ಜೀವನ ಪ್ರೀತಿ


ಅಪ್ಪಿಕೋ
ಒಪ್ಪಿಕೋ
ನನ್ನ ಪ್ರೀತಿಯನ್ನ||

ಒಲವಿನ ಬದುಕಿಗೆ
ಪ್ರೀತಿಯ ಕನಸ ಬೆಸೆದು
ಒಂದಾಗಿ ಹೆಜ್ಜೆ ಹಾಕೋಣ
ಅಪ್ಪಿಕೋ,ಒಪ್ಪಿಕೋ ನನ್ನ ಪ್ರೀತಿಯನ್ನ||

ಮನೆಯ ಬೆಳಗು
ಮನವ ಬೆಳಗು
ಏಕಾಂಗಿತನವ ಕಟ್ಟಿಹಾಕು ಬಾ
ಅಪ್ಪಿಕೋ,ಒಪ್ಪಿಕೋ ನನ್ನ ಪ್ರೀತಿಯನ್ನ||

ಬಂಧನದಲ್ಲಿ ಸಿಲುಕೋಣ
ಸಂಸಾರ ಸಾಗರವ ಈಸೋಣ
 ದಾಂಪತ್ಯ ಸಖ್ಯದ ಸವಿಜೇನ ಸವಿಯೋಣ ಬಾ
ಅಪ್ಪಿಕೋ,ಒಪ್ಪಿಕೋ ನನ್ನ ಪ್ರೀತಿಯನ್ನ||

ಬಾಳಬಂಡಿಯ ಪಯಣದ
ಪಯಣಿಗರು ನಾವು
ಒಪ್ಪಿಕೊಂಡಿದ್ದೇವೆ,ಅಪ್ಪಿಕೊಂಡಿದ್ದೇವೆ ಸಂಸಾರವ
ಬಾ ಗೆಳತಿ ಅಪ್ಪೋಣ,ಒಪ್ಪೋಣ ಜೀವನ ಪ್ರೀತಿಯನ್ನ||

ಕನ್ನಡ ಶೋಕಾಚರಣೆ


ಕನ್ನಡ ರಾಜ್ಯೋತ್ಸವ ದಿನ ಮುಂದಿದೆ
ನೀಲಂ ಎಲ್ಲೆಡೆಯಲ್ಲೂ ಆವರಿಸಿದ್ದಾಳೆ
ಮೂರು ದಿನದ ಶೋಕಾಚರಣೆಯಂತೆ
ಕಣ್ಣೀರು ಸುರಿಸುತ್ತಲೇ ಇರುತ್ತಾಳಂತೆ

ಕನ್ನಡದ ಧ್ವಜಕ್ಕೆ ಅಧೀಕೃತ ಮಾನ್ಯತೆಯಿಲ್ಲ
ರಾಜ್ಯ ಉಚ್ಛನ್ಯಾಯಲದ ತೀರ್ಪಿದು
ಧ್ವಜವನ್ನು ಹಾರಿಸುವ ಹಾಗಿಲ್ಲ
ಧ್ವಜ ಹಾರಿಸಲು ಕಟ್ಟು-ಪಾಡುಗಳಿಲ್ಲ
ಸರ್ಕಾರಕ್ಕೆ ಧ್ವಜ ನಮ್ಮದು,ಕನ್ನಡಿಗರ ಆಸ್ತಿ
ಎಂದು ಸಮರ್ಥಿಸಿಕೊಳ್ಳುವ ನೈತಿಕತೆಯಿಲ್ಲ
ಸಾಹಿತಿಗಳು,ಕನ್ನಡ ಸಂಘ ಸಂಸ್ಥೆಗಳು,ಲ(ಬು)ದ್ದಿ ಜೀವಿಗಳೂ
ಮೌನಕ್ಕೆ ಶರಣಾಗಿ ಕನ್ನಡ ನಾಡು,ನುಡಿ,ಸಂಸ್ಕೃತಿಗೆ ದ್ರೋಹಬಗೆದಿದ್ದಾರೆ
ಕನ್ನಡ ನುಡಿ ನಲುಗುತ್ತಿದೆ,ಸೊರಗುತ್ತಿದೆ ಕನ್ನಡನಾಡಲ್ಲೇ....
ಅದಕ್ಕೆ ಎಲ್ಲೆಡೆಯಲ್ಲೂ ಶೋಕಾಚರಣೆ,ಕಣ್ಣೀರ ಆರಾಧನೆ ’ನೀಲಂ’ನಿಂದ.

ಒಳಗಿನ ಬೇಗುದಿ


ಬೆಂದು ಹೋಗಿದ್ದೇನೆ ಒಳಗಿನ ಅಸಮಾಧಾನದ ಬಿಸಿಯ ಹೊಗೆಯಿಂದ
ಬೇರೆ ದಾರಿ ಕಾಣದೆ ಒಳಒಳಗೇ ನರಳುತ್ತಿದ್ದೇನೆ,ಬೇಯುತ್ತಿದ್ದೇನೆ ತಾಳ್ಮೆಯ ದಹಿಸಿ ದಹಿಸಿ
ಎಷ್ಟು ದಿನ ಬೇಯಬೇಕೋ? ಅರಿಯೇ, ಮುಂದೆ ದಾರಿಯೇನೋ? ಅದನ್ನೂ ನಾನರಿಯೇ!
ಎಲ್ಲವೂ ನಿನ್ನ ಪದಕಮಲಗಳಲ್ಲಿ ಅರ್ಪಿಸಿದ್ದೇನೆ ದೇವ, ಕರುಣೆಯ ತೋರುವಿಯೆಂದು.
ದೇವಾ, ತಾಳ್ಮೆಯ ಕೈಹಿಡಿದಿದ್ದೇನೆ ದಾಟಿಸುವೆಯೋ?,ಮುಳುಗಿಸುವೆಯೋ?
ಎಲ್ಲವೂ ನಿನ್ನ ತಾಳ್ಮೆಯ ಮೇಲೇ ನಿಂತಿದೆ ದೇವ,ನಾನು ನಿನಗೆ ಶರಣಾಗಿದ್ದೇನೆ.

ನೀಲಂ


ಬೆಳಗಲೇ ಬೇಕು ಕತ್ತಲಾದ ನಂತರ
ಅದೇ ಅಲ್ಲವೇ ದಿನಚರಿ
ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿತ್ತು ನಿನ್ನೆ
      ಬೆಳಕು ಬರಲೇ ಇಲ್ಲ
ಏಕೆಂದರೆ ಎಲ್ಲೆಡೆಯಲ್ಲೂ ವ್ಯಾಪಿಸಿದ್ದಳು ನೀಲಂ
ಮಂಕು ಕವಿದಿದ್ದ ಆಕಾಶರಾಜ
ಸೂರ್ಯತೇಜ ಎಂದಿನಂತೆ ಬರಲಿಲ್ಲವೆಂದು
ಆಗಸದಲ್ಲಿ ಎಲ್ಲೆಲ್ಲೂ ಶೋಕಾಚರಣೆ
ಬೆಳಗಿನಿಂದಲೇ ಶುರುವಿಟ್ಟಿದ್ದ ಕಣ್ಣೀರು ಹರಿಸಲು
ಮೂರು ದಿನ ಸ್ವಾಂತನಗೊಳಿಸುವಳಂತೆ ನೀಲಂ.




ಸೂಚನೆ: ’ನೀಲಂ’ ಚಂಡಮಾರುತದ ಹೆಸರು
ದಿನಾಂಕ: ೩೧,೧೦,೨೦೧೨ ರಿಂದ ೨.೧೧.೨೦೧೨ ರವರೆಗೂ ಬೆಂಗಳೂರಿನಲ್ಲಿ ಮಳೆಯ ಜೊತೆಗೆ ಚಳಿಯನ್ನೂ ತರುತ್ತೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ. ಅದರಂತೆ ೩೧ ಹಾಗು ೧ ನೇ ನವೆಂಬರ್ ೨೦೧೨ ರಂದು ಮಳೆಯದೇ  ರಾಜ್ಯಭಾರ.

ಬಾರದ ಗೆಳೆಯ


ದಿನವೆಲ್ಲಾ ಕಾದರೂ
ಬಾರಲಿಲ್ಲವಲ್ಲಾ ಇವ
ಮರೆತನೇನೋ? ಆದರೂ
ಅರ್ಥಮಾಡಿಕೊಳ್ಳಲಿಲ್ಲವಲ್ಲಾ ಮನದ ಭಾವ||

ಮುಂಜಾನೆ ಬೇಗ ಎದ್ದು
ದಿನವಹಿ ಕೆಲಸಗಳನೆಲ್ಲಾ ಮುಗಿಸಿ
ಕಾಯುತ್ತಾ ಕುಳಿತ್ತಿದ್ದೆ,ಎಚ್ಚರಿಕೆಯಿಂದ ಎದ್ದು
ಕ್ಷಣಗಳು,ಗಂಟೆಗಳೂ ಜಾರಿಹೋದವೋ ನನ್ನ ಸಹಿಸಿ||

ಆದರೂ ಬೇಸರಿಸಲಿಲ್ಲ ಕಾಯಿಸಿ ಬಾರದಿದ್ದಕ್ಕೆ
ಹೊಸತೊಂದು ಚಿಂತನೆ ಮನದ ಅಂಗಳವ ತಲುಪಿತು
ನೀ ಬಂದಿದ್ದರೆ ಅವುಗಳಿಗೆಲ್ಲಾ ಕತ್ತರಿಬೀಳುತ್ತಿತ್ತು,ಧನ್ಯವಾದ ಅದಕ್ಕೆ
ನೂರೆಂಟು ಯೋಚನೆಗಳು,ಪುಸ್ತಕ,ಪಠ್ಯ,ಕವಿತೆ ಮನವ ಕಾಪಿಟ್ಟಿತು||

ಸೋಮವಾರದ ಸಂಜೆ ಮಳೆ


ಸೋಮವಾರದ ಸಂಜೆ ಮಳೆಯೇ
ಬಂದೆ ಏಕೆ?
ಯಾರ ಕರೆಗೆ ಓಗೊಟ್ಟು ಬಂದೆ ಹೇಳು?
ಒಂದು ಕಡೆ ನಿನ್ನೊಡನೆ ಬಂದಿಹನು ಚಳಿರಾಯ;
ಮತ್ತೊಂದು ಕಡೆ ಕಣ್ಣಾಮುಚ್ಚಾಲೆ ಆಡುತಿಹನು ದೀಪರಾಯ;
ಒಂದು ಕಡೆ ಖುಷಿ ನೀ ಬಂದೆ ಎಂದು;
ಮತ್ತೋಂದೆಡೆ ದುಃಖ, ರಾಜಕಾರಣಿಗಳ ಮುಖವಾಡ ಕಳಚಲಿಲ್ಲವೆಂದು;
ಆಟ ಮುಗಿದಿದೆ
ಸೋತ ಆಟ ನಮ್ಮದು
ಗೆದ್ದವರು ಬೀಗುತ್ತಿದ್ದಾರೆ
ನಿನ್ನೆ,ಇಂದು,ನಾಳೆ......
ಗೆದ್ದವರ ಗರ್ಜನೆ
ಸೋತವರ ಕಣ್ಣೀರು
ನಾಳೆಗೆ ಏನನ್ನೋ ಬಿಟ್ಟು ತೆರಳುತ್ತಿದೆ
ಕತ್ತಲ ತೋಳತೆಕ್ಕೆಯಲ್ಲಿ ಅದ್ವೈತ ಮೊಳಗುತ್ತಿದೆ
ನಾಳೆಯ ಕನಸಿಗೆ ನಿದ್ರಾದೇವಿ ಸೆರಗಹಾಸುತ್ತಾ
ಜಾರುತ್ತಿರುವ ಇರುಳು ಎಲ್ಲರ ಬಾಯಿಮುಚ್ಚಿಸಿದೆ.

ಹೊಸತನಕ್ಕೆ.......


ಮನಸ್ಸಿನಿಂದ ಎಲ್ಲವನ್ನೂ ಕಿತ್ತುಹಾಕಿದ್ದೇನೆ
ಅನೇಕ ಯೋಚನೆಗಳನ್ನು, ನೋವುಗಳನ್ನು,ತೆವಲುಗಳನ್ನು
ಕಷ್ಟ-ನಷ್ಟಗಳನ್ನು,ಆಕ್ರೋಶವನ್ನು......
ಮನದ ತುಂಬೆಲ್ಲಾ ಹರಡಿ
ಕೊಳೆತು ನಾರುತಿತ್ತು
ಎಷ್ಟು ದಿನ  ಗಬ್ಬುನಾತ ತಡೆದುಕೊಳ್ಳಲಿ
ಕೊನೆ ಎಂಬುದು ಎಲ್ಲಕ್ಕೂ ಇರುತ್ತದಲ್ಲವೇ?
ಇಂದು ನಿರಾಳವೆನಿಸುತ್ತಿದೆ
ನಾನು ಯಾರಿಗೂ ಹೆದರಬೇಕಾಗಿಲ್ಲ;
ಯಾರಿಗೂ ಜೀ ಹುಜೂರ್ ಎಂದು ಸಲಾಮು ಹೊಡೆಯಬೇಕಾಗಿಲ್ಲ;
ಇಂದೇ ನನಗೆ ಸ್ವಾತಂತ್ರ ಸಿಕ್ಕಿತೇನೋ ಎಂಬಷ್ಟು ಹರ್ಷವಿದೆ ಮನದಲ್ಲಿ
ಆದರೂ ಇಷ್ಟು ದಿನ ಯಾರಿಗಾಗಿ ಹೆದರಿದೆ,ಬೆದರಿದೆ
ಒಂದೂ ಗೊತ್ತಿಲ್ಲ ಹುಚ್ಚು ಮನಸ್ಸು
ಬೆದರಿ ಮುದುರಿತ್ತು;
ಎಲ್ಲಾ ಬೇಡಿಗಳನ್ನೂ ಕಳಚಿದ್ದೇನೆ;
ಮುಕ್ತಗೊಳಿಸಿದ್ದೇನೆ
ಹೊಸ ದಿನಕ್ಕೆ;
ಹೊಸ ಬೆಳಕಿಗೆ
ಹೊಸತನಕ್ಕೆ.......

ಏಕಾಂಗಿ-ನನ್ನ ಗೆಳೆಯ


ಏಕಾಂಗಿಯಾದಾಗ ನನಗೆ ಅರಿವು
 ಮೂಡುತ್ತದೆ;
ನನ್ನೊಳಗಿನ ಅಂಧಕಾರ
ಹೊರಬರುತ್ತದೆ;
ಆ ಕ್ಷಣ ನನಗೆ ತುಂಬಾ
 ಭಯವಾಗುತ್ತದೆ;
ಆದರೂ ಏಕಾಂಗಿಯಾಗ
 ಬಯಸುತ್ತೇನೆ;
ನನ್ನೊಳಗಿನ ಕೆಟ್ಟತನವೆಲ್ಲಾ
 ಹೊರಬರಲಿ;
ಮನವನ್ನು ಹಿಂಡಿಹಿಪ್ಪೆಮಾಡಿ
ಮೂಲೆಗುಂಪು ಮಾಡುತ್ತದೆ;
ಆದರೂ ಛಲವಂತೂ ಬಿಡುವುದಿಲ್ಲ
ಅವಕ್ಕೆ ಒಂದು ದಾರಿ
 ತೋರಿಸುತ್ತೇನೆ;
ಎಲ್ಲಾ ತೊಳಲಾಟವಾದ ನಂತರ
ಮನಕ್ಕೆ ಹೊಸ ಚೈತನ್ಯ
ಬರುತ್ತದೆ ಹೊಸ ದಾರಿ
ತೆರೆದುಕೊಳ್ಳುತ್ತದೆ;
ಆನಂತರ ಮನಸ್ಸು ಹಕ್ಕಿಯಂತೆ
ಹಾರುತ್ತದೆ;
ಮನದ ಭಾರವೆಲ್ಲಾ ಇಳಿದಮೇಲೆ
ಇನ್ನೇನು ಮಾಡುವುದು;
ಮತ್ತೊಂದು ಏಕಾಂಗಿತನಕ್ಕೆ
ಹಾತೊರೆಯುತ್ತೇನೆ
ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು,
ಪರಿತಪಿಸಲು;
ಮತ್ತೊಮ್ಮೆ ನನ್ನ ಮನದ ಗೋಡೆಯೊಳಗೆ
ಇಣುಕಿನೋಡುತ್ತೇನೆ;
ನನ್ನ ಸ್ಥಿತಿಯ ಕಂಡು ಮರುಗುತ್ತೇನೆ;
ಹೊಸ ಶಕ್ತಿ ದೊರೆಯಲಿ
ಎಂದು ದಿನವೂ ಪ್ರಾರ್ಥಿಸುತ್ತೇನೆ;
ದಿನವೂ ಬರಲಿ;
ಹೊಸ ಸಂಕಷ್ಟಗಳು ಬರಲಿ
ಹೊಸ ಹೊಸ ದಾರಿ ತೆರೆದುಕೊಳ್ಳಲಿ
ಮನ ಮುದಗೊಳ್ಳಲಿ.......

ಕಾವೇರಿಯ ಕನವರಿಕೆ




ಏಕಾದರೂ ಈ ಮಳೆರಾಯ ಬರಲಿಲ್ಲವೋ ನಾ ಕಾಣೆ
ಪ್ರತಿ ವರ್ಷ ಬಂದೇ ಬರುತ್ತಾನೆ ಎಂದು ಎಲ್ಲರಿಗೂ ತಿಳಿದಿದೆ
ಆದರೆ ಈ ವರ್ಷ ಏನಾಗಿದೆಯೋ ತಿಳಿದಿಲ್ಲ||

ಇವ ಬರದೆ ದೊಡ್ಡ ಅವಾಂತರ ಮಾಡಿದ್ದಾನೆ
ನಾ ಹುಟ್ಟಿ ಮುಂದೆ ಸಾಗುವೆಡೆಯಲೆಲ್ಲಾ
ಈಗ ತುಂಬಿದೆ ಎಲ್ಲೆಲ್ಲೂ ಕಸಿವಿಸಿ
ಆತಂಕ ತುಂಬಿದೆ ,
ಧರಣಿ, ಬಂದ್,ಸತ್ಯಾಗ್ರಹ,ಚಳುವಳಿಗಳು
ಎಲ್ಲವೂ ಇಂದು ಬೀದಿಗೆ ಬಂದಿದೆ ನನಗಾಗಿ
ಕಾರಣ ಇಂದು ಬರಿದಾಗಿದೆ ನನ್ನ ಒಡಲು ನಿನ್ನಿಂದ ಅದಕ್ಕೆ||

ನಾನು ಈಗಲೂ ಹರಿಯುತ್ತಿದ್ದೇನೆ
ಆದರೆ ತುಂಬಿ ತುಳುಕುತ್ತಿಲ್ಲ
ಪ್ರವಾಹದ ಪರಿಸ್ಥಿತಿಯಂತೂ ಖಂಡಿತ ಇಲ್ಲ
ಇದೇ ಎಲ್ಲರ ಚಿಂತೆಗೂ ಕಾರಣ||

ತಮಿಳರಿಗೂ ,ಕನ್ನಡಿಗರಿಗೂ ಜಗಳ ನನ್ನಿಂದ
ನಾನು ತುಂಬಿ ತುಳುಕಿದರೆ ಎಲ್ಲವೂ ಶಾಂತ ,ನಿರ್ಮಲ
ಮಳೆರಾಯ ನೀನು ಮಳೆಹುಯ್ಯಲಿಲ್ಲ
ಹುಯ್ದೆ ವೈಮನಸ್ಯದ ಬೀಜ ನನ್ನ ಮೂಲಕ||

ಸಾಕು ಸಾಕು.....
ಜಯ, ಕರುಣಾನಿಧಿ,ವೈಕೋರ ಆರ್ಭಟ
ಕನ್ನಡಿಗರಲ್ಲಿ ಆತಂಕ
ರಾಜಕಾರಣಿಗಳ ಮುಖಕಳಚುವುದು
ಕನ್ನಡಿಗರ ಪಾಲಿಗೆ ಕಹಿದಿನ
ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ
ಜನರ ಕಣ್ಣೀರು ಒರೆಸುವವರು ಯಾರೂ ಇಲ್ಲ
ಮಳೆರಾಯ ಮರೆಯದೇ ಬಾ ...
ಕನ್ನಡಿಗರ ಕಣ್ಣೀರು ಒರೆಸು
ನನ್ನ ನೀ ಸಲುಹು ಬಾ....||


ಕಾವೇರಿ




ತಾಯೇ ನಿನಗೆ ಯಾರಾದರೂ ಶಾಪವಿತ್ತಿದ್ದಾರೆಯೇ?
ಜನರ ಜನರ ನಡುವೆ ಏರಿದೆ ನಿನಗಾಗಿ ಕಾವು

ನೀನು ತುಂಬಿ ಹರಿದರೆ
ಎಲ್ಲರಿಗೂ ಸಂತೋಷ,ಸಮಾಧಾನ
ಎಲ್ಲರ ಮುಖಗಳಲ್ಲಿ ನಗು,ಸುಖ ಎಲ್ಲೆಡೆಯಲ್ಲೂ

ರಾಗ-ಧ್ವೇಷಗಳು ನಿನ್ನಲ್ಲಿ ಇಲ್ಲ
ಆದರೆ ನಿನ್ನ ಬಳಸುವ ನಮಗೆ ಏಕಿದೆ ತಿಳಿಯೆವು
ನಿನ್ನ ಮೇಲಿನ ಪ್ರೀತಿಯಿಂದಲೋ ನಾವರಿಯೆವು

ಕನ್ನಡ ಜನರ ಜೀವ ನೀನು;
ನಮ್ಮ ಭಾವನೆ ನೀನು;
ನಮ್ಮ ತಾಯಿ ನೀನು;
ನಿನ್ನ ಪ್ರೀತಿಯ ಹಂಚಿಕೊಂಡಿದ್ದೇವೆ ತಮಿಳು ಜನರೊಡನೆ ನಿಸ್ವಾರ್ಥವಾಗಿ
ಆದರೆ ಅವರಿಗೆ ನಿನ್ನ ಮೇಲೆ ಅತಿಯಾಸೆ, ನಮ್ಮ ಮೇಲೆ ಧ್ವೇಷ
ನಿನ್ನನ್ನು ನಮ್ಮಿಂದ ಕಿತ್ತುಕೊಳ್ಳುವ ಯತ್ನ ಇಂದು ನಿನ್ನೆಯದಲ್ಲ

ನಾವು ನೀರಿಲ್ಲದೆ ಸೊರಗುತ್ತಿದ್ದೇವೆ
ಸರಿಯಾಗಿ ಮಳೆಯಿಲ್ಲದೆ
ಆದರೂ ಅವರಿಗೆ ನಾವು ನಿನ್ನನ್ನು ಬಿಟ್ಟುಕೊಡಬೇಕು
ಮಾನವೀಯತೆ ಇಲ್ಲದ ಅವರ ವರ್ತನೆ ಸರಿಯೇ?

ನಮ್ಮ ರಾಜಕೀಯ ನಾಯಕರೂ ಸರಿಯಾಗೇ ಇದ್ದಾರೆ
ಜನರ ಭಾವನೆಗಳೊಡನೆ ಚಲ್ಲಾಟವಾಡುತ್ತಾರೆ
ಅವರವರ ಸ್ವಾರ್ಥಕೆ ಬೆಲೆಕೊಟ್ಟು
ನಿನ್ನನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡರು
ಮೊಸಳೆ ಕಣ್ಣೀರು ಮಾತ್ರ ಸುರಿಸುತ್ತಾರೆ
ಬುಗಿಲೆದ್ದಾಗ ಆಕ್ರೋಶ;
ಒಗ್ಗಟ್ಟಿಲ್ಲದೆ ನಾವು ನಿನ್ನನ್ನು ಕಳೆದುಕೊಳ್ಳುತ್ತಿದ್ದೇವೆ
ನಮ್ಮಲ್ಲಿ ಆತ್ಮಸ್ತೈರ್ಯ ತುಂಬು ತಾಯೆ...
ಆದರೂ ನಮಗೆ ಸಂಶಯ ನಿನಗಾರಾದರೂ ಶಾಪವಿತ್ತಿದ್ದಾರೆಯೇ
ನಿನ್ನ ಮಕ್ಕಳೆ ಬಡಿದಾಡಿ ಸಾಯಲಿ ಎಂದು....
ಬಾ ತಾಯಿ ಬಾ ಶಾಂತಿಯ ಮೇಳೈಸಿ ಬಾ.

ಅಣ್ಣ


ಎಷ್ಟು ಬಾರಿ ನೆನೆಯುತ್ತೇನೆ ನಿನ್ನನ್ನು
ಕೊರತೆ ಎದುರಾದಾಗಲೆಲ್ಲಾ ನೀ ಕಣ್ಣ ಮುಂದೆ ನಿಲ್ಲುವೆ
ಬೇರೆ ಯಾರೂ ನೀಡದಂತಹ ನೈತಿಕತೆ ತುಂಬಿದೆ ನನ್ನಲ್ಲಿ
ಅದಕ್ಕೆ ನೆನೆಯುತ್ತೇನೆ ದಿನವೂ ನಿನ್ನನ್ನು||

ಬೇಡಿದನ್ನು ಕೊಡುವುದು ಕಲ್ಪವೃಕ್ಷವಂತೆ
ನನ್ನ ಪಾಲಿಗೆ ನೀನು ಕಲ್ಪವೃಕ್ಷವೇ ನಿಜ
ಎಂದೂ ನಿನಗಾಗಿ ಏನನ್ನೂ ಕೇಳಲಿಲ್ಲ
ಕೊರತೆ, ನೋವು ನಿನಗಿದ್ದರೂ ಹೇಳಲಿಲ್ಲ||

ನಿನ್ನ ಆ ಅಕಲ್ಮಷ ಹೃದಯ ಯಾರಿತ್ತರೋ?
ಬದುಕಿನ ಯಾತ್ರೆಯಲ್ಲಿ ನಿನ್ನ ಜೊತೆ ನಾನು ಎಂತಹ ಸುಕೃತ ನನಗೆ
ನೂರು ಬಾರಿ ದೇವರಲ್ಲಿ ಪ್ರಾರ್ಥಿಸುತ್ತೇನೆ
ನಿನಗೆ ಎಲ್ಲವೂ ಸಿಗಲಿ,ನಿನಗೆ ಕೊರತೆ ಇರದಿರಲಿ.

ದೇವರ ಅದ್ಭುತ ಸೃಷ್ಟಿ ತಾಯಿ



ದೇವರು ಸೃಷ್ಟಿಸಿದ ಅಪೂರ್ವ ಮಮತಾಮಯಿ ತಾಯಿಯ
ತಾಯಿ ಎಂದೂ ಹಳೆಯದಾಗದ ಅಪೂರ್ವ ಮಣಿ||

ದೇವರು ಸೂರ್ಯನ ಕಿರಣಗಳನ್ನೇ ಆಕೆಯ ನಗುವಾಗಿಸಿದ
ಅಪ್ಪಟ ಅಪರಂಜಿ ಚಿನ್ನದಿಂದ ಎರಕ ಹೊಯ್ದ ಅವಳ ಹೃದಯವನ್ನು||

ಅವನೋ ಅವಳ ಕಣ್ಣುಗಳಲ್ಲಿ ಹೊಳೆಯುವ ತಾರೆಯರನ್ನು ತುಂಬಿದ
ಕಾಣಿಸದೇ ನಿಮಗೆ ಅವಳ ಕೆನ್ನೆ,ಗಲ್ಲದಲ್ಲಿ ಗುಲಾಬಿಯ ಹೂಗಳ||

ದೇವರು ಸೃಷ್ಟಿಸಿದ ಅಪೂರ್ವ ಮಮತಾಮಯಿ ತಾಯಿಯ
ಆ ಮಮತಾಮಯಿ ತಾಯಿಯ ನನಗಾಗಿಯೇ ನೀಡಿದ||

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...