Sunday, July 27, 2025

ಬುಗುಡಿ-ಹೂವು

 ಅರೇ, ನೋಡಲ್ಲಿ, ಅಲ್ಲೊಂದು ಹೂವು.

ಪಂಚಭೂತಗಳೇ ದಳಗಳಾಗಿ,

ಸೂರ್ಯರಶ್ಮಿಯೇ ಚೈತನ್ಯವಾಗಿ,

ಸ್ವರ್ಗದಿಂದಲೇ ಜಾರಿ ಭೂಮಿಗೆ ಇಳಿದ,

ಭೂತಾಯಿಯ ನಗುವಿನ ಹೊನಲಾಗಿ

ಹರಿದು ಹೂವಾಗಿ ನೆಲೆ ನಿಂತಿದೆ, ನೀ "ಭದ್ರವಲ್ಲಿ"

ಪರಿಮಳವ ಸೂಸಿ  ಮನವ ಸೆಳೆದಿದೆ,

ಬಂಗಾರದ ಬಣ್ಣವ ಮೈಯೆಲ್ಲಾ ಹೊತ್ತು,

ಭೂತಾಯಿಯ ಸೇವೆಗೆ ನಿಂತಿದೆ,

ವಲ್ಲರಿ ಎನ್ನಲೋ!, ದೇವತೆ ಎನ್ನಲೋ!

ಬೆರಗಾದೆ ಬುಗುಡಿ, ನಿನ್ನಯ ಬೆಡಗ ಕಂಡು||

ಮಳೆಯೇ! ಓ ಮಳೆಯೇ!

ಮಳೆಯೇ! ಮಳೆಯೇ!,

ಮರೆತ ನೂರು ನೆನಪೇಕೆ ತರುತಿಹೆ?

ತುಂತುರು ನೀರ ಹನಿಯ ರೀತಿ

ತಂಪನ್ನೆರೆದು ಸವಿ ನೆನಪೇಕೆ ತರುತಿಹೆ?।।

 

ಚಿಟ-ಪಟ,ಚಿಟ-ಪಟ, ಸದ್ದಿನ ಸಪ್ಪಳ,

ಕೇಳಿದ ನೆನಪೆಲ್ಲೋ ಮತ್ತೇ ಮರುಕಳಿಸಿದೆ|

ಎಲ್ಲೋ ಬಿದ್ದ ಮಳೆಯ ವಾಸನೆ,

ಹೊತ್ತು ತಂದಿದೆ ಮಧುರ ಸವಿನೆನಪು||

 

ಹರಿವ ನೀರು ತನ್ನ ಗುರಿಯ ಹಾದಿ ಹಿಡಿದಿದೆ,

ಮನದೊಳು ಹರಿವ ಚೈತನ್ಯ ಗಂಗೆ ದಾರಿ ಮರೆತಿದೆ|

ಮರೆತುಹೋದ ನೆನಪೊಂದು ಹಾರಿ ಬಂದಿದೆ,

ಕಳೆದುಹೋದ ಸವಿ ಗಳಿಗೆಗಳು ಗರಿಗೆದರಿವೆ||

 

ಮಳೆಯೇ! ಬಾ ಮನದೊಳು,

ಮಳೆಯೇ!,  ಸವಿ ನೆನಪುಗಳ ತಾ|

ಮನವ ಹದಗೊಳಿಸಿ, ಸಿದ್ಧವಾಗಿಸಿ,

ಚೈತನ್ಯದ ಬೀಜವ ಬಿತ್ತಲು ಕಾಯುತಿಹೆ ಬಾ||

Saturday, July 26, 2025

ಸೋಲಿನಲ್ಲೂ ಬೆಳಕು

 ಸೋಲಿಸಬಹುದು ಸೋಲನ್ನೇ!,

ಆಹ್ವಾನಿಸು, ಆರಾಧಿಸು ಬರಲಿ ಜೊತೆಗೆ|

ಸೋಲು ಅಭ್ಯಾಸವಾಗಲಿ ಬಿಡು,

ತಿಳಿ ಸೋಲೇ ಗೆಲುವಿನ ಮೆಟ್ಟಿಲು ಬಾಳಿಗೆ||

 

ಸಹಿಸು ಅಸಡ್ಡೆ, ಅವಮಾನಗಳ,

ಸುರಿಸು ಕಣ್ಣೀರು, ಅಳು ಕತ್ತಲಲಿ|

ನಂಬಿಕೆಯನಿಡು ನಿನ್ನ ಪ್ರಯತ್ನದಲ್ಲಿ,

ಹಂಬಲದಿ ಮುನ್ನಡೆ, ನಾಳೆಗಳ ಬಾಳಲಿ||

 

ಕಿವುಡನಾಗು, ಠೀಕೆ ಟಿಪ್ಪಣಿಗಳಿಗೆ,

ಕುರುಡನಾಗು ನೋಡಿ ನಗುವವರಿಗೆ|

ಎಷ್ಟು ದಿನ ನಡೆದಿತ್ತು ಅವರಾಟ,

ನಂಬಿಕೆಯಿಡು ನಿನ್ನ ಹಾದಿ, ಕಲಿತ ಪಾಠ||

 

ಎಲ್ಲರಂತೆ ನೀನಲ್ಲ ಸಾಮಾನ್ಯನಾಗಬೇಡ,

ವಿಭಿನ್ನ ನೀನು, ಅಸಾಮಾನ್ಯ ನೀನು|

ಯೋಚಿಸು, ಪ್ರೀತಿಸು, ಕ್ರಿಯಾಶೀಲನಾಗು,

ಗಟ್ಟಿಯಾಗು, ಬದಲಾಗು, ಪ್ರತಿದಿನ ಉತ್ತಮನಾಗು||

Friday, July 25, 2025

ಅಜ್ಞಾತ ಹಾದಿಯ ಹೆಜ್ಜೆಗಳು

 ಯಾರೂ ನಡೆಯದ ಹಾದಿಯಲ್ಲಿ,

ನಡೆವುದೇ ಒಂದು ರೋಚಕ|

ಜೊತೆಗಾರೂ ಹೆಜ್ಜೆ ಹಾಕುವರಿಲ್ಲ,

ಪ್ರತಿ ಹೆಜ್ಜೆಯಲ್ಲೂ ಕೌತುಕ||

 

ಬುದ್ಧಿಯಿಲ್ಲ ಹುಚ್ಚನೆನ್ನುವರು,

ಠೀಕೆ ಟಿಪ್ಪಣಿಗಳಿಗೆ ಹೆದರದಿರು|

ಹೀಯಾಳಿಸಿ, ಅವಮಾನಿಸುವರು,

ಕಿವಿಗೆ, ಮನಸಿಗೆ ಹಾಕಿಕೊಂಡು ಬೆದರದಿರು||

 

ಕೊರತೆ ಯಾರಲಿಲ್ಲ ಹೇಳು!,

ಇದ್ದದ್ದೇ ಅದು, ಮುಂದೆ ಹೆಜ್ಜೆಯಿಡು।

ಅವಮಾನಿಸುವವರು ಮಾಡುತ್ತಲೇ ಇರಲಿ,

ಪ್ರಯತ್ನದಲ್ಲಿ ಮಾತ್ರ ನಿನ್ನ ನಂಬಿಕೆಯಿಡು||

 

ಯಾರೂ ನಡೆಯದ ಹಾದಿಯಲ್ಲಿ,

ನಡೆವುದೇ ಕತ್ತಲಲಿ ನಡೆವಂತೆ|

ನಂಬಿಕೆಯೇ ಕತ್ತಲ ಹಾದಿಯ ಕಂದೀಲು

ಧೈರ್ಯದಿ ಹೆಜ್ಜೆ ಹಾಕುತಿರೆ ತೆರೆವುದು ಹೊಂಬಿಸಿಲು|| 

ನೋವಿನ ಅಲೆಗಳು

 ಏಕೆ ಬರುವಿ ನೋವೇ?

ಕಾರಣ ಹೇಳಿ ಬಾ...,

ಕಾರಣವಿಲ್ಲದೆ ಬಂದು

ನರಳುವಂತೆ ಮಾಡಿ ಹೋಗುವೇ!।।

 

ಎಂದೋ ಆಗಿ ಹೋದ ಕನಸದು,

ಕಡಲ ಅಲೆಗಳು ದಡಕೆ,

ಬಂದು ಬಂದು ಅಪ್ಪಳಿಸುವುವು,

ಕನಸುಗಳನೆಲ್ಲಾ ನುಚ್ಚುನೂರು ಮಾಡುತ್ತಾ...||

 

ಎಂದೋ ಆದ ನೋವದು,

ಮನದಲಿ ಅಳಿಯದೆ ಹಸಿರಾಗಿದೆ,

ನೋವ ಕಡಲಲಿ ಕೈ ತೊಳೆಯುತ್ತಾ,

ಮನದ ದಡಕೆ ಅಪ್ಪಳಿಸುವುದು ದಿನವೂ ||

 

ಉಸಿರೇ ಸುಡುವ ಜ್ವಾಲಾಗ್ನಿಯಾಗಿ,

ಸುಡುತಿದೆ ಒಳಒಳಗೆ,

ಕೊನೆಯಿಲ್ಲದ ನೋವಿಗೆ,

ಆರಂಭವಿದ್ದುದು ದಿಟ, ಅಂತ್ಯವಿರುವುದೇ?

Sunday, July 20, 2025

ಹರಿವ ನದಿಯ ಕಣ್ಣೀರು

 ಸಂಜೆಯಾಗಸದಲಿ ಹೊಸತೇನೂ ಇಲ್ಲ,

ಆಗಸವೂ ಬರಿದಾಗಿದೆ ಮೋಡಗಳೇ ಇಲ್ಲ!

ಬಿಸಿಲ ಬೇಗೆಗೆ ಬಾಯಾರಿವೆ ತರುಲತೆಗಳು,

ಬಿಸಿಲ ಧಗೆಯೊಂದೇ ಗ್ಯಾರಂಟೀ ಖಚಿತವಿಲ್ಲಿ।।

 

ಮಳೆ ಇಲ್ಲ, ಅಂತರ್ಜಲ ಪಾತಾಳಕ್ಕಿಳಿದಿದೆಯಲ್ಲಾ!,

ಕೆರೆ, ಕೊಳ್ಳಗಳು ಖಾಲಿ,ಖಾಲಿ, ನಮ್ಮಲ್ಲಿ ನೀರಿಲ್ಲ।

ಟ್ಯಾನ್ಕರ್ ಯಜಮಾನರದೇ ಕಾರುಬಾರು ಇಲ್ಲಿ,

ಸರ್ಕಾರಕ್ಕೂ ಸಿಗುತ್ತಿಲ್ಲ ಒಂದು ಹನಿ ನೀರು||

 

ಕಾವೇರಿ ಕಣ್ಣೀರು ಹಾಕುತ್ತಾ ತಮಿಳುನಾಡಿಗೆ ಹರಿದಳು,

ಕೊಡಗಿನ ಕಾವೇರಿ ಹೆಸರಿಗೆ ನಮ್ಮ ಹೆಮ್ಮೆ|

ತವರು ಮನೆ ಬಿಟ್ಟು ತೆರಳುವ ಮಗಳು ಅವಳು,

ಕೊಟ್ಟ ಹೆಣ್ಣು ಕುಲದಿಂದ ಹೊರಗೆ, ಕಾವೇರಿ ನಮ್ಮವಳಲ್ಲ||

 

ಮಂಡ್ಯದ ಜನರ ಜೀವನಾಡಿ ಕಾವೇರಿ ಆದರೇನು?

ಕಾವೇರಿ ಹರಿದು ಹೋದ ಮೇಲೆ ಕಣ್ಣೀರ ಕಥೆಯೇ!

ಮಂಡ್ಯದ ಹೈಕಳು ನಡೆಸುವರು ಜೋರು ಹೋರಾಟಾ,

ಮಾಡಿದರು ಸರ್ಕಾರದ ತಿಥಿ, ಶ್ರಾಧ್ದದ ಊಟ।।

 

ಹರಿದು ಹೋಗುವವಳ ತಡೆವವರಾರು?

ಕಾವೇರಿ  ನಮ್ಮವಳಲ್ಲ,ನಮ್ಮವಳಲ್ಲ...  

ಎದೆಯೊಳಗಿನ ಮೌನ

 ಎದೆಯಲಿಂದೇಕೋ ಮೋಡ ಮುಸುಕಿದೆ,

ಭಾವಭಾರ ಹೆಚ್ಚಾಗಿ ಕಣ್ಣ ನೀರು ಉಕ್ಕಿದೆ।

ಬೇಡದ ನೆನಪುಗಳು ಮತ್ತೆ ಮತ್ತೆ ಮನವ ಕಾಡಿದೆ,

ಎದೆಯ ತುಂತುರು ಹನಿ ಹೃದಯವ ತೊಯ್ಯಿಸಿದೆ||

 

ಎದೆಯಲಿಂದೇಕೋ ಬೆವರಿ ಬಾಯಾರಿ ಬಿಕ್ಕುತ್ತಿದೆ,

ಯಾರದೋ ನೆನಪು ಹಾರಿ ಬಂದು ಕೆದಕುತ್ತಿದೆ||

ಉಸಿರೇ ನಿಂತಂತೆ ಭಯವು ಮನದಲ್ಲಿ ನೆಲೆಸಿದೆ,

ಇಂದೇಕೋ ನೆನಪು ತಂದು ಮನವು ರಚ್ಚೆ ಹಿಡಿದಿದೆ||

 

ಎದೆಯು ಪ್ರೀತಿಗೆ ಬಾಯಾರಿ ಬಾಯಿ ಬಿಡುತ್ತಿದೆ,

ಬಾಯಾರಿಕೆಯೋ!, ಹಸಿವೋ! ತಿಳಿಯದೆ ಒದ್ದಾಡಿದೆ|

ಕುಳಿತಲ್ಲೇ ಕುಳಿತಿರುವೆ ಏನೂ ಮಾಡಲಾಗದೆ,

ಎದೆ ಕಿವುಚಿ, ಹೃದಯ ಹಿಂಡಿ ಕಣ್ಣೀರು ಕೋಡಿಯಾಗಿದೆ||

 

ಎದೆಯ ಹಗುರಾಗಿಸಿ ಹರವಿ ಮಲಗಿರುವೆ,

ಎಲ್ಲವನ್ನೂ ಮರೆತು ಕಣ್ಣೀರ ಒರೆಸಿರುವೆ|

ಮಳೆನಿಂತ ಮೇಲೆ ಮತ್ತೆ ಹರಿಷದಿ ನಿಂತಿರುವೆ,

ಎದೆಯ ಗಟ್ಟಿ ಮಾಡಿ ನಾಳೆಗೆ ಭರವಸೆಯಾಗಿರುವೆ||

ಬದುಕು – ಒಂದು ಪಾಠ

 ಮುಂಜಾನೆ ಬೆಳಗೆದ್ದು ಮನವು ಮುದುಡಿದರೆ

ನಿನ್ನಯ ಇಷ್ಟದ ಸಂಗೀತವ ಗುನುಗಿಕೋ,

ಮನವು ಜರ್ಜರಿತವಾಗಿ ವ್ಯಗ್ರವಾಗಿದ್ದರೆ

ಜೋರಾಗಿ ನಗು ನಿನ್ನಯ ಮೂರ್ಖತನಕೆ,

ಮನದಲಿ ಭಯ ಆವರಿಸಿದ್ದರೆ

ಧೈರ್ಯದಿಂ ಮುನ್ನುಗ್ಗು ಎದುರಿಸು,

ಮನವು ಬೇಜಾರಿನಲ್ಲಿ ತೊಳಲಾಡಿದರೆ

ಹೊರ ನಡೆ, ವಿಶಾಲ ಪ್ರಪಂಚವಿದೆ ನೋಡು,

ಕೌಶಲ್ಯವಿಲ್ಲದೆ ಸೊರಗಿದರೆ, ಹುಡುಕಾಡು

ಒಳ್ಳೆಯ ಸಮರ್ಥ ಗುರುವ ಮುನ್ನಡೆಸಲು,

ತಿಳಿವಿಲ್ಲದೆ ಗೊಂದಲ ಆವರಿಸಿದರೆ,

ತಿಳಿದವರ ಸಂಗವ ಮಾಡು, ತಿಳಿದು ಕೋ,

ಲೋಕದಲ್ಲಿ ಎಲ್ಲಕ್ಕೂ ಉತ್ತರವಿದೆ,

ಹುಡುಕಬೇಕಷ್ಟೇ!,ಛಲಬೇಕಷ್ಟೇ!

ಸಾಧಿಸುವವರೆಗೂ ನಿಲ್ಲಬಾರದಷ್ಟೇ

ಸತ್ತ ಮೇಲೆ ಮಲಗುವುದು ಇದ್ದೆ ಇದೆ,

ಬದುಕಿದ್ದಾಗ ಏನಾದರೂ ಸಾಧಿಸು,

ಏನಾದರೂ ಸಾಧಿಸು, ಉಸಿರು ನಿಲ್ಲುವ ಮುನ್ನ...

Saturday, July 19, 2025

ಏಕಾಂತದ ಯಾತನೆ

 ಒಬ್ಬನೇ ಇದ್ದಾಗ ಏಕಿಷ್ಟೊಂದು ಯೋಚನೆಗಳು

ಮನದಲ್ಲೇನೋ ಪ್ರವಾಹದಂತೆ ಪ್ರವಹಿಸುತ್ತಿದೆ |

ಕುಳಿತಾಗಲೂ, ನಿಂತಾಗಲೂ ಪ್ರವಾಹದಂತೆ ನುಗ್ಗುತ್ತಿದೆ

ನಾಲ್ಕು ಗೋಡೆಗಳ ಮಧ್ಯೆ ಏಕಿಂತ ಮನಸ್ತಾಪವೋ?||

ಕಾಲದ ಹೆಜ್ಜೆಗೆ ಜೊತೆಯಾಗು

 ಸಮಯ ಎಲ್ಲರಿಗೂ ಸಮಾನ,

ಆದರೆ ಉಪಯೋಗಿಸುವುದು ನಮ್ಮ ಆಯ್ಕೆ.
ಕಾಲವು ನಿರ್ಧರಿಸುವುದಿಲ್ಲ,
ನಮ್ಮ ನಿರ್ಧಾರಗಳೇ ದಿಕ್ಕು ತೋರಿಸುತ್ತವೆ.

 

ಕಾಲ ಸದಾ ಮುಂದೆ ಸಾಗುತ್ತದೆ,
ಹಿಂದೆ ತಿರುಗುವುದಿಲ್ಲ ಎಂದಿಗೂ.
ಕಾಲದ ಹಂತಗಳಲ್ಲಿ ನಾವು ಹಾಕುವ ಹೆಜ್ಜೆಗಳು,
ನಮ್ಮ ಬದುಕಿನ ರೂಪು ನಿರ್ಧರಿಸುತ್ತವೆ.

 

ಕಳೆದು ಹೋದ ಕ್ಷಣ ಮರಳಿ ಬರುವುದಿಲ್ಲ,
ಆದರೆ ಮುಂದಿರುವ ಕ್ಷಣಗಳು ನಿನ್ನ ಕೈಯಲ್ಲಿವೆ.
ಕಾಲದ ಹೆಜ್ಜೆಗೆ ಜೊತೆಯಾಗು,
ಬೆಳವಣಿಗೆಯತ್ತ ಧೈರ್ಯದಿಂದ ಹೆಜ್ಜೆ ಹಾಕು.

 

ನಿನ್ನಿಂದ ಮಹತ್ತರ ಸಾಧನೆ ನಿರೀಕ್ಷಿತ,

ನಿನ್ನ ಸಮಯವೇ ನಿನ್ನ ಶಕ್ತಿ, ನಿನ್ನ ಸಾಧ್ಯತೆ!

Friday, July 18, 2025

ಕೃಷ್ಣಾ ನೀನಿಲ್ಲದ ನಾನು!

ಕೃಷ್ಣಾ ನೀನಿಲ್ಲದ ನಾನು,

ಜೀವವಿರದ ಶವದಂತೆ,

ಬರೀ ಶೂನ್ಯದಂತೆ।।

     ಕೃಷ್ಣಾ ನೀನಿಲ್ಲದ ನಾನು,

    ಸಿಹಿಯಿರದ  ಹಣ್ಣಿನಂತೆ,

    ಸಮರಸವಿಲ್ಲದ ಜೀವನದಂತೆ।।

ಕೃಷ್ಣಾ ನೀನಿಲ್ಲದ ನಾನು,

ಬಣ್ಣವಿಲ್ಲದ ಕಾಮನಬಿಲ್ಲಿನಂತೆ,

ನಾದವಿಲ್ಲದ ಸಂಗೀತದಂತೆ ।।

     ಕೃಷ್ಣಾ ನೀನಿಲ್ಲದ ನಾನು,

    ಸುವಾಸನೆಯಿಲ್ಲದ ಹೂವಿನಂತೆ,

    ತಂಪಿಲ್ಲದ ಮಾರುತದಂತೆ ।।

ಒಂದೇ, ಎರಡೇ ಉಪಮೇಯಗಳು ಕೃಷ್ಣಾ,

ಕೊನೆಯಿರದ ವೃತ್ತದಂತೆ,

ನೀನು ಅಮಿತ,ಅಪರಿಮಿತ,ಅನಂತ....

ಶ್ಯಾಮನಿಲ್ಲದ ಗೋಕುಲ!

 

ಅಕೋ ನೋಡೇ ಸಖಿ

ಶ್ಯಾಮ ಬಹನು।

ವಿರಹ ತುಂಬಿದ ಮನಕೆ

ಸಂತಸ ತಂದನು।।

 

ಮೂರು ದಿನಗಳಾಯ್ತು ಕೇಳಿ

ಶ್ಯಾಮನ ಕೊಳಲ ಆ ದನಿಯ।

ಅವನ ಮುಖವ ಕಾಣದೆ

ಕಂಬನಿ ಸುರಿಸಿದೆ ಈ ಹೃದಯ||

 

ಏಕೋ?,  ಏನೋ?,

ಎಲ್ಲಿ ಹೋದನೋ ಶ್ಯಾಮನ ನೆನೆದೆ

ಆತಂಕ ಮೈ ಮನದಲ್ಲಿ

ಮನೆಮಾಡಿ ಶಾಂತಿಯ ಕದಡಿದೆ ।।

 

ಶ್ಯಾಮನಿಲ್ಲದ ಗೋಕುಲ,

ಏತಕೆ ಹೇಳೇ ಸಖಿ?|

ಮನವೆಲ್ಲಾ ಕತ್ತಲೆ, 

ಬಾಳು ಬೇಕೇ ಸಖಿ?||

Sunday, July 13, 2025

ಈ ಸಾವು ನ್ಯಾಯವೇ?

ಸಾವು ನ್ಯಾಯವೇ?, ಸಾವು ನ್ಯಾಯವೇ?

ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ;

ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ;   

ಹದಿನೆಂಟು ವರ್ಷಗಳ ಕಾದೆವು ಶಬರಿಯಂತೆ;

ಅಂತೂ ನಮ್ಮಯ ಕನಸು ನನಸಾಯಿತು, ನಾವು ಗೆದ್ದೆವು;

ರಾತ್ರಿಯೆಲ್ಲಾ ನನಸಾದ ವಿಸ್ಮಯ ಪಾರವಿಲ್ಲದಂತೆ

ಸಂತೋಷವ ಅನುಭವಿಸಿದೆವು  ಹುಚ್ಚು ಹಿಡಿದವರಂತೆ;

ಸಂತೋಷದ ಜಾತ್ರೆಗೆ ಹೊರಟೆವು ಭ್ರಮೆಯಾವರಿಸಿದಂತೆ;

ಹುಚ್ಚು ಅಭಿಮಾನದ ರಕ್ತಪಿಶಾಚಿ ಹೊಂಚುಹಾಕಿತ್ತು;

"ಕಾಲ್ತುಳಿತ ಉಚಿತ, ಸಾವು ಖಚಿತ" ಷರಾ ಬರೆದಾಗಿತ್ತು;

ಹನ್ನೊಂದು ಮುಗ್ದ ಅಭಿಮಾನಿಗಳ ಪ್ರಾಣ ಬಲಿ ಪಡೆಯಿತು;

ಸಾವು ನ್ಯಾಯವೇ? ಸಾವು ನ್ಯಾಯವೇ?

ಸಂಭ್ರಮದ ಜಾತ್ರೆ, ಅಂತಿಮ ವಿಧಾಯದ ಯಾತ್ರೆಯಾಯಿತೇ

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...