ಕಣ್ಣೀರ ಮಳೆಯಲ್ಲಿ ನಾ ಮೀಯುವಾಗ
ನೀ ಬಂದು ಬೆಳಕಿಗೆ ಕರೆದೊಯ್ದೆ
ನೋವ ಕಡಲಲಿ ಮುಳುಗುವಾಗ
ನಗುವ ಹಾಯಿದೋಣಿಯ ಬಳಿ ತಂದೆ
ನೀನು।।
ನನ್ನ ನಾ ಅರಿತಿರಲಿಲ್ಲ
ನೀ ನನ್ನ ಅರಿತಿರುವಷ್ಟು
ಮೋಡ ಕಟ್ಟುವ ಸಮಯದಲ್ಲಿ
ನನ್ನಿಂದಾಗದೆಂದು ಕೈ ಚೆಲ್ಲಿ
ಕುಳಿತ್ತಿದ್ದಾಗ
ಗುರುವಾಗಿ ಕೈ ಹಿಡಿದು
ನಡೆಸಿದವನು ನೀನು||
ಎಲ್ಲರೂ ಹೀಗೆಳೆಯುವಾಗ
ಇನ್ನೇನು? ಮುಂದೇನೆಂದು
ಚಿಂತೆಯಲ್ಲಿದ್ದಾಗ
ನಾ ನಿನ್ನ ಜೊತೆಗಿರುವೆನೆಂದು
ಎನ್ನೆದೆಯಲಿ ಧೈರ್ಯ ತುಂಬಿದವನು
ನೀನು||
ಎಲ್ಲರೂ ನನ್ನ ಜೊತೆ ಬಿಟ್ಟು
ಮುನ್ನಡೆದಾಗ
ಹಿಂದುಳಿದು ನಾನು ಏಕಾಂಗಿಯಾಗಿ
ನಡೆವಾಗ
ಜೊತೆಜೊತೆಯಲಿ ಹೆಜ್ಜೆಹಾಕಿ
ನಾನಿರುವೆಂದು ಕೈ ಹಿಡಿದವನು
ನೀನು||
No comments:
Post a Comment