Wednesday, May 29, 2013

ಅಧ್ಯಾಯದ ಆರಂಭ-ಕೊನೆ

ಏಕೆ ಹೀಗಾಗುವುದೋ ನಾ ಕಾಣೆ
ಎಲ್ಲವೂ ನಿರ್ಧಾರಿತವಾದುದಕ್ಕೆ ತಡೆ ಬೀಳುವುದೇಕೋ?
ಆಗೇ ಹೋಯಿತು ಅನ್ನುವುದರೊಳಗಾಗಿ
ಇನ್ನೇನೋ ಆಗುವತ್ತ ನಿರ್ಧಾರ ಹೊರಳಿರುತ್ತದೆ
ಬದ್ಧತೆ,ದೃಢತೆ ಮಗ್ಗುಲು ಮಲಗಿಕೊಳ್ಳುತ್ತದೆ
ವಚನ ಭ್ರಷ್ಟತೆ ನಗುತಾ ಹೊರಹೊಮ್ಮುತ್ತದೆ
ಮನಸ್ಸುಗಳು ನರಳುತ್ತದೆ
ಒಂದು ಅಧ್ಯಾಯದ ಕೊನೆ
ಮತ್ತೊಂದು ಅಧ್ಯಾಯದ ಆರಂಭ
ಕೊನೆ ಮೊದಲಿಲ್ಲದ ಕಾಲ ನಾಳೆಗೆ ಹೊರಳುತ್ತದೆ
ಉದಯರವಿ ಮತ್ತೊಂದು ಭರವಸೆಯ ದಿವಸ ಕಾದಿರಿಸುವನು ಎಲ್ಲರಿಗೂ||

Saturday, May 25, 2013

ಮನದೊಳ ಕದನ


ನೀನು ಏನು ತಿಳಿದಿರುವೆಯೋ ಅದು ನಾನಲ್ಲ
ಬಾಹ್ಯದಲ್ಲಿ ಹೀಗೆ ಕಾಣುವ ನಾನು, ನಾನಲ್ಲ;
ಆಂತರ್ಯದಲ್ಲಿ ಎದೆ ತಟ್ಟಿದೆ ನೂರು ಕದನ
ಅಲ್ಲಿ ಯೋಧನೂ ನಾನೇ!
ಶಾಂತಿ ಧೂತನೂ ನಾನೇ!
ನಡೆಯುವ ಯುದ್ಧ ಏತಕ್ಕೋ? ನಾನರಿಯೆ
ಪ್ರತಿದಿನ ಕದನ ನಡೆವುದು ಮನದೊಳಗೆ
ತೀವ್ರ ಹೋರಾಟದ ನಡುವೆಯೂ ಸಾಯುತ್ತೇನೆ
ರಾತ್ರಿ ಕತ್ತಲಾವರಿಸಿದ ಮೇಲೆ;
ಉದಯಿಸುವ ರವಿಯ ಬೆಳಕಿಡಿಗಳ ಮೂಲಕ ಮರುಜನ್ಮ
ಹೊಸಶಕ್ತಿಯೊಂದಿಗೆ ಕದನವು ಮುಂದುವರೆಯುವುದು
ಸತ್ತು-ಬದುಕಿ,ಸತ್ತು-ಬದುಕಿ
ಜೀವನದರ್ಥ ಬದಲಾಗಿದೆ, ಹೊಸತನ ಅರಳಿದೆ
ಹೊಸ ಕವನ ಕಣ್ಣುತೆರೆದಿದೆ;

ಮೌಢ್ಯರಕ್ತಬೀಜಾಸುರ


ಅಯ್ಯೋ! ಇಂದೇನಾಗಿದೆ ಹಾಂ! ದುರ್ವಿಧಿಯೇ!
ನಾಕು ಇದುದು ನಾಕು ಸಾವಿರವಾಗಿದೆ
ಮೀಸಲು,ಸವಲತ್ತುಗಳ ತಂದು ಜಾತಿಗಳ ಗಟ್ಟಿಗೊಳಿಸಿದರ್
ವಿಶ್ವಮಾನವರಾಗುವರಾರ್ ಇಲ್ಲಿ ಗುರುದೇವ
ಸ್ವಾರ್ಥದಿಂದೆಲ್ಲರೂ ಮೌಢ್ಯರಕ್ತಬೀಜಾಸುರರೇ ಆಗಿಹರ್||

ಹರಿಕಾರರು


ಸಾಮಾಜಿಕ ನ್ಯಾಯದ ಹರಿಕಾರರು ಇವರು
ಹೊತ್ತು ತಂದಿದ್ದಾರೆ ಹುಸಿ ಭರವಸೆಗಳ ನೂರು
ಅಧಿಕಾರ ಕೈ ಹತ್ತಿದ್ದೇ ಬದಲಾಗಿದೆ ನೋಡು
ದ್ವೇಷ-ಅಸೂಯೆಗಳೇ ಮೈವೆತ್ತಿ ಕೀಳು ರಾಜಕಾರಣದ ಕೇಡು||

Friday, May 24, 2013

ಸಿಕ್ಕ ಫಲವೇನು?


ಸ್ವಾತಂತ್ರ್ಯಾನಂತರ ಅರವತ್ತಾರು ವರ್ಷಗಳ
ರಾಷ್ಟ್ರೀಯಪಕ್ಷದ ಗುಲಾಮಗಿರಿಗೆ
ಕರ್ನಾಟಕಕ್ಕೆ ಸಿಕ್ಕ ಫಲವೇನು?
ಕಾವೇರಿ,ಕೃಷ್ಣ ರಾಜ ಸಾಗರ ಬತ್ತಲಾದದ್ದೇ ಲಾಭ!||

ಹೊಳೆ-ಬೆಳೆ


ಮನದ ಚಿಂತೆ,ಕಂತೆ ಎಲ್ಲಾ ತೊಳೆ
ಜೀವನದ ಮೌಡ್ಯ,ದುಃಖ,ದುಮ್ಮಾನ ಕಳೆ
ಶಾಂತ ಕಡಲಿನ ಅಲೆಗಳ ಮೇಲೆ ಬೆಳೆ
ತಾರೆಯರಂತೆ ಆಗಸದಲ್ಲಿ ಹೊಳೆ||

Monday, May 20, 2013

ಜಲ ಬರಿದು.....


ಜಲ ಬರಿದು.....
ಬರಿದಾಗುತ್ತಿದೆ ವಸುಂಧರೆಯ ಒಡಲು
ಕೆರೆ,ತೊರೆ,ನದಿ,ಜೀವನದಿ ಎಲ್ಲಾ ಬಟ್ಟಾಬಯಲು
ಕೇಳಲ್ಲಿ ಪ್ರಾಣಿ,ಪಕ್ಷಿ ಸಂಕುಲದ ಮೂಕ ಹುಯಿಲು
ಇಂದೇ ಬರೆದಿಡು ನಾಳೆಗೆ ನಿನ್ನಯ ಉಯಿಲು
ಸರ್ಕಾರ ಮಾಡಬೇಕಿದೆ ಜನರಿಗೆ ಅಪೀಲು
ಉಳಿಸಿ ಉಳಿಸಿ ಜೀವ ಜಲ ಉಳಿಸಿ||

ದುಡ್ಡು ಕೊಡುವೆವು;
ನೀರು ಸಿಗುವುದು;
ನಮ್ಮಯ ಜನರ ಅಹಂಕಾರ,ಧರ್ಪ;
ಅರಿತು ಬಳಸುವವರು ಯಾರಿಲ್ಲ ಇಲ್ಲಿ;
ಎಚ್ಚರಿಕೆ ಕೋರಿಕೆಗಳಿಗೆ ಬೆಲೆ ಇಲ್ಲ ಇಲ್ಲಿ;
ಜಲಕ್ಷಾಮ ಬಂದಾಯ್ತು;
ಎಚ್ಚರಗೊಳ್ಳದಿರೆ ಅಪಾಯ ಕಾದಿದೆ
ಊರಿಗೆ ಊರೇ ಸಾಯುವುದು ಖರೆ
ಕೇಳು ನೀ ಮನುಜ ವಸುಂಧರೆಯ ಕರೆ
ಎಲ್ಲೆಡೆ ಮುಕ್ಕುವುದು ಸೂತಕ
ಹಣ,ಅಂತಸ್ತು,ಸಂಪತ್ತು ಮಣ್ಣುಗೂಡುವುದು
ಎಚ್ಚರಗೊಳ್ಳೋ ಮನುಜ
ರಕ್ಷಿಸು ಜೀವಜಲ
ಉಳಿಸು ಮನುಜ ಕುಲ||

ಚಿತ್ರಕೃಪೆ:ಕನ್ನಡಪ್ರಭ




ಪ್ರೀತಿ-ವಿಶ್ವಾಸ-ವಾತ್ಸಲ್ಯ


ಹೃದಯದ ಅಣುಅಣುವಿನಲಿ
ಪ್ರೀತಿ-ವಾತ್ಸಲ್ಯಗಳಿರಲಿ
ಹೃದಯ ವೈಶಾಲತೆಯು ಸದಾ ಹಸಿರಾಗಿರಲಿ
ಪ್ರೀತಿ-ವಿಶ್ವಾಸ-ವಾತ್ಸಲ್ಯ
ಮಾನವೀಯತೆಗಳೇ ಜೀವನದ
ಅಮೂಲ್ಯ ಸಂಪತ್ತುಗಳಾಗಲಿ||

ಗಂಗೆ-ಶಂತನು


ಸವಿಸ್ತಾರದ ಸಾಮ್ರಾಜ್ಯ;
ಪ್ರಖ್ಯಾತ ರಾಜವಂಶ;
ಹೆಸರಾಗಿದೆ ಹಸ್ತಿನಾಪುರವೆಂದು;
ರಾಜನೋ ಗುಣಾಡ್ಯನಾದ ಶಂತನು;
ರಾಜ್ಯದ ಜನರ ಆಡುಮಾತಿನ ಸತ್ಯಶೀಲ,ಸತ್ಯವಂತ;
ಸತ್ಯ,ಸೂರ್ಯ,ಚಂದ್ರ,ಯಮ,ಭೂಮಿ,ವಾಯು ಗುಣಗಳ ಪೊತ್ತವನವನು;
ಸೌಂದರ್ಯ,ತೇಜಸ್ಸು,ಕೋಪ,ವೇಗ,ತಾಳ್ಮೆ ಹಾಗು ಸತ್ಯದ ಉಪಾದಿಯೇ ಶಂತನು;
ರಾಣಿ ಇಲ್ಲದ ರಾಜ ಏಕಾಂಗಿ;

ಗಂಗಾ ನದಿಯ ತೀರದ ತಾಣ;
ಶಂತನುವಿಗೆ ಆಪ್ಯಾಯಮಾನ;
ಒಮ್ಮೆ ಕಂಡಳು ಅಪ್ಸರೆಯಂತಹ ಹೆಣ್ಣು
ಮರುಳಾದ ಅವಳ ಚೆಲುವಿಗೆ ಶಂತನು
ಪೆಣ್ಣೆಂದರೆ ಹೀಗಿರಬೇಕೆಂದಿತು ಮನ
ಸೌಂದರ್ಯಕ್ಕೇ ಅಪವಾದವಳು ಅವಳೇ ಗಂಗೆ
ಎಂಥ ಸೌಂದರ್ಯ, ಯೌವ್ವನ ಅವಳದು?
ಕಂಡ ಗಂಡಿಗೆ ನಿದ್ದೆ ಕೆಡಿಸುವಂತಹುದು!
ಮೊದಲ ನೋಟದಲ್ಲೇ ಸೋತಿದ್ದ ಶಂತನು
ಅವಳಿಲ್ಲದೆ ಜೀವನ ಬೇಡವೆನಿಸಿತು ಅವನಿಗೆ;
ಮದುವೆಯಾಗೆಂದು ಪರಿಪರಿಯಾಗಿ ಅವಳ ಬೇಡಿದ
ಒಪ್ಪುವೆನು ನೀ ನನ್ನ ಶರತ್ತಿಗೆ ಬದ್ಧನಾದರೆ ಎಂದಳವಳು
ನನ್ನ ಯಾವ ಕೆಲಸಕ್ಕೂ ಅಡ್ಡಿಪಡಿಸಬಾರದು,
ಯಾವ ಕೆಲಸಕ್ಕೂ ಆಕ್ಷೇಪಿಸಬಾರದು,
ಏಕೆ? ಏನು? ಎತ್ತ? ಪ್ರಶ್ನಿಸಲೇಬಾರದೆಂದಳು
ಪ್ರಶ್ನಿಸಿದರೆ ಅಂದೇ ನನ್ನ ನಿನ್ನ ಋಣಾನುಬಂಧ ಕೊನೆಗೊಳ್ಳುವುದು
ನಾ ಎಲ್ಲವನ್ನೂ ತೊರೆದು ನಿನ್ನಿಂದ ದೂರಾಗುವೆನೆಂದಳು ಆ ಪೆಣ್
ಆವುದೋ ಗುಪ್ತಕಾರ್ಯಸೂಚಿಯ ಹೊತ್ತೇ ಧರೆಗಿಳಿದಿದ್ದಳವಳು
ಅವಳ ಯೌವ್ವನದ ಸೆಳೆತಕ್ಕೆ,ಗಾಳಿಕ್ಕೆ ಸಿಕ್ಕ ಮೀನಾಗಿದ್ದ ಶಂತನು
ಮರುಮಾತಿಲ್ಲದೆ,ಯೋಚಿಸದೇ,ವಿವೇಚಿಸದೇ ಆಗಬಹುದೆಂದನು

ನಿಜವಾದ ಕಥೆ ಶುರುವಾದದ್ದು ಈಗಲೇ
ಗಂಗೆ-ಶಂತನು ಮದುವೆಯಾದರು
ಆನಂದದ ದಿನಗಳು-ಸುಖಕ್ಕೆ ಕೊನೆಯೇ?
ರತಿಯೇ ಕೈಹಿಡಿದಿರುವಾಗ ಸ್ವರ್ಗಕ್ಕೆ ಕಿಚ್ಚುಹಚ್ಚಿದ್ದ ಶಂತನು
ಯೌವ್ವನದ,ಹರೆಯದ ಸೌಂದರ್ಯದ ಮೈಥುನದ ಸುಖ
ಒಲ್ಲೆನೆನ್ನದೆ ಧಾರೆ ಎರೆದಿದ್ದಳು ಗಂಗೆ ಶಂತನುವಿಗೆ;
ಶಂತನು ಸ್ವರ್ಗ ಸುಖ ಉಂಡಿದ್ದ-ಶರತ್ತು ಮರೆತಿದ್ದ
ಮೈಥುನದ ಸುಖ ಫಲ ಕೊಟ್ಟಿತ್ತು
ಗಂಗೆಗೆ ಗಂಡು ಮಗುವಾಯಿತು
ಗಂಗೆಯ ನಿಜರೂಪ ಶಂತನುವಿಗೆ ಈಗ ಗೋಚರಿಸಲಾರಂಬಿಸಿತು;
ಗಂಗೆ ಶಂತನುವಿನ ಎದುರಿನಲ್ಲೇ ಮಗುವನ್ನು ನೀರಿಗೆ ಆಹುತಿಯಿತ್ತಳು
ಶಂತನು ಇಕ್ಕಟ್ಟಿಗೆ ಸಿಲುಕಿದ್ದ,ಶರತ್ತು ಅವನಿಗೆ ನೆನಪಾಯಿತು
ಪ್ರಶ್ನೆ ಕೇಳುವ ಹಾಗಿಲ್ಲ... ಇಬ್ಬಂದಿತನ ಶಂತನುವನ್ನು ಕಾಡಿತು
ಗಂಗೆ ಜೊತೆಯಲಿರೆ ಅಂತಹ ಮಕ್ಕಳು ನೂರು.. ಎಂದೆನಿಸಿತು
ಗಂಗೆ ಮೈಥುನಕ್ಕೆ ಒಲ್ಲೆ ಎನ್ನಲಿಲ್ಲ ಅದೇ ಸಂತೋಷ ಶಂತನುವಿಗೆ
ಹೀಗೆ ದಾಂಪತ್ಯದ ಫಲವೆಂಬಂತೆ ಎರಡನೇ,ಮೂರು,ನಾಲ್ಕು,ಐದು
ಆರು ಹಾಗು ಏಳು ಮಕ್ಕಳನ್ನು ಹೆತ್ತಳು ಹಾಗು ಎಲ್ಲವನ್ನೂ
ಶಂತನುವಿನ ಎದುರಿನಲ್ಲೇ ನೀರಿಗೆ ಆಹುತಿಯಿತ್ತಳು ಆ ಮಹಾತಾಯಿ
ಶಂತನಿವಿಗೆ ತಾಳ್ಮೆ ಇಲ್ಲವಾಗಿತ್ತು
ಮಗುವಿಗಾಗಿ ಹಂಬಲಿಸಿದ್ದ,ಬೆಂದುಹೋಗಿದ್ದ
ಗಂಗೆಯೊಂದಿಗಿನ ಸರಸ,ಸಲ್ಲಾಪ,ಮೈಥುನ ಮುಂದುವರೆದಿತ್ತು
ಎಂಟನೆಯ ಮಗುವಿನ ಜನನವಾಯಿತು;
ಶಂತನುವಿನ ಎದುರಲ್ಲೇ ಈ ಬಾರಿಯೂ ನೀರಿಗೆ ಆಹುತಿ ನೀಡಲು ಸಜ್ಜಾಗಿದ್ದಳು
ಇನ್ನೇನು ನೀರಿಗೆ ಆಹುತಿ ನೀಡಬೇಕೆನ್ನುವಷ್ಟರಲ್ಲೇ
ಬೆನ್ನ ಹಿಂದಿನಿಂದ " ಗಂಗೇ ಏನು ಮಾಡುತ್ತಿರುವೆ?"
ತುಟಿ ಮೀರಿ ಶಂತನು ಪ್ರಶ್ನಿಸಿಯೇ ಬಿಟ್ಟಿದ್ದ ಶರತ್ತು ಮುರಿದಿದ್ದ
ಗಂಗೆ ಶಂತನುವಿಗೆ ಆ ಮಗುವನ್ನು ಕೊಟ್ಟಳು
ತಾನು ಬಂದ ಕಾರ್ಯ ಮುಗಿಯಿತ್ತಿನ್ನು
ತಾನು ಬಂದ ರಹಸ್ಯವನ್ನು ಶಂತನುವಿಗೆ ತೆರೆದಿಟ್ಟಳು
ಮರುಮಾತಿಲ್ಲದೆ ನಡೆದು ಮರೆಯಾದಳು
ಆ ಮಗುವೇ ದೇವವ್ರತ- ಮಹಾಭಾರತದಲ್ಲಿ ಭೀಷ್ಮನೆಂದು ಪ್ರಖ್ಯಾತನಾದ||

ಪ್ರೇರಣೆ: " ಶೃಂಗಾರ ಕಥೆಗಳು" ಶ್ರೀ ಬೇಲೂರು ರಾಮಮೂರ್ತಿ.

Sunday, May 19, 2013

ಯಯಾತಿ!


ಬಯಸುತ್ತೇವೆ ನಾವು ಎಲ್ಲವನ್ನೂ
ಎಲ್ಲರದ್ದೂ ನಮಗೆ ಸಿಗಲೆಂದು
ಎಲ್ಲಕ್ಕೂ ಆಸೆ ಮಿತಿಮೀರಿ ಬತ್ತದೆ ಹಸಿರಾಗಿದೆ
ದುಃಖಕ್ಕೆ ಮೂಲ ಕಾರಣ ತಿಳಿದಿದ್ದರೂ ಅದೇ ಉಸಿರಾಗಿದೆ||

ಅವನ/ಅವಳ ಕೆಲಸ ನನ್ನದಾಗಬೇಕು!
ಅವನ/ಅವಳ ಮನೆ.ಕಾರು,ಹೆಂಡತಿ/ಗಂಡ ನನ್ನದಾದರೆ ಚೆಂದ
ಮನಸ್ಸಿಗೆ,ಆಸೆ ಸ್ವಾರ್ಥಕ್ಕೆ ಎಲ್ಲೆ ಇಲ್ಲವಾಗಿದೆ
ಯಾಂತ್ರಿಕತೆ,ಜಾಗತೀಕರಣ ಎಲ್ಲವನ್ನೂ ಸಾಧ್ಯವಾಗಿಸಿದೆ||

ಮೋಹ,ವ್ಯಾಮೋಹಗಳಿಗೆ ಅರ್ಥಬದಲಾಗಿದೆ
ದುರಾಸೆ,ದುರ್ಬುದ್ಧಿಗೆ ಮಾನ್ಯತೆಯಿದೆ
ವ್ಯಾಪಾರ,ವಹಿವಾಟಿಗೆ ಅದೇ ಬಂಡವಾಳವಾಗಿದೆ
ಇಂದಿಗೆ ಎಲ್ಲರೂ ಯಯಾತಿಯರೇ ಆಗಿಹೋಗಿದ್ದಾರೆ||

ಆ ಕಾಲ! ಈ ಕಾಲ!


ಎಲ್ಲೊ ಹೋದವು ಆ ಕಾಲ?
ಮನದಲ್ಲಿ ಮಧುರ ದಿನಗಳ ನೆನಪು
ಚಿತ್ರತೆರೆಯ ಮೇಲೆ ಬಂದು ಹೋದಂತಾಗಿತ್ತು||

ಸಿಹಿ-ಕಹಿ ಎಲ್ಲವೂ ಚಿತ್ರತೆರೆಯ ಮೇಲೆ ಸಹ್ಯವಾಗಿತ್ತು
ಕಳೆದ ಕಾಲ,ಬೆಳೆದ ಮನ,ಎಳೆತನ-ಗೆಳೆತನ ಎಲ್ಲವನ್ನೂ ಮಾಗಿಸಿತ್ತು
ಹೊಸತನ,ದೃಷ್ಟಿಕೋನ,ಎದುರಿಸುವ ಛಲ ಮನಕ್ಕೆ ಮುದನೀಡಿತ್ತು||

"ಬಂದೇ ಬರುತಾವ ಕಾಲ" ಆ ಕಾಲಕ್ಕೆ ಕಾಯುತ್ತಿದ್ದೇವೆಯೇ?
ಒಳ್ಳೆ ಕಾಲ.ಕೆಟ್ಟ ಕಾಲ ಎಂಬುದು ಇದೆಯೇ?
ಅದು ಭ್ರಮೆಯೋ? ಮೌಡ್ಯವೋ? ಕಾಲ ಮಾತನಾಡುವುದೇ?||

ಎಲ್ಲಕ್ಕೂ ಮೌನವೇ ಉತ್ತರ, ಅರಿಯುವೆವೇ ನಾವು!
ಕಾಯುತ್ತಾ ಕುಳಿತಿರುವವರಿಗೆ ಏನು ಹೇಳೋಣ
"ಕಾಲವನ್ನು ತಡೆಯೋರು ಯಾರು ಇಲ್ಲ" ಎನ್ನೋಣವೇ!
ಕಾಯುತ್ತಲೇ ಇರಬೇಕು ಬರುವವರೆಗೂ ಸಾವು||

Monday, May 13, 2013

ಭಕ್ತಿಯ ಮೂರ್ತರೂಪ


ಏಕೆ ಕುಳಿತಿಹೆ ಅಳಿಲೇ?
ಮರದ ಮೇಲೆ ಅಲ್ಲೇ!
ಯಾರ ದಾರಿ ಕಾಯುತ್ತಿರುವೆ?
ಮರವೆಲ್ಲಾ ಕಣ್ಣಾಗಿದೆ,ಮನವೆಲ್ಲಾ ಹಣ್ಣಾಗಿದೆ;
ಜೀವನವೆಲ್ಲಾ ಯಾರಿಗೆ ಮುಡಿಪಾಗಿಟ್ಟಿರುವೆ?

ಆಗೋ ಬಂದೇ ಬರುವ!
ಈಗೋ ಬಂದೇ ಬರುವ!
ಕಾಣಲು ತವಕದ ಕಣ್ಣುಗಳು
ಎಷ್ಟು ವರ್ಷಗಳ ತಪಸ್ಸು ನಿನ್ನದು?
ಈ ಪರಿ ನಿನ್ನದು ಭಕ್ತಿಯೋ?,ಸೇವೆಯೋ?
ನೀನು,ಶಬರಿಯೂ ಭಕ್ತಿಯ ಮೂರ್ತರೂಪವೇ ಸರಿ.


ಮಯೂರ ಜುಲೈ-2013 ರ ಸಂಚಿಕೆಯ "ಚಿತ್ರಕಾವ್ಯ" ದಲ್ಲಿ ನನ್ನ ಕವನ.






Saturday, May 11, 2013

ಮೋಡದ ಅಳು


ನನ್ನ ಅಮ್ಮ


 ನನ್ನ ಅಮ್ಮ ಶಾರದೆ
ಎಷ್ಟು ದಿನಗಳಾದವು ಮನಕೆ ಬಾರದೆ
ಏಕೆ ದಯ ಬಾರದೆ
ಅಮ್ಮಾ ಶಾರದೆ ಮನಕೆ ಬಾರಮ್ಮ||

ಅಮ್ಮಾ ನಿನ್ನ ಪ್ರೀತಿಯ ಆಳ
ವಾತ್ಸಲ್ಯದ ವಿಸ್ತಾರ
ಅರಿಯದ ಮುಗ್ಧ ಬಾಲಕ ನಾನಮ್ಮ
ಮರೆಯದೆ ಮನಕೆ ಬಾರಮ್ಮ||

ಕಣ್ಣರಳಸಿ,ಹೃದಯ ಹಿಗ್ಗಿಸಿ ಕಾಯುತಿಹೆ
ನಿನ್ನ ಮೊಗವ ನೋಡಲು ತವಕ ಹೆಚ್ಚಿದೆ
ವಾತ್ಸಲ್ಯದ ನುಡಿಗಳ ಕೇಳಲು ಕಿವಿಗಳು ಚಡಪಡಿಸಿದೆ
ಕಾಯುತಿಹೆ ಅಮ್ಮಾ ಮನಕೆ ಬಾರಮ್ಮ||

ಅಲ್ಲೇ ಎಲ್ಲೋ ಅವಿತಿಹೆ,ಬಂದೆನೆಂದು ಮಾತ್ರ ಹೇಳುವೆ
ತುಂಟತನದಿ ಪ್ರೇಮಿಯಂತೆ ಕಾಯಿಸಿವೆ,ಹುಸಿ ಕೋಪ ತೋರುವೆ
ಬಾ ಬಾರೆಂದು ಕರೆದರೂ ಬಂದೆ ಈಗ ಬಂದೆನೆಂದು ಸತಾಯಿಸುವೆ
ಸಾಕು ಸೊರಗಿರುವೆ,ಹಸಿವೆ ಹೆಚ್ಚಿದೆ ಅರಿವ ಬಟ್ಟಲೊಡನೆ ಬಾ ಮನಕೆ ತಾಯೇ||                    

Wednesday, May 8, 2013

ಮತ್ತದೇ ಬೀದಿ ನಾಟಕ


ಎಲ್ಲವೂ ಇಂದು ಮುಗಿದಿದೆ, ಹೊಸ ಅಧ್ಯಾಯ ಪ್ರಾರಂಭವಾಗಿದೆ;
ಮೊನ್ನೆ ಮತಯಂತ್ರದೊಳಗೆ ಮತದಾರ ತನ್ನ ಮನದ ಗುಟ್ಟು ಬಚ್ಚಿಟ್ಟಿದ್ದ,
ಇಂದು ಚುನಾವಣಾ ಆಯೋಗ ಗುಟ್ಟು ರಟ್ಟುಮಾಡಿದೆ;
ಮಾಧ್ಯಮಗಳ ನಿರೀಕ್ಷೆಯಂತೆ ಫಲಿತಾಂಶ ಹೊರಬಿದ್ದಿದೆ;
ಸೋತವನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ;
ಗೆದ್ದವರು ಮಾತ್ರ ಮಾಧ್ಯಮಗಳ ಮುಂದೆ ಬೀಗುವುದು ಕಾಣಿಸಿತು;
ಒಂದು ಭ್ರಷ್ಟ ಪಕ್ಷ  ಹೊರಳಿತು ಅಧಿಕಾರದಿಂದ ನೇಪಥ್ಯಕ್ಕೆ;
ಇತ್ತೀಚಿನ ದಿನಗಳಲ್ಲಿ ಭ್ರಷ್ಟತನವನ್ನೇ ತನ್ನ ವಕ್ತಿತ್ವವಾಗಿಸಿಕೊಂಡಿರುವ
ಮತ್ತೊಂದು ಪಕ್ಷ ಅಧಿಕಾರದ ಗದ್ದುಗೆ ಏರಿದೆ;
ಯಾರು ಬಂದರೂ,
ಯಾರು ಹೋದರೂ,
ರೈತ ಹೊಲ-ಗದ್ದೆಗಳಲ್ಲಿ ಉಳುಮೆ ಮಾಡಲೇಬೇಕು;
ನಮ್ಮ ಬೆವರ ಹನಿ ನಮ್ಮನ್ನು ಕಾಯ್ವದಲ್ಲದೇ ಪರರ ಬೆವರ ಹನಿ ನಮ್ಮ ಕಾಯ್ವದೇ?
ನಮ್ಮ ಬೆವರ ಹನಿ ಬಳಸುವರು ತಮ್ಮ ಕೈ ತೊಳೆಯಲು ನಮ್ಮ ಆಳ್ವರು;
ನಮ್ಮ ಮುಂದೆ ಗೆದ್ದು ಬೀಗುವರು;
ನಾವು ಮಾತ್ರ ಮೂಕ ಪ್ರೇಕ್ಷಕರು;
ಮತ್ತೈದು ವರ್ಷ ನರಕಯಾತನೆಗೆ ಸಿದ್ಧರಾಗುತ್ತಿದ್ದೇವೆ,
ಹೊಸ ಶಕ್ತಿ,ನಿರೀಕ್ಷೆ ಹಾಗು ಆಶಾಭಾವದಿಂದ;
ಬೆಲೆ ಏರಿಕೆ, ನೀರಿನ ಸಮಸ್ಯೆ,ಕಾವೇರಿ ಕಿತ್ತಾಟ,ಕುರ್ಚಿ-ಖಾತೆ ಕಾದಾಟ....ಇತ್ಯಾದಿ ಮುಂದೈತೆ
ನಮಗೆಲ್ಲಾ ಕಾದೈತೆ ಪುಕ್ಕಟ್ಟೆ ಮನರಂಜನೆ.
ಇವೆಲ್ಲಾ ನಮಗೆ ಸಾಮಾನ್ಯವಾಗಿಬಿಟ್ಟಿದೆ
ಬದಲಾವಣೆ ಎಂದರೆ ಬರೀ ಹಸ್ತ ಬದಲಾವಣೆಯಲ್ಲ....
ಗೆಲುವು ಯಾರದಾದರೂ.....
ಸೋಲು ಮಾತ್ರ ಶ್ರೀಸಾಮನ್ಯನದು, ಮತದಾರನದು ಇದು ಸತ್ಯ.

Monday, May 6, 2013

ಮುಗಿಯದ ಎಣಿಕೆ


ಪ್ರತಿ ಬಾರಿ ಎಣಿಸುತ್ತೇನೆ
ಒಂದು,ಎರಡು,ಮೂರು.......ಹತ್ತರವರೆಗೆ
ಆ ಹೂವನ್ನು ನೋಡಿ ನಗುತ್ತೇನೆ
ನೋಡಿ ನಗುವಂತೆ ಜೀವ ಚೈತನ್ಯ ಉಕ್ಕಿಸುವ ಹೂವಿಗೆ ನಮನಗಳು;

ಪ್ರತಿ ತಿಂಗಳೂ ಎಣಿಸುತ್ತೇನೆ
ಬಿಡಿ,ಹತ್ತು,ನೂರು,ಸಾವಿರ....ಮುಗಿಯದ ಎಣಿಕೆ
ಸಂಖ್ಯೆಗಳ ಮೊತ್ತ ನೋಡಿ ನಗುತ್ತೇನೆ
ನೋಡಿ ನಗುವಂತೆ ಮನದೊಳಗೆ ಅಸಹಾಯಕತೆ ಗುರುತಿಸುವ ಅಂಕೆಗಳಿಗೆ ನಮನಗಳು;

ಪ್ರತಿ ರಾತ್ರಿ ಎಣಿಸುತ್ತೇನೆ
ಕತ್ತಲಲ್ಲಿ ಮಿನುಗುವ ತಾರೆಯರ
ಬೇಸರ ಪಡುತ್ತೇನೆ ಹುಣ್ಣಿಮೆಯಂದು
ನನ್ನ ನೋಡಿ ಕಣ್ಣು ಮಿಟುಕಿಸುವ ತಾರೆಯರ ವಾತ್ಸಲ್ಯಕ್ಕೆ ವಂದನೆಗಳು;

ವಸಂತ-ಚೈತ್ರ


ಎಲ್ಲವನ್ನೂ ಕಳಚಿ ಬೆತ್ತಲಾಗಿವೆ
ಹಳೆಯದರ ಲವಲೇಶವೂ ಇಲ್ಲದಂತೆ ಎಲ್ಲವೂ ಬರಿದು
ಹೊಸತನ ಆಂತರ್ಯದಲ್ಲಿ ಹುಟ್ಟುವ ಆ ಪರಿ
ಅತ್ಯಂತ ರೋಚಕ,ರೋಮಾಂಚನ, ಆನಂದ;
ವಸಂತನೇ ಮನದೊಳಗೆ ನೆಲೆಗೊಳ್ಳುವನೋ!
ಚೈತ್ರೆ ಪ್ರೀತಿಯ ಕಂಪನ್ನು ಪಸರಿಸುವಳೋ!
ಒಂದಂತೂ ನಿಜ, ವಸಂತ-ಚೈತ್ರ ಪ್ರಗತಿಗಾಮಿಗಳು
ಅದಕ್ಕೇ ಯುಗಾದಿಯಲ್ಲಿ ಜೀವನ ಪ್ರೀತಿ ಹರಿದಿದೆ;

ಮೋಹ,ಮಾಯೆ


ಮೋಹ,ಮಾಯೆ
ಜೀವ,ದೇವ
ದ್ವಂದ್ವ ನಿಲುವುಗಳ ಸಾಕ್ಷಾತ್ಕಾರ||

ಮೋಹ ಕಾಡಿದೆ
ಮಾಯೆ ಬೇಡಿದೆ
ಜೀವನ ಭಿಕ್ಷಾಪಾತ್ರೆಯಾಗಿದೆ||

ನೀರು ಮುತ್ತೇ?
ಮುತ್ತು ಮೂಗುತಿಯೇ?
ನೀರಿಗಾಗಿ ಹಾಹಾಕಾರ,ರಕ್ತಪಾತವಾಗಿದೆ||

ಬೆಂಕಿಯಲ್ಲಿ ಶಾಖವಿದೆ
ಶಾಖ ಸುಡುತ್ತದೆ
ಬೆಂಕಿ,ಶಾಖ ನಮ್ಮೊಡಲಲ್ಲೇ ಅಡಗಿದೆ||

ಪ್ರೇರಣೆ: ಮೋಹವೆಂಬ ಮಾಯೆ-ಡಾ|| ಬಸವರಜ ಸಬರದ

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...