-ಆ ಹೆಣ್ಣಲ್ಲ ನಾನು-


ನಾನು ಆ ಹೆಣ್ಣಲ್ಲ
ನಾನು ಸಾಮಾನ್ಯ ಹೆಣ್ಣೆಂದುಕೊಳ್ಳಬೇಡ
ನಿನಗೆ ನೆನೆಪಿದೆಯಾ!, ನಾನು ಅದೇ ಹೆಣ್ಣು
ನಿನ್ನಿಂದ ನಾಲ್ಕು ಗೋಡೆಯ ಮಧ್ಯೆದಲ್ಲಿ ಬಂಧಿಸಲ್ಪಟ್ಟವಳು
ನೀನಾದರೂ ಸ್ವಚ್ಛಂಧವಾಗಿ ಹಾರಾಡಿದವನು ನಾನು ಬಲ್ಲೆ

ನಾನು ಅದೇ ಹೆಣ್ಣು
ನಿನ್ನ ಸಂಪ್ರದಾಯ, ಪರಂಪರೆ, ಗೌರವವೆಂದು
ಖುರಾನ್,ಬೈಬಲ್,ಪುರಾಣಗಳ ಹೆಸರು ಕೇಳಿ ಕತ್ತಲಲ್ಲಿ
ಮರೆಯಾದವಳು ನಾನು-ಸುಂದರ ಪ್ರಪಂಚವನ್ನು ನೋಡದೆ
ಕಣ್ಣು ಮುಚ್ಚಿಕೊಂಡವಳು ನಾನೇ!
ನನಗೆ ತಿಳಿದಿದೆ ಕತ್ತಲೆಂದೂ ಬೆಳಕನ್ನು ಹಿಡಿದಿರಲಾರದೆಂದು

ನಾನು ಅದೇ ಹೆಣ್ಣು
ನೀನು ನನ್ನ ಒಡಲಿನಿಂದ ಸುಖವನ್ನು ಪಡೆಯುವಾಗ
ಎದೆಯೊಳಗೆ ಮುಳ್ಳುಗಳನ್ನು ನಾಟಿಸಿಕೊಂಡವಳು ನಾನೇ!
ನಿನಗೆ ತಿಳಿದಹಾಗಿಲ್ಲ ಬೇಲಿ, ಪಂಜರಗಳಿಂದ
ಹೂವಿನ ಪರಿಮಳವನ್ನು ಬಂಧಿಸಲಾಗದೆಂದು

ನಾನು ಅದೇ ಹೆಣ್ಣು
ಗೌರವದ ಹೆಸರಿನಲ್ಲಿ ಕಡೆಗಣಿಸಲ್ಪಟ್ಟವಳು
ಅಭಲೆ, ಅಸಹಾಯಕಳೆಂದು ಶೋಷಣೆಗೊಳಗಾದವಳು
ನನ್ನ ತಾಯ್ತನಕ್ಕೆ ನಿನ್ನಿಂದ ಅಪಚಾರವೆರಗಿಸಿಕೊಂಡವಳು
ನಿನ್ನಿಂದ ಸುಖದ, ಭೋಗದ ವಸ್ತುವಾಗಿಹೋದವಳು ನಾನೇ!

ನಾನು ಈಗ ಆ ಹೆಣ್ಣಲ್ಲ
ಇಷ್ಟೂ ದಿವಸ ನನ್ನ ತಾಳ್ಮೆ,ಹೆಣ್ತನ ಸುಮ್ಮನಿರುವಂತೆ ಮಾಡಿತು
ಕಾಲ ಈಗ ಬಂದಿದೆ- ಸಹನೆಯ ತಾಳ್ಮೆ ಈಗ ಇಲ್ಲ
ಪ್ರಪಂಚ ವಿಸ್ತಾರವಾಗಿದೆಯೆಂದು ತಿಳಿದಿದೆ
ದೇಹದಲ್ಲಿ ದೇವರು ಸಾಕಷ್ಟು ಶಕ್ತಿಕೊಟ್ಟಿದ್ದಾನೆ
ಲೋಕ ಜ್ನಾನವೂ ಬಹಳಷ್ಟಿದೆ
ತೆಗೆದುಕೋ ನೀನು ಹಾಕಿದ ಕಪ್ಪು ಬಟ್ಟೆ, ತಾಳಿ,ಶಿಲುಬೆ
ನೀನೇ ಧರಿಸಿಕೊಂಡು ಮೆರೆದಾಡು
ನೀನು ಹೇಳಿದಂತೆ ತಲೆದೂಗುವ ಕೋಲೆ ಬಸವನಲ್ಲ
ನೀನು ಅಂದುಕೊಂಡಂತೆ ಹಳೆಯಹೆಣ್ಣು ನಾನಲ್ಲ

(ಪ್ರೇರಣೆ: " I am not that Women" by Kishwar Naheed)

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...