-ಗೋಡೆಯ ಮೇಲಿನ ಕಿಟಕಿ-
ಚಿಕ್ಕವನಿದ್ದಾಗ ಕಿಟಕಿಯಿಂದ ಹೊರ ಜಗತ್ತನ್ನು ನೋಡಬೇಕೆಂದು
ತುಂಬಾ ಇಷ್ಟಪಡುತ್ತಿದ್ದೆ.
ಬೆಳಿಗ್ಗೆ ಎದ್ದತಕ್ಷಣ ಪೂರ್ವದಿಕ್ಕಿನ ಆ ಆಗಸವನ್ನು ನೋಡುತ್ತಾ
ನನ್ನದೇ ಕನಸಿನ ಲೋಕಕ್ಕೆ ಹಾರುತ್ತಿದ್ದೆ.
ಚಿನ್ನದ ತೇರಿನ ರವಿಯ ಆಗಮನ ಮನಕ್ಕೆ ಮುದಕೊಡುತ್ತಿತ್ತು
ಕನ್ನಡದ ಗುರುಗಳು ಹೇಳುತ್ತಿದ್ದ ಮಾತು " ಬೆಳಿಗ್ಗೆ ತದೇಕ ದೃಷ್ಟಿಯಿಂದ
ಸೂರ್ಯನ್ನನ್ನು ನೋಡಿದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ"
ರಕ್ತವರ್ಣವನ್ನು ಚೆಲ್ಲುತ್ತಾ ಕತ್ತಲನ್ನು ಓಡಿಸುತ್ತಾ ಬರುವ ಸೂರ್ಯನನ್ನು
ನೋಡೋದೆ ಒಂದು ಆನಂದ.
ಬೆಳಗಿನ ಮಂಜಿನ ಆಟ ಸುಂದರ ಹಾಗೂ ಮನೋಹರ.
ಬೆಳಿಗ್ಗೆ ೭.೦೦ ಗಂಟೆಗೆ ಬೆಂಗಳೂರಿನ ಕಡೆಗೆ ಓಡುವ ರೈಲನ್ನು ನೋಡಲು
ತುದಿಗಾಲಲ್ಲಿ ನಿಂತಿರುತ್ತಿದ್ದೆ,
ಕಪ್ಪು ಹೊಗೆಯನ್ನು ಚೆಲ್ಲುತ್ತಾ ಆಕಾಶವನ್ನು ಗಲೀಜು ಮಾಡುತ್ತಾ,
ಆರ್ಭಟಮಾಡುತ್ತಾ ೬ ಬೋಗಿಗಳ ರೈಲು ಕ್ಷಣ ಮಾತ್ರದಲ್ಲಿ ಕಿಟಕಿಯಿಂದ
ಕಾಣೆಯಾಗುತ್ತಿತ್ತು.
ಬೆಳಿಗ್ಗೆ ಹಾಲಿನವನ ಆಗಮನವನ್ನು ಕಾಯುವುದು,
ಗುರುತಿನ ಗೆಳೆಯ ಬೆಳಗಿನ ಟ್ಯೂಷನ್ ಗೆ ತೆರಳುವ ನೋಟ
ಆಪ್ಯಾಯಮಾನವಾಗಿತ್ತು.
ಈಗ ಪರಿಸ್ಥಿತಿ ಬದಲಾಗಿದೆ, ಸೂರ್ಯ ಕಿಟಕಿಯಿಂದ ಕಾಣಿಸೋದಿಲ್ಲ
ಸುತ್ತಲೂ ಕಾಂಕ್ರೀಟ್ ಕಾಡು ಬೆಳೆದಿದೆ
೭.೦೦ ಗಂಟೆಯ ರೈಲಿನ ಶಬ್ದಮಾತ್ರ ಕೇಳಿಸಿತ್ತದೆ
ಬೆಳಗಿನ ಆ ಮನೋಹರ ದೃಶ್ಯ ಕಾಣೋದಿಲ್ಲ
ಬರೀ ಶಬ್ದ, ಮಾಲಿನ್ಯ ಮಾತ್ರ ಕಣ್ಣಮುಂದಿದೆ
ಮನದಲ್ಲಿ ಬೇಸರದ ಛಾಯೆ ಆವರಿಸಿದೆ.
-ಪ್ರೀತಿಯೆಂಬ ದೊಂಬರಾಟ-
ನಗು ಬರುವುದು ಪ್ರೀತಿಯೆಂದರೆ
ಪ್ರೀತಿಯೆಂದರೆ ಅರಿಯದ ಹೃದಯಗಳ ಡಂಬಾಟ
ಪ್ರೀತಿಯೆಂದರೆ ಅಚಲ
ಪ್ರೀತಿಯೆಂದರೆ ಧೃವ ನಕ್ಷತ್ರ
ಇಂದು, ನಾಳೆ, ಪ್ರಳಯಗಳಲ್ಲೂ ಬದಲಾಗದ್ದು
ಗುಲಾಬಿ ಪ್ರೀತಿಯ ಧ್ಯೋತಕವಂತೆ
ನಾಳೆ ಬಂದು ನೋಡಿದರೆ ಹೂವಿನ ಗತಿಯೇನು?
ಪ್ರೀತಿಗೆ ಬಂಧನವಿದೆಯಂತೆ
ಮಧುವೆಯೆಂದರೆ ಪ್ರೀತಿಯಂತೆ- ಹಾಸ್ಯಾಸ್ಪದವಲ್ಲವೇ?
ಬೆಳಕೆಂದರೆ ಪ್ರೀತಿಯಲ್ಲ,ಕತ್ತಲಲ್ಲೂ ಇಲ್ಲ
ಗಾಧೆಯಲಿಲ್ಲ,ವೇಧಗಳಲಿಲ್ಲ
ಕಣ್ಣೋಟಕ್ಕೆ ಸೋಲುವರಲ್ಲಿ ಪ್ರೀತಿಯಿಲ್ಲ
ಪ್ರೀತಿ ಬದಲಾಗುವುದಿಲ್ಲ
ಪ್ರೀತಿ ಬಯಸುವುದಿಲ್ಲ- ಹಾರೈಸುತ್ತದೆ.
(ಪ್ರೇರಣೆ: Sonnet 116- William Shakespeare)
-ಆ ಹೆಣ್ಣಲ್ಲ ನಾನು-
ನಾನು ಆ ಹೆಣ್ಣಲ್ಲ
ನಾನು ಸಾಮಾನ್ಯ ಹೆಣ್ಣೆಂದುಕೊಳ್ಳಬೇಡ
ನಿನಗೆ ನೆನೆಪಿದೆಯಾ!, ನಾನು ಅದೇ ಹೆಣ್ಣು
ನಿನ್ನಿಂದ ನಾಲ್ಕು ಗೋಡೆಯ ಮಧ್ಯೆದಲ್ಲಿ ಬಂಧಿಸಲ್ಪಟ್ಟವಳು
ನೀನಾದರೂ ಸ್ವಚ್ಛಂಧವಾಗಿ ಹಾರಾಡಿದವನು ನಾನು ಬಲ್ಲೆ
ನಾನು ಅದೇ ಹೆಣ್ಣು
ನಿನ್ನ ಸಂಪ್ರದಾಯ, ಪರಂಪರೆ, ಗೌರವವೆಂದು
ಖುರಾನ್,ಬೈಬಲ್,ಪುರಾಣಗಳ ಹೆಸರು ಕೇಳಿ ಕತ್ತಲಲ್ಲಿ
ಮರೆಯಾದವಳು ನಾನು-ಸುಂದರ ಪ್ರಪಂಚವನ್ನು ನೋಡದೆ
ಕಣ್ಣು ಮುಚ್ಚಿಕೊಂಡವಳು ನಾನೇ!
ನನಗೆ ತಿಳಿದಿದೆ ಕತ್ತಲೆಂದೂ ಬೆಳಕನ್ನು ಹಿಡಿದಿರಲಾರದೆಂದು
ನಾನು ಅದೇ ಹೆಣ್ಣು
ನೀನು ನನ್ನ ಒಡಲಿನಿಂದ ಸುಖವನ್ನು ಪಡೆಯುವಾಗ
ಎದೆಯೊಳಗೆ ಮುಳ್ಳುಗಳನ್ನು ನಾಟಿಸಿಕೊಂಡವಳು ನಾನೇ!
ನಿನಗೆ ತಿಳಿದಹಾಗಿಲ್ಲ ಬೇಲಿ, ಪಂಜರಗಳಿಂದ
ಹೂವಿನ ಪರಿಮಳವನ್ನು ಬಂಧಿಸಲಾಗದೆಂದು
ನಾನು ಅದೇ ಹೆಣ್ಣು
ಗೌರವದ ಹೆಸರಿನಲ್ಲಿ ಕಡೆಗಣಿಸಲ್ಪಟ್ಟವಳು
ಅಭಲೆ, ಅಸಹಾಯಕಳೆಂದು ಶೋಷಣೆಗೊಳಗಾದವಳು
ನನ್ನ ತಾಯ್ತನಕ್ಕೆ ನಿನ್ನಿಂದ ಅಪಚಾರವೆರಗಿಸಿಕೊಂಡವಳು
ನಿನ್ನಿಂದ ಸುಖದ, ಭೋಗದ ವಸ್ತುವಾಗಿಹೋದವಳು ನಾನೇ!
ನಾನು ಈಗ ಆ ಹೆಣ್ಣಲ್ಲ
ಇಷ್ಟೂ ದಿವಸ ನನ್ನ ತಾಳ್ಮೆ,ಹೆಣ್ತನ ಸುಮ್ಮನಿರುವಂತೆ ಮಾಡಿತು
ಕಾಲ ಈಗ ಬಂದಿದೆ- ಸಹನೆಯ ತಾಳ್ಮೆ ಈಗ ಇಲ್ಲ
ಪ್ರಪಂಚ ವಿಸ್ತಾರವಾಗಿದೆಯೆಂದು ತಿಳಿದಿದೆ
ದೇಹದಲ್ಲಿ ದೇವರು ಸಾಕಷ್ಟು ಶಕ್ತಿಕೊಟ್ಟಿದ್ದಾನೆ
ಲೋಕ ಜ್ನಾನವೂ ಬಹಳಷ್ಟಿದೆ
ತೆಗೆದುಕೋ ನೀನು ಹಾಕಿದ ಕಪ್ಪು ಬಟ್ಟೆ, ತಾಳಿ,ಶಿಲುಬೆ
ನೀನೇ ಧರಿಸಿಕೊಂಡು ಮೆರೆದಾಡು
ನೀನು ಹೇಳಿದಂತೆ ತಲೆದೂಗುವ ಕೋಲೆ ಬಸವನಲ್ಲ
ನೀನು ಅಂದುಕೊಂಡಂತೆ ಹಳೆಯಹೆಣ್ಣು ನಾನಲ್ಲ
(ಪ್ರೇರಣೆ: " I am not that Women" by Kishwar Naheed)
-ನಂಬಿಕೆ-
ಬಿಡು ಊಟ, ನಿದ್ದೆ ಈಗಲೇ
ಗುಂಡಿನ ಶಬ್ದ ಕೇಳಿಸುತ್ತಿರುವುದೇ
ಗಡಿಯಾಚೆಯಿಂದ ಶತ್ರುಗಳ ಅಟ್ಟಹಾಸ
ಹೊರಡು ಅಲ್ಲಿ ಗೆಳೆಯನೋರ್ವ
ನಿನಗಾಗಿ ಕಾಯುತಿಹನು ಪ್ರಾಣವ ಕೈಯಲ್ಲಿ ಹಿಡಿದು
ಅವನ ನಂಬಿಕೆಯನ್ನು ಸುಳ್ಳಾಗಿಸಬೇಡ
ಅವನು ಕಣ್ಣುಮುಚ್ಚುವ ಮುನ್ನ ಸಾಗು ಅವನೆಡೆಗೆ
ಗುಂಡು ಎದೆಗೆ ಬಡಿದರೂ
ಎದೆಗುಂಧದೆ ಸಾಗು ಮುಂದೆ
ಹಾಂ! ಅಲ್ಲಿ ಬಿದ್ದಿರುವನು ನನ್ನ ಗೆಳೆಯ
ನರಳುತ್ತಾ ಎದೆಯ ಹಿಡಿದುಕೊಂಡು
ಒಂದು ಕೈಯಲ್ಲಿ ಭಗವದ್ಗೀತೆ
ತುಟಿಯಲ್ಲಿ ನನ್ನದೆ ಧ್ಯಾನ
ರಕ್ತತಿಲಕ ಹಣೆಯಲಿ, ಮೈಯಲ್ಲಾ ರಕ್ತ
ನಡೆದಿದೆ ಕೊನೆಯ ಪಯಣದ ಮೆರವಣಿಗೆ
ನನ್ನ ಕಂಡೊಡನೆ ಅವನಲ್ಲಿ ಚೈತನ್ಯ
ತುಟಿಯಲ್ಲಿ ನೋವಿನ ನಗು
ಕಣ್ಣಲ್ಲಿ ಆನಂದ ಭಾಷ್ಪ
ಅವನು ಹೇಳಿದ ಕೊನೆಯ ಮಾತು
ಅವನು ಹೇಳಿದ ಕೊನೆಯ ಮಾತು
"ಗೆಳೆಯ ನನಗೆ ಗೊತ್ತಿತ್ತು ನೀನು
ನನಗಾಗಿ ಬಂದೇ ಬರುವೆಯೆಂದು"
ಅವನ ನಂಬಿಕೆಯನ್ನು ನಾನು ಉಳಿಸಿದ್ದೆ
ಅವನ ನಂಬಿಕೆ ನಾನು ಉಳಿಸಿದ್ದೆ
ಅವನನ್ನು ನಾನು ಕಳೆದುಕೊಂಡಿದ್ದೆ
ನನ್ನ ಮೇಲಿನ ಪ್ರೀತಿ, ಅವನ ಮೇಲಿನ ಪ್ರೀತಿ
ನಂಬಿಕೆಯೊಂದು ಗಟ್ಟಿಗೊಳಿಸಿತ್ತು
-ಮನಸ್ಸಿನ ಹಠ-
ಏಕೆ ಕುಳಿತಿರುವೆ ಹೀಗೆ?
ಕಾಣದ ಯಾವ ಕನಸ ಕಂಡೆ?
ಮನಸು ಎಲ್ಲಿ ಜಾರಿದೆ?
ಯಾರ ನೆನಪು ಕಾಡಿದೆ?
ಯಾಕಾಗಿ ಕಾಡಿದೆ?
ಎಷ್ಟು ಸಾರಿ ಹೇಳಿದರೂ ಕೇಳದೆ
ಒಲ್ಲೆ ಒಲ್ಲೆಯೆಂದೇ ಹೇಳಿದೆ
ಮಾತು ಬೇಡವಾಯಿತು
ಮೌನ ಸಾಕಾಯಿತು
ಯಾರ ಸಂಗವೂ ಬೇಡ
ಹೇಳಬಾರದೆ ನನ್ನ ಕೂಡ
ಇಷ್ಟು ಇಂದಿಗೆ ಸಾಕು
ನಾಳೆಗೆ ಇನ್ನೇನು ಬೇಕು?
ಮುಂದುವರೆಯದಿರಲಿ ನಿನ್ನ ಹಠ
ಕಲಿತಿದ್ದಾಗಿದೆ ನಿನ್ನಿಂದ ಓಳ್ಳೆಯಪಾಠ
ದಿನವೆಲ್ಲಾ ಹಾಳಾಯಿತು ನಿನ್ನಿಂದ
ಈ ರೀತಿ ಆಗದಿರಲಿ ಮುಂದೆ ನಿನ್ನಿಂದ
ಮೌನ ಬಿಡು, ಹೊರಗೆ ಬಾ
ನಿನಗಾಗಿ ಕಾಲ ಕಾಯುತ್ತಿದೆ ಬಾ
ಮತ್ತೆ ಮತ್ತೆ ಕಾಡಬೇಡ
ನಿನಗೇನು ಬೇಕು ಬಾಯಿಬಿಟ್ಟು ಹೇಳಿಬಿಡು
ಸಂಜೆ ಗಾಳಿ ಸೇವಿಸಿ ಬಾ
ಮನಸು ಹಗುರಗೊಳಿಸು, ಬದಲಾಗು ಬಾ
-ಪ್ರೀತಿಯ ಹನಿ-
ಅರೆ..ಅರೆ ಮೋಡಗಳೇ ಸ್ವಲ್ಪ ನಿಲ್ಲಿ
ಎತ್ತ ಹೋಗಿತಿರುವಿರಿ ಸ್ವಲ್ಪ ಹೇಳಿ ಹೋಗಿ
ನನ್ನ ಗೆಳತಿ ಅಲ್ಲೇ ಎಲ್ಲೋ ಇರುವಳು
ನನ್ನ ಪ್ರೇಮಪತ್ರವನ್ನೊಮ್ಮೆ ಕೊಟ್ಟು ಹೋಗಿ
ಗಾಳಿ ಬಂದತ್ತ ನಮ್ಮ ಪಯಣವು
ಎತ್ತ ಹೋಗುವೆವೋ ನಮಗೇ ತಿಳಿಯದು ಕೇಳು
ನಿನ್ನ ಗೆಳತಿ ಯಾರೆಂದು ತಿಳಿಯೆವು ನಾವು
ನಿನ್ನ ಪತ್ರ ಹೇಗೆ ಕೊಡುವುದು ನೀನೇ ಹೇಳು
ನೀವು ಹೋದೆಡೆ ತಂಪಾದ ಗಾಳಿ ಭೀಸಿ
ಪ್ರೀತಿಯ ಮಳೆಯ ಸುರಿಸಿ
ಇಳೆಯೆಂಬ ಗೆಳತಿಯ ಸಂತೈಸಿ
ನನ್ನ ಪತ್ರ ತಲುಪುವುದು ನನ್ನವಳ ಬಯಸಿ
ಹಾಗೇ ಆಗಲಿ ಯಾವಾಗಲೂ ಮಳೆ ಸುರಿಸಲಾರೆವು
ಮುಂಗಾರಿನ ಸಮಯ ಬರುವವರೆಗೂ ನೀ ಕಾಯಬೇಕು
ನಮ್ಮ ಮಳೆಯಲ್ಲಿ ನಿನ್ನ ಪ್ರೀತಿಯ ಪತ್ರ ಕೊಚ್ಚಿ ಹೋದರೆ
ನಮ್ಮ ಬಯ್ಯದಿರು
ನಿನ್ನ ಪತ್ರ ತಲುಪಿದೆ ಎಂದು ಗೊತ್ತಾಗುವುದಾದರೂ ಹೇಗೆ?
ನನ್ನ ಮಾತು ಮನ್ನಿಸಿದಿರಿ ಕೊಚ್ಚಿ ಹೋಗದಂತೆ
ನಿಮ್ಮ ಪ್ರತಿ ಹನಿಯಲ್ಲೂ ಬರೆಯುವೆ
ವಸಂತ ಬರುವ ಪ್ರತಿ ಮರಗಿಡಗಳ ಮೇಲೂ
ಹಸಿರಿನಿಂದ ಹೊಸ ಚಿಗುರಿನ ಮೇಲೆ ನೀವು ಇಳೆಗೆ ಹಾಕಿದ
ಪ್ರತಿ ಹನಿಯಿಂದ ಬರೆವ
-ಪೀಠಿಕೆ-
ಮನದಲ್ಲಿ ಮಾಸದ ನೆನಪು ಗಟ್ಟಿಯಾಗಿ ಇಳಿದಿದೆ
ಮತ್ತೆ-ಮತ್ತೆ ಮನಸು ಅವಳ ಹೆಸರ ಕರೆದು
ನೆನಪು ಮಾಡಿಕೊಂಡೆನೆಂದು ಸಂತೋಷಪಟ್ಟಿದೆ
ಒಂದೇ ತಿಂಗಳು ಆಷಾಡವೆನ್ನುವರು ತಿಳಿದವರು
ವರ್ಷವೆಲ್ಲಾ ಆಷಾಡವೇ ಆಗಿದೆ ನನಗೆ
ಪ್ರೀತಿಯ ತೀವ್ರತೆ ವಿರಹವೋ
ವಿರಹದ ತೀವ್ರತೆ ಪ್ರೀತಿಯೋ ಒಂದೂ ತಿಳಿಯದಾಗಿದೆ
ದಿವಸಕ್ಕೆ ಒಂದು ಹಗಲು ಒಂದು ರಾತ್ರಿಯಂತೆ
ವರ್ಷಕ್ಕೋಂದು ರಾತ್ರಿಯಾದಂತಿದೆ ನನಗೆ
ಮುಂಗಾರಿಗೆ ಬಾಯಿತೆರೆದು ಕಾಯುತಿಹಳು ಇಳೆ
ಮನಸು ಮಿಂದಿದೆ,ನೊಂದಿದೆ-ಕಾರಣ ನಿನ್ನ ನೆನೆಪ ಮಳೆ
ನಾಳೆ ಬರುವಿಯೆಂದು ಇಂದೇ ಮುನ್ನುಡಿ ಬರೆದೆ
ಬರಲೋ? ಬೇಡವೋ? ಎಂದು ಪೀಠಿಕೆ ನೀನೇ ತೆರೆದೆ
ಮುಗಿಯದ ದ್ವಂದ್ವ ನಾಳೆಗೆ ತೆರೆ ಎಳೆದಿದೆ
ನಿನ್ನ ಹೆಸರ ಮನದ ಪುಟಗಳಲ್ಲಿ ಭಾರದ ಹೃದಯದಿಂದಲೇ ಬರೆದೆ
-ಆನಂದ-
ಹಾರೋ ಹಕ್ಕಿಯ ಕಂಡು ಸಂತೋಷಪಟ್ಟಿದ್ದೇನೆ
ಕನಸಿನಲ್ಲಿ ರೆಕ್ಕೆ ಜೋಡಿಸಿಕೊಂಡು
ಹಕ್ಕಿಗಳೊಂದಿಗೆ ಪೈಪೋಟಿಗಿಳಿದಿದ್ದೇನೆ
ಎತ್ತರದ ಬೆಟ್ಟಗುಡ್ಡಗಳನ್ನು ಹತ್ತಿ ಆನಂದಪಟ್ಟಿದ್ದೇನೆ
ಸ್ವರ್ಗವೆಂದರೆ ಇದೇ ಇರಬೇಕೆಂದು ಊಹಿಸಿಕೊಂಡಿದ್ದೆ
ಇಂದು ನಾಲ್ಕು ಗೋಡೆಯ ಮಧ್ಯೆ
ಅರೆ ಹುಚ್ಚನಂತೆ ಹುಡುಕುತ್ತಿದ್ದೇನೆ
ಹಣದ ಪ್ರತಿ ನೋಟಿನಲ್ಲೂ ಹುಡುಕಿದ್ದೇನೆ
ಕಂಡ ಕಂಡವರ ಮುಖಗಳಲ್ಲಿ
ಕಾಣದ ಆನಂದವನ್ನು ಹುಡುಕುತ್ತಿದ್ದೇನೆ
ಎಂದೋ ಅನುಭವಿಸಿದ ಆ ಆನಂದವನ್ನು ಮರೆತು ಹೋಗಿದ್ದೇನೆ
ಬೆಂಬಿಡದೆ ಕಾಂಕ್ರೀಟ್ ಕಾಡಿನಲ್ಲಿ ಗಮಟು ವಾಸನೆ ಬಿಟ್ಟರೆ
ಮತ್ತೇನೂ ಕಾಣಲಿಲ್ಲ, ಸಿಗಲಿಲ್ಲ.
-ಚಿತ್ತಾರ-
ಮಸಾಲೆ ಪೂರಿ ತಿನ್ನಲು
ಆಗ ಸಂಜೆಯಾಗಿತ್ತು
ಮನಸ್ಸು ಹಗುರವಾಗಿತ್ತು
ಹಾಗೆ ಕಣ್ಣಾಡಿಸಿದ್ದೆ ಸುತ್ತಲೂ
ಸಂಜೆ ಕತ್ತಲು ಸಂತೋಷ ಕೊಡುತ್ತಿತ್ತು
ಪಿಸು-ಪಿಸು ಮಾತನಾಡುತ್ತಾ
ಮೈ-ಕೈ ಸೋಕಿಸಿಕೊಳ್ಳುತ್ತಾ
ಸಾಗೋ ಜೋಡಿಹಕ್ಕಿ
ಆಕಾಶದಲ್ಲಿ ಸಾಲುಸಾಲು ಹಕ್ಕಿಗಳ ಚಿತ್ತಾರ
ರಾತ್ರಿಯ ಶೃಂಗಾರ ಕಾವ್ಯಕ್ಕೆ ಪೀಠಿಕೆ ಬರೆದಂತ್ತಿತ್ತು
*ದಾರಿ-ರಹದಾರಿ*
ಒಬ್ಬೊಬ್ಬರು ಒಂದೊಂದು ಎತ್ತರಕ್ಕೆ ಬೆಳೆದಿದ್ದಾರೆ
ಹೌದು ಇದೇ ದಾರಿಯಲ್ಲಿ ಹೋದವರು ಅವರೆಲ್ಲರೂ!
ನಾನೂ ಅದೇ ದಾರಿಯಲ್ಲಿದ್ದೇನೆ!
ಎತ್ತರದ ಅನುಭವ ನನಗಾಗಿಲ್ಲ
ಇವತ್ತು ಅದೇ ದಾರಿಯಲ್ಲಿ ನಡೆಯುತ್ತೇನೆ
ನಾಳೆ ನಾಳೆಗಳಲ್ಲಿ ದಾರಿ ಬದಲಾಗುವುದಿಲ್ಲ
ನನ್ನಲ್ಲಿ ಸಂದೇಹಗಳಿವೆ!
ಯಾರನ್ನು ಕೇಳಬೇಕು ತಿಳಿಯದಾಗಿದೆ?
ಹಿಂದೆ ಈ ದಾರಿಯಲ್ಲಿ ಹೋದವರು ಈಗ ಕಾಣುತ್ತಿಲ್ಲ,
ಈ ದಾರಿ ಇಂದು ಅವರಿಗೆ ಬೇಕಾಗಿಲ್ಲ
ನೆಲದ ಮೇಲೆ ನಡೆಯುವುದು ಅವರಿಗೆ ಸಾಕಾಗಿದೆ
ಅದಕ್ಕೆ ಕಾರು,ವಿಮಾನಗಳು ಸಾಕಷ್ಟಿವೆ
ಮರೆತ್ತಿದ್ದಾರೆಂದು ಆರೋಪಿಸಲೋ?
ಅಸಡ್ಡೆಯೆನ್ನಲೋ ತಿಳಿಯುತ್ತಿಲ್ಲ!
ಅದೇ ದಾರಿಯಲ್ಲಿ ಈಗಲೂ ಸತ್ವವಿದೆ
ನಗುನಗುತ್ತಾ ಸ್ವಾಗತಿಸುವ ಹೂಗಿಡಗಳಿವೆ
ತಣ್ಣನೆ ಗಾಳಿ ಬೀಸಿ ಸಂತೈಸುವ ಮರಗಳಿವೆ
ಹೆಚ್ಚಾಗಿ ನಮ್ಮದೆನ್ನುವ ಅಭಿಮಾನದ ವಾಂಛೆಯಿದೆ
ಅದು ನನ್ನ ದಾರಿ
ಅದು ನಮ್ಮ ದಾರಿ
ಜೀವನ ಸೋಪಾನಕ್ಕೆ ಅದೇ ರಹದಾರಿ||
-ಕಾಯುವ ಭಾಗ್ಯ-
ಯಾವ ರಾಗಕೆ ಮನಸೋತು ನರಳುತಿದೆ
ಮನಕರಗಿ,ಹೃದಯ ಮರುಗಿ ತೊಳಲುತಿದೆ
ಭಾವಗಳು ಮನದೊಳಗೆ ತಿರುತಿರುಗಿ ಮೇಲೇರುತಿದೆ
ನಿನ್ನ ಕಂಡಾಗಲೇ ಮನದಲ್ಲೇನೋ ಹೊಸತನ
ಆ ಮಾತು, ಆ ನೋಟ ಕಾಣಬೇಕೆಂಬ ಕಾತರ
ನಿಂತಲ್ಲೇ ನಿಂತು ಕಾಯುವುದು ನಿನಗಾಗಿಯೇ
ಯಾರೇ ಕಂಡರೂ ನೀನ್ನೆಂದೇ ತಿಳಿಯುವ ಭ್ರಮೆ
ಬೇಸರವಿಲ್ಲ ನೀನು ಬರಲಿಲ್ಲವೆಂದು
ಪ್ರತಿದಿನ ಕಾಯುವೆ ನಿನಗಾಗಿ ಬೇಕೆಂದೇ
ನೀನು ಬರುವೆಯೆಂಬ ನೆವಸಾಕು ನನಗೆ ಜೀವಿಸಲು
ವಿರಹ ನೂರು ಬರಲಿ, ಕಾಯುವ ಭಾಗ್ಯ ನನಗೇ ಸಿಗಲಿ
ಪ್ರತಿಯೊಂದು ಕ್ಷಣವೂ ನಿನ್ನ ಜೊತೆಯಲ್ಲಿರುವೆ
ಕತ್ತಲಲ್ಲೂ, ಬೆಳಕಲ್ಲೂ,ದುಃಖ,ನೆತ್ತರಲ್ಲೂ ನೀನೆ ಕಾಣುವೆ
ನೀನಿಲ್ಲದ ಜಾಗವಾವುದೆಂದು ಹುಡುಕಬೇಕಿದೆ
ಎಲ್ಲೋ ಇರುವ ನಿನ್ನಲ್ಲೂ ನಾನೇ ಇರುವೆ
-ಜೀವದ ಇನಿಯ-
ಯಾರು ಬರುವರೋ?
ಯಾವಾಗ ಬರುವನೋ?
ಈ ಜೀವವ ಉದ್ಧರಿಸಲು
ಮನಸು ಬಯಸುತಿದೆ
ಕಣ್ಣು ತವಕಿಸುತಿದೆ
ಇಂದೇ ಕಣ್ಣ ಮುಂದೆ ಬರಬಾರದೇ
ಇವನು ಗೆಳೆಯನಲ್ಲ
ಇವನು ಇನಿಯನಲ್ಲ
ಸನಿಹ ಬರುವ ಸುಳಿವಿಲ್ಲ
ಯಾರು ಮುಂದೆ ಬಂದರೂ
ಮನದಲ್ಲಿ ಅದೇ ಯೋಚನೆಯೂ
ನಕ್ಕು ಮರೆಯಾಗುವವರೇ ಎಲ್ಲರೂ
ಇನಿಯನೇ ಬಾ..ಬಾ
ಜೀವದ ಉಸಿರೇ ಬಾ..ಬಾ
ಕಾಯುತ್ತಾ ನಿನಗಾಗಿ ಕುಳಿತಿಹೆ ನಲ್ಲಾ
-ಪ್ರೀತಿಯ ಸಹಿ-
ಯಾರಿಗೆ ಕಾಯುತಿರುವೆ?
ಯಾಕಾಗಿ ಕಾಯುತಿರುವೆ?
ಮೋಹನ ಮನಕರಗಿ ಬರುವನೆಂದು
ಎಷ್ಟು ಸರಿ? ಕಾಯುತಾ ದಾರಿ ಕಾಯುವುದು
ಮೋಹ ತೊಳೆಯಲೆಂದೇ ಬಂದವ
ವ್ಯಾಮೋಹ ತೊಳೆದವ
ಪ್ರೀತಿ ಶಾಶ್ವತವೆಂದು ಹೋದವ
ಕಾಯುವ ಈ ಪರಿ ಎಷ್ಟು ಚಂದವೋ?
ಪ್ರೀತಿ-ಪ್ರಣಯವಾಯಿತು
ಜೋಡಿ ಜೀವವಾಗಿ ತೇಲಿದ್ದಾಯಿತು
ಮನಸಿನಲ್ಲಿ ಮೋಹ ಮುಗಿದ ಮೇಲೆ
ಹೃದಯದಲ್ಲಿ ಭಾರದ ವಿರಹ ಮೂಡಿದೆ
ನೀನಿದ್ದಾಗ ಕತ್ತಲಲ್ಲೂ ಬೆಳಕೆ!
ನೀ ಹೋದ ಮೇಲೆ ಎಲ್ಲೆಲ್ಲೂ ಕತ್ತಲೇ
ನೀನಿಲ್ಲದ ಸಮಯ ಮೆಲ್ಲಮೆಲ್ಲನೆ ತೆವಳಿದೆ
ನಿನ್ನ ಕಾಣದ ಹೃದಯ ಚೇತನವಿಲ್ಲದೆ ನರಳಿದೆ
ಹೋದ ಗೆಳೆಯ ಬಾ
ನಿನಗಾಗಿ ಕಾಯುತಿಹೆ ಬಾ..ಬಾ..
ನೀನಿರದ ಈ ಜೀವನ ಕಹಿ
ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ ನಿನ್ನ ಪ್ರೀತಿಯ ಸಹಿ
-ಮೌನ ಪಾಠ-
ಕಾಡೋ ಕನಸು
ಹುಡುಕೋ ಮನಸು
ದಣಿಯದೆ ಮುಂದೆ ಸಾಗಿದೆ
ನಾಳೆ ಬರಲಿ
ಹೊಸತು ತರಲಿ
ಮನಸು ಹೊಸತನೆ ಬಯಸಿದೆ
ನೋಡೋ ಕಣ್ಣು
ಸೌಂದರ್ಯದ ಗಣಿ ಹೆಣ್ಣು
ವಿರಹ ನೂರು ಮಾಡಿದೆ
ಕಾಯೋ ಕಾಲ
ತಾಳ್ಮೆಯ ಬಲ
ನಾಳೆ ನಮ್ಮದಾಗುವುದೆಂದು ಹೇಳಿದೆ
ಇಂದು ನೋವು
ನಾಳೆ ನಲಿವು
ಜೀವನ ಮೌನವಾಗಿ ಪಾಠ ಕಲಿಸಿದೆ
-ಗರಗಸ-
ಗರಗಸ.. .. .. .. ಗರಗಸ
ಇವನು ನಮ್ಮ ಗರಗಸ
ಸನಿದಪ.. ಮಗರಿಸ
ಇವನು ನಮ್ಮ ಗರಗಸ
ಇವನು ನಮ್ಮ ಗರಗಸ
ಇವನ ಕೈಗೆ ನಾವು ಸಿಕ್ಕರೆ ಮಗರಿಸ
ಮಗರಿಸ ಗರಗಸ
ಗರಗಸ ಮಗರಿಸ
ಬಾಯಿಬಿಟ್ಟರೆ ನಮಗೆಲ್ಲಾ ಭಯ ಭಯ
ಎದುರುಗಿದ್ದವ ಹರೋಹರ
ಮೆಧುಳಿಗೇ ಕೈ ಹಾಕುವ
ಮಾತಿನಲ್ಲೇ ಭೋರುಗೊಳಿಸುವ
ಗರಗಸ.. .. ಗರಗಸ
ಇವನು ನಮ್ಮ ಗರಗಸ
ಸನಿದಪ ಮಗರಿಸ
ನಿನ್ನ ಜುಟ್ಟು ಎಗರಿಸ
-ಅವನ ಹೆಸರು-
ನಿದ್ರಾದೇವತೆ ಅವನ ಬಿಟ್ಟು ಹೋಗಳು
ಮುಗ್ದತೆಯೆ ಮೈ ತುಂಬಾ ಹೊಕ್ಕಿದೆ
ಕಣ್ಣು ಬಿಟ್ಟರೆ ನಗುವೇ ಆವರಿಸುತ್ತೆ
ಹಸಿವಾದರೇ ಅಳುವಿನ ಗಣಗಳು ರುದ್ರನರ್ತನ
ಹೊಟ್ಟೆ ತುಂಬಿದರೆ ಯಾವ ಚಿಂತೆಯೂ ಇಲ್ಲ
ಮಾತಿಲ್ಲ ಆದರೇ ಮೌನದಲೇ ಶಬ್ದ ತರಂಗಗಳು
ಸಂಗೀತದ ಅಲೆಗಳು ತೇಲುತ್ತಿವೆ
ಸಾವಿರ ಕಣ್ಣುಗಳ ಗಮನ ಅವನ ಮೇಲೆ
ನಿದ್ದೆಯಿಂದ ಏಳಬಾರದೇ
ಎಲ್ಲ ಮನಗಳ ಆಶಯ
ಅಳುವು ಶುರುವಾದರೆ ಎಲ್ಲರೂ ಮಾಯ
ನಗುವು ತೇಲಿ ಬಂದರೆ ಎಲ್ಲರೂ ಹಾರಿಬರುವರು
ಎಲ್ಲರ ಬಾಯಲ್ಲೂ ಅವನೇ
ಎಲ್ಲರಲ್ಲೂ ಯೋಚನೆ ಅವನ ಹೆಸರೇನೆಂದು?
ಅ-ಅಸಾಮಾನ್ಯ
ನೀ-ನಿಧಾನವೇ ಪ್ರಧಾನವೆನ್ನುವವ
ಶ್-ಶಕ್ತ- ಎಲ್ಲವನ್ನೂ ಸಾಧಿಸುವ ಶಕ್ತಿಯುಳ್ಳವ
ಮುದ್ದು ಮುಖದವ
ನಮ್ಮ ಸುಖವನ್ನು ತನ್ನ ನಗುವಿನಿಂದಲೇ ತರುವವ
ನಮ್ಮ ನಿಮ್ಮವ ಅನೀಶ್.
ನೆಮ್ಮದಿ ಕಾಣಿಸದ ಹಣ
ಎಂದಾದರೂ ಪ್ರಶ್ನಿಸಿಕೊಂಡಿದ್ದೀರ?
ಕೈಗೆಟುಕುವಷ್ಟೇ ನಿಮಗೆ ದಕ್ಕುವುದು
ಅತಿಯಾದದ್ದು ಕಸವೇ ಅಲ್ಲವೇ?
ನೂರು-ಸಾವಿರ ಜನರ ದಂಡು ಹೋಗುತಿದೆ
ಹಣದ ದಾರಿಯಲ್ಲಿ ಹಣದ ಹಿಂದೆ
ಹಣವೆಂಬ ಮೋಹಿನಿ ವೈಯ್ಯಾರದಿ ಬಳುಕುತ್ತಾ ಸಾಗಿದೆ
ಎಲ್ಲರನ್ನೂ ಮರುಳುಗೊಳಿಸಿ
ಮಾತಿಲ್ಲ, ಕತೆಯಿಲ್ಲ ಹಣವಿದ್ದರೆ ಹತ್ತಿರ
ನಿಮ್ಮ ನೀವು ಮರೆತು ದುಡಿದು ಕೂಡಿಡುವಿರಿ ಹಣ
ಚಂಚಲೆ ಹಣ ಇವತ್ತು ನಿಮ್ಮ ಹತ್ತಿರ ನಾಳೆ ಯಾರೋ!
ಗೊತ್ತಿದೆ ಜನಕ್ಕೆ ಹಣ ಇರುವುದಿಲ್ಲ ಹತ್ತಿರ ಆದರೂ ಬೇಕು
ಕೈಕೊಟ್ಟ ಪ್ರೇಯಸಿಯಂತೆ ಹಣ
ಕೈ ಜಾರಿ ಹೋದಾಗ ಆಗುವುದು ಚಿಂತೆ
ಮತ್ತೆ ಹುಡುಕಾಟ ಹಣವ ಪಡೆಯಲು
ಈ ಲೋಕಕ್ಕೆ ಹಣದ ಹುಚ್ಚು ಹಿಡಿದಿದೆ
ಏನೂ ಬೇಡ ಹಣವನ್ನು ಪಡೆದರಷ್ಟೇ ಸಾಕು
ಹಣ ಹಣವೆಂದು ಬಡಿದಾಡಿ ಸಾಯುವರು ಏಕೋ?
ಹಣದ ವ್ಯಾಮೋಹ ಯಾರನೂ ಬಿಟ್ಟಿಲ್ಲ
ಹಣ ಹಣವೆಂದು ಹೆಣವಾಗುವರೆಗೂ ಬಿಡರು
|| ಶಾಲೆ||
ಕೈ ಮುಗಿದು ಒಳಗೆ
ಬಾ ಜ್ಜಾನ ಭಿಕ್ಷುವೇ
ಅರಿವ ಬೆಳಕಿನ ದೇವಾಲಯಕೆ
ತಾಯ ಪ್ರೀತಿಯ ಮಮತೆಯ
ತೋರುವ ಗುರುಚರಣಕ್ಕೆ
ಮೊಳಕೆಯೊಡೆದು ದಿಗಂತಕೆ
ಬೆಳೆವ ಉತ್ಸಾಹದಿ ನೀ ನಡೆದು ಬಾ.......
ಬನ್ನಿ ಭಾವೀ ಭಾರತದ ಪ್ರಜೆಗಳೇ
ಭಾರತದ ಕೀರ್ತಿ ಪತಾಕೆಯ ಬೆಳೆಸೋಣ
ವಿಶ್ವಶಾಂತಿಯ ಹರಿಕಾರರಾಗೋಣ
ವಿಶ್ವಪಥ ಮನುಜ ಮತವ ಪಠಿಸೋಣ
ಭಾರತೀಯ
ಸಮುದ್ರದ ಅಲೆಗಳು ಬಂದಪ್ಪಳಿಸುತ್ತಿವೆ
ತೀರದ ಬಂಡೆಗಲ್ಲುಗಳಿಗೆ
ಸಪ್ಪಳದ ಝೇಂಕಾರದಲಿ ಸಾರಿ ಸಾರಿ
ಸಾರುತಿಹದು ನಾವು ಭಾರತೀಯರೆಂದು
ಗುಡಿ, ಮಸೀದಿ, ಚರ್ಚುಗಳ ಗಂಟೆಗಳು
ಮೊಳಗುತ್ತಿವೆ ಬಿನ್ನ ಸಂಸ್ಕೃತಿಯ
ಸಾರಿ ಸಾರಿ ಘಂಟಾಘೋಷವಾಗಿ ಮೊಳಗುತಿದೆ
ನಾವು ಭಾರತೀಯರೆಂದು
ಹೂದೋಟದ ದುಂಭಿಗಳು ಝೇಂಕರಿಸುತ್ತಿವೆ
ಪುಷ್ಪಗಳು ಮಧುರ ಸೌಗಂಧವ ಪಸರಿಸುತ್ತಿವೆ
ಪ್ರೀತಿ-ವಾತ್ಸಲ್ಯವ ಸೂಸುತಿಹುದು
ನಾವು ಭಾರತೀಯರೆಂದು
ಎಂದೂ ಅಳಿಯದಂತ ಭಾವವಿದು
ಎಂದೂ ಮರೆಯದಂತ ಮಾಟವಿದು
ಅಲೆ ಅಲೆಗಳಲಿ ಮನ ಮನಗಳಲಿ ತಂಪಾದ ಗಾಳಿಯ
ಕಂಪಿನಲಿ ಪಸರಿಸುತಿದೆ ನಾವು ಭಾರತೀಯರೆಂದು
ಅಮರ ಪೇಮ
ಪ್ರಿಯತಮೆಯು ಅಲೆಯುತಿಹಳು
ಬಾನಿನಂಗಳದಲ್ಲಿ ಚಂದ್ರ
ತಾರೆಯರು ಮಿನುಗುತಿಹರು
ಏಕಾಂಗಿಯಾಗಿ ಬೃಂದಾವನದಲಿ
ನರಹರಿಯ ಸಂಗ ಬಯಸಿ ಬಂದಳು ರಾಧೆ
ಹುಡುಕುತಲಿ ನಡೆಯ
ಅವಳ ಕಾಲಿನ ಸ್ಪರ್ಶಕ್ಕೆ
ಮನಸೋತ ತರಗೆಲೆಗಳು
ಮನ್ಮಥಾನಂದವಾದಂತೆ ಜಾಗೃತವಾದವು
ಬಳುಕುತಲಿ ನಡೆಯೆ
ಗಿಡ ಮರಗಳು ಅವಳ ಸೌಂದರ್ಯಕ್ಕೆ
ಮಾರುಹೋಗಿ ಅವಳತ್ತ ಬಾಗಿ
ಚುಂಬನಕ್ಕೆ ಕರೆಯುತಿರುವಂತೆ ತೋರಿತು
ಹೂವಿನ ಮರಗಳು ಅವಳ
ಮೇಲೆ ಪುಷ್ಪಗಳನ್ನೆರಚಿದವು
ತಂಗಾಳಿಯ ಬೀಸಿ ಬೀಸಿ
ಅವಳ ಗಮನ ಸೆಳೆಯಲೆತ್ನಿಸಿದವು
ಅದಾವುದರ ಅರಿವೂ ಇಲ್ಲದೆ
ನರಹರಿಯ ಹುಡುಕುತಿಹಳು ರಾಧೆ
ನಡೆ ನಡೆದು ದಣಿವಾಗಿ
ಯಮುನಾ ತೀರದಲಿ ನೀರನ್ನು
ಕುಡಿಯುತಿರೆ ಬಾನಿನಲ್ಲಿಯ ಚಂದ್ರ
ಧರೆಗಿಳೆದು ಬಂದು ರಾಧೆಯ ಚುಂಬಿಸುವಂತೆ ಭಾಸವಾಯಿತು
ದೂರದಲಿ ಕಾಣಿಸಿತು ನರಹರಿಯ
ಬರುವು ನಲಿದಿತು ಮನ
ತನು ಬಳಲಿದ್ದರೂ ಮನವು ನರಹರಿಯ
ಬಯಸುತ್ತಿತ್ತು ಬೃಂದಾವನದಲೀ
ನೆನೆದೊಡೆ ಬಂದ ನರಹರಿಯ
ಬಾಹುಬಂಧನದಲಿ ಸಿಲುಕಿದಳು ರಾಧೆ
ಇವರ ಮಿಲನದಿಂದ
ಪುಲಕಿತಗೊಂಡ ವರುಣನು
ಕಾರ್ಮೋಡಗಳಿಂದ ಚಂದ್ರಮುಖಿಯ
ಬಳಸಲೋಡಿ ಬಂದನು
ಮಿಲನದ ಸಂತುಷ್ಟತೆಯ ಅನುಭವಿಸಿ
ಗುಡುಗು ಮಿಂಚುಗಳನ್ನೊಳಗೊಂಡು
ಧಾರಾಳವಾಗಿ ಮಳೆ ಸುರಿಯಿತು
ಇದಾವುದರ ಪರಿವೆಯೂ ಇಲ್ಲದೆ
ಇಬ್ಬರೂ ಒಲವಿನ ಸಾಗರದಲಿ
ಮದ್ಮೋನ್ಮತ್ತರಾದರು
ಇವರೀರ್ವರ ಮಿಲನವ ಕಂಡು
ಬಾಗಿದ್ದ ಮರಗಿಡಗಳು
ತರುಲತೆಗಳು ದಿಕ್ಕನು ಬದಲಿಸಿದವು
ನಾಚಿಕೆಯಿಂದಲಿ
ಹೂ ಗಿಡಗಳು ಪ್ರೇಮಿಗಳ
ಮೇಲೆ ಪುಷ್ಪಗಳನ್ನು ಸುರಿಸಿ
ವಾಸ್ತವೀಕತೆಯಿಂದ
ಬಹುದೂರ ಕರೆದೊಯ್ದವು
ಆರ್ಯ-ಚಂದ್ರಮುಖಿ
ತಿಳಿನೀಲಿ ಆಕಾಶದಲ್ಲಿ
ಹಾಲು ಚೆಲ್ಲಿದ ಹೊಂಬೆಳಕಲ್ಲಿ
ತಾರೆಯರ ಒಡನಾಟದಲ್ಲಿ
ಚಂದ್ರಮುಖಿ ಪಯಣಿಸುತಿಹಳು
ಕರ್ತವ್ಯದ ಕರೆಗೆ ಓಗೊಟ್ಟು
ಸಪ್ತ ಹಯವೇರಿ
ಬಾನಿನಂಗಳಕ್ಕೆ ಲಗ್ಗೆ ಇಟ್ಟನು
ಆರ್ಯ ಕುಮಾರ
ವಜ್ರ ಕಿರೀಟಗಳಿಂದ ಭೂಷಿತನಾದ
ಆರ್ಯ ಕುಮಾರನ ಸೌಂದರ್ಯವ
ಕಂಡು ನಾಚಿ ನೀರಾದಳು ಚಂದ್ರಮುಖಿ
ಚಂದ್ರಮುಖಿಯಲಿ ಪೇಮಾಂಕುರಿಸೆ
ನಾಲಗೆಗೆ ಮಾತುಗಳು ಎಟುಕದೆ
ನಾಚಿಕೆಯಿಂದ ಕೆನ್ನೆ ಕೆಂಪೇರಿದವು
ತಿಳಿದಾ ಗಗನವು ತಾನೇ ಆರ್ಯ ಕುಮಾರನಿಗೆ
ಮನ ಸೋತಂತೆ ನಾಚಿ
ಬಾನೆಲ್ಲಾ ಕೆಂಪಾಗಿಸಿದನು
ರೆಕ್ಕೆ ಬಿಚ್ಚಿ ಹಾರು ಹಕ್ಕಿಯೇ!
ನಾನಿರುವುದೊಂದು ದೊಡ್ಡಮರ
ನಮ್ಮ ರೆಂಬೆಯಲಿ ನೂರಾರು
ಪೊಟರೆಗಳು ಹತ್ತು ಹಲವು
ಹಕ್ಕಿಗಳ ನೆಮ್ಮದಿಯ ತಾಣ
ಭಾಸ್ಕರನ ಮೊದಲ್ಕಿರಣ ಮೂಡಿ
ಹಕ್ಕಿಗಳೆಲ್ಲಾ ಗೂಡುಗಳ ತೊರೆದು
ಹೋರಡುವುದು ಲೋಕ ಯಾತ್ರೆಗೆ
ತೆರಳುವುದು ಹೊಟ್ಟೆಗೆ, ಬದುಕಿಗೆ
ನಾನು ಇಲ್ಲೇ ಪೊಟರೆಯಲಿ
ಸಂಗಾತಿಗಳು ಬರುವವರೆಗೆ
ಕಾಯಬೇಕು ಹಾರಲಾರದೆ
ತೊಳಲಾಡಬೇಕು ಬದುಕಲೋಸುಗ
ಯಾವುದೋ ಕೆಟ್ಟ ಘಟನೆಗಳ
ಕಹಿನೆನಪುಗಳು ರೆಕ್ಕೆಗಳ
ಬಲವನ್ನೇ ಕಳೆದು ಹೆಳವನನ್ನಾಗಿಸಿದೆ
ನೆನಪುಗಳು ಮತ್ತೇ ಮತ್ತೇ ಕೊಲ್ಲುತ್ತಿವೆ
ನನ್ನದೇ ರೆಂಬೆಯಲಿ
ಪುಟ್ಟದೊಂದು ಪೊಟರೆಯಲಿ
ಬೆಳೆಯುತಿಹುದು ಪುಟ್ಟ ಹಕ್ಕಿಯೊಂದು
ಪುಟ ಪುಟನೆ ಹಾರುವುದು ನವ ಉತ್ಸಾಹದಿ
ಅದನೊಡಿದೊಡೆ ಬಲು ಸಂತಸವೆನಗೆ
ಹಾರು ಹಾರು ಮೆಲ್ಲಗೆ ಎತ್ತರೆತ್ತರಕೆ
ಜಾಗ್ರತೆಯಿಂದಲಿ ಎಚ್ಚರಿಯಿಂದಲಿ
ಮನಃಪೂರ್ವಕವಾಗಿ ಹರಸುವೆನು
ಅ ಪುಟ್ಟಹಕ್ಕಿ ನನ್ನನೊಡಿದೊಡೆ
ನಗುವುದು, ಪಟಪಟನೆ ಮಾತಾಡುವುದು
ನಗುತ ನಲಿಯುತ ಹಾರುವುದು
ದಿನವಿಡಿಯ ಅನುಭವಗಳ ಬಣ್ಣಿಸುವುದು
ಪುಟ್ಟ ಹಕ್ಕಿಯೇ ಹಾರು
ಎತ್ತರೆತ್ತರಕೆ ರೆಕ್ಕೆ ಬಲಿತಿವೆ
ಎಚ್ಚರಿಕೆ ಪುಟ್ಟಾ ಬೇರೆ ಕೆಟ್ಟ
ಹಕ್ಕಿಗಳು ತೊಂದರೆ ಕೊಟ್ಟಾವು
ಜೋಡಿಹಕ್ಕಿ ದೊರಕಿತೆಂದು
ಸಾಕಿಸಲಹಿದ ತಂದೆ-ತಾಯಿಗಳ
ಪ್ರೀತಿ ಅಕ್ಕರೆಯ ಅಣ್ಣ-ತಮ್ಮಂದಿರ
ಮರೆತು ದೂರ ಹೋಗದಿರು
ಪುಟ್ಟಾ ನೀ ಎತ್ತರೆತ್ತರಕೆ ಹಾರುತಿರೆ
ನನ್ನ ರೆಕ್ಕೆಗಳಿಗೂ ಶಕ್ತಿ ತುಂಬುವುದು
ನಿನ್ನೆತ್ತರಕೆ ನನ್ನ ಸ್ವಾಭಿಮಾನವೂ ಬೆಳೆವುದು
ಕಹೀ ನೆನಪುಗಳ ಮರೆತು ನಾ ಹಾರುವೆ
ಇಂದು ನಾನೂ ಹಾರುತಿರುವೆ
ನೀನೇ ಸ್ಪೂರ್ತಿಯಾದೆ
ಕಹೀ ನೆನಪುಗಳೆಲ್ಲಾ ಮರೆತಿದೆ
ನಿನ್ನದೇ ಸವಿನೆನಪುಗಳು
ಅಮ್ಮಾ ನೀನಿದಿದ್ದರೆ........
ಅಮ್ಮ ನನ್ನನ್ನು ಎಲ್ಲಿಂದಲೋ
ತಂದು ಮನೆಯ ಅಂಗಳದಲಿ
ನೆಟ್ಟು ಹೊಸ ಜೀವ ನೀಡಿದಳು||
ಪ್ರೀತಿ ವಾತ್ಸಲ್ಯದ ನೀರೆರೆದು
ತನ್ನ ಅಮೃತಹಸ್ತದಿಂದ
ಮೈದಡವಿ ಎತ್ತರೆತ್ತರಕೆ
ಬೆಳೆ ಮಗು ಎಂದು ಧೈರ್ಯ ತುಂಬಿದಳು||
ನಾ ಮೊದಲು ಹೂ ಬಿಟ್ಟಾಗ
ಅಮ್ಮ ಪಟ್ಟ ಸಂತೋಷ ಅಷ್ಟಿಷ್ಟಲ್ಲ
ನೆರೆಹೊರೆಯವರಿಗೆಲ್ಲಾ ನನ್ನ
ಸೌಂದರ್ಯವ ಹಾಡಿ ಹೊಗಳಿದಳು||
ನಾ ಬಿಟ್ಟ ಹಣ್ಣುಗಳನ್ನು
ಎಲ್ಲರಿಗೂ ಕೊಟ್ಟು ಆನಂದಿಸಿದಳು
ಪಕ್ಕದ ಮನೆಯ-ದಾರಿ ಹೋಕರು
ಕಲ್ಲೆಸೆದಾಗ ನೋವು ಅನುಭವಿಸಿದಳು||
ಅಮ್ಮ ಈಗಿಲ್ಲ
ನಾನು ತುಂಬಾ ಎತ್ತರಕ್ಕೆ ಬೆಳೆದಿದ್ದೇನೆ
ಪರಕೀಯನಾಗಿ ಅನಾಥನಾಗಿದ್ದೇನೆ
ಅಮ್ಮನ ಪ್ರೀತಿ-ವಾತ್ಸಲ್ಯವಿಲ್ಲದೆ ಸೊರಗಿದ್ದೇನೆ||
ಅಮ್ಮನ ಮನೆ ಮುರಿದಿದೆ
ಸರ್ಕಾರದವರ ಪಾಲಾಗಿರುವೆ
ಮನೆಯ ಜಾಗದಲ್ಲಿ ವಾಹನ ನಿಲ್ಡಾಣ
ನಿರ್ಮಾಣವಾಗುವುದೆಂದು ಸುದ್ದಿ||
ಸುದ್ದಿ ನಿಜವಾಯಿತು
ಅಮ್ಮನ ಮನೆ ಮಣ್ಣು ಸೇರಿತು
ಹತ್ತು ಸಾವಿರಕೆ ನಾನು ಮಾರಟವಾದೆ
ಯಾರ ಮನೆಯ ಮೇಜು, ಬಾಗಿಲು ಕುರ್ಚಿ-
ಯಾಗುವೆನೋ ನಾನು?......||
ಅಮ್ಮಾ.........ಅಮ್ಮಾ........
ಗರಗಸದಿಂದ ಕೊಯ್ದರು
ಮಚ್ಚಿನಿಂದ ರೆಂಬೆಗಳ ಕತ್ತರಿಸಿದರು
ನನ್ನ ನೋವನ್ನು ಕಂಡು
ಜನರು ಕೇಕೆ ಹಾಕುತ್ತಿರುವರು||
ಅಮ್ಮಾ ನೀನಿದ್ದರೆ ನನಗೆ
ಈ ರೀತಿ ಮಾರಣಾಂತಿಕ ನೋವಾಗುತ್ತಿತ್ತೆ...
ಅಮ್ಮಾ ನೀನಿದ್ದರೆ....
ಅಮ್ಮಾ ನೀನಿದ್ದರೆ.....||
ನೆನಪು ಕಾಡಲಿ ಸದಾ
ನೀ ಎಲ್ಲೇ ಇರು
ನಿನ್ನ ನೆನಪು ನನ್ನ ಕಾಡಲಿ ಸದಾ
ಹಕ್ಕಿಗೆ ಬಾನಿದ್ದಂತೆ
ಭೂಮಿಗೆ ಸೂರ್ಯನಿದ್ದಂತೆ
ನಿನ್ನ ಮಧುರ ನೆನಪು ನನಗೆ
ಈ ಬಾಂಧವ್ಯ ಪವಿತ್ರ
ನಮ್ಮಲುಳಿಯಲಿ ಸರ್ವದಾ
ನಿನ್ನ ನೆನಪು ನನ್ನ ಕಾಡಲಿ ಸದಾ
ನಿನ್ನ ಹೆಸರೇ ಹೇಳುವುದು
ನೀನೆಷ್ಟು ಮಧುರವೆಂದು
ನಿನ್ನ ತುಟಿಯಂಚಿನ ನಗುವು
ನನಗೇ ಎಂದೆಂದೂ.........
ನಿನ್ನ ನೆನಪು ನನ್ನ ಕಾಡಲಿ ಸದಾ
ಚಂದ್ರಮ
ಮೋಡಾದ ಮುಸುಕಿಂದ
ನಗುವಾ ಮೊಗದಿಂದ
ನಗುತಾ ಬೆಳಾಕ ಚೆಲ್ಲಿ
ಮರೆಯಾದೆ ಎಲ್ಲಿ
ಸ್ನೇಹದಾ ಕಂಪು ಬೀರಿ
ಮಧುರತೆಯ ವಾತ್ಸಲ್ಯವ ತೋರಿ
ಬಾನಿನಂಗಳಕೆ ಹಾರಿ
ಮರೆಯಾದೆ ಎಲ್ಲಿ
ನದಿಯಾ ಕಲರವದಲ್ಲಿ
ನೀರಿನಾ ಅಲೆ ಅಲೆಯಲ್ಲಿ
ತಂಪನ್ನು ಚೆಲ್ಲಿ
ಮರೆಯಾದೆ ಎಲ್ಲಿ
ಪ್ರೀತಿಯಾ ಸೆಲೆಯಿಟ್ಟು
ನೆನಪಿನಾ ಗರಿಬಿಟ್ಟು
ಸ್ಪೂರ್ತಿಯಾ ಚಿಲುಮೆಯಾಗಿ
ನೀ ಮರೆಯಾದೆ ಎಲ್ಲಿ
ಅತಿಥಿ
ನೀನು ಬಂದೆ
ಹರುಷ ತಂದೆ
ಚಲ್ವ ನಗೆಯ ಸೂಸಿ
ತಂಗಿ ಎಂದೆ
ಮನದಲಿ ನಿಂದೆ
ಒಲವ ವರ್ಷವ ಬೀಸಿ
ಗುರಿಯ ಸಾಧಿಸಿ
ಹೊರಟು ನಿಂತೆ
ಮಧುರ ನೆನಪ ಹಾಸಿ
ಬಾಳು ಬಾಳು
ನೂರು ವರುಷ
ಸಂತೃಪ್ತಿಯ ಬದುಕ ಬಾಳಿ
ಗೆಳೆತನ
ನಾವು ಜೊತೆ ಜೊತೆಯಾಗಿ
ಹೆಜ್ಜೆ ಹಾಕಿ ನಡೆಯೆ
ಅದುವೆ ಹೊಸ ಜೀವನದ ಆರಂಭ
ನಮ್ಮ ಕನಸು-ಮನಸುಗಳು
ಒಂದಾಗಿ ಕಾಯಕವ ಮಾಡೆ
ಅದುವೇ ದಾರಿ ಅಭಿವೃದ್ಧಿಗೆ
ಕಾಲ ಜ್ಜಾನದ ನಡುವೆ
ಬೆರೆತು ಬೆಳೆಯುವ
ಅದುವೇ ಅಮಿತ ಗೆಲುವು
ಪ್ರೀತಿ-ವಿಶ್ವಾಸಗಳ
ಕಷ್ಟ-ಸುಖಗಳ
ನಡುವೇ ಒಂದಾಗಿ ನಡೆಯೆ
ಅದುವೇ ಗೆಳೆತನ.
ಪ್ರೀತಿ-ಸಂಪತ್ತು
ಹೃದಯದ ಅಣು ಅಣುವಿನಲಿ
ಪ್ರೀತಿ ವಾತ್ಸಲ್ಯಗಳಿರಲಿ
ಹೃದಯ ವೈಶಾಲತೆಯು ಸದಾ ಹಸಿರಾಗಿರಲಿ
ಪ್ರೀತಿ ವಿಶ್ವಾಸ ವಾತ್ಸಲ್ಯ
ಮಾನವೀಯತೆಗಳೇ ಜೀವನದ
ಅಮೂಲ್ಯ ಸಂಪತ್ತುಗಳಾಗಲಿ.
ಪರಿಸ್ಥಿತಿ
ಬರೆಯುವ ಆಸೆ ಏನನ್ನೋ
ಹೇಳುವ ಆಸೆ ಏನನ್ನೋ
ಹೃದಯವು ಕಂಪಿಸುತಿದೆ
ಮನದಾಸೆಯ ಬಲ್ಲೆಯೇನು?
ಹೇಳಬಾದೇಕೆ? ಬರೆಯಬಾರದೇಕೆ?
ಬರೆಯಲಾರದ ನೀತಿಯೇನು?
ಈ ನಾಚಿಕೆ ತರವಲ್ಲ
ನಾಲಿಗೆಗೆ ಪದಗಳು ಎಟುಕದೆ
ಮೂಕನಾಗಿರುವೆ ಪರಿಸ್ಥಿತಿಯ
ಕೈ ಗೊಂಬೆಯಾಗಿ ಮಲುಗುತಿಹೆ
ನನ್ನ ಕೇಳುವರಾರು? ತಣಿಸುವರಾರು?
ವಸಂತ
ವಸಂತದಲಿ ಚಿಗುರುವಾಸೆ
ನಿನಗೇಕೆ ಮಾವಿನ ಮರವೇ?
ಋತು ಆಗಮನದಿಂದ ನೀನೇಕೆ
ಹಾಡಲು ಶುರುಮಾಡಿರುವೆ\\
ಎಲೈ ಕೋಗಿಲೆಯೆ?
ನಮಗಿರುವ ಚಿಂತೆ ನಿಮಗಿಲ್ಲವೆಂದು
ನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?
ನಾವು ದುಃಖಿಗಳೆನೋ ನಿಜ
ಎಲೈ ಕೋಗಿಲೆಯೇ ನಿನ್ನ
ಹಾಡಿನಿಂದ ನಮ್ಮನ್ನು ತಣಿಸಲಾರೆಯಾ?
ನೆನೆಪುಗಳ ಗಾಯನ
ಇದುವೆ ನನ್ನ ಜೀವನ!
ಅದೇ ಮನೆ! ಅದೇ ಬಂಡೆ!
ನೀನಿರದ ಭಾವನ!
ಬರೀ ನೆನಪು! ಸವಿನೆನಪುಗಳು!
ಬಾಡದ ನಿನ್ನ ಗಾಯನ!.
ಯಾರೀಕೆ?
ಯಾರೀಕೆ?
ಹಸಿರು ಸೀರೆಯುಟ್ಟು
ಧರೆಗಿಳಿದ ಈ ನೀರೆ ಯಾರು?
ಅಂಬರದಿಂದಿಳಿದು ಬಂದ
ಈ ಅಂಬೆ ಯಾರು?
ಬಳುಕುತ್ತಾ ನಡೆದು ಬರುವಾಗ
ಕಾಲಿನ ಗೆಜ್ಜೆಯ ಸದ್ದಿಗೆ
ಇನಿಯನು ಓಡಿ ಬರುವಂತೆ
ಮೋಡಗಳು ಓಡಿ ಬರುತ್ತಿವೆ
ಆಕೆಯ ಕಂಡ ರವಿಯ
ಮುಖ ಕೆಂಪೇರುತಿದೆ
ನೋಡುಗರು ಅಪಹಾಸ್ಯ ಮಾಡುವರೆಂದು
ನೇಪಥ್ಯಕೆ ಸರಿಯುತಿಹನು
ಕಣ್ಣು ಮಿಟಿಕಿಸುವುದರೊಳಗೆ
ನೀರೇ ಕಣ್ಮರೆಯಾಗುತ್ತಿದ್ದಂತೆಯೇ
ಮುಗಿಲಿನಿಂದ ಮುತ್ತಿನ
ಮಳೆಯೊಡನೆ ತಂಗಾಳಿ ತಂದಳು
ಯಾರೀಕೆ? ಯಾರೀಕೆ?
ಮುತ್ತಿನ ಮಳೆಯ ಒಡತಿ
ಅಂಬರದ ಸುತೆ ಈ ನೀರೆ ಯಾರು
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...