ನನ್ನ ಕನಸು

 ಕನಸು ಕಾಣಬೇಕು

ನನ್ನ ಕನಸು ಕಾಣಬೇಕು

ನಾ ಬಾನಲ್ಲಿ ಹಾರಾಡಬೇಕು

ಅದಕ್ಕೆ ನನಗೆ ರೆಕ್ಕೆಗಳು ಬೇಕು

ಬಾನಲ್ಲಿ ತೇಲಾಡಬೇಕು

ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗಬೇಕು

ಭುವಿಯ ಸೇರುವ ತವಕ ಅನುಭವಿಸಬೇಕು

ಭುವಿಗಿಳಿಯುತ್ತಾ ಪ್ರಕೃತಿ ಸೌಂದರ್ಯವ ಸವಿಯಬೇಕು

ಸೌಂದರ್ಯವ ಸವಿಯುತ್ತಾ ನಾನೇ ಪ್ರಕೃತಿಯಾಗಬೇಕು

ತೇಲುವ ಹೂವಿನ ಸುಗಂಧವಾಗಬೇಕು

ತೇಲುತ್ತಾ,ಹಾರುತ್ತಾ ಹಕ್ಕಿಗಳ ಕಲರವ ನಾನಾಗಬೇಕು

ಎಲ್ಲವೂ  ನಾನಾಗಬೇಕು

ಹೃದಯ ಹೊಮ್ಮಿಬರಬೇಕು

ನಾನು ಕನಸಾಗಬೇಕು

ಕನಸು ನನಸಾಗಿಸುತ್ತಾ ಸಾಯಬೇಕು।।

ನಿರ್ಧಾರ ನಿನ್ನದು

 ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ಬಾವಿಯೇ ನಮಗೆ ಪ್ರಪಂಚವಾಗುವುದು

ಹೇಳಲು ಪದಗಳೇ ಇಲ್ಲವಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ನದಿಗಳು ಕೂಡ ಬಾರಿಯ ಗೆರೆಗಳಾಗುವುದು

ವರ್ಣಿಸಲು ಕವನಗಳೇ ಇಲ್ಲವಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ನಾವಿರುವ ಜಾಗವೇ ಸೆರೆಮನೆಯಾಗುವುದು

ಇದ್ದು ಇಲ್ಲದ ಸ್ವಾತಂತ್ರ್ಯ ನಮ್ಮದಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ಬದುಕಿದ್ದೂ ಜೀವಂತ ಶವದಂತಿರಬಹುದು

ಅಗಾಧ ಶಕ್ತಿಯ ಬಳಸದೆ ವ್ಯರ್ಥವಾಗಿ ಸಾಯಬಹುದು।।

 

ಪರಿಧಿಯ ಹಾಕಿಕೊಳ್ಳಲೂಬಹುದು 

ಪರಿಧಿಯ ದಾಟಲೂಬಹುದು

ನೀನೇನಾಗಬೇಕೋ ನಿರ್ಧಾರ ನಿನ್ನ ಕೈಯಲ್ಲಿದೆ।।

ನಾನು ಕರಿ ಹುಡುಗ

 ನಾನು ಕಪ್ಪು ಮಗು,

ನಾನು ಕರಿ ಹುಡುಗ

ನಾನು ವಿಶೇಷ, ಅಪಹಾಸ್ಯವೆಂದೂ ನನ್ನನ್ನು ಹಿಡಿದಿಡದು;

ಕ್ಷಮಿಸಿ,ಅಡೆತಡೆಗಳೆಂದೂ ನನ್ನನ್ನು ತಡೆಯಲು ಸಾಧ್ಯವಿಲ್ಲ;

ನನ್ನ ತಲೆ ಮೇಲಕ್ಕೇರಿಸುವೆ, ಹೆಮ್ಮೆಯಿಂದ ನನ್ನ ಅನನ್ಯತೆಯ ಸಾರುವೆ;

ಇಂತಹುದೇ ಪ್ರತಿಕೂಲ ಪರಿಸ್ಥಿಯಲ್ಲೂ ನನ್ನ ಪ್ರಯತ್ನವನ್ನು ನಿಲ್ಲಿಸಲಾರೆ;

ನನ್ನ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆಯಿದೆ;

ನನ್ನ ಪ್ರತಿಯೊಂದು ಗುರಿಯನ್ನೂ ಸಾಧಿಸುವೆನೆಂಬ ಆತ್ಮವಿಶ್ವಾಸವಿದೆ;

ನಾನೇನಾಗಬೇಕೋ ಅದೆಲ್ಲವೂ ನಾನಾಗುವೆ;

ನಾನು ಕಪ್ಪು ಮಗು,

ನಾನು ಕರಿ ಹುಡುಗ,

ಆ ದೇವರ ಮಗ ನಾನು;

 

ಪ್ರೇರಣೆ: I am the black child

             By: Mychal Wynn        

ಸ್ವಾತಂತ್ರ್ಯಕ್ಕಾಗಿ ನಡೆ

 ಸ್ವಾತಂತ್ರ್ಯಕ್ಕಾಗಿ ನಡೆ :

ಕೆಲವರೆಂದರು ನಮಗದು ದೊರಕದು

ನನ್ನ ನಂಬಿಕೆ ಏನೆಂದರೆ

'ಜನರು ನಾಣ್ಯದ ಮತ್ತೊಂದು

ಮುಖವನ್ನು ಕಂಡಾಗ'

'ಎಲ್ಲೇ ಅನ್ಯಾಯವಾದಾರೂ ಅದು

ಎಲ್ಲೆಡೆಯ ನ್ಯಾಯಕ್ಕೆ ಅವಮಾನ'

ಘೋಷಣೆಗಳ ಕೂಗುವರು ,

ವಸ್ತುಗಳ ಎಸೆಯುವರು

ಆದರೆ ನನ್ನ ಹೋರಾಟವನೆಂದೂ ನಿಲ್ಲಿಸುವುದಿಲ್ಲ;

ಸ್ವಾತಂತ್ರ್ಯಕ್ಕಾಗಿ ನಿಲ್ಲದೆ ನಡೆದೆ ರಾತ್ರಿ-ಹಗಲೆನ್ನದೆ

ಪೊಲೀಸರು ಕೂಗುವರು ಹಾಗೂ

ನಮ್ಮನ್ನು ರಸ್ತೆಗಳಲ್ಲಿ ತಡೆಯುವರು

ಜನರಿಗೆ ಆಜ್ಞಾಪಿಸುವರು

'ಹಿಂದೆ ಹೋಗಿ'

ಗುಂಪು ಗುಂಪು ಜನರು ನಮ್ಮ ಮುಖದ ಮೇಲೆ

ಘೋಷಣೆಗಳ ಮೊಳಗಿಸುವರು;

ಅವರು ಹಿಡಿದ ಫಲಕಗಳು ಹೇಳುತ್ತವೆ

" ಮುನ್ನಡೆಯಿರಿ, ನಿಲ್ಲದೆ ಮುಂದುವರೆಯಿರಿ"

ಪ್ರೇರಣೆ:Freedom Walk       

           Bu Chaline F

ಸಹಜತೆ ಉಳಿಯಲಿ

 

ನೀನು ಹುಟ್ಟಿನಿಂದಲೇ ಕಲ್ಲಿನಿಂದ ಕಡೆದ ಪ್ರತಿಮೆಯಲ್ಲ

ಅಥವಾ ಭೂಮಿಯೊಳಗೆ ಬೇರು ಬಿಟ್ಟು ಬೆಳೆದ ಮರವಲ್ಲ

ಹುಟ್ಟಿದಾಗಿನಿಂದಲೇ ನಿನ್ನಲ್ಲಿದೆ ಸಹಜತೆ

ಅದು ಶುದ್ಧ ಹಾಗೂ ಪರಿಪೂರ್ಣವಾದುದು।।

 

ಯಾವ ಪಂಜರವೂ ನಿನ್ನ ಹಿಡಿದಿಡಲಾಗದು

ಯಾವ ತಲೆಬರಹವೂ ನಿನ್ನ ವರ್ಣಿಸಲಾಗದ್ದು

ನೀನು ಚೈತನ್ಯಪೂರ್ಣನೂ

ದ್ರವದಂತೆ ಬದಲಾಗುವವನು||

 

ನೀನು ಕಲ್ಲಲ್ಲ , ಬಂಡೆಯಂತೂ ಅಲ್ಲವೇ ಅಲ್ಲ

ಎಷ್ಟೊಂದಿದೆ ಈ ಪ್ರಪಂಚದಲ್ಲಿ ಶೋಧಿಸಲು

ಅಲೆದಾಡು ಸಹಸ್ರ ದಾರಿಗಳಲ್ಲಿ

ತಟ್ಟು ಕಂಡ ಕಂಡ ಬಾಗಿಲುಗಳನ್ನು||

 

ನಿನ್ನ ಸಾಹಸಗಳನ್ನು ಇಂದಿಗೂ ನಿಲ್ಲಿಸದಿರು

ನಿನ್ನೊಳಗಿನ ಚಿಕ್ಕ ತರಲೆ ಮಗುವ ಆಲಂಗಿಸಿಕೋ

ಭಯರಹಿತನಾಗು, ಕುತೂಹಲವನೆಂದೂ ಉಳಿಸಿಕೋ

ಯಾವಾಗಲೂ ಸಕಾರಾತ್ಮಕವಾಗಿರು, ಸಹಜತೆಯ ಉಳಿಸಿಕೋ।।

 

ಪ್ರೇರಣೆ:  Stay Wild

                 By MS Moem         

ಸಂತೋಷ

 ಸಂಕಟ ಹಾಗು ಸಂತೋಷ

ಎರಡೂ ಜೀವನದ ಜೋಡೆತ್ತುಗಳು

ಎರಡೂ ಬೆಸೆದಿದೆ ಬಿಡಿಸಲಾಗದ ನಂಟು

ಈ ಮನುಷ್ಯ ಜೀವಕೆ

ದೇವಾ ಹೊದಿಸಿದ ಬಟ್ಟೆ

ಪ್ರತಿಯೊಂದು ಸಂತೋಷ ಹಾಗೂ ಸಂಕಟ

ಜೀವನದೊಂದಿಗೆ ಸೂಕ್ಷ್ಮ ದಾರದಿಂದ ಬೆಸೆದಿದೆ

ಅದು ಹಾಗಿದ್ದರೇನೇ ಚಂದ

ಮನುಷ್ಯ ಭೂಮಿಗೆ ಬಂದುದೇ

ಸಂತೋಷ ಹಾಗೂ ಸಂಕಟ ಎರಡನ್ನೂ ಅನುಭವಿಸಲು

ಇದನ್ನು ತಿಳಿದಾಗ ಮಾತ್ರ

ಜೀವನ ಸುಗಮ ಹಾದಿಯಲ್ಲಿ ಸಾಗುವುದು\\

 

ಪ್ರೇರಣೆ: Joy

              By William Blake  

ಅರಿವು

 

ಹೀಗೆ ನೋವಿನಲಿ ಬಳಲುತ್ತಿದ್ದೆ

ಒಮ್ಮೆ ಮನಕೆ ಗೋಚರಿಸಿತು||

 ಅದೊಂದು ಮುಂಜಾನೆ

ದಿಕ್ತಟದಲ್ಲಿ ನೋಟ ನೆಟ್ಟಿತ್ತು

ಮೂಡಣದಲ್ಲಿ ರವಿಯ ಮೊದಲ

ಕಿರಣಗಳು ಭೂಮಿಯ ತಲುಪುವ ತವಕದಲ್ಲಿತ್ತು

ಮನದಲ್ಲಿ ಹೊಸತೊಂದು

ಬಾಗಿಲು ತೆರೆದುಕೊಳ್ಳುತ್ತಿತ್ತು

ಮನದಾಳದಲ್ಲೊಂದು ಅವ್ಯಕ್ತಭಾವ

ವಿಲವಿಲನೆ ಒದ್ದಾಡುತ್ತಿತ್ತು

ಹಾಗೆ ಒಮ್ಮೆಲೇ ಏನೋ

ನನ್ನಿಂದ ಬಿಟ್ಟು ಹೋದಂತಾಯಿತು

ಏನೋ ಒಂದು ರೀತಿಯ ಉಲ್ಲಾಸ

ಮನದ ತುಂಬೆಲ್ಲಾ ಮನೆಮಾಡಿತು

ಏನೋ ಗಳಿಸಿಕೊಂಡ ವಿಜಯದ ಭಾವ

ಮುಖದಲ್ಲಿ ಚೈತನ್ಯ ಹೊರಹೊಮ್ಮಿತು||   

ಕೈ ಹಿಡಿದವನು ನೀನು

 

ಕಣ್ಣೀರ ಮಳೆಯಲ್ಲಿ ನಾ ಮೀಯುವಾಗ

ನೀ ಬಂದು ಬೆಳಕಿಗೆ ಕರೆದೊಯ್ದೆ

ನೋವ ಕಡಲಲಿ ಮುಳುಗುವಾಗ

ನಗುವ ಹಾಯಿದೋಣಿಯ ಬಳಿ ತಂದೆ ನೀನು।।

 

ನನ್ನ ನಾ ಅರಿತಿರಲಿಲ್ಲ

ನೀ ನನ್ನ ಅರಿತಿರುವಷ್ಟು

ಮೋಡ ಕಟ್ಟುವ ಸಮಯದಲ್ಲಿ

ನನ್ನಿಂದಾಗದೆಂದು ಕೈ ಚೆಲ್ಲಿ ಕುಳಿತ್ತಿದ್ದಾಗ

ಗುರುವಾಗಿ ಕೈ ಹಿಡಿದು ನಡೆಸಿದವನು ನೀನು||

 

ಎಲ್ಲರೂ ಹೀಗೆಳೆಯುವಾಗ

ಇನ್ನೇನು? ಮುಂದೇನೆಂದು ಚಿಂತೆಯಲ್ಲಿದ್ದಾಗ 

ನಾ ನಿನ್ನ ಜೊತೆಗಿರುವೆನೆಂದು

ಎನ್ನೆದೆಯಲಿ ಧೈರ್ಯ ತುಂಬಿದವನು ನೀನು||

 

ಎಲ್ಲರೂ ನನ್ನ ಜೊತೆ ಬಿಟ್ಟು ಮುನ್ನಡೆದಾಗ

ಹಿಂದುಳಿದು ನಾನು ಏಕಾಂಗಿಯಾಗಿ ನಡೆವಾಗ

ಜೊತೆಜೊತೆಯಲಿ ಹೆಜ್ಜೆಹಾಕಿ

ನಾನಿರುವೆಂದು ಕೈ ಹಿಡಿದವನು ನೀನು||  

'ಕೈ ಕೆಸರಾದರೆ ಬಾಯಿ ಮೊಸರು'

 ಉತ್ಪಾದನೆಯಿದೆಯಿಲ್ಲಿ, ಪ್ರತಿದಿನ ಪುಟಿಯುವುದು ಚೈತನ್ಯವಿಲ್ಲಿ ;

ತಡೆಯಿಲ್ಲದೆ ನಿರಂತರವಾಗಿ ನಡೆಯುತ್ತಲ್ಲೇ ಸಾಗಿಬಂದಿದೆ;

ಬೆವರು ಹರಿಯುವುದಿಲ್ಲಿ-ಹೊಟ್ಟೆಯ ತುತ್ತಿಗೆ ಅನಿವಾರ್ಯ;

ಕೆಲವೇ ಕೆಲವರು ತೇಲುವರು ಹಣದ ಹೊಳೆಯಲ್ಲಿ ಇಲ್ಲಿ ;

ವೈಭೋಗ, ಅಹಮ್ಮಿನ ಎಲ್ಲೆಯಲ್ಲಿ; ಸ್ವಾರ್ಥ ಸಾಧನೆಯಲ್ಲಿ;

ಎದೆಯಗೂಡೋಲಾಗೆ ನೂರು ಕನಸುಗಳ ಬಿತ್ತಿ ಬರುವವರು ನಾವು;

ಸಾಗಿ ಬಂದಿಹೆವು ಬಹಳ ದೂರ ಕನಸುಗಳು ನನಸಾಗುವುದೆಂದು;

ನಮ್ಮ ಕನಸುಗಳು ಹಾಗೆಯೇ ಅಂಡಲೆಯುತ್ತಿವೆ ಸಾಕಾರಗೊಳ್ಳದೆ;

ಮತ್ತೆ ಕೆಲವರ ಕನಸುಗಳು ನನಸಾಗಿ ಬೇರೆಯವರ ಕನಸುಗಳಿಗೆ ಕಿಡಿಯಿಡುತ್ತಿವೆ;

ಅವರ ಕನಸುಗಳು ಮಾತ್ರವೇ ಕನಸು? ನಮ್ಮದು ಮಾತ್ರ ಹುರುಳಿಲ್ಲದ್ದು!

ಸ್ವಾರ್ಥ ಸಾಧನೆ ಅವರದ್ದು!ಅದಕ್ಕೆ ಬಲಿಪಶುಗಳು ನಾವೆಲ್ಲಾ!

ನಾನು, ನಮ್ಮವರು ಅಷ್ಟೇ ಅವರ ಪರಿಧಿ;

ಬೆವರು ಸುರಿಸುವವರು ಅವರ ಪರಿಧಿಯೊಳಿಲ್ಲ!

ಬೆವರ ಹನಿಗಳಿಗೆ ಬೆಲೆಯೆಲ್ಲಿದೆ ಇಲ್ಲಿ? ಹಾಸ್ಯಾಸ್ಪದ;

'ಕೈ ಕೆಸರಾದರೆ ಬಾಯಿ ಮೊಸರು'

ನಮ್ಮ ಕೈ ಕೆಸರಾದರೆ ಮಾತ್ರ ಅವರ ಬಾಯಿಗೆ ಮೊಸರು ಸೇರುವುದು!

ನಮ್ಮ ಬೆವರ ಹನಿಗಳಿಂದ ದೇಹ ತಣಿವುದು;

ಹೇವರಿಕೆಯವರಿಗೆ ನಮ್ಮ ಬಳಿ ಬರಲು;

ಅವರ ಬಳಿಯೋ ಸತ್ತ ಹೆಣದ ವಾಸನೆ!

ನಾವು ಸಹಿಸಿಕೊಳ್ಳಲೇ ಬೇಕು, ದೊಡ್ಡವರಲ್ಲವೇ ಅವರು!

ನಾವು ಬೆವರ ಸುರಿಸುತ್ತಿರಲು, ಕಾಣುವೆವು ಅವರ ಮೊಗದಲ್ಲಿ ನಗುವು!

ಇಲ್ಲವಾದಲ್ಲಿ ಅವರ ಮೊಗದಲ್ಲೋ ಪ್ರೇತಕಳೆ ನಗುವುದು;

ನಾಟಕ ,ಕಾಲೆಳೆಯುವುದು,ಕಿವಿಯೂದುವುದು,ಸುಳ್ಳು,

ಬಣ್ಣ ಬಣ್ಣದ ಮಾತುಗಳು ಮೇಲೇರಲು ರಹದಾರಿ ನೋಡು!

ಕಷ್ಟಪಡುವುದು,ಪ್ರಾಮಾಣಿಕತೆ,ನಂಬಿಕೆ,ಸತ್ಯ,

ನಿರ್ಲಿಪ್ತತೆ,ಆಪ್ತತೆ, ಒಳ್ಳೆಯತನ ಗುಣಗಳ ತುಳಿಯುವರು ನೋಡು;

ಅವರ ಬಳಿ ನೂರು ಕಾರಣಗಳಿವೆ ಕಾಲೆಳೆಯಲು ;

ಮೇಲೆತ್ತಲು ಒಂದೇ ಒಂದು ಕಾರಣವಿಲ್ಲ ಬಿಡು;

ನಿರ್ಲಿಪ್ತ ನಾಗು , ನಿನ್ನ ಕಾಯಕವ ನೀ ಮಾಡು;

ಅವರ ಕರ್ಮವ ಅವರೇ ಹೊರುವ ಕಾಲ ಬೇಗನೆ ಬರುವುದು ನೀ ನೋಡು;

ಇಂದು ನಗುವವರು ನಾಳೆ ಅಳಲೇ  ಬೇಕು;

ಇಂದಲ್ಲ ನಾಳೆ ಕಾಲವು ಒಳ್ಳೆಯದನ್ನೇ ತರುವುದು;

ಇರಲಿ ನಿನ್ನ ಮೇಲೆ ನಿನಗೆ ನಂಬಿಕೆ;

ಇರಲಿ ನಿನ್ನ ಕಾಯಕದ ಮೇಲೆ ವಿಶ್ವಾಸ\\

ನನ್ನ ಪ್ರಯತ್ನ ನಿರಂತರ

 ನೀವು ನನಗೆ ಬೆಳೆಯಲು ಅಡ್ಡಿಪಡಿಸಬಹುದು 

ಅವಕಾಶಗಳ ನೀಡದೆ ಬಾಗಿಲು ಮುಚ್ಚಬಹುದು 

ಪ್ರತಿದಿನ ಪ್ರತಿ ಹೆಜ್ಜೆಯಲ್ಲೂ ತೊಂದರೆ ನೀಡಬಹುದು 

ಬನ್ನಿ ನಿಮಗೆ ಸ್ವಾಗತ, ಆದರೂ ನನ್ನ ಪ್ರಯತ್ನ ಮುಂದುವರೆಸುವೆ|| 


ನನ್ನ ತಾಳ್ಮೆ, ಸಹನೆ ನಿಮಗೆ ಮತ್ತೂ ಪ್ರೇರೇಪಿಸಬಹುದು 

ನನ್ನನ್ನು ಮತ್ತಷ್ಟು ಹಿಂದೆ ತಳ್ಳಲು ಪ್ರಯತ್ನಿಸಬಹುದು 

ಕೆಲಸಕ್ಕೆ ಬಾರದವನೆಂದೂ , ಹಳೆಯವನೆಂದು ತಿರಸ್ಕರಿಸಬಹುದು 

ಬನ್ನಿ ನಿಮಗೆ ಸ್ವಾಗತ, ಆದರೂ ನನ್ನ ಪ್ರಯತ್ನ ಮುಂದುವರೆಸುವೆ|| 


ಹೃದಯಭಗ್ನಗೊಳ್ಳುವ ಮಾತುಗಳನ್ನಾಡಬಹುದು 

ಮಾಡದ ತಪ್ಪಿಗೆ ಅವಮಾನವನ್ನೂ ಮಾಡಬಹುದು 

ಎನಗಿಂತ ಕಿರಿಯರಿಗೆ ಮನಬಿಚ್ಚಿ ಪ್ರೇರಣೆ ನೀಡಬಹುದು 

ಬನ್ನಿ ನಿಮಗೆ ಸ್ವಾಗತ, ಆದರೂ ನನ್ನ ಪ್ರಯತ್ನ ಮುಂದುವರೆಸುವೆ|| 


ಮುಗುಳ್ನಗುವ ನನ್ನ ಮುಖನೋಡಿ ನೀವು ಸಿಂಡರಿಸಬಹುದು 

ನನ್ನ ದಾರಿ, ನನ್ನ ಕೆಲಸ ಕಂಡು ದ್ವೇಷಮಾಡಬಹುದು 

ಎಷ್ಟು ತುಳಿದರೂ ನಗುತ್ತಿರುವೆನೆಂದು ಸಂಕಟಪಡಬಹುದು 

ಬನ್ನಿ ನಿಮಗೆ ಸ್ವಾಗತ, ಆದರೂ ನನ್ನ ಪ್ರಯತ್ನ ಮುಂದುವರೆಸುವೆ|| 


ನಿಮ್ಮ ಮಾತುಗಳಿಂದ ನೋವಾಗುವಂತೆ ಚುಚ್ಚಬಹುದು 

ನಿಮ್ಮ ಕಣ್ಣ ನೋಟದಿಂದಲೇ ಸುಡಬಹುದು 

ನಿಮ್ಮ ದ್ವೇಷಭಾವನೆಗಳಿಂದಲೇ ನನ್ನ ಸಾಯಿಸಬಹುದು 

ಬನ್ನಿ ನಿಮಗೆ ಸ್ವಾಗತ, ಆದರೂ ನನ್ನ ಪ್ರಯತ್ನ ಮುಂದುವರೆಸುವೆ|| 


ನನ್ನ ದಾರಿ ನನಗೆ ತಿಳಿದಿದೆ 

ನನ್ನ ದಾರಿ ನನ್ನ ಗುರಿಯ ಕಡೆಗೆ

ಇಂದಲ್ಲದಿದ್ದರೇನೆಂತೆ ಭರವಸೆ ನನಗಿದೆ ನಾಳೆ ನನ್ನದೇ 

ಬನ್ನಿ ನಿಮಗೆ ಸ್ವಾಗತ, ಆದರೂ ನನ್ನ ಪ್ರಯತ್ನ ನಿರಂತರ|| 

ಆಹಾ! ಸ್ವರ್ಗ ಸುಖ

ಕರೋನಾಘಾತದ ಈ ವರ್ಷದಲ್ಲಿ 

ಡಿಸೆಂಬರ್ ಚಳಿಯಲ್ಲಿ

ಹೊದ್ದು ಮಲಗುವುದೇ ಚಂದ!

ಹೊರಗೆ ಅಡ್ಡಾಡಲು ಪ್ರಾಣ ಭಯ 

ಮುಂಜಾನೆಯ ಬಿಸಿಲು ಅಪ್ಯಾಯಮಾನ 

ಬಿಸಿಲಿಗೆ ಮೈಯ್ಯೊಡ್ಡುವ ಬಯಕೆಯಿದೆ 

ಮುಂಜಾನೆಯ ವಾಯುವಿಹಾರ 

ಹಣೆಯ ಮೇಲೆ ಮೂಡುವ ಬೆವರ ಹನಿ 

ಚುಮು ಚುಮು ಚಳಿಯಲ್ಲಿ 

ಬಿಸಿ ಬಿಸಿ ಕಾಫಿ ಹೀರುವುದೇ 

ಆಹಾ! ಸ್ವರ್ಗ ಸುಖ ।।

ಅಪವಾದವಲ್ಲ!

 ಮನುಷ್ಯ ಕೂಪವಲ್ಲ 

ಸ್ವತಃ ಅವನು ಸಂಪೂರ್ಣ;

ಅವನೂ ಪ್ರಪಂಚದೊಂದು ಭಾಗ. 

ಪೂರ್ಣತೆಯಲ್ಲಿಯ ಪೂರ್ಣನು ಅವನು;

ಮೂಲದಿಂದ ಕಳಚಿಕೊಂಡರೂ ,

ಅವನು ಅದರ ಭಾಗವಲ್ಲವೇ?

ಮುಂದೆ ಮುಂದೆ ಹೋಗುತಿರಲು 

ಹಲವರು ಜೊತೆಗೂಡುವರು 

ಹಾಗೆಯೇ ಕೆಲರು ಬಿಟ್ಟು ಹೋಗುವರು 

ನೋವಾಗುವುದು ಬಿಟ್ಟು ಹೋದವರ ನೆನೆದು 

ನಾನೂ ಜೀವನದ ಭಾಗವೇ ಆಗಿರುವುದರಿಂದ 

ಬರುವವರೆಲ್ಲಾ ಬರಲಿ ಸಂತೋಷಿಸುವೆ;

ಬಿಟ್ಟು ಹೋಗುವವರ ಹಿಡಿದಿಡಲಾಗದು ನೋವಿದೆ;

ಕೊನೆಗೊಂದು ದಿನ ಎಲ್ಲರೂ ಹೊರಡುವವರೇ 

ಅದಕ್ಕೆ ನಾನೂ ಅಪವಾದವಲ್ಲ!  

ಗುರುವಿನ ದಾರಿ

 ಹುಡುಕಿ ಹುಡುಕಿ ಬೆಂದು ಬೆವೆತಿಹೆನು 

ನಿಮ್ಮ  ಅನುದಿನವೂ ಸ್ಮರಿಸುತಾ 

ಮನಕೆ ಬಂದಿಲ್ಲ, ಮನೆಗೆ ಬರಲಿಲ್ಲ 

ಸಮಯವಿನ್ನೂ ಬಂದಿಲ್ಲವೆನ್ನುತಾ 

ಏಕೋ ನಾನರಿಯೆ ಮನವು ಬೇಸರಿಸಿದೆ 

ಏಕತಾನತೆಗೆ, ಹೊಸತನವ ಬಯಸುತಾ 

ಮನದಲ್ಲಿ ಒಂದೇ ಧ್ಯಾನ ಅನುದಿನವೂ 

ಕನವರಿಕೆ ನಿನ್ನದೇ ಹಪಹಪಿಸುತಾ 

ಸಮಯ ಎಂದು ಬಂದೊದಗುವುದೋ 

ಮನದ ಶಕ್ತಿ ,ಚೈತನ್ಯಗಳ ಮುದುಡುತಾ 

ಬೇಗ ಬಾ, ಬೇಗ ಬಾ ಎನ್ನ ಗುರುವೇ 

ನೋಡುತಿಹೆನು ನಿನ್ನ ದಾರಿಯ ಕಾಯುತಾ ।।            

ಯಶಸ್ಸಿನ ಗುಟ್ಟೇನು?


ಯಶಸ್ಸೆನಂದರೇನು ?

ಯಶಸ್ಸಿನ ಗುಟ್ಟೇನು ?

ಎಲ್ಲರ ಹಪಹಪಿತನ ಯಶಸ್ಸಿನ ಮೇಲೇಕೆ?

ಯಶಸ್ಸಿಗೆ ಚಡಪಡಿತವೇಕೆ?


ಸತತ ಪ್ರಯತ್ನವೇ?

ದೈವಾನುಗ್ರಹವೇ?

ಅದೃಷ್ಟವೋ? ಇಲ್ಲ 

ಕರ್ಮಫಲವೋ ಹೇಗೆ?

 

ಲೋಕ ವ್ಯಾಪಾರ



ವ್ಯಾಪಾರ  ನನ್ನ ಕಸುಬು ಜೀವನೋಪಾಯಕ್ಕೆ ;
ಮಾರಲಿದೆ ಅನೇಕಾನೇಕ ಮುತ್ತು, ಹವಳಗಳ ಹಾರಗಳ;
ಬಹಳ ವರ್ಷಗಳಿಂದ ನಡೆದಿದೆ ಈ ವ್ಯಾಪಾರ;
ಮುಗಿಸುವುದಕ್ಕೆ ಕುಳಿತಿಹೆನು ಅಂಗಡಿಯ ತೆರೆದು;
ದೇಹದಲ್ಲಿ ಮುಪ್ಪು,ಲೋಕವ್ಯಾಪಾರವ ಮುಗಿಸಲು ತವಕವಿದೆ;
ಕೈಯಲ್ಲಿ ಎಣಿಸುತ್ತಿದ್ದೇನೆ, ಮುಗಿಯುವುದೆಂದಿಗೆ ಈ ವ್ಯಾಪಾರ?
ಹುರುಪಿಲ್ಲ ದೇಹದಲ್ಲಿ ಯೌವ್ವನದಲ್ಲಿದ್ದಂತೆ;
ಜೀವನ ಪ್ರೀತಿಯಿದೆ ಹಿಂದೆಂದಿಗಿಂತಲೂ ಹೆಚ್ಚು;
ಅನುಭವದಿಂದ ತನುಮನಗಳೆರಡೂ ಹಣ್ಣಾಗಿದೆ;
ಈ ಲೌಕಿಕ ವ್ಯಾಪಾರ ಹೊಟ್ಟೆ-ಬಟ್ಟೆಗಷ್ಟೇ! ಲಾಭಕ್ಕಲ್ಲ;
ಗಂಟುಮೂಟೆ ಕಟ್ಟಿಯಾಗಿದೆ, ಅವನ ಕರೆಗೆ ಕಾಯುತಿಹೆನು;
ಬನ್ನಿ,ಬನ್ನಿ ನೀವು ನನ್ನ ಬಳಿ  ವ್ಯಾಪಾರ ಮಾಡಿ;
ಕೊಳ್ಳಿ ,ಕೊಳ್ಳಿ ಅಮೂಲ್ಯ ಹಾರಗಳ ತುಲನೆ ಮಾಡಿ ;
ಹಣದ ಲಾಭದ ಚಿಂತೆಯಿಲ್ಲ, ನಾಳೆಯ ಹಂಗಿಲ್ಲವೆನಗೆ;
ನಾಳೆ ಎನ್ನದಿರಿ! ನಾಳೆಯೆನ್ನವುದರಲ್ಲಿದೆ ನನಗೆ ಅನುಮಾನ;
ಮನದೊಳು ಧ್ಯಾನ, ಒಂದು ದಿನದ  ವ್ಯಾಪಾರ ಮುಗಿಸಲು ;
ಇನ್ನೊಂದು ಲೋಕ ವ್ಯಾಪಾರವ ಮುಗಿಸಲು;
ನಾನು ಕಾಯುತಿಹೆನು; ನಾನು ಕಾಯುತಿಹೆನು;
ಅವನು ಬರುವನೋ? ಇಲ್ಲ, ಇವನು  ಬರುವನೋ?
ಯಾರು ಮೊದಲು ಬರುವರೋ ನಾ ಕಾಣೆ!

ಕರುಣಾ ಸಾಗರ

 ಎಲ್ಲ ನೀನು ಬಲ್ಲೆ ಎಂದು ನನಗೆ ತಿಳಿದಿದೆ
ಎಲ್ಲ ಬಲ್ಲ ನೀನು ಸುಮ್ಮನೆ ನಸುನಗುತಿರುವೆ
ಮನದ ತೊಳಲಾಟ ಹೃದಯಭಾರ ತುಂಬಿದೆ ತಲ್ಲಣ
ಆಸರೆಯ ಬಯಸಿ ಕೈಚಾಚಿ ನಿಂತಿರುವೆ ಬರಲಾರೆಯಾ ತಕ್ಷಣ।।

ಲೋಕವೇ ನಿನ್ನದು , ನೀನು ಅನಂತಶಕ್ತಿಯ ಆಗರ
ತೃಣಮಾತ್ರವು ನಾನು , ಬೇಡುವೆ ನಿನ್ನ ಕರುಣಾ ಸಾಗರ
ನಿನ್ನ ಮಾಯೆಯಾಟ ಬಲ್ಲವರು ಯಾರು?
ನೀನು ಆಡಿಸಿದಂತೆ ನಾವಾಡುವೆವು ನೀ ಸೂತ್ರದಾರ||

ಎಲ್ಲವ ಬಿಟ್ಟು ವೈರಾಗ್ಯವ ತಬ್ಬಲೇ ? ಗುರುವೇ!
ಮನದಲ್ಲಿ ನೂರು ಆಸೆಗಳ ಹುಟ್ಟಿಸಿ ನೀ ನಗುವೇ!
ಬಿಟ್ಟು ಹೋಗೆಂದು ಸವಾಲೆಸೆಯುವೆ ಮೋಹದಲ್ಲಿ ಬಂಧಿಸಿ
ಭವಬಂಧನಗಳಿಗೆ ಬಲಿಯಾಗಿ ತೊಳಲಾಡುವೆ ನಾ ಅನುಭವಿಸಿ|| 

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...