ನಿರಂತರತೆಯ ನಾದವು ಜೀವನದಲ್ಲಿ ಹೊಮ್ಮುವುದು,

ಸರಳ ದಿನಚರಿ ನೀಡುವುದು ಶಾಂತಿ, ಸಮಾಧಾನ,

ಪ್ರತಿ ಕ್ಷಣವೂ ಮನಕೆ ತುಂಬುವುದು ಆಂತರಿಕ ಶಕ್ತಿ,

ಅಭ್ಯಾಸವೇ ನಮ್ಮ ನಿಜವಾದ ಅದ್ಬುತ ಬಲ, ಶಕ್ತಿ.

Saturday, December 27, 2025

ಧೈರ್ಯವೇ ಸೇತುವೆ

ಸಂದೇಹದ ನೆರಳು ಮನದಲಿ ಬೀಡು ಬಿಟ್ಟರೆ,

ಕನಸುಗಳ ಬೆಳಕಿಗೆ ಗ್ರಹಣ ಹಿಡಿಯುವುದು.

 

ನಂಬಿಕೆಯ ಬಲ ದೀಪ ಹಚ್ಚಿದಾಗ ಮಾತ್ರ,

ನಾಳೆಯ ಹಾದಿಗೆ ದಾರಿದೀಪವಾಗುವುದು.

 

ಧೈರ್ಯವೇ ಸೇತುವೆ, ಬಲ, ಆಶೆಯೇ ದಾರಿ,

ಸಂದೇಹವಿಲ್ಲದ ಮನವೇ ಸಾಧನೆಗೆ ರಹದಾರಿ.

ಸಣ್ಣ ಹೆಜ್ಜೆ

ಪ್ರತಿ ದಿನದ ಸಣ್ಣ ಹೆಜ್ಜೆಯಿಡು,

ಮುಗಿಯದ ದಾರಿಯಲಿ ಬೆಳಕ ಕಾಣು.

 

ಇಂದೇ ಸಣ್ಣ ಪ್ರಯತ್ನದ ಬೀಜ ಬಿತ್ತಿದರೆ,

ನಾಳೆ ದೊಡ್ಡ ಕನಸುಗಳ ಮರ ಬೆಳೆವುದು.

 

ತಾಳ್ಮೆಯ ಹಾದಿ, ಹಠಮಾರಿ ಮನ,ತಪಸ್ಸು,

ದೂರವಿಲ್ಲ ಸಾಧನೆಯ ಗೀತೆ ಹಾಡುವ ದಿನ.

ಹೂವ್ನಗು

ನಗು ಒಂದು ಹೂವು, ಹೃದಯದಲ್ಲಿ ಅರಳಲಿ,

ಸಣ್ಣ ದಯೆಯ ಮಾತು, ಲೋಕವನ್ನೇ ಬೆಳಗಲಿ.

 

ಮುಗ್ಧ ಕಣ್ಣನೋಟದಿ, ಸ್ನೇಹದ ಬೆಳಕು ಹರಡಿ,

ಯಾರಿಗಾದರೂ ಸಂತೋಷ ತರುವ ಮನಸ್ಸು ಮಾಡಿ.

 

ನೀವು ನೀಡಿದ ನಗು, ಹೃದಯದಲ್ಲಿ ಉಳಿಯುವುದು,

ಅದು ಬೆಳಕಾಗಿ, ಜಗವನ್ನೇ ಸುಂದರಗೊಳಿಸುವುದು.

ಅರಳಿದ ಮನಸ್ಸು

ಒಳಗಿನ ಕಿಡಿ, ಚಿಕ್ಕದು ಪ್ರಕಾಶಮಾನ

ಚಿಂತನೆ ಬಡಿದೆಬ್ಬಿಸಿ, ಕತ್ತಲೆಯ ಓಡಿಸುವುದು.  

ಮಣ್ಣಿನ ಪಾತ್ರೆಯಲ್ಲ, ಬೇಕು,ಬೇಡಗಳ ತುಂಬುವುದಲ್ಲ, 

ಅದ್ಭುತ ಮಾರ್ಗಗಳನ್ನು ತೋರಿಸುವ ದಾರಿದೀಪ. 

 

ಪ್ರತಿ ಪ್ರಶ್ನೆ ಮೃದುವಾದ ಭಾವನೆಗಳ ಎಬ್ಬಿಸುವುದು, 

ಪ್ರತಿ ಕನಸು ಕಲಿಕೆಯ ಜ್ವಾಲೆಗೆ ಹೆಸರು ನೀಡುವುದು. 

ಒಮ್ಮೆ ಅರಳಿದ  ಮನಸ್ಸು ಹಾರಲು ಕಲಿಯುವುದು, 

ಮನ್ವಂತರದ ಮನುಕುಲಕ್ಕೆ ಜೀವಂತ ಬೆಳಕಾಗುವುದು.

Friday, December 26, 2025

ಮೊದಲ ಹೆಜ್ಜೆ

ಬೀಜವು ದೊಡ್ಡದಾಗಿರಬೇಕಿಲ್ಲ

ಜಗದ ಬೆಳಕ ಕಾಣಲು ಸಣ್ಣ ಆಸೆ, ಧೈರ್ಯ ಸಾಕು. 

ಮೊಗ್ಗು ಚಿಕ್ಕದಾದರೂ, ಭರವಸೆಯಿಂದ ಹಿಗ್ಗಿ,  

ಮರ ಆಕಾಶದತ್ತ ಎತ್ತರವಾಗಿ ಬೆಳೆವುದು.  

 

ಮಹತ್ವವು ಧೈರ್ಯದಿಂದಲೇ ಹುಟ್ಟುವುದು

ಚಿಕ್ಕ ಹೃದಯಗಳಲ್ಲಿ, ಭರವಸೆಯ ಕಂಗಳಲ್ಲಿ.  

ಇಂದಿನ ಚಿಕ್ಕ ಹೆಜ್ಜೆ, ಸರಳವಾದರೂ, 

ನಾಳೆಯ ಸಾಧನೆ ವಿಶ್ವ ವ್ಯಾಪಿಯಾಗುವುದು.  

Wednesday, December 24, 2025

ಅಟಲ - ಅಚಲ

ವಿನಯ ಮೂರ್ತಿ, ಧೈರ್ಯದ ದೀಪ,

ದೇಶದ ಹೃದಯದಲ್ಲಿ ಶಾಶ್ವತ ರೂಪ.

 

ರಾಜಕೀಯದ ಗಗನದಲ್ಲಿ ಬೆಳಕಾದವ,

ಕಾವ್ಯದ ಹೃದಯದಲ್ಲಿ ನೆಲೆಸಿದವ.

 

हार नहीं मानूंगा…” ಎಂದು ಘೋಷಿಸಿದವ,

ಅಸಾಧ್ಯವನ್ನೂ ಸಾಧ್ಯಗೊಳಿಸಿದವ.

 

ಸುಶಾಸನದ ದಾರಿ ತೋರಿದವ,

ಜನಮನದಿ ಕವಿಯಾಗಿ ಉಳಿದವ.

ಮನದ ಬೆಳಕು

ಕನಸುಗಳ ದಾರಿ ದೂರವಲ್ಲ,

ಮನದ ಬೆಳಕು ಹಾದಿ ತೋರಲಿದೆ.


ಧೈರ್ಯದ ಹೆಜ್ಜೆ ಇಟ್ಟಾಗಲೇ,

ಮಿತಿಯೆಂಬ ಗೋಡೆ ಕುಸಿಯಲಿದೆ.


ನಂಬಿಕೆಯ ಬೀಜ ಬಿತ್ತಿದರೆ,

ಜೀವನದಲ್ಲಿ ಹೂವು ಅರಳಲಿದೆ.

ಅಸೀಮ ಮನಸ್ಸು

ಮನದಲ್ಲಿ  ಗಡಿಗಳು ನಿನ್ನ ದಾರಿಯಲ್ಲಿ,

ನಡೆ ಮುಕ್ತವಾಗಿ ತೊರೆದು ಭಯವಿಲ್ಲಿ.

 

ಕನಸುಗಳೆಲ್ಲಾ ನಿನ್ನ ಕೈಯಲ್ಲಿ,

ಧೈರ್ಯವಿದ್ದರೆ ಜಯವು ನಿನ್ನ ತೆಕ್ಕೆಯಲ್ಲಿ.

 

ಕಾಣದ ಮಿತಿಯೆಂದರೆ ಮನದ ಕಲ್ಪನೆ,

ಸಕಾರಾತ್ಮಕತೆ ನೀಡುತ್ತದೆ ಶಕ್ತಿಯ ಪರಿಕಲ್ಪನೆ.

 

ನಿನ್ನ ಮನಸ್ಸೇ ನಿನ್ನ ಅಗಾಧ ಬಲ,

ಅದು ತೆರೆದರೆ ಗೆಲುವೇ ನಿನ್ನ ಫಲ.

Tuesday, December 23, 2025

ನಾಳೆಗಳು ನನ್ನವು !

 ಕಂಡೆ ಅದೆಷ್ಟು ಸೂರ್ಯೋದಯಗಳ,

ಕಂಡೆ ಎಷ್ಟೊಂದು ಚಂದ್ರೋದಯಗಳ,

ಮನವು ಮುದಗೊಳ್ಳುವುದು ಪ್ರತಿದಿನ,

ಸಾರ್ಥಕತೆಯ ದಾರಿಗಳ ಹೆಜ್ಜೆ ತಡವರಿಸಿದೆ,

ಗುರಿ, ಗುರುವ ಹುಡುಕುತ್ತಲೇ ಮನವು ಅಲೆದಿದೆ,

ದಾರಿ ಹುಡುಕುವ ತವಕ ಮಾತ್ರ ಉಳಿದಿದೆ,

ದಾರಿಯ ಮೇಲೆ ಭರವಸೆಯ ಬೆಳಕು ಹರಿದಿದೆ,

ನಾಳೆಗಳ ಹುರುಪು ಇನ್ನೂ ಜೀವಂತ,

ನಾಳೆಗಳು ನನ್ನವು, ಬೆಳಕು ನನ್ನದು.

Saturday, December 20, 2025

ಪಾಹಿ ಮಾಧವ

ಕೊಳಲ ನಾದ ಕೋವಿದ,

ಗೋಪಿಕೆಯರ ಮನ ಸೆಳೆದ,

ಗೋಪಾಲಕರ ಪ್ರಾಣ ಸ್ನೇಹಿತ,

ಪಾಹಿ ಮಾಧವ.

 

ದುಷ್ಟರ ಸಂಹಾರಕ,

ಕಂಸ ದುಷ್ಟ ವಿನಾಶಕ,

ಪಾಂಡವರ ಪ್ರಿಯ ಪಾಲಕ,

ಪಾಹಿ ಮಾಧವ.

 

ಜಗದ ಕಷ್ಟ ನಿವಾರಕ,

ರಾಧಾ, ರುಕ್ಮಿಣಿಯರ ಮೋಹಕ,

ನೀಲ ಮೇಘ ಶ್ಯಾಮ ರೂಪಕ,

ಪಾಹಿ ಮಾಧವ.

 

ವಸುದೇವ, ದೇವಕಿ ಮನ ಮೋಹಕ,

ದೇವ, ದೇವತೆಗಳಿಂ ಪೂಜಿತ,

ರಾಕ್ಷಸ ಕುಲಾಂತಕ,

ಪಾಹಿ ಮಾಧವ.

 

ಬಲರಾಮಾನುಜ ಭಜಕ,

ಭಕ್ತ ಸುಜನಾ ಪಾಲಕ,

ಅರ್ಜುನ ಗೀತ ಘೋಷಕ,

ಪಾಹಿ ಮಾಧವ.

 

ಯಾದವ ಕುಲಭೂಷಣ,

ಕೌರವ ರಣಾಂತಕ,

'ಕೃಷ್ಣ' ಹೆಸರಿಂ ಶೋಭಿತ,

ಪಾಹಿ ಮಾಧವ.

Saturday, December 13, 2025

ಪ್ರೀತಿಯ ಗೆಳತಿ

ನನ್ನ ಪ್ರೀತಿಯ ಗೆಳತಿಯೇ,

ನಿನ್ನ ನಗುವು ನನ್ನ ಹೃದಯದ ಬೆಳಕು,

ನಿನ್ನ ಮಾತುಗಳು ಮಧುರ ಸಂಗೀತದಂತೆ,

ನಿನ್ನ ನೆನಪು ನನ್ನ ನಿತ್ಯದ ಪ್ರೇರಣೆ.

 

ನಿನ್ನೊಂದಿಗೆ ಕಳೆದ ಕ್ಷಣಗಳು,

ನನ್ನ ಜೀವನದ ಅಮೂಲ್ಯ ಆಭರಣ,

ನಿನ್ನ ಪ್ರೀತಿಯ ಸ್ಪರ್ಶದಿಂದ,

ನನ್ನ ಆತ್ಮವು ನಲಿಯುತ್ತಿದೆ.

 

ನೀನು ದೂರವಿದ್ದರೂ,

ನಿನ್ನ ನೆನಪು ನನ್ನ ಹತ್ತಿರವಿದೆ,

ನಿನ್ನ ವಾತ್ಸಲ್ಯದ ಬೆಳಕು,

ನನ್ನ ಹಾದಿಯನ್ನು ಬೆಳಗಿಸುತ್ತಿದೆ.

ಪ್ರೇರಣೆ ನೀನೇ ಆಗು!

ಆರೋಗ್ಯ,ಸಂತೋಷ,ಆಂತರಿಕ ತೃಪ್ತಿ,

ಉದ್ದೇಶಪೂರ್ಣ ಜೀವನವು ಹಾದಿ ತೆರವುದು.

ಪ್ರಶ್ನೆ ಇದೆ ಮನದಲ್ಲಿ ಚಿಕ್ಕದಾದರೂ ಹಿರಿದು,

ದಾರಿ ಹುಡುಕು, ನಿನ್ನ ಜೀವನದ ಶಿಲ್ಪಿ ನೀನೇ.

 

ಸಮಯ, ಹಣ, ಪ್ರತಿಭೆ, ಜೀವನ ಕಟ್ಟಿಕೊಳ್ಳಲು,

ಕಾಲ ಮುನ್ನಡೆಯಲು ಎಲ್ಲವ ಕೊಡು ಸಮಾಜಕ್ಕೆ,

ತೃಪ್ತಿಯ ಕಂಡುಕೋ, ನೋವುಂಡವರ ಕಣ್ಣೀರ ಒರೆಸಿ,

ಸಹಾಯ ಹಸ್ತವ ಚಾಚು, ಸಹಾಯ ಬೇಡಿ ಬಂದವರಿಗೆ.

 

ಬೇಸರದ ಹೊತ್ತಿನಲ್ಲಿ ಸಾಂತ್ವನವ ಹಂಚು, ಬೆಳಕು ಹರಡು, 

ಮಾತುಗಳ ಹಿಂದಿನ ನೋವ ತಿಳಿ, ಹೃದಯದ ಬಾಗಿಲು ತೆರೆ. 

ಸ್ವಾರ್ಥವಿಲ್ಲದೆ ಸೇವೆಯ ತೆರದಲಿ ಕಾಯಕದಲ್ಲಿ ನಿರ್ಲಿಪ್ತನಾಗು, 

ಮನಕೆ ಆನಂದ ನೀಡುವ ಕಾಯಕವೇ ಬೆಳಕ ಹಾದಿಯಾಗಲಿ. 

 

ಅವಮಾನ, ವಿಫಲತೆ, ಸಂಕಟಗಳೆಲ್ಲಾ ಪಾಠಗಳಾಗಲಿ, 

ಅನುಭವದ ಹಾದಿಯಲ್ಲಿ ಬೆಳೆಯಲಿ ವ್ಯಕ್ತಿತ್ವ ನಿರ್ಮಾಣ. 

ದಿನದಿನವೂ ಹೊಸ ಕನಸು, ಹೊಸ ಪ್ರಯತ್ನದ ಹೆಜ್ಜೆ, 

ಜೀವನದ ಉದ್ದೇಶವ ಹುಡುಕುವ ಪಯಣವೇ ಧರ್ಮ. 

 

ಅಂತರಂಗದ ಶಕ್ತಿ ನಂಬಿಕೆಯಡಿಯಲ್ಲಿ ಮೂಡಲಿ, 

ಅಜ್ಞಾತ ದಾರಿಯಲಿ ಸಹಜತೆ ನಿನ್ನ ದೀಪವಾಗಲಿ. 

ನಿನ್ನ ಹೆಜ್ಜೆಗಳಲ್ಲಿ ಸತ್ಯ, ನಿನ್ನ ನೋಟದಲ್ಲಿ ದಯೆ, 

ಲೋಕದ ಬದಲಾವಣೆಗೆ  ಪ್ರೇರಣೆ ನೀನೇ ಆಗು.

Friday, December 5, 2025

ನಾಯಕನ ಬೆಳಕು

ಕಾಲ್ನಡಿಗೆಯ ಸಣ್ಣ ಊರಿನಿಂದ ಹೆಜ್ಜೆಗಳು ನೂರಾದವು,

ರಾಜ್ಯ, ದೇಶ, ವಿದೇಶದ ದೊಡ್ಡ ಹೆದ್ದಾರಿಯವರೆಗೆ ನಡೆದವು,

ಸಾಧನೆ, ಶ್ರಮ, ನಂಬಿಕೆಯೇ ಉಸಿರಾಗಿಸಿಕೊಂಡ ಬಾಲಕ ,

ಭಾರತ ದೇಶಕ್ಕೆ ಹೊಸ ದಿಕ್ಕುದೆಸೆ ತೋರಿದ ಮಹಾನಾಯಕ.

 

ಅನಂತ ಆಕಾಶದಷ್ಟು ದೊಡ್ಡ ಕನಸುಗಳು,

ಬಾಲ್ಯದಲ್ಲೇ ದೇಶವ ಹೃದಯದಲ್ಲಿರಿಸಿದವರು,

ಜನರ ಕಷ್ಟ, ನೋವುಗಳಿಗೆ ಸ್ಪಂದಿಸಿದವರು,

ಸರಳತೆ, ಶ್ರದ್ಧೆ, ಶಿಸ್ತುಗಳ ಮೈಗೂಡಿಸಿಕೊಂಡವರು,

ಗೆಳೆಯರ, ಗುರುಗಳ ಹೃದಯ ಗೆದ್ದವರು.

 

ಅನವರತ ಅವಿರತ ಶ್ರಮದ ಸಂಕೇತ,

ಸ್ವಚ್ಛ ಭಾರತ, ಡಿಜಿಟಲ್ ಭಾರತ,

ಪ್ರತೀ ಹೆಜ್ಜೆಯಲ್ಲಿ ಹೊಸ ಬೆಳಕು.

ರೈತರು, ಯುವಕರು, ಬಡವರಿಗೆ

ನಂಬಿಕೆಯ ಮಾತು ಕೊಟ್ಟವರು.

 

"ಸಬ್ಕಾ ಸಾಥ್, ಸಬ್ಕ ವಿಕಾಸ್ " ಒಬ್ಬೊಬ್ಬರ ಬದುಕಿಗೂ  ಸ್ಪೂರ್ತಿ.

ದೇಶದ ಜನರ ಆಶಾಕಿರಣ,  ಭರವಸೆ, ಅಸಹಾಯಕರ ಉಸಿರು,

ಇಂದು ನಾವು ಹೃದಯಪೂರ್ವಕವಾಗಿ

ಸಂತೋಷದಿಂದ  ಹುಟ್ಟುಹಬ್ಬ ಆಚರಿಸುತ್ತೇವೆ.

 

ಅವರಿಗೆ ಆಯಸ್ಸು, ಆರೋಗ್ಯ, ಶಕ್ತಿ, ಜ್ಞಾನ ದೊರಕಲಿ,

ಸನಾತನ ಧರ್ಮ ನಲಿಯಲಿ, ಭಾರತ ಇನ್ನಷ್ಟು ಬೆಳೆಯಲಿ.

ದೇಶದ ಪುತ್ರ ಮೋದಿಜಿಗೆ ಜನ್ಮದಿನದ ಶುಭಾಶಯಗಳು,

ನಮ್ಮ ಹೆಮ್ಮೆ, ನಮ್ಮ ನಾಯಕ, ನಮ್ಮ ಪ್ರೇರಣೆ.

 

(ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ  75ನೇ ಜನ್ಮದಿನದ ಅಂಗವಾಗಿ)

Sunday, November 30, 2025

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ,

ಅತಿನೀಲಿ ಕಿರಣಗಳ ರಕ್ಷಾ ಕವಚವದು,

ಭೂಮಿಗೆ ತಂಪಾದ ಬೆಳಕ ನೀಡುವುದು,

ಓಜೋನ್ ಅದರ ಹೆಸರು- ನಮ್ಮ ದೈವವದು.

 

ನಮಗೆ ಕಾಣದ ದೇವರದು,

ನಮ್ಮ ಆರೋಗ್ಯದ ರಕ್ಷಾ ಪದರವದು,

ನಮ್ಮ ಅಜ್ಞಾನದಿಂದ ಅದು ನಾಶವಾಗುತಿದೆ,

ನಮ್ಮ ರಕ್ಷಾ ಕವಚವ ನಾವೇ ಹಾನಿಮಾಡುತಿಹೆವು.

 

ಬುದ್ದಿವಂತ ಜನ ಅರಿವ ಮೂಡಿಸುತಿಹರು,

ರಾಸಾಯನಿಕಗಳೇ 'ಓಜೋನ್' ನಿನ  ಶತೃ,

ಬದಲಾವಣೆ ಬಂದಿದೆ, ನಿಧಾನ ಗತಿಯಲ್ಲಿ,

ಆಗಸದೆಡೆ ನೋಡು, ರಕ್ಷಿಸುವ ಮಾರ್ಗ ತೆರೆ.

 

ದಿನ "ಓಝೋನ್ ದಿನ" ನೆನಪಿಡೋಣ,

ಓಜೋನ್ ಪದರದ ಮಹತ್ವ ತಿಳಿಸೋಣ,

ಹೆಚ್ಚು ಮರ-ಗಿಡಗಳ ಬೆಳೆಸೋಣ,

ತ್ಯಾಜ್ಯ,ರಾಸಾಯನಿಕಗಳ ಕಡಿಮೆ ಬಳಸೋಣ,

ಮುಂದಿನ ಪೀಳಿಗೆಗೆ ಭೂಮಿಯ ರಕ್ಷಿಸೋಣ.


16th Sep - Ozone Day

Saturday, November 29, 2025

ಕರುನಾಡ ಬೆಳಕು

ಮುದ್ದೇನಹಳ್ಳಿಯಲ್ಲಿ ಹೊತ್ತಿತು ಬೆಳಕೊಂದು,

ಬೀದಿ ದೀಪದಲ್ಲಿ ಅರಳಿತು ದೇಶದ ಪ್ರತಿಭೆಯೊಂದು,

ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಿದ ಶಕ್ತಿಯೊಂದು,

ಬುದ್ಧಿವಂತ, ಧೈರ್ಯವಂತ, ಎಲ್ಲರಿಗೂ ಮಾದರಿ,

ಸರ್ ವಿಶ್ವೇಶ್ವರಯ್ಯನಮ್ಮ ಹೆಮ್ಮೆ, ನಮ್ಮ ಗರಿ.

 

ಇಂಜನೀಯರ್ ಅಂದರೆ ಅನ್ವರ್ಥನಾಮ,

ಕೃಷ್ಣರಾಜ ಸಾಗರ ಭಾರತದ ಅಚ್ಚರಿ,

ಮಾಡಿದ ಕೆಲಸಗಳು ಹಲವಾರು- ಒಂದೇ, ಎರಡೇ,

ಹೊಲಗಳಿಗೆ ಜೀವ ತಂದವರು, ರೈತರಲ್ಲಿ ನಗು,

ಬರದಿಂದ ಬತ್ತಲಾದ ಭೂಮಿಗೆ ಹಸಿರು ತಂದವರು,

ಆದುನಿಕ ಭಗೀರಥ, ಕರುನಾಡ ಕುಲಪುತ್ರ.

 

ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಮೈಸೂರು ದಿವಾನರು,

ರಾಜ್ಯ, ದೇಶದ ಅಭಿವೃದ್ಧಿಗೆ ಹೊಸ ಮಾರ್ಗ ತೋರಿದವರು.

"ಉದ್ಯಮ ಬೆಳೆಸಿ, ದೇಶವನ್ನು ಮುನ್ನಡೆಸಿ"

ಅವರು ಹೇಳಿದ ಮಾತುಗಳು ನಮ್ಮಯ ಪ್ರೇರಣೆ.

 

೧೫ ಸೆಪ್ಟೆಂಬರ್,ಸರ್ ವಿಶ್ವೇಶ್ವರಯ್ಯ ಹುಟ್ಟಿದ ದಿನ,

ಭಾರತದ ಇಂಜಿನಿಯರ್ದಿನವೆಂದು ಆಚರಿಸುವೆವು,

ಅವರ ನಿಸ್ವಾರ್ಥತೆ, ಕಾರ್ಯ ನಿಷ್ಠೆ ಹೆಸರುವಾಸಿ,

ಕಾಯಕ ಯೋಗಿ, ಕರ್ಮ ಯೋಗಿ , ನಮಗೆ ಸದಾ ಸ್ಫೂರ್ತಿ,

ಅವರ ನೆನಪಿಸಿಕೊಳ್ಳುವೆವು, ಹೆಮ್ಮೆಪಡುವೆವು ಇಂದು,

ಅವರ ಹಾದಿಯಲ್ಲಿ ನಾವು ನಡೆಯೋಣ,ದುಡಿಯೋಣ,

ಕರುನಾಡ ಬೆಳೆಸೋಣ, ಭಾರತವನ್ನು ಬೆಳಗಿಸೋಣ. 

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...